ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ಎಲ್‌ ಹನುಮಂತಯ್ಯ ಹೊಸ ಕವಿತೆ- ಸಾವಿನ ಸಂತೆಯಲಿ ನಿಂತು

ಡಾ ಎಲ್‌ ಹನುಮಂತಯ್ಯ

ಮನೆಯಿಂದ ಹೊರ ನಡೆದರೆ ಕ್ಷಣಾರ್ಧದಲಿ
ರೋಗ ಆವರಿಸುವ ಆತಂಕ
ನಿತ್ಯ ಸಾಲುಗಟ್ಟಿ ಕಾಯುವ ಹೆಣಗಳು
ಸಂಬಂಧಿಕರ ರೋಧನ.
ಪ್ರತಿ ನಿಮಿಷ ಸೈರನ್ನು ಕೂಗಿಸಿಕೊಂಡು
ಓಡಾಡುವ ಅಂಬುಲೆನ್ಸ್‌ ಗಳು.

ಲೋಕದ ಉಸಾಬರಿಯೆ ಬೇಡವೆಂದು
ಒಳಗೆ ಕುಂತರೆ ಮನದಂಗಳದಲಿ
ಗೆಜ್ಜೆ ಕಟ್ಟಿ ಕುಣಿವ ಹದ್ದುಗಳು
ಎದೆಬಡಿತ ಹೆಚ್ಚು ಮಾಡುತ್ತವೆ.

ಫೋನು ರಿಂಗಣಿಸಿದರೆ ಭಯದ
ಅಲೆಗಳು ಅಪ್ಪಳಿಸುತ್ತವೆ.
ಯಾರ ಸಾವಿನ ಸುದ್ದಿಯೋ
ಯಾರಿಗೆ ಬೇಕಾಗಿದೆಯೋ ಬೆಡ್
ಆಕ್ಸಿಜನ್‌ ವೆಂಟಿಲೇಟರ್‌
ಮಗನ ಉಳಿಸಿರೆಂದು ತಾಯಿ
ಕುಟುಂಬದ ಜೀವನಾಡಿ ಗಂಡನ
ಉಳಿಸಿರೆಂದು ಹೆಂಡತಿ
ಅಣ್ಣ ತಮ್ಮ ಅಕ್ಕ ತಂಗಿಯರ
ಉಳಿಸಿಕೊಡಿರೆಂದು ಕಣ್ಣೀರಲಿ
ಕೈತೊಳೆವ ನೂರಾರು ಜನರ
ನೋವು ಕೇಳಿ ಮೂರ್ಚೆ ಬಂದಂತೆ

ಭಯದ ಕಾಲುವೆ ಬೇರೆಡೆಗೆ
ತಿರುಗಿಸಲು ಚಾನೆಲ್ಲು ಹಾಕಿದರೆ
ಸಾವಿನ ಮನೆಯಲ್ಲಿ ಹಿಂದು ಮುಸ್ಲಿಮರ
ಹುಡುಕಿ ಕುಂತ ನಾಯಕ ಮಣಿಗಳ ಸಾಲು.

ದೂರು ನೀಡಿ ದುಃಖಿತರ ನೆರವಿಗೆ
ಧಾವಿಸಲು ಮಂತ್ರಿಗಳ ಮನೆಗೆ ಬಂದರೆ
ಬೆಳಗಿನಿಂದ ಸಂಜೆವರೆಗೆ ಸಭೆ
ಮುಗಿಯಲೇ ಇಲ್ಲ.

ಹೆಣಸಾಗಿಸಲು ಒಬ್ಬ ಮಂತ್ರಿ ಸುಡಲೊಬ್ಬ
ಆಕ್ಸಿಜನ್ನಿಗೊಬ್ಬ ಅಸ್ಥಿ ವಿಸರ್ಜನೆಗೊಬ್ಬ
ಇವರೆಲ್ಲರ ಮೇಲುಸ್ತುವಾರಿಯ ಸುತ್ತ
ತರವಾರಿ ಜೌಷಧಗಳ ಕಂಟ್ರಾಕ್ಟರು
ವೆಂಟಿಲೇಟರಿನ ಡೀಲರುಗಳು ಕಾಯುವುದ
ಕಂಡು ಹಿಂತಿರುಗಿ ಬಂದೆ.

ಮತ್ತದೇ ಸುದ್ದಿ, ನಿನ್ನೆ ಸೇರಿದ
ಪತ್ರಕರ್ತನ ಸಾವು
ಮೊನ್ನೆ ಚೇತರಿಸಿಕೊಂಡಿದ್ದ
ಕ್ರೀಡಾಪಟು ಇನ್ನಿಲ್ಲ.

ಈಗತಾನೆ ಬಂದ ಬಿಸಿ ಸುದ್ದಿ
ಸರ್ಕಾರದ ಹಿರಿಯ ಅಧಿಕಾರಿಯೇ ಸತ್ತ.
ಸಾವಿನ ಸಂತೆಯಲಿ ಯಾರನ್ನ ಯಾರು
ಉಳಿಸಿಕೊಳ್ಳುವುದು
ಸದ್ಯ ಸರ್ಕಾರ ಉಸಿರಾಡುತ್ತಿದೆಯಲ್ಲ!

‍ಲೇಖಕರು Avadhi

19 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading