ಸದಾಶಿವ ಸೊರಟೂರು ಅಂಕಣ: ಪ್ರತಿನಿಧಿ

ಬಡವನ ಬನಿಯನ್ ಮೇಲಿನ ಅಸಹಾಯಕ ತೂತುಗಳಂತೆ, ಅಲ್ಲಲ್ಲಿ ಕಿತ್ತು ಹೋದ ರಸ್ತೆ. ಮಗು ಗೀಚಿದ ರೇಖೆಯಂತಿರುವ ಆ ರಸ್ತೆ ಎಲ್ಲಿಂದಲೋ ಬಂದು ಊರಿನೊಳಕ್ಕೆ ನುಗ್ಗುತ್ತದೆ. ಬಹುಶಃ ಯಾವುದೋ ಬಳುಕಿನ ನಗರದಿಂದಲೇ ಬಂದಿರಬೇಕು. ಊರೊಳಗೆ ನುಗ್ಗಿ ಅಲ್ಲಿಂದ ಇನ್ನೆಲ್ಲಿಗೋ ಹೊರಟುಹೋಗುತ್ತದೆ. ಭೂಮಿ ಗುಂಡಾಗಿದೆ ಅನ್ನುವುದನ್ನು ಹೆಚ್ಚಿನ ಬಾರಿ ರಸ್ತೆಗಳೇ ಸಾಬೀತುಪಡಿಸುತ್ತವೆ. ಊರು ಕಲ್ಲಹಳ್ಳಿಯಿಂದ ಅದೇ ರಸ್ತೆಯಲ್ಲಿ ಅರ್ಧ ಕಿಲೋಮೀಟರಿನಷ್ಟು ಹಿಂದೆ ಬಂದರೆ ಮರಗಳೊಳಗೆ ಬಚ್ಚಿಟ್ಟುಕೊಂಡ ಶಾಲೆ ಕಾಣಿಸುತ್ತದೆ. ಈಗೀಗ ನಾಗರಿಕ ಜಗತ್ತನ್ನು ಕಂಡರೆ ಸರ್ಕಾರಿ ಶಾಲೆಗಳಿಗೂ ಭಯ. ಕಾಂಪೌಂಡ್ ಇಲ್ಲದ ಶಾಲೆಗೆ ಯಾರೋ ಬೆಳೆಸಿ ಹೋದ ಹತ್ತಾರು ಮರಗಳೇ ಕಾವಲು. ಮರಗಳು ಶಾಲೆಯನ್ನು ಬಚ್ಚಿಟ್ಟಂತೆ ಕಾಣುತ್ತದೆ. ಮೊದಲೆಲ್ಲಾ ಕನ್ನಡ ಹೇಳ್ತಿದ್ದ ಶಾಲೆ ಈಗ ಇಂಗ್ಲಿಷ್ ಕಲಿಸಲು ಶುರುವಿಟ್ಟುಕೊಂಡಿದೆ. ಕನ್ನಡ ಶಾಲೆಗೆ ಇಂಗ್ಲಿಷ್ ತಂದಿದ್ದು ಅದೊಂದು ದೊಡ್ಡ ಹೋರಾಟದ ಕಥೆ ಬಿಡಿ. ಆ ಶಾಲೆಯಿಂದ ಎರಡು ಕಿಲೋಮೀಟರಿನಷ್ಟು ದೂರವಿರುವ ಠಾಕುಠೀಕು ಇಂಗ್ಲಿಷ್ ಖಾಸಗಿ ಶಾಲೆಯಿಂದ ಕೆಲವು ಮಕ್ಕಳು ಈಗ ಇಲ್ಲಿಗೆ ಬಂದು ಸೇರಿಕೊಂಡಿದ್ದಾರೆ. ಹನ್ನೆರಡಿದ್ದ ಮಕ್ಕಳ ಸಂಖ್ಯೆ ಇಪ್ಪತ್ತೈದಕ್ಕೆ ಬಂದಿದೆ. ಮೇಷ್ಟ್ರು ಮುಖದಲ್ಲಿ ಈಗ ಕಳೆಯಿದೆ.

ಮರಗಳ ನಡುವೆ ಬಲವಂತಕ್ಕೆ ಕಣ್ಣು ತೂರಿಸಿದರೆ ಮೂರೇ ಮೂರು ಕೋಣೆಗಳ ಶಾಲೆ ಕಾಣಿಸುತ್ತದೆ. ಕೊಠಡಿಗಳು ಒಟ್ಟಿಗೆ ಪೂರ್ವಕ್ಕೆ ಮುಖ ಮಾಡಿನಿಂತಿವೆ. ಮೆಟ್ಟಿಲ ಆಚೆಈಚೆ ಹೂವಿನ ಗಿಡಗಳು. ನಿತ್ಯ ಅರಳಿ ಮಕ್ಕಳನ್ನು ಸ್ವಾಗತಿಸುವ ಜವಾಬ್ದಾರಿ ಅವುಗಳಿಗೆ. ಮಕ್ಕಳು ಮತ್ತು ಹೂವು ಒಂದೇ ಜಾತಿಯಲ್ಲವೇ? ಈಗೀಗ ಸ್ಕೂಲಿಗೆ ಇಂಗ್ಲಿಷ್ ಬಂದಾಗಿನಿಂದ ಹೆಸರು ಕೂಡ ಬಂದಿದೆ. ಖಾಸಗಿ ಶಾಲೆಗಳಂತೆ ಇಲ್ಲೂ ಕೆಜಿಗಳನ್ನು ಆರಂಭಿಸಲಾಗಿದೆ. ಕೆಜಿಗೆ ಬಂದರೆ ಐದನೇ ಕ್ಲಾಸ್ ಮುಗಿಸಿಕೊಂಡೇ ಅಲ್ಲಿಂದ ಹೊರಡಬಹುದು. 

ಆಚೆ ಬಂದು ನಿಂತ ಮೇಷ್ಟ್ರಿಗೆ ರಸ್ತೆಯ ಪಕ್ಕದ ಮೋರಿ ಕಟ್ಟೆಯ ಮೇಲೆ  ಕೂತ ಮುದುಕ ಮತ್ತೆ ಕಾಣಿಸಿದ. ಶಾಲೆಯ ಮುಂದಿನ ಕಾಲುವೆಗೆ ಕಟ್ಟಿದ ಮೋರಿ ಅದು. ಸುಮಾರು ಎಪ್ಪತ್ತರ ವಯಸ್ಸಿನ ಮದುಕ. ಬೆಳೆದ ಗಡ್ಡ ಪೂರ್ತಿ ಬಿಳಿಯಾಗಿದೆ. ಆ ಶುಭ್ರ ಬಣ್ಣಕ್ಕೆ ಒಂದು ಆಳವಾದ ನಮ್ರತೆ. ಒಂದು ಬಿಳಿಯ ಜುಬ್ಬಾದಂತಹ ಅಂಗಿ ಅಷ್ಟೇ ಬಿಳಿಯ ಪಂಚೆ ಅವರ ಸುಕ್ಕು ಸುಕ್ಕಾದ ದೇಹ ಮುಚ್ಚಿವೆ. ಹೆಗಲ ಮೇಲೊಂದು ಟವಲ್ ತನ್ನ ಪಾಡಿಗೆ ತಾನಿತ್ತು. ಈ ನಡುವೆ ಮುಖಕ್ಷೌರ ಮಾಡಿಸಿದ ಕುರುಹುಗಳಿರಲಿಲ್ಲ. ಮುದುಕನ ಕಣ್ಣುಗಳು ಶಾಲೆಯ ಕಡೆಗೆ ನೆಟ್ಟಿದ್ದವು. ಅವುಗಳಲ್ಲಿ ಏನನ್ನೋ ಹುಡುಕುವ ಆರ್ತತೆಯಿತ್ತು. ಮುದುಕನ ನೋಟವನ್ನು ಯಾರಾದರೂ ತದೇಕಚಿತ್ತ ಗಮನಿಸಿದ್ದರೆ ಇದನ್ನೇ ಹೇಳುತ್ತಿದ್ದರೇನೊ! ಕತ್ತನ್ನು ಒಂಚೂರೂ ಅಲುಗಿಸದ ನೋಟವದು. ಆ ನೋಟದಲ್ಲಿ ಒಂದು ತಣ್ಣನೆಯ ಶಿಸ್ತು ಇತ್ತು. 

ಬಟ್ಟೆ ಕಳೆಕಳೆಯಾಗಿದ್ದರೂ ಮುದುಕನ ಮುಖ ಮಾತ್ರ ಮಾಸಿದಂತೆ ಕಾಣುತ್ತಿತ್ತು. ಎಷ್ಟೇ ತೊಳೆದರು ಹೋಗದ ಮಾಸಲು ಇರಬೇಕದು! ಕೆಲವು ಮಾಸಲುಗಳು ಮಾತ್ರ ಸೋಪಿಗೆ ಮಾತು ಕೇಳುತ್ತವೆ. ಇನ್ನು ಕೆಲವು ಕಾಲಕ್ಕೂ ಬಗ್ಗುವುದಿಲ್ಲ! ಇಡೀ ಮುಖವೇ ಬೇಸರದಿಂದ ರೂಪುಗೊಂಡಿರುವಷ್ಟು ಕಳಾಹೀನ. ಕಣ್ಣುಗಳು ಗುಳಿ ಬಿದ್ದಿವೆ. ಮುಖದ ಮೇಲೆ ಮೂಳೆಗಳದ್ದೆ ಪಾರುಪತ್ಯ. 

ಶಾಲೆಯೆಡೆಗೆ ಮುಖ ಮಾಡಿ ಕುಳಿತು ಬಿಡುವ ಈ ಮುದುಕನ ನಡೆಯನ್ನು ಕಂಡು ಮೇಷ್ಟ್ರು ನಿನ್ನೆಯಿಂದ ಗಂಭೀರವಾಗಿದ್ದರು. ಆಗಾಗ್ಗೆ ಮುದುಕ ಅದೇ ಜಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಮೇಷ್ಟ್ರು ಅಷ್ಟೊಂದು ದಾದು ಮಾಡಿರಲಿಲ್ಲ. ʻಯಾರೋ ಊರಿನವರು ಹೊತ್ತು ಕಳೆಯಲು ಬಂದು ಕೂತು ಹೋಗುವವರಿರಬೇಕುʼ ಅಂದುಕೊಂಡಿದ್ದರು. ಮುದುಕನ ಈ ನಡೆಯು ಹೊತ್ತು ಕಳೆಯುವಂತದಲ್ಲ, ಯಾವುದೋ ಉದ್ದೇಶದ್ದು ಅನ್ನುವ ಅನುಮಾನ ಶುರುವಾಗತೊಡಗಿತು. ಸುಮ್ಮನೆ ಆಚೆ ನಿಂತು ಬಹುಹೊತ್ತು ಮುದುಕನನ್ನು ನೋಡಿದ ಮೇಷ್ಟ್ರಿಗೆ ಏನೊಂದು ಕೂಡ ಅರ್ಥವಾಗಲಿಲ್ಲ. ತಲೆಯಲ್ಲಿ ನೂರಾರು ವಿಚಾರಗಳ  ಹರತಾಳ; ದ್ವಂದ್ವ. 

ಈ ಊರಲ್ಲಿ ಒಂದಷ್ಟು ಜನ ಗೊತ್ತಿದ್ದರೂ ಕೂಡ ಈ ಮುದುಕನನ್ನು ನೋಡಿದ ನೆನಪಿಲ್ಲ ಮೇಷ್ಟ್ರಿಗೆ. ಈ ದೊಡ್ಡ ಊರಲ್ಲಿ ಎಷ್ಟು ಜನರನ್ನು ತಾನೇ ನೆನಪಿಟ್ಟುಕೊಳ್ಳಲು ಸಾಧ್ಯ!? ಯಾರನ್ನಾದರೂ ವಿಚಾರಿಸಬಹುದಾ? ಸುಮ್ಮನೆ ವಿಚಾರಿಸಿ ಅದೆಲ್ಲಿಗೋ ಹೋಗಿ, ಇನ್ನೇನೋ ಅರ್ಥ ಕಟ್ಟಿಕೊಂಡು ಎಡವಟ್ಟಾಗಿ ಬಿಟ್ಟರೆ…? ಈ ವಿಚಾರದಲ್ಲಿ ದುಡುಕುವುದು ಯಾಕೋ ಸರಿಯಲ್ಲ ಎನಿಸಿತು. ಯೋಚನೆಗಳ ಮಧ್ಯೆಯೇ ಕ್ಲಾಸ್‌ರೂಂ ಹೊಕ್ಕರು. 

ಮುದುಕನೇನು ಅಲ್ಲಿಂದ ಕದಲಿಲ್ಲ. ಕದಲಿ ಎದ್ದು ಹೋಗಿ ಮಾಡಲು ಅವನಿಗೇನು ಕೆಲಸಗಳಿರಲಿಲ್ಲ. ವಯಸ್ಸಾದ ಮೇಲೆ ಒಂದರ್ಥದಲ್ಲಿ ಮನುಷ್ಯ ನಿರುದ್ಯೋಗಿಯೆ! ಅವನ ಗಮನವೆಲ್ಲಾ ಶಾಲೆಯ ಕಡೆಗಿತ್ತು. ರಸ್ತೆಯ ಮೇಲೆ ಅಲೆಯುವವರ ಬಗ್ಗೆ ಅವನಿಗೇನು ಕಾಳಜಿ ಇಲ್ಲ. “ಏನ್ ಸೀನಪ್ಪ ಯಾಕಿಲ್ಲಿ ಕೂತಿದ್ದಿ?” ಅಂತ ಕೇಳಿದವರೆಗಿಲ್ಲಾ ಬಲವಂತದ್ದ ಒಂದು ನಗು ಕೊಟ್ಟು ಕಳಿಸುತ್ತಿದ್ದ. ಮಾತುಗಳು ಖಾಲಿಯಾಗಿರಬೇಕು. ಮನುಷ್ಯ ನಿಗೂಢ; ಒಂದು ಅರ್ಥವಾಗದ ಭಾಷೆಯಂತೆ! 

ಕ್ಲಾಸ್‌ರೂಂಗೆ ಹೊಕ್ಕ ಮೇಷ್ಟ್ರಿಗೆ ಅಲ್ಲಿರಲಾಗದೇ ಒಂದತ್ತು ನಿಮಿಷದ ನಂತರ ಆಚೆ ಬಂದರು. ಸಣ್ಣ ಶಾಲೆಯ ಮೇಷ್ಟ್ರು ಬದುಕು ಏಕಪಾತ್ರಾಭಿನಯವೇ ಸರಿ. ಅವ್ನೇ ಹೆಡ್‌ಮಾಸ್ತರ್, ಅವ್ನೇ ಗಣಿತ ಮಾಸ್ತರ್, ಅವ್ನೇ ಕನ್ನಡ ಮೇಷ್ಟ್ರು, ಅಂಗಳಕ್ಕಿಳಿದು ಸೀಟಿ ಊದಿದರೆ ಅವ್ನೇ ಆಟದ ಮೇಷ್ಟ್ರು. ಇಂತಿಪ್ಪ ಮೇಷ್ಟ್ರು ಮತ್ತೆ ಮತ್ತೆ ಮುದುಕನ ಕಡೆ ನೋಡಿದರು. ಮುದುಕನದು ಅದೇ ನೋಟ; ಬದಲಾಗದ್ದು! ಸುಮಾರು ಒಂದು ವಾರದಿಂದ ಮುದುಕ ಹೀಗೆಯೇ ಕೂತು ಕಾಯುತ್ತಿದ್ದಾನೆ.

ಕಾಯುತ್ತಿದ್ದಾನೋ ಯಾವುದಕ್ಕಾದರೂ ಹೊಂಚು ಹಾಕುತ್ತಿದ್ದಾನೋ ಅಥವಾ ಇಳಿವಯಸ್ಸಿಗೆ ಭಾರವಾದ ಹೊತ್ತನ್ನು ಅಲ್ಲೇ ಕೂತು ಕಳೆಯುತ್ತಾನೋ…? ಎಲ್ಲವೂ ವಿಚಿತ್ರ ಎನಿಸುತ್ತಿತ್ತು. ʻಯಾರಾದರೂ ಆಗಲಿ, ಏನಾದರೂ ಆಗಲಿ ತೆಗೆ ನಂಗೇನು?ʼ ಅಂದುಕೊಂಡು ದಡಬಡ ಇನ್ನೊಂದು ಕ್ಲಾಸ್‌ರೂಂನೊಳಗೆ ನಡೆದು ಹೋದರು. ಅವರ ಮನಸ್ಸಿನಲ್ಲಿ ಇದ್ದಕ್ಕಿದ್ದಂತೆ ಯೋಚನೆಯೊಂದು ಮೂಡಿತು. ಮಕ್ಕಳ ಕಳ್ಳ ಇರಬಹುದಾ? ಇತ್ತೀಚಿಗೆ ಪತ್ರಿಕೆಯಲ್ಲಿ, ಟಿವಿಯಲ್ಲಿ ಮಕ್ಕಳನ್ನು ಕದ್ದೊಯ್ದು ಕೊಲ್ಲುತ್ತಿರುವ ಸುದ್ದಿಗಳನ್ನು ಓದಿಕೊಂಡಿದ್ದ ಮೇಷ್ಟ್ರಿಗೆ ಹೀಗೆ ಅನಿಸಿತು. ನಿಜಕ್ಕೂ ಮುದುಕ ಹಾಗೆ ಕಾಣಿಸುತ್ತಾನಾ? ತನ್ನ ಯೋಚನೆ ಯಾಕೋ ಅತಿಯಾಯ್ತು ಅನಿಸಿ ಸುಮ್ಮನಾದ.

ನಡುಮಧ್ಯಾಹ್ನದ ಹೊತ್ತಿಗೆ ಸೂರ್ಯ ಮಕ್ಕಳ ಹೊಟ್ಟೆಯಲ್ಲಿ ತಾಳ ಬಾರಿಸಿದ. ಆ ಸದ್ದು ಶಾಲೆಯ ಮುಂದಿನ ಗಂಟೆಗೂ ಕೇಳಿ ಅದು ದನಿಗೂಡಿಸಿತು. ಹಕ್ಕಿಗಳು ಗೂಡಿನಿಂದ ಕದಲಿದಂತೆ ಮಕ್ಕಳು ಆಚೆ ಬಂದರು. ಹಸಿವು ಕೂಡ ಗೊತ್ತಾಗದ ನಗು ಜಾರಿಯಲ್ಲಿತ್ತು. ಮಕ್ಕಳು ಶಾಲೆಯ ಕಟ್ಟೆ ಹಿಡಿದು ಸಾಲುಗಟ್ಟಿ ಕೂತರು. ಹುಡುಗರ ಬಳಿ ಬರೋಬ್ಬರಿ ಮಾತುಗಳು. ಅವರ ಬಾಯಲ್ಲಿ ಹರಳು ಚಟಪಟ. ಆಚೆ ಬಂದ ಮೇಷ್ಟ್ರು ಒಮ್ಮೆ ಗದರಿಸಿ ಮತ್ತೆ ರಸ್ತೆ ಕಡೆ ನೋಡಿದರು. ಮುದುಕ ಕೂತಿದ್ದಾನೆ; ಅದೇ ನೋಟವನ್ನು ಅಸ್ತಿತ್ವದಲ್ಲಿಟ್ಟಿದ್ದಾನೆ. ಆತ ಮೇಷ್ಟ್ರು ಪಾಲಿಗೆ ಒಂದು ಒಗಟಾಗಿ ಹೋದ. ʻನಿನಗೇನು ಹುಚ್ಚು? ಯಾರೋ ಅವರ ಪಾಡಿಗೆ ಏನಕ್ಕೋ ಕೂತಿರುವಾಗ ನಿನ್ನದೇನು ವಿಚಿತ್ರ ತಲಹರಟೆ?ʼ ಅಂತ ಅವನೊಳಗಿನ ಅವನೇ ಹೇಳಿದಂತಾಯ್ತು. ಏನನ್ನೋ ಗೊಣಗುತ್ತಾ ಆಫೀಸ್‌ರೂಂನ ಕಡೆ ನಡೆದರು, ಮುದುಕನ ನೋಟದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಂತೆ!

ಹುಡುಗರು ಊಟ ಮುಗಿಸಿ ಅಂಗಳಕ್ಕಿಳಿದರು. ಮರದ ನೆರಳ ಹಾಸಿನಲ್ಲಿ ಮಕ್ಕಳು ಆಡತೊಡಗಿದರು. ಊಟ ಮುಗಿಸಿ ಹೊರ ಬಂದು ಕೈ ತೊಳೆಯುತ್ತಾ ಅಂಗಳದ ಕಡೆ ನೋಡಿದ ಮೇಷ್ಟ್ರಿಗೆ ಒಮ್ಮೆಲೆ ಶಾಕ್ ಆದಂತಾಯಿತು. ಮುದುಕ ಅಂಗಳಕ್ಕೆ ಬಂದು ಮಕ್ಕಳ ಜೊತೆ ಮಾತನಾಡತೊಡಗಿದ್ದಾನೆ. ಬೆಳಗಿನಿಂದ ಮಾಡಿಕೊಂಡ ಅಷ್ಟು ಊಹೆಗಳಲ್ಲಿ ಯಾವುದೋ ಒಂದು ನಿಜವಾಗುವ ಲಕ್ಷಣ ತೋರುತ್ತಿದೆ. ತನ್ನ ಊಹೆಗಳಿಗೆ ಒಳಗೊಳಗೆ ಖುಷಿಯಾದರೂ ಸಂತೋಷಪಡಲಿಲ್ಲ. ಮುದುಕ ಏಕಾಏಕಿ ಮಕ್ಕಳ ಬಳಿ ಬರುವಂತದ್ದು ಏನಿತ್ತು? ನಮಗೆ ಬಂದು ಹೇಳಬಹುದಿತ್ತಲ್ಲ! ಮತ್ತಷ್ಟು ಯೋಚನೆಗಳ ಹೆರಿಗೆ. ತಕ್ಷಣಕ್ಕೆ ಬೆಲ್ ಬಾರಿಸಿ ಮಕ್ಕಳನ್ನು ಒಳಗೆ ಕರೆದರು. ಮುದುಕ ಅಂಗಳದಿಂದ ಹೊರಟ. ರಸ್ತೆ ಸೇರಿ ಅಲ್ಲಿಂದ ಊರೊಳಗೆ ಹೆಜ್ಜೆ ಹಾಕತೊಡಗಿದ. 

ಮುದುಕ ಮರೆಯಾಗುವವರೆಗೂ ನಿಂತು ನೋಡಿದರು ಮೇಷ್ಟ್ರು. ಒಂದೆರಡು ಬಾರಿ ತಿರುಗಿ ನೋಡಿ ಊರಿನ ತಿರುವಿನಲ್ಲಿ ಮರೆಯಾದರು. ಅವರ ಪ್ರತೀ ನಡಿಗೆ ಏನನ್ನೋ ಮಾತಾಡಿದಂತಿತ್ತು. ಬಹುಶಃ ಮೇಷ್ಟ್ರಿಗೆ ಅರ್ಥವಾಗುವಂತದ್ದಾಗಿರಲಿಲ್ಲ. ತರಗತಿಯಿಂದ ಬರುತ್ತಿದ್ದ ಮಕ್ಕಳ ಗಲಾಟೆ ಹೆಚ್ಚಾಗತೊಡಗಿತು. ಇದೀಗ ತಾನೇ ಊಟವಾದ್ದರಿಂದ ಮಕ್ಕಳ ಮಾಡುವ ಗಲಾಟೆಗೂ ಒಂದು ಗತ್ತು ಬಂದಿತ್ತು. ಮುದುಕ ಮರೆಯಾದ ಮೇಲೆ ನೋಡಲು ಏನೂ ಇಲ್ಲದೆ ಖಾಲಿ ಖಾಲಿ ಅನ್ನಿಸತೊಡಗಿತು. ಬೆಳಗ್ಗೆಯಿಂದ ನೋಡುವುದೇ ಒಂದು ಕೆಲಸ ಮಾಡಿಕೊಂಡಿದ್ದ ಮೇಷ್ಟ್ರಿಗೆ ಸಡನ್ ಆಗಿ ಏನನ್ನೋ ಕಳೆದುಕೊಂಡಂತಾಯ್ತು. 

ಗಲಾಟೆ ಮತ್ತಷ್ಟು ಹೆಚ್ಚಾದ್ದರಿಂದ ತರಗತಿ ಕಡೆ ಹೊರಟರು. “ಏ ಯಾರದು? ಮುದುಕನ ಜೊತೆ ಮಾತಾಡಿದ್ದು ಯಾರು?” ಅನ್ನುವ ಪ್ರಶ್ನೆಗಳನ್ನು ಮಕ್ಕಳ ಮುಂದಿಡಬೇಕೆಂದು ಒಳ ಹೋದರು. ಆದರೆ ಅವರೊಳಗೆ ಮೂಡುತ್ತಿದ್ದ ವಿಚಿತ್ರ ತಲ್ಲಣಗಳು ಕೇಳದಂತೆ ತಡೆದವು. 

ದಿನವೊಂದು ಹೀಗೆಯೇ ಕಳೆದು ಹೋಯಿತು. ಮರುದಿನವೂ ಎಲ್ಲವೂ ಹಿಂದಿನ ದಿನದಂತೆಯೇ! ಆದರೆ ಮುದುಕ ಮಕ್ಕಳ ಬಳಿ ಮಾತಿಗೆ ಬರಲಿಲ್ಲ. ಮಕ್ಕಳು ಊಟ ಮುಗಿಸಿ ಅಂಗಳದಲ್ಲಿ ಒಂದಷ್ಟು ಹೊತ್ತು ಆಟ ಆಡಿ ಒಳಗೆ ಬಂದ ಮೇಲೆ ಮುದುಕ ಅಲ್ಲಿ ಕಾಣಲಿಲ್ಲ. ಮೇಷ್ಟ್ರು ಕೂಡ ಹಿಂದಿನ ದಿನದಂತೆಯೇ ಯೋಚನೆಗಳ ಉಲ್ಕೆಯಲ್ಲಿ ಅಲ್ಲಲ್ಲಿ ಇಷ್ಟಿಷ್ಟೇ ಸುಟ್ಟು ಹೋದರು. 

ಮೂರನೇ ದಿನದ ಬೆಳಗು ಮೇಷ್ಟ್ರಲ್ಲಿ ಒಂದು ಗಟ್ಟಿನಿರ್ಧಾರವನ್ನು ಮೂಡಿಸಿತ್ತು. ಏನಾದರೂ ಆಗಲಿ ಆ ಮುದುಕನ ಬಗೆಗಿರುವ ಕುತೂಹಲಕ್ಕೆ ಇವತ್ತು ಮುಕ್ತಾಯ ಹಾಡಿಯೇ ತೀರಬೇಕೆಂದು ಶಾಲೆಗೆ ಬಂದರು.  ಬಂದವರೇ ರಸ್ತೆ ಬದಿಯ ಮೋರಿಯ ಕಡೆ ನೋಡಿದರು. ಮೋರಿ ಒಂಟಿಯಾಗಿತ್ತು, ಮುದುಕ ಇನ್ನೂ ಬಂದಿರಲಿಲ್ಲ. ಬರುವುದರ ಬಗ್ಗೆ ಮೋರಿಗೂ ಗ್ಯಾರಂಟಿ ಇರಲಿಲ್ಲ. ಇಲ್ಲಿ ಈ ಬದುಕಲ್ಲಿ ಯಾವುದಕ್ಕೂ ಗ್ಯಾರಂಟಿ ಇಲ್ಲ. ಮುದುಕ ಕಾಣಿಸಿದ ತಕ್ಷಣ ಅವರ ಬಳಿಗೆ ಬಂದು ಒಂದು ವಾರದಿಂದ ಸತತವಾಗಿ ಹುಟ್ಟಿಕೊಳ್ಳುತ್ತಿದ್ದ ಅನುಮಾನಗಳಿಗೆ ಇತಿಶ್ರೀ ಹಾಡಬೇಕು ಅಂದುಕೊಂಡ.

ಮಕ್ಕಳಿಗೆ ಮೊದಲ ಅವಧಿ ತೆಗೆದುಕೊಂಡರು. ಮನಸ್ಸೆಲ್ಲವೂ ಮೋರಿಯ ಬಳಿಯೇ ಸುಳಿಯುತ್ತಿತ್ತು. ಬಂದರೋ, ಇನ್ನೂ ಬಂದಿಲ್ಲವೋ,  ಬಂದು ಹೊರಟು ಹೋದರೋ ಎಂಬುದರಲ್ಲೇ ಹೊತ್ತು ನೂಕಿದರು. ಹೇಳುವ ಪಾಠವು ಹಿಡಿತಕ್ಕೆ ಸಿಗಲಿಲ್ಲ. ಅಷ್ಟರಲ್ಲಿ ಹೊರಗೆ ಒಂದು ಸಣ್ಣ ಸದ್ದಾಯಿತು. ಹೀಗೆ… ಬಾಗಿಲಿಗೆ ಬಂದು ಇಣುಕಿದರು. ಅರೆ, ಅದೇ ಮುದುಕ ಶಾಲೆಯ ಹತ್ತಿರವೇ ಬಂದಿದ್ದಾನೆ. ತನ್ನ ಮನಸ್ಸಿನಲ್ಲಿದ್ದ ದುಗುಡವೆಲ್ಲವು ಇವನಿಗೆ ತಿಳಿದು ಹೋಯಿತೇನೋ ಅಂದುಕೊಂಡೆ ಆಚೆ ಬಂದರು. ಮುದುಕ ಆಫೀಸ್ ಬಳಿಯೇ ನಿಂತಿದ್ದ. ಅವರ ಕೈಯಲ್ಲಿ ಕಪ್ಪನೆ ಪ್ಲಾಸ್ಟಿಕ್ ಕವರೊಂದಿತ್ತು. ಮೇಷ್ಟ್ರು  ಹುಡುಗರಿಗೆ ಸುಮ್ಮನಿರಲು ತಿಳಿಸಿ ಆಫೀಸ್ ಬಳಿ ನಡೆದರು. 

ಮೇಷ್ಟ್ರು ಮುಖವನ್ನು ನೋಡಿ ಮುದುಕ ಲಘುವಾಗಿ ನಕ್ಕ. ನಗು ಬಲವಂತದ್ದು ಎಂಬುದನ್ನು ನೋಡಿದ ಯಾರು ಬೇಕಾದರೂ ಹೇಳಬಹುದಿತ್ತು. “ಯಾರು ನೀವು? ಯಾರು ಬೇಕಿತ್ತು?” ಅನ್ನುತ್ತಾ ಮೇಷ್ಟು ತಮ್ಮ ಮೊದಲ ಕಾತರವನ್ನು ಹೊರ ಹಾಕಿದರು. “ನಾನು ಎರಡನೇ ಕ್ಲಾಸ್ ಪ್ರಜ್ವಲ್ ಇದ್ದಾನಲ್ಲ ಅವರ ತಾತ” ಅಂದರು. ಮಾತು ನಡಗುತ್ತಿತ್ತು. “ಅಯ್ಯೋ ಇಷ್ಟೇನಾ? ನಾನು ಏನೇನೋ ಅಂದುಕೊಂಡಿದ್ನಲ್ಲ” ಅನ್ನಿಸಿಬಿಟ್ಟಿತು ಮೇಷ್ಟ್ರಿಗೆ. “ಬನ್ನಿ, ಒಳಗೆ ಬನ್ನಿ” ಅಂತ ಮುದುಕನನ್ನು ಆಫೀಸ್‌ನೊಳಗೆ ಕರೆದೊಯ್ದು ಕುರ್ಚಿ ಮೇಲೆ ಕೂರಿಸಿ ತಾವು ಕೂಡ ಕೂತರು. ಮುದುಕನ ಮುಖದಲ್ಲಿ ತೀರ ಸಾಮಾನ್ಯವಾದ ಗೆಲುವು ಕೂಡ ಇರಲಿಲ್ಲ. ಏನನ್ನೋ ಯೋಚಿಸುವ ಕಣ್ಣುಗಳು. ಮಾತುಗಳು ಕೂಡ ಬಲವಂತಕ್ಕೆ ಬರುತ್ತಿದ್ದವು. “ಮೇಷ್ಟ್ರೇ ಈ ಕವರ್‌ನಲ್ಲಿ ಹಣ್ಣುಗಳಿವೆ. ನನ್ನ ಮೊಮ್ಮಗನಿಗೆ ಸಪೋಟ ಅಂದರೆ ತುಂಬಾ ಇಷ್ಟ. ಸ್ವಲ್ಪ ಅವನಿಗೆ ಕೊಡ್ತೀರಾ?” ಅಂತ ತುಂಬಾ ಬೇಡಿಕೊಳ್ಳುವ ರೀತಿಯಲ್ಲಿ ಕೇಳಿದರು. ಈಗಂತೂ ಮೇಷ್ಟ್ರಿಗೆ ಮುದುಕ ತುಂಬಾ ವಿಚಿತ್ರವಾಗಿ ಕಂಡ. “ಅಲ್ರೀ ತಾತ ಇದೇನು ಸ್ಕೂಲಿಗೆ ತಂದಿದ್ದೀರಿ? ಮೊಮ್ಮಗ ಸಂಜೆ ಮನೆಗೆ ಬರ್ತಾನಲ್ಲ ಅಲ್ಲೇ ಕೊಟ್ಬಿಡಿ. ಇಲ್ಲಿ, ಇವೆಲ್ಲ ಯಾಕೆ? ಬೇರೆ ಮಕ್ಕಳು ಕೂಡ ಇರ್ತಾರೆ! ಸರಿ ಹೋಗಲ್ಲ” ಅನ್ನುತ್ತಾ ಮುದುಕನ ಕಡೆ ನೋಡಿದರು. 

ಮುದುಕನ ಮುಖ ಈಗ ಸಂಪೂರ್ಣ ಗಂಭೀರವಾಯಿತು.

ತಕ್ಷಣವೇ ತುಂಬಾ ಆಳದ ಮೌನಕ್ಕೆ ಜಾರಿದಂತೆ ಕಂಡರು. ಅಲ್ಲಿಂದ ಪದಗಳನ್ನು ಎತ್ತಿಕೊಂಡು ಮಾತಿಗೆ ಬರಲು ಇನ್ನೆಷ್ಟು ಹೊತ್ತು ಕಾಯಬೇಕಾಗುವುದು ಅಂದುಕೊಂಡರು ಮೇಷ್ಟ್ರು. ಮುದುಕ ತುಂಬಾ ಹೊತ್ತಿನ ನಂತರ ಮಾತಾಡಿದ. “ಪ್ರಜ್ವಲ್ ನನ್ನ ಮಗನ ಮಗ ಕಣಪ್ಪ. ನಾನು ಮನೆಯಲ್ಲಿ ನನ್ನ ಮೊಮ್ಮಗನ ಮಾತನಾಡಿಸುವಂತಿಲ್ಲ. ನನ್ನ ಮಗನ ಹೆಂಡತಿಯದು ತಕರಾರು. ಹಾಳು ಕಥೆಗಳನ್ನು ಹೇಳಿ ಹೇಳಿ ಮಗುವಿನ ಸಮಯ ಹಾಳು ಮಾಡುತ್ತೀರಿ ಅಂತಾಳೆ. ನಿಮ್ಮ ಸಹವಾಸಕ್ಕೆ ಬಿದ್ರೆ ಮಗು ಚುರುಕಾಗಲ್ಲ, ನಾವೆಲ್ಲ ಮಗುವಿಗೆ ಅನುಕೂಲಾಗ್ಲಿ ಅಂತ ಇಂಗ್ಲಿಷ್ನಲ್ಲಿ ಮಾತಾಡ್ತೀವಿ, ನೀವು ಕನ್ನಡದಲ್ಲಿ ಮಾತಾಡಿ ಅದಕ್ಕೆ ಕಲ್ಲು ಹಾಕ್ತಿರಿ. ಮಗು ನಿಮ್ಮ ಬಳಿಯೇ ಮಲಗುತ್ತೆ ಅದಕ್ಕೊಂದು ಶಿಸ್ತಿಲ್ಲ. ಮಗುವನ್ನು ಮಾತಾಡಿಸಬೇಡಿ ಇನ್ಮೇಲೆ…” ಅಂತ ದೊಡ್ಡ ರಂಪಾಟ ಮಾಡಿದ್ಲು. ನನ್ನ ಮಗ ಏನೊಂದು ಮಾತನಾಡದೆ ಸುಮ್ಮನಿದ್ದ. ನಾನು ಮತ್ತೇನು ಮಾತಾಡಲಿಲ್ಲ. ಮೊಮ್ಮಗನಿಗೂ ಅಜ್ಜನ ಹತ್ರ ಮಾತನಾಡಬೇಡ ಅಂತ ಹೇಳಿಕೊಟ್ಟಿದ್ದಾಳೆ. ಮಗು ನನ್ನ ಹತ್ರ ಬಂದು, “ತಾತ ಅಮ್ಮ ಯಾಕೆ ನಿಮ್ಜೊತೆ ಮಾತನಾಡಬಾರದು?” ಅಂತಾರೆ ಅಂತ ಮುಗ್ಧವಾಗಿ ಕೇಳ್ತದೆ. ಏನು ಹೇಳುವುದು? ನೀನು ಚೆನ್ನಾಗಿ ಓದ್ಲಿ ಅಂತ ಕಣೋ.. ಅಂದರೆ ನೀನು ಮಾತನಾಡ್ಸಿದ್ರೆ ನಾನು ಓದೋಕೆ ಆಗಲ್ವಾ? ಅಂತಾನೆ. ಏನು ಹೇಳೋದು? ಅದಕ್ಕೆ ಮನೆಯಲ್ಲಿ ಮೊಮ್ಮಗನ ಮಾತಾಡ್ಸೊದ್ನ ಬಿಟ್ಟು ಬಿಟ್ಟೆ. ನನ್ನಿಂದ ಅವರಿಗ್ಯಾಕೆ ತೊಂದರೆ. ಆದರೆ ಮನಸ್ಸು ತಡೆಯಲ್ಲ ನೋಡಿ ಅದಕ್ಕೆ ಬಂದು ರಸ್ತೆಯ ಬದಿಯಲ್ಲಿ ನನ್ನ ಮೊಮ್ಮಗ ಆಚೆ ಬರೋದನ್ನ ಕಾಯ್ತೀನಿ. ಎಂದಾದರೂ ಒಮ್ಮೆ ಮಾತಾಡ್ಸತೀನಿ. ಮೊಮ್ಮಗನಿಗೆ ಹಣ್ಣು ಕೊಡಬೇಕು ಅನ್ಸುತು, ಅದಕ್ಕೆ ತಂದೆ. ಮನೆಯಲ್ಲಿ ಎಲ್ಲಾದರು ಆಚೆ ಹೋಗಿ ಬಂದಾಗ, “ತಾತ ಏನ್ ತಂದ್ರಿ..” ಅಂತ ಪದೇಪದೆ ಕೇಳ್ತಿದ್ದ. ಈಗ ಸುಮ್ಮನೆ ದೂರ ನಿಂತು ನೋಡ್ತಾನೆ. ದಯವಿಟ್ಟು ಹೇಗಾದರೂ ಮಾಡಿ ಮೊಮ್ಮಗನಿಗೆ ಕೊಡಿ” ಅಂದು ಮುದುಕ ಅಲ್ಲಿಂದ ಎದ್ದ.  ಅವರಿಗೆ ದುಃಖ ತಡೆದುಕೊಳ್ಳಲಾಗುತ್ತಿರಲಿಲ್ಲ. ಬೇರೆಯವರ ಮುಂದೆ ಅಳುವುದು ಎಷ್ಟು ಸರಿ ಅಂದುಕೊಂಡರೋ ಏನೋ? ಎದ್ದು ನಡೆದೇ ಬಿಟ್ಟರು. ಬಿಕ್ಕಳಿಸಿದ ಸದ್ದು ಕೇಳಿಸಿತು. ಅವರ ಕಣ್ಣೀರನ್ನು ದಾರಿ ವಿಧಿಯಿಲ್ಲದೆ ನುಂಗುತ್ತಿತ್ತು. ಮುದುಕನ ಕಣ್ಣೀರು ಜಗತ್ತಿಗೆ ಗೊತ್ತಾಗುವಂತದ್ದಾಗಿರಲಿಲ್ಲ. ಮೇಷ್ಟ್ರು ಮನಸ್ಸಂತೂ ತುಂಬಿ ಬಂದಿತ್ತು. ಎಲ್ಲಾ ವಿಚಾರಗಳ ನಡುವೆ ಮೇಷ್ಟ್ರಿಗೆ ತಮ್ಮ ತಂದೆ ನೆನಪಾಗತೊಡಗಿದರು. ಮೊನ್ನೆಯಷ್ಟೇ ತಾನು ತಂದೆ ಆಗ್ತಿದೀನಿ ಅಂತ ತಿಳಿದಾಗ ಮನೆಯಲ್ಲಿ ಹೆಚ್ಚು ಖುಷಿಪಟ್ಟವರು ತನ್ನ ತಂದೆ. “ನಾನು ತಾತ ಆಗ್ತಿದ್ದೀನಿ…” ಅಂತ ಕುಣಿದಾಡಿದ್ದರು. ಮೇಷ್ಟ್ರು ಕತ್ತೆತ್ತಿ ನೋಡಿದರೆ ದಾರಿಯಲ್ಲಿ ನಡೆಯುತ್ತಿದ್ದದ್ದು ಒಮ್ಮೊಮ್ಮೆ ಮುದುಕ ಒಮ್ಮೊಮ್ಮೆ ತನ್ನ ತಂದೆಯಂತೆಯೆ ಕಾಣುತ್ತಿದ್ದರು. ಆಧುನಿಕ ಜಗತ್ತಿನ ಪ್ರತಿ ತಾತಂದಿರ ಪ್ರತಿನಿಧಿಯಂತೆ ನಡೆದು ಹೋಗುತ್ತಿದ್ದರು. 

‍ಲೇಖಕರು avadhi

June 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: