ಕುಂವೀ ಹೊಸ ಕಾದಂಬರಿ ‘ಲ್ಯಾಟರಿನ್ನು’ ಬರ್ತಿದೆ

ಕುಂವೀ

**

‘ಅವಧಿ ವಿಶೇಷ

ಖ್ಯಾತ ಸಾಹಿತಿ ‘ಕುಂವೀ’ ಅವರು ಹೊಸ ಕಾದಂಬರಿ ಬರೆಯುತ್ತಿದ್ದಾರೆ.

ಹೆಸರು ‘ಲ್ಯಾಟರಿನ್ನು’.

‘ಅವಧಿ’ಯ ಓದುಗರಿಗಾಗಿ ಈ ಕಾದಂಬರಿಯ ಆಯ್ದ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.

**

‘ಪೈಲ್ವಾನ್ ಬಾಬಣ್ಣನ ಲ್ಯಾಟರಿನ್ನು ಧ್ವಂಸ ಪ್ರಕರಣವು’.

**

ಕ್ರಿಯಾಶೀಲತೆ ವಿಷಯದಲ್ಲಿ ದೇಶಭಕ್ತ ದಂಪತಿಗಳು ಪರಸ್ಪರ ಮಿಗಿಲಿದ್ದರು, ಪೂಜ್ಯ ರಂಗಾರಿ ಸಾಬರಮತಿ ಫಲಾನುಭವಿಗಳನ್ನು ಸಕ್ರಿಯವಿರಿಸಿದ್ದರು. ಇನ್ನು ಮಾತೆ ಕಸ್ತೂರಿ ಭಾಯಿ ಸಂಘದಾಫೀಸಲ್ಲಿ ಮಹಿಳೆಯರನ್ನು ಸಕ್ರಿಯವಿರಿಸಿದ್ದರು. ಅವರಿಬ್ಬರು ಅವರೆಲ್ಲರ ತಲೆಗಳಲ್ಲಿ ಸ್ವಾತಂತ್ರ್ಯ ಪೂರ್ವ ದಿವಸಗಳನ್ನು ಒಂದೊಂದಾಗಿ ಸೇರಿಸಲಾರಂಭಿಸಿದ್ದರು. ಭೂತಕಾಲವನ್ನು ವರ್ತಮಾನ ಕಾಲದೊಂದಿಗೆ ಸಮೀಕರಿಸುವುದು ವೃದ್ದರ ಮೂಲಭೂತ ಗುಣವಲ್ಲವೆ!

ಹೇಳಿದ್ದೆನಲ್ಲವೆ ಭಾಯಿಯವರ ಕಾರ್ಯಾಲಯ ಊರ ಹೃದಯ ಭಾಗದಲ್ಲಿತ್ತು, ಅದು ಒಂಟೆ ಮಲ್ಲಯ್ಯನ ಮನೆ. ಒಂದು ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟೀಷ ಸಿಪಾಯಿಗಳ ಕಣ್ತಪ್ಪಿಸಿ ಆ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದರಂತೆ, ಆ ಕಾರಣಕ್ಕೆ ಆತ ದೇಶಪ್ರೇಮಿ ಎಂದು ಕರೆಸಿಕೊಳ್ಳುತ್ತಿದ್ದ. ಚೌಕಾಕಾರದಲ್ಲಿದ್ದ ಆ ಮನೆ ಮಧ್ಯೆ ಇದ್ದ ಹಜಾರ ವಿಶಾಲವಿತ್ತು. ಎದುರಿದ್ದ ಗೋಡೆ ಮೇಲೆ ದೊಡ್ಡ ಫೋಟೋ ಇತ್ತು,  ಅದರಲ್ಲಿ ಆ ಕಸ್ತೂರಿ ಭಾಯಿ ಜೊತೆ ಈ ಕಸ್ತೂರಿ ಭಾಯಿ ಇದ್ದರು, ಅದೂ ಪುಣೆಯ ಯರವಾಡ ಜೈಲ್ ಅಂಗಳದಲ್ಲಿ! ಆ ಮನೆಯ ಮುಂದುಗಡೆ ‘ಮಹಿಳೆಯರಿಂದ ಮಹಿಳೆಯರಿಗಾಗಿ’ ಎಂಬ ಸೈನ್‌ಬೋರ್ಡ್ ನೇತು ಬಿಡಲಾಗಿತ್ತು.

ಆ ಓಣಿ ಪರಿಚಯವಿದ್ದಂತೆ ಆ ಮನೆ ಸಹ ಪರಿಚಯವಿತ್ತು. ಕಾರಣ ಮಲ್ಲಯ್ಯ ಅಪ್ಪನ ಭಜನಾ ತಂಡದ ಸದಸ್ಯನಿದ್ದ. ಆಗೊಮ್ಮೆ ಈಗೊಮ್ಮೆ ನಮ್ಮ ಮನೆಗೆ ಬರುತ್ತಿದ್ದ, ಅಪ್ಪಾಜಿ ಕೂಡ ನನ್ನ ಕುರಿತು ಅಭಿಮಾನದ ಮಾತುಗಳನ್ನಾಡುತ್ತಿದ್ದ. ಬಾಲ್ಯದ ದಿನಗಳಿಂದ ಸ್ವಲ್ಪ ಆತ್ಮ ಪ್ರಶಂಸೆ ಪ್ರಿಯನಿದ್ದ ನಾನು ಆತನ ಮೇಲೆ ಗೌರವ ಭಾವನೆ ಇರಿಸಿಕೊಂಡಿದ್ದೆ. ನೋವಿನ ಸಂಗತಿ ಅಂದರೆ ಮಲ್ಲಯ್ಯ ದೀರ್ಘಾವಧಿ ಪ್ರಕೃತಿ ಚಿಕಿತ್ಸೆ ಪಡೆಯಲೆಂದು ಮಲೆನಾಡಿನ ಯಾವುದೋ ಹಳ್ಳಿ ಸೇರಿಕೊಂಡಿದ್ದ.

ಹೀಗಾಗಿ ನಾನು ನಮ್ಮ ಮನೆಯಿಂದ ಈಗ ಹೊರಟು ಆಗ ಆ ಮನೆಯನ್ನು ತಲುಪಿದೆ. ಮನೆಗೆ ತೀರಾ ಸಮೀಪದಲ್ಲೆ ಒಂದು ಖಾಸಗಿ ಲ್ಯಾಟರಿನ್ನು ಇತ್ತು, ಆದರೆ ಅದು ಇನ್ನಿತರ ಲ್ಯಾಟರಿನ್ನುಗಳಿಗಿಂತ ಭಿನ್ನ ಇತ್ತು. ಉಳಿದವುಗಳಂತೆ ಅದು ನಾಮ್‌ಕಾವಾಸ್ತೆಯಾಗಿರಲಿಲ್ಲ! ಸದೃಢವಿತ್ತು, ಆದರೆ ಸೊಟ್ಟಬಟ್ಟವಿದ್ದ ಕಾರಣಕ್ಕೆ ಸುಬಾಬುಲ್ ಕಟ್ಟಿಗೆಯ ಬಾಗಿಲುಗಳು ಮುಚ್ಚಿದರೆ ತೆರೆಯುತ್ತಿರಲಿಲ್ಲ, ತೆರೆದರೆ ಮುಚ್ಚುತ್ತಿರಲಿಲ್ಲ, ತೆರೆಯುವ ಮುಚ್ಚುವ ಸಂದರ್ಭದಲ್ಲಿ ಉದಯೋನ್ಮುಖ ವಾದಕ ಹಾರ್ಮೋನಿಯಂ ನುಡಿಸಿದಂತೆ ‘ಕಿಯ್ಯೋ ಮಯ್ಯೋ’ ಅಂತ ಸವಂಡು ಮಾಡುತ್ತಿದ್ದವು. ಕೆಳಗಡೆ ಊರ್ಧ್ವಮುಖವಾಗಿದ್ದ ಡಬ್ಬಿ ತುಂಬೆಲ್ಲ ಮಲ ತುಂಬಿ ತುಳುಕಾಡುತ್ತಿತ್ತು. ಅದನ್ನು ಬಳಿದು ಸ್ವಚ್ಚ ಮಾಡಿ ಪುಟ್ಟಿಯಲ್ಲಿ ತುಂಬಿಕೊಂಡು ಒಯ್ಯಬೇಕಿದ್ದ ಮಹಿಳೆ ಕೆಲವು ದಿವಸಗಳಿಂದ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಅದರ ದುರ್ವಾಸನೆ ಓಣಿಯನ್ನೆಲ್ಲಾ ಆವರಿಸಿತ್ತು.

ಹೀಗಾಗಿ ಅಂಗಳ ಪ್ರವೇಶಿದಾಕ್ಷಣ ದುರ್ನಾತ ನನ್ನ ಮೂಗಿನ ಮೇಲೆ ಆಕ್ರಮಣ ಮಾಡಿತು. ಒಂದು ಕ್ಷಣ ವಾಕರಿಕೆ ಬಂದಂತೆನ್ನಿಸಿತು. ಮೂಗು ಮುಚ್ಚಿಕೊಂಡೆ, ಬಾಗಿಲ ಬಳಿ ನಿಂತೆ, ಬಡಿಯಬೇಕೆನ್ನುವಷ್ಟರಲ್ಲಿ ಖುದ್ದ ಚುಚೀಲಮ್ಮ ಬಂದು ಕದಗಳನ್ನು ಓರೆ ಮಾಡಿ “ಬಾ ತಮ್ಮಾ ಬಾ, ಬಾಯಿ ನಿನಗಾಗಿ ಕಾಯುತ್ತಿದ್ದಾರೆ”ಎಂದು ಒಳಗೆ ಕರೆದೊಯ್ದಳು.

ಹೋದೆ, ಪುಟ್ಟ ಹಜಾರದಲ್ಲಿ ಏಳೆಂಟು ಮಹಿಳೆಯರಿದ್ದರು. ಅವರೆಲ್ಲರು ಉತ್ಸಾಹಭರಿತರಿದ್ದರು. ಪೂಜ್ಯ ಮಾತೆಯವರು ಉನ್ನತಾಸನದಲ್ಲಿ ವಿರಾಜಮಾನರಾಗಿದ್ದರು. ಮುಂದೆ ಚರಕವಿದ್ದರು ‘ಸಾರೆ ಜಹಾಸೆ ಅಚ್ಛಾ’ ಎಂಬ ದೇಶಭಕ್ತಿ ಗೀತೆ ಹೇಳಿಕೊಡುವುದರಲ್ಲಿ ತಲ್ಲೀನರಿದ್ದರು, ಮೂರನೆ ಸ್ಟಾಂಜಾ ಮುಗಿದ ಬಳಿಕ ನನ್ನ ಕಡೆ ನೋಡಿ ಹಾಡುವುದನ್ನು ನಿಲ್ಲಿಸಿದರು. ಸಂಜ್ಞೆ ಮಾಡಿದೊಡನೆ ಹತ್ತಿರ ಹೋದೆ, ನನ್ನ ಬೆನ್ನ ಮೇಲೆ ಕೈಯಿರಿಸಿ ಮೆಲ್ಲಗೆ ನೇವರಿಸಿದರು. ನನ್ನ ಹಾಗು ಸಿನ್ನೂರಿಯ ಅಜ್ಜಿಯರ ಕ್ಷೇಮ ಲಾಭ ವಿಚಾರಿಸಿದರು. ಬಳಿಕ “ಈ ಊರಲ್ಲಿ ಪ್ರಪ್ರಥಮ ಲ್ಯಾಟರಿನ್ನು ವಿರುದ್ದ ರಣಭೇರಿ ಭಾರಿಸಿದ ಕ್ರಾಂತಿಕಾರಿ ಸಿಡಿಲಮರಿ” ಎಂದೆಲ್ಲ ನನ್ನನ್ನು ಹೊಗಳಿದರು. ಮುಖ್ಯವಾಗಿ ಹೊಸದಾಗಿ ಸೇರ್ಪಡೆಯಾಗಿದ್ದ ಹಿರಿಯ ಸದಸ್ಯೆಯರಿಗೆ ತಿಳಿಯಲಿ ಎಂಬ ಸದುದ್ದೇಶದಿಂದ.

ಒಂದು ಕ್ಷಣ ಮುಜುಗರ ಅನುಭವಿಸಿದೆ, ಕಾರಣ ಆ ವಾಕ್ಯ ಎರಡು ದಶಕಗಳಿಂದ ಬೇತಾಳದ ಥರ ನನ್ನ ಹೆಗಲೇರಿತ್ತು. ಬಳಿಕ ಮಾತೆ “ಆ ಕ್ರಾಂತಿಯ ಅನುಭವ ವಿವರಿಸು, ನಿನ್ನ ಅಪ್ರತಿಮ ಕೃತ್ಯದಿಂದ ಇವರೆಲ್ಲರು ಸ್ಪೂರ್ತಿ ಪಡೆಯಲಿ” ಎಂದು ಕೇಳಿದರು, ವಾಚಾಳಿಯಾದ ನಾನು ನನ್ನ ಬಾಲ್ಯದ ಘಟನೆಯನ್ನು ಹದಿನೆಂಟು ವಾಕ್ಯಗಳಲ್ಲಿ ವಿವರಿಸಿದೆ, ಅದೂ ಅಸ್ಖಲಿತವಾಗಿ.

ಅದನ್ನು ಆಲಿಸಿ ಅವರೆಲ್ಲರು ಹೊಟ್ಟೆ ತುಂಬ ನಕ್ಕರು, ಮುಖ್ಯವಾಗಿ ಬಾಯಿ ನನ್ನ ಮಾತುಗಳಿಂದ ಪ್ರಭಾವಿತರಾದರು. “ಆ ಚಿಕ್ಕ ವಯಸ್ಸಿನಲ್ಲಿ ಅಂಥ ಕ್ರಾಂತಿಕಾರಕ ಕೃತ್ಯ ಮಾಡಿರುವೆಯಲ್ಲ!” ಎಂದು ಉದ್ಗರಿಸಿ ಅಭಿನಂದಿಸಿದರು. ಬಳಿಕ ನನ್ನ ಕಡೆ ಮೇಲೆ ಕೆಳಗೆ ನೋಡಿ, ‘ನಿನ್ನಲ್ಲಿ ಭಗತ್‌ಸಿಂಗ್‌ನ ಅಂಶವಿರುವಂತಿದೆ, ಕೀಪಿಟ್ಟಪ್ ಕೀಪಿಟ್ಟಪ್” ಎಂದೊಂದು ಕ್ಷಣ ಭಾವ ಪರವಶರಾದರು. ಬಳಿಕ ವಾಸ್ತವಕ್ಕೆ ಮರಳಿ ‘ಅಂಥ ಲ್ಯಾಟರಿನ್ನುಗಳು ಈ ಊರಲ್ಲಿನ್ನು ಅಸ್ತಿತ್ವದಲ್ಲಿರುವವೇನು!’ ಎಂದು ಕೇಳಿದರು.

ಅದರಿಂದ ನನಗೆ ಅಚ್ಚರಿಯಾಯಿತು. ಅವರು ವರ್ತಮಾನದಲ್ಲಿಲ್ಲವೆನ್ನಿಸಿತು. ಅದಕ್ಕೆ ಏನು ಹೇಳಲಿ! ಆಶ್ಚರ್ಯ ಹಾಗು ದಿಗ್ಭ್ರಮಿತನಾಗಿ ಅವರ ಕಡೆ ನೋಡಿದೆ. ಒಂದು ಕ್ಷಣ ಏನು ಹೇಳುವುದು! ಹೊಳೆಯಲಿಲ್ಲ. ಅರ್ಧ ನಿಮಿಷದ ಬಳಿಕ ಪುನಃ ಅವರೆ ‘ಖಾಸಗಿ ಲ್ಯಾಟರಿನ್ನುಗಳೆಂದರೇನು! ಅವುಗಳ ವಿನ್ಯಾಸ ಹೇಗಿರುತ್ತದೆ! ವಿಸರ್ಜಿತ ಮಲ ಸಂಗ್ರಹವಾಗುವುದೆಲ್ಲಿ! ಅದನ್ನು ಬಳಿಯುವ ಮಹಿಳೆಯರ ಭೌತಿಕ ರೂಪ ಹೇಗಿರುತ್ತದೆ! ವಿಸರ್ಜಿತ ವಸ್ತುವಿಗೆ ರುಚಿ ಬಣ್ಣ ವಾಸನೆ ಇರುತ್ತದೊ ಇಲ್ಲವೊ!’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಅವರ ಮಾತು ಕೇಳಿ ಈ ಪುಣ್ಯಾತ್ಗಿತ್ತಿ ‘ಕಕ್ಕ’ ಮಾಡುವರೊ ಇಲ್ಲವೊ! ‘ಕಕ್ಕ’ ಕುರಿತಂತೆ ಕನಿಷ್ಟ ಪ್ರಾಥಮಿಕ ಜ್ಞಾನವಿಲ್ಲದವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಹೇಗೆ! ಅನುಮಾನ ಕಾಡಿತು. ಜೊತೆಗೆ ಈ ಮಹಾಮಾತೆ ಮಹಾ ಮರೆಗುಳಿ ಅನ್ನಿಸಿತು.

ಆಶ್ಚರ್ಯವೆಂದರೆ ಕೆಲವು ದಿವಸಗಳ ಹಿಂದೆ ಮಲ ಹೋರುವ ಮಹಿಳೆಯರು ವಾಸಿಸುವ ಸ್ಲಂ ಏರಿಯಾಕ್ಕೆ ಹೋಗಿದ್ದನ್ನು, ಅವರೊಡನೆ ಸಂವಾದಿಸಿದ್ದನ್ನು, ಅವರಿಗೆ ನೀಡಿದ್ದ ಭರವಸೆ ಆಶ್ವಾಸನೆಗಳನ್ನು ಈ ದೇಶಭಕ್ತೆ ಮರೆತಿರುವರು ಎಂದು ತಿಳಿದೆ. ಅದನ್ನು ನೆನಪಿಸಿದೆ, ಪಕ್ಕದಲ್ಲೆ ಇದ್ದ ಸಂಬು ಸುದ್ದಿ ಇದ್ದ ಪೇಪರ್ ಕಟ್ಟಿಂಗನ್ನು ಅವರಿಗೆ ತೋರಿಸಿದ. ಆಗ ಅವರು ‘ಅರೆ ಹೌದಲ್ಲವೆ!’ ಎಂದು ಸರಿ ದಾರಿಗೆ ಬಂದರು, “ಅಯ್ಯೋ ಪಾಪದ ಮುಂಡೇವು, ಆ ಕಮ್ಯುನಿಷ್ಟ್ ಚಾಮಿ ಸತ್ತನಂತೆ ಪಾಪ” ಎಂದು ಸಹ ಮರುಗಿದರು.

ಚೇತರಿಸಿಕೊಂಡ ಬಳಿಕ ಖಾಸಗಿ ಲ್ಯಾಟರಿನ್ ಟ್ರಾಕಿಗೆ ಮರಳಿದರು. ಮತ್ತದೇ ರಾಗ! “ಮಗೂ ಆ ಕಕ್ಕಸು ಕೋಣೆಗಳ ವಿನ್ಯಾಸ ಹೇಗಿರುತ್ತದೆ! ಅದರ ವಾಸನೆ ತುಸು ಕಟು ಇರುತ್ತದೆಯಂತೆ ಹೌದೇನು!” ಎಂದು ಎಳೆ ಮಗುವಿನಂತೆ ಕೇಳಿದರು. ಈಕೆಗೆ ಗ್ರಾಮೀಣ ಭಾರತದ ಪರಿಚಯ ಕಿಂಚಿತ್ತಿಲ್ಲವೆನ್ನಿಸಿತು. ಗಿರಿಜಿ ಕಡೆ ದೃಷ್ಟಿ ನೆಟ್ಟಿದ್ದ ಸಂಬುಗೆ ಈ ಮಾತುಕತೆ ಕಡೆಗೆ ದ್ಯಾಸವಿರಲಿಲ್ಲ.

ಅವರಂತು ಸರೆ ಸರಿ, ಆದರೆ ಸದಸ್ಯೆಯರಲ್ಲಿ ಒಬ್ಬರಲ್ಲಾದರು ಈ ಸಾಮಾನ್ಯ ಜ್ಞಾನವಿರುವುದು ಬೇಡವೆ! ಕೋಲೆ ಬಸಣ್ಣಿಗಳ ಥರ ಸುಮ್ಮನೆ ಕೂತಿದ್ದರು. ಅವರೆಲ್ಲರು ಕಾಂಬಿನೇಷನ್ ಒಂದೆ ಇರುವುದೆನ್ನಿಸಿತು. ‘ನೀವ್ಯಾವ ಲೋಕದಲ್ಲಿರುವಿರಿ ಅಮ್ಮಾ, ಅರ‍್ಯಾಕೆ ನೀವ್ಯಾಕೆ ಮೂಗು ಮುಚ್ಚಿಕೊಂಡಿರುವಿರಿ ಹೇಳಿರಿ!’ ಎಂದು ಕೇಳಿದೆ, ಅದಕ್ಕೆ ಅವರು, ‘ಎಂಥದ್ದೋ ಒಂದು ಅಪರಿಚಿತ ಕಟು ಪರಿಮಳವಿರುವುದಲ್ಲ ಅದಕ್ಕೆ’ ಅಂದರು. ಸಮಾಧಾನದ ಉಸಿರುಬಿಡುತ್ತ ನಾನು, ‘ಅದಕ್ಕೆ ದುರ್ವಾಸನೆ ಅಂತಾರೆ ಕಣ್ರಮ್ಮಾ’ ‘ಹ್ಹಾ ಹೌದೇನು! ಹಾಗಿದ್ದರೆ ಇದರ ಮೂಲ ಯಾವುದು!’ ‘ಇನ್ನೆಲ್ಲಿ ಕಣ್ರಮ್ಮಾ ಈ ಮನೆಗೆ ಪಕ್ಕದಲ್ಲೆ ಇದೆ’ ‘ಹಾಗಾದರೆ ಪ್ರೈವೇಟ್ ಲ್ಯಾಟರಿನ್ನು ಇಲ್ಲೆ ಇರುವುದೇನು!’ ಎಂದು ಉದ್ಗರಿಸಿದರು, ಬಳಿಕ ಅವರೆ ‘ಅಂತೂ ಬಳ್ಳಿ ಹುಡುಕುತ್ತಿದ್ದವರ ಕಾಲಗೆ ತೊಡರಿದಂತಾಯಿತು ಮಗು’ ಎಂದು ಆಶ್ಚರ್ಯಚಕಿತರಾದರು, ಸಂಭ್ರಮಿಸಿದರು.

ಬಳಿಕ ತಮ್ಮ ಘ್ರಾಣೇಂದ್ರಿಯದ ಮುಂಭಾಗವನ್ನು ಮುಂಗೈಯಿಂದ ತಿಕ್ಕಿ ಅದರ ಸಾಮರ್ಥ್ಯ ಹೆಚ್ಚಿಸಿದರು. ಲ್ಯಾಟರಿನ್ನು ನೋಡಿಲ್ಲವೆಂದರೆ ಏನೆಂದು ಭಾವಿಸುವರೊ! ಜೈಲು ಜೀವನನ ಎಳೆದು ತಂದರು. ಅಲ್ಲಿನ ವಾಸನೆನ ಕುಡಿದೂ ಕುಡಿದು ಪ್ರತಿ ಸ್ವಾತಂತ್ರ್ಯ ಹೋರಾಟಗಾರರ ಅಭಿರುಚಿ ಮಾಸಲಾಗಿರುವುದೆಂದು ಹೇಳಿದರು. ಬಳಿಕ ನನ್ನ ಕಡೆ ತಿರುಗಿ, “ನಿಮ್ಮ ಅಪ್ಪಾಜಿಯವರಿಗೆ ಹೋಲಿಸಿದರೆ ನಮ್ಮ ಮೂಗೇ ವಾಸಿ ಮಗೂ” ಎಂದು ತಮ್ಮ ಮೂಗಿನ ಕ್ರಿಯಾಶೀಲತೆಯನ್ನು ಸಮರ್ಥಿಸಿಕೊಂಡರು.

***

ಹೇಳಿದ ಪರಿಣಾಮ ಇಂಥದ್ದೊಂದು ಕ್ರಾಂತಿ ಸಂಭವಿಸೀತೆಂದು ನಿರೀಕ್ಷಿಸಿರಲಿಲ್ಲ. ದೇಶದಾದ್ಯಂತ ಸುತ್ತಾಡಿದ್ದ, ಲಗ್ಜೂರಿಯಸ್ ಲೈಫನ ನಿಕಟ ಪರಿಚಯವಿದ್ದ, ಸಾಮಾನ್ಯವಾಗಿ ವಿದೇಶಿ ಶೈಲಿಯ ಲ್ಯಾಟರಿನ್‌ಗಳ ಜೊತೆ ನಿತ್ಯ ಒಡನಾಡಿದ್ದ, ವಾಸನೆ ಅಂದರೇನು! ಅವುಗಳಲ್ಲಿ ಎಷ್ಟು ವಿಧ! ಅವುಗಳ ಮೂಲ ಯಾವುದು! ಅವು ಮಾನವನ ಆರೋಗ್ಯದ ಮೇಲೆ ಪ್ರಭಾವ ಬೀರುವವೊ ಇಲ್ಲವೊ! ಅವರಿಗೆ ಈ ಕುರಿತು ಕಿಂಚಿತ್ತು ಮಾಹಿತಿ ಇರಲಿಲ್ಲ, ಅದರ ಬಗ್ಗೆ ಪಾಠ ಮಾಡಲು ನನಗೆ ಟೈಮಾವಕಾಶವಿರಲಿಲ್ಲ. ಆದರೆ ಅವರು ವಿಷಯ ತಿಳಿದು ಆನಂದೋದ್ಗಾರ ಮಾಡಿದ್ದು ಸಹಜ ಕ್ರಿಯೆ.

ಆ ಬೀದಿ, ಆ ಮನೆಯ ಪರಿಸರ ಅವರಿಗೆ ಹೊಸತಲ್ಲ. ಹಲವು ತಿಂಗಳುಗಳಿಂದ ಬಂದು ಹೋಗುತ್ತಿದ್ದವರೆ! ಆದರೆ ಬರುವಾಗ ಹೋಗುವಾಗ ಆಚೆ ಈಚೆ ಕತ್ತೊರಳಿಸುತ್ತಿರಲಿಲ್ಲವೆ! ಅಲ್ಲದೆ ಅವರಿಗೆ ಗ್ರಾಮೀಣ ಪ್ರಾಂತದಲ್ಲಿನ ಶೌಚದ ಪರಿಚಯ ಇತ್ತೂ ಅಂದರೆ ಇತ್ತು, ಇರಲಿಲ್ಲವೆಂದರೆ ಇರಲಿಲ್ಲ. ಹಿಂದೊಮ್ಮೆ ಅವರೆ ಪ್ರಾಕ್ಟಿಕಲ್ಲಾಗಿ ಮಹಿಳೆಯರ ಜೊತೆ ಬಯಲು ಶೌಚಕ್ಕೆ ಹೋಗಿ ಬಂದಿದ್ದರಲ್ಲವೆ! ಅದೆಲ್ಲ ಸಂದೇಹಾಸ್ಪದ ಎಂಬ ಸಂದೇಹ ನನ್ನನ್ನು ಕಾಡಲಾರಂಭಿಸಿತು. ಬಗಲ ಚೀಲದಲ್ಲಿ ಅಡಗಿಸಿಟ್ಟಿದ್ದ ಜಪಾನಿನ ಕಾನ್ ಉಮೆರಾ ವಿರಚಿತ ‘ಟಾಯ್ಲೆಟ್ ಗಾಡ್’ ಪುಸ್ತಕನ ಕೊಡದೆ ಇರುವುದೆ ವಾಸಿ ಅನ್ನಿಸಿತು. ವಾಸನೆ ಗೊತ್ತಿಲ್ಲದವರಿಗೆ ಆ ಕೃತಿ ರುಚಿಸಲಾರದು ಎಂದು ಭಾವಿಸಿದೆ. ಆ ಮಹತ್ತರ ಕೃತಿ ಅಪಾನವಾಯು ಬಿಟ್ಟು ಸದ್ದು ಮಾಡಿ ಆಕೆಯ ಗಮನ ಸೆಳೆಯಬಾರದೆಂದು ಅದರ ಮೇಲೆ ಒಂದು ಕೈಯಿರಿಸಿದೆ.

ಎಲ್ಲೋ ಸುಖ ಸಂತೊಷದಿಂದ ಇರಬೇಕಿದ್ದ ಅವರು ನಿಸ್ಸಂದೇಹವಾಗಿ ಒಳ್ಳೆಯವರೆ, ಆದರೆ ಗ್ರಾಮೀಣ ತಿಳವಳಿಕೆ ಇಲ್ಲದವರು, ‘ಊಮಹೇ’! ಈ ಮೂರು ಅನಿವಾರ್ಯ ಕ್ರಿಯೆಗಳ ಬಗ್ಗೆ ಪ್ರಾಥಮಿಕ ಜ್ಞಾನವಿಲ್ಲದವರು. ಆದರೂ ಒಳ್ಳೆಯವರೆ. ಏನಾದರು ಒಳ್ಳೆಯ ಕಾರ್ಯ ಮಾಡುವ ಉದ್ದೇಶದಿಂದ ಸದ್ಯಕ್ಕೆ ಕೊಟ್ಟೂರಲ್ಲಿ ಬಾಳ ಸಂಗಾತಿ ಜೊತೆ ನೆಲೆಸಿರುವವರು. ಅಷ್ಟು ಮುಖ್ಯ ಅನ್ನಿಸಿತು.

ಅವರ ಆ ಪ್ರಮಾಣದ ಉತ್ಸಾಹ ನೋಡಿ ಅರಂಭದಲ್ಲಿ ನಾನು ತುಸು ಗಾಬರಿಗೊಂಡಿದ್ದು ನಿಜ. ಅಲ್ಲದೆ ಆ ಲ್ಯಾಟರಿನ್ನಿಗೆ ಕರಾಳ ಹಿನ್ನಲೆ ಇತ್ತು. ಅದು ಎಷ್ಟು ನಿಜವೊ! ಎಷ್ಟು ಸುಳ್ಳೊ! ಅಲ್ಲದೆ ಇವರೆಲ್ಲರು ಮಹಿಳೆಯರು ಬೇರೆ, ಒಂದು  ಹೋಗಿ ಇನ್ನೊಂದು ಸಂಭವಿಸಿದರೆ ಏನು ಗತಿ! ಅಲ್ಲದೆ ಆ ಮಾಹಿತಿ ನೀಡಿದ ನನ್ನ ಮೇಲೆ ಆ ಲ್ಯಾಟರಿನ್ನಿನ ಗೋಡೆಗಳು ಹಲ್ಲೆ ನಡೆಸಿದರೇನು ಗತಿ! ಆತಂಕ ಕಾಡಿದ್ದು ನಿಜ. ಆದರೆ ಕ್ರಾಂತಿಕಾರಿ ಎಂಬ ಬಿರುದಾಂಕಿತನಾದ ನಾನು ಮುಂದಿಟ್ಟ ಹೆಜ್ಜೆನ ಹಿಂದೆ ಇಡಲಾದೀತೆ!

‘ಇನ್ಯಾಕೆ ತಡ ಕ್ರಾಂತಿಕಾರಿ! ಬೇಗನೆ ತೋರಿಸು, ಇಷ್ಟು ದಿನಗಳ ಕಾಲ ಇಲ್ಲಿಗೆ ಬಂದು ಹೋಗುತ್ತಿರುವ ನನ್ನ ಕಣ್ಣಿಗೆ ಅದ್ಯಾಕೆ ಗೋಚರಿಸಿಲ್ಲ!’ ಮೇಡಂ ಅವಸರಿಸಿದರು. ಅದುವರೆಗೆ ಗಿರಿಜಿಯ ದೃಷ್ಟಿ ಪಂಜರದಲ್ಲಿ ಬಂಧಿಯಾಗಿದ್ದ ಸಂಬು ಅದೇ ತಾನೆ ವಾಸ್ತವಕ್ಕೆ ಮರಳಿ ಮುಖದ ಮೇಲಿನ ಬೆವರೊರೆಸಿಕೊಂಡ.

“ಲೋ ಅದರ ಮಾಲಕ ಯಾರು ಗೊತ್ತೇನೊ!” ನನಗೆ ಮಾತ್ರ ಕೇಳಿಸುವಂತೆ ಹೇಳಿದ. ಅವನ ಮಾತು ನನಗೆ ಕಿರಿಕಿರಿ ಅನ್ನಿಸಿತು, “ಅವನ್ಯಾರಾದರೆ ನನಗೇನು, ನಮಗೆ ಲ್ಯಾಟರಿನ್ನು ಮುಖ್ಯ” ಎಂದು ಒಮ್ಮೆಗೆ ಹೇಳಿದೆ. ಆದರೆ ಅದರ ಮಾಲಕನ ಪರಿಚಯ ಊರಿಗೆಲ್ಲ ಇತ್ತು, ಕಾರಣ ಆತ ಪರಿಶೆ ಪೈಕಿ ಪೈಲ್ವಾನನೂ, ರೌಡಿಯೂ, ಜಗಳಗಂಟನೂ, ಪೇಮೆಂಟ್ ಗಿರಾಕಿಯೂ ಎಂದು ಗೊತ್ತಿತ್ತು. ಆ ಎಲ್ಲಾ ಅಂಶಗಳು ಲ್ಯಾಟರಿನ್ನಿನ ಹಿತ ರಕ್ಷಿಸಲಾರವು ಎಂದು ಭಾವಿಸಿದ್ದೆ. ಆದರೆ ಹಾದಿ ಬೀದಿ ರಂಪಾಟದ ಅಗತ್ಯವಿರಲಿಲ್ಲ.

ಸದ್ಯಕ್ಕೆ ಇದನ್ನು ರಹಸ್ಯ ಕಾರ್ಯಾಚರಣೆ ಅನ್ನಬಹುದೇನೊ! ಕಾರಣ ಯಾರಿಗು ಯಾರು ಸಹ ಹೇಳಿರಲಿಲ್ಲ. ಅಲ್ಲದೆ ಲ್ಯಾಟರಿನ್ನು ಸುಶ್ರಾವ್ಯ ಅಥವಾ ಪ್ರೇಕ್ಷಣೀಯ ಅಲ್ಲ ಎಂಬ ಕಾರಣಕ್ಕೆ. ‘ನೀನು ಮುಂದಿರಪ್ಪಾ’ ಅಂದುದಕ್ಕೆ ನಾನು ಮುಂದಾಳತ್ವ ವಹಿಸಿದೆ. ನನ್ನ ಹಿಂದೆ ಮೇಡಂ, ಸಂಬು, ಗಿರಿಜಿ ನಂತರ ಉಳಿದೆಲ್ಲ ವೀರವನಿತೆಯರು! ಆ ಸನ್ನಿವೇಶ ದಂಡಿ ಸತ್ಯಾಗ್ರಹವನ್ನು ಹೋಲುತ್ತಿತ್ತು. ಒಳಗಿನಿಂದ ಹೊರಗೆ, ಅಂದರೆ ಅಂಗಳ ಪ್ರವೇಶಿಸಲು ಹಿಡಿದ ಸಮಯ ಬರೋಬ್ಬರಿ ಒಂದೂವರೆ ನಿಮಿಷ.

ತೀರಾ ಸನಿಹದಲ್ಲಿ ನಿಂತು ಇದೆ ಎಂದೆ, ಅದಕ್ಕೆ ಮೇಡಂ ‘ಯಾವುದು! ಎಲ್ಲಿದೆ! ಯಾವ ಆಕಾರದಲ್ಲಿದೆ! ಎಂದು ಒಂದೇ ಉಸಿರಿಗೆ ಕೇಳಿದರು, ಏನು ಹೇಳಲಿ! ಆ ಬಳಿಕ ಅವರಿಗೆ ವಸ್ತು ಸ್ಥಿತಿ ಅರಿವಿಗೆ ಬಂತು. ಬಳಿಕ ತಾವೆ ಅದನ್ನು ಖುದ್ದ ತಪಾಸಣೆ ನಡೆಸುವ ಇರಾದೆ ವ್ಯಕ್ತಪಡಿಸಿದರು. ಕರೆದೊಯ್ದೆ. ಅದು ಚಿಕ್ಕ ಗುಡಿ ಪಕ್ಕದಲ್ಲೆ ಇತ್ತು. ಹಾಕಲ್ಪಟ್ಟಿದ್ದ ಕಳಪೆ ಬೀಗ ಜಗ್ಗಿದಾಕ್ಷಣ ಕಳಚಿತು. ಕದಗಳು ರಾಗಾಲಾಪನೆಗೈಯುತ್ತ ಹೋಳಾದವು. ಅದರ ‘ದಿವಾನ್‌ಖಾಸಾ’ ಸ್ಥಿತಿ ಅಯೋಮಯವಿತ್ತು. ‘ಬನ್ನಿ ಮೇಡಂ ನೋಡಿರಿ’ ಎಂದು ಆಹ್ವಾನಿಸಿದೆ. ಆ ಕ್ಷಣದವರೆಗೆ ಅವರು ಆ ಇಮಾರತ್ತಿಗೆ ಒಂದೆರಡು ಅಡಿ ದೂರದಲ್ಲಿ ನಿಂತಿದ್ದರು.

ಕರೆದೊಡನೆ ಬಂದು ತುಸು ಬಾಗಿ ಇಣುಕಿ ‘ಓಹ್ ಇದೇನು!’ ಎಂದು ಉದ್ಗರಿಸಿದರೋ ಇಲ್ಲವೊ, ತಕ್ಷಣ ವಯ್ಕಂತ ವಾಂತಿ ಮಾಡಿಕೊಂಡರು. ನಿಜ ಸಂಗತಿ ಅಂದರೆ ಅವರಿಗೆ ವಾಂತಿ ಎಂಬ ಕ್ರಿಯಾಪದದ ಪರಿಚಯ ಲವಲೇಶವಿರಲಿಲ್ಲ. ದೇಶಭಕ್ತಿ ಕಾರಣಕ್ಕೆ ತಾಯ್ತನವನ್ನು ನಿರಾಕರಿಸಿದ್ದರು. ದೇಶಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಅಂಥ ದೇಶಪ್ರೇಮಿ ಮಹಿಳೆ ತನ್ನ ಪ್ರೀತಿಯ ಭಾರತದಲ್ಲಿ, ಅದೂ ತಮ್ಮ ಕಾರ್ಯಕ್ಷೇತ್ರ ಕೊಟ್ಟೂರಲ್ಲಿ, ಅದೂ ತಮ್ಮ ಆಫೀಸ್ ಪಕ್ಕ ಲ್ಯಾಟರಿನ್ನು ಇರುವುದೆಂದರೇನು! ಅದು ಗಬ್ಬು ನಾರುತ್ತಿರುವುದೆಂದರೇನು! ಅದರ ವಾಸಣೆಗೆ ತಾವು ಅಚಾನಕ್ಕಾಗಿ ವಾಂತಿ ಮಾಡಿಕೊಳ್ಳುವುದೆಂದರೇನು! ಹೌದು ಆಕೆ ಅಕ್ಷರಶಃ ಕನಲಿದರು, ಆ ಕಾಲದಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿ ವಿರುದ್ದ ಕೆರಳಿದ್ದಕ್ಕೆ ಸರಿಸಮ ಕೆರಳಿದರು. ಈ ಲ್ಯಾಟರಿನ್ನು ಮಾಲಕರು ಬ್ರಿಟೀಷರಿಗಿಂತ ಅಪಾಯಕಾರಿ ಎಂಧು ಭಾವಿಸಿದರು. ಇಂಥವರಿಗೆ ಗಲ್ಲು ಶಿಕ್ಷೆ ನೀಡಿದರು ಕಡಿಮೆ ಎಂದು ಕೋಪಾವೇಶದಲ್ಲಿ ಭಾವಿಸಿದರು.

ಆಕೆ ಸುಮಸುಮ್ಮನೆ ಕೆರಳುವ ವ್ಯಕ್ತಿಯಲ್ಲ, ಎಷ್ಟೋ ವರ್ಷಗಳ ಬಳಿಕ ಪುನಃ ಕೆರಳಿದ್ದರು. ಆಕೆಯಲ್ಲಿ ಕೋಪ ಕೆರಳಿಸಲೆಂದೇ ಅಲ್ಲಿನ ಲ್ಯಾಟರಿನ್ನು ಕೆಟ್ಟು ಕೆರ ಹಿಡಿದಿತ್ತು. ಅಲ್ಲಿದ್ದದ್ದು ತಿಂಗಳ ಸ್ಟಾಕು. ಅದನ್ನು ತನ್ನ ಕಣ್ಣುಗಳಿಂದ ಆಪೋಶನ ತೆಗೆದುಕೊಂಡರು. ಅದಕ್ಕಿಂತ ಮುಖ್ಯ ಸಂಗತಿ ಅಂದರೆ ಆ ಲ್ಯಾಟರಿನ್ನಿನ ಒಳ ಪ್ರಪಂಚ ರುದ್ರ ಭೀಕರ ಭಯಾನಕವಿತ್ತು. ಅದರ ವಾಸ್ತು ವಿನ್ಯಾಸನ ವರ್ಣಿಸುವುದಾದರೆ!

ಅದರ ಎತ್ತರ ನಾಲ್ಕೂಮುಕ್ಕಾಲಡಿ ಇದ್ದರೆ ಅಗಲ ಎರಡೂಕಾಲಡಿ ಇತ್ತು. ಆ ಸ್ಮಾರಕದ ಒಂದು ಪಾರ್ಶ್ವ ಸಂಘದಾಫೀಸಿನ ಗೋಡೆಗೆ ಅಂಟಿತ್ತು. ಇನ್ನೆರಡು ಗೋಡೆಗಳು ಉಪ್ಪಡರಿ ದುರ್ಬಲ ಸ್ಥಿತಿಯಲ್ಲಿದ್ದವು. ಒಡೆಯ ಹಾಗು ಆತನ ಕುಟುಂಬ ಸದಸ್ಯರೆಲ್ಲರು (ಆ ಕುಟುಂಬದಲ್ಲಿ ಕಡಿಮೆ ಅಂದರು ಇರುವುದು ಹದಿನಾರು ಮಂದಿ) ಐದಾರು ದಿವಸಗಳಿಂದ (ದಿನಕ್ಕೆ ಎರಡು ಸಲ ಅಂದರೆ ಅದರ ಮೊತ್ತ ನೀವೆ ಊಹಿಸಿಕೊಳ್ಳಿರಿ) ಸುರುವಿದ್ದು ಅದು ಅಲ್ಲೆ ಘನೀಭವಿಸಿ ಕೊಳೆತು ನಾರುತ್ತಿತ್ತು. ನೀಚ ಸ್ಥಾನದಲ್ಲಿದ್ದ ತಗಡಿನ ಡಬ್ಬಿ ತುಂಬಿ ಹೊರ ಹರಿದಿತ್ತು. ಈ ದೃಶ್ಯವನ್ನು ಸಾಕ್ಷಾತ್ಕರಿಸಿಕೊಂಡವರ ಸ್ಥಿತಿ ಚಿಂತಾಜನಕವಾಗದೆ ಇನ್ನೇನು!

ಸಂಘದ ಸದಸ್ಯೆಯರು ಹಿಂಭಾಗಕ್ಕೆ ಹೋಗಿ ಇಣುಕಿದರು, ಆದರೆ ಅಲ್ಲಿ ಅದನ್ನು ಷಡ್ರಸೋಪೇತ ಭೋಜನವೆಂದು ಭಾವಿಸಿ ಭುಂಜಿಸುವುದರಲ್ಲಿ ನಿರತವಿದ್ದ ಶುನಕಗಳು ಅವರ ಕಡೆ ನೋಡಿ ಗುರುಗುಟ್ಟಿದವು, ಅವುಗಳಲ್ಲಿ ಕೆಲವು ಕಚ್ಚುವ ಭಂಗಿಯಲ್ಲಿ ಮುಖ ಸಿಂಡರಿಸಿಕೊಂಡು ಒಂದೆರಡು ಹೆಜ್ಜೆ ನುಗ್ಗಿದಾಕ್ಷಣ ಇವರಲ್ಲಿಂದ ‘ಅಯ್ಯಯ್ಯಪ್ಪಾ’ ಅಂತ ಕಾಲು ಕಿತ್ತರು. ಅದೆಲ್ಲಕ್ಕಿಂತ ಮುಖ್ಯವಾಗಿ!

“ಯಥೇಚ್ಚ ನೀರು ಸುರೀಲಿಕ್ಕೆನವರಿಗೆ ರೋಗ!” “ಹ್ಹಹ್ಹ ನೀವು ಹೇಳಿದ್ದು ಸರಿ, ಆದರೆ ಎಂಜಲಗೈಯನ್ನು ತೊಳೀಲಿಕ್ಕೆ ನೀರಿಲ್ಲ ಅಕ್ಕಾ, ಇನ್ನು ಕುಂಡಿನ ತೊಳೀಲಿಕ್ಕೆ, ಲ್ಯಾಟರಿನ್ನಿಗೆ ಸುರೀಲಿಕ್ಕೆಲ್ಲಿಂದ ನೀರು ತರೋದಕ್ಕಾ” “ಹಾಗಿದ್ದರೆ ಅದೂ ಸರೀನೆ”! “ಈ ಊರನ ಮಂದಿ ಲ್ಯಾಟರಿನ್ನು ಮಾಡೋದು ತ್ರಾಸೈತಕ್ಕ.”

ಮೇಡಂ ಐತಿಹಾಸಿಕವಾಗಿ ವಾಂತಿ ಮಾಡಿಕೊಂಡರಲ್ಲವೆ! ಬಳಿಕ ಐತಿಹಾಸಿಕವಾಗಿ ಒಂದೂವರೆ ನಿಮಿಷಗಳಲ್ಲೆ ಚೇತರಿಸಿಕೊಂಡರಲ್ಲವೆ! ಹಿಂದೆ ಮುಂದೆ ನೋಡಿ ಮುಖದಲ್ಲಿ ಅಗ್ನಿಯನ್ನು ಆವಹಿಸಿಕೊಂಡರಲ್ಲವೆ! ಭಾರತೀಯ ಐದಾರು ಪ್ರಾದೇಶಿಕ ಭಾಷೆಗಳಲ್ಲಿನ ಬಯ್ಗಳಿಂದ ಅದರ ಮಾಲಕನನ್ನು ಥಳಿಸಿದರಲ್ಲವೆ! ಅವನನ್ನು ಡೆವಿಲ್, ಡೆಮಾನ್, ಸ್ಕೌಂಡರಲ್, ಈಡಿಯಟ್ ಹೀಗೆ ಇಂಗ್ಲಿಷ್ ಭಾಷೆಯಲ್ಲೂ ಝಾಡಿಸಿದರು. ಮೇಲ್ನೋಟಕ್ಕೆ ತೀರಾ ಮೃದು ಸ್ವಭಾವದವರಂತೆ ಭ್ರಮೆ ಹುಟ್ಟಿಸುವ ಮೇಡಂ ಈ ಪ್ರಕಾರ ಕೋಪವನ್ನು ಪ್ರಜ್ವಲಿಸಬಹುದೆಂದು ನಾವ್ಯಾರು ಊಹಿಸಿರಲಿಲ್ಲ.

ಮಾನಸಸರೋವರದಂತಿದ್ದ ಮೇಡಂ ವೈಶಂಪಾಯನ ಸರೋವರದಂತೆ ಬದಲಾಗಿದ್ದು ಅಚ್ಚರಿಯ ಸಂಗತಿ. ಒಂದೆರಡು ಕ್ಷಣ ಯೋಚಿಸಿ ಸುತ್ತ ಮುತ್ತ ಸಿಂಹಾವಲೋಕನ ಮಾಡಿದರು. ಅ ಮಧ್ಯಾಹ್ನದ ಸಮಯವಾದ್ದರಿಂದ ಆ ಓಣಿ ನಿರ್ಮಾನುಷವಿತ್ತು. ‘ಛೇ ಛೇ ಟ್ರಾಜಿಡಿ ಟ್ರಾಜಿಡಿ’ ಎಂದು ಎರಡು ಸಲ ಖೇದ ವ್ಯಕ್ತಪಡಿಸಿದರು. ಅದನ್ನೇನು ಮಾಡುವುದು! ಅದನ್ನು ಕೆಡವಿ ನಿರ್ನಾಮ ಮಾಡುವುದೊಂದೆ ಪರಿಹಾರ! ಓಹ್ ಹಾಗೊ, ಆ ಕೆಲಸವನ್ನು ನಮ್ಮ ಸಂಘದ ಸದಸ್ಯೆಯರೆ ಮಾಡಿದರೆ ಹೇಗೆ! ತಾವೆ ತಮ್ಮ ಕೈಯಾರೆ ನಿರ್ಮೂಲನಾ ಕಾರ್ಯನ ಉದ್ಘಾಟಿಸಿದರೆ ಹೇಗೆ! ಅದರ ಮಾಲಕರ ಅನುಮತಿ ಪಡೆಯುವುದೊ, ಪಡೆಯದೆ ಇರುವುದೊ! ಅದಕ್ಕೆ ಇರುವ ಕಾನೂನು ತೊಡಕುಗಳೇನು! ಓಹ್ ಕಾನೂನು ಕಲಮುಗಳನ್ನು ಅಧ್ಯಯನ ಮಾಡಿರುವ ತಮಗೆ ಗೊತ್ತಿಲ್ಲದ್ದೇನುಂಟು!

‘ಮಹಿಳೆಯರೆ ಅರ್ಧ ತಾಸಲ್ಲಿ ಅದನ್ನು ಸರ್ವ ನಾಶ ಮಾಡಿರಿ’ ಎಂದು ಫತ್ವಾ ಹೊರಡಿಸಿದರು. ಅಲ್ಲದೆ ಬಾಯಿ ಕೈಯಲ್ಲಿದ್ದ ಹಾರೆ ಝಳಪಿಸಿದರು. ‘ಹರ ಹರ ಮಹಾದೇವ’ ಎಂದು ಶಿವನನ್ನೂ, ‘ಭಾರತ್ ಮಾತಾ ಕಿ ಜೈ’ ಎಂದು ಭಾರತಾಂಬೆಯನ್ನೂ ಘೋಷಿಸಿದರು. ಅದನ್ನೆಲ್ಲರು ಪ್ರತಿಧ್ವನಿಸಿದರು.

ತನ್ನ ಕಡೆ ನಿಗಾ ಇರಿಸಿದ್ದ ಕೆಮೆರಾ ಕಡೆ ಒಮ್ಮೆ ದೃಷ್ಟಿ ಹಾಯಿಸಿ ಕೈಯಲ್ಲಿದ್ದ ಹಾರೆಯನ್ನು ಅಪ್ಪಳಿಸಿದರು. ಅದಕ್ಕೆಂದೆ ಕೆಮೆರಾನ ರೆಡಿ ಇಟ್ಟುಕೊಂಡು ಅದರ ಒಂದು ಲೆನ್ಸಲ್ಲಿ ತನ್ನೊಂದು ಕಣ್ಣಿರಿಸಿದ್ದ ಸಿದ್ದೇಶಿ “ಸ್ಮಾಯಿಲ್ ಅಕ್ಕಾ ಸ್ಮಾಯಿಲ್” ಎನ್ನುತ್ತ ಕ್ಲಿಕ್ಕೆನ್ನಿಸಿದ, ಅವೆರಡೂ ಏಕಕಾಲದಲ್ಲಿ ಘಟಿಸಿದವು.

ಆಕೆಯ ನೋಟಕ್ಕೆ ಮೊದಲೆ ದುರ್ಬಲವಿದ್ದ ಗೋಡೆಯಲ್ಲಿ ಭೂ ಮಧ್ಯೆ ರೇಖೆಗಳು ಕಾಣಿಸಿಕೊಡಿದ್ದವು ಆ ಕ್ಷಣದ ಆ ಸನ್ನಿವೇಶವನ್ನು ಸಮಸ್ತ ಊರು ಅಲ್ಲಲ್ಲಿಂದ ಕೇಳಿಸಿಕೊಂಡಿತ್ತು. ತಮ್ಮೂರಲ್ಲೆಲ್ಲೋ ಭೀಕರ ಮಾರಣ ಹೋಮ ನಡೆಯುತ್ತಿರುವುದೆಂದೇ ಭಾವಿಸಿತು. ಕ್ಷಣಗಳುರುಳುವಷ್ಟರಲ್ಲಿ ಅಲ್ಲೆಲ್ಲಿಂದಲೋ ಓರ್ವ ದಢೂತಿ ಆಸಾಮಿ ‘ಅಲಲಾ’ ಎಂದು ನುಗ್ಗಿ ಬಂದು ಪ್ರತಿಭಟನೆ ಆರಂಭಿಸಿದ. ಅವರ ನಡುವೆ ವಾಗ್ವಾದ ಆರಂಭವಾಯಿತು ನಾಲ್ವರೈದು ಮಂದಿ ಮಹಿಳೆಯರು (ಕರೆಯದೆ ತಮ್ಮ ಬಳಗವನು) ಒಗ್ಗೂಡಿ ಕವ್ವ ಕವ್ವ ಆರಂಭಿಸಿದ ವಾಗ್ದಾಳಿಗೆ ಮಾಲಕ ಚಿತ್ ಆದನು. ಅದೊಂದು ಕರುಣಾಜನಕ ದೃಶ್ಯಾವಳಿಯೆ!

ತನ್ನ ವೃತ್ರಿ ಜೀವನದಲ್ಲಿ ಹೇಮಾಹೇಮಿ ಪೈಲ್ವಾನರಿಂದ ಚಿತ್ ಆಗದ ತನ್ನನ್ನು ಈ ಸಸ್ಯಾಹಾರಿ ಯಕಃಶ್ಚಿತ್ ಮಹಿಳೆಯರು ಹರಿತ ಮಾತುಗಳಿಂದ ತನ್ನನ್ನು ಚಿತ್ ಮಾಡಿದರಲ್ಲ! ಈ ಅವಮಾನ ಸಹಿಸಿ ತಾನು ಬದುಕಿದ್ದೇನು ಸಾರ್ಥಕ! ಆ ಸನ್ನಿವೇಶ ರಸಭರಿತವಾಗಿತ್ತು. ಪೈಲ್ವಾನ್ ಬಾಬಣ್ಣನೇ ಅದರ ಒಡೆಯ. ‘ಕರ್ನಾಟಕ ಕೇಸರಿ’ ಬಿರುದು ಧರಿಸಿದ್ದ. ಆ ಕಾಲದಲ್ಲೆ ಬಹುಮಾನ ರೂಪದಲ್ಲಿ ಬಂದಿದ್ದ ಐದು ನೂರು ರೂಪಾಯಿ ವ್ಯಯಿಸಿ ಆ ಚೈತ್ಯಾಲಯ ನಿರ್ಮಿಸಿಕೊಂಡಿದ್ದ, ಅದೂ ತನ್ನದಲ್ಲದ ಜಾಗದಲ್ಲಿ! ಸಾಣೇರ ಓಣಿಯಲ್ಲಿದ್ದ ಪುರಾತನ ಕಾಲದ ಗರಡಿ ಮನೆಯನ್ನು ಸ್ವಂತ ಹಣದಲ್ಲಿ ಅಭಿವೃದ್ದಿಪಡಿಸಿದ್ದ. ಅದರಲ್ಲಿ ಏಳೆಂಟು ಹುಡುಗರು ಅಧಿಕೃತ ಕುಸ್ತಿ ಕಲಿಯುತ್ತಿದ್ದರು, ಹತ್ತಾರು ಹುಡುಗರು ಅನಧಿಕೃತವಾಗಿ ದೈಹಿಕ ಕಸರತ್ತು ಮಾಡಿ ಮೈಗಳನ ಬೆಳೆಸಿಕೊಂಡಿದ್ದರು. ಜೀವನೋಪಾಯಕ್ಕೆ ಬಿಕ್ಕಿಮರಡಿ ದುರುಗಮ್ಮನ ಗುಡಿ ಅಂದರೆ ಕೆರೆ ಆಚೆ ಒಂದೆರಡು ಎಕರೆ ಹೊಲ ಇತ್ತು ಅಂದರೆ ಇತ್ತು, ಇಲ್ಲವೆಂದರೆ ಇಲ್ಲ. ಪೈಲ್ವಾನರದ್ಯಾವಾಗಲೋ ಒಂದ ಸಿದ್ಧಾಂತ, ಜಿಸ್ ಕಿ ಲಾಠಿ ಉಸ್ ಕಿ ಬೈಸ್’!

ಪೈಲ್ವಾನರು ಬದುಕುವ ಕಷ್ಟ ದೇವರಿಗೇ ಗೊತ್ತು ಎನ್ನುವುದಕ್ಕೆ ತಾನೆ ಜ್ವಲಂತ ನಿದರ್ಶನ. ವಾರಕ್ಕೆರಡು ಸಲ ಮಾಂಸ, ದಿನಕ್ಕೆರಡು ಮೂರು ಮೊಟ್ಟೆ, ಡೈಲಿ ಊಟಕ್ಕೆ ಅರಪಾವು ತುಪ್ಪ, ಗಿರ್ಧಪಾವು ಬೆಣ್ಣೆ ಅಂದರೆ ಸಾಮಾನ್ಯ ಸಂಗತಿಯೆ! ಅವಕ್ಕೆಲ್ಲ ಹಣ ಬೇಡವೆ! ಕೂಲಿ ಸಂಪಾದನೆಯಲ್ಲಿ ಪಾಲು ಕೇಳಿದರೆ ಹೆಂಡತಿ “ನಿನ್ನನ್ಯಾವೋನು ಪೈಲ್ವಾನಾಗು ಅಂದ! ಮೈಬೆಳೆಸಿಕೊಂಡಿದ್ದಿ ಅನುಭೋಸು, ಹಮಾಲಿ ಮಾಡಿ ನಾಕ್ಕಾಸು ಸಂಪಾಸು, ನಿನ್ನ ರೊಕ್ಕನ ನೀನೇ ತಿನ್ನು, ಬ್ಯಾಡನ್ನೊರ‍್ಯಾರು” ಎಂದು ಒಂದೆರಡು ಮಾತು ಕೊಸರಿ ಹೇಳುತ್ತಿದ್ದಳು, ಆತನ ಸಪ್ಪನೆ ಮುಖಕ್ಕೆ ಕರಗಿ ಒಂದೆರಡು ರೂಪಾಯಿಗಳನ ಗಂಡನ ಕೈಯಲ್ಲಿರಿಸುತ್ತಿದ್ದಳು.

ಮಕ್ಕಳು ಸೊಸ್ತೆರು ಮೊಮ್ಮಕ್ಕಳುಗಳಿಂದ ಪೈಲ್ವಾನನ ಮನೆ ತುಂಬಿ ತುಳುಕಾಡುತ್ತಿತ್ತು. ಎಲ್ಲರ ಮನೆಗಳಲ್ಲಿ ತೂತುಗಳಿದ್ದಂತೆ ತನ್ನ ಮನೆಯಲ್ಲು ತೂತುಗಳಿದ್ದವು. ಆದರೆ ಪೈಲ್ವಾನ ಬಾಬಣ್ಣ ಊರಲ್ಲಿ ತಕ್ಕ ಮಟ್ಟಿಗೆ ಭಯವಿರಿಸಿಕೊಂಡಿದ್ದ,  ಕೆಲವು ರಾಜಕಾರಣಿಗಳ ವಿಶ್ವಾಸಕ್ಕೆ ಪಾತ್ರನಾಗಿದ್ದ. ಇತ್ತ ಛೇರ್ಮನ್ ಗಂಗಣ್ಣನ ಅಂಗರಕ್ಷಕನಾಗಿದ್ದಂತೆ ಅತ್ತ ಎಮ್ಮೆಲ್ಲೆ ರಾಮಣ್ಣನ ಅಂಗರಕ್ಷಕ ಸಹ ಆಗಿದ್ದ. ಊರಲ್ಲಿ ಚಿಕ್ಕಪುಟ್ಟ ಕಲಹಗಳನ್ನು ತಗಾದೆಗಳನ್ನು ಬಗೆ ಹರಿಸಿ ಕಮಿಷನ್ ಪಡೆಯುತ್ತಿದ್ದ. ಸಾಲ ಬಡ್ಡಿ ವಸೂಲಿ ಮಾಡುವುದರಲ್ಲಿ ಎತ್ತಿದ ಕೈ ಅನ್ನಿಸಿಕೊಂಡಿದ್ದ. ಪ್ರತಿ ವಸೂಲಿಗೆ ಹತ್ತಿಪ್ಪತ್ತು ರೂಪಾಯಿಗಳನ್ನು ಭಕ್ಷೀಸು ರೂಪದಲ್ಲಿ ಪಡೆಯುತ್ತಿದ್ದ. ಆ ಸಂಪಾದನೆಯಲ್ಲಿ ತನ್ನ ಗರಡಿ ಮನೆ ಹುಡುಗರಿಗೆ ಹೊಟ್ಟೆ ತುಂಬ ಟಿಫಿನ್ ಮಾಡಿಸುತ್ತಿದ್ದ. ಇಂಥ ಚಿಲ್ಲರೆ ಕೆಲಸಗಳಿಂದ ಊರಲ್ಲಿ ಡಾನ್ ಅನ್ನಿಸಿಕೊಳ್ಳಲು ಏನೆಲ್ಲ ಪ್ರಯತ್ನ ನಡೆಸಿದ್ದ.

ಇನ್ನು ಆ ಉಸ್ತಾದನ ಗರಡಿಯಲ್ಲಿ ಮೈಮುರಿಯುತ್ತಿದ್ದ ಹುಡುಗರೋ ಶುದ್ದ ಪಟಿಂಗರೆಂದೇ ಕುಖ್ಯಾತರಾಗಿದ್ದರು. ಬಡವರಿದ್ದ ಅವರಿಗು ಮಟನ್ ಚಿಕನ್ ಬೇಕಲ್ಲವೆ! ಪಾಡಾ ಖರ್ಚಿಗೆ ಒಂದೆರಡು ರೂಪಾಯಿಗಳು ಬೇಕಲ್ಲವೆ! “ನನ್ನ ಹೆಸರೇಳಿ ವಸೂಲ್ ಮಾಡ್ಕಳ್ಳಿ” ಎಂದು ಪರವಾನಿಗಿ ನೀಡಿದ್ದ. ಹೈಕಳು “ನಾವು ಅಣ್ಣನ ಕಡ್ಯೋರು” ಎಂದು ಗತ್ತು ಹಾಕಿ ಅಂಗಡಿಗಳ ಮಾಲಕರಿಂದ ಐದೋ ಹತ್ತೋ ಹಫ್ತಾ ವಸೂಲಿ ಮಾಡಿ ದುಂಡು ದುಂಡಗೆ ಇದ್ದರು. ಟೈಮು ಬಂದಾಗ ಹಫ್ತಾ ಕೊಟ್ಟವರಿಗೆ ಸಣ್ಣಪುಟ್ಟ ಸಾಯ ಸಹ ಮಾಡಿ ರಿಣ ಮುಕ್ತರಾಗುತ್ತಿದ್ದರು. ‘ನೀನೆನಗಿದ್ದರೆ ನಾನಿನಗೆ’ ಈ ಸಹಕಾರ ತತ್ವ ಆಧರಿಸಿ ಅವರ ದೈನಂದಿನ ಜೀವನ ಸಾಗಿತ್ತು.

ಇಂಥ ಶ್ರೀಮಂತ ಹಿನ್ನಲೆಯುಳ್ಳ ಉಸ್ತಾದೋಂಕಿ ಉಸ್ತಾದ್ ಪೈಲ್ವಾನ್ ಬಾಬಣ್ಣ ಲ್ಯಾಟರಿನ್ನನ್ನು ತನ್ನ ಎರಡನೆ ಹೆಂಡತಿ ಎಂದೇ ಭಾವಿಸಿದ್ದ. ಜೊತೆಗೆ ಅದಕ್ಕೆ ಹನುಮಾನ್ ಗರಡಿ ಸ್ಥಾನಮಾನ ನೀಡಿದ್ದ, ತನ್ನ ಸಂಪಾದನೆಯ ಕಿಂಚಿತ್ ಭಾಗವನ್ನು ಲ್ಯಾಟರಿನ್ನಿನ ಅಂತಃಪುರ ನವೀಕರಣಕ್ಕೆ ಮೀಸಲಿರಿಸಿದ್ದ. ಅದರಲ್ಲಿ ರಾಜರೋಷವಾಗಿ ಲ್ಯಾಟರಿನ್ನು ಮಾಡುವುದು ತನ್ನ ಪ್ರಿಸ್ಟೀಜ್ ಎಂದೇ ಭಾವಿಸಿದ್ದ. ತಾನೊಂದೆ ಅಲ್ಲದೆ ಗರಡಿ ಪುಡಿ ರೌಡಿಗಳು ಎಲ್ಲೆಲ್ಲಿಂದಲೋ ರಾಜಠೀವಿಯಿಂದ ಆಗಮಿಸಿ ಡಿಗ್ನಿಫೈಡಾಗಿ ಅದರಲ್ಲಿ ಸುರುವಿ ಅಷ್ಟೇ ಡಿಗ್ನಿಫೈಡಾಗಿ ಮರಳುತ್ತಿದ್ದುದು ದೈನಂದಿನ ದೃಶ್ಯಾವಳಿಯಾಗಿತ್ತು.

ಅಂಥ ಸ್ವಯಾರ್ಜಿತ ಆಸ್ತಿಯನ್ನು ಒಕ್ಕಲೆಬ್ಬಿಸುವ ಯತ್ನ ಪ್ರಯತ್ನಗಳು ಕಾಲಾನುಕಾಲಕ್ಕೆ ನಡೆದಿದ್ದವು, ಅಂಥ ಲ್ಯಾಟರಿನ್ನು ವಿರೋಧಿ ಬಂಡುಕೋರರನ್ನು “ಕಾಲ್ಮುರಿತೀನಿ, ಕೈಮುರೀತೀನಿ” ಎಂದು ಹೆದರಿಸಿ ಓಡಿಸಿದ್ದರು. ಒಂದೆರಡು ಹಲ್ಲೆ ಪ್ರಕರಣಗಳು ನಡೆದಿದ್ದ ಕಾರಣಕ್ಕೆ ಯಾರು ಸಹ ಬಾಬಣ್ಣನ ಲ್ಯಾಟರಿನ್ನು ಕಡೆ ಕಣ್ಣೆತ್ತಿ ನೋಡುತ್ತಿರಲಿಲ್ಲ. ನಲವತ್ತೆರಡು ಇಂಚು ಎದೆ ಇದ್ದವರು ಸಹ ಆ ವಿಸರ್ಜನಾ ಕೇಂದ್ರದ ತಂಟೆಗೆ ಹೋಗುತ್ತಿರಲಿಲ್ಲ. ನೋಡಿದರೆಲ್ಲಿ ಅಸ್ವಸ್ಥರಾಗುವೆವೊ ಎಂದು ಹೆದರಿ ಯಾರು ಸಹ ಅದರ ಕಡೆ ಕಣ್ಣು ಹಾಯಿಸುತ್ತಿರಲಿಲ್ಲ, ಒಂದಿಂಚು ವಾಸಣೆ ಮೂಗು ಪ್ರವೇಶಿಸಿದರೆಲ್ಲಿ ತಾವು ಉಂಡಿರುವುದನ್ನು ವಾಂತಿ ಮಾಡಿಕೊಳ್ಳುವೆವೊ ಎಂದು ಅಂಜಿ ಪ್ರಾಣಾಯಾಮ ಮಾಡುವುದನ್ನು ರೂಢಿಸಿಕೊಂಡಿದ್ದರು. ಹೀಗಾಗಿ ಅದು ಅಜೇಯವಾಗಿ ಉಳಿದಿತ್ತು.

ಈ ಎಲ್ಲಾ ಪುರಾಣ ಪ್ರವಚನವನ್ನು ಸ್ಥಳೀಯನಾದ ನಾನು ತಿಳಿದಿದ್ದೆ. ಲ್ಯಾಟರಿನ್ನು ವಿರೋಧಿ ಮನಸ್ಸು ಈ ವಿದ್ಯಮಾನಗಳನ್ನು ಗ್ರಹಿಸುತ್ತಿತ್ತು. ಎಷ್ಟೋ ಸಲ ನಾನು ಸಹ ಸದರಿ ಬಾಬಣ್ಣನ ಲ್ಯಾಟರಿನ್ನು ಬಳಿ ಸುಳಿದಾಡಿ ಅಸಹ್ಯಿಸಿಕೊಂಡಿದ್ದೆ. ಆದರೆ ಪರಸ್ಥಳದವರಿದ್ದ ಮೇಡಂ ಅವರಿಗೆ ಲ್ಯಾಟರಿನ್ನು ಭಾಗೋತ ತಿಳಿದಿರಲಿಲ್ಲ. ಇಂಥ ಅಸಹ್ಯಕರ ವಿಸರ್ಜನಾ ವ್ಯವಸ್ಥೆ ಸಾಮಾಜಿಕವಾಗಿ ಇರುವುದು ಎಂಬ ಕನಿಷ್ಟ ಮಾಹಿತಿ ಸಹ ಆಕೆಗೆ ತಿಳಿದಿರಲಿಲ್ಲ.

ಆ ಅಸಹ್ಯಕರ ವ್ಯವಸ್ಥೆ ಕುರಿತು ನಾನು ವಿವರಿಸದಿದ್ದಲ್ಲಿ, ‘ಇದೇ ನೋಡಿ’ ಅದು ಕೈಚಾಚಿ ತೋರಿಸದಿದ್ದಲ್ಲಿ, ರಾಶಿ ರಾಶಿ ವಿಸರ್ಜಿತ ಮಲದ ದರ್ಶನ ಖುದ್ದ ಮಾಡಿಸದಿದ್ದಲ್ಲಿ, (ತಮ್ಮ ಮಲವನ್ನು ತಾವೇ ನೋಡಿಕೊಂಡವರಲ್ಲ ನಮ್ಮ ಮೇಡಂ) ಮಲದಲ್ಲಿ ಮಜ್ಜಣ ಮಾಡುತ್ತಿದ್ದ ಶುನಕಗಳ ದರ್ಶನವಾಗದಿದ್ದಲ್ಲಿ ಮಹಾ ಮಾತೆ ಖಂಡಿತ ವಾಂತಿ ಮಾಡಿಕೊಳ್ಳುತ್ತಿರಲಿಲ್ಲ. ‘ನಾಶ ಮಾಡಿರಿ’ ಎಂದು ಸಿಂಹ ಗರ್ಜನೆ ಮಾಡುತ್ತಿರಲಿಲ್ಲ. ಅದರ ಮಾಲಕ ಬಾಬಣ್ಣ ‘ರೌಡಿಲಕು ರೌಡಿ’ ಎಂದು ಮೊದಲೆ ತಿಳಿದಿದ್ದರೆ ಅವರು ಅದರ ಮೇಲೆ ಗಧಾ ಪ್ರಹಾರ ಖಂಡಿತ ಮಾಡುತ್ತಿರಲಿಲ್ಲವೇನೊ! ನಾಲ್ಕಾರು ಮೃದುವಚನದ ಮೂಲಕ ಸಮಸ್ಯೆ ಪರಿಹರಿಸುತ್ತಿದ್ದರೇನೊ!

ಅದೇನೆ ಇರಲಿ, ಎಂದೋ ನಡೆಯಬೇಕಿದ್ದ ಕ್ರಾಂತಿಕಾರಿ ಘಟನೆ ಇಂದು ಯಶಸ್ವಿಯಾಗಿ ಸಂಭವಿಸಿತು. ಅದರ ಮಾಲಕನೆಂಬ ಬೆದರುಬೊಂಬೆ ತಿಕದಲ್ಲಿ ಬಾಲ ಇರಿಸಿಕೊಂಡು ಅಸಹಾಯಕತೆಯಿಂದ ನಲುಗಿತು. ಅದರ ಸಾಮಾಜಿಕ ಹುಸಿ ಪ್ರತಿಷ್ಠೆ ಮಣ್ಣುಗೂಡಿತು. ಅದೇನೆ ಇರಲಿ, ಕೆಲವೇ ನಿಮಿಷಗಳಲ್ಲಿ ಐತಿಹಾಸಿಕ ಮತ್ತು ಭಯೋತ್ಪಾದನಾ ನೆಲೆ ಸರಿಸಮನಿದ್ದ ಲ್ಯಾಟರಿನ್ನು ನೆಲಸಮವಾಯಿತು. ಅದನ್ನು ಅವರು ಆರಂಭಿಸಿ ಇವರು ಮುಕ್ತಾಯಗೊಳಿಸಿದರು. ಪ್ರತಿ ಸನ್ನಿವೇಶವನ್ನು ಸಿದ್ದೇಶಿ ಚಾಕಚಕ್ಯತೆಯಿಂದ ಕೆಮೆರಾದಲ್ಲಿ ದಾಖಲಿಸಿಕೊಂಡ.

ಅದುವರೆಗೆ ಎಲ್ಲೆಲ್ಲೋ ಇದ್ದ ಪ್ರಜಾನಿಕ ಅಲ್ಲೆಲ್ಲಿಂದ ಆಗಮಿಸಿ ಅದರ ಭಗ್ನಾವಶೇಷಗಳನ್ನು ಕಣ್ಣನಲ್ಲಿ ತುಂಬಿಕೊಂಡಿತು. ಎಲ್ಲರು ಬಿಡುತ್ತಿದ್ದ ಸಮಾಧಾನದ ಉಸಿರನ್ನು ಎಲ್ಲರು ಕೇಳಿಸಿಕೊಳ್ಳುತ್ತಿದ್ದರು. ಕಸ್ತೂರಿ ಬಾ ಒಂದು ಕೋನದಿಂದ ನೋಡಿದವರ ಕಣ್ಣಿಗೆ ಮೇಡಂ ಕಿತ್ತೂರು ರಾಣಿ ಚೆನ್ಮಮ್ಮನಂತೆಯೂ, ಇನ್ನೊಂದು ಕೋನದಿಂದ ನೋಡಿದವರಿಗೆ ಝಾನ್ಸಿ ಕಿ ರಾಣಿಯಂತೆಯೂ, ಮತ್ತೊಂದು ಕೋನದಿಂದ ನೋಡಿದವರೆಗೆ ಒನಕೆ ಓಬವ್ವನಂತೆಯೂ ಗೋಚರಿಸಿದರು.  ಅವರಲ್ಲೊಂದು ವೃದ್ದೆ ‘ಹಾ ಹಾ ಎಂಥ ಘನಂಧಾರಿ ಕೆಲಸ ಮಾಡಿರುವಿ ತಾಯಿ, ನೀನು ಸಾಮಾನ್ಯಳಲ್ಲ, ಸಾಕ್ಷಾತ್ ಚಾಮುಂಡೇಶ್ವರಿ’ ಎಂದು ನುಡಿಯಿತಲ್ಲದೆ ಆಕೆಯತ್ತ ಕೈ ಜೋಡಿಸಿತು.

ಇಂಥ ಕುಖ್ಯಾತ ಲ್ಯಾಟರಿನ್ ಭವನವನ್ನು ಮಣ್ಣುಪಾಲು ಮಾಡಿದ್ದು ಅಸಾಮಾನ್ಯ ಸಂಗತಿಯೆ! ಗಂಡಸರೇನಾದರು ಅದರ ತಂಟೆಗೆ ಹೋಗಿದ್ದರೆ ಅದರ ಕಥೆ ಬೇರೆಯೇ ಇರುತ್ತಿತ್ತು. ಎಷ್ಟು ಜನ ಅಂಗವಿಕಲರಾಗುತ್ತಿದ್ದರೋ, ಎಷ್ಟು ಜನ ಹುತಾತ್ಮರಾಗುತ್ತಿದ್ದರೊ! ಪರಸ್ಪರ ಎಷ್ಟು ಎಫ್‌ಐಆರ್ ದಾಖಲಾಗುತ್ತಿದ್ದವೊ!

ಆದರೆ ಐದು ವರ್ಷದ ಹಿಂದಿನ ಬಾಬಣ್ಣ ಬೇರೆ, ಪ್ರಸ್ತುತ ಸಂದರ್ಭದ ಬಾಬಣ್ಣನೇ ಬೇರೆ. ಆಗ ಇದ್ದ ಮಾಂಸಖಂಡಗಳು ಈಗ ಇಲ್ಲ. ಈಗಿರುವವು ಡೀಲ ಬಿದ್ದು ಸೈಲ ಆಗಿರುವ ಮಾಂಸ ಖಂಡಗಳೆ! ಅಲ್ಲದೆ ಮೊದಲಿನಂತೆ ತನ್ನ ಶರೀರದಲ್ಲಿ ಕಸುವು ನೆಣ ಇಲ್ಲ. ‘ಏಕ್‌ಮಾರ್ ದೋ ತುಕುಡಾ’ ಅಂತ ಮಾತಾಡುವಂತಿಲ್ಲ, ‘ಜೈಭಜರಂಗಬಲಿ’ ಅಂತ ವಿರೋಧಿಗಳ ಮೇಲೆ ಬೀಳುವಂತಿಲ್ಲ.

“ಎಲವೋ ಪೈಲ್ವಾನನೇ, ಹಣೆಯಲ್ಲಿ ನೀನು ಪಟ್ಟಣ ಪಂಚಾತಿ ಅಧ್ಯಕ್ಷನಾಗಬೇಕೆಂದು ಬರೆದಿದೆ. ಅಲ್ಲಿವರೆಗೆ ಸಂಯಮ ಪಾಲಿಸು, ಅನವಶ್ಯಕ ಮರ್ಯಾದೆ ಕಳಕಬೇಡ. ಆದರೆ ಲ್ಯಾಟರಿನ್ನು ಅಂದರೆ ನೀನು, ನೀನೆಂದರೆ ಲ್ಯಾಟರಿನ್ನು, ನಿನ್ನ ಭವಿಷ್ಯ ಅಡಗಿರುವುದು ಆ ನಿನ್ನ ಸ್ವಯಾರ್ಜಿತ ಲ್ಯಾಟರಿನಲ್ಲಿ. ಅದು ಎಲ್ಲಿವರೆಗೆ ಅಸ್ತಿತ್ವದಲ್ಲಿರುತ್ತದೊ, ಅಲ್ಲಿವರೆಗೆ ಸಾಮಾಜಿಕವಾಗಿ ನಿನ್ನ ಅಸ್ತಿತ್ವವಿರುತ್ತದೆ, ಅದು ಮಣ್ಣುಪಾಲಾದ ಮರುಕ್ಷಣ ನಿನ್ನ ಅಸ್ತಿತ್ವ ಸಹ ನಾಶವಾಗುತ್ತದೆ. ಹುಷಾರಿರು”

ಈ ಹಿತನುಡಿಗಳನ್ನು ನುಡಿದದ್ದು ಯಾರೋ ಹಾದಿಹೋಕರಲ್ಲ, ಸಾಕ್ಷಾತ್ ಶ್ರೀಶ್ರೀ ಶೌಚಾನಂದ ಭಗವತ್ಪಾದರು. ಹಾ ಅಂದಹಾಗೆ ಅವರಿಗೆ ನಿರ್ಧಿಷ್ಟ ಪೀಠವಿಲ್ಲ. ಅವರು ನಿತ್ಯ ಸಂಚಾರಿಗಳು. ರಾಜ್ಯದ ಸಮಸ್ತ ಖಾಸಗಿ ಲ್ಯಾಟರಿನ್ನುಗಳ ಧಾರ್ಮಿಕ ಪ್ರತಿನಿಧಿಗಳವರು. ಅವರು ಪೂರ್ವಾಶ್ರಮದಲ್ಲೇನಾಗಿದ್ದರು! ಅಂಥ ಅಲ್ಲೆಲ್ಲೋ ಇದ್ದ ಅವರನ್ನು ಹಿಡಕೊಂಡು ಬಂದು ಶೌಚೇಶ್ವರ ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಯಾರು! ಶೌಚಾಲಯಗಳ ಕಲ್ಯಾಣಾರ್ಥ ಊರಿಂದ ಊರಿಗೆ ಅಲೆಯುತ್ತಿರುವ ಅವರಿಗೆ ಪಾಡಾ ಖರ್ಚಿಗೆ ಹಣ ಕೊಡುವ ದಾರ‍್ಯಾರು! ಇಂಥ ಹಲವು ಪ್ರಶ್ನೆಗಳಿಗೆ ಇವತ್ತಿಗು ಉತ್ತರವಿಲ್ಲ.

ಶೌಚಶ್ರೀಗಳು ಆಲಾಫ್‌ ದಿ ಸಡನ್ ಊರಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಅನುಯಾಯಿಗಳು “ಬುದ್ದಿ ನಮ್ಮ ಲ್ಯಾಟರಿನ್‌ನಲ್ಲಿ ಮಾಡಿರಿ, ನಮ್ಮ ಲ್ಯಾಟರಿನ್ನಲ್ಲಿ ಮಾಡಿರಿ” ಎಂದು ಕಾಡುತ್ತಾರೆ ಬೇಡುತ್ತಾರೆ. ಕಾರಣ ಅವರು ಕಲ್ಮಷ ವಿಸರ್ಜನೆಗೆ ಊರಲ್ಲಿನ ಯಾವ ಲ್ಯಾಟರಿನ್ನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಆ ಲ್ಯಾಟರಿನ್ ಮಾಲಕನ ಮನೆಯಲ್ಲಿ ಚಿನ್ನದ ಹೊಗೆಯಾಡುವುದು,. ಅವರು ನುಡಿವ ಕಾರಣಿಕ ನಿಜವಾಗುವುದು ಎಂಬ ಪ್ರತೀತಿ ಉಂಟು. ಕಾಕತಾಳೀಯವೆಂಬಂತೆ ನೂರರಲ್ಲಿ ಒಂದೆರಡು ನಿಜವಾಗಿರುವುದುಂಟು. ಆದ್ದರಿಂದ ನಿಷ್ಠಾವಂತ ಅನುಯಾಯಿಗಳು ಪ್ರತಿಕ್ಷಣ ಅವರ ಆಗಮನದ ನಿರೀಕ್ಷೆಯಲ್ಲಿರುವುದು ಮಾಮೂಲು.

ಇನ್ನೊಂದು ಉಲ್ಲೇಖಾರ್ಹ ಸಂಗತಿ ಅಂದರೆ ಶ್ರೀಗಳು ಕೊಟ್ಟೂರಲ್ಲಿ ಲ್ಯಾಂಡಾದ ತಕ್ಷಣ ನೆನೆಸಿಕೊಳ್ಳುವುದು ಬಾಬಣ್ಣನನ್ನು, ಮತ್ತು ಆತನ ಅಭೂತ ಲ್ಯಾಟರಿನ್ನನ್ನು! ಅಂಥ ಶ್ರೀಗಳು ತನ್ನ ಭವಿಷ್ಯ ಕುರಿತು ನುಡಿದಿರುವ ಕಾರಣಿಕ ಅದು.

ಬಾಬಣ್ಣ ಶ್ರೀಗಳ ಭವಿಷ್ಯವಾಣಿ ನೆನೆದು ದುಃಖತಪ್ತನಾದ. ಶ್ರೀಗಳ ಕರುಣಾಜನಕ ಮುಖಾರವಿಂದವನ್ನು ಕಣ್ಣಲ್ಲಿ ತಂದುಕೊಂಡ, ಅವರ ಭವಿಷ್ಯವಾಣಿಯನ್ನು ನೆನೆಯೂತ ಗದ್ಗಿದಿತನಾದ, ಅವರು ಕಳೆದ ಸಲ ಆಗಮಿಸಿದ್ದಾಗ ಹೇಳಿದ್ದರು, “ಕಂದಾ ನಿನ್ನ ಲ್ಯಾಟರಿನ್ನಿಗೆ ಕುಜ ದೋಷವಿದೆ. ಅದಿಶಕ್ತಿ ಅದರಿಂದ ಅಸಂತುಷ್ಟಳಾಗಿದ್ದಾಳೆ, ಆ ದೇವಿ ಮಾಮೂಲು ಮಹಿಳೆಯಲ್ಲಿ ಕಾಣಿಸಿಕೊಂಡು ಲ್ಯಾಟರಿನ್ನಿನ ಬಾಯಿಗೆ ಮಣ್ಣು ಹಾಕಬಹುದು, ಎಚ್ಚರಿಕೆಯಿಂದಿರು” ಎಂಬ ನುಡಿಯನ್ನೂ, ಅದಕ್ಕೆ ತಾನು. “ಪರಿಹಾರ ಉಂಟೆ ಸ್ವಾಮಿ” ಎಂದು ಕೇಳಿದ್ದಕ್ಕೆ ಶ್ರೀಗಳು, “ಅದಕ್ಕಿರುವ ಏಕೈಕ ಪರಿಹಾರವೆಂದರೆ ಚಂಡಿಕಾ ಹೋಮ ಮಾಡಿಸುವುದು, ಆದರೆ ಅದು ನಿನ್ನ ಸಾಮರ್ಥ್ಯಕ್ಕೆ ಮಿರಿದ್ದು” ಎಂದು ಹೇಳಿದ್ದೆಲ್ಲವನ್ನು ಆ ಕ್ಷಣ ಜ್ಞಾಪಿಸಿಕೊಂಡು ಚಿಕ್ಕ ಮಗುವಿನಂತೆ ದುಃಖಿಸಲಾರಂಭಿಸಿದ.

 “ಅಯ್ಯೋ ನನ್ನ ಕರ್ಮವೆ” ಎಂದು ಮರುಗಿದ. ಎರಡೂವರೆ ನಿಮಿಷಗಳ ಬಳಿಕ ಪುನಃ ಪೂರ್ವಸ್ಥಿತಿಗೆ ಮರಳಿದ. ಒಣ ಪ್ರತಿಷ್ಠೆ ಕ್ರೋಢೀಕರಿಸಲು ಹಾ ಹೂ ಅಂತ ಕೂಗಾಡಿದ. ಅದು ಓಣಿ ತುಂಬೆಲ್ಲ ಪ್ರತಿಧ್ವನಿಸಿತು. ಆ ಶಬ್ದಗಳ ಹೊಡೆತಕ್ಕೆ ಒಂಟಿ ಮಲ್ಲಯ್ಯನ ಮನೆಯ ಗೋಡೆಯಲ್ಲಿ ಬಿರುಕೂ ಕಾಣಿಸಿಕೊಂಡಿತು.

ಅಲ್ಲಿಂದ ಅವರು ಬಂದರೆ, ಇಲ್ಲಿಂದ ಇವರೂ ಬಂದರು. ಅವರೆಲ್ಲರು ದೊಡ್ಡಮನುಷ್ಯರೇ ಆಗಿದ್ದರು. ‘ಏನು ಎತ್ತ’ ಎಂದು ವಿಚಾರಿಸಿದರು. ಎಲ್ಲೆಲ್ಲಿಂದಲೋ ಬಂದ ಚಿದ್ಲಿಂಗ (ಆತನೂ ಒಂದು ಕಾಲದಲ್ಲಿ ಪೈಲ್ವಾನನೆ) ಗೆಳೆಯನ ಹೆಗಲ ಮೇಲೆ ಕೈ ಹಾಕಿ. “ಎಂಥ ಕೆಲಸವಾಯಿತಲ್ಲ ಮಾವಾ, ಸ್ವಾಮೀಜಿ ಈ ನಿನ್ನ ಲ್ಯಾಟರಿನ್ ಮ್ಯಾಲ ಜೀವ ಇಟಕೊಂಡಿದ್ದರಲ್ಲ. ಮುಂದ್ಯಾವತ್ತಾದರು ಅದರೊಳಗೆ ಶೌಚೇಶ್ವರ ಪ್ರೀತ್ಯರ್ಥ ಅನುಷ್ಠಾನ ಕೈಕೊಳ್ಳುವೆ ಎಂದು ಹೇಳಿದ್ದರಲ್ಲ, ಅಂಥ ಹೆಸರಾಂತ ಪೈಲ್ವಾನನ ಲ್ಯಾಟರಿನ್ನನ್ನು ಯರ್ಕಶ್ಚಿತ್ ಹೆಂಗಸು ಮಣ್ಣು ಪಾಲು ಮಾಡಿದಳಲ್ಲ, ನಿನ್ನ ಜಗದಲ್ಲಿ ನಾನಿದ್ದಿದ್ದರೆ ಉರುಲಾಕ್ಕೊಂಡು ಸಾಯುತ್ತಿದ್ದೆ ಮಾವ” ಎಂದು ಗೋಳು ಅಭಿನಯಿಸಿ ಹೋದ.

ಅದುವರೆಗೆ ಅಲ್ಲೆಲ್ಲೊ ನಿಂತು ನೋಡುತ್ತಿದ್ದ ತಿಂದಪ್ಪ ಬಂದು ತನ್ನ ಪ್ರವರ ಆರಂಭಿಸಿದ, ‘‘ಲ್ಯಾಟರಿನ್ನನ ಒಂದ್ಯಾಕ ಎಲ್ಡು ಕಟ್ಟಿಸಿಕೊ, ಬ್ಯಾಡನ್ನೊರ‍್ಯಾರು! ನಿನ್ ರೊಕ್ಕ ನಿನ್ ಮಾತು, ಆದರೆ ಕಿಲೀನಾಗಿಟ್ಟುಕೊಳ್ಳಾಕಪ್ಪಾ. ನೀವೆಲ್ಲರು ಹೇತಿರೋದು ಅಲ್ಲಿಂದ ಇಲ್ಲಿವರೆಗೆ ಹರದೈತೆ, ನೋಡಿದೋರಿಗೆ ಸಿಟ್ಟು ಬರುವುದಿಲ್ಲೇನು!” ಎಂದು ಕೋಪ ಮಿಶ್ರಿತ ಬುದ್ದಿವಾದ ಹೇಳಿದ. ಆತ ಸಹ ವಾಸಣೆ ಕುಡಿದು ರೋಸಿದ್ದ.

ಅದಕ್ಕೆ ಉಸ್ತಾದ ತನ್ನ ಮೂಲವ್ಯಾಧಿ ಸಂಕಟನ ಹೇಳಿಕೊಂಡ. ಗಂಟೆಗೊಮ್ಮೊಮ್ಮೆ ಹೇಲೋದು ತನ್ನ ಅನಿವಾರ್ಯ. ಅದಕ್ಕೆಲ್ಲಿಗೆ ಹೋಗುವುದು! ಮಹಿಳಾ ದಂಗೆಯಲ್ಲಿ ನಷ್ಟವಾಗಿರುವ ತನ್ನ ಸ್ವಯಾರ್ಜಿತ ಆಸ್ತಿಗೆ ಯಾರು ಹೊಣೆ! ಪಂಚಾತಿ ಬೋರ್ಡು ಸೂಕ್ತ ಪರಿಹಾರ ಕೊಡುವುದೇನು! ಈ ಮಹಿಳಾ ಮಣಿಗಳ ವಿರುದ್ದ ಪೋಲಿಸರಿಗೆ ಕಂಪಲೈಂಟು ಕೊಟ್ಟರೆ ಹೇಗೆ! ಅಥವಾ ಕೊರ್ಟಲ್ಲಿ ಸಿವಿಲ್ ಕಂ ಕ್ರಿಮಿನಲ್ ದಾವೆ ಹೂಡಿದರೆ ಹೇಗೆ! ಹೀಗೆಲ್ಲ ಆ ಸಖನ ಜೋಡಿ ಸಂಗಡ ಚರ್ಚಿಸಿದ. ಇನ್ನೇನು ತಾನು ತನ್ನ ಕುಂಡಿ ಕೆಳಗಿದ್ದ ವಲ್ಲೀನ ಝಾಡಿಸಬೇಕೆನ್ನುವಷ್ಟರಲ್ಲಿ!

ಅಲ್ಲೆಲ್ಲಿಂದಲೋ ಇಬ್ಬರು ಮಹಿಳೆಯರು ಬೊಂಬಾಯಿ ಸದೃಶ ಬಾಯಿ ತೆರೆದು,

“ಅಯ್ಯಯ್ಯೋ ನಮಗೆ ಅನ್ನ ಕೊಡುತ್ತಿದ್ದ ಲ್ಯಾಟರಿನ್ನನ್ನು ಕೆಡವಿದರ‍್ಯಾರು! ಉಳುಸುಕೊಂಡಿರೋ ಬಾಕಿ ಇಪ್ಪತ್ರೂಪಾಯಿಗಳ ಕೊಟ್ಟು ಕೆಡವಿದ್ದರೆ ನಮ್ ತಕರಾರಿರುತ್ತಿರಲಿಲ್ಲ, ಕೊನೆತನಕ ನಾವು ಇದೆ ಲ್ಯಾಟರಿನ್ನಲ್ಲಿರತೇವಿ, ಬಾಕಿ ಚುಕ್ತ ಮಾಡಿದರೇನೆ ನಾವಿಲ್ಲಿಂದ ಕದಲೋದು” ಎಂದು ಪಟ್ಟು ಹಿಡಿದು ಆ ರಾಡಿ ನಡುವೆ ಪದ್ಮಾಸನಯುಕ್ತರಾದರು.

ಮಲ ಹೋರುವ ಕಾಯಕ ಯೋಗಿಗಳ ಆಗಮನವನ್ನಾಗಲೀ, ಅವರ ಈ ಹೃದಯವಿದ್ರಾವಕ ಮಾತುಗಳನ್ನಾಗಲಿ, ಅವರು ಕುಳಿತ ಭಂಗಿಯನ್ನಾಗಲೀ ಅಲ್ಲಿದ್ದರ‍್ಯಾರು ಸಹ ನಿರೀಕ್ಷಿಸಿರಲಿಲ್ಲ. ಒಂದು ಕ್ಷಣ ಸರ್ವರು ಸ್ತಂಭೀಭೂತರಾದರು. ಆ ಮಹಿಳೆಯರಿಬ್ಬರು ಕೆಳಗಿಂದ ಮೇಲಿನವರೆಗೆ ಮಲದ ವಾಸಣೆಯನ್ನು ಬೀರುತ್ತಿದ್ದರು.

ಅವರು ಎಂಥವರು ಎಂದು ತಿಳಿಯಿತು ನಿಜ, ಅವರ ಸಮಸ್ಯೆ ಅರ್ಥವಾಯಿತು ನಿಜ, ಆದರೆ ಅವರ ಬಾಕಿ ತೀರಿಸುವರ‍್ಯಾರು! ದೇಶಭಕ್ತ ಮಹಿಳಾ ಮಣಿಗಳೊ! ಅಥವಾ ಆ ಫತೇಪೂರ್ ಸಿಕ್ರಿಯ ಮಾಲಕನಾದ ಬಾಬಣ್ಣನೊ!

ತಿಂದಪ್ಪ ಮಾಲಕನ ಮತ್ತು ಕರ್ಮಚಾರಿ ಮಹಿಳೆಯರ ನಡುವೆ ರಾಜಿ ಕಬೂಲಿ ವ್ಯವಹರಿಸಿದ, ಲ್ಯಾಟರಿನ್ನಿಗೆ ಹತ್ತಿರ ಹೋಗುವ ಕನಿಷ್ಟ ಧೈರ್ಯ ತಾಕತ್ತು ತನಗಿರಲಿಲ್ಲ. ಅಲ್ಲದೆ ಶಕ್ತಿಶಾಲಿ ಧ್ವನಿವರ್ಧಕಕ್ಕಿಂತ ಮಿಗಿಲಿದ್ದ ಧ್ವನಿಪೆಟ್ಟಿಯನ್ನು ಗಂಟಲಲ್ಲಿರಿಸಿಕೊಂಡಿದ್ದ. ನಿಂತಲ್ಲೆ ಧ್ವನಿ ಎತ್ತರಿಸಿ, ದೇವಾನುದೇವತೆಗಳ ಕರ್ಣಕುಂಡಲಗಳಿಗೆ ತಾಕುವಂತೆ! ತಮಗೆ ನಲವತ್ತೆರಡು ರೂಪಾಯಿ ಬಾಕಿ ಎಂದು ಅವರೂ, ಇಲ್ಲ ಮೂವತ್ತೈದೆಂದು ಆತನೂ, “ನಿಮ್ಮ ಮನಿಮಂದಿ ಹೇಲಿನ ಮೇಲೆ ಪ್ರಮಾಣ ಮಾಡಿ ಹೇಳತೀವಿ ಲೆಕ್ಕ ಹಾಕಿದರೆ ಐವತ್ತೊಂದು ರೂಪಾಯಿ ಆಕತೆ” ಎಂದು ಅವರೂ, ‘ಇಲ್ಲ ಸಾಧ್ಯನೆ ಇಲ್ಲ’ ಅಂತ ಆತನೂ, “ಹಂಗಾರೆ ಧಣಿ ನೀನು ನಿನ್ನ ಹೇಲಿನ ಮ್ಯಾಲ ಪ್ರಮಾಣ ಮಾಡು” ಅಂತ ಜಗ್ಗಿಸಿ ಅವರೂ! ವಾಗ್ವಾದ ತಾರಕಕ್ಕೇರಿತು.

ತನ್ನ ಹೇಲಿನ ಮೇಲೆ ತಾನು ಪ್ರಮಾಣ ಮಾಡೋದಂದರೆ ಮಾರಕ ಗುದ ಸಂಬಂಧೀ ವ್ಯಾಧಿಗಳಿಗೆ ತುತ್ತಾಗುವುದೆಂದೇ ಅರ್ಥ, “ಅದೇನು ಮಹಾ ಕೊಟ್ಟು ಕೈತೊಳಕೊ” ಎಂದು ತಿಂದಪ್ಪನೂ! “ಪಯಿಲುವಾನನಾಗಿರಲಿ, ಯಾವೋನಾಗಿರಲಿ, ಬಾಕಿ ಚುಕ್ತ ಮಾಡದೆ ಇದ್ದರೆ ಈ ಹೇಲು ತುಂಬಿರೋ ಡಬ್ಬೀನ ನಿಮ್ಮ ದ್ಯಾವರ ಮನ್ಯಾಗ ಇಡತೀವಿ ಹುಸಾರ್” ಎಂದು ಆ ಅಸ್ಪೃಶ್ಯ ವೀರವನಿತೆಯರೂ!

ಅವರಲ್ಲೊಬ್ಬಳು ಸೈರಣೆ ಕಳಕೊಂಡು, “ಬಾಕಿ ಕೊಡದಿದ್ದರೆ ನಿಮ್ಮ ಹೇಲಿಗೆ ಬೆಂಕಿ ಹಚ್ಚತೀವಿ!” ಎಂದು ಶಪಥಗೈಯುವುದೆ! ಅದಕ್ಕೆ ಅಗ್ನಿತರ್ಪಣ ಮಾಡುವುದೆಂದರೆ ವಾಸಿಯಾಗದ ಮಾರಣಾಂತಿಕ ವ್ಯಾಧಿಗಳಿಗೆ ಆಸ್ಪದ ಮಾಡಿಕೊಟ್ಟಂತೆಯೇ ಲೆಕ್ಕ. ಆದ್ದರಿಂದ ಪಯಿಲುವಾನ ನಖಶಿಖಾಂತ ಕಂಪಿಸಿದ.

ಈ ಸಂವಾದ ದೇಶಭಕ್ತೆಯ ಕಿವಿಗಳನ್ನು ಕಿವುಡಾಗಿಸಿತು. ಅವರು ಇಂಥವರೆ ಎಂದು ಮನವರಿಕೆಯಾದದ್ದು ಆ ಚೌಕಾಸಿ ಮಾತುಕತೆಯಿಂದ. ಅವರ ತರ್ಕ ತಕರಾರು ನ್ಯಾಯ ಸಮ್ಮತವೆನ್ನಿಸಿತು. ಲ್ಯಾಟರಿನ್ನು ಅವರಿಗೆ ಅನ್ನಕೊಡುವ ದೇವರು, ಹೌದೆನ್ನಿಸಿತು.

ದಿವ್ಯಜ್ಞಾನಿಯಾದ ಕಸ್ತೂರಿ ಬಾಯಿ ಕಿಸೆಯಲ್ಲಿ ದಮ್ಮಡಿ ಕಾಸಿಲ್ಲದ ಏಕೈಕ ಉಸ್ತಾದೋಂಕಿ ಉಸ್ತಾದನೆಂದರೆ ಲ್ಯಾಟರಿನ್ನು ಒಡೆಯ ಬಾಬಣ್ಣ ಎಂದು ಅರ್ಥ ಮಾಡಿಕೊಂಡರು. ಎಲ್ಲನು ಅರ್ಥ ಮಾಡಿಕೊಂಡು ಜೀವ ಸ್ರವಿಸಿದರು. ತನ್ನ ವ್ಯಾನಿಟ್ ಬ್ಯಾಗನ ನಿಧಾನವಾಗಿ ತೆರೆದರು, ಅದರಿಂದ ಒಂದೆರಡು ನೋಟುಗಳನ್ನು ಹೊರತೆಗೆದರು,  ಪ್ರೆಸ್ ಫೋಟೋಗ್ರಾಫರ್ ಸಿದ್ದೇಶ್‌ನ ಕಡೆಗೆ ಕಣ್ಸನ್ನೆ ಮಾಡಿದರು. ಕಣ್ಸನ್ನೆ ಮೂಲಕ ಸಾಂದರ್ಭಿಕ ಸಲಹೆ ನೀಡಿದ ಸಂಬುನ ಕಡೆ ಅಭಿಮಾನದಿಂದ ನೋಡಿದರು. ಮೆಲ್ಲಗೆ ಹೋಗಿ ಕೊಚ್ಚೆಯಲ್ಲಿ ಹಠಯೋಗಿಗಳಂತೆ ಕುಳಿತ್ತಿದ್ದ ಆ ಮಹಿಳೆಯರ ಬೊಗಸೆಯಲ್ಲಿ ಆ ನೋಟುಗಳನ್ನು ಹಾಕಿದರು. ಅದಕ್ಕೆ ಅವರು “ನಮ್ಮ ಸೌಚಮ್ಮ ದ್ಯಾವತೆಯ ಒಂದು ಕಣ್ಣು ನಿಮ್ಮ ಮಕ್ಕಳು ಮರಿಗಳ ಮ್ಯಾಲಿರಲಿ ತಾಯಿ” ಎಂದು ಹರಸಿದರು.

ಬಾಬಣ್ಣ ಆ ಸನ್ನಿವೇಶದಿಂದ ಜರ್ಜರಿತನಾಗಿ ಹಿಮ್ಮುಖ ಹೆಜ್ಜೆಗಳನ್ನು ಒಂದೊಂದಾಗಿ ಇಡುತ್ತ ಅಲ್ಲಿಂದ ನಿಷ್ಕ್ರಮಿಸಿ ಕಣ್ಮರೆಯಾದ. ನೆರೆದಿದ್ದ ಜನಾನಿಕ ಏಕಕಾಲಕ್ಕೆ ಬಿಟ್ಟ ನಿಟ್ಟುಸಿರು ಸುಂಟರಗಾಳಿ ರೂಪ ತಳೆದು ಸಂಚರಿಸಿತು.

ಎಲ್ಲಾ ದೃಶ್ಯಾವಳಿ ಚಕ್ ಚಕಾಂತ!

‍ಲೇಖಕರು Admin MM

March 19, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: