ಡಾ ಜ್ಯೋತಿ ಎಸ್ ಅವರ ಹೊಸ ಕಥಾ ಸಂಕಲನ ‘ಅತ್ತೆ ನಿಮಗೊಂದು ಪ್ರಶ್ನೆ’

ಡಾ ಜ್ಯೋತಿ ಎಸ್

**

ಹೆಸರಾಂತ ಕತೆಗಾರ್ತಿ ಡಾ ಜ್ಯೋತಿ ಎಸ್ ಅವರ ಹೊಸ ಕೃತಿ ಬಿಡುಗಡೆಗೆ ಸಿದ್ಧವಾಗಿದೆ.

ಚಿಂತನ ಚಿತ್ತಾರ’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ.

**

ಪುರಾಣ ಮತ್ತು ಇತಿಹಾಸಕ್ಕೊಂದು ಮರುನೋಟ
‘ಅತ್ತೆ ನಿಮಗೊಂದು ಪ್ರಶ್ನೆ’ (ಕತೆಗಳು), ನನ್ನ ಮೊದಲ ಕಥಾಸಂಗ್ರಹ. ಇಲ್ಲಿ ಒಟ್ಟು ಹದಿನಾಲ್ಕು ಕಥೆಗಳಿವೆ. ಇವುಗಳಲ್ಲಿ ಹದಿಮೂರು ಕಥೆಗಳಲ್ಲಿ ಪುರಾಣ ಪಾತ್ರಗಳ ಆಧುನಿಕ ಮರುವ್ಯಾಖ್ಯಾನವಿದೆ. ಒಂದರಲ್ಲಿ ಗಾಂಧಿ ಇದ್ದಾರೆ. ಈ ಎಲ್ಲಾ ಪಾತ್ರಗಳು ನನ್ನ ಓದಿನ ಮೂಲಕ ಗರಿಗೆದರಿದ ಕಲ್ಪನೆಯ ಆಧಾರದಲ್ಲಿ ಪುನರ್ ಸೃಷ್ಟಿಯಾದವುಗಳು. ಸುಮಾರು ಹದಿನೇಳು ವರ್ಷಗಳ ಹಿಂದೆ ನಾನು ನಾಲ್ಕು ಕಥೆಗಳನ್ನು ಕ್ರಮವಾಗಿ ‘ಸುಧಾ’, ‘ತುಷಾರ’ ಮತ್ತು ‘ಗೃಹಶೋಭಾ’ ಪತ್ರಿಕೆಗಳಲ್ಲಿ ಪ್ರಕಟಿಸಿದ್ದೆ. ಅವುಗಳನ್ನು ಇಲ್ಲಿ ಸೇರಿಸಿಲ್ಲ. ಅವುಗಳೆಲ್ಲಾ ಮಹಿಳಾಪರ ಸಾಮಾಜಿಕ ಕಥಾವಸ್ತುವನ್ನು ಹೊಂದಿದ್ದವು. ಈ ಹಿನ್ನೆಲೆಯಲ್ಲಿ, ನನ್ನ ಕಥಾ ಆಸಕ್ತಿಯ ಮೂಲದ ಕುರಿತು ಒಂದಿಷ್ಟು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ.

ನಾನು ಹುಟ್ಟಿ ಬೆಳೆದದ್ದು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಒಂದು ಪುಟ್ಟ ಹಳ್ಳಿಯಾದ ‘ಮಡಿ’ ಎಂಬಲ್ಲಿ. ನನ್ನ ಅಪ್ಪ ನಾರಾಯಣ ಶೆಟ್ಟಿಗಾರ್ ನನಗೆ ಬಾಲ್ಯದಲ್ಲಿ ಮಹಾಭಾರತ, ರಾಮಾಯಣ ಮತ್ತು ಜಾನಪದ ಕಥೆಗಳನ್ನು ಪ್ರತಿ ರಾತ್ರಿ ಧಾರಾವಾಹಿಯ ಧಾಟಿಯಲ್ಲಿ ಬಹಳ ಆಕರ್ಷಕವಾಗಿ ನಿರೂಪಿಸಿ ನಿದ್ರೆ ಮಾಡಿಸುತ್ತಿದ್ದರು. ನಾನು ಪ್ರತಿ ರಾತ್ರಿಯೂ ನಿನ್ನೆಯ ಕಂತು ಎಲ್ಲಿ ಮುಗಿದಿದೆಯೆಂದು ಅವರಿಗೆ ಜ್ಞಾಪಿಸಿ ಮುಂದುವರಿಸುವಂತೆ ನೋಡಿಕೊಳ್ಳುತ್ತಿದ್ದೆ. ಬಹುಶಃ, ಈ ಅನುಭವ ನನ್ನ ಕಲ್ಪನಾ ಶಕ್ತಿಯನ್ನು ಬಲಗೊಳಿಸಿತು. ಮುಂದುವರಿದಂತೆ, ನನ್ನ ಶಾಲಾ ದಿನಗಳಲ್ಲಿ, ನನ್ನ ಅಣ್ಣ ಮಂಜುನಾಥ್ ನನಗೆ ಚಂದಮಾಮ ಕಥೆ ಪುಸ್ತಕಗಳನ್ನು ತಂದು ಕೊಡುತ್ತಿದ್ದ. ಅವುಗಳನ್ನು ಒಂದೇ ಕ್ಷಣದಲ್ಲಿ ಓದಿ ಮುಗಿಸುತ್ತಿದ್ದೆ. ಶಾಲೆಯ ಗ್ರಂಥಾಲಯದಲ್ಲಿ ಲಭ್ಯವಿದ್ದ ಎಲ್ಲಾ ಕಥೆಗಳನ್ನು ಓದುತ್ತಿದ್ದೆ. ನನಗೆ ಕಾರಂತರ ಕಾದಂಬರಿಗಳನ್ನು ಓದುವುದು ಬಹಳ ಇಷ್ಟದ ಹವ್ಯಾಸವಾಗಿತ್ತು.

ಈ ಪ್ರಕ್ರಿಯೆ ನನ್ನ ಶಾಲಾ ಕಾಲೇಜು ದಿನಗಳುದ್ದಕ್ಕೂ ಮುಂದುವರಿಯಿತು. ಮುಂದೆ 2000ರಲ್ಲಿ, ಕನ್ನಡ ಸಾಹಿತ್ಯ ಅಕಾಡೆಮಿ, ಖ್ಯಾತ ವಿಮರ್ಶಕ ಓ. ಎಲ್. ನಾಗಭೂಷಣ ಸ್ವಾಮಿ ಅವರ ನೇತೃತ್ವದಲ್ಲಿ ಕಥಾ ಕಮ್ಮಟವೊಂದನ್ನು, ನಾನು ಆಗ ವಾಸವಾಗಿದ್ದ ಉಜಿರೆಯಲ್ಲಿ ಆಯೋಜಿಸಿತ್ತು. ಆ ಒಂದು ವಾರದಲ್ಲಿ ಓ. ಎಲ್. ಎನ್. ಸರ್ ಕಥೆಯ ಸ್ವರೂಪವನ್ನು ಬಹಳ ವಿಸ್ತ್ರತವಾಗಿ ಶಿಬಿರಾರ್ಥಿಗಳ ಮುಂದಿಟ್ಟಿದ್ದರು. ಅಲ್ಲಿಂದ ನನ್ನ ಬರವಣಿಗೆಯ ಪಯಣ ಪ್ರಾರಂಭವಾಯಿತು. ಅವರು ಹಾಕಿ ಕೊಟ್ಟ ಭದ್ರ ಬುನಾದಿಯೇ ನನ್ನನ್ನು ಇಲ್ಲಿಯವರೆಗೆ ಧೈರ್ಯವಾಗಿ ಮುನ್ನೆಡೆಯುವಂತೆ ಕಾಪಾಡಿರುವುದು. ಮುಂದಿನ ದಿನಗಳಲ್ಲಿ ನಾನು ಬರೆದ ಎರಡು ಲೇಖನಗಳು ‘ಉದಯವಾಣಿ’ ದಿನಪತ್ರಿಕೆಯಲ್ಲಿ ಪ್ರಕಟವಾಯಿತು. 2001ರಲ್ಲಿ, ನನ್ನ ಮೊದಲ ಸಣ್ಣಕಥೆ, ‘ಆಷಾಡ ಆಡಿ ಆಡಿ ಹೋಯ್ತು’ ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು. ಅದೇ ವರ್ಷ, ‘ಸಂಬಂಧ’ ಸಣ್ಣಕಥೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಗೃಹಶೋಭಾ ಮಹಿಳಾ ಮಾಸಪತ್ರಿಕೆಯಲ್ಲಿ ನನ್ನೆರಡು ಕಥೆಗಳು, ‘ಒಂದೇ ದೋಣಿ’ ಮತ್ತು ‘ಚದುರಿದ ಮೋಡಗಳು’ ಪ್ರಕಟವಾದವು.

ದೀರ್ಘಕಾಲದ ಸ್ವಯಂಘೋಷಿತ ವಿರಾಮದ ನಂತರ ನಾನು ಬರೆಯಲು ಪುನರ್ ಆರಂಭಿಸಿದ್ದು 2019ರಲ್ಲಿ. ಹರಸಾಹಸದಲ್ಲಿ ಹಠವಾದಿಯಂತೆ ಮುಗಿಸಿದ ಪಿ. ಹೆಚ್ ಡಿ ನನಗೆ ಪುನಃ ಬರವಣಿಗೆಯಲ್ಲಿ ನನ್ನ ಅಸ್ಮಿತೆ ಕಟ್ಟಿಕೊಳ್ಳಬೇಕೆಂಬ ಚೈತನ್ಯ ಮೂಡಿಸಿತು. ನನ್ನ ಪಿಹೆಚ್ ಡಿ ಸಂಶೋಧನಾ ಮಾರ್ಗದರ್ಶಕರಾದ ಪ್ರೊ. ಏನ್. ಎಸ್. ಗುಂಡೂರ್ ನನಗೆ ವಿಭಿನ್ನವಾಗಿ ಚಿಂತಿಸುವುದು, ಓದುವುದು ಮತ್ತು ಬರೆಯುವುದನ್ನು ಹೇಳಿಕೊಟ್ಟರು. ಈ ಅನುಭವ ನನ್ನ ಬದುಕಿಗೊಂದು ಸ್ಪಷ್ಟ ದಿಕ್ಕನ್ನು ಮತ್ತು ಬರವಣಿಗೆಗೆ ಒಂದು ಹೊಸ ಪ್ರಪಂಚವನ್ನು ಪರಿಚಯಿಸಿತು. ನನ್ನ ಎರಡನೆಯ ಇನ್ನಿಂಗ್ಸಿನ ಮೊದಲ ಲೇಖನ 2019ರ ಸೆಪ್ಟೆಂಬರ್ 11ರಂದು ಪ್ರಜಾವಾಣಿಯ ಸಂಗತ ವಿಭಾಗದಲ್ಲಿ ಪ್ರಕಟವಾಯಿತು. ನನ್ನ ಮೊದಲ ಸಣ್ಣಕಥೆ, 2020ರ ಮಾರ್ಚ್ 22ರಂದು ಪ್ರಜಾವಾಣಿಯಲ್ಲಿ ಪ್ರಕಟವಾಯಿತು. ಹೀಗೆ, ಶುಭಾರಂಭಗೊಂಡ ನನ್ನ ಬರವಣಿಗೆಯ ಪಯಣದಲ್ಲಿ, ನನ್ನ ಆಲೋಚನೆಗಳಿಗೆ ಆರಂಭಿಕ ಮತ್ತು ನಿರಂತರವಾಗಿ ಪ್ರೋತ್ಸಾಹ ನೀಡುತ್ತಾ ಬಂದಿರುವ, ವಿಶೇಷವಾಗಿ, ಪ್ರಜಾವಾಣಿ ದಿನಪತ್ರಿಕೆಗೆ ಮತ್ತು ಸಮಾಜಮುಖಿ ಮಾಸಪತ್ರಿಕೆಗೆ ಹೃದಯಸ್ಪರ್ಶಿ ಧನ್ಯವಾದಗಳು.

ಮುಂದಿನ ದಿನಗಳಲ್ಲಿ ಕನ್ನಡದ ಇತರ ಪತ್ರಿಕೆಗಳು ಮತ್ತು ಅಂತರ್ಜಾಲ ವೇದಿಕೆಗಳಾದ, ಸಂವಾದ ಪತ್ರಿಕೆ, ಅವಧಿಮ್ಯಾಗ್,
ಕೆಂಡ ಸಂಪಿಗೆ, ಬುಕ್ ಬ್ರಹ್ಮ, ಕರ್ಮವೀರ, ಸುಧಾ, ಅಕ್ಷರ ಸಂಗಾತ, ವಾರ್ತಾಭಾರತಿ, ಇತ್ಯಾದಿಗಳು ನನ್ನ ಬರವಣಿಗೆಗಳಿಗೆ ಜಾಗ
ಕೊಟ್ಟಿವೆ. ನನ್ನ ಮೇಲೆ ಭರವಸೆ ಇಟ್ಟಿರುವ ಈ ಎಲ್ಲಾ ಪತ್ರಿಕೆಗಳಿಗೆ ನನ್ನ ಅನಂತ ವಂದನೆಗಳು. ಹಾಗೆಯೇ, ಇಂಗ್ಲಿಷಿನ ಪತ್ರಿಕೆಗಳಾದ ಡೆಕ್ಕನ್ ಹೆರಾಲ್ಡ್, ದಿ ಇಂಡಿಯನ್ ಎಕ್ಸ್ ಪ್ರೆಸ್, ದಿ ಹಿಂದು, ದಿ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ , ವಿಮೆನ್ಸ್ ವೆಬ್ ಅಂತರ್ಜಾಲ ವೇದಿಕೆ, ಫೆಮಿನಿಸ್ಟ್ ರಿವ್ಯೂ ಮುಂತಾದವುಗಳು ಕೂಡ ನನ್ನ ಲೇಖನಗಳನ್ನು ಪ್ರಕಟಿಸುವುದರ ಮೂಲಕ ನನಗೆ ಪ್ರೋತ್ಸಾಹ ನೀಡುತ್ತಾ ಬಂದಿವೆ. ಈ ಪತ್ರಿಕೆಗಳಿಗೂ ನನ್ನ ವಂದನೆಗಳು.

ನನ್ನ ಕಥೆಗಳನ್ನು ಓದಿ, ಅವುಗಳಿಗೆ ತಮ್ಮ ಅಮೂಲ್ಯ ಸಲಹೆ, ಸೂಚನೆ ಮತ್ತು ವಿಮರ್ಶೆಗಳ ಮೂಲಕ ನನ್ನ ಬರವಣಿಗೆಗಳನ್ನು ತಿದ್ದುತ್ತಾ ಬಂದಿರುವ ಕನ್ನಡದ ಖ್ಯಾತ ವಿಮರ್ಶಕರಾದ ಓ. ಎಲ್. ನಾಗಭೂಷಣ ಸ್ವಾಮಿ, ಮತ್ತು ಟಿ.ಪಿ. ಅಶೋಕ್ ಅವರಿಗೆ ನನ್ನ ವಿಶೇಷ ನಮನಗಳು. ಇವರೊಂದಿಗೆ, ತಮ್ಮ ಪ್ರೋತ್ಸಾಹದ ಮಾತುಗಳಿಂದ ನನ್ನನ್ನು ಸಾಹಿತ್ಯಲೋಕದಲ್ಲಿ ಮುನ್ನೆಡೆಸುತ್ತಿರುವ ಕನ್ನಡ ಹಿರಿಯ ಸಾಹಿತಿಗಳು ಮತ್ತು ವಿಮರ್ಶಕರಾದ ಬರಗೂರು ರಾಮಚಂದ್ರಪ್ಪ, ಎಸ್. ಜಿ. ಸಿದ್ದರಾಮಯ್ಯ, ಹೆಚ್. ಎಸ್. ಶಿವಪ್ರಕಾಶ್, ಲಕ್ಷ್ಮೀಶ ತೋಲ್ಪಾಡಿ, ಜಿ.ವಿ. ಆನಂದಮೂರ್ತಿ, ಎಂ. ಜಿ. ಹೆಗಡೆ, ಕಮಲಾಕರ ಭಟ್, ರಾಜೇಂದ್ರ ಚೆನ್ನಿ, ಹೆಚ್. ಎಸ್. ಶ್ರೀಮತಿ, ಕೆ. ಸಿ. ಶಿವಾರೆಡ್ಡಿ, ಅಮರೇಶ್ ನುಡಗೋಣಿ, ಚಂದ್ರಕಾಂತ್ ವಡ್ಡು, ಮೂಡ್ಲಕೂಡು ಚಿನ್ನಸ್ವಾಮಿ, ಜಾಣಗೆರೆ ವೆಂಕಟರಾಮಯ್ಯ ಮತ್ತು ನನ್ನ ಗುರುಗಳಾದ ಸಿ. ಏನ್. ರಾಮಚಂದ್ರನ್, ಅವರಿಗೆ ಕೃತಜ್ಞತೆಗಳು.

ಇನ್ನು ನೇರವಾಗಿ, ಈ ಪುಸ್ತಕದಲ್ಲಿರುವ ನನ್ನ ಹದಿನಾಲ್ಕು ಕಥೆಗಳ ಹಿನ್ನೆಲೆ, ಸಂದರ್ಭ ಮತ್ತು ಮರುವ್ಯಾಖ್ಯಾನದ ಚೌಕಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ‘ಕ್ಷಮಿಸು ಏಕಲವ್ಯ…’(ಸಮಾಜಮುಖಿ, ಆಗಸ್ಟ್ 2021), ಈ ಕಥೆಯಲ್ಲಿ, ಮಹಾಭಾರತದ ದ್ರೋಣ ಮತ್ತು ಏಕಲವ್ಯರ ಪಾತ್ರಗಳ ಮರುವ್ಯಾಖ್ಯಾನವನ್ನು ಪ್ರಯತ್ನಿಸಲಾಗಿದೆ. ಇಲ್ಲಿ, ದ್ರೋಣ ಏಕಲವ್ಯನ ಹೆಬ್ಬೆರಳನ್ನು ಪಡೆದ ತಕ್ಷಣ ತಪ್ಪಿತಸ್ಥ ಮನೋಭಾವದಿಂದ ತನ್ನ ಜೀವನವನ್ನು ಮೆಲುಕು ಹಾಕುತ್ತಾನೆ. ಏಕಲವ್ಯನಲ್ಲಿ ತನ್ನ ಜೀವನ ವೃತ್ತಾಂತವನ್ನು ಬಿಚ್ಚಿಡುತ್ತಾ, ತಾನು ಯಾಕೆ ಹೀಗೆ ಮಾಡಬೇಕಾಯಿತೆಂದು ಕಾರಣ ಹೇಳಿಕೊಳ್ಳುತ್ತಾನೆ. ಕೊನೆಯಲ್ಲಿ, ದ್ರೋಣ ಏಕಲವ್ಯನಲ್ಲಿ ಕ್ಷಮೆ ಕೇಳುತ್ತಾನೆ. ನಾನಿಲ್ಲಿ, ಆ ಕಾಲದಲ್ಲಿದ್ದ ವರ್ಗ ಸಂಘರ್ಷಕ್ಕೆ ಹೆಚ್ಚಿನ ಒತ್ತು ಕೊಟ್ಟು, ದ್ರೋಣ-ಏಕಲವ್ಯರ ಕಥೆ ಹೇಳಲು ಪ್ರಯತ್ನಿಸಿದ್ದೇನೆ. ‘ಅತ್ತೆ, ನಿಮಗೊಂದು ಪ್ರಶ್ನೆ…’ (ಅವಧಿಮ್ಯಾಗ್), ಇದು ನನ್ನ ಕಥೆಗಳಲ್ಲಿಯೇ ವಿಮರ್ಶಕರಿಂದ ಅತ್ಯಂತ ಹೆಚ್ಚಿನ ಮೆಚ್ಚುಗೆಗಳಿಸಿದ ಕಥೆ. ಹಾಗಾಗಿ, ಇದನ್ನು ಇಂಗ್ಲಿಷಿಗೆ ಮೊದಲು ಅನುವಾದಕ್ಕೆ ತೆಗೆದುಕೊಂಡೆ.

ಅದೂ ಕೂಡ, ‘ಮಾ… ಐ ಹ್ಯಾವ್ ಎ ಕ್ವೆಶ್ಚನ್ಫಾ ರ್ ಯು’ ಶೀರ್ಷಿಕೆಯೊಂದಿಗೆ ‘ಫೆಮಿನಿಸ್ಟ್ ರಿವೀವ್ ‘ ಹೆಸರಿನ ಪ್ರಸಿದ್ಧ ಅಂತಾರಾಷ್ಟ್ರೀಯ ಜರ್ನಲ್ ನಲ್ಲಿ ಪ್ರಕಟವಾಯಿತು. ಇದರಲ್ಲಿ, ನಾನು ದ್ರೌಪದಿ ಮತ್ತು ಕುಂತಿಯನ್ನು ಮುಖಾಮುಖಿಯಾಗಿಸಿದ್ದೇನೆ. ಇಲ್ಲಿ, ದ್ರೌಪದಿ, ಕುಂತಿಯಲ್ಲಿ ಯಾಕೆ ಅವಳನ್ನು ಐದು ಗಂಡು ಮಕ್ಕಳಲ್ಲಿ ಸಮನಾಗಿ ಹಂಚಿಕೊಳ್ಳಲು ಹೇಳಿದ್ದು, ಎಂದು ಪ್ರಶ್ನಿಸುತ್ತಾಳೆ ಮತ್ತು ಅದಕ್ಕೆ ಕುಂತಿ ತನ್ನ ಸ್ವ ಜೀವನಾನುಭವದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತೆಂದು ವಿವರಿಸುತ್ತಾಳೆ. ‘ಮಾಧವಿ ಮನೆಗೆ ಬಂದಿದ್ದಳು’ (ಕೆಂಡಸಂಪಿಗೆ), ಮಹಾಭಾರತದಲ್ಲಿ ಬರುವ ಮಾಧವಿ ಪಾತ್ರದ ಮರುವ್ಯಾಖ್ಯಾನ. ಅಪ್ಪ ಯಯಾತಿಯಿಂದ, ವಿಶ್ವಾಮಿತ್ರನ ಶಿಷ್ಯ ಗಾಲವನಿಗೆ ಎಂಟು ನೂರು ಬಿಳಿ ಕುದುರೆಗಳನ್ನು ಗುರುದಕ್ಷಿಣೆಯಾಗಿ ಕೊಡಲು ಸಹಾಯವಾಗಲೆಂದು ಕಳುಹಿಸಲ್ಪಟ್ಟ ಮಾಧವಿ, ಮೂವರು ರಾಜರೊಂದಿಗೆ ಒಂದೊಂದು ವರ್ಷ ಕಳೆದು ಮೂರು ಗಂಡು ಮಕ್ಕಳನ್ನು ಪಡೆದು, ಬದಲಾಗಿ ಆರುನೂರು ಕುದುರೆಗಳನ್ನು ಗಾಲವನಿಗೆ ಕೊಡಿಸುತ್ತಾಳೆ. ಇನ್ನುಳಿದ ಇನ್ನೂರು ಕುದುರೆಗಳು ಪ್ರಪಂಚದಲ್ಲಿಯೇ ಇಲ್ಲದ ಮೇಲೆ, ಇದರ ಅರಿವಿದ್ದ ವಿಶ್ವಾಮಿತ್ರ ಯಾಕೆ ಎಂಟು ನೂರು ಕುದುರೆಗಳನ್ನು ಕೇಳಿದ? ಎನ್ನುವುದು ಈ ಕಥೆಯ ಮುಖ್ಯ ಪ್ರಶ್ನೆ. ಎಲ್ಲಾ ಮುಗಿದ ಮೇಲೆ ಮಾಧವಿ ಯಾವ ನಿರ್ಧಾರ ತೆಗೆದುಕೊಂಡಳು? ಎನ್ನುವುದಕ್ಕೆ ಇಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.

‘ನಿನಗಾಗಿಯೇ ಕಾಯುತ್ತಿದ್ದೆ, ಅಂಬಾ…’ (ಪ್ರಜಾವಾಣಿ, ಡಿಸೆಂಬರ್ 26, 2021), ಕುರುಕ್ಷೇತ್ರ ಯುದ್ಧದಲ್ಲಿ ಶರಶಯ್ಯೆಯಲ್ಲಿ ಸಾವಿನ ಎದುರು ನೋಡುತ್ತಾ ಮಲಗಿದ್ದ ಭೀಷ್ಮ, ಶಿಖಂಡಿಯಾಗಿದ್ದ ಅಂಬೆಯನ್ನು ಮಾತನಾಡಿಸಬೇಕೆಂದು ಕರೆಸಿಕೊಳ್ಳುತ್ತಾನೆ. ಇಲ್ಲಿ, ಅಂಬೆ ಮತ್ತು ಭೀಷ್ಮನ ನಡುವಿನ ಮಾತುಕತೆಯಲ್ಲಿ, ಮಹಾಭಾರತ ಮರುವ್ಯಾಖ್ಯಾನ ಕಾಣುತ್ತಿದೆ. ‘ನನ್ನ ಪ್ರೀತಿಯ ಭೀಮ…’ (ಪ್ರಜಾವಾಣಿ, ಜುಲೈ 4, 2021), ಹಿಡಿಂಬೆಯ ಪಾತ್ರದ ಮೂಲಕ ಮಹಾಭಾರತದ ಮರುವ್ಯಾಖ್ಯಾನ. ಇಲ್ಲಿ, ಹಿಡಿಂಬೆ ಪ್ರೀತಿಸಿದ ತಪ್ಪಿಗೆ ಅವಳನ್ನು ಭೀಮ ನಿರ್ದಯವಾಗಿ ನಡೆಸಿಕೊಂಡ ರೀತಿಯನ್ನು ಪ್ರಶ್ನಿಸುತ್ತಾಳೆ. ನಿಷ್ಕರುಣಿಯಾದ ಪಾಂಡವರು ತನ್ನ ಮಗ ಘಟೋತ್ಕಚನನ್ನು ಕುರುಕ್ಷೇತ್ರ ಯುದ್ಧದಲ್ಲಿ ಬಲಿಕೊಟ್ಟರು, ಅದಕ್ಕೆ ಭೀಮನೂ ಸಹಮತಿಸಿದ್ದ ಎನ್ನುವುದನ್ನು ಹಿಡಿಂಬೆ ಇಲ್ಲಿ ಪ್ರಸ್ತಾಪಿಸುತ್ತಾಳೆ. ‘ಕುಂತಿಯ ಮುಸ್ಸಂಜೆ ಮಾತು’ (ಕೆಂಡಸಂಪಿಗೆ), ಇದು ಕುಂತಿಯ ಸ್ವಗತ. ಧ್ರತರಾಷ್ಟ್ರ ಮತ್ತು ಗಾಂಧಾರಿಯೊಂದಿಗೆ ವಾನಪ್ರಸ್ಥಕ್ಕೆ ತೆರಳಿದ ಕುಂತಿ, ಅಲ್ಲಿ ಒಬ್ಬಳೇ ಕತ್ತಲಲ್ಲಿ ಕುಳಿತು ತನ್ನ ಜೀವನವನ್ನು ಮೆಲುಕು ಹಾಕುತ್ತಾಳೆ. ತನ್ನ ಬಾಲ್ಯದಿಂದ ಪ್ರಾರಂಭಿಸಿ, ಪಾಂಡು ಮತ್ತು ಮಾದ್ರಿಯೊಂದಿಗೆ ಕಳೆದ ದಿನಗಳು, ಪಾಂಡವರ ಬಾಲ್ಯ, ಕಷ್ಟದ ದಿನಗಳು, ಕುರುಕ್ಷೇತ್ರ ಯುದ್ಧ ಮತ್ತು ಯುಧಿಷ್ಠಿರನ ಪಟ್ಟಾಭಿಷೇಕ, ಹೀಗೆ ಎಲ್ಲವನ್ನು ನೆನಪು ಮಾಡಿಕೊಳ್ಳುತ್ತಾ, ಕೊನೆಗೆ ಎಲ್ಲ ವೈಭೋಗಗಳನ್ನು ಬಿಟ್ಟು ವನವಾಸಕ್ಕೆ ಬರುವ ನಿರ್ಧಾರ ತೆಗೆದುಕೊಂಡದ್ದನ್ನು ವಿಶ್ಲೇಷಿಸುತ್ತಾಳೆ.

‘ನಾನು ಮೀನಾಕ್ಷಿ, ಪರಿಚಯವಾಯಿತೇ?’ (ಅವಧಿಮ್ಯಾಗ್), ಇದು ಶೂರ್ಪನಖಿಯ ವೃತ್ತಾಂತ. ಇಲ್ಲಿ, ಶೂರ್ಪನಖಿ ತಾನೇ ರಾಮಾಯಣದ ಕೇಂದ್ರ ಬಿಂದು, ತಾನಿಲ್ಲದಿದ್ದರೆ ರಾಮ ರಾವಣರ ಭೇಟಿಯಾಗುತ್ತಿರಲಿಲ್ಲ, ಲಂಕಾದಹನ ವಾಗುತ್ತಿರಲಿಲ್ಲ ಎನ್ನುವುದನ್ನು ಹೇಳಿಕೊಳ್ಳುತ್ತಾಳೆ. ಮಾತ್ರವಲ್ಲ, ಇದನ್ನೆಲ್ಲಾ ಅವಳು ಯಾಕೆ ಮಾಡಿದಳು ಎನ್ನುವುದನ್ನು ವಿಸ್ತ್ರತವಾಗಿ ಹಂಚಿಕೊಳ್ಳುತ್ತಾಳೆ. ‘ಸಾವಿತ್ರಿ ಬರೆಯಿಸಿದ ಆತ್ಮಕಥೆ’ (ಪ್ರಜಾವಾಣಿ, ಜುಲೈ 9, 2022), ಈ ಕಥೆಯು ಸಾವಿತ್ರಿಯನ್ನು ಒಬ್ಬ ಮಹಾಸತಿಯಾಗಿ ನೋಡದೆ, ಪ್ರಚಂಡ ಸಾಹಸಿ ಮಹಿಳೆಯಾಗಿ ಚಿತ್ರಿಸುತ್ತದೆ. ಇಲ್ಲಿರುವ ಸಾವಿತ್ರಿ ಎಲ್ಲಾ ವಿರೋಧಗಳ ನಡುವೆ, ಕೆಲವೇ ದಿನಗಳಲ್ಲಿ ಸಾಯಲಿರುವ ಸತ್ಯವಾಹನನನ್ನು ಮದುವೆಯಾಗುತ್ತಾಳೆ, ಯಮನನ್ನು ತನ್ನ ಜಾಣ್ಮೆಯಿಂದ ಗೆದ್ದು, ಗಂಡನ ಪ್ರಾಣ ಉಳಿಸಿಕೊಳ್ಳುತ್ತಾಳೆ. ಹೀಗೆ, ಸಾವಿತ್ರಿ ಒಬ್ಬ ಪ್ರಬಲ ಮತ್ತು ಸ್ವತಂತ್ರ ಮಹಿಳೆಯಾಗಿ ಕಾಣುತ್ತಾಳೆ.

‘ಮಾಮನ ದಾಳ’ (ಪ್ರಜಾವಾಣಿ, ನವೆಂಬರ್ 27, 2022), ಈ ಕಥೆಯು ಶಕುನಿಯ ಜೀವನ ವೃತ್ತಾಂತವನ್ನು ತಿಳಿಸುತ್ತದೆ. ದುರ್ಯೋಧನನಿಗೆ ಎಲ್ಲಾ ದುಷ್ಟಬುದ್ದಿಯನ್ನು ತುಂಬುವ ಶಕುನಿ, ಯಾಕೆ ತನ್ನ ಸ್ವಂತ ಅಕ್ಕ ಗಾಂಧಾರಿಯ ಮಕ್ಕಳನ್ನು ಹೀಗೆ ದುರಂತಕ್ಕೆ ತಳ್ಳಿದ, ಎನ್ನುವುದನ್ನು ಈ ಕಥೆಯಲ್ಲಿ ಚರ್ಚಿಸಲಾಗಿದೆ. ‘ರಾಧೆಯ ಮತ್ತೆ ಬಂದ’ (ಪ್ರಜಾವಾಣಿ, ಮಾರ್ಚ್ 22, 2020), ಇದು ನನ್ನ ಬರವಣಿಗೆಯ ಎರಡನೆಯ ಇನ್ನಿಂಗ್ಸಿನ ಮೊದಲ ಪ್ರಕಟಿತ ಕಥೆ. ಹಾಗೆಯೇ, ಪ್ರಜಾವಾಣಿಯಲ್ಲಿ ಪ್ರಕಟವಾದ ಮೊದಲ ಕಥೆ. ಅನಂತರದ ದಿನಗಳಲ್ಲಿ ನನ್ನ ಒಟ್ಟು ಏಳು ಕಥೆಗಳು ಪ್ರಜಾವಾಣಿಯಲ್ಲಿ ಪ್ರಕಟಗೊಂಡವು. ಇಲ್ಲಿನ ನಾಯಕ ಕರ್ಣ, ತನ್ನ ಜೀವನದ ದುರಂತ ಅಂತ್ಯಕ್ಕೆ ತಾನೇ ಕಾರಣ, ವಿಧಿಲಿಖಿತವಲ್ಲ ಎನ್ನುತ್ತಾನೆ. ತಾನು ಬಯಸಿದ್ದರೆ, ತನ್ನ ಜೀವನವನ್ನು ಬೇರೆ ರೀತಿಯಲ್ಲಿ ನಡೆಸಬಹುದಿತ್ತು, ಎನ್ನುತ್ತಾನೆ. ‘ಪರೀಕ್ಷಿತನ ಆತ್ಮಾವಲೋಕನ’ (ಪ್ರಜಾವಾಣಿ, ಡಿಸೆಂಬರ್ 25, 2022), ಮಹಾಭಾರತದ ಪರೀಕ್ಷಿತ ನನಗೆ ಬಹಳ ಕಾಡಿದ ಪಾತ್ರ. ಅವನು ತನ್ನ ಸಾವಿನಿಂದ ತಪ್ಪಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದರೂ, ಕೊನೆಗೆ ಸಾವಿಗೆ ಶರಣಾಗಲೇ ಬೇಕಾಗುತ್ತದೆ. ಹಾಗಾಗಿ, ಇಲ್ಲಿರುವ ಪರೀಕ್ಷಿತ, ಸಾವನ್ನು ಧೈರ್ಯವಾಗಿ ಎದುರಿಸುವಷ್ಟು ಮಾನಸಿಕವಾಗಿ ಪಕ್ವವಾಗುತ್ತಾನೆ.

‘ತಾತ ಮೌನ ಮುರಿದಾಗ…’ (ಪ್ರಜಾವಾಣಿ, ಆಗಸ್ಟ್ 14, 2022) ಈ ಕಥೆ ಆಧುನಿಕ ಭಾರತಕ್ಕೊಂದು ಮರುನೋಟ. ಇಲ್ಲಿರುವ ಹನ್ನೊಂದು ಕಥೆಗಳು ರಾಮಾಯಣ ಮತ್ತು ಮಹಾಭಾರತದಿಂದ ಪ್ರೇರಣೆ ಪಡೆದಿದ್ದರೆ, ಈ ಕಥೆಯ ನಾಯಕ ಗಾಂಧಿ. ಇಲ್ಲಿ, ಗಾಂಧಿ ತನ್ನ ಮೇಲಿರುವ ಎಲ್ಲಾ ದೂಷಣೆಗಳಿಗೆ ಉತ್ತರಿಸುತ್ತಾರೆ. ಹಾಗಾಗಿ, ಗಾಂಧಿಯ ಮುಖ್ಯ ಮುಖಾಮುಖಿಗಳಾದ ಅಂಬೇಡ್ಕರ್ ಮತ್ತು ಟಾಗೋರ್, ಇಲ್ಲಿ ಪ್ರಸ್ತಾಪವಾಗುತ್ತಾರೆ. ‘ಇರಾವಂತ ಮತ್ತು ಬಾರ್ಬರಿಕರ ಹರಟೆ’(ಪ್ರಜಾವಾಣಿ, ಫೆಬ್ರವರಿ 19, 2023), ಕಥೆಯು ಮಹಾಭಾರತದಲ್ಲಿ ಬರುವ ಚಿಕ್ಕ ಪಾತ್ರಗಳಾದ ಇರಾವಂತ ಮತ್ತು ಬಾರ್ಬರಿಕರ ಕಾಲ್ಪನಿಕ ಮುಖಾಮುಖಿ. ಇವರಿಬ್ಬರು ಪಾಂಡವರಿಗೆ ರಕ್ತಸಂಬಂಧಿಕರಾಗಿ ಮತ್ತು ಬಲಾಢ್ಯರಾಗಿದ್ದರೂ ಕೂಡ ಯಾವುದೇ ಖ್ಯಾತಿ ಗಳಿಸುವ ಹುದ್ದೆ ಪಡೆಯದೇ ಸಾಮಾನ್ಯ ಸೈನಿಕರಂತೆ ಉಳಿಯುತ್ತಾರೆ ಮತ್ತು ಅನಾಥರಂತೆ ಪ್ರಾಣ ಬಿಡುತ್ತಾರೆ. ಮಹಾಭಾರತ ಯುದ್ಧದಲ್ಲಿ ಪಾಂಡವರಿಗಾಗಿ ಇವರಿಬ್ಬರ ಬಲಿದಾನವಾಗುತ್ತದೆ. ಈ ಕಥೆಯು, ಇರಾವಂತ ಮತ್ತು ಬಾರ್ಬರಿಕರ ಪಾತ್ರಗಳ ಮೂಲಕ ಮಹಾಭಾರತ ಯುದ್ಧದ ಮರು ನಿರೂಪಣಾ ಪ್ರಯತ್ನ. ‘ಶಬರಿ ಕಾದಿದ್ದು ಯಾರಿಗಾಗಿ?’ (ಪ್ರಜಾವಾಣಿ, ಜೂನ್ 25, 2023) ಎನ್ನುವ ಪ್ರಶ್ನೆಗೆ ಈ ಕಥೆಯಲ್ಲಿ ಅರ್ಥ ಹುಡುಕುವ ಪ್ರಯತ್ನ ಮಾಡಲಾಗಿದೆ. ತನ್ನ ನಲವತ್ತು ವರ್ಷಗಳ ಕಾಯುವಿಕೆಯ ನೆನಪುಗಳನ್ನು ಹಂಚಿಕೊಳ್ಳುತ್ತಾ ಈ ಕಾಯುವಿಕೆಯ ಮಹತ್ವವನ್ನು ಶಬರಿ ಇಲ್ಲಿ ತಿಳಿಸುತ್ತಾಳೆ.

ಹೀಗೆ, ಇಲ್ಲಿರುವ ಒಟ್ಟು ಹದಿನಾಲ್ಕು ಕಥೆಗಳಲ್ಲಿ ಹನ್ನೆರಡು ಮಹಾಭಾರತದಿಂದ ಪ್ರೇರಿತವಾಗಿದ್ದರೆ, ಒಂದು ರಾಮಾಯಣದಿಂದ ಹಾಗೂ ಮತ್ತೊಂದು ಗಾಂಧಿಯ ಜೀವನದಿಂದ ಪ್ರೇರಣೆಯಾಗಿವೆ. ನಾನು ಕಥೆಗಳನ್ನು ಬರೆಯಲಾರಂಭಿಸಿದ್ದು ಸಾಮಾಜಿಕ ಕಥಾಹಂದರದೊಂದಿಗೆ. ಆದರೆ, ಕಳೆದೆರಡು ವರ್ಷಗಳಿಂದ ಪುರಾಣ ಮತ್ತು ಇತಿಹಾಸಗಳ ಮರುವ್ಯಾಖ್ಯಾನ ನನಗೆ ಹೆಚ್ಚು ಖುಷಿ ಕೊಡುತ್ತಿದೆ. ಮತ್ತೊಮ್ಮೆ, ನನ್ನ ಕಥೆಗಳಿಗೆ ಪ್ರೀತಿಯ ಸ್ಪಂದನೆ ನೀಡುತ್ತಾ ಬಂದಿರುವ ನನ್ನ ಓದುಗರಿಗೆ ಹೃದಯಸ್ಪರ್ಶಿ ವಂದನೆಗಳು. ಸಾಹಿತ್ಯ ಪ್ರಕಾರಗಳಲ್ಲಿ, ಇಂದಿಗೂ ನನ್ನ ಮೊದಲ ಆಯ್ಕೆ ಮತ್ತು ಪ್ರೀತಿ, ಸಣ್ಣಕಥೆ ಬರೆಯುವುದು.

ಈ ಕಥಾ ಸಂಕಲನದ ಕರಡು ಪ್ರತಿ ಪರಿಶೀಲಿಸಿ ತಿದ್ದುವುದರಲ್ಲಿ ನನ್ನ ಸಂಶೋಧನಾ ವಿದ್ಯಾರ್ಥಿ ಮೋಹನ್ ಕುಮಾರ್ ಬಿ. ಎಸ್. ನನಗೆ ನೆರವಾಗಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು. ಈ ಪುಸ್ತಕವನ್ನು ಪ್ರಕಟಿಸಿದ ಚಿಂತನ ಚಿತ್ತಾರದ ನಿಂಗರಾಜು ಚಿತ್ತಣ್ಣನವರ್ ಮತ್ತು ಅವರ ಬಳಗಕ್ಕೆ ನನ್ನ ವಂದನೆಗಳು. ಕೊನೆಯದಾಗಿ, ನನ್ನ ಬರವಣಿಗೆಗಳಿಗೆ ಸದಾ ಪ್ರೋತ್ಸಾಹದ ಮಾತಿನಿಂದ ಪೋಷಿಸುತ್ತಿರುವ ನನ್ನ ಕಾರ್ಯಸ್ಥಾನ ತುಮಕೂರು ವಿಶ್ವವಿದ್ಯಾನಿಲಯದ ಆಡಳಿತ ವರ್ಗ, ಸಾಹಿತ್ಯಾಸಕ್ತ ಸಹೋದ್ಯೋಗಿಗಳು ಮತ್ತು ಪ್ರೀತಿಯ ವಿದ್ಯಾರ್ಥಿಗಳಿಗೆ ನನ್ನ ಧನ್ಯವಾದಗಳು.

ಇಂತಿ ನಿಮ್ಮ ಪ್ರೀತಿಯ

ಜ್ಯೋತಿ

‍ಲೇಖಕರು Admin MM

March 12, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: