ಶ್ರೀನಿವಾಸ ಪ್ರಭು ಅಂಕಣ: ಶಿವ’ಮೇರು’ ಕಾರಂತ!

ಬೆಂಗಳೂರಿಗೆ ಮರಳಿ ಬಂದ ಮೇಲೆ ಕರ್ತವ್ಯಕ್ಕೆ ಹಾಜರಾಗಲು ನಾಲ್ಕಾರು ದಿನಗಳ ಸಮಯವಿತ್ತು. ಮಾವನವರ ಅಂತಿಮ ದರ್ಶನ ದೊರೆಯದೆ ಹೋಯಿತಲ್ಲಾ ಎಂದು ನಾನು ಪರಿತಪಿಸುತ್ತಿದ್ದೆ..’ಅಪ್ಪ ಅಮ್ಮ ಇಬ್ಬರನ್ನೂ ಕಳೆದುಕೊಂಡು ತಬ್ಬಲಿಗಳಾಗಿಬಿಟ್ಟೆವು’ ಎಂದು ರಂಜನಿ ಹಾಗೂ ಅವಳ ಸೋದರ ಸೋದರಿಯರು ಸಂಕಟ ಪಡುತ್ತಿದ್ದರು. ರಂಜನಿಗಂತೂ ಬಾಣಂತನದ ವೇಳೆಯಲ್ಲೇ ಹೀಗೆ ಸಂಕಟದ ಗಳಿಗೆಗಳು ಎದುರಾಗಿ ಅವಳ ದಣಿವು—ದುಗುಡಗಳನ್ನು ಹೆಚ್ಚಿಸುತ್ತಿದ್ದವು. ಮೊದಲ ಬಾಣಂತನದ ಸಮಯದಲ್ಲಿ ಮಗುವಿಗೇ ತೀರಾ ಅನಾರೋಗ್ಯವಾಗಿ ಸಾಕಷ್ಟು ಆತಂಕ ಎದುರಾಗಿತ್ತು.. ಈ ಬಾರಿಯ ಬಾಣಂತನದ ಸಮಯದಲ್ಲೇ ಪಿತೃವಿಯೋಗ…! ಮನಸ್ಸು ಮುದುಡಿಹೋಗಿತ್ತು.

ಬಾಬು ಹಾಗೂ ರಂಜನಿಯ ಚಿಕ್ಕಮ್ಮನ ಮಗ ಅಶೋಕ್ ಶ್ರೀರಂಗಪಟ್ಟಣಕ್ಕೆ ಹೋಗಿ ಮಾವನವರ ಚಿತಾಭಸ್ಮವನ್ನು ವಿಸರ್ಜನೆ ಮಾಡಿಬಂದರು. ಈ ಅಶೋಕಿ ಅಲಿಯಾಸ್ ನಾಗರಾಜನ್ ಬ್ಯಾಂಕ್ ಉದ್ಯೋಗಿ; ನಮ್ಮೆಲ್ಲರಿಗೂ ತುಂಬಾ ಆತ್ಮೀಯನಾದವನು. ಶ್ರೀರಂಗಪಟ್ಟಣದಿಂದ ಬಂದವರೇ ಬಾಬು—ಅಶೋಕಿ ಮತ್ತೊಂದು ಆಘಾತದ ಸುದ್ದಿ ನೀಡಿದರು: ಅವರಿಗೆ ಅಲ್ಲಿ ನನ್ನ ಆತ್ಮೀಯ ಮಿತ್ರ—ಸಹೋದ್ಯೋಗಿ ರಾಜೇಂದ್ರ ಕಟ್ಟಿಯ ಭೇಟಿಯಾಯಿತಂತೆ; ‘ಇದೇನು ಇಲ್ಲಿ?’ ಎಂದು ಪರಸ್ಪರರನ್ನು ವಿಚಾರಿಸಿಕೊಂಡಾಗ ಮಾರ್ಚ್ ಐದರಂದೇ—ಅಂದರೆ ನನ್ನ ಮಾವನವರು ತೀರಿಕೊಂಡ ದಿನವೇ ಕಟ್ಟಿಯ ತಂದೆಯವರ ದೇಹಾಂತವೂ ಆಯಿತಂತೆ; ಈಗ ರಾಜೇಂದ್ರ ಸೋದರ ನರೇಂದ್ರನೊಂದಿಗೆ ತಂದೆಯವರ ಚಿತಾಭಸ್ಮದ ವಿಸರ್ಜನೆಗಾಗಿಯೇ ಶ್ರೀರಂಗಪಟ್ಟಣಕ್ಕೆ ಬಂದಿರುವುದು! ಸುದ್ದಿ ಕೇಳಿ ಆಘಾತವಾಯಿತು.. ಇದೆಂಥ ಕಾಕತಾಳೀಯವೆಂದು ಸೋಜಿಗವೂ ಆಯಿತು. ರಾಜೇಂದ್ರನಿಗೋ ತಂದೆಯವರ ಮೇಲೆ ವಿಶೇಷ ಅಕ್ಕರೆ. ಅಂದು ರಾತ್ರಿ ಹೋಗಿ ರಾಜನನ್ನು ಮಾತಾಡಿಸಿಕೊಂಡು ಸಾಂತ್ವನ ಹೇಳಿ ಬಂದೆ.

ಇದಾದ ನಾಲ್ಕಾರು ದಿನಗಳಲ್ಲಿ ದೂರದರ್ಶನಕ್ಕೆ ಹೋಗಿ ಕರ್ತವ್ಯಕ್ಕೆ ರಿಪೋರ್ಟ್ ಮಾಡಿಕೊಂಡೆ. ಉರ್ದು ವಾರ್ತಾ ಪ್ರಸಾರದ ಬೆನ್ನಿಗೇ ಹಕ್ ಸಾಹೇಬರ ವರ್ಗಾವಣೆ ಆಗಿತ್ತಲ್ಲಾ, ಅವರ ಜಾಗಕ್ಕೆ ನಿರ್ದೇಶಕರಾಗಿ ಬಂದಿದ್ದವರು ಎನ್.ಜಿ.ಶ್ರೀನಿವಾಸ್ ಅವರು.ಇವರು ಸೆಂಟ್ರಲ್ ಕಾಲೇಜ್ ದಿನಗಳಿಂದಲೇ ನನಗೆ ಪರಿಚಿತರು! ನಾನು ಕನ್ನಡ ಆನರ್ಸ್ ಕೊನೆಯ ವರ್ಷದಲ್ಲಿದ್ದಾಗ ಶ್ರೀನಿವಾಸ್ ಅವರು ಎಂ ಎ ಕೊನೆಯ ವರ್ಷದಲ್ಲಿದ್ದರು. ಆಕಾಶವಾಣಿಯಲ್ಲೂ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಈಗ ನಮ್ಮ ಕೇಂದ್ರಕ್ಕೆ ನಿರ್ದೇಶಕರಾಗಿ ಬಂದಿದ್ದರು. ಶಿಸ್ತಿನ ಸಿಪಾಯಿ ಎಂದೇ ಹೆಸರಾಗಿದ್ದ NGS ಅವರು ನಮಗೆ ನಿರ್ದೇಶಕರಾಗಿ ಬಂದದ್ದು ನನಗೆ ಬಲು ಸಂತಸದ ಸಂಗತಿಯಾಗಿತ್ತು. ನಾಟಕ ವಿಭಾಗವನ್ನೇ ವಹಿಸಿಕೊಳ್ಳುವುದಾಗಿ ನಾನು ನನ್ನ ಆಯ್ಕೆಯನ್ನು ಅವರ ಮುಂದಿಟ್ಟೆ.

ಆದರೆ ಶ್ರೀನಿವಾಸ್ ಅವರ ವಿಚಾರ ಬೇರೆಯೇ ಇತ್ತು. “ನೀವು ಪ್ರಥಮತಃ ಸಾಹಿತ್ಯದ ವಿದ್ಯಾರ್ಥಿ. ನಿಮಗೆ ಒಂದು ದೊಡ್ಡ ಜವಾಬ್ದಾರಿಯನ್ನು ನೀಡುತ್ತೇನೆ.ಕನ್ನಡದ ಶ್ರೇಷ್ಠ ಸಾಹಿತಿಗಳ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಮಾಡಿ ಅವು ಶಾಶ್ವತ ದಾಖಲೆಗಳಾಗಿ ಉಳಿಯಬೇಕೆಂಬುದು ನನ್ನ ಅಭಿಲಾಷೆ.ಈ ಕಾರ್ಯಕ್ರಮಗಳು ಕೇವಲ ಸಂದರ್ಶನಗಳಿಗೆ ಮೀಸಲಾಗದೆ ಒಂದು ಕಥಾ ರೂಪಕದಂತಿದ್ದರೆ ಸೊಗಸಾಗಿರುತ್ತದೆ.. ಈ ವಿಶೇಷ ಮಾಲಿಕೆಯನ್ನು ಸೃಜನಾತ್ಮಕವಾಗಿ ರೂಪಿಸುವ ಜವಾಬ್ದಾರಿಯನ್ನು ನಿಮಗೆ ನೀಡುತ್ತಿದ್ದೇನೆ. ಸಾಹಿತ್ಯ ಹಾಗೂ ರಂಗ ಮಾಧ್ಯಮಗಳೆರಡರಲ್ಲೂ ಪರಿಶ್ರಮ ಇರುವ ನೀವು ಈ ಮಾಲಿಕೆಯನ್ನು ರೂಪಿಸಲು ಸಮರ್ಥರೆಂಬುದು ನನ್ನ ನಂಬಿಕೆ.ಏನನ್ನುತ್ತೀರಿ ಪ್ರಭು?” ಎಂದರು NGS. “ಸಂತೋಷದಿಂದ ಈ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ ಸರ್…ಅಷ್ಟೇ ಅಲ್ಲ, ನೀವು ಪರಿಭಾವಿಸಿರುವಂತೆಯೇ ಈ ಮಾಲಿಕೆಯನ್ನು ರೂಪಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ” ಎಂದು ನಾನು ಅವರಿಗೆ ಆಶ್ವಾಸನೆ ನೀಡಿದೆ.

ಇದೇ ವೇಳೆಯಲ್ಲಿ ಮತ್ತೊಂದು ಅನಿರೀಕ್ಷಿತ ಪ್ರಸಂಗ ಜರುಗಿತು. ಅಣ್ಣ(ನನ್ನ ತಂದೆಯವರು) ಸನ್ಯಾಸಾಶ್ರಮವನ್ನು ಸ್ವೀಕರಿಸಿ ಕೆಲಸಮಯ ವರದಹಳ್ಳಿಯಲ್ಲಿದ್ದು ನಂತರ ಹರಿದ್ವಾರಕ್ಕೆ ಹೋಗಿ ಅಲ್ಲಿ ಒಂದು ಆಶ್ರಮದಲ್ಲಿ ನೆಲೆಸಿದ್ದರ ಬಗ್ಗೆ ಹಿಂದೆಯೇ ಪ್ರಸ್ತಾಪಿಸಿದ್ದೇನಷ್ಟೇ. ಆನಂತರ ಅವರಿಂದ ಯಾವುದೇ ಸುದ್ದಿ—ಸಮಾಚಾರವೂ ನಮಗೆ ಬಂದಿರಲಿಲ್ಲ. ನಳಿನಿ ಅಕ್ಕನಂತೂ ವಿಶೇಷವಾಗಿ ಅಣ್ಣನನ್ನು ಹಚ್ಚಿಕೊಂಡದ್ದರಿಂದ ಸದಾ ಅವರ ಬಗ್ಗೆಯೇ ಚಿಂತಿಸುತ್ತಿದ್ದಳು.” ಅಣ್ಣ ಹೇಗಿದ್ದಾರೋ…ಸೂಕ್ಷ್ಮ ಪ್ರಕೃತಿಯ ಅಣ್ಣ ಉತ್ತರ ದೇಶದ ಪರಿಸರಕ್ಕೆ,ಆಹಾರ ವ್ಯವಸ್ಥೆಗೆ ಹೊಂದಿಕೊಳ್ಳುವರೋ ಇಲ್ಲವೋ..ಅಲ್ಲಿನ ಬೇಸಗೆಯ ಕಡು ಬಿಸಿಲು—ಚಳಿಗಾಲದ ಮೈ ನಡುಗಿಸುವ ನಡುಕಗಳನ್ನು ಅವರು ತಾಳಿಕೊಳ್ಳಬಲ್ಲರೇ..ಎಷ್ಟು ಕಷ್ಟ ಪಡುತ್ತಿರುವರೋ ಏನೋ” ಎಂದು ಅಣ್ಣನನ್ನು ನೆನೆನೆನೆದು ಸಂಕಟ ಪಡುತ್ತಿದ್ದಳು. ಕೊನೆಗೆ ಪ್ರವಾಸ—ತೀರ್ಥಯಾತ್ರೆಯ ನೆಪದಲ್ಲಿ ಮೂರ್ತಿ ಭಾವ—ನಳಿನಿ ಅಕ್ಕ ಉತ್ತರದತ್ತ ಹೊರಟೇಬಿಟ್ಟರು.

ಯಾತ್ರೆಗಿಂತ ಅಣ್ಣನನ್ನು ಒಮ್ಮೆ ನೋಡಿಕೊಂಡು ಬಂದುಬಿಡಬೇಕು ಎನ್ನುವ ಹಂಬಲವೇ ಈ ಪ್ರವಾಸದ ಹಿಂದಿತ್ತೆಂಬುದೇ ನನ್ನ ನಂಬಿಕೆ! ಹಾಗೆ ಪ್ರವಾಸಕ್ಕೆ ಹೋದ ಅಕ್ಕ—ಭಾವ ಕಷ್ಟಪಟ್ಟು ಅಣ್ಣ ಇದ್ದ ಆಶ್ರಮವನ್ನು ಪತ್ತೆ ಮಾಡಿಯೇಬಿಟ್ಟರು.ಅಣ್ಣನನ್ನು ನೋಡುತ್ತಿದ್ದಂತೆ ಅಕ್ಕ ಗರಬಡಿದವಳಂತೆ ನಿಂತುಬಿಟ್ಟಳಂತೆ. ಗುರುತೇ ಸಿಗದಂತೆ ಬದಲಾಗಿ ಹೋಗಿದ್ದರು ಅಣ್ಣ…ತೀಕ್ಷ್ಣ ದೃಷ್ಟಿಯ, ಧೀರ ಗಂಭೀರ ನಡಿಗೆಯ,ಆತ್ಮವಿಶ್ವಾಸವೇ ಮೈವೆತ್ತಂತೆ ಕಾಣುತ್ತಿದ್ದ ಆ ಅಣ್ಣ ಎಲ್ಲಿ? ಆಳದಲ್ಲಿ ಹೂತಂತೆ ಕಾಣುತ್ತಿರುವ ನಿಸ್ತೇಜ ಕಣ್ಣುಗಳ,ಜೋತ ಭುಜಗಳ,ಕುಗ್ಗಿದ ಆಕೃತಿಯ ಕೃಶಕಾಯದ ಈ ಅಣ್ಣ ಎಲ್ಲಿ? ಅಕ್ಕನ ಅನುಮಾನಗಳಾವುವೂ ಸುಳ್ಳಾಗಿರಲಿಲ್ಲ.ಅಣ್ಣನಿಗೆ ಉತ್ತರದ ಆ ವೈಪರೀತ್ಯಗಳ ಹವಾಮಾನವಾಗಲೀ ಆಹಾರ ವ್ಯವಸ್ಥೆಯಾಗಲೀ ಒಂದಿಷ್ಟೂ ಹೊಂದಿಕೆಯಾಗದೆ ಆರೋಗ್ಯ ವಿಪರೀತ ಹದಗೆಟ್ಟು ಹೋಗಿತ್ತು.ನಳಿನಿ ಅಕ್ಕ—ಮೂರ್ತಿ ಭಾವ ಪಟ್ಟುಹಿಡಿದು ಕೂತುಬಿಟ್ಟರು: “ನಿಮ್ಮನ್ನು ಈ ಸ್ಥಿತಿಯಲ್ಲಿ ನಾವು ಬಿಟ್ಟು ಹೋಗುವುದು ಸಾಧ್ಯವೇ ಇಲ್ಲ..ನೀವು ನಮ್ಮ ಜೊತೆ ಹೊರಡಲೇಬೇಕು..ಮೊದಲು ನಿಮ್ಮ ಆರೋಗ್ಯ ಸುಧಾರಿಸಲಿ..ಆಮೇಲೆ ಬೆಂಗಳೂರಲ್ಲಿ ನೀವು ನಮ್ಮ ಜೊತೆಗೇನೂ ಇರಬೇಕಾಗಿಲ್ಲ..ನಿಮ್ಮದೇ ಆಶ್ರಮವನ್ನು ನಿಮಗೆ ಮಾಡಿಕೊಡುತ್ತೇವೆ..ಅಲ್ಲಿ ನಿಮ್ಮ ಜಪ ತಪ ಅನುಷ್ಠಾನಗಳನ್ನು ಆಚರಿಸಿಕೊಂಡು ನಿಮ್ಮ ಪಾಡಿಗೆ ನೀವಿರಿ..ನಿಮ್ಮ ಶಿಷ್ಯರು,ನಾವುಗಳು ಆಗಾಗ್ಗೆ ಬಂದು ನಿಮ್ಮನ್ನು ನೋಡಿಕೊಂಡು ಹೋಗುತ್ತೇವೆ..ಇದಕ್ಕೆ ‘ಆಗುವುದಿಲ್ಲ’ ಎಂಬ ಉತ್ತರವನ್ನು ನಾವು ಕೇಳಲು ಸಿದ್ಧರಿಲ್ಲ” ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು.

ಬೇರೆ ಉಪಾಯವಿಲ್ಲದೆ ಅಣ್ಣ ಅವರೊಡನೆ ಹೊರಟು ಬೆಂಗಳೂರಿಗೆ ಬರಲೇಬೇಕಾಯಿತು.ಅಣ್ಣನ ಆಗಿನ ಆ ಸ್ವರೂಪವನ್ನು ನೋಡಿ ನಮ್ಮೆಲ್ಲರ ಕಣ್ಣೂ ತುಂಬಿ ಬಂದುಬಿಟ್ಟಿತು.ಅಣ್ಣನ ಆರೋಗ್ಯ ಸುಧಾರಿಸಲು ಸಾಕಷ್ಟು ಸಮಯವೇ ಆಯಿತು.ರಂಜನಿ ಗಂಡು ಮಗುವಿಗೆ ಜನ್ಮ ನೀಡಿರುವ ಸಂಗತಿ ಕೇಳಿ ಅಣ್ಣನ ಕಣ್ಣುಗಳು ಜೋಡಿದೀಪದ ಹಾಗೆ ಹೊಳೆದುಬಿಟ್ಟವು! ಆ ಒಂದು ಕ್ಷಣದ ಮಟ್ಟಿಗೆ ಅವರು ಪೂರ್ವಾಶ್ರಮದ ಅಣ್ಣನಾಗಿ,”ಆಹಾ!ಎಂಥ ಒಳ್ಳೆಯ ಸುದ್ದಿ ಹೇಳಿದೆಯಪ್ಪಾ! ಕುಲದೀಪಕನ ಆಗಮನವಾಯಿತು!” ಎಂದು ಉದ್ಗರಿಸಿದರು!ಮರುಕ್ಷಣವೇ ಕಾವಿ ವಸ್ತ್ರದ ಒಳಗಿನ ನಿತ್ಯಾನಂದ ಸರಸ್ವತಿಗಳು ಜಾಗೃತರಾಗಿಬಿಟ್ಟರು! ಕ್ಷಣಮಾತ್ರದಲ್ಲಿ ತಮ್ಮ ಒಳಮನಸ್ಸಿನ ಸಂತಸವನ್ನು ನಿಯಂತ್ರಣಕ್ಕೆ ತಂದುಕೊಂಡು,”ಮಗನಿಗೆ ವಿಜಯ ಕೃಷ್ಣ ಎಂಬುದಾಗಿ ನಾಮಕರಣ ಮಾಡಬೇಕೆಂಬುದು ನಮ್ಮ ಅಪೇಕ್ಷೆ —ಆಶಯ.ಅದು ಮೊದಲ ಹೆಸರಾಗಿರಲಿ.ಮುಂದಿನದು ನೀವು ಬಯಸಿದಂತೆ” ಎಂದು ಹಾರೈಸಿದರು.ಅವರ ಅಪೇಕ್ಷೆಯಂತೆಯೇ ಮಗುವಿಗೆ ‘ವಿಜಯಕೃಷ್ಣ ಅನಿರುದ್ಧ’ ಎಂದು ನಾಮಕರಣ ಮಾಡಲು ನಿಶ್ಚಯಿಸಿದೆವು.”ಮನೆದೇವರ ಹೆಸರು—ತಂದೆಯ ಹೆಸರು ಎರಡೂ ಆಗುವಂತೆ ‘ಶ್ರೀನಿವಾಸ’ನನ್ನೂ ಹೆಸರಿಗೆ ಸೇರಿಸಿಬಿಡಿ” ಎಂದು ಅಮ್ಮ ಸಲಹೆ ನೀಡಿದರು.ಸರಿಯೇ! ತೊಟ್ಟಿಲಲ್ಲಿದ್ದ ಪುಟ್ಟ ಕೂಸಿಗೆ ಮಾರುದ್ದದ ಹೆಸರಿಡುವ ತೀರ್ಮಾನವಾಯಿತು: “ವಿಜಯಕೃಷ್ಣ ಶ್ರೀನಿವಾಸ ಅನಿರುದ್ಧ”!

ದಾಖಲೆ ಸಂಗ್ರಹ ವಿಶೇಷ ಮಾಲಿಕೆಯ ಪ್ರಥಮ ಶ್ರೇಷ್ಠ ಸಾಹಿತಿಯಾಗಿ ನಾವು ಆರಿಸಿಕೊಂಡದ್ದು ಕಡಲ ತೀರದ ಭಾರ್ಗವ ಶಿವರಾಮ ಕಾರಂತರನ್ನು. ಒಮ್ಮೆ ಫೋನಿನ ಮೂಲಕ ಅವರನ್ನು ಸಂಪರ್ಕಿಸಿ ಈ ವಿಶೇಷ ಕಾರ್ಯಕ್ರಮವನ್ನು ಅವರ ಕುರಿತಾಗಿ ರೂಪಿಸಲು ಅನುಮತಿಯನ್ನು ಪಡೆದುಕೊಂಡೆವು.’ಭಾರ್ಗವ’ರ ಶಿಸ್ತು—ಸಿಟ್ಟಿನ ಬಗ್ಗೆ ಸಾಕಷ್ಟು ಕೇಳಿದ್ದರಿಂದ ಎಚ್ಚರಿಕೆಯಿಂದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳತೊಡಗಿದ್ದೆವು.ನನಗೋ,ಹೊನ್ನಾವರದ ವಿಚಾರಗೋಷ್ಠಿಯಲ್ಲಿ ನಾನಾಡಿದ ಮಾತಿಗೆ ಕಾರಂತರು ಸಿಟ್ಟು ಮಾಡಿಕೊಂಡು ಹೋದ ಪ್ರಸಂಗ—(ಹಿಂದೆ ಈ ಪ್ರಸಂಗ ದಾಖಲಿಸಿದ್ದೇನೆ)—ಅಕಸ್ಮಾತ್ ಅವರಿಗೆ ನೆನಪಿದ್ದುಬಿಟ್ಟರೆ! ಎಂಬ ಅಳುಕು ಬೇರೆ ಕಾಡುತ್ತಿತ್ತು.ಸಧ್ಯ ಅದೃಷ್ಟವಶಾತ್ ಹಾಗೇನೂ ಆಗಲಿಲ್ಲ!

ಇರಲಿ.ಈಗ ಕಾರಂತರ ಸಂದರ್ಶನ ಮಾಡುವವರು ಯಾರು? ಈ ಹಿಂದೆ—ಅಂದರೆ 1985 ರಲ್ಲಿಯೇ ಗೆಳೆಯ ಮೋಹನರಾಮ ಶಿವರಾಮ ಕಾರಂತರ ಒಂದು ಸಂದರ್ಶನವನ್ನು ಸೊಗಸಾಗಿ ರೂಪಿಸಿದ್ದ.ಆಗ ಕಾರಂತರನ್ನು ಸಂದರ್ಶಿಸಿದ್ದವರು ಮತ್ತೊಬ್ಬ ಪ್ರಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿ ಅವರು!ಆಗ ಮೋಹನರಾಮನೇ ಒಂದು ಮಾಲಿಕೆಯ ರೀತಿಯಲ್ಲಿ ಹಿರಿಯ ಸಾಹಿತಿಗಳ ಸಂದರ್ಶನಗಳನ್ನು ಅರ್ಥಪೂರ್ಣವಾಗಿ ರೂಪಿಸಿದ್ದ.ಅನಂತಮೂರ್ತಿಯವರೇ ಗೋಪಾಲಕೃಷ್ಣ ಅಡಿಗರ ಸಂದರ್ಶನವನ್ನೂ ನಡೆಸಿಕೊಟ್ಟಿದ್ದರು.ಹಾ.ಮಾ.ನಾಯಕರು ಮಾಸ್ತಿಯವರ ಸಂದರ್ಶನವನ್ನೂ ಕಿ.ರಂ.ನಾಗರಾಜ್ ಅವರು ಅನಂತಮೂರ್ತಿಯವರ ಸಂದರ್ಶನವನ್ನೂ ಡಿ.ಆರ್.ನಾಗರಾಜ್ ಅವರು ಜಿ.ಎಸ್.ಶಿವರುದ್ರಪ್ಪನವರ ಸಂದರ್ಶನವನ್ನೂ ನಡೆಸಿಕೊಟ್ಟಿದ್ದರು.ಆಗ ಸಾಹಿತ್ಯವಲಯದಲ್ಲಿ ಸಾಕಷ್ಟು ಮೆಚ್ಚುಗೆಗೂ ಪಾತ್ರವಾಗಿ ಒಂದಿಷ್ಟು ಚರ್ಚೆಗೂ ಗ್ರಾಸ ಒದಗಿಸಿತ್ತು ಮೋಹನರಾಮನ ಈ ಮಾಲಿಕೆ.ಈ ಸಂದರ್ಶನಗಳೆಲ್ಲವೂ ಕೇವಲ 40—50 ನಿಮಿಷಗಳ ಅವಧಿಯದ್ದಾಗಿದ್ದವು;ಈಗ ಅವಕ್ಕಿಂತ ಭಿನ್ನವಾದ ರೀತಿಯಲ್ಲಿ,ವಿಶಾಲ ಹರಹಿನ ವಿಶೇಷ ಕಾರ್ಯಕ್ರಮಗಳನ್ನು ಅಣಿಗೊಳಿಸಬೇಕಾದ ಸವಾಲು ನಮ್ಮೆದುರಿಗಿತ್ತು.

ಕಾರಂತರ ಸಂದರ್ಶನವನ್ನು ಯಾರು ಮಾಡಬಹುದೆಂದು ನಾವು ಚಿಂತಿಸುತ್ತಿರುವಂತೆಯೇ ಧಿಡೀರನೆ ಕಾರಂತರದ್ದೇ ಕರೆ ಬಂತು:”ನನ್ನ ಸಂದರ್ಶನವನ್ನು ಮಾಲಿನಿ ಮಲ್ಯ ಅವರು ನಡೆಸಿ ಕೊಡಲಿ.ನನ್ನ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಿರುವ ಅವರೇ ನನ್ನನ್ನು ಸಂದರ್ಶಿಸಲು ಹೆಚ್ಚು ಅರ್ಹರು.ಬೇರಾರನ್ನೂ ತಾವು ಸಂಪರ್ಕಿಸುವ ಅಗತ್ಯವಿಲ್ಲ” ಎಂದು ಕಡ್ಡಿ ಎರಡು ತುಂಡು ಮಾಡಿದಂತೆ ಕಾರಂತರು ಘೋಷಿಸಿಬಿಟ್ಟರು.ಮಾಲಿನಿ ಮಲ್ಯ ಅವರೇ ಆಗ ಕಾರಂತರ ಯೋಗಕ್ಷೇಮವನ್ನೂ ಸಹಾ ನೋಡಿಕೊಳ್ಳುತ್ತಿದ್ದವರು.ಕಾರಂತರೇ ಹೇಳಿದ ಮೇಲೆ ಇನ್ನು ಎರಡನೆಯ ಮಾತಿಗೆ ಅವಕಾಶವೆಲ್ಲಿದೆ? ನನಗೆ ಮಾತ್ರ ಮನದಾಳದಲ್ಲಿ ಒಂದು ಸಣ್ಣ ಅತೃಪ್ತಿ ಇದ್ದೇ ಇತ್ತು: ಆರಾಧನಾ ಭಾವದಿಂದ ಪರಮ ಶ್ರದ್ಧೆ—ಭಕ್ತಿಯಿಂದ ಸಂದರ್ಶನ ಮಾಡುವುದು ಬೇರೆ;ವಸ್ತುನಿಷ್ಠ ಚರ್ಚೆಯ ಮೂಲಕ ಲೇಖಕನನ್ನು ಕೆಣಕುತ್ತಾ ಹೊಸ ಹೊಳಹುಗಳನ್ನು ಹೆಕ್ಕಿ ತೆಗೆಯುವುದು ಬೇರೆ! ಆದರೆ ಈಗ ಬೇರೆ ಆಯ್ಕೆಯಿಲ್ಲ… ಸರಿ..ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡು ಕಾರಂತರ ಸಂದರ್ಶನಕ್ಕಾಗಿ ಹೊರಟೇಬಿಟ್ಟೆವು.

ನಮ್ಮ ಕೆಂದ್ರದ ನಿರ್ದೇಶಕ N G ಶ್ರೀನಿವಾಸ್ ಅವರೂ ಸಹಾ ,”ನಾನೂ ಬಂದು ಹಿರಿಯರ ಆಶೀರ್ವಾದ ಪಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಒಂದು ದಿನ ಇದ್ದು ಮರಳಿ ಬಂದು ಬಿಡುತ್ತೇನೆ..ನೀವು ಅಂದುಕೊಂಡಿರುವ ಹಾಗೆ ಎಲ್ಲಾ ಚಿತ್ರೀಕರಣ ಮುಗಿಸಿಕೊಂಡು ಬರುವಿರಂತೆ” ಎಂದು ನಮ್ಮ ಜೊತೆಗೇ ಹೊರಟರು.ಉಡುಪಿಯ ಹೋಟಲೊಂದರಲ್ಲಿ ನಮ್ಮ ಠಿಕಾಣಿ.ಕೋಟಾದಲ್ಲಿ ಕಾರಂತರ ಮನೆಯಲ್ಲಿಯೇ ಸಂದರ್ಶನದ ಚಿತ್ರೀಕರಣ.ಸತ್ಯವಾಗಿ ಹೇಳುತ್ತೇನೆ:ಈ ಸಂದರ್ಶನದ ಸಮಯದಲ್ಲಿ ನಾವು ನೋಡಿದ ಕಾರಂತರೇ ಬೇರೆ! ಒಂದು ಸಿಟ್ಟು ಮಾತಿಲ್ಲ..ಹುಬ್ಬುಗಂಟಿಲ್ಲ..ತೀಕ್ಷ್ಣನೋಟ—ನಿಷ್ಠುರ ಮಾತು ಮೊದಲೇ ಇಲ್ಲ! ಕಾರಂತರ ಪರಮಶಾಂತ ಸ್ನೇಹಶೀಲ ವ್ಯಕ್ತಿತ್ವದ ದರ್ಶನ ಈ ಸಂದರ್ಶನದ ವೇಳೆಯಲ್ಲಿ ನಮಗಾಯಿತೆಂದರೆ ಅತಿಶಯೋಕ್ತಿಯಲ್ಲ! ಮಾಲಿನಿ ಮಲ್ಯ ಅವರೂ ಸಹಾ ಸಾಕಷ್ಟು ಅಧ್ಯಯನ ನಡೆಸಿ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದರು.

ಕಾರಂತರ ಬದುಕಿನ ಸಮಗ್ರಚಿತ್ರಣ ಹಂತಹಂತವಾಗಿ ದೊರೆಯುವ ರೀತಿಯಲ್ಲಿ ಪ್ರಶ್ನೆಗಳ ಯಾದಿಯನ್ನೂ ಸಿದ್ಧಪಡಿಸಿಕೊಂಡಿದ್ದರು.ಕಾರಂತರ ಉತ್ತರಗಳೂ ಅಷ್ಟೇ ನೇರ..ಖಚಿತ..ನಿರ್ದಿಷ್ಟ! ಯಾವುದೇ ಪೂರ್ವಾಗ್ರಹಗಳಿಲ್ಲ..ಮುಲಾಜುಗಳಿಲ್ಲ..ಮುಜುಗರ ದಾಕ್ಷಿಣ್ಯಗಳಿಲ್ಲ! ಸಂದರ್ಶನದ ನಡುವೆ ಒಮ್ಮೆ ಹೀಗಾಯಿತು: ಕಾರಂತರು ಒಂದೇ ಓಘದಲ್ಲಿ ಮಾತಾಡುತ್ತಿದ್ದಾರೆ..ನಡುವೆ ಅವರು ಬಳಸಿದ ಕೆಲ ಶಬ್ದಗಳು ನನ್ನ ಗಮನ ಸೆಳೆದವು.ತಕ್ಷಣವೇ ಸಂದರ್ಶನ ನಿಲ್ಲಿಸಿ,ನೇರವಾಗಿ ಕಾರಂತರಿಗೆ ಹೇಳಲು ಧೈರ್ಯ ಸಾಲದೇ ಮಾಲಿನಿಯವರ ಬಳಿ ಅರಿಕೆ ಮಾಡಿಕೊಂಡೆ: “ಕಾರಂತರು ಬಳಸುತ್ತಿರುವ ಕೆಲ ಶಬ್ದಗಳನ್ನು ಸಾರ್ವಜನಿಕವಾಗಿಯಾಗಲೀ ಬರಹಗಳಲ್ಲಾಗಲೀ ಬಳಸಬಾರದು ಎಂದು ಕಾನೂನು ಹೇಳುತ್ತದೆ..ಆ ಶಬ್ದಗಳ ಬದಲಿಗೆ ಬಳಸಬಹುದಾದ ಪರ್ಯಾಯ ಶಬ್ದಗಳನ್ನೂ ಸೂಚಿಸಿದೆ..ದಯವಿಟ್ಟು ಆ ಪರ್ಯಾಯ ಶಬ್ದಗಳನ್ನೇ ಬಳಸಿದರೆ ನಮಗೆ ದೂರದರ್ಶನದಲ್ಲಿ ಪ್ರಸಾರ ಮಾಡಲು ಅನುಕೂಲವಾಗುತ್ತದೆ”. ನನ್ನ ಅರಿಕೆ ನೇರವಾಗಿ ಕಾರಂತರಿಗೇ ಕೇಳಿಸಿದ್ದರಿಂದ ಮತ್ತೊಮ್ಮೆ ಮಾಲಿನಿಯವರು ಅದನ್ನು ಪುನರುಚ್ಚರಿಸುವ ಅಗತ್ಯ ಬೀಳಲಿಲ್ಲ.ಕ್ಷಣಕಾಲ ಮೌನ..ನನಗೋ ಕಾರಂತರು ಸಿಡಿದಾರೆಂಬ ಭಯ! ನಿಧಾನವಾಗಿ ಕಾರಂತರು ಮಾತಾಡತೊಡಗಿದರು: “ನೀವೋ ಮತ್ತೊಬ್ಬರೋ ಸೃಷ್ಟಿ ಮಾಡಿದ ಶಬ್ದಗಳನ್ನು ನಾನು ಬಳಸುವವನಲ್ಲ.ಆ ಕಾಲದಲ್ಲಿ ಯಾವ ಶಬ್ದಗಳು,ಯಾವ ಹೆಸರುಗಳು ಬಳಕೆಯಲ್ಲಿದ್ದವೋ ಅವನ್ನು ಮಾತ್ರವೇ ನಾನು ಬಳಸುವವ.ತಿಳಿಯಿತೋ? ಆ ಶಬ್ದಗಳು ಅಗೌರವ ಸೂಚಕ ಎಂದಾಗಲೀ ಅವಹೇಳನಕಾರೀ ಎಂದಾಗಲೀ ಭಾವಿಸುವ ಅಗತ್ಯವಿಲ್ಲ..ಅವು ಆಗ ಇದ್ದ ‘ಗುರುತು ನಿರ್ದೇಶಕ’ಗಳಷ್ಟೇ..ಬಿಡಿ..ಸಂದರ್ಶನ ಮುಂದುವರಿಸಿ!”

ಅಷ್ಟೇ!ಮತ್ತೆ ಎರಡನೆಯ ಮಾತಿಲ್ಲದೇ ಸಂದರ್ಶನ ಮುಂದುವರಿಯಿತು!

ಎರಡು ದಿನಗಳು ಪೂರ್ತಿ ಬೆಳಗಿನಿಂದ ಸಂಜೆಯವರೆಗೆ ಚಿತ್ರೀಕರಣ ಮಾಡಿ ಸಂದರ್ಶನದ ಭಾಗವನ್ನು ಮುಗಿಸಿದೆವು.ಮರುದಿನ ಎಂ ಜಿ ಎಂ ಕಾಲೇಜಿನ ಯಕ್ಷ ಕೇಂದ್ರದಲ್ಲಿ ಕಾರಂತರು ಮಕ್ಕಳಿಗೆ ಯಕ್ಷಗಾನ ಕಲಿಸುವ ಸನ್ನಿವೇಶದ ಚಿತ್ರೀಕರಣ.90 ರ ಆ ಇಳಿ ವಯಸ್ಸಿನಲ್ಲಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಾ ಮಕ್ಕಳಿಗೆ ಅವರು ಬೋಧಿಸುತ್ತಿದ್ದ ಪರಿಯನ್ನು ಕಂಡು ನಾವೆಲ್ಲರೂ ಬೆಕ್ಕಸ ಬೆರಗಾಗಿಬಿಟ್ಟೆವು! ಆ ವಯಸ್ಸಿನಲ್ಲಿ ಅವರ ಉತ್ಸಾಹ—ಚೈತನ್ಯಗಳೇ ಒಂದು ಸೋಜಿಗ..ಮುಖ ಭಾವಗಳ ಅಭಿನಯವನ್ನು ಕಲಿಸುತ್ತಿದ್ದ ತುಸು ಉತ್ಪ್ರೇಕ್ಷಿತ ಕ್ರಮ ಮತ್ತೊಂದು ಸೋಜಿಗ…ಗೆಜ್ಜೆ ಕಟ್ಟಿಕೊಂಡು ದಣಿವಿಲ್ಲದಂತೆ ಹೆಜ್ಜೆ ಹಾಕುತ್ತಿದ್ದುದು ಬಲು ದೊಡ್ಡ ಸೋಜಿಗ!

ಮರುದಿನ ಕಾರಂತರನ್ನು ಮಂಗಳೂರು ಸಮೀಪದ ಸೋಮೇಶ್ವರ ಗುಡ್ಡಕ್ಕೆ ಕರೆದುಕೊಂಡು ಹೋದೆವು.ಅಲ್ಲಿ ಕಡಲತಡಿಯಲ್ಲಿ ಬಂಡೆಗಳ ಮೇಲೆ ವಿವಿಧ ಭಂಗಿಗಳಲ್ಲಿ ‘ಭಾರ್ಗವ’ರನ್ನು ಕೂರಿಸಿ ಚಿತ್ರೀಕರಣ ನಡೆಸಿದೆವು.ಕಡಲ ತಡಿಯ ಮರಳ ಮೇಲೆ ಕಾರಂತರು ನಡೆದು ಹೋಗುತ್ತಿದ್ದಾರೆ..ಹಸಿ ಮರಳ ಹಾಸಿನ ಮೇಲೆ ಮೂಡುತ್ತಿರುವ ಅವರ ಹೆಜ್ಜೆ ಗುರುತುಗಳನ್ನು ಸೆರೆ ಹಿಡಿಯುತ್ತಾ ಕ್ಯಾಮರಾ ಸಾಗುತ್ತಿದೆ!

ಸೋಮೇಶ್ವರದ ಬೃಹತ್ ಬಂಡೆಯನ್ನು ನೋಡುತ್ತಿದ್ದಂತೆ ನನಗೊಂದು ಯೋಚನೆ ನುಗ್ಗಿ ಬಂತು: ಕಾರಂತರನ್ನು ಆ ಬಂಡೆಯ ಮೇಲೆ ಎತ್ತರದಲ್ಲಿ ನಿಲ್ಲಿಸಿ ಕೆಳಗಡೆ ಕ್ಯಾಮರಾ ಇಟ್ಟು ಕಾರಂತರ ಜೊತೆಗೆ ಆಕಾಶವೂ ಕಾಣುವಂತೆ ಚಿತ್ರೀಕರಣ ಮಾಡಿದರೆ ಅದು ಎಷ್ಟು ಸೊಗಸಾದ ಹಾಗೂ ಅರ್ಥಪೂರ್ಣ ಚಿತ್ರಿಕೆಯಾಗುತ್ತದೆ! ಆ ಕ್ಷಣದಲ್ಲೇ ನನಗೆ ಈ ನಮ್ಮ ವಿಶೇಷ ಕಾರ್ಯಕ್ರಮಕ್ಕೆ ಹೆಸರೂ ಸ್ಫುರಿಸಿಬಿಟ್ಟಿತು:

” ಕಡಲತೀರದ ಭಾರ್ಗವ
ಶಿವ’ಮೇರು’ಕಾರಂತ!”

ಸರಿ,ಯಥಾ ಪ್ರಕಾರ ಮಾಲಿನಿಯವರನ್ನು ಕೇಳಿದೆ: “ಹೇಗಾದರೂ ಮಾಡಿ ಕಾರಂತರನ್ನು ಬಂಡೆಯ ಮೇಲ್ಭಾಗಕ್ಕೆ ಕರೆದುಕೊಂಡು ಹೋಗಬಹುದೇ? ಅದ್ಭುತವಾದ ಚಿತ್ರಿಕೆಗಳು ದೊರೆಯುತ್ತವೆ”. ನನ್ನ ಮಾತು ಕಾರಂತರಿಗೆ ಕೇಳಿಸಿಯೇ ಬಿಟ್ಟಿತು! ಒಮ್ಮೆ ಬಂಡೆಯನ್ನು ನೋಡಿ ನನ್ನತ್ತ ತಿರುಗಿದರು: “ಏನು..ನಾನು ಬಂಡೆಯನ್ನು ಹತ್ತಿ ಹೋಗುವುದು ಪ್ರಭುಗಳ ಅಪೇಕ್ಷೆಯಿದ್ದ ಹಾಗಿದೆಯಲ್ಲಾ! ಆಗಲಿ.ನಿಮ್ಮ ದೂರದರ್ಶನಕ್ಕಾಗಿ ಅದೂ ಆಗಿ ಹೋಗಲಿ” ಎಂದವರೇ ನಿಧಾನವಾಗಿ ಕೋಲೂರಿಕೊಂಡು ಬಂಡೆಯನ್ನು ಹತ್ತತೊಡಗಿದರು! ನೋಡನೋಡುತ್ತಿದ್ದಂತೆ ಬಂಡೆ ಏರಿ ನಿಂತ ಕಾರಂತರು ಕಡಲಿಗೆದುರಾಗಿ ನಿಂತ ಆ ದೃಶ್ಯದ ಸೊಗಸು—ಪ್ರತಿಮಾತ್ಮಕ ಧ್ವನಿ ಮಾತಿಗೆ ನಿಲುಕದ್ದು. ವಿವಿಧ ಕೋನಗಳಿಂದ ಕಾರಂತರ ವಿವಿಧ ಭಾವ ಭಂಗಿಗಳನ್ನು ಚಿತ್ರಿಸಿಕೊಂಡಾಗ ಏನೋ ಒಂದು ತೃಪ್ತಿಯಭಾವ..ಸಾರ್ಥಕತೆಯ ಭಾವ! ಅಂಥ ಹಿರಿಯ ಶ್ರೇಷ್ಠ ಸಾಹಿತಿಗಳ ಸಂಗದಲ್ಲಿ ನಾಲ್ಕಾರು ದಿನಗಳನ್ನು ಕಳೆಯುವುದು,ಅವರ ಅನುಭವಾಮೃತವನ್ನು ಪಕ್ಕದಲ್ಲೇ ಕುಳಿತು ಆಲಿಸುವುದು,ಆ ದೈತ್ಯ ಪ್ರತಿಭೆಯ ವಿವಿಧ ಮುಖಗಳನ್ನು ಅತಿ ಸಮೀಪದಿಂದ ನೋಡಿ ದಿವ್ಯ ಅನುಭೂತಿಯನ್ನು ಗಳಿಸಿಕೊಳ್ಳುವುದು..ಇದೇನು ಸಾಧಾರಣ ಸಂಗತಿಯೇ?

ಇಷ್ಟೆಲ್ಲಾ ಮುಗಿಸಿಕೊಂಡು ಕಾರಂತರಿಗೆ ಶಿರಸಾಷ್ಟಾಂಗ ಪ್ರಣಾಮ ಮಾಡಿ ಕೃತಕೃತ್ಯತೆಯ ಭಾವದೊಂದಿಗೆ ಬೆಂಗಳೂರಿಗೆ ಮರಳಿದೆವು.ಬೆಂಗಳೂರಿನಲ್ಲೂ ಒಂದು ದಿನದ ಚಿತ್ರೀಕರಣ ಬಾಕಿ ಇತ್ತು! ಅದು ಕಾರಂತರ ಹಾಡುಗಾರಿಕೆ! ಕಾರಂತರ ಹಾಡುಗಾರಿಕೆಗೆ ಪ್ರಸಿದ್ಧ ಸಂಗೀತ ನಿರ್ದೇಶಕ ಪದ್ಮಚರಣ್ ಅವರ ವಯಲಿನ್ ಸಾಥಿ! ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ನನ್ನ ಪ್ರೀತಿಯ ಗುರುಗಳೂ ಪ್ರಸಿದ್ಧ ಭಾಷಾ ಶಾಸ್ತ್ರಜ್ಞರೂ ಸಾಹಿತಿಗಳೂ ಆದ ಡಾ॥ಹಂ.ಪ.ನಾಗರಾಜಯ್ಯ ಅವರ ಮನೆಯಲ್ಲಿ. ಯಕ್ಷಗಾನ ಪ್ರಸಂಗಗಳ ಅನೇಕ ಮಟ್ಟುಗಳನ್ನು,ಪದ್ಯಗಳನ್ನು ಪದ್ಮಚರಣ್ ಅವರ ಪಿಟೀಲುವಾದನದ ಸಹಯೋಗದಲ್ಲಿ ಅದ್ಭುತವಾಗಿ ಹಾಡಿದ ಕಾರಂತರು ಮತ್ತೊಮ್ಮೆ ನಮ್ಮನ್ನು ಬೆರಗುಗೊಳಿಸಿದರು! ಗುರುಪತ್ನಿ,ಸಾಹಿತಿ,ಚಿಂತಕಿ ಶ್ರೀಮತಿ ಕಮಲಾ ಹಂಪನಾ ಅವರ ಪ್ರೀತಿಯ ಆತಿಥ್ಯ..ಗುರುಪುತ್ರಿ—ಸಹೋದ್ಯೋಗಿ ಆರತಿ ಅವರ ಸಹಕಾರ,ಗುರುಗಳ ಶುಭ ಹಾರೈಕೆಗಳಿಂದಾಗಿ ಅಂದಿನ ಚಿತ್ರೀಕರಣವೂ ಸಾಂಗವಾಗಿ ನೆರವೇರಿತು.ಅದರೊಟ್ಟಿಗೇ ಕಾರಂತರ ಕುರಿತ ವಿಶೇಷ ಕಾರ್ಯಕ್ರಮದ ಚಿತ್ರೀಕರಣವೂ ಪೂರ್ಣಗೊಂಡಿತು.ಎಲ್ಲ ಸಾಂಗವಾಗಿ ಮುಗಿದ ಮೇಲೆ ಕೊನೆಗೆ ಉಳಿದದ್ದು ಒಂದೇ ಭಾವ:

“ಜನ್ಮ ಸಾರ್ಥಕವಾಯಿತು”!!

‍ಲೇಖಕರು avadhi

June 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: