ಜಿ ಎನ್ ನಾಗರಾಜ್ ಅಂಕಣ ‘ಅರಿವ ಬೆಡಗು’

ಆದಿಮಾನವರಿಂದ ಮೊಘಲರವರೆಗೆ, ಬಣ್ಣಗಳಿಂದ ಅತ್ತರಿನವರೆಗೆ ರಸಾಯನಶಾಸ್ತ್ರ

ನಾವು ಸೇವಿಸುವ ಗಾಳಿ, ತಿನ್ನುವ ಊಟ, ಕುಡಿಯುವ ನೀರು, ಪಾನೀಯಗಳು ವಿಸರ್ಜಿಸುವ ನಿಶ್ವಾಸ, ಮಲ, ಮೂತ್ರ ನಾವು ಉಪಯೋಗಿಸುವ ಎಲ್ಲ ವಸ್ತುಗಳೂ ರಾಸಾಯನಿಕಗಳು, ರಾಸಾಯನಿಕಗಳ ಮಿಶ್ರಣಗಳೇ ಅಲ್ಲವೇ?

ಈ ವಸ್ತುಗಳ ಉಪಯೋಗವನ್ನು ಕಂಡುಕೊಂಡು, ನಿರ್ದಿಷ್ಟ ಉದ್ದೇಶಕ್ಕಾಗಿ ಅವುಗಳನ್ನು ಬಳಸತೊಡಗಿದಾಗ ಅವು ರಸಾಯನಿಕಗಳಾಗಿ ಬಳಸಲ್ಪಡುತ್ತವೆ. ಆ ಉದ್ದೇಶ ಮತ್ತಷ್ಟು ಸಾರ್ಥಕವಾಗುವಂತೆ ಆ ರಾಸಾಯನಿಕಗಳನ್ನು ಮಾರ್ಪಡಿಸಿ, ಉತ್ತಮಪಡಿಸಿ ಬಳಸತೊಡಗಿದಾಗ ಅವನು/ಳು ತಮಗೇ ಅರಿವಿಲ್ಲದೇ ರಸಾಯನಿಕ  ಕ್ರಿಯೆಯಲ್ಲಿ ತೊಡಗಿಕೊಂಡಿರುತ್ತಾರೆ. ಆ ಕ್ರಿಯೆಗಳ ಕಾರ್ಯ ಕಾರಣ ಸಂಬಂಧವನ್ನು ಅರಿಯುವ ಪ್ರಯತ್ನ ಮಾಡಿದಾಗ ರಾಸಾಯನಿಕ ವಿಜ್ಞಾನಿಗಳಾಗುತ್ತಾರೆ.

ಬಣ್ಣಗಳೇ, ಮಾನವರು ಆಹಾರವನ್ನಲ್ಲದೆ ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸಿದ ನಿರ್ದಿಷ್ಟ ರಸಾಯನಿಕ ವಸ್ತುಗಳು. ತಮ್ಮ ಸುತ್ತಮುತ್ತಲಿನ‌ ಪ್ರಕೃತಿಯ ಸೌಂದರ್ಯವನ್ನು ನೋಡಿ ಆದಿಮಾನವರಿಗೆ ತಮ್ಮ ದೇಹಗಳು ಅನಾಕರ್ಷಕವಾಗಿ ಪಿಚ್ಚೆನಿಸಿರಬೇಕು. ಮರ ಗಿಡಗಳ ಬಣ್ಣ ಬಣ್ಣದ ಹೂಗಳು, ಎಲೆಗಳು, ಚಿಟ್ಟೆಗಳ, ದುಂಬಿಗಳ ಮೈಯ ಚಿತ್ತಾರಗಳು, ಹಲವು ಪಕ್ಷಿಗಳ, ಕೆಲವಾದರೂ ಪ್ರಾಣಿಗಳ ಬಣ್ಣ ಬಣ್ಣಗಳು ಅವರನ್ನು ಸೆಳೆದಿವೆ. ತಾವೂ ಅವುಗಳಂತೆ ಕಾಣಬೇಕೆನ್ನುವ ಬಯಕೆಯನ್ನು ಅವರು ಆ ಹೂಗಳು, ಪಕ್ಷಿಗಳ ರೆಕ್ಕೆ, ಪುಕ್ಕಗಳು, ಪ್ರಾಣಿಗಳ ಚರ್ಮಗಳನ್ನೇ ಮೈ ತುಂಬಾ ಧರಿಸಿ ಪರಸ್ಪರ ನೋಡಿಕೊಂಡು ಖುಷಿ ಪಟ್ಟಿರಬೇಕು, ಕುಣಿದು ಕುಪ್ಪಳಿಸಿರಬೇಕು. ನಂತರ ತಮ್ಮ ಇಡೀ ಶರೀರವನ್ನೇ ಬಣ್ಣ ಬಣ್ಣ ಮಾಡಿಕೊಂಡು ನಲಿದರು.

ಜಗತ್ತಿನ‌ ಎಲ್ಲ ಆದಿವಾಸಿಗಳ ಸಂಸ್ಕೃತಿಯ ಅಡಿಪಾಯವೇ ಹೀಗೆ ತಮ್ಮ ಶರೀರವನ್ನೆಲ್ಲ ಬಣ್ಣ ಬಣ್ಣಗಳಿಂದ ಚಿತ್ರಿಸಿಕೊಳ್ಳುವುದರಿಂದ ಆರಂಭವಾಗುತ್ತದೆ. ಅಂದು ಆರಂಭವಾದ ಈ ಬಣ್ಣಗಳಿಂದ ಅಲಂಕಾರ ಹಲ ಹತ್ತು ಸಾವಿರ ವರ್ಷಗಳನ್ನು ದಾಟಿ ಇಲ್ಲಿನವರೆಗೂ ಬಂದಿದೆ. ಅಂದು ಮೈಯೆಲ್ಲವನ್ನೂ ಬಣ್ಣಗಳಿಂದ, ಹೂವುಗಳಿಂದ, ವಿವಿಧ ಎಲೆ, ಗರಿಗಳಿಂದ ಅಲಂಕರಿಸಿಕೊಳ್ಳುವ ಪ್ರವೃತ್ತಿ ಇಂದು ʻತೆಯ್ಯಂʼ, ʻಭೂತಾರಾಧನೆʼ ಮೊದಲಾದ ಬುಡಕಟ್ಟು ದೈವಗಳ ಆಚರಣೆಗಳಲ್ಲಿ ಹೆಚ್ಚು ಬದಲಾವಣೆಗಳಿಲ್ಲದೆ ಮುಂದುವರೆದಂತೆ ಕಾಣುತ್ತದೆ.

ಈ ಬಣ್ಣಗಳು, ಹೂವುಗಳ ಗಂಧಗಳು ಮಾಯಕದ (magical) ಸಾಮರ್ಥ್ಯವನ್ನು ಹೊಂದಿದೆ ಎಂಬ ಭಾವನೆ ಆದಿಮ ಮಾನವರಲ್ಲಿ ವ್ಯಾಪಕವಾಗಿತ್ತು. ದೈವೀಶಕ್ತಿಗಳು ಮೈಮೇಲೆ ಆವರಿಸಿಕೊಳ್ಳುವವೆಂಬ ಮಾಯಕದ ಉತ್ತುಂಗದ  ಭಾವನೆಗೂ ಕಾರಣವಾಗಿತ್ತು. ಇಂದೂ ಆದಿವಾಸಿಗಳಲ್ಲಿ ಈ ಭಾವನೆಗಳು ಉಳಿದುಕೊಂಡು ಬಂದಿವೆ. ʻತೆಯ್ಯಂʼ, ʻಭೂತಾರಾಧನೆʼಗಳಲ್ಲೂ ಭಾಗಶಃ ಅಸ್ತಿತ್ವದಲ್ಲಿವೆ.
ಮುಖವರ್ಣಿಕೆಗಳ ವೈವಿಧ್ಯಮಯ ಸೌಂದರ್ಯದ ಮೂಲಕ ಯಕ್ಷಗಾನ, ಕಥಕ್ಕಳಿ‌ಗಳಲ್ಲಿ ಹಲವು ಸುಧಾರಣೆಗಳನ್ನು ಪಡೆದು ಮುಂದುವರೆದಿವೆ. ರಂಗಭೂಮಿ ಎಂಬ ಹೆಸರೇ ರಂಗು ರಂಗಿನ ಬಣ್ಣಗಳ ಸೂಚನೆಯಲ್ಲವೇ! ಹಾಗೇ ನೃತ್ಯ, ನೃತ್ಯ ನಾಟಕಗಳಲ್ಲಿಯೂ ಬಣ್ಣಗಳ ಬಳಕೆ ಅನಿವಾರ್ಯ. ಇಂದಿನ ಬ್ಯೂಟಿಪಾರ್ಲರುಗಳು, ಕನಿಷ್ಠ ತುಟಿರಂಗುಗಳ ಮೂಲಕ ಬಹಳಷ್ಟು ಮಹಿಳೆಯರಲ್ಲಿ, ಬಣ್ಣ ಹಚ್ಚಿದ ಕೂದಲಿನ ಮೂಲಕ ಅನೇಕ ಪುರುಷರಲ್ಲೂ ಅಸ್ತಿತ್ವದಲ್ಲಿವೆ.

ಬಹಳಕಾಲ ನೈಸರ್ಗಿಕವಾಗಿ ದೊರಕುವ ವಿವಿಧ ಬಣ್ಣದ ಮಣ್ಣುಗಳನ್ನು ಬಣ್ಣಗಳ ಮೂಲವಾಗಿ ಬಳಸಲಾಯಿತು. ಬಿಳಿ ಮಣ್ಣು, ಕೆಮ್ಮಣ್ಣು, ಕಪ್ಪು ಮಣ್ಣು, ಕಬ್ಬಿಣ, ಮ್ಯಾಂಗನೀಸ್ ಮೊದಲಾದ ಲೋಹಗಳ ಆಕ್ಸೈಡ್‌ಉಳ್ಳ ಬಂಡೆಗಳ ಚೂರು, ಮುಂತಾದವು ಖನಿಜ ಮೂಲದ ರಾಸಾಯನಿಕಗಳಾಗಿದ್ದವು. ಅರಿಷಿಣ, ಕುಂಕುಮ, ಕಾಡಿಗೆ, ಮೆಹಂದಿ, ನೀಲಿ ಸಸ್ಯ (indigo), ವಿವಿಧ ಬಣ್ಣದ ಎಲೆಗಳು, ಇದ್ದಿಲಿನ ಚೂರು, ಎಣ್ಣೆ ದೀಪಗಳಿಂದ ಬರುವ ಕಿಟ್ಟ ಮುಂತಾದ ಸಸ್ಯ ಮೂಲಗಳನ್ನು ಬಳಸಿದರು.

ಇದೇ ರೀತಿಯ ಬಣ್ಣಗಳಿಂದ ಅವರು ವಾಸಿಸುತ್ತಿದ್ದ ಬೆಟ್ಟ, ಗುಡ್ಡಗಳು, ಗುಹೆಗಳ ಬಂಡೆಗಳ ಮೇಲೆ ತಮ್ಮ ಅಂದಿನ ಬೇಟೆಗಾರ ಬದುಕಿನ ದೃಶ್ಯಗಳನ್ನು, ಅವರ ನೃತ್ಯಗಳನ್ನು, ಆಚರಣೆಗಳನ್ನು ಚಿತ್ರಿಸಲಾಗಿದೆ.

ಈ ರೀತಿಯ ಚಿತ್ರಗಳು ವಿಶ್ವದಲ್ಲಿ ಕ್ರಿಪೂ ನಲವತ್ತು ಸಾವಿರ ವರ್ಷಗಳ ಹಿಂದೆಯೇ ಕಂಡಿವೆ. ಭಾರತದಲ್ಲಿ ಮಧ್ಯಪ್ರದೇಶದಲ್ಲಿ ಭೀಮ್‌ಬೇಟ್ಕಾದಲ್ಲಿ ಕ್ರಿಪೂ ಹತ್ತು ಸಾವಿರ ವರ್ಷಗಳ ಹಿಂದೆ ರಚಿಸಲಾದ ಗುಹಾಚಿತ್ರಗಳನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿಯೂ ಬಳ್ಳಾರಿ ಬಳಿಯ ಹಿರೇಗುಡ್ಡ, ಗಂಗಾವತಿ ತಾಲೂಕಿನ ಹಿರೇಬೆಣಕಲ್, ಲಿಂಗಸುಗೂರಿನ ಬಳಿಯ ಮಸ್ಕಿ, ಪಿಕಲಿಹಾಳ್ ಬದಾಮಿ ಮೊದಲಾದ ಅನೇಕ ಗುಡ್ಡಗಳಲ್ಲಿ ಗುರುತಿಸಲಾಗಿದೆ.

ಮುಂದೆ ಆದಿಮಹಿಳೆಯರು ಮಡಕೆಗಳನ್ನು ತಯಾರಿಸಲು ಕಲಿತ ನಂತರ ಬಣ್ಣಗಳನ್ನು ಬಳಸಿ ಮಡಕೆಗಳ ಮೇಲೆ ವಿವಿಧ ಚಿಹ್ನೆಗಳನ್ನು, ಚಿತ್ರಗಳನ್ನು ಚಿತ್ರಿಸಿದರು.

ಈ ಕಲೆ ಆದಿವಾಸಿಗಳ ಗುಡಿಸಲುಗಳ ಮೇಲೆ ಮಹಾರಾಷ್ಟ್ರದ ವಾರಲೀ ಮೊದಲಾದ ಹಲವು ಪ್ರಾದೇಶಿಕ ವೈಶಿಷ್ಟ್ಯತೆಯುಳ್ಳ ವರ್ಣಚಿತ್ರ ಕಲಾ ಪದ್ಧತಿಗಳಾಗಿ ಪ್ರಸಿದ್ಧವಾಗಿವೆ.

ಈ ಕಲೆ ಮತ್ತಷ್ಟು ಉತ್ತಮಗೊಂಡು ಅಜಂತಾ, ಎಲ್ಲೋರ, ಬದಾಮಿ ಗುಹೆಗಳ ಹಲವು ದೇವಾಲಯಗಳ ವಿಶ್ವಪ್ರಸಿದ್ಧ ಭಿತ್ತಿಚಿತ್ರಗಳಾಗಿ ಬೆಳೆಯಿತು. ಬಟ್ಟೆಯ ಮೇಲೆ, ಹಲಗೆಗಳ ಮೇಲೆ ಫಲಕಗಳಾಗಿ ತೂಗು ಹಾಕುವ ಕಲೆಯಾಯಿತು. ವಿವಿಧ ಬಣ್ಣಗಳನ್ನು ಬೆರೆಸುವಿಕೆ, ಕ್ಷಾರಗಳ ಜೊತೆ ಬೆರೆತಾಗ ಬಣ್ಣಗಳಲ್ಲಿ ಆಗುವ ಬದಲಾವಣೆ ಇವುಗಳ ಬಗ್ಗೆ ತಿಳುವಳಿಕೆಯನ್ನು ಉಪಯೋಗಿಸಿಕೊಳ್ಳಲಾಯಿತು.
ಹೀಗೆ‌ ಧಾರ್ಮಿಕ ಉಪಯೋಗ ಬೆಳೆದಾಗ ವಿಷ್ಣು ಧರ್ಮೋತ್ತರ ಪುರಾಣದಲ್ಲಿ, ಮಾನಸೋಲ್ಲಾಸ, ಸಮರಾಂಗಣ ಸೂತ್ರದಾರಗಳಲ್ಲಿ ಚಿತ್ರರಚನೆಗೆ ಮೊದಲು ಮಾಡಿಕೊಳ್ಳುವ ಗೋಡೆಗಳ ಮೇಲ್ಮೈ ಸಿದ್ಧಗೊಳಿಸುವುದು, ವಿನ್ಯಾಸಗಳನ್ನು ಮಾಡಿಕೊಳ್ಳುವುದು, ಅವುಗಳಿಗೆ ಬಣ್ಣಗಳನ್ನು ತುಂಬುವುದು  ಮೊದಲಾದ ಹಂತಗಳನ್ನು ವಿವರಿಸಲಾಗಿದೆ.  ಧಾರ್ಮಿಕ ಉಪಯೋಗ ಮಾತ್ರವೇ ಚಿತ್ರಗಳು ಅಲ್ಲದೆ ಸಭಾಭವನಗಳು, ಅರಮನೆಗಳ ಗೋಡೆಗಳನ್ನೂ ಅಲಂಕರಿಸಿದವು.

ಈ ರೀತಿ ಪಡೆದ ಕೌಶಲದಿಂದ ಬಟ್ಟೆಗಳ ತಯಾರಿಕೆ ಆರಂಭವಾದ ಮೇಲೆ ನೂಲುಗಳಿಗೆ ಬಣ್ಣ ಹಾಕಲು, ಬಟ್ಟೆಯಲ್ಲಿ ವಿವಿಧ ಬಣ್ಣಗಳ ವಿನ್ಯಾಸ ಮೂಡಿಸಲು ಸಾಧ್ಯವಾಯಿತು. ಬಣ್ಣಗಳ ರಾಸಾಯನಿಕ ಗುಣದ ಪ್ರಯೋಜನ ಪಡೆದು ಬಹು ವಿಧದ ಬಣ್ಣಗಳನ್ನೂ, ಅವುಗಳ ವಿವಿಧ ಛಾಯೆಗಳನ್ನೂ ಪಡೆಯುವಂತೆ ಈ ಕೌಶಲ್ಯ ವೃದ್ಧಿಯಾಯಿತು. ಹಲವು ಸಸ್ಯಗಳ ಮೂಲದಿಂದ ವಿವಿಧ ವರ್ಣಗಳನ್ನು ಪಡೆಯಲು ಸಾಧ್ಯವಾಯಿತು. ಹಾಗೆಯೇ ಸಸ್ಯ ಮೂಲದಿಂದ ಪಡೆದುಕೊಂಡ ಹಳದಿ ಬಣ್ಣವನ್ನು alum ಎಂಬ ರಾಸಾಯನಿಕದೊಡನೆ ಬೆರೆಸಿ ಕೆಂಪು ಬಣ್ಣವನ್ನು, ಕಬ್ಬಿಣದ ಆಕ್ಸೈಡ್‌ನೊಂದಿಗೆ ಬೆರೆಸಿ  ನೇರಳೆಯಿಂದ ಕಪ್ಪು ಬಣ್ಣದವರೆಗೆ ವಿವಿಧ ಛಾಯೆಗಳನ್ನು ಪಡೆಯುತ್ತಿದ್ದರು. ಭಾರತೀಯ ರೇಷ್ಮೆ ಗಿಡದ (indian mulberry) ತೊಗಟೆಯಿಂದ ಪಡೆದ ಬಣ್ಣ ವಿವಿಧ ಕ್ಷಾರಗಳೊಂದಿಗೆ ಬೆರೆಸಿ ಹಳದಿ ಬಣ್ಣದ ವಿವಿಧ ಛಾಯೆಗಳನ್ನು ಪಡೆಯಲಾಗಿದೆ. ಹಲಸಿನ, ಮಾವಿನ ಮತ್ತಿತರ ಮರಗಳಿಂದಲೂ ಬಟ್ಟೆಗಳಿಗೆ ಹಾಕುವ ವಿವಿಧ ಬಣ್ಣಗಳನ್ನು ಪಡೆಯುತ್ತಿದ್ದರು.

ರಸಾಯನಶಾಸ್ತ್ರದ ಬೆಳವಣಿಗೆಯ ವಿವಿಧ ಹಂತಗಳು:
ಭಾರತದಲ್ಲಿ ರಸಾಯನಶಾಸ್ತ್ರದ ಹಾಗೂ ಅದರ ಪ್ರಾಚೀನ ಇತಿಹಾಸದ ಆದ್ಯಸಂಶೋಧಕರಾದ ಆಚಾರ್ಯ ಫಫುಲ್ಲಚಂದ್ರ ರೇಯವರು ಪ್ರಾಚೀನ ಭಾರತದಲ್ಲಿನ ರಸಾಯನಶಾಸ್ತ್ರದ ಬೆಳವಣಿಗೆಯನ್ನು ಐದು ಹಂತಗಳಲ್ಲಿ ವಿವರಿಸಿದ್ದಾರೆ.

1. ಸಿಂಧೂ ನದಿ ಬಯಲಿನ ನಾಗರಿಕತೆಯ ಮೊದಲು ಮತ್ತು ನಂತರ ವೇದಗಳ ಕಾಲದವರೆಗೆ
2. ವೇದಗಳ ಕಾಲ ಚರಕಸಂಹಿತೆಯಿಂದ ಕ್ರಿ.ಶ.700ರವರೆಗೆ
3. ಕ್ರಿಶ.700ರಿಂದ 1100ರವರೆಗೆ ಸಂಕ್ರಮಣ ಕಾಲ
4. ತಾಂತ್ರಿಕ ಪದ್ಧತಿಯ ಅವಧಿ ಕ್ರಿಶ ಎಂಟನೆಯ ಶತಮಾನದಿಂದ 1100
5. ರಸಾಯನಿಕ ಅವಧಿ 1300 ರಿಂದ 1600.

ಸಿಂಧೂ ನಾಗರಿಕತೆಯ ಕಾಲದಲ್ಲಿ ಸುಟ್ಟ ಮಡಕೆ, ಇಟ್ಟಿಗೆಗಳನ್ನು ಕಾಣುತ್ತೇವೆ. ಅದರ ಜೊತೆಗೆ ಕಟ್ಟಡ ಕಟ್ಟಲು ಗಾರೆ ತಯಾರಿಸಲು ಸುಟ್ಟ ಸುಣ್ಣ, ಜಿಪ್ಸಮ್, ಮೈಕಾ (ಕಾಗೆ ಬಂಗಾರ) ಮೊದಲಾದ ವಸ್ತುಗಳನ್ನು ಪ್ರಯೋಗಿಸಲಾಗಿದೆ ಎಂಬುದು ವಿಶೇಷ.

ಪಾನೀಯಗಳು:
ವೇದಗಳ ಕಾಲದಲ್ಲಿ ಸೋಮ ಎಂಬ ಪಾನೀಯವನ್ನು ತಯಾರಿಸುವ ವಿಧಾನಗಳ ಬಗ್ಗೆ ವಿವರಿಸಲಾಗಿದೆ. ಸುರೆ, ಮಧು ಮೊದಲಾದವುಗಳ ಬಗ್ಗೆ ಕೂಡಾ ಹೇಳಲಾಗಿದೆ. ಹುದುಗು ಬರಿಸುವ ಕಲೆಯ ತಿಳುವಳಿಕೆ ಪಡೆದಿದ್ದರೆಂದು ಇದರಿಂದ ಗೊತ್ತಾಗುತ್ತದೆ. ಮೊಸರು ಕೂಡಾ ಈ ಸಾಹಿತ್ಯಗಳಲ್ಲಿ ನಮೂದಾಗಿರುವುದು ಈ ಪ್ರಕ್ರಿಯೆಯ ತಿಳುವಳಿಕೆಯ ಭಾಗವಾಗಿದೆ.

ಈ ರೀತಿಯ ಪಾನೀಯಗಳ ತಯಾರಿಕೆಯನ್ನು ಕೌಟಲ್ಯನ ಅರ್ಥಶಾಸ್ತ್ರದಲ್ಲಿ ಮತ್ತಷ್ಟು ವಿವರಿಸಲಾಗಿದೆ. ಮೇದಕ (ಅಕ್ಕಿಕಾಳು+ಉದ್ದಿನ ಕಾಳು), ಪ್ರಸನ್ನ (ಅಕ್ಕಿಹಿಟ್ಟು, ಹಣ್ಣುಗಳು, ಒಂದು ವಿಶಿಷ್ಟ ಮರದ ತೊಗಟೆ), ಆಸವ (ಮರಸೇಬು ಮತ್ತು ಜೇನು), ಮೈರೇಯ ಬೆಲ್ಲ ಮತ್ತು ಮೇಷ ಶೃಂಗಿ, ಮಧು (ದ್ರಾಕ್ಷಾರಸ), ಮಹಾಸುರಾ (ಮಾವಿನ ಹಣ್ಣು ಮತ್ತಿತರ ಸೇರ್ಪಡೆಗಳಿಂದ) ಮೊದಲಾದ ಮದ್ಯಗಳ ಉಲ್ಲೇಖ ಮಾಡಲಾಗಿದೆ. ಈ ಸಂದರ್ಭದಲ್ಲಿ ಹುದುಗು ಬರಿಸುವ ಕಿಣ್ವಗಳ ಬಗ್ಗೆಯೂ ನಮೂದಾಗಿದೆ. ಇದು ಗಮನಾರ್ಹ ಅಂಶ.

ಗಾಜಿನ ತಯಾರಿಕೆ:
ಕ್ರಿಸ್ತಪೂರ್ವದ ಮೊದಲ ಸಾವಿರ ವರ್ಷಗಳ ಹಿಂದೆ ಗಾಜು ಆ ಕಾಲದ ಉತ್ಖನನಗಳಲ್ಲಿ ಕಂಡಿದೆ. ಮುಂದಿನ ಶತಮಾನಗಳಲ್ಲಿ  ಕರ್ನಾಟಕದ ಬ್ರಹ್ಮಗಿರಿಯೂ ಸೇರಿದಂತೆ 30 ಸ್ಥಳಗಳ ಉತ್ಖನನಗಳಲ್ಲಿ ಗಾಜಿನವಸ್ತುಗಳು ಸಿಕ್ಕಿವೆ.
ಇವುಗಳಲ್ಲಿ ವಿವಿಧ ಬಣ್ಣಗಳ ಗಾಜಿನ ಮಣಿಗಳು, ಬಳೆಗಳು, ಕಿವಿಯ ಆಭರಣಗಳು, ಗಾಜಿನ ಪಾತ್ರೆಗಳು ಕಂಡು ಬಂದಿವೆ. ಈ ಪಾತ್ರೆಗಳು ನೀಲಿ, ಹಸಿರು ಬಣ್ಣದ ಗಾಜು, ಚಿನ್ನದ ಗೆರೆಗಳನ್ನು ಕೂಡಿಸಿದವು ಕಂಡು ಬಂದಿವೆ.

ಗಾಜಿನ ತಯಾರಿಕೆ ಬಹಳ ತಾಂತ್ರಿಕ ತಿಳುವಳಿಕೆಯನ್ನು ಬಯಸುವಂತಹುದು. ಶಾಖವನ್ನು ನಿಯಂತ್ರಿಸುತ್ತಾ ತಣ್ಣಗಾಗಿಸುವುದು, ಅತಿಶೈತ್ಯೀಕರಿಸುವುದು, ಅಚ್ಚಿಗೆ ಹಾಕುವುದು, ಚಿನ್ನದ ಗೆರೆಗಳನ್ನು ಸೇರಿಸುವುದು, ಬೇರೆ ಬೇರೆ ಬಣ್ಣಗಳ ಗಾಜನ್ನು ಪಡೆಯಲು ಬೇರೆ ಬೇರೆ ರಾಸಾಯನಿಕಗಳುಳ್ಳ ಮಣ್ಣನ್ನು ಆಯ್ದು ಬೆರೆಸುವುದು… ಇಂತಹ ಸಂಕೀರ್ಣ ಕ್ರಿಯೆಗಳಲ್ಲಿ ಅಂದಿನ ಸಮಯದಲ್ಲಿಯೇ ಪರಿಣತಿ ಪಡೆದಿದ್ದರು ಎಂಬುದನ್ನು ಇದು ಸೂಚಿಸುತ್ತದೆ.

ಸುಗಂಧದ್ರವ್ಯಗಳು:
ಹೂವಿನ‌ ಬಣ್ಣಗಳಂತೆಯೇ ಅವುಗಳ ಸುಗಂಧ ಕೂಡಾ ಮಾನವರನ್ನು ಆಕರ್ಷಿಸಿತು. ಹೂಗಳನ್ನು ದೇವರಿಗೆ ಅರ್ಪಿಸಿ ಪೂಜೆ ಮಾಡುವಂತೆಯೇ ಹೂಗಳನ್ನು ತಾವೂ ಧರಿಸಿ ಅವುಗಳ ಸುಗಂಧದ ಪ್ರಯೋಜನ ಪಡೆದರು. ಅದರಲ್ಲಿ ಹೂವುಗಳನ್ನು, ಎಲೆಗಳನ್ನು ನೀರಿನಲ್ಲಿ ಹಾಕಿ, ಹಲವೊಮ್ಮೆ ಅಂತಹ ನೀರನ್ನು ಕಾಯಿಸಿ ಆ ಸುಗಂಧದ ನೀರಿನಲ್ಲಿ ಮೀಯುವುದು ವೇದಕಾಲದ ಶ್ರೀಮಂತರ ಮನೆಗಳಲ್ಲಿ ರೂಢಿಯಲ್ಲಿತ್ತು.

ಬೌದ್ಧ ಸಾಹಿತ್ಯದಲ್ಲಿಯೂ ಸುಗಂಧದ್ರವ್ಯಗಳ ಉಪಯೋಗದ ಪ್ರಸ್ತಾಪಗಳಿವೆ. ಕ್ರಿಪೂ ಆರನೆಯ ಶತಮಾನದ ಕಾಲದಲ್ಲಿಯೇ ಅಂದಿನ ನಗರಿಕರಣದ ಬೆಳವಣಿಗೆಯ ಸಮಯದಲ್ಲಿ ಸುಗಂಧದ್ರವ್ಯಗಳ ವ್ಯಾಪಾರವೂ ಹೆಚ್ಚಾಯಿತು.

ಚರಕಸಂಹಿತೆ, ಶುಶ್ರುತಸಂಹಿತೆಗಳೂ ಕೂಡಾ ಸುಗಂಧದ್ರವ್ಯಗಳಿಂದ ಉಂಟಾಗುವ ಉಲ್ಲಾಸಕರ ಮನಸ್ಥಿತಿಯನ್ನು ಉಲ್ಲೇಖಿಸಿವೆ. ಸಲಹೆಗಳನ್ನೂ ನೀಡಿವೆ. ಅರ್ಥಶಾಸ್ತ್ರದಲ್ಲಿಯೂ ಇವುಗಳ ವ್ಯಾಪಕ ಬಳಕೆಯ ಪ್ರಸ್ತಾಪ ಇದೆ. ಕಾಮಸೂತ್ರದಲ್ಲಂತೂ (ಆರನೇ ಶತಮಾನ) ಸುಗಂಧಗಳ ಪ್ರಸ್ತಾಪ ಇರಲೇಬೇಕಲ್ಲ. ಸುಗಂಧದಎಣ್ಣೆ, ಬಟ್ಟೆಗಳಿಗೆ ಸುಗಂಧದ ಹೊಗೆ ತೋರಿಸುವುದು ಇವುಗಳಿಂದ ಹೆಣ್ಣುಗಳನ್ನು ಸೆಳೆಯುವುದು ಇತ್ಯಾದಿಗಳ ಪ್ರಸ್ತಾಪ ಅದರಲ್ಲಿದೆ.

ಪ್ರಸಿದ್ಧ ಗಣಿತ, ಖಗೋಳಶಾಸ್ತ್ರಜ್ಞ ವರಾಹಮಿಹಿರನ ಬೃಹತ್‌ಸಂಹಿತೆ ಹಲವು ವಿಷಯಗಳ ಆಗರ. ಅದರ 17ನೇ ಅಧ್ಯಾಯದಲ್ಲಿ 40 ಸಸ್ಯಗಳು ಮತ್ತು ಸುಗಂಧವಸ್ತುಗಳನ್ನು ಪಟ್ಟಿ ಮಾಡಲಾಗಿದೆ. 16 ಮೂಲ ಸುಗಂಧದ ಘಟಕಗಳ ವಿವಿಧ ರೀತಿಯ ಸಂಯೋಜನೆಯಿಂದ 1820 ವಿವಿಧ ಸುಗಂಧದ್ರವ್ಯಗಳನ್ನು ತಯಾರಿಸುವ ಸಾಧ್ಯತೆಯನ್ನು ವಿವರಿಸುತ್ತದೆ.

ಧೂಪ ಮತ್ತು ಅಗರಬತ್ತಿಗಳು ಸುಗಂಧದ್ರವ್ಯಗಳ ಮತ್ತೊಂದು ವಿಭಾಗ. ಆದಿವಾಸಿಗಳ ಆಚರಣೆಗಳಿಂದ ದೇವಾಲಯಗಳವರೆಗೆ ಇವುಗಳನ್ನು ಬಳಸುತ್ತಾ ಬರಲಾಗಿದೆ. ಸಾಂಬ್ರಾಣಿ, ಅಗರು, ಕರ್ಪೂರಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಧಾರ್ಮಿಕ ಉಪಯೋಗದ ಕಾರಣವಾಗಿ ವಿಷ್ಣು ಧರ್ಮೋತ್ತರ ಪುರಾಣ, ವಾಮನ ಪುರಾಣ, ಕಾಲಿಕಾ ಪುರಾಣಗಳಲ್ಲಿ ಧೂಪ, ಅಗರುಬತ್ತಿಗಳ ವಿವಿಧ ರೂಪಗಳ ಬಗ್ಗೆ, ನಿರ್ದಿಷ್ಟ ಪೂಜೆಗಳ ಸಂದರ್ಭದಲ್ಲಿ ಅವುಗಳ ಉಪಯೋಗದ ಬಗ್ಗೆ ವಿವರಣೆಗಳಿವೆ.

ಈ ಅಂಶಗಳು ಸುಗಂಧದ್ರವ್ಯಗಳ ತಯಾರಿಕೆಯ ವಿವಿಧ ರಸಾಯನಿಕ ಪ್ರಕ್ರಿಯೆಗಳಲ್ಲಿ ಪ್ರಾಚೀನ ಭಾರತದಲ್ಲಿ ಪಡೆದಿದ್ದ ಕೌಶಲ್ಯವನ್ನು ಬಿಂಬಿಸುತ್ತವೆ. ಈ ಪರಿಣತಿ ಕಾಲಾನುಕಾಲಕ್ಕೆ ವೃದ್ಧಿಯಾಗುತ್ತಾ 12ನೇ ಶತಮಾನದ ವೇಳೆಗೆ ಗಂಗಾಧರ ಎಂಬುವರು ಗಂಧಸಾರ ಎಂಬ ಗ್ರಂಥವನ್ನೇ ರಚಿಸಲು ಕಾರಣವಾಗಿದೆ. ಅದರಲ್ಲಿ ಸುಗಂಧದ್ರವ್ಯಗಳ ತಯಾರಿಕೆಯಲ್ಲಿ ಶೋಧನ (ಶುದ್ದೀಕರಣ ), ವಿಸರ್ಜನ, ವಿರೇಚನ (ಅದರ ಸಾರವನ್ನು ಹೊರತೆಗೆಯುವುದು), ಪಾಕ (ಪಕ್ವಗೊಳಿಸುವುದು), ಧೂಪನ (ಪರಿಮಳದ ಹೊಗೆ ಹಾಕುವುದು), ವಾಸನ ಎಂಬ ಆರು ಪ್ರಕ್ರಿಯೆಗಳನ್ನು ಬಳಸುತ್ತಿದ್ದರು ಎಂದು;  ಮುಚ್ಚಿದ ಪಾತ್ರೆಯಲ್ಲಿ ಸುಗಂಧದ್ರವ್ಯದ ಮೂಲ ವಸ್ತುವನ್ನಿಟ್ಟು ಬೆಂಕಿಯನ್ನು ಮೇಲಿನಿಂದ ಹಾಕಿ ಕಾಯಿಸುವ ಗರ್ತಪಾಕ ವಿಧಾನ, ಬಿದಿರಿನಕೊಳವೆಯಲ್ಲಿಟ್ಟು ನೀರಿನ ಹಬೆಯಿಂದ ಅಥವಾ ಬಹಳ ಕಡಿಮೆ ಝಳದ ಬೆಂಕಿಯಲ್ಲಿ ಸೌಮ್ಯವಾಗಿ ಕಾಯಿಸುವ ವೇಣುಪಾಕ ಮೊದಲಾದ ವಿಧಾನಗಳನ್ನು ವಿವರಿಸಲಾಗಿದೆ.

ಈ ಗ್ರಂಥದಲ್ಲಿ ಸುವಾಸನಾ ವಸ್ತುಗಳನ್ನು ಸಸ್ಯಗಳ ಯಾವ ಭಾಗದಿಂದ ಪಡೆಯಲಾಗುತ್ತದೆ ಎಂಬ ಆಧಾರದ ಮೇಲೆ, ಎಲೆ, ಹೂವು, ಹಣ್ಣು, ತೊಗಟೆ, ಕಟ್ಟಿಗೆ, ಬೇರು, ಮರಗಿಡಗಳ ಸ್ರಾವಗಳು ಎಂಬ 8 ವರ್ಗಗಳನ್ನಾಗಿ ವಿಂಗಡಿಸಲಾಗಿದೆ ಎಂಬುದು ಗಮನಾರ್ಹ.

ಇನ್ನು ಭಾರತದಲ್ಲಿ ಮೊಘಲರ ಆಳ್ವಿಕೆಯಲ್ಲಿ ಸುಗಂಧದ್ರವ್ಯಗಳ ಉಪಯೋಗ ಮತ್ತು ತಯಾರಿಕೆ ಮತ್ತಷ್ಟು ವೇಗವಾಗಿ ಬೆಳೆಯಿತು. ಅರಬ್ ದೇಶಗಳಿಂದ ಸುಗಂಧದ್ರವ್ಯಗಳ ಆಮದು ಮಾತ್ರವಲ್ಲ ಸುಗಂಧದ್ರವ್ಯಗಳ ಮೂಲವಾದ ಹಲವು ಮರಗಿಡಗಳನ್ನೂ ತಂದು ಅವರ ಪ್ರಸಿದ್ಧ ಮೊಘಲ್ ಗಾರ್ಡನ್‌ಗಳಲ್ಲಿ ಬೆಳೆಸಿದರು. ಅವುಗಳಿಂದ ಸುಗಂಧದ್ರವ್ಯಗಳನ್ನು ತಯಾರಿಸುವ ಹೊಸ ವಿಧಾನಗಳನ್ನೂ ಬಳಕೆಗೆ ತಂದರು.

ಅವುಗಳಲ್ಲಿ ಬಹಳ ಪ್ರಸಿದ್ಧವಾದುದು ಗುಲಾಬಿಯನ್ನು ಬೆಳೆದದ್ದು, ಅದರಿಂದ ಸುಗಂಧದ್ರವ್ಯಗಳ ತಯಾರಿಕೆ. ಗುಲಾಬಿಯ ಮೂಲ ದೇಶಗಳಾದ ಪರ್ಷಿಯಾ, ಈಜಿಪ್ಟ್, ರೋಮ್‌ಗಳ ಜೊತೆ ಸಾವಿರಾರು ವರ್ಷಗಳಿಂದ ವಾಣಿಜ್ಯ ಮತ್ತಿತರ ಸಂಪರ್ಕಗಳಿದ್ದರೂ ಪ್ರಾಚೀನ ವೈದಿಕ, ಬೌದ್ಧ ಮೊದಲಾದ ಸಾಹಿತ್ಯಗಳಲ್ಲಿ ಗುಲಾಬಿಯ ಪ್ರಸ್ತಾಪವಿಲ್ಲ. ಆದರೆ ಮೊಘಲರ ಕಾಲದಿಂದೀಚೆಗೆ 400 ವರ್ಷಗಳಲ್ಲಿ ಗುಲಾಬಿಯ ಬೆಳೆ, ದೇವಾಲಯಗಳಲ್ಲಿ ಗುಲಾಬಿಯ ಹಾಗೂ ಅದರ ನೀರಿನ ಉಪಯೋಗ, ಅದಕ್ಕಾಗಿ ಗುಲಾಬಿಯ ಭಟ್ಟಿಗಳು ಮುಂತಾದವು ಸುಗಂಧದ್ರವ್ಯಗಳ ತಂತ್ರಜ್ಞಾನ ಮತ್ತಷ್ಟು ವಿಸ್ತಾರಗೊಂಡ‌ ಬಗೆಯನ್ನು ತೋರಿಸುತ್ತದೆ.

ಜಹಾಂಗೀರ್ ಬಾದಶಹನನ್ನು ಮದುವೆಯಾದ ನೂರ್‌ಜಹಾನ್ ಆ ಮದುವೆಯ ದಿನ ಹರಿದ ಗುಲಾಬಿಯ ನೀರಿನ ಹೊಳೆಯಲ್ಲಿ ತೇಲುತ್ತಿದ್ದ‌ ಗುಲಾಬಿಯ ಸುಗಂಧದಸಾರವನ್ನು ಗಮನಿಸಿ ಕಲೆ ಹಾಕಿದರು ಎಂದೂ, ಅದೇ ಇತ್ತರ್ ಇ ಜಹಾಂಗೀರಿ ಎಂಬ ಅತ್ತರಾಗಿ ಪ್ರಸಿದ್ಧವಾಯಿತೆಂದೂ ಒಂದು ಕತೆ ಇದೆ.

ವೈದ್ಯಕೀಯದಲ್ಲಿ ರಸಾಯನಶಾಸ್ತ್ರದ  ಔಷಧೀಯ ಉಪಯೋಗ, ತಾಂತ್ರಿಕ ರಸಸಿದ್ಧರ ಪ್ರಯೋಗಗಳು, ದೀಪಾವಳಿಯ ಬಾಣ ಬಿರುಸುಗಳು, ಪಟಾಕಿಗಳು, ಮದ್ದುಗುಂಡುಗಳು ಇತ್ಯಾದಿಗಳನ್ನು ಮರೆಯಲಾದೀತೇ!

‍ಲೇಖಕರು avadhi

June 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: