ಊರು ತಲುಪಲು ಎರಡು ದಾರಿಗಳಿವೆ..

 

 

 

 

 

 

ವಿ ಎ ಲಕ್ಷ್ಮಣ್ 

 

 

ಊರು ತಲುಪಲು ಎರಡು ದಾರಿಗಳಿವೆ
ಒಂದು ಡಾಮರು ,ತುಸು ಬೇಗ ತಲುಪುವವರಿಗೆ
ನನಗೆ ಅಂತಹ ಅವಸರವಿಲ್ಲ ;
ಬಳಸು ದಾರಿಯ ಬಳಸಿ ನಡದೆ ಹೋಗುವೆ.

ಡಾಮರು ರೋಡು ತುಸು ನಿರ್ದಯಿ
ಭೂಭಾರದ ಲೋಡು ಹೊತ್ತ ಲಾರಿಗಳು,ಬಸ್ಸು ,ಕಾರು,ಅಷ್ಟು ಸುಲಭವಾಗಿ ಇದರೆದೆಯ ಮೇಲೆ ಯಾವ ಹೆಜ್ಜೆಗಳೂ ಮೂಡುವುದಿಲ್ಲ,ದಾರಿಯಿದ್ದರೂ ಯಾರೂ ಇಲ್ಲದ ಅನಾಥ.

ಬಳಸು ದಾರಿಯ ಅಡ್ಡಾದಿಡ್ಡಿಯ ಹೆಜ್ಜೆಗಳು
ನನಗೆ ಅಚ್ಚುಮೆಚ್ಚು
ಈ ದಾರಿಯ ತುಂಬಾ ಮಣ್ಣು,ಕಲ್ಲು ಮುಳ್ಳು
ಯಾರದೋ ಹೆಜ್ಜೆಗಳ ಮೇಲೆ ಇನ್ಯಾರದೋ
ಅಚ್ಚು
ನೆಲದಲ್ಲಿಡಗಿದವರ ಹಿರೀಕರ ನೆರಳು.
ಕಳ್ಳಿ ಸಾಲು, ಲಂಟಾನ ದ ಹೂವು

ದಾಟಲು ತುಸು ಬಾಗಿ ನಡೆಯಬೇಕು.
ನೀವು ತುಳಿದ ಹೆಜ್ಜೆ ಗುರುತಗಳು ಅಷ್ಟು ಬೇಗ ಅಳಿಯುವುದಿಲ್ಲ,ಯಾಕೆಂದರೆ ಈಗೀಗ ಈ ಬಳಸು ದಾರಿ ಯಾರೂ ಬಳಸುವುದಿಲ್ಲ.
ಗುರುತು ಕಾಯುವುದೆ ಅದರ ಗುರುತು ಅಳಿಸಲು ಇನ್ನೊಬ್ಬರ ಬರುವಿಕೆಗೆ
ಯೋಚಿಸುತ್ತೇನೆ.

ಹಾಂ! ಹೇಳಲು ಮರೆತಿದ್ದೆ ಒಂದು ಹಿರಿಹಳ್ಳ ದಾಟಬೇಕು, ಒಂದು ಫರ್ಲಾಂಗಿನಾಚೆ ಇನ್ನೊಂದು ಕಿರಿ ಹಳ್ಳ ,ಮುಂದೆ ಮೂರು ಮೈಲಿಯಾಚೆ ಎರಡೂ ಸೇರಿ ಅಕ್ಕ ತಂಗೇರಹಳ್ಳವಾಗುವುದು.
ಮೈಯಲ್ಲಿ ಕಸುವಿದ್ದವರು ಈಜಿ ಹೋಗಬಹುದು
ಅಂಬಿಗನ ನಂಬಿ ಕುಳಿತರೆ ನೀವಿಲ್ಲಿ ಊರು ತಲುಪುವುದು ಖಾತ್ರಿಯಿಲ್ಲ
ಅವನಿಗೊ ನೊರೆಂಟು ತರಲೆ ತಾಪತ್ರಯಗಳು.

ಅಜ್ಜ ನ ಸುಕ್ಕುಗಟ್ಟಿದ ಮೈಯಂತಿರುವ
ಆಲ ,ಗಾಳಿಗೆ ಹಾರುವ ಅದರೆಲೆಯ
ಗಲ ಗಲ
ಕಣ್ಣ ಪಸೆಯಾರಿದ ಹಣ್ಣು ಹಣ್ಣು ಮುದುಕಿ
ಮೊಗದ ಮೇಲೆ
ನದಿ ಹರಿದಾಡಿದ ಕುರುಹು ಗೀರು
ಹರಪ್ಪೊ ಮೊಹಂಜಾದರೊ ನಾಗರಿಕತೆ
ಆಳಿದವರ ,ಅಳಿದವರ ಕತೆ
ಇದೇ ಈ ಮರದಡಿ ಚಿಗುರಿದ ಅವರ ಪ್ರೇಮಕತೆ

ಊರು ತುಂಬ ಬದಲಾಗಿದೆ
ಡಾಮರು ಬಂದಿದೆ
ಗಲ್ಲಿ ಗಲ್ಲಿಗೂ ನಲ್ಲಿ ಬಂದಿದೆ
ಗುಡಿಯ ಗೋಪುರಕ್ಕಿಂತ ಎತ್ತರ ಮೊಬೈಲ್ ಟವರು ಎದ್ದಿದೆ
ಗಟಾರು ಬಂದಿದೆ ,ಬೀದಿ,ಬೀದಿಗೂ ಟಾರು
ಬಂದಿದೆ
ಏನಿದ್ದರೇನು
ಊರ ದಾರಿಯಲಿ ಬಟ್ಟೆ ಕೊಳೆಯಾಗುವ
ಮಣ್ಣೇ ಇಲ್ಲದ ಮೇಲೆ ?

ಕೊನೇ ಮನೆಯ ಜಗುಲಿಯ ಮೇಲೆ
ಕುಂಡೆ ತುರಿಸುತ್ತ ಮೋಟು ಬೀಡಿ ಹಚ್ಚಿದ
ಮುದುಕ ಹಣೆಯ ಮೇಲೆ ಕೈಯಿರಸಿ
ನನ್ನೇ ದಿಟ್ಟಿಸಿ ಯಾರ ಮಗ ಯಾರ ಮಗ
ಯಾವೂರು ನಿಮ್ಮದೆನ್ನುತ್ತಾನೆ
ಒಮ್ಮೆ ಆ ಊರು,ಇನ್ನೊಮ್ಮೆ ಈ ಊರು
ಅಸಲು ನನ್ನ ಊರು ಯಾವುದು ನನಗೇ
ಗೊಂದಲವಿದೆ ಏನಂತ ಹೇಳಲಿ ?

ನನಗೆ ಅಂತಹ ಅವಸರವಿಲ್ಲ
ನಾನು ಬಳಸುದಾರಿ ಸವೆಸುತ ಮುಂದೆ
ನಡೆದಿದ್ದೇನೋ ಅಥವ ದಾರಿ ತಪ್ಪಿ ಹಿಂದೆ ಬಂದಿರುವೆನೊ ?

 

‍ಲೇಖಕರು avadhi

December 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kaligananath Gudadur

    ಮೈಗಂಟಿದ ಅನುಭವಗಳ ಸಮ್ಮಿಲನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: