ದೇವು ಪತ್ತಾರ ಹೊಸ ಕೃತಿ ‘ಈಶಾನ್ಯೆ ಒಡಲು’

ಹಿರಿಯ ಪತ್ರಕರ್ತ, ‘ಬುಕ್ ಬ್ರಹ್ಮ’ದ ಸಂಪಾದಕರಾದ ದೇವು ಪತ್ತಾರ ಅವರ ಹೊಸ ಕೃತಿ ಬಿಡುಗಡೆಯಾಗಿದೆ.

‘ಈಶಾನ್ಯೆ ಒಡಲು’ಗೆ ದೇವು ಬರೆದ ಮಾತುಗಳು ನಿಮ್ಮ ಓದಿಗಾಗಿ ಇಲ್ಲಿದೆ-

**

ಒಡಲು ಬಗೆಯುವ ಮುನ್ನ

ದೇವು ಪತ್ತಾರ

**
’ಬರೆಯುವುದು ಎಂದರೆ ಬೆತ್ತಲಾಗುವುದು’ ಎಂದು ಎಲ್ಲೋ ಓದಿದ ನೆನಪು. ಹೌದು. ಆದರೆ, ಇದು ಕೇವಲ ಬರೆಹಕ್ಕೆ
ಸಂಬಂಧಿಸಿದ ಸಂಗತಿ ಮಾತ್ರ ಅಲ್ಲ. ಅಭಿವ್ಯಕ್ತಿ ಸಾಧ್ಯವಿರುವ ಎಲ್ಲ ಮಾಧ್ಯಮಗಳ ದೃಷ್ಟಿಯಿಂದಲೂ ನಿಜ. ಮಾತನಾಡುವುದು,
ಹಾಡುವುದು, ಚಿತ್ರ ಬರೆಯುವುದು, ಬರೆಯುವುದು ಹೀಗೆ ಹಲವು ದಾರಿಗಳ ಮೂಲಕ ದಾಖಲಾಗುವ ಅಭಿಪ್ರಾಯ,
ವಿಚಾರಗಳನ್ನು ಮತ್ತೊಬ್ಬರಿಗೆ ತಲುಪಿಸುವ ಕ್ರಿಯೆ ಸಹಜವಾದರೂ ಸುಲಭವಾದದ್ದಂತು ಖಂಡಿತ ಅಲ್ಲ. ’ಇರಿದ ಅನುಭವ’
ಹೇಳಲಾಗದೇ ಇರಬಹುದೇನೊ? ಗೊತ್ತಿಲ್ಲ. ಆದರೆ, ’ತಿವಿಸಿಕೊಂಡ ’ ಅನುಭವ ದಾಖಲಿಸದಿರುವುದು ಕಷ್ಟಸಾಧ್ಯ ಅಥವಾ
ಅಸಾಧ್ಯ.

ಬರೆಯುವುದು ಎಂದರೆ ಅನ್ನಿಸಿದ್ದನ್ನು, ಹೊಳೆದದ್ದನ್ನ ಅಕ್ಷರದ ಮೂಲಕ (ಅಕ್ಕರದಿ) ದಾಖಲಿಸುವ ಕ್ರಮ. ಅಭಿವ್ಯಕ್ತಿ. ಹೀ ಗೆ
ಅಭಿವ್ಯಕ್ತಿಸುವುದು ಸುಲಭದ ಕೆಲಸವೇನಲ್ಲ. ಅತ್ಯಂತ ಕಷ್ಟದ ಕೆಲಸಗಳಲ್ಲಿ ಬರೆಯುವುದು ಒಂದು. ಅಕ್ಷರದ ಮೂಲಕ
ವ್ಯಕ್ತವಾಗುವ, ದಾಖಲಾಗುವ ಅಭಿವ್ಯಕ್ತಿಯು ತನ್ನ ಒಡಲೊಳಗೇ ಉತ್ತರದಾಯಿತ್ವವನ್ನೂ ಇಟ್ಟುಕೊಂಡಿರುತ್ತದೆ. ಬರೆಯಲು
ಬರುವವರು ಅಥವಾ ಬರೆಯುವವರು ಬರೆಯದೇ ಇರಲಾರರು. ಹಾಗೆ ಬರೆದೇ ಬರೆಯುತ್ತೇನೆಂದು ಹೊರಡುವವರಿಗೆ/
ಹೊರಟಾಗ ಅದು ದಕ್ಕದೆ ಇರುವ ಸಾಧ್ಯತೆಗಳೂ ಇಲ್ಲದಿಲ್ಲ. ಹುಂಬ ಪ್ರಯತ್ನ ’ಅಪಹಾಸ್ಯ’ಕ್ಕೆ , ಸೋಲಿಗೆ ಈಡು ಮಾಡಿ
ಬಿಡುತ್ತದೆ. ಸೋಲಿನ ಭಯ; ಸಾವಿನ ಆತಂಕದಷ್ಟೇ ಭೀ ಕರ, ಭಯಾನಕ. ಆದರೆ, ಆಟ ಮತ್ತು ಅದರ ಸೊಗಸು ಇರುವುದು
ಸೋಲು-ಗೆಲುವಿನಾಚೆಯ ಆಡುವ ಕ್ರಿಯೆಯಲ್ಲಿ. ಅಕ್ಷರಗಳು ಪದಗಳಾಗುವ, ಪದಗಳು ವಾಕ್ಯಗಳಾಗುವ, ವಾಕ್ಯಗಳು
ವಿಚಾರವಾಗುವ ಪ್ರಕ್ರಿಯೆಯು ಬಿಡುಗಡೆಯ ಜೊತೆಗೆ ಬಂಧನಕ್ಕೂ ಒಳಗು ಮಾಡುತ್ತಿರುತ್ತದೆ.

ಈ ಮೊದಲು ಹೇಳಿದಂತೆ ಬರೆಯುವುದು ನನಗೆ ಅತಿ ಕಷ್ಟದ ಕೆಲಸ. ಅದಕ್ಕಿಂತ ಕಷ್ಟದ್ದು ಎಂದರೆ ಬರೆಯದೇ ಇರುವುದು.
ಅದು ಬದುಕದಿರುವುದಕ್ಕೆ ಸಮ. ಜೀವನ್ಮರಣದ ಪ್ರಶ್ನೆ. ’ಮಾತು’ ಅರ್ಥ ಕಳೆದುಕೊಂಡ ದಿನಗಳಲ್ಲಿ ಮಾತಿನ ಮೂಲಕ
ಮಾತನಾಡ ಬಯಸುವವರು ’ಕಷ್ಟ’ ಪಡಬೇಕಾಗುತ್ತದೆ. ಹಾಗೆ ನೋಡಿದರೆ, ಎಲ್ಲ ವರ್ತಮಾನಗಳೂ ಈ ಬಗೆಯ ಸವಾಲನ್ನು
ತನ್ನ ಒಡಲೊಳಗೇ ಇಟ್ಟುಕೊಂಡಿರುತ್ತವೆ. ನನ್ನ ಸಮಕಾಲೀನ ಬದುಕಿಗೆ ತೀವ್ರವಾಗಿ ಸ್ಪಂದಿಸಿದಷ್ಟು ಸತ್ಯಕ್ಕೆ
ಸಮೀಪಿಸಿರುತ್ತೇವೆ. ಅಂದ ಹಾಗೆ ’ಸತ್ಯ’ ಸಾಪೇಕ್ಷವಾದುದು.

ನನ್ನ ಅತ್ಯಂತ ಕಷ್ಟದ, ಆತಂಕದ ದಿನಗಳಲ್ಲಿ ಜೊತೆಗೆ ನಿಂತು ನೆರವಾದದ್ದು ಓದು ಮತ್ತು ಬರೆಹ. ಅದರ ಋಣವನ್ನು
ತೀರಿಸುವುದು ಸಾಧ್ಯ. ಹಾಗೆ ನೋಡಿದರೆ ಯಾವ ರೀತಿಯ ’ಋಣ’ವನ್ನೂ ತೀ ರಿಸಲಾಗದು. ವ್ಯಕ್ತಿಗಳು ತೋ ರಿಸುವ ಪ್ರೀತಿ
ಹಾಗೂ ದ್ವೇಷಕ್ಕೆ ಸಂಬಂಧಿಸಿದಂತೆಯೂ ಈ ಮಾತು ನಿಜ. ವಿನಾಕಾರಣ ಇಂತಹ ಪ್ರೀತಿ-ದ್ವೇಷಗಳಿಗೆ ಒಳಗಾಗಿದ್ದೇನೆ.
ಅವನ್ನು ಪಡೆದ ’ಭಾಗ್ಯ’ ನನ್ನದು.

ನಿನ್ನೆಯ ಕುರಿತ ಹುಡುಕಾಟ ಇಂದನ್ನ ಅರಿಯಲು ಹಾಗೂ ನಾಳೆಯ ದಾರಿಯನ್ನು ಸ್ಪಷ್ಟಗೊಳಿಸಲು ನಡೆಸುವ ಪ್ರಕ್ರಿಯೆ.
ಇಂದು-ನಾಳೆಗಳನ್ನು ’ಹದ’ಗೊಳಿಸದ ನಿನ್ನೆಯ ಅಗತ್ಯವಿಲ್ಲ. ಚರಿತ್ರೆಯ ಪುಟಗಳು ನಿರ್ದಯಿ. ಅಲ್ಲಿ ದಯೆ-ಕರುಣೆಗೆ
ಅವಕಾಶವಿಲ್ಲ. ಆದರೆ, ಅದೇ ಹೊತ್ತಿಗೆ ಅದು ಮಾನವೀ ಯ ಕೂಡ.

’ಸೋಮಾರಿ’ ಎಂದು ಗುರುತಿಸಲಾಗುವ ನಾನು ನನಗೆ ಗೊತ್ತಿರುವಂತೆ ಕಷ್ಟಜೀವಿ. ಪ್ರತಿಯೊಂದನ್ನೂ ಕಷ್ಟಪಟ್ಟೇ ಪಡೆದವ-
ಪಡೆಯಬಯಸುವವ. ಬಿಟ್ಟಿಯಾಗಿ ಏನೂ ಸಿಗುವುದಿಲ್ಲಎಂದು ನಂಬಿದವ. ಓದು, ಸಂಗೀತ, ಸಿನಿಮಾ, ನಾಟಕ.
ಚಿತ್ರಕಲೆಗಳನ್ನು ನನ್ನನ್ನು ಬದುಕಿಸಿವೆ, ಬೆಳೆಸಿವೆ. ಬದುಕನ್ನ ಮತ್ತು ಅದರ ಸಂಕೀರ್ಣತೆ- ಸಂದಿಗ್ಧಗಳನ್ನು ಅರಿಯಲು ಅನುವು
ಮಾಡಿಕೊಡುವ ಇವುಗಳ ಒಡನಾಟ ಬದುಕನ್ನ ಸಹ್ಯಗೊಳಿಸಿದೆ.

ಈ ಲೇಖನಗಳನ್ನ ಬರೆಯುವಾಗ ಭೌತಿಕವಾಗಿ ಜೊತೆಗಿದ್ದ ’ಅವ್ವ’ ಈಗ ಇಲ್ಲ. ಸದಾ ಕಾಲ ಜೊತೆಯಲ್ಲಿಯೇ ಇದ್ದ-ಇರುವ
ಅವ್ವನ ನೆನೆದಾಗ ಕಣ್ಣಾಲಿಗಳು ತುಂಬಿ ಬರುತ್ತವೆ. ಇಷ್ಟವಿದ್ದರೂ ಕಲಿಯಲಾಗದ ಕಷ್ಟಪಟ್ಟು ಓದುತ್ತಿದ್ದ ಅವ್ವ ಬಹಳ ಶ್ರಮವಹಿಸಿ
’ಶಾರದ’ ಎಂದು ಸಹಿ ಮಾಡುವುದನ್ನು ಕಲಿತಿದ್ದಳು. ಅವಳಿದ್ದರೆ ಬಹಳ ಖುಷಿ ಪಡುತ್ತಿದ್ದಳು.

ಬರೆದದ್ದನ್ನ ಮರೆತು ಬಿಡಬೇಕು. ಯಾಕೆಂದರೆ ಪ್ರತಿ ಬರವಣಿಗೆಯೂ ಆಯಾ ಕಾಲ ಮತ್ತು ದೇಶದ ತುರ್ತು ಮತ್ತು ಅಗತ್ಯ.
ಹಾಗೆ ನೋಡಿದರೆ ಹಳೆಯ ಬರೆಹಗಳು ವರ್ತಮಾನಕ್ಕೆ ಬೇಕಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಈ ಗೊಂದಲ ಗೋಜಲುಗಳ
ನನ್ನನ್ನು ಕಾಡಿವೆ. ಕಾಡಿಸುತ್ತ ಬಂದಿವೆ. ಸರಿಸುಮಾರು ಹತ್ತು ವರ್ಷಗಳ ಹಿಂದೆ ಬರೆದಿದ್ದ ಈ ಪ್ರಬಂಧ ಮಾದರಿಯ
ಲೇಖನಗಳನ್ನು ’ಪುಸ್ತಕ’ ಮಾಡಬೇ ಕು ಎಂದು ಪುಟಕ್ಕೆ ಹಾಕಿಯೇ ಐದು ವರ್ಷ ಕಳೆದುಹೋ ಗಿವೆ. ಈಗ ಅದಕ್ಕೆ ಮುದ್ರಣದ
ಬಿಡುಗಡೆಯ ಭಾಗ್ಯ ದೊರೆಯುತ್ತಿದೆ. ಅದಕ್ಕೆ ನಾನಂತೂ ಕಾರಣ ಅಲ್ಲ. ಸಮಂತನ ಕಾಳಜಿ ಹಾಗೂ ಹೇಮಾ ಅವರ ಹಠದ
ಕಾರಣಕ್ಕಾಗಿ ಈ ಪುಸ್ತಕ ’ಬೆಳಕು’ ಕಾಣುತ್ತಿದೆ. ಈ ಪುಸ್ತಕದ ಬರೆಹಗಳನ್ನು ಓದಿ ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ ವ್ಯಕ್ತಪಡಿಸಿದ
ಅಭಿಪ್ರಾಯ ನನಗೆ ದೊರೆತ ಬಹು ದೊಡ್ಡ ಮನ್ನಣೆ. ’ಬೆತ್ತಲಾಗದೆ ಬಯಲು ಸಿಗದಿಲ್ಲಿ’ ಎಂಬ ಅಡಿಗರ ಮಾತು ಅನುರಣಿಸುತ್ತಿದೆ.
ಇಲ್ಲಿಗೆ ನಿಲ್ಲಿಸುವೆ. ಹಾಗೆನ್ನುವುದು ತಪ್ಪು . ಇದೊಂದು ಪೂರ್ಣ ವಿರಾಮದೆಡೆಗೆ ಸಾಗುವ ಅಲ್ಪ ವಿರಾಮ.

‍ಲೇಖಕರು avadhi

February 23, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: