ಜಾತ್ರೆಗೆ ನುಗ್ಗಿದ ಮಗು

ಭಾನುಕುಮಾರ ಆರ್

‘ಜಾತ್ರೆಗೆ ನುಗ್ಗಿದ ಮಗು’ ಕವನ ಸಂಕಲನ ಅರಬಗಟ್ಟೆ ಅಣ್ಣಪ್ಪರವರ ಪ್ರತಿಕ್ರಿಯಾ ರೂಪದ ಕವನಗಳು ಮಾತ್ರವಲ್ಲ ಅವರೇ ಹೇಳುವಂತೆ ಭಾವಸ್ಫುರಣಗಳು. ಈ ಪುಸ್ತಕ ನನ್ನ ಮನೆ ಸೇರಿ ತಿಂಗಳುಗಳೇ ಸಂದಿದರೂ ನನ್ನ ಕೈ ಗೆ ಬರಲೂ ಸಾಧ್ಯವೇ ಆಗಿರಲಿಲ್ಲ. ನನಗೆ ಕಾವ್ಯದ ಓದು ಸರಾಗವೆನಿಸೋದಿಲ್ಲ. ಹಾಗಾಗಿ ಇದನ್ನು ಆಸ್ವಾದಿಸೋಕೆ ಸಮಯ ಕೂಡಿ ಬರಲೇ ಇಲ್ಲ. ಈಗ ಆಸ್ವಾದನೆ ಮುಗಿದಿದೆ, ಆಸ್ವಾದನೆಯ ರುಚಿಯನ್ನು ಹಂಚಿಕೊಳ್ಳುವ ಸಮಯ.

ಪುಸ್ತಕದ ಶೀರ್ಷಿಕೆಗೂ ಒಳಗಿನ ಕವನಗಳಿಗೂ ಸಂಬಂಧ ಇದೆ. ಜಾತ್ರೆಯನ್ನು ಹೊಕ್ಕ ಮಕ್ಕಳಿಗೆ ಹಲವಾರು ಸನ್ನಿವೇಶಗಳು, ಬದುಕು, ಮನರಂಜನೆ, ಬವಣೆಗಳು, ಖುಷಿಗಳು, ನೋವುಗಳು, ಸಾಂತ್ವಾನಗಳು, ಬೇಸರಗಳು ಎದುರುಗೊಳ್ಳುತ್ತವೆ. ಹಾಗೆಯೇ ಈ ಸಂಕಲನದಲ್ಲಿ ಓದುಗರಿಗೆ ಬದುಕಿನ ವಿವಿಧ ಆಯಾಮಗಳ ಬಗ್ಗೆ ಕವಿಯ ಪ್ರತಿಕ್ರಿಯಾರೂಪದ ಭಾವಸ್ಫುರಣೆಗಳ ಗುಚ್ಛವೇ ಕಾದು ಕುಳಿತಿವೆ. ಕಟ್ಟಿಟ್ಟಿರುವ ಈ ಗುಚ್ಚದಲ್ಲಿ ಕವಿಯ ಸರಾಗತನ, ಸಹಜತೆ, ಬದುಕಿನ ವಾಸ್ತವತೆ-ಗ್ರಹಿಕೆ, ಕಾವ್ಯದ ಕಾಣ್ಕೆಗಳು ನಮಗೆ ಗೋಚರಿಸುತ್ತವೆ.
ಬಣ್ಣವನ್ನಾದರೂ ಬದಲಿಸಬಾರದೇ
ಎಷ್ಟೊಂದಿವೆ! ಜಗದಲಿ!!
ಕಾಮಾಲೆಗಣ್ಣು ಕತ್ತಲ ಭ್ರಮೆಗಿಂತ
ಬೇರೆ ಬೇಕೆ ವಿಭಜಕಕ್ಕೆ ನೀವೇ ಹೇಳಿ!
‘ಬಣ್ಣದ ಡಬ್ಬಿ ಹೊತ್ತವ’ ಕವನದ ಈ ಮೇಲಿನ ಸಾಲುಗಳು ರಸ್ತೆಯ ವಿಭಜಕ್ಕೋ ಅಥವಾ ಸಮಾಜದ ವಿಭಜಕ್ಕೋ ಈ ಕೃತ್ಯ ಎಂಬುದು ಚಿಂತನಾರ್ಹವಾದದು.

ಕಾಯುತಿಹಳು ದ್ರೌಪದಿ!
ನಮ್ಮ ನಿಮ್ಮ ಪಾದದಡಿ!
ಕೃಷ್ಣ ಬರುವನೆಂದು!
ಎಂದು ಕೊನೆಗೊಳ್ಳುವ ‘ಕಾಯುತಿಹಳು ದ್ರೌಪದಿ’ ಪದ್ಯವು ಸ್ತ್ರೀ ಶೋಷಣೆ ಅಜರಾಮರ ಎಂಬುದನ್ನು ವಿಡಂಭನಾತ್ಮಕವಾಗಿ ಹಸ್ತಿನಾವತಿಯಲ್ಲಿ ದ್ರೌಪದಿಯಿಂದ ಆರಂಭವಾದ ಶೋಷಣೆ ವರ್ತಮಾನದಲ್ಲಿ ನಮ್ಮ ಬಸ್ಸುಗಳಲ್ಲೂ ಮುಂದುವರೆದಿರುವುದನ್ನು ವೈರುದ್ಧ್ಯಮಯವಾದ ಸಾದೃಶ್ಯದೊಂದಿಗೆ ಮನಮುಟ್ಟಿಸುತ್ತೆ.

ಅಮೃತಕಳಸವ ಹೊತ್ತ ತಾಯಿ
ಹುಡುಗಾಟಿಕೆಯ ಮಕ್ಕಳ ಕೈಯ್ಯಲಿ
ಎದೆಗೊಂದು ಕುಪ್ಪಸ ವಿಲ್ಲದೆ ಬಡಪಾಯಿ
ಜಾತ್ರೆಗೆ ನುಗ್ಗಿದ್ದು ಮಗು! ಕಳೆದವಳು ಮಾತ್ರ ತಾಯಿ!
ಕಳೆದಿಹಳು ತಾಯಿ ಹುಡುಕಿಕೊಡಿ!
ಜಾತ್ರೆಗೆ ನುಗ್ಗಿದ ಮಗು ಕವನದ ಸಾಲುಗಳು ಸಮಾಜ ಎಲ್ಲರಿಗೂ ಒಂದೇ ರೀತಿಯಲ್ಲಿ ಇಲ್ಲ. ಕೆಲವು ಸನ್ನಿವೇಶ ಕೆಲವರಿಗಷ್ಟೆ ಸುಖ ಶಾಂತಿ ನೀಡಿದರೆ ಮತ್ತೆ ಕೆಲವರಿಗೆ ದುಃಖದ ಛಾಯೆಯಾಗಿ ಬಿಡುತ್ತೆ. ಉದಾಹರಣೆಗೆ ಇಂದಿನ ಲಾಕ್ ಡೌನ್ ಸನ್ನಿವೇಶ ಕೆಲವರಿಗಷ್ಟೆ ಶಾಂತಿಯ ಬದುಕ ನೀಡಿದರೆ ಎಷ್ಟೋ ಜನರಿಗೆ ಹಸಿವಿನ ರುದ್ರ ನರ್ತನ. ಇಂತಹ ಸೂಕ್ಷ್ಮ ಸಂವೇದನೆಯನ್ನು ಈ ಕವನ ನಮ್ಮ ಎದೆಗೆ ದಾಟಿಸುತ್ತೆ.

‘ಎಲ್ಲಿದೆ ಮಾನವೀಯತೆ’ ಕವನದಲ್ಲಿ ವ್ಯಕ್ತಿಯೋರ್ವ ಮಳೆಗಾಳಿಗೆ ಸಿಲುಕಿ ನಲುಗುತ್ತಿರುವ ಮೂಕ ಪ್ರಾಣಿಗಳಾದ ನಾಯಿ, ಬೀದಿ ಹಸು, ನವಿಲುಗಳ ಆರ್ತನಾದಕ್ಕೆ ಮರುಗಿ ಸಹಾಯ ಮಾಡಲು ತೆರಳುವಾಗ ಎದುರಾಗುವ ಬೆಕ್ಕು ಅಪಶಕುನವಾಗಿ ಕಂಡು ‘ಥೂ ಅನಿಷ್ಠ ಏನಾದರೂ ಒಳ್ಳೆಯ ಕಾರ್ಯಕ್ಕೆ ಹೋಗುವಾಗಲೂ ಅಡ್ಡಗಾಲು’ ಎಂದು ಹೇಳಿ ಒಳ ಹೋಗಿ
‘ಎಲ್ಲಿದೆ ಮಾನವೀಯತೆ
ಎಂಬ ಕವನ ಬರೆದೆ ಫ್ರೆಂಡ್ಸ್
ಚೆನ್ನಾಗಿದೆಯೇ ಫ್ರೆಂಡ್ಸ್!

ನದಿ ದಂಡೆಯಲ್ಲಿದ್ದ ನಾಯಿ
ಗುಡ್ಡದಾಚೆಯ ನವಿಲು
ಹಕ್ಕಿಗಳೆಲ್ಲ ಗೂಡಿಗೆ
ತಲುಪುವವರೆಗೂ ಶೇರ್
ಮಾಡಿ ಫ್ರೆಂಡ್ಸ್… ಪ್ಲೀಸ್…
ಎಂದು ಕೊನೆಗೊಂಡ ಕವನದಲ್ಲಿ ಆಧುನಿಕ ಮನುಷ್ಯನ ದ್ವಂದ್ವ, ಪ್ರಚಾರಗೀಳುತನ ಪ್ರಚೂರಗೊಂಡಿದೆ.

NOTAವಿಲ್ಲ! ಎಂಬ ಕವನವು ಮತದಾನದ ಸಮಯದಲ್ಲಿ ಮತದಾರರಿಗೆ ನೀಡಿದ NOTA ಆಯ್ಕೆಯ ಬಗ್ಗೆ ವಿಡಂಬನಾತ್ಮಕವಾಗಿ ರಚನೆಗೊಂಡಿದೆ.
ಸುತ್ತಲಿಯನ್ನೆ ಮಾರಿ
ಬದುಕು ಕಟ್ಟಿಕೊಂಡವನ ಕತೆ
ಕೇಳಿಯೇ ಬೆಳೆದಿರುವೆವು
ಕೆಟ್ಟ ‘ನೋಟ’ವನ್ನೊಂದೂ ತಾಳಿಲ್ಲ ನಾವೂ- ಎಂದು ಕೊನೆಗೊಳ್ಳುವುದರೊಳಗೆ ಸಾಮಾನ್ಯನ ಬದುಕು ಎಷ್ಟೇ ಹಾಳಾದರು ಮಗ್ಗಲು ಬದಲಿಸಲು ಆತ ಸಿದ್ಧನಿಲ್ಲ ಎಂಬುದನ್ನು ಸಾಕಷ್ಟು ಉದಾಹರಣೆಗಳ ಮೂಲಕ ಎದೆಗೆ ಇಳಿಯುತ್ತದೆ.

‘ತೊರೆದ ತೊರೆ’ ನಮ್ಮ ಬಾಲ್ಯವನ್ನು ಜೀವಂತವಾಗಿಸುತ್ತದೆ. ‘ಬಾಲ್ಯದ ಒಂದು ಹೆಜ್ಜೆ ಸಾವಿರ ಜನರನು ಸಂಧಿಸಿದೆ. ಹೃದಯದರಮನೆಯಲ್ಲಿ ನಿಲ್ಲಿಸಿದೆ’ ಹಾಗೆ ನಮ್ಮನ್ನು ಕೂಡ ಭೂತದ ನಭಕ್ಕೆ ದಾಪುಗಾಲಿಡಿಸುತ್ತೆ ಈ ಕವನ.

ಅಪ್ಪಿದ ಮಣ್ಣಿನಾಸೆ, ಚಿಗುರಿಗೆ ತುತ್ತಿಕ್ಕುವಾಸೆ
ಮತ್ತದೇ ನಿಟ್ಟುಸಿರು, ಕಂದನಾಟ ಕ್ಷಣಿಕ!
ನಿಂತು ಮಳೆಯಾಗದು! ಬರೀ ಚಂಡಮಾರುತ!
ಬೆಳೆಗಾಣದ ನೇಗಿಲುಗೆರೆಗಳ ನಿತ್ಯ ಮೊರೆತ!
ಬೆಳೆ ಪರಿಹಾರ! ಕವನದ ಮೇಲಿನ ಸಾಲುಗಳಲ್ಲಿ ರೈತನ ಗೋಳನ್ನು ಕಣ್ಣಿಗೆ ಕಟ್ಟಿಸಿದ್ದಾರೆ. ರೈತ ತನ್ನದೆಲ್ಲವನ್ನು ಭೂಮಿಗೆ ಧಾರೆಯೆರದು ‘ತುತ್ತನಿತ್ತ ಬೇರಲ್ಲಿ ಅನಾಥ’ನಾಗುತ್ತಾನೆ. ಕೊನೆಯವರೆಗೂ ‘ಮಣ್ಣನಪ್ಪಿ ಕಾಯುತ’ ಜೀವ ಬಿಡುತ್ತಾನೆ ಎಂಬ ದಾರುಣ ಸತ್ಯ ಕಣ್ಣ ಪಸೆಯನ್ನು ತೇವಗೊಳಿಸುತ್ತದೆ.

ಬಂದು ಹೋಗು ಅಪ್ಪ! ಕವನ ವಿಭಿನ್ನವಾದ ಹೋಲಿಕೆಯದ್ದು. ಮಳೆಯಜೊತೆಗಿನ ಜೂಜಾಟ ರೈತನ ಬದುಕು. ಮೋಡಗಳೆ ಕಟ್ಟದಿದ್ದರೇ, ನಮ್ಮ ನೆಲಕ್ಕೆ ಮೋಡಗಳೇ ಆಗಮಿಸದಿದ್ದರೆ ಬದುಕುವುದಾದರೂ ಹೇಗೆ?
ಸತ್ತಾಗ ಬಂದು ಹಾಕುವೆಯಂತೆ
ಹಾಲುತುಪ್ಪಾ!
ಜೀವಹಿಡಿದು ಕಾಯುತಿಹೆನೀಗ
ಬಂದು ಹೋಗು ಅಪ್ಪಾ!!! ಎಂಬ ಕೊನೆಯ ಸಾಲುಗಳು ಅವಶ್ಯಕತೆಯಿದ್ದಾಗ ಆಗಮಿಸಿ ಸಂತೈಸು ಓ ಅತಿಥಿ ಎಂದು ಮಳೆಯ ಬಗೆಗೆ ಗೋಗರೆತ ಕೇಳಿಸುತ್ತದೆ.

ಗಾಂಧೀಜಿ ಈಗ ಎಲ್ಲರಿಗೂ ಸದರವಾಗಿದ್ದಾರೆ. ಯಾರೂ ಹೇಗೆ ಬೇಕಾದರೂ, ಏನು ಬೇಕಾದರೂ ಮಾತನಾಡಿ ತಮ್ಮ ತೀಟೆಯನ್ನು ತೀರಿಸಿಕೊಳ್ಳಬಹುದು. ಏಕೆಂದರೆ ಅದನ್ನು ಪ್ರಶ್ನೆ ಮಾಡಲು ಗಾಂಧೀಯೇ ಜೀವಂತವಾಗಿಲ್ಲವಲ್ಲ. ಆದರೆ ಗಾಂಧೀ ಜೀವಂತವಾಗಿದ್ದಾರೆ ಅವರ ತತ್ವಗಳಿಂದ, ಆದರ್ಶಗಳಿಂದ. ಗಾಂಧಿ! ನಾನಲ್ಲ!! ಎಂಬ ಕವನ ಗಾಂಧೀ ಬಗ್ಗೆ ಈಗಿನ ಸಮಾಜದ ಅಭಿಪ್ರಾಯಗಳನ್ನು ಅಕ್ಷರ ರೂಪದಲ್ಲಿ ಪಡಿಮೂಡಿಸಿದೆ.

ಸದ್ಯಕ್ಕೆ ಉಳಿದಿರುವನೊಬ್ಬನೇ ಗಾಂಧಿ
ಅದು ಗೋಡ್ಸೆಯು ಕೊಂದ ಗಾಂಧಿ!
ಗುಂಡಿಕ್ಕಿದವನ ಗಾಂಧಿ ಕ್ಷಮಿಸಿಯಾಗಿದೆ.
. . . . . . .
ಗೋಡ್ಸೆಯನ್ನು ಗಾಂಧಿ ಕ್ಷಮಿಸಬಹುದು! ನಾನಲ್ಲ!
ಗಾಂಧೀಜಿಯನ್ನು ಇನ್ನೂ ನಮ್ಮ ಸಮಾಜ ಕೊಲ್ಲುತ್ತಲೇ ಇದ್ದಾರೆ ಎಂಬುದನ್ನು, ಪರೋಕ್ಷವಾಗಿ ಅವರು ಕೂಡ ಗೋಡ್ಸೆಗಳೆ ಎಂಬುದನ್ನು ಕಟುವಾಗಿ ಚಿತ್ರಿಸಿದ್ದಾರೆ.

ಜಾತಿ ಎಂದು ಉದಯಿಸಿತೋ ಅಂದಿನಿಂದ ಆರಂಭವಾಗಿ ವರ್ತಮಾನ, ಭವಿಷ್ಯದಲ್ಲೂ ಅಜರಾಮರವಾಗಿ ಉಳಿಯುವುದಲ್ಲದೇ ಅದಿಲ್ಲದಿದ್ದರೆ ‘ಅದಿಲ್ಲವೋ! ನೀ ಯಾವ್ ಸೀಮೆ ಜಾತಿ’ ಎಂದು ತುಚ್ಚೀಕರಣಕ್ಕೂ ಗುರಿಯಾಗಬೇಕಾದೀತು ಎಂಬುದನ್ನು ‘ಜಾತಿಯ ಪಾತಿ’ ಕವನದಲ್ಲಿ ಸಹಜವಾಗಿ ಚಿತ್ರಿಸಿದ್ದಾರೆ.

ಜಾತಿ ಬೇಕು ಸ್ವಾಮಿ ಜಾತಿ! ಜಾತ್ಯಾತೀತರೆನಿಸಿಕೊಳ್ಳಲು ಬೇಕು! ಕೊನೆಗೆ ನನ್ನ ಜಾತಿಯವರ ತುಳಿಯಲಾದರೂ ಬೇಕು! ಎಂಬ ಸಾಲುಗಳ ಜಾತಿಯೆಂಬುದು ವರ್ತಮಾನದಲ್ಲಿ ಅಸ್ತ್ರವಾಗಿದೆ ಎಂಬುದನ್ನು ಜಾಲಿಗಿಡ, ಲಂಟಾನದಂತ ನಿರುಪದ್ರವಿ, ನಿರುಪಯೋಗಿ ಗಿಡಗಳ ದೃಷ್ಟಾಂತದ ಮೂಲಕ ಚಿತ್ರಿಸಿರುವುದು ಚಿಂತನೆಗೀಡು ಮಾಡುತ್ತದೆ.

ಮೊದಲ ಸಂಕಲನವಾದರೂ ಕವಿಯ ಮನ ಇಲ್ಲಿ ತನ್ನದೇ ಚೌಕಟ್ಟಿನಲ್ಲಿ ಅರಳಿನಿಂತಿದೆ. ಕಾವ್ಯ ಭಾಷೆ ಕವಿಯ ಪ್ರಾದೇಶಿಕತೆಯನ್ನು ಬಿಂಬಿಸಿದೆ. ಕಾವ್ಯದ ವಸ್ತುಗಳು ಆಕಾಶದ ನಕ್ಷತ್ರಗಳಾಗದೇ ಕೈ ಚಾಚಿದಲ್ಲಿ ಸಿಗುವ ನಮ್ಮ ಮನೆಯ ಸೂರಿನ ಧೂಳುದುಂಬವಾಗಿವೆ. ಬಳಸಿರುವ ಪ್ರತಿಮೆಗಳು, ಉಪಮೇಯ-ಉಪಮಾನ, ದೃಷ್ಟಾಂತಗಳು ಸಹಜತೆಯ ಪರಿಧಿಯ ಆಚೆ ಹೋಗಿಲ್ಲ. ಕಾವ್ಯದ ಶೈಲಿಯನ್ನು ಗಮನಿಸಿದಾಗ ನವೋದಯ, ನವ್ಯ, ಪ್ರಗತಿಶೀಲ, ದಲಿತ-ಬಂಡಾಯದ ಯಾವುದೇ ಛಾಯೆಯು ಆವರಿಸಕೊಳ್ಳದಿರುವುದು ನನ್ನಂತ ಓದುಗನಿಗೆ ಸಮಾಧಾನ, ಖುಶಿಯನ್ನು ನೀಡುತ್ತದೆ. ಬದುಕನ್ನು ವಿಭಿನ್ನವಾಗಿ, ವೈದೃಶ್ಯವಾಗಿ ನೋಡಿ ಅಲ್ಲಿಂದ ಸಿಗುವ ಮೂಲಧಾತುಗಳನ್ನು ಪಡೆದುಕೊಂಡು ಮತ್ತಷ್ಟು ಕಾವ್ಯಕುಸುಮಗಳು ನಿಮ್ಮ ಲೇಖನಿಯಿಂದ ಅರಳಿದರೆ ಇನ್ನೂ ಈ ಸಂಕಲನದ ವ್ಯಾಪ್ತಿ ಹೆಚ್ಚಿರುತ್ತಿತ್ತು.

ಸ್ನೇಹಿತರಾದ ಅರಬಗಟ್ಟೆ ಅಣ್ಣಪ್ಪರವರಿಂದ ಇನ್ನಷ್ಟು ಭಾವಸ್ಫುರಣೆಯಾಗಲಿ ಎಂಬುದೇ ನನ್ನ ಹೃದಯಾಂತರಾಳದ ಆಶಯ.

‍ಲೇಖಕರು Avadhi

May 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: