ಮುಗ್ಧತೆಯ ಛಾಪಿರುವ ‘ದಿ ಮಾಂಕ್‌ ಅಂಡ್‌  ದಿ ಗನ್ ʼ ಸಿನಿಮಾ

ಮ ಶ್ರೀ ಮುರಳಿ ಕೃಷ್ಣ

**

15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮಾರ್ಚ್‌ 7ಕ್ಕೆ ತೆರೆಬಿದ್ದಿತು.  ಸಿನಿಪ್ರೇಮಿಗಳು ಮುಗಿಬಿದ್ದು ವೀಕ್ಷಿಸಿದ ಸಿನಿಮಾಗಳಲ್ಲಿ ʼ ದಿ ಮಾಂಕ್‌ ಅಂಡ್‌ ದಿ ಗನ್‌ ʼ ಕೂಡ ಒಂದಾಗಿತ್ತು. ಇದರ ಶೀರ್ಷಿಕೆಯೇ ಕುತೂಹಲವನ್ನು ಮೂಡಿಸುತ್ತದೆ!  ಭೂತಾನ್‌ ದೇಶದ ಈ ಸಿನಿಮಾದ ನಿರ್ದೇಶಕರು ಪಾವೊ ಚೋನಿಂಗ್‌ ದೋರ್ಜಿ.  2019ರಲ್ಲಿ ಇವರು ನಿರ್ದೇಶಿಸಿದ ʼ ಲುನಾನ: ಎ ಯಾಕ್‌ ಇನ್‌ ದಿ ಕ್ಲಾಸ್‌ ರೂಂʼ ಕೂಡ ಮನ್ನಣೆಯನ್ನು ಗಳಿಸಿತ್ತು ; ವೀಕ್ಷಕರ ಗಮನವನ್ನು ಸೆಳೆದಿತ್ತು.

ನಮ್ಮ ರಾಷ್ಟ್ರದ ನೆರೆಯ ದೇಶ ಭೂತಾನ್‌ ಗಾತ್ರದಲ್ಲಿ ಸಣ್ಣದು. ಬೌದ್ಧ ಮತ ಪ್ರಧಾನವಾಗಿರುವ ಈ ದೇಶದ  ಭೌಗೋಳಿಕ ಆಸ್ತಿಗಳಲ್ಲಿ ಹಿಮಾಲಯ ಕೂಡ ಒಂದು. ಇದು ಅನೇಕ ಶತಮಾನಗಳ ಕಾಲ ಅರಸೊತ್ತಿಗೆಯ ಆಡಳಿತವನ್ನು ಹೊಂದಿತ್ತು.  ರಾಜನಾಗಿದ್ದ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಭಾರತದಂತೆ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ನೆಲೆಗೊಳ್ಳಬೇಕೆಂದು ಬಯಸಿ 2006ರಲ್ಲಿ ಪದತ್ಯಾಗ ಮಾಡಿದರು. ಆ ಸಮಯದ ಆಸುಪಾಸಿನಲ್ಲಿ ಭೂತಾನ್‌ ಅಂತರ್ಜಾಲ ಇತ್ಯಾದಿ ನವೀನ ವ್ಯವಸ್ಥೆಗಳಿಗೆ ತೆರೆದುಕೊಂಡಿತು.  ಅಂದಿನಿಂದ ಇಂದಿನವರೆಗೂ ಅಲ್ಲಿರುವುದು ಸಾಂವಿಧಾನಿಕ ರಾಜಪ್ರಭುತ್ವ( Constitutional Monarchy).  ಅಲ್ಲದೆ, ಆರ್ಥಿಕ ನೀತಿಗಳಿಗೆ ಸಂಬಂಧಿಸಿದಂತೆ, GDPಯ ಬದಲು ಅಲ್ಲಿ Gross National Happiness ಅಥವಾ Gross Domestic Happiness ಎಂಬ ಮಾನದಂಡವನ್ನು ಬಳಸಲಾಗುತ್ತದೆ. ಪ್ರಪಂಚದಲ್ಲಿ ಹಲವೆಡೆ ಈ ಮಾನದಂಡ ಚರ್ಚೆ, ವಿಚಾರ-ವಿನಿಮಯಗಳಿಗೆ ಗ್ರಾಸವಾಗುತ್ತಿದೆ.  ಈ ಹಿನ್ನೆಲೆಯಲ್ಲಿ, ಈ ಸಿನಿಮಾ ಏನನ್ನು ದಾಟಿಸುತ್ತಿದೆ ಎಂಬುದು ಈ ಬರೆಹದ ಉದ್ದೇಶವಾಗಿದೆ.

2006ರಲ್ಲಿ ಜರಗುತ್ತದೆ ಈ ಸಿನಿಮಾದ ಕಥೆ. ಮೂರು ಎಳೆಗಳಲ್ಲಿ ಸಿನಿಮಾ ಅನಾವರಣಗೊಳ್ಳುತ್ತ ಸಾಗುತ್ತದೆ.  ಮೊದಲನೆಯದರಲ್ಲಿ ರಾನ್(ರೋನಾಲ್ಡ್‌) ಎಂಬ ಅಮೆರಿಕಾದ ಗನ್‌ ಡೀಲರ್ ಭೂತಾನದ ಪಟ್ಟಣದಲ್ಲಿ ವಾಸಮಾಡುತ್ತಿರುವ ಬೆಂಝಿ ಎಂಬ ಟ್ಯಾಕ್ಸಿ ಡ್ರೈವರ್/ಗೈಡ್‌ ಸಹಾಯದಿಂದ ಒಂದು ದೂರದ, ಪರ್ವತದ ಪ್ರದೇಶದಲ್ಲಿರುವ ಅಮೆರಿಕನ್‌ ಸಿವಿಲ್‌ ಯುದ್ಧದ ರೈಫಲನ್ನು ತನ್ನದಾಗಿಸಿಕೊಳ್ಳಲು ಪ್ರಯಾಣವನ್ನು ಮಾಡುತ್ತಾನೆ.  ಈ ರೈಫಲ್‌ನಿಂದ ಅನೇಕ ಟಿಬೇಟಿಯನ್‌ರನ್ನು ಹತ್ಯೆ ಮಾಡಲಾಯಿತು ಎಂಬ ಅಂಶ ತಿಳಿದು ಬರುತ್ತದೆ.  ಎರಡನೆಯದರಲ್ಲಿ ಒಬ್ಬ ಲಾಮಾ ಹುಣ್ಣಿಮೆಯ ದಿನ ನಡೆಯಲಿರುವ ಒಂದು ಕಾರ್ಯಕ್ರಮಕ್ಕಾಗಿ ತನ್ನ ಸಹಾಯಕ(ಬೌದ್ಧ ಭಿಕ್ಕು)ನನ್ನು ಎರಡು ರೈಫಲ್‌ ಗಳನ್ನು ಸಂಪಾದಿಸಿಕೊಂಡು ಬರಲು ನಿರ್ದೇಶಿಸುತ್ತಾನೆ.  ಮೂರನೆಯದರಲ್ಲಿ ಹಳ್ಳಿಯ ಜನರಿಗೆ ಚುನಾವಣೆಯ ಮತದಾನದ ಪ್ರಕ್ರಿಯೆಯ ಬಗೆಗೆ ಅಧಿಕಾರಿಗಳು ಸೂಕ್ತ ಮಾರ್ಗದರ್ಶನವನ್ನು ಮಾಡುವ ವಿವರಗಳಿವೆ.  ಇವುಗಳ ಮಧ್ಯೆ ಗಂಡ-ಹೆಂಡತಿ-ಮಗಳು ಇರುವ ಕುಟುಂಬದಲ್ಲಿ ಗಂಡ ಚುನಾವಣೆಯ ಸ್ಪರ್ಧೆಯಲ್ಲಿರುವ ಒಬ್ಬ ನಾಯಕನ ಪರವಾಗಿ ಪ್ರಚಾರಾಂದೋಲನದಲ್ಲಿ ನಿರತನಾಗಿರುತ್ತಾನೆ.  ಆತನ ಅತ್ತೆ ಮತ್ತೊಬ್ಬ ವಿರೋಧಿ ನಾಯಕನ ಪರವಾಗಿ ಇರುವುದರಿಂದ ಅತ್ತೆ, ಅಳಿಯ ಎಣ್ಣೆ –ಸೀಗೆಕಾಯಿಯಂತಿರುತ್ತಾರೆ!  ತನ್ನ ಮಗಳು ತರಲು ಹೇಳಿದ ರಬ್ಬರನ್ನು(ಎರೆಸರ್) ಖರೀದಿಸಲು ಮರೆಯುವಷ್ಟು ಆತ ಚುನಾವಣಾ ಪ್ರಚಾರದಲ್ಲಿ ಮುಳುಗಿರುತ್ತಾನೆ. ಆ ಸಂದರ್ಭದಲ್ಲಿ ಅತ ಸಮಜಾಯಿಷಿಯನ್ನು ಹೀಗೆ ನೀಡುತ್ತಾನೆ : “ ಮುಂದೆ ನೀನು ಪ್ರಧಾನ ಮಂತ್ರಿಯಾಗುವುದಕ್ಕೆ  ನಾನು ಚುನಾವಣೆಯಲ್ಲಿ ಕೇಂದ್ರೀಕೃತನಾಗಿದ್ದೇನೆ!”.  ಇದನ್ನು ಕೇಳಿದ ಮಗಳು “ನಾನು ಪ್ರದಾನ ಮಂತ್ರಿ ಆಗುವುದಿಲ್ಲ.  ನನಗೆ ಬೇಕಿರುವುದು ಎರೆಸರ್‌ ಅಷ್ಟೇ..” ಎಂದು ಪ್ರತಿಕ್ರಿಯಿಸುತ್ತಾಳೆ!   ಅಂದರೆ ಮುಂದೆ ಆಗಬಹುದಾದ ಏಳಿಗೆಯ ಕನಸಿನಲ್ಲಿ ಮುಳುಗಿರುವ ಆತ ವರ್ತಮಾನದ ಸ್ಥಿತಿಯಿಂದ ವಿಮುಖನಾಗಿರುತ್ತಾನೆ. ಮೂರು ಎಳೆಗಳು ಕೊನೆಯಲ್ಲಿ ಸಂಧಿಸಿದಾಗ ಒಂದು ರೋಚಕ ಕ್ಲೈಮ್ಯಾಕ್ಸ್‌ ಗೆ ವೇದಿಕೆ ಸಜ್ಜಾಗುತ್ತದೆ!

ಅಣುಕು ಚುನಾವಣೆಯನ್ನು ನಡೆಸಲು ಚುನಾವಣಾ ಆದಿಕಾರಿ ಮತ್ತು ಅತನ ಕೆಲವು ಸಹಾಯಕರು ತಯಾರಿಯನ್ನು ನಡೆಸುತ್ತಾರೆ.  ನೆರೆದಿರುವ ಜನರ ನಡುವೆ ಮೂರು ಕಾಲ್ಪನಿಕ ಪಕ್ಷಗಳನ್ನು ರಚಿಸಲಾಗುತ್ತದೆ.  ನೀಲಿ ಬಣ್ಣದ ಲಾಂಛನವಿರುವ ಪಕ್ಷ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು, ಕೆಂಪು ಬಣ್ಣದ ಪಕ್ಷ ಕೈಗಾರಿಕಾ ಬೆಳವಣಿಗೆಯನ್ನು ಮತ್ತು ಹಳದಿ ಬಣ್ಣದ ಪಕ್ಷ ಸಂರಕ್ಷಣೆಯನ್ನು ಕ್ರಮವಾಗಿ ಪ್ರತಿನಿಧಿಸುತ್ತವೆ ಎಂದು ಅವರಿಗೆ ಮನವರಿಕೆಯನ್ನು ಮಾಡಿಕೊಡಲಾಗುತ್ತದೆ.  ನಂತರ ಚುನಾಚಣಾ ರ್ಯಾಲಿಯನ್ನು ಹೇಗೆ ನಡೆಸಬೇಕೆಂದು ಹೇಳಿಕೊಡುವ ನಿಟ್ಟಿನಲ್ಲಿ ಪರಸ್ಪರ ಜೋರಾಗಿ ವಾದ-ಪ್ರತಿವಾದಗಳನ್ನು ಮಂಡಿಸಬಹುದು ಎಂದು ಅಧಿಕಾರಿ ತಿಳಿಸುತ್ತಾನೆ! ಇದಕ್ಕೆ ಒಬ್ಬ ವೃದ್ಧೆ – “ ನಾವು ಏಕೆ ಅಸಭ್ಯವಾಗಬೇಕೆಂದು ಹೇಳಿಕೊಡುತ್ತೀರಿ? ನಾವು ಹಾಗಿರುವವರಲ್ಲ….” ಎಂದು ಅತನಿಗೆ ನಾಟುವಂತೆ ಹೇಳುತ್ತಾಳೆ! ನಂತರ ನಡೆಯುವ ಮತದಾನದಲ್ಲಿ ಹಳದಿ ಪಕ್ಷ ಶೇ 95ಕ್ಕೂ ಹೆಚ್ಚು ಮತಗಳನ್ನು ಪಡೆದಿರುತ್ತದೆ!  ಚುನಾವಣಾ ಅಧಿಕಾರಿಯ ತಂಡಕ್ಕೆ ಹಳದಿ ಬಣ್ಣದ ಲಾಂಛನ ರಾಜನನ್ನು ಪ್ರತಿನಿಧಿಸುತ್ತದೆ ಎಂದು ಅರಿವಾದಾಗ ಅವರು ತಬ್ಬಿಬ್ಬಾಗುತ್ತಾರೆ! ವ್ಯವಸ್ಥೆಯಲ್ಲಿ ಪಲ್ಲಟಗಳು ಜರಗುತ್ತಿದ್ದರೂ, ಹಳೆ ಬೇರುಗಳು ಅಷ್ಟು ಬೇಗನೆ ಕಮರುವುದಿಲ್ಲ ಎಂದು ಸೂಕ್ಷ್ಮವಾಗಿ ನಿರ್ದೇಶಕರು ದಾಟಿಸಿದ್ದಾರೆ!

ಭೂತಾನ್ ತನ್ನ ಬಾಗಿಲುಗಳನ್ನು ತೆರೆದಿಟ್ಟಾಗ ಹೊರಗಿನಿಂದ, ಅದರಲ್ಲೂ ಮುಖ್ಯವಾಗಿ ಅಮೆರಿಕಾ ಮತ್ತು ಇತರ ಪಾಶ್ಚಿಮಾತ್ಯ ದೇಶಗಳ ಅನೇಕ ತೆರನಾದ ಪ್ರಭಾವಗಳಿಗೆ ಒಳಗಾಗುತ್ತದೆ.  ಸ್ಥಿತ್ಯಂತರದ ಸಮಯದಲ್ಲಿ ಟಿವಿಯಲ್ಲಿ ಚುನಾವಣೆಯ ಜಾಹೀರಾತುಗಳು, ಅಮೆರಿಕಾದ ಪಾಪ್‌ ಕಲ್ಚರ್‌, ಜೇಮ್ಸ್‌ ಬಾಂಡ್‌ ನಟಿಸಿರುವ ಸಿನಿಮಾಗಳು ಇತ್ಯಾದಿ ವಿಜೃಂಭಿಸುವುದನ್ನು ತೋರಿಸಲಾಗಿದೆ.  ರೈಫಲ್ಲುಗಳ ಹುಡುಕಾಟದಲ್ಲಿರುವ ತರುಣ ಬೌದ್ಧ ಭಿಕ್ಕು ಒಂದು ಅಂಗಡಿಯಲ್ಲಿ ವಿಶ್ರಮಿಸುತ್ತಿದ್ದಾಗ, ಆತನಿಗೆ ತಂಪು ಪಾನೀಯವನ್ನು ನೀಡಲು ಮುಂದಾದಾಗ, ಆತ ಕಪ್ಪು ದ್ರವಿರುವ ಬಾಟಲಿನತ್ತ ಬೊಟ್ಟುಮಾಡಿ ತೋರಿಸುತ್ತಾನೆ! ಅದು ಕೋಕೊ ಕೋಲಾ ಆಗಿರುತ್ತದೆ! ಒಂದು ಸಂಭಾಷಣೆಯಲ್ಲಿ “ ಅಮೆರಿಕಾದಲ್ಲಿ ಜನಸಂಖ್ಯೆಗಿಂತ ಹೆಚ್ಚಾಗಿ ಗನ್ಗಳಿವೆ “ ಎಂಬ ಮಾತುಗಳು ಕೇಳಿಬರುತ್ತವೆ!  ಅಲ್ಲದೆ, ಭಾರತದಿಂದಲೂ ಎರಡು AK 47 ರೈಫಲ್ಲುಗಳು ಅಕ್ರಮವಾಗಿ ಅಮೇರಿಕಾದ ಗನ್‌ ಡೀಲರ್ಗೆ ತಲುಪುತ್ತವೆ. ಅಮೆರಿಕಾ ಪ್ರಣೀತ ಗನ್‌ ಕಲ್ಚರ್‌ ಹೇಗೆ ಪ್ರವಹಿಸುತ್ತದೆ ಎಂಬುದನ್ನು ಮಾರ್ಮಿಕವಾಗಿ ದೋರ್ಜಿ ರವಾನಿಸಿದ್ದಾರೆ.

ಅಮೆರಿಕಾ ಸಿವಿಲ್‌ ಯುದ್ಧದ ಕಾಲದ ರೈಫಲ್‌ ಒಬ್ಬ ಬಡ ರೈತನ ಮನೆಯಲ್ಲಿ ಇರುತ್ತದೆ.  ಅದನ್ನು ಗನ್‌ ಡೀಲರ್ಗೆ ನೀಡಲು ಹೋದಾಗ, ದೊಡ್ಡ ಮೊತ್ತದ ಹಣವನ್ನು ಡೀಲರ್‌ ನೀಡಲು ಮುಂದಾಗುತ್ತಾನೆ.  ಇಷ್ಟು ಹಣ ಬೇಡ ಎಂದು ರೈತ ಹೇಳುತ್ತಾನೆ! ನಂತರ ರೈಫಲನ್ನು ಬೌದ್ಧ ಭಿಕ್ಕುವಿಗೆ, ಲಾಮಾನ ಮತದಾರ್ಮಿಕ ಕೊಡುಗೆಗಳನ್ನು ನೆನಪಿಸಿಕೊಳ್ಳುತ್ತ, ಯಾವ ಪ್ರತಿಫಲವನ್ನು ನಿರೀಕ್ಷೆ ಮಾಡದೆ ಹಸ್ತಾಂತರಿಸಿಬಿಡುತ್ತಾನೆ! ಹೀಗೆ ಅತ ತನ್ನ ಮುಗ್ಧತೆಯನ್ನು ಪ್ರದರ್ಶಿಸುತ್ತಾನೆ.  ಹಣದಿಂದ ಎಲ್ಲವನ್ನು ಕೊಳ್ಳಲಾಗುವುದಲ್ಲ ಎಂಬ ಅಂಶ ವೀಕ್ಷಕರ ಗಮನಕ್ಕೆ ಬರುತ್ತದೆ.

ಲಾಮಾ ಹುಣ್ಣಿಮೆಯ ದಿನದ ಕಾರ್ಯಕ್ರಮದಲ್ಲಿ ತನ್ನ ಸಹಾಯಕ ಬೌದ್ಧಭಿಕ್ಕು ತಂದಿರುವ ರೈಫಲ್‌, ಗನ್‌ ಡೀಲರ್‌ ತನ್ನ ಬಳಿಯಿದ್ದ ಎರಡು AK 47 ರೈಫಲ್ಲುಗಳು ಮತ್ತು ಗನ್‌ ಡೀಲರ್ನ ಹಿಂದೆ ಬಿದ್ದಿದ್ದ ಪೊಲೀಸ್‌ ಇನ್ಸ್ಸ್ಪಕ್ಟರ್‌ ತನ್ನ ಸರ್ವೀಸ್‌ ಪಿಸ್ತೂಲನ್ನು ತೋಡಿದ್ದ ಗುಂಡಿಗೆ ಎಸೆಯುತ್ತಾರೆ.  ಹಿಂಸೆಯ ಜೊತೆಗೆ ಒಂದರ್ಥದಲ್ಲಿ ಪ್ರಭುತ್ವದ ಸರ್ವಾಧಿಕಾರವನ್ನು ಸಂಕೇತಿಸುವ ರೈಫಲ್ಲುಗಳು ಮಣ್ಣುಪಾಲಾಗುವುದು ಬೌದ್ಧಮತದ ಅಹಿಂಸಾ ತತ್ವದ ಜೊತೆಗೆ ಶಾಂತಿಯ ಸಂದೇಶವನ್ನು ದಾಟಿಸುತ್ತದೆ.

ಮಾರ್ಚ್‌ 8, 2024ರ ʼ ಅವಧಿ ʼಯಲ್ಲಿ ಶ್ರೀಯುತ ಜಿ ಎನ್‌ ನಾಗರಾಜ್‌ ಅವರು ಈ ಸಿನಿಮಾದ ಬಗೆಗೆ ಬರೆಯುತ್ತ ಇದು Imaginatively and hilariously anti-democratic ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ನಾಶಪಡಿಸಿ ಫ್ಯಾಸಿಸ್ಟ್‌ ಪ್ರಭುತ್ವವನ್ನು ಹೇರ ಬಯಸುತ್ತಿರುವವರಿಗೆ ಬಹಳ ಸಂತೋಷ ತರುವಂತಹದ್ದು, ಆದುದರಿಂದ ಎಚ್ಚರವಿರಲಿ ಎಂಬ ತಮ್ಮ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ.  ‘ ಲೋಕೋ ಭಿನ್ನರುಚಿಃ ʼ ಎಂಬಂತೆ ವೀಕ್ಷಕರು ಒಂದು ಸಿನಿಮಾದ ಬಗೆಗೆ ಭಿನ್ನ ರೀತಿಗಳಲ್ಲಿ ಸ್ಪಂದಿಸುತ್ತಾರೆ ಎಂಬುದು ತಿಳಿದ ವಿಷಯವೇ ಸರಿ.  ಅದು ಅವರ ವೈಯಕ್ತಿಕ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರ.  ನಿಜ, ಈ ಸಿನಿಮಾದಲ್ಲಿ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ Satire ಇದೆ.  ಅದು ಕೆಲವು ಪಾತ್ರಗಳ ಕೆಲವು ಸಂಭಾಷಣೆಗಳ ಮೂಲಕ ವ್ಯಕ್ತವಾಗುತ್ತದೆ.  ಈ ಸಂಬಾಷಣೆಗಳನ್ನು Passing remarks ಎಂದೂ ಕರೆಯಬಹುದು ಎಂದೆನಿಸುತ್ತದೆ.  ಆದರೆ ಇಡೀ ನಿರೂಪಣೆ ಮತ್ತು ದೃಶ್ಯ ಕಟ್ಟೋಣದಲ್ಲಿ anti-democratic ಅಂಶ ಗೌಣವಾಗಿದೆ. ಭಾರತ, ಭೂತಾನ್‌ ಮತ್ತು ಅಮೆರಿಕಾಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ನಿರ್ದೇಶಕ ದೋರ್ಜಿ ಬೌದ್ಧಮತದ ಜೊತೆಗೆ ಇತರ ಆಧುನಿಕ ವಿಷಯಗಳ ಬಗೆಗೆ ಅಧ್ಯಯನವನ್ನು ಮಾಡಿದ್ದಾರೆ. ಮುಗ್ಧತೆಯ ಛಾಪಿರುವ ಈ ಸಿನಮಾದಲ್ಲಿ, ಈ ಲೇಖಕನ ಅಭಿಮತದಲ್ಲಿ, ನಿರ್ದೇಶಕರು ರಾಜಪ್ರಭುತ್ವದ ಪರವಾದ ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧವಾದ ನಿಲುವನ್ನು ನಿರೂಪಿಸಿಲ್ಲ.

ಹಾಸ್ಯದ ಲೇಪನವಿರುವ ಈ ಸಿನಿಮಾದಲ್ಲಿ, ಮೇಲೆ ಪ್ರಸ್ತಾಪಿಸಿರುವ ಇತ್ಯಾತ್ಮಕ ಅಂಶಗಳು ಹಾಸ್ಯದಲ್ಲೇ ಕಳೆದುಹೋಗುತ್ತವೆ ಎಂಬುದಾಗಿ  ಕೆಲವು ವೀಕ್ಷಕರು ಭಾವಿಸಬಹುದು.  ಆದರೆ ಹಾಗೆಯೇ ಅಗಬೇಕೆಂದೇನೂ ಇಲ್ಲ. ಕಳೆದ ವರ್ಷ ಬಿಡುಗಡೆಯಾದ ʼ ಡೇರ್‌ ಡೆವಿಲ್‌ ಮುಸ್ತಾಫʼ ಸಿನಿಮಾ ಮುಖ್ಯವಾಹಿನಿ ಸಿನಿಮಾದ ಚೌಕಟ್ಟನ್ನು ಹೊಂದಿದ್ದು, ಹಾಸ್ಯದ ಅಂಶಗಳನ್ನು ಒಳಗೊಂಡಿದ್ದರೂ, ಕೋಮುಸೌಹಾರ್ದತೆಯನ್ನು ಎತ್ತಿ ಹಿಡಿಯುತ್ತದೆ.  ಈ ನಿಟ್ಟಿನಲ್ಲಿ, ಬ್ರಿಟಿಶ್‌ ಸಾಮ್ರಾಜ್ಯಶಾಹಿಯನ್ನು ಕ್ರಿಕೆಟ್‌ ಮೂಲಕ ಒಂದರ್ಥದಲ್ಲಿ ವಿರೋಧಿಸುವ ಜನಪ್ರಿಯ ಹಿಂದಿ ಸಿನಿಮಾ ʼ ಲಗಾನ್‌ ನನ್ನು ಕೂಡ ಉದಾಹರಿಸಬಹುದು.

               

‍ಲೇಖಕರು avadhi

March 12, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: