ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವರಿಗೂ ಡಯಾಬಿಟೀಸು..

 

 

 

 

ಮಹೇಂದ್ರ ಎಸ್ ತೆಲಗರಹಳ್ಳಿ

 

 

 

ದಿನದ ಮೂರು ಹೊತ್ತೂ ಎಂಟಾಣಿಯ
ಕೆಲಸವನ್ನೂ ಮಾಡದೇ ಗುಡಿಯೊಳಗೆ
ಗೊರಕೆ ಹೊಡೆಯುತ್ತಾ ಕಾಲಹರಣ
ಮಾಡಿಕೊಂಡು  ಕಾಸು ಎಣಿಸುವ
ಸೋಂಬೇರಿ ದೇವರಿಗೆ ಈ ನಡುವೆ ಡಯಾಬಿಟೀಸು.

ಹುಟ್ಟಿಸಿದ ಮಕ್ಕಳು ಉಣ ಬಡಿಸುವ
ರಸಾಯನ, ಪೊಂಗಲ್ಲು, ಪಂಚಾಮೃತದಂತ
ಸಿಹಿ ಪದಾರ್ಥಗಳು
ಚೆರ್ಬಿ ತುಂಬಿದ ಕುರಿ, ಕೋಳಿ ಬಾಡಿನ
ಬೊಜ್ಜಿನ ಭಕ್ಷ್ಯ ಭೋಜನಗಳು
ಚಿತ್ರಾನ್ನ, ಪುಳಿಯೋಗರೆಯಂತ
ಕಾರ್ಬೋಹೈಡ್ರೇಟಿನ ರುಚಿ ತಿನಿಸುಗಳನ್ನು
ತಿಂದು-ತಿಂದು ಡಯಾಬಿಟೀಸಿಗೆ ಬಲಿಯಾಗಿದ್ದಾನೆ ದೇವರು.

ಮೊದಲೆಲ್ಲಾ ಊರ ಜಾತ್ರೆಗಳಿಗೆ
ಲೋಕ ಕಲ್ಯಾಣಗಳಿಗೆ ಭೇಟಿ ಇತ್ತು
ಬೆವರಿಳಿಸುತ್ತಿದ್ದವ ಈ ನಡುವೆ
ಟ್ರಾಫಿಕ್ ಜಂಜಾಟದಿಂದ ಗರ್ಭ ಗುಡಿಯಿಂದ
ಹೊರಕ್ಕೆ ಹೋಗಿ ವಾಕಿಂಗ್ ಮಾಡುವುದನ್ನೂ
ಸಹಾ ಬಿಟ್ಟುಬಿಟ್ಟಿದ್ದಾನೆ.
ಹಂಗೂ ನಾಲ್ಕು ಹೆಜ್ಜೆ ಕಾಲಿಡೋಣವೆಂದರೆ
ಸಿ.ಸಿ.ಟಿ.ವಿ. ಮತ್ತೂ ಸುದ್ದಿ ವಾಹಿನಿಗಳ ದಿಗಿಲು.

ರೋಗ ತೀವ್ರತೆ ಉಲ್ಬಣಗೊಂಡು
ಕಣ್ಣಿಗೆ ಪೊರೆ ಬಂದು
ತನ್ನ ಎದುರಿಗೆ ಜರುಗುತ್ತಿರುವ
ಸುಲಿಗೆ, ವಂಚನೆ, ಅತ್ಯಾಚಾರ, ಆತ್ಮಹತ್ಯೆಗಳನ್ನೂ
ಕಾಣದಷ್ಟು ದೃಷ್ಟಿ ಮಂದವಾಗಿಬಿಟ್ಟಿದೆ.

ಧರ್ಮಾಂಧರಿಂದ
ಚಾಕು, ಚೂರಿ, ಗುಂಡು, ಬಾಂಬು ತಗುಲಿ
ರಕ್ತಸ್ರಾವವಾಗಿ ಗಾಯ ಮಾಯದೇ ಗಬ್ಬೆದ್ದ ವಾಸನೆಯನ್ನು ಮಚ್ಚಿಡಲು ಧೂಪ, ಸಾಂಬ್ರಾಣಿ
ಹೊಗೆ ಹಾಕಿಸಿಕೊಂಡು
ಯಾವುದೇ ಮನುಕುಲದ ಆಂಟಿಬಯೋಟಿಕ್ ಗುಳಿಗೆಗಳು ಕೆಲಸ ಮಾಡದಂತಹ
ಹಂತಕ್ಕೆ ಬಂದು ಒದ್ದಾಡುತ್ತಿದ್ದಾನೆ.

ಅಯ್ಯೋ ಪಾಪ, ದೇವರಿಗೂ ವಯಸ್ಸಾಗುತ್ತಿದೆ
ಹೀಗೆ ಬಿಟ್ಟರೆ ದೇವರೂ ಕೂಡ ದೇವರ ಪಾದ
ಸೇರಿಕೊಳ್ಳುವುದು ಗ್ಯಾರಂಟಿ.
ಇವನಿಗೂ ಚಿಕಿತ್ಸೆ ಮಾಡಿಸಬೇಕು
ನನ್ನಂತ ಸಾಮಾನ್ಯನಂತೆ ಅರೆ ಹೊಟ್ಟೆ ಹಾಕಿ ಪಥ್ಯವಿಡಬೇಕು

ಅಕ್ಕಿಯ ಶ್ರೀಮಂತಿಕೆಯಿಂದ
ರಾಗಿ,ಜೋಳದ ಸಮಾನತೆಯೆಡಗೆ ಕರೆದೊಯ್ದು
‘ರಾಗಿ ತಿನ್ನೋನಿಗೆ ರೋಗಾನೆ ಇಲ್ಲ’
ಅನ್ನುವ ಸಾಲನ್ನು ಬಾಯಿ ಪಾಠ ಮಾಡಿಸಬೇಕು
ಸಸ್ಯಾಹಾರದ ಡಯಟ್ಟಿನೆಡೆಗೆ ಬದಲಾಯಿಸಿ
ದಿನಂಪ್ರತಿ ಜಬಾಬ್ದಾರಿಯ ಇನ್ಸುಲಿನ್ ಇಂಜೆಕ್ಷನ್ ಹಾಕಿಸಬೇಕು.

ದೃಷ್ಟಿ ದೋಷ ಸರಿ ಮಾಡಿ
ಚಂದದೊಂದು ಚಶ್ಮಾ ಕೊಡಿಸಿ
ಕಿವಿ ಹಿಂಡಿ
ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು
ಕ್ರಿಯಾಶೀಲನಾಗಿ ಊರ ಕಾಯುವಂತೆ
ಗೂರ್ಖಾ ಕೆಲಸಕ್ಕೆ  ನೇಮಕ ಮಾಡಬೇಕು.

ಹೇಗಾದರೂ ಸರಿಯೇ
ದೇವರಿಗೆ ಆರೈಕೆ ಮಾಡಿ ಗುಣಪಡಿಸಿ
ಸಾವನ್ನೂ ದಸ್ತಗಿರಿಗೊಳಿಸಿ
ಪುರಾಣಗಳು ಪುಂಗುವ ಹಾಗೆ
ಅವನನ್ನು ಚಿರಂಜೀವಿಯಾಗಿಸಬೇಕು
ಅವನನ್ನೇ ತಿನ್ನುತ್ತಾ ಆವಾಸ ಮಾಡಿಕೊಂಡಿರುವ
ಪರೋಪಜೀವಿಗಳಿಗೆಲ್ಲಾ ಚುರುಕು ಮುಟ್ಟಿಸಬೇಕು.

‍ಲೇಖಕರು avadhi

15 December, 2017

11 Comments

  1. veda

    ಅವನನ್ನೇ ತಿನ್ನುತ್ತಾ ಆವಾಸ ಮಾಡಿಕೊಂಡಿರುವ ಪರೋಪಜೀವಿಗಳಿಗೆಲ್ಲಾ ಚುರುಕು ಮುಟ್ಟಿಸಬೇಕು–HOWDU HOWDU HOWDU. CHURUKU MUTTISUVA KAVANA

    • Dr.Mahendra

      Thanks

  2. P Bilimale

    wonderful

    • Dr.Mahendra

      ಧನ್ಯವಾದಗಳು ಸಾರ್

  3. Lalitha siddabasavayya

    ವಾಹ್ , ನಿಮ್ಮ ಕಲ್ಪನೆ ಬಹಳ ಚೆನ್ನಾಗಿದೆ ಮಹೇಂದ್ರ, ನಿಮ್ಮ ಆಶಯದಂತೆ ದೇವರಿಗೆ ಇನ್ಸುಲಿನ್ ಚುಚ್ಚಿಸಿ ಅವನ ಕಾಯಿಲಾ ಇಲಾಜಾಗೊ ದಿನ ಬರಲಿ, 🙂

    • Dr.Mahendra

      ಧನ್ಯವಾದಗಳು ಮೇಡಂ.

  4. Manjula

    Kavithe thumba chennagide – olle kalpane

    • Dr.Mahendra

      ಧನ್ಯವಾದಗಳು

  5. Dr.Mahendra

    ಪ್ರತಿಕ್ರಿಯಿಸಿದ ಎಲ್ಲಾ ಹಿರಿಯರಿಗೆ ಧನ್ಯವಾದಗಳು

  6. raghavedra

    super

    • Dr.Mahendra

      Thank u sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading