ಡಾ ಕೆ ಎಸ್ ಚೈತ್ರಾ ಹೊಸ ಕೃತಿ – ‘ಪ್ರಪಂಚಕ್ಕೊಬ್ಳೇ ಪದ್ಮಾವತಿ’

ಡಾ ಕೆ ಎಸ್ ಚೈತ್ರಾ

**

ಡಾ ಕೆ ಎಸ್ ಚೈತ್ರಾ ಅವರ ಹೊಸ ಕೃತಿ ಬಿಡುಗಡೆಯಾಗಿದೆ.

ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ.

**

 ಮಾತು- ಮೌನ, ಮನೆ- ಹೊಟೆಲ್, ಗೆಳೆಯರು- ಅಪರಿಚಿತರು ಹೀಗೆ ಎಲ್ಲವನ್ನೂ ಇಷ್ಟ ಪಡುವ ಚೈತ್ರಾರಿಗೆ ಪ್ರವಾಸ ಮಾತ್ರವಲ್ಲ ಅದರ ಯೋಜನೆ, ನಿರೀಕ್ಷೆಯೂ ಬಹಳ ಖುಷಿಯ ವಿಷಯ! ದೇಶ ವಿದೇಶಗಳಲ್ಲಿ ತಿರುಗುವುದರ ಜತೆ ಅಲ್ಲಿಯ ವಿಶೇಷ ತಿಂಡಿ ತಿನಿಸುಗಳನ್ನು ತಿನ್ನುವುದೂ ಅವರಿಗೆ ಇಷ್ಟ. ಹಾಗಾಗಿಯೇ ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗುವ ಅವರ ಪ್ರವಾಸ ಕಥನಗಳು ಸ್ವಾರಸ್ಯಕರ ಮತ್ತು ರುಚಿಕರ ಎಂಬುದು ಹಲವು ಓದುಗರ ಮೆಚ್ಚುಗೆಯ ನುಡಿ! ಈವರೆಗೆ ವಿಷಯ ವೈವಿಧ್ಯದ ಒಟ್ಟು ಹದಿನೇಳು ಕೃತಿಗಳನ್ನು ರಚಿಸಿದ್ದು ‘ಲೋಕದ ಕಣ್ಣು’ ಅಪರೂಪದ ಸ್ತ್ರೀನೋಟವನ್ನು ಒಳಗೊಂಡ ಅವರ ಪ್ರವಾಸ ಲೇಖನಗಳ ಮೊದಲ ಕೃತಿ. ಇದು ಪ್ರವಾಸ ಮಾಲಿಕೆಯಲ್ಲಿ ಎರಡನೆಯದ್ದು. ಯಾವುದೇ ಸ್ಥಳಕ್ಕೆ ಹೋದರೂ ಅಲ್ಲಿನ ಸ್ಥಳೀಯರೊಂದಿಗೆ ಬೆರೆತು ಅಲ್ಲಿನ ಜನ ಜೀವನ, ಇತಿಹಾಸ, ದಂತಕಥೆ, ಐತಿಹ್ಯ , ಆಹಾರ, ಆಚಾರ, ವಿಚಾರ ಅರಿಯುವ ಲೇಖಕಿಯ ಗುಣದಿಂದಾಗಿ ಇಲ್ಲಿನ ಪ್ರವಾಸ ಲೇಖನಗಳು ಹೊಸನೋಟವನ್ನು ನೀಡುತ್ತವೆ. ಜಗತ್ತಿನ ಮೂಲೆ ಮೂಲೆಗೆ ತಿರುಗಿದಷ್ಟೂ ಹೊಸತನ್ನು ಕಂಡ-ತಿಳಿದ ಬೆರಗು ಲೇಖಕಿಯದ್ದು. ಹಾಗಾಗಿಯೇ ಪ್ರವಾಸದಲ್ಲಿ ಆ ಬೆರಗನ್ನು ಹೊಳೆದ ನೋಟವನ್ನು ಅಕ್ಷರಗಳ ಮೂಲಕ ಸಹೃದಯರಿಗೆ ಕಾಣಿಸುವ ಪ್ರಯತ್ನ ಇದಾಗಿದೆ.

ನನ್ನ ಮಾತು

**

ಪ್ರತೀ ಬಾರಿ ರಜೆ ಶುರುವಾಗುವ ಮುನ್ನವೇ ‘ಎಲ್ಲಿಗೆ ಪ್ರವಾಸ ಹೋಗೋಣ?’ ಎಂದು ಮಕ್ಕಳು ಗಲಾಟೆ ಮತ್ತು ಪ್ಲಾನಿಂಗ್ ಶುರು ಮಾಡುತ್ತಾರೆ. ಸ್ನೇಹಿತರು ‘ಯಾವ ಕಡೆ ಸವಾರಿ’ ಎಂದು ಕೇಳುತ್ತಾರೆ. ಏಕೆಂದರೆ , ಪ್ರವಾಸ ಹೋಗುವುದು ಎಂದರೆ ಬಾಲ್ಯದಿಂದಲೂ ನನಗೆ ತುಂಬಾ ಪ್ರೀತಿ. ಪ್ರವಾಸದಿಂದ ಉಲ್ಲಾಸ ಮತ್ತು ಮನೋವಿಕಾಸ ಎಂದು ಬಲವಾಗಿ ನಂಬಿದವರು ಮನೋವೈದ್ಯ ಅಪ್ಪ ಮತ್ತು ಲೇಖಕಿ ಅಮ್ಮ. ಹಾಗಾಗಿಯೇ ಎಷ್ಟೇ ಪ್ರಯಾಸವಾದರೂ ಮೂರೂ ಮಕ್ಕಳಿಗೆ ಪ್ರವಾಸದ ರುಚಿ ಹಿಡಿಸಿದ್ದಾರೆ! ಅದಕ್ಕೆ ಸರಿಯಾಗಿ ‘ದೇಶ ಸುತ್ತು – ಕೋಶ ಓದು’ ಎಂಬ ಗಾದೆಯಲ್ಲಿ ಬಲವಾಗಿ ನಂಬಿಕೆಯಿಟ್ಟ ಸಂಗಾತಿಯೂ ಸಿಕ್ಕು ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುವ ಸಂಸಾರ ನಮ್ಮದು!

ಸಣ್ಣವಳಿದ್ದಾಗ ಅಪ್ಪ-ಅಮ್ಮರೊಂದಿಗೆ ಅಲ್ಲಲ್ಲಿ ಪ್ರವಾಸ ಹೋಗಿದ್ದರೂ ಶಾಲೆಯಲ್ಲಿ ಗೆಳತಿಯರೊಂದಿಗೆ ಜೋಗಕ್ಕೆ ಹೋದ ಪ್ರವಾಸ ಇಂದಿಗೂ ಹಚ್ಚ ಹಸಿರು. ಹೆಚ್ಚೇನೂ ಖರ್ಚಿಲ್ಲದೆ ಬಸ್ಸಿನಲ್ಲಿ ಹೋದ ಒಂದೇ ದಿನದ ಪುಟ್ಟ ಪ್ರವಾಸ ಅದಾಗಿತ್ತು. ಮಲೆನಾಡ ದಟ್ಟ ಕಾಡು ನೋಡುತ್ತಾ, ಗೆಳತಿಯರೊಂದಿಗೆ ಹರಟೆ ಹೊಡೆದು ಭೋರ್ಗರೆವ ಜೋಗ ಕಂಡಿದ್ದು ಇಂದಿಗೂ ಖುಷಿ ನೀಡುತ್ತದೆ. ಅಂದು ಕೇವಲ ಸಂತೋಷಕ್ಕಾಗಿ ಎಂದು ಭಾವಿಸಿದ್ದ ಪ್ರವಾಸಗಳು ಕಾಲ ಕಳೆದಂತೆ ಹೊಸ ಹೊಸ ಹೊಳಹನ್ನು ನೀಡಿದೆ.

ಪ್ರವಾಸ ಎಂದ ಮಾತ್ರಕ್ಕೆ ದುಬಾರಿಯಾದ ಪ್ರವಾಸಗಳೇ ಆಗಬೇಕೆಂದಿಲ್ಲ. ಪ್ರವಾಸಗಳ ಸಾರ್ಥಕತೆ ಇರುವುದು ಅದಕ್ಕೆ ತಗಲುವ ವೆಚ್ಚದಿಂದಲ್ಲ, ಅದರಿಂದ ನಾವು ಎಷ್ಟು ಮಟ್ಟಿಗೆ ಪ್ರಯೋಜನ ಪಡೆಯುತ್ತೇವೆ ಎಂಬುದರಿಂದ. ಪರಿಸ್ಥಿತಿ ಬದಲಾಗಿದೆ ನಿಜ. ಆರ್ಥಿಕ ಗುಣಮಟ್ಟ ಸುಧಾರಿಸಿದೆ, ಸೌಲಭ್ಯಗಳು ಹೆಚ್ಚಿವೆ. ತಂತ್ರಜ್ಞಾನದಿಂದ ಜಗತ್ತೇ ಇಂದು ಕೈಯ್ಯಲ್ಲಿದೆ. ವಿಶ್ವದ ಯಾವುದೇ ಮೂಲೆಗೂ ಪ್ರವಾಸ ಹೋಗಿಬರಲು ಸಾಧ್ಯ. ಹಾಗಿದ್ದೂ ಕೇವಲ ಪ್ರೆಸ್ಟೀಜ್‌ಗಾಗಿ ಅಲ್ಲದೇ ಹೊಸತನ್ನು ಕಾಣುವ – ಕೇಳುವ – ಕಲಿಯುವ, ಮುಕ್ತ ಮನಸ್ಸಿನಿಂದ ಒಳ್ಳೆಯದನ್ನು ಸ್ವೀಕರಿಸುವ, ಪ್ರವಾಸ ಮಾಡುವಂತಾಗಬೇಕು.

ಪ್ರವಾಸಗಳು ಬದುಕಿನಿಂದ ಓಡಲು ಅಲ್ಲ, ಇರುವ ಬದುಕನ್ನು ಸಂಪೂರ್ಣವಾಗಿ ಅನುಭವಿಸಲು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಶಕ್ತಿ ಕೊಡುವ ಸಾಧನಗಳಾಗಬೇಕು. ಆಗ ಮಾತ್ರ ಪ್ರವಾಸಗಳ ನಿಜ ಉದ್ದೇಶ ಸಾರ್ಥಕ. ವೈಯಕ್ತಿಕವಾಗಿ ನನಗಂತೂ ಈ ಟ್ರಾವೆಲ್. ಬದುಕಿಗೆ ಅಗತ್ಯವಾದ ವಿಟಮಿನ್ ಟಿ! ನಮ್ಮ ಭಾರತದಲ್ಲಂತೂ ನೋಡಲು ಸಾವಿರಾರು ಚೆಂದದ, ಮಹತ್ವದ, ಸ್ವಾರಸ್ಯಕರ ಸ್ಥಳಗಳಿವೆ. ನೋಡುವುದಿನ್ನೂ ಬಹಳಷ್ಟಿದೆ; ಆದರೆ ನೋಡಿರುವ ಒಂದಷ್ಟನ್ನು ತಿಳಿದಿರುವ ಕೆಲವಷ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವಿದು.

‍ಲೇಖಕರು Admin MM

February 23, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜಾಲಂದರ’ ನೀಡುವ ಸಾಹಿತ್ಯ ಸಿಂಚನ..

‘ಜಾಲಂದರ’ ನೀಡುವ ಸಾಹಿತ್ಯ ಸಿಂಚನ..

ಆರ್ ಎಸ್ ಹಬ್ಬು ** ಕಲಾ ಭಾಗ್ವತ್ ಅವರ ಕೃತಿ 'ಜಾಲಂದರ'. ಈ ಕೃತಿಯನ್ನು ಬೆಂಗಳೂರಿನ 'ಸ್ನೇಹಾ ಎಂಟರ್ ಪ್ರೈಸಸ್' ಪ್ರಕಟಿಸಿದ್ದಾರೆ. ಹಿರಿಯ...

ನವಮಾಧ್ಯಮದ ಹೊಸ ಶೋಧಗಳ ಅನಾವರಣ

ನವಮಾಧ್ಯಮದ ಹೊಸ ಶೋಧಗಳ ಅನಾವರಣ

ಬಿ.ಎ. ವಿವೇಕ ರೈ ** ಮಾಧ್ಯಮ ತಜ್ಞರಾದ ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ ಅವರ ಹೊಸ ಕೃತಿ 'ಪತ್ರಿಕೋದ್ಯಮದ ಪಲ್ಲಟಗಳು'. 'ಬಹುರೂಪಿ' ಈ...

ಒಂದು ವೃತ್ತಿ ಪಯಣ..

ಒಂದು ವೃತ್ತಿ ಪಯಣ..

ಮಧು ವೈ ಎನ್ ** ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ಕೃತಿ 'ಉಳಿದಾವ ನೆನಪು'. 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಮಧು ವೈ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This