ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಬಂಗಾಳದ ಅಂಗಳದಲ್ಲಿ ಭಾಗ-1..

18.1

ಸಿಂಗಲೀಲಾದಲ್ಲಿ ಲೀಲಾ

ಹಕ್ಕಿ ಅಲೆತ ಶುರುಮಾಡಿ ಎರಡ್ಮೂರು ವರ್ಷ ಕಳೆದರೂ ಬಂಗಾಳಕ್ಕೆ ಹೋಗುವ ಅವಕಾಶ ಒದಗಿ ಕೂಡಿರಲಿಲ್ಲ. 2019ರ ಫೆಬ್ರವರಿಯಲ್ಲಿ ಪಶ್ಚಿಮ ಬಂಗಾಳದ ಲಾಟ್‌ಪಂಚಾರ್, ನಿಯೋರಾ ವ್ಯಾಲಿ, ಸಿಂಗಲೀಲಾಗೆ ಹೋಗುತ್ತಿದ್ದೇವೆ, ಬನ್ನಿ ಎಂದು ಖುಷ್ಬೂ ಆಹ್ವಾನಿಸಿದ್ದಕ್ಕೆ ಒಪ್ಪಿ ಬಾಗ್ಡೋಗ್ರಾ ತಲುಪಿದೆ. ರಾಹುಲ್ ಖುಷ್ಬೂ, ಸೂರತ್ತಿನ ಮೂವರು ವೈದ್ಯರು, ಒಬ್ಬ ಇಂಜಿನಿಯರು ಭುವನೇಶ್ವರದ ಒಬ್ಬ ಇಂಜಿನಿಯರ್ ನಮ್ಮ ಗುಂಪಿನಲ್ಲಿದ್ದರು. ಟೂರ್ ಗೈಡ್ ಸಂದೀಪ್ ಚಕ್ರವರ್ತಿ. ಬಾಗ್ಡೋಗ್ರಾ ಬಿಟ್ಟ ಕೂಡಲೇ ಮಳೆಯೋ ಮಳೆ. ಮಳೆಯಿಂದಾಗಿ ಲಾಟ್‌ಪಂಚಾರ್ ತಲುಪುವಷ್ಟರಲ್ಲಿ ಉತ್ಸಾಹವೂ ಪಂಕ್ಚರ್. ಆ ದಿನ ತಲುಪಿದೆವು ಅಷ್ಟೆ… ಹಕ್ಕಿಗಿಕ್ಕಿ ಇಲ್ಲ. Hornbill nest homestayಯ ಮಹಡಿಯಲ್ಲಿದ್ದ ವಸತಿಗೆ ಮೇಲೇರಿ ಸೆಟಲ್ ಆದೆವು.

`ಆಸೆಯು ಒಂದೇ ಮುಂದೆ, ಎಲ್ಲರೂ ಅದರ ಹಿಂದೆ’ ಎನ್ನುವಂತೆ ಬಹುದೂರದ ಆಸೆಯಿಂದ ಬಸ್ಸಿನಲ್ಲಿ ಕಿಟಿಕಿಯಿಂದ ಕರ್ಚಿಫ್ ಹಾಕಿ ಸೀಟ್ ಬುಕ್ ಮಾಡಿದಂತೆ ಕಿಟಕಿ ಪಕ್ಕದಲ್ಲಿದ್ದ ಹಾಸಿಗೆ ಬಳಿ ನನ್ನ ಲಗೇಜ್ ಇರಿಸಿ ಖಚಿತ ಪಡಿಸಿದೆ. ನನಗೆ ಬೆಳಿಗ್ಗೆ ಹೇಗೂ ಬೇಗ ಎಚ್ಚರ ಆಗುತ್ತದೆ, ಎದ್ದ ತಕ್ಷಣ ಕಿಟಕಿ ತೆರೆದರೆ ಹಕ್ಕಿಗಳನ್ನು ಕಾಣುವ ಕನಸು ಹೀಗೆ ಮಾಡಿಸಿತು. ರಾತ್ರಿ ಏರುತ್ತಾ ಹೋದಂತೆ ಕಿಟಕಿಯ ಸಂಧಿಯಿಂದ ಬಂದ ಚಳಿರಾಯ ಹೀಗೂ ಉಪಾಯ ಮಾಡುತ್ತೀಯಾ, ಲೀಲಾ ತಗೋ ನನ್ನ ಸ್ವೀಟೆಸ್ಟ್ ಉಡುಗೊರೆ ಎನ್ನುವಂತೆ ಇಡೀ ರಾತ್ರಿ ಗಡಗಡ ನಡುಗಿಸಿದ. ಬೆಳಿಗ್ಗೆ ಎದ್ದದ್ದೇನೋ ನಿಜ, ಆದರೆ ಸೂರ್ಯನೇ ಕಾಣದೆ, ಹಕ್ಕಿಗಳೂ ಚಳಿಗೆ ಹೊರಬಾರದೆ ಕಿಟಕಿ ಪ್ಲ್ಯಾನ್ ಪಕ್ಕಾ ಫ್ಲಾಪ್ ಆಯಿತು. ಬುದ್ಧ ಆಸೆಯೇ ದುಃಖಕ್ಕೆ ಮೂಲ ಎಂದರೂ ಆಸೆ ಬಿಡೋಕೆ ನಾನು ದೇವಮಾನವಳೆ, ಸೀದಾಸಾದಾ ಮಾನವಿ ಅಷ್ಟೆ.

ತುಸುವೆ ಬೆಳಕು ಇಣುಕಿತು. ಕ್ಯಾಮೆರಾ ನಾನು ಕೆಳಗಿಳಿದು ಬಂದೆವು. ಸೂರ್ಯ ಸಂಧಿಯಲ್ಲಿ ಐಸ್‌ಪೈಸ್ ಆಡುತ್ತಿದ್ದ. ಚಳಿಗೆ ಸೆಟೆದ ಕಾಲು ಬಹುದೂರಕೆ ಕಾಲಿಡಲಿಲ್ಲ. ಹೋದಷ್ಟು ದೂರದಲ್ಲಿಯೂ ಹಕ್ಕಿ ಕಾಣಲಿಲ್ಲ. ಅಷ್ಟರಲ್ಲಿ ಹಕ್ಕಿ ಅಲೆತಕ್ಕೆ ಆವೋ ಆವೋ ಎಂದರು, ಹೊರಟೆವು. ಲಾಟ್‌ಪಂಚಾರಿನಲ್ಲಿ ಬ್ರಾಡ್‌ಬಿಲ್ ಗೂಡು ಕಟ್ಟುತ್ತದೆ. ಅದು ಕಟ್ಟಿತ್ತೇನೋ, ಆದರೆ ನಮ್ಮ ಕಣ್ಣಿಗಂತೂ ಕಾಣಲಿಲ್ಲ. ಗಾಡಿಯಿಂದ ಇಳಿದ ಕೂಡಲೇ ಗೈಡ್‌ಗೆ Rufous Necked Hornbill ಬೇಕೆಂದು ಬೇಡಿಕೆ ಸಲ್ಲಿಸಿದರು. ಇಳಿಜಾರಿನಲ್ಲಿಳಿದು ಹೋಗಬೇಕು ಎಂದನವ. ನಾನು ಇಳಿಜಾರಿನಲ್ಲಿ ಇಳಿಯಹೋದರೆ ಜಾರುವುದೆ ಆಗುತ್ತದೆ. ಇಳಿಯುವುದೇನೋ ಜಾರಿ ಇಳಿದುಬಿಡಬಹುದು, ಆದರೆ ಹತ್ತಿ ಅಲ್ಲ ಹೊತ್ತು ತರುವುದು ಹೇಗೆ? ಬರಲೊಲ್ಲೆನೆಂದೆ. ಉಳಿದವರು ಸಲಕರಣೆ ಸಮೇತ ಸರಸರ ಹೊರಟರು. ನಾನು ಇದ್ದಲ್ಲಿಯೆ ಟ್ರೈಪಾಡಿಗೆ ಕ್ಯಾಮೆರಾ ಸಿಕ್ಕಿಸಿ ಹಕ್ಕಿಗಳತ್ತ ಕಣ್ಣಿರಿಸಿದೆ. ರೂಫಸ್ ಸಿಬಿಯಾ, ಕಪ್ಪು ಕಿರೀಟದ ಬುಲ್‌ಬುಲ್, ಗೆರೆಗೊರಳಿನ ಯೂಹಿನ, ನೀಲಿಗೊರಳಿನ ಬಾರ್ಬೆಟ್, ಒಂದೆರಡು ಬಗೆಯ ಮರಕುಟುಕ, ನಟ್‌ಹ್ಯಾಚ್ ಚಿತ್ರಗಳನ್ನು ತೆಗೆದೆ. ನಾನು ಡಾರ್ಜಿಲಿಂಗ್ ಮರಕುಟುಕ ಹುಡುಕುತ್ತಿದ್ದರೆ crimson breasted wood pecker ಸಿಕ್ಕಿತು. ಮಂಗಟ್ಟೆಗಾಗಿ ಕೆಳಗೆ ಹೋದವರೆಲ್ಲಾ ಮೂರು ಮಣ ಆಯಾಸ ಹೊತ್ತು ಮೇಲೆ ಬರುವ ಮುನ್ನ Rufous Necked Hornbill ಹೆಣ್ಣು-ಗಂಡು ನಾನಿದ್ದಲ್ಲಿಯೇ ಬಂದವು. `ಆಹಾ ನನ್ನ ಯೋಗವೇ, ಇದೇ ಮಹಾ ಸುದಿನ, ಇದೇ ಮಹಾ ಸುದಿನ’ ಎಂದು ಅಂದುಕೊಂಡೆ, ಕುಣಿಯಲಿಲ್ಲ-ಕಾಲಾಗದ್ದಕ್ಕೆ. ಅಷ್ಟು ಹೊತ್ತಿಗೆ ಬೆಳಗಿನ ಬಿಸಿಲು ತೀವ್ರವಾದ್ದರಿಂದ ವಸತಿಗೆ ಮರಳಿದೆವು.

ಮಧ್ಯಾಹ್ನದ ಸೆಷನ್‌ಗೆ ಸ್ವಲ್ಪ ಇಳಿಜಾರಿದ್ದ ಮನೆ, ಹೊಲ ದಿಣ್ಣೆ ನಡುವೆ ಇಳಿಸಿ ಕರೆದೊಯ್ದರು. ನಾನೂ ಟ್ರೈಪಾಡನ್ನೇ ಊರುಗೋಲಾಗಿಸಿ ಊರುತ್ತಾ ಜಾರದೆ ನಡೆದೆ. ಕೆಳಗೆ ಹೂಬಿಡುವ ಗಿಡಮರಗಳಿದ್ದವು. ರೂಫಸ್ ಸಿಬಿಯಾ, ಕಪ್ಪುಗೊರಳ ಸೂರಕ್ಕಿ ನಮ್ಮ ನಿರೀಕ್ಷೆ ಹುಸಿ ಮಾಡದೆ ಬಂದವು. ರೂಫಸ್ ಸಿಬಿಯಾ ಹೂವಿನ ಜೊತೆಯಿದ್ದ ಚಿತ್ರ ಸಿಕ್ಕವು. ಕಪ್ಪುಗೊರಳ ಸೂರಕ್ಕಿ ಲೈಫರ್ ಆಗಿತ್ತು. Sultan Tit, Streaked Spider Hunter, Chestnut bellied rock thrush female ಲೈಫರಾದವು. ಒಂದು ದಿನದಲ್ಲಿ ಆರು ಆರು ಹೊಸ ಹಕ್ಕಿ… ಹಾರುವ ಉಲ್ಲಾಸ ರೆಕ್ಕೆಯಿರದಿದ್ದರೂ. 

ಮರುದಿನ ಮುಂಜಾನೆಯೆ ಮುಂದಿನ ಗಮ್ಯವಾದ ಸಿಂಗಲೀಲಾಕ್ಕೆ ತೆರಳಬೇಕಿತ್ತು. ಅದಕ್ಕೂ ಮೊದಲೇ ನಿಯೋರಾ ವ್ಯಾಲಿಗೆ ಹೋಗಬೇಕಿತ್ತಲ್ಲ ಪ್ಲ್ಯಾನ್ ಪ್ರಕಾರ ಎಂದು ಕೇಳಿದ್ದಕ್ಕೆ `ಅದು ಕಷ್ಟವೆಂದು ಬದಲಿಗೆ ಗಾಜಲಡೋಬಕ್ಕೆ ಹೋಗುವ ವ್ಯವಸ್ಥೆ ಮಾಡಿದ್ದೇನೆ’ ಎಂದರು ಖುಷ್ಬೂ. ಸರಿ ಎಂದು ತಲೆಯಲ್ಲಾಡಿಸಿದೆ, ಸರಿ ಇಲ್ಲದಿದ್ದರೂ ನಾನೇನೂ ಮಾಡುವಂತಿರಲಿಲ್ಲವಲ್ಲ. ಆಯೋಜಕರ ಕಷ್ಟಗಳು ಏನೇನಿರುತ್ತವೆಯೋ ಪಾಪ. ಹೊಂದಿಕೊಳ್ಳುವುದು ಅನಿವಾರ್ಯ.

ಬೆಳಿಗ್ಗೆ ಲೀಲಾ ಸಿಂಗಲೀಲಾ ಕಡೆಗೆ ಹೊರಟಳು. ಸಮುದ್ರ ಮಟ್ಟದಿಂದ 7000 ಅಡಿ ಎತ್ತರದಲ್ಲಿರುವ ಸಿಂಗಲೀಲಾ ನ್ಯಾಷನಲ್ ಪಾರ್ಕ್ ಒಂದೆಡೆ ಸಿಕ್ಕಿಂ ರಾಜ್ಯದ ಗಡಿ ಮತ್ತೊಂದೆಡೆ ನೇಪಾಳದ ಗಡಿಯಲ್ಲಿದೆ. 54 ಕಿ.ಮೀ ದೂರದ ತಿರುವು ಹೊರಳುಗಳ ದಾರಿಗೆ ಹಿಡಿದ ಸಮಯ ಮೂರು ಗಂಟೆಗೂ ಮೀರಿತ್ತು. ಮಾರ್ಗಮಧ್ಯದಲ್ಲಿ ಉದರೋದ್ಧಾರಕ್ಕೆ ನೂಡಲ್ಸ್ ಸ್ವಾಗತಿಸಿದೆವು.

ಡಾರ್ಜಿಲಿಂಗ್ ಸಿಲಿಗುರಿಯ ನಡುವೆ ಓಡಾಡುವ ಹೆರಿಟೇಜ್ ಟಾಯ್‌ಟ್ರೈನಿನ ಎರಡಡಿ ಅಗಲದ ರೈಲ್ವೆ ಹಳಿಗಳು ರಸ್ತೆ ಪಕ್ಕದಲ್ಲಷ್ಟೇ ಅಲ್ಲ ರಸ್ತೆ ಮಧ್ಯದಲ್ಲಿ ಕೂಡಾ ಬಹುದೂರದ ತನಕ ಜೊತೆಜೊತೆಗೆ ಬರುತ್ತಿತ್ತು. ರಸ್ತೆಯನ್ನು ದಾಟುವಾಗ ಎಲ್ಲಿಯೂ ಲೆವಲ್ ಕ್ರಾಸಿಂಗಿಗೂ ಒಂದು ಗೇಟ್ ಇರದೆ ರೈಲು ಬರುವುದನ್ನು ನೋಡಿ ಗಾಡಿಗಳು ನಿಂತು ರೈಲು ಹೋದ ಮೇಲೆ ಪ್ರಯಾಣಿಸುತ್ತವೆ. ಅಂಗಡಿ ಬಾಗಿಲುಗಳ ಪಕ್ಕದಲ್ಲೇ ಹಳಿ ಸಾಗಿಹೋಗುತ್ತದೆ. ಪುರಾತನ ಕಾಲದ ಅಂದರೆ ಪುರಾಣ ಕಾಲದ್ದಲ್ಲದೆ ಹೋದರೂ ಬ್ರಿಟಿಷರ ಕಾಲದ ಹಿಮಾಲಯನ್ ರೇಂಜಿನ ಪುಟಾಣಿ ರೈಲು ಒಂದು ಸ್ಟೇಷನ್ನಿಂದ ಇನ್ನೊಂದು ಸ್ಟೇಷನ್ನಿಗೆ ಬರುವಷ್ಟರಲ್ಲಿ ನಡೆದೆ ಹೋಗಬಹುದೆಂಬ ಜೋಕೂ ಇದೆ. `ಆರಾಧನಾ’ ಹಿಂದಿ ಚಿತ್ರದಲ್ಲಿ ರಾಜೇಶ್ಖನ್ನ ಜೀಪಿನಲ್ಲಿ ಕುಳಿತು `ಮೇರೆ ಸಪನೋಕಿ ರಾನಿ ಕಬ್ ಆಯೇಗಿ ತು’ ಎಂದು ಅವನಿಗೇ ಮಾತ್ರವೆ ವಿಶಿಷ್ಟವಾದ ಮ್ಯಾನರಿಸಂಗಳಲ್ಲಿ ಹಾಡುತ್ತಾ ಈ ಹೆರಿಟೇಜ್ ಟ್ರೈನಿನಲ್ಲಿ ನೆಪಮಾತ್ರಕ್ಕೆ ಪುಸ್ತಕ ಹಿಡಿದು ಕುಳಿತಿದ್ದ ನೀಳ ಕಣ್ಣರೆಕ್ಕೆಗಳ ಶರ್ಮಿಳಾ ಟಾಗೂರ್ ಗಮನ ಸೆಳೆಯುತ್ತಿದ್ದ ನೋಟ ನೆನಪಿಗೆ ಬಂದಿತು, ಟಾಯ್ ಟ್ರೈನ್ ಕಾಣಿಸಲಿಲ್ಲ. ಟಾಯ್ ಟ್ರೈನಿನಲ್ಲಿ ಕುಳಿತು ಹೋಗುವ ಆಸೆ ಆರಾಧನಾ ಚಿತ್ರ ನೋಡಿದಾಗಲೇ ಹುಟ್ಟಿಕೊಂಡಿತ್ತು, ನನಗಾಗಿ ಯಾವ ಖನ್ನಾ ಹಾಡು ಹೇಳಿಕೊಂಡು, ಮೌತ್ ಆರ್ಗನ್ ಊದುತ್ತಾ ಹಿಂಬಾಲಿಸದಿದ್ದರೂ. ಆದರೆ ಅರ್ಜುನ ಹಕ್ಕಿ ಕಣ್ಣಿಗೆ ಗುರಿಯಿಟ್ಟಂತೆ ಹಕ್ಕಿಯನ್ನೇ ಗುರಿಯಾಗಿಸಿಕೊಂಡ ಹಕ್ಕಿ ಟೂರಿನಲ್ಲಿ ಇಂತಹ ಆಸೆ ಈಡೇರಿಸಿಕೊಳ್ಳಲೂ ಸಮಯ-ಅವಕಾಶ ಕೂಡುತ್ತಿರಲಿಲ್ಲ. ನೋಡುವ, ಈ ಆಸೆಯನ್ನು ಕಾಲ ಯಾವಾಗ ಕೈಗೂಡಿಸುತ್ತದೆಂದು.

ಲಾಟ್‌ಪಂಚರಿನಿಂದ ಕಾರಿನಲ್ಲಿ ಪಯಣಿಸಿ ಸಿಂಗಲೀಲಾಕ್ಕೆ ಗೇಟ್‌ವೇ ಆದ ಮನೇಭಂಜನ್‌ಗೆ ತಲುಪಿದೆವು. ಸಂಡಕ್ಪುಗೆ ಟ್ರೆಕ್ಕಿಂಗ್ ಮಾಡುವವರಿಗೆ ಮನೇಭಂಜನ್‌ ಆರಂಭಿಕ ನೆಲೆ. ಇಲ್ಲಿ ಮುಂದಿನ ಪ್ರಯಾಣಕ್ಕೆ ವಾಹನ ವ್ಯವಸ್ಥೆ ಆಗುತ್ತದೆ. ನಮ್ಮ ಪ್ರಯಾಣವೂ ಕಾರಿನಲ್ಲಲ್ಲ 1960ರಲ್ಲಿ ತಯಾರಾದ ಬೆಟ್ಟಗುಡ್ಡ ವೇರಬಲ್ಲ ಲ್ಯಾಂಡ್‌ರೋವರ್‌ನಲ್ಲಿ ಎಂದರು. ರೋವರ್ ಇದ್ದರೂ ಡ್ರೈವರ್ ಇರಲಿಲ್ಲ. ಮನೇಭಂಜನ್ನಿನ ಒಂದು ಶವಸಂಸ್ಕಾರಕ್ಕೆ ಎಲ್ಲ ಡ್ರೈವರ್ ಹೋಗಿದ್ದಾರೆ, ಅವರು ಬಂದ ಮೇಲೆ ಹೊರಡಬೇಕಿದೆ ಎಂದರು. ಮನೇಭಂಜನ್ನಿನಲ್ಲಿ `Land Rover Taxi Association ಇದ್ದು ಒಗ್ಗಟ್ಟಿನಲ್ಲಿದ್ದಾರೆ. ಅವರು ಬರುವನ್ನಕ ಕಾಯುವುದೊಂದೆ ಕೆಲಸವಾಯಿತು. ಅರ್ಧ ಶತಮಾನಕ್ಕೂ ಮೀರಿದ ಆ ರೋವರ್ ಗಾಡಿಯ ಬಾಡಿ ತಮ್ಮ ಪುರಾನಾ ಜಮಾನದ ಕಥೆಯನ್ನು ಕೇಳದೆಯೆ ಬಿತ್ತರಿಸುವಂತಿದ್ದವು. ನಂತರ ಬಂದ ಅವರು ನಮ್ಮ ಲಗೇಜನ್ನು ರೋವರಿಗೆ ಸಾಗಿಸಿ ಬಿಗಿಯಾಗಿ ಬಿಗಿದು ಹತ್ತಿ ಎಂದರು.

ಹತ್ತುವುದೆ!? ರೋವರ್‌ಗೆ ಹತ್ತುವುದೇ ಸಮಸ್ಯೆ ಎನಿಸಿತು. ಜೀವ ಬಿಗಿಹಿಡಿದು ಕಂಬಿ ಗಟ್ಟಿಯಾಗಿ ಹಿಡಿದು ಹಿಂಬದಿಯ ಕಿರಿದಾದ ಸೈಡಾಸನದಲ್ಲಿ ಆಸೀನಳಾದುದು ತತ್ಕಾಲದ ಸುಖ ಎನ್ನುವುದು ಸವಾರಿಯಲ್ಲಿ ಅರಿವಾಯಿತು. ನಂತರದ ದಿನಕ್ಕೂ ನಮ್ಮ ವಾಹನ ಇದೇ ಎಂದು ತಿಳಿದಾಗ ನಾ ತಬ್ಬಿಬ್ಬಾದ ಗುಬ್ಬಿ. ಹಾವಿನಂತಿದ್ದ ಏರಿಳಿತದ ತಿರುವುಗಳಲ್ಲಿ ಸಾರಥಿ ಎಗ್ಗಿಲ್ಲದ ಸವಾರಿಯಲ್ಲಿ `Shake Well Before Use’ ಎನ್ನುವಂತೆ ಗಾಡಿ ಬಾಡಿ ಕುಲುಕಾಡಿಸುತ್ತಿದ್ದ. ಮನೇಭಂಜನ್‌ನಿಂದ ಎರಡೂವರೆ ಕಿ.ಮೀ ದೂರದ ಚಿತ್ರೆಯಲ್ಲಿ ಚಂದದ ಮಾನೆಸ್ಟ್ರಿ ಇತ್ತು. ನಂತರದ ಮೇಘಮಾ ಹೆಸರಿನಂತೆ ಮೇಘಗಳಿಂದಾವೃತವಾಗಿತ್ತು. ಅಲ್ಲಿಂದ ನಾಲ್ಕು ಕಿ.ಮೀನ ನೇಪಾಳದಂಚಿನ ಟಮ್ಲಿಂಗ್ನಲ್ಲಿ ವಸತಿ ವ್ಯವಸ್ಥೆ ಮಾಡಿದ್ದರು.

ಟುಮ್ಲಿಂಗಿನ ಶಿಖರ್ ಲಾಡ್ಜಿಗೆ ತಲುಪಿದಾಗ ಮೂಳೆಗಳು ಸ್ವಸ್ಥಾನದಲ್ಲಿ ಉಳಿದದ್ದು ಪೂರ್ವಜನ್ಮದ ಸುಕೃತ. ಹದಿನೈದು ಕಿ.ಮೀ ದೂರದ ನಲವತ್ತೈದು ನಿಮಿಷದ ದಾರಿಯಷ್ಟೇ ಆಗಿದ್ದರೂ ಮಾರ್ಗದ ಅವಸ್ಥೆಯಿಂದ ಈ ಪಡಿಪಾಟಲು. ಮಬ್ಬುಬೆಳಕು. ಕೈಕಾಲು ಸುಸ್ಥಿತಿಯಲ್ಲಿವೆಯೇ ಎಂದು ಪರಿಶೀಲಿಸುತ್ತಿದ್ದರೂ `ಕರುಣಾಳು ಬಾ ಬೆಳಕೆ’ ಎನ್ನುತ್ತಾ ಕಣ್ಣು ಹೊರಗೆ ಬೆಳಕು ಬರಲಿ ಎಂದು ಕಾಯುತ್ತಿತ್ತು.

ಮೂರು ಗಂಟೆಗೆ ಹಕ್ಕಿ ಅಲೆದಾಟಕ್ಕೆ ರೋವರ್ ಏರಿ ಗೈಡ್  ಲಾಬಾ ಪೌಲ್ ಜೊತೆ ಹೊರಟೆವು. ನಾನು ಸ್ವಲ್ಪ ದೂರದಲ್ಲಿ ಇಳಿದೆ. ಹಾದಿಯ ಇಕ್ಕೆಲದಲ್ಲಿ ಹಿಮವಿತ್ತು. ದೂರದ ಹಿಮಾವೃತ ಶಿಖರಗಳು ಕಾಣದಂತೆ ಮಂಜು ಆವರಿಸಿತ್ತು. Stripe Throated Yuhina ಸಿಕ್ಕಿತು. ಬಿಳಿಯಮೇಕೆ ಹಿಮದ ಮೇಲಿದ್ದಾಗ ಚಂದವೆನಿಸಿ ಸೆರೆಹಿಡಿದೆ. ಅಲ್ಲಿಗೆ ಅಂದಿನ ಕತೆಗೆ ಮುಕ್ತಾಯ. ಹೋಗಿದ್ದ ಗಾಡಿ ಬರುವನ್ನಕ ಕಾಯದೆ ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಕವಿದ ಮಬ್ಬಿನೊಳಗೆ ಕೊಠಡಿ ಸೇರಿ ಮೂರ‍್ಮೂರು ರಗ್ಗು ಕವಿದುಕೊಂಡು ಊಟ ಕೊಡುವವರೆಗೂ ಕಾಯ್ದು ಉಂಡು ಗಡಗಡ ನಡುಗಿ ಹಾಸಿಗೆ ಸೇರಿದೆ.. ಬೆಳಿಗ್ಗೆ ತಿಂಡಿಗೆ ಮಧ್ಯಾಹ್ನ ಊಟಕ್ಕೆ ಇಪ್ಪತ್ತು ಮೆಟ್ಟಿಲಿಳಿದು ಕೆಳಗಿದ್ದ ಡೈನಿಂಗ್ ಹಾಲಿಗೆ ಹೋಗುತ್ತಿದ್ದರೂ ರಾತ್ರಿಗೆ ಕೊಠಡಿಗೆ ಕೊಡಲು ಕೇಳಿದ್ದೆ, ಚಳಿಗೆ ಹೊರಗೆ ಕಾಲಿಡಲು ಹೆದರಿ. ರಗ್ಗುಗಳೊಳಗೆ ನಾ ಮರೆಯಾದರೂ ಚಳಿ ನನ್ನನ್ನು ಮರೆಯದೆ ಅದರೊಳಗೆ ನುಗ್ಗುತ್ತಿದ್ದ. `ಚಳಿ ಚಳಿ ತಾಳೆನು ಈ ಚಳಿಯ’ ಎನ್ನುತ್ತಾ ತಾಯಿಯ ಗರ್ಭದಲ್ಲಿದ್ದ ಶಿಶುವಿನೋಪಾದಿ ದೇಹವನ್ನು ಕುಗ್ಗಿಸಿ ಕುನುಗಿಸಿ ಕೂಸಾಗುತ್ತಿದ್ದೆ ಹ್ಹು ಹ್ಹು ನಾದ ಹೊರಡಿಸುತ್ತ.

ಮರುದಿನ ಬೆಳಿಗ್ಗೆ ಸಫಾರಿಗೆ ಜೀಪು ಬರದೆ ಗುಡ್ಡದ ಇಳಿಜಾರಲ್ಲಿ ಹಕ್ಕಿ ಅರಸಿ ಹೋದರು. ನಾನು ವಸತಿಯ ಹಿಂಬದಿಯಲ್ಲಿ ಹಕ್ಕಿಗೆ ಕಾಯುತ್ತಿದ್ದೆ. ನೀಲಿ ಮುನ್ಚಾಚಿನ ರೆಡ್‌ಸ್ಟಾರ್ಟ್ ಮರಿಯೊಂದು ಅಮ್ಮ ಕೂರಿಸಿ ಹೋದ ಜಾಗದಲ್ಲಿ ಕಾಯುತ್ತಿತ್ತು. ಈಗ ಬಿಸಿಲು ಬಂತು ಎನ್ನುವಷ್ಟರಲ್ಲಿ ಮಂಜು ಆವರಿಸಿ ಜೂಟಾಟ ಆಡಿಸುತ್ತಿತ್ತು. ಗಡಗಡ ಚಳಿ. ಜಾಕೆಟ್ಟು, ಕೋಟು, ಸ್ಟೆಟರ್ ಧರಿಸಿ ಕೂತಿದ್ದೆ. ಮೌಂಟನ್ ಫಿಂಚ್‌ ಬಂದವು. ನನ್ನ ಬಳಿ ಬರುವ ಬದಲು ಸ್ವಲ್ಪ ದೂರದ ಒಣಮರದ ಕೊಂಬೆಯಲ್ಲಿ ಅದರ ಎಲೆಗಳೆಂಬಂತೆ ಕುಳಿತು ಹಾರಿದವು. ಕಾಯುವೆ ನಾನಿಲ್ಲೆ ಎಂದು ಕುಳಿತಿದ್ದರೆ ನನ್ನ ಪಕ್ಕದಲ್ಲಿದ್ದ ರೊಡೋಡೆಂಡ್ರನ್ ಗಿಡದೊಳಗೊಂದು ಯುಹಿನಾ ನಾನಿಲ್ಲಿದ್ದೇನೆ ಎಂದು ಉಲಿಯಿತು. ಅಲ್ಲೆ ಇರು ನನ್ನ ದೊರೆ ಎನ್ನುತ್ತಾ ಅತ್ತ ಕ್ಯಾಮೆರಾ ತಿರುಗಿಸಿದೆ. ಒಂದೆರಡು ಚಿತ್ರಗಳಾಗುವಷ್ಟರಲ್ಲಿ ಬೈಬೈ ಲೀಲಾ ಎಂದುಬಿಡೋದೆ. ಅಡುವ ಮನೆಯಿಂದ ಹರಿದು ಹೋಗುತ್ತಿದ್ದ ಗಲೀಜು ನೀರಿನಲ್ಲಿದ್ದ ಅನ್ನ ತಿನ್ನಲು Rufous breasted Accentor male-female, White Collared Black bird male ಬಂದದ್ದರಿಂದ ಮೂರು ಲೈಫರ್ ಸಿಕ್ಕಿದವು

ಮರುದಿನ ಬೆಳಗಿನ ಸೆಷನ್ನಿಗೆ ರೆಡ್‌ಪಾಂಡ, ಸಟಾಯಿರ್ ಟ್ರ್ಯಾಗೋಪನ್ ಗುರಿಯಾಗಿತ್ತು. ಸಟಾಯಿರ್ ಸೌಂಡ್ ಕೇಳುತ್ತಿದೆ ಎಂದು ಅಲ್ಲಲ್ಲಿ ಇಳಿದು ಹುಡುಕಿದರೂ ಪರಿಣಾಮ ಶೂನ್ಯ. ನನ್ನ ಹುಡುಕಾಟದಲ್ಲಿ Northern Goshawk, Ashy Throated Wabbler ಸಿಕ್ಕವು. ಮಧ್ಯಾಹ್ನದ ಸೆಷನ್‌ಗೆ ಏಳು ಕಿ.ಮೀ ದೂರದ ಗೈರ್ಬೈಸ್‌ಗೆ ಹೊರಟೆವು. ಬರಿಯ ಬೌಲ್ಡರೆ ಇದ್ದ ಟಾರಿನ ಮುಖ ಕಾಣದ ಅವ್ಯವಸ್ಥೆಯ ರಸ್ತೆಯಲ್ಲಿ ಕುಕ್ಕಿಕೊಂಡು ಹೋಗುವಾಗ ಲ್ಯಾಂಡ್ ರೋವರ್ರೆ ಏಕೆ ಬೇಕೆನ್ನುವುದು ಸ್ಪಷ್ಟವಾಯಿತು. ಲ್ಯಾಂಡ್ ರೋವರಿಗೆ ಲ್ಯಾಂಡ್ ಕಿಕ್ಕರ್ರೆಂದು ನವನಾಮಕರಣ ಸೂಕ್ತವೆನಿಸಿತು. ಸಂಡಕ್ಪುಗೆ ರೋಡಿಗೆ ಹಿಮ ಸುರಿದಿದ್ದರಿಂದ ಬೋಲ್ಡರಿನ ಕುಕ್ಕುದಾರಿಯ ಕಸರತ್ತು ಮಾಡಬೇಕಿತ್ತು. ಗೈರ್ಬೈಸ್‌ ಟ್ರೆಕ್ಕರ್ ಹಟ್ ತಲುಪಿ ಇಳಿದಾಗ ಜೀವ ಮರಳಿ ಬಂದಿತ್ತು. ಊಟಕ್ಕೆಆರ್ಡರಿಸಿ ಹಕ್ಕಿಗೆ ಕಾಯ್ದೆವು. ಸಂದೀಪ್ ಹಾಕಿದ ಮಾಸ್ ಮೇಲೆ ಬಂದ Black Faced Laughing Thrush, White browed Fulvetta, ಕ್ಲಿಕ್ಕಿಸಿಕೊಂಡೆವು.

ಮರಳುವಾಗ ಗಾಡಿ ಬೌಲ್ಡರ್ ಮೇಲೆ ಹೈಜಂಪಿಸಿ ಕುಕ್ಕಿದವತಾರಕ್ಕೆ ಕ್ಯಾಮೆರಾ ಗಾಡಿಯೊಳಗೆ ಬಿದ್ದಿತು. ಹುಡ್ ಜಾಮ್ ಆಗಿ ರಾಹುಲ್ ಕಳಚಲು ಕುಟ್ಟುತ್ತಿದ್ದಂತೆ ಸಿಂಗ್ ಸ್ಕ್ರೂಡೈವರ್ನಿಂದ ಸ್ಕ್ರೂಪೀಸ್ ಬೇರೆ ಮಾಡಿ ಕಳಚಿಕೊಟ್ಟರು. ಹುಡ್ ಬಿಚ್ಚುವಾಗ ಹಾಕುವಾಗ ಮುರಿದ ಸ್ಕ್ರೂಪೀಸನ್ನು ಜತನದಿಂದ ಕೂರಿಸಿ ಹಾಕುತ್ತಿದ್ದೆ, ಇಲ್ಲದಿದ್ದರೆ ಹುಡ್ಲೆಸ್ ಲೆನ್ಸ್ ಆಗುತ್ತಿತ್ತು. ಅದನ್ನೀಗ ರಿಪೇರಿಸಿಸಿ ಸ್ಕ್ರೂ ಬಿದ್ದುಹೋಗುವ ಆತಂಕದಿಂದ ಪಾರಾಗಿದ್ದೇನೆ.

ಮರುದಿನ ಸಂಡಕ್ಪುಗೆ ಹೋಗಲೇಬೇಕೆಂದು ಖುಷ್ಬೂ ದೃಢನಿರ್ಧಾರ ಮಾಡಿದ್ದರಿಂದ ಹೊರಟೂಬಿಟ್ಟೆವು. ಮಾರ್ಗಮಧ್ಯದಲ್ಲಿ ಕೆಲಕ್ಷಣ ಹಿಮಾಲಯನ್ ಗ್ರಿಫಿನ್‌ಗೆ ಇಳಿದು ಇಳಿಜಾರಿನಲ್ಲಿ ಹೋಗಿಬಂದರು. ಸಂಡಕ್ಪುಗೆ ಇನ್ನು ಮೂರು ಕಿ.ಮೀ ಇದ್ದಾಗ ಮೇಲೆರುವ ಹಾದಿಗೆ ಹಿಮ ಸುರಿದಿರುವುರಿಂದ ಡ್ರೈವರ್ಗಳು ಬಿಲ್ಕುಲ್ ಸಾಧ್ಯವಿಲ್ಲ ಎಂದದ್ದಕ್ಕೆ ಪ್ರಯಣ ಹಿಮ್ಮುಖವಾಗಿ ಸಂಡಕ್ಪುಗೆ ಹೋಗದ ನಿರಾಶೆ ಆವರಿಸಿತು.

ಭಾರತ-ನೇಪಾಳದ ಗಡಿಯಲ್ಲಿ ಸಿಂಗಲೀಲಾ ರಾಷ್ಟ್ರೀಯ ಉದ್ಯಾನದಂಚಿನಲ್ಲಿ 11929 ಅಡಿ ಎತ್ತರದಲ್ಲಿ ಇರುವ ಸಂಡಕ್ಪುವಿನಿಂದ ವಿಶ್ವದ ಅತ್ಯುನ್ನತ ಶಿಖರಗಳಾದ ಮೌಂಟ್ ಎವರೆಸ್ಟ್, ಕಾಂಚನಜುಂಗಾ ಶ್ರೇಣಿಯ ನೋಟವನ್ನು ನೋಡಬಹುದಾಗಿತ್ತು ಆದರೆ ನಮಗೆ ಆಗಲಿಲ್ಲವಲ್ಲ ಗೊಣಗಿಕೊಳ್ಳುತ್ತಾ ಬರುತ್ತಾ ಇದ್ದೆವಾ. ನಮ್ಮ ಸೊಟ್ಟ ಮೋರೆ ನೋಡುತ್ತಿದ್ದ ಖುಷ್ಬೂ ಕಣ್ಣು ಸಂಧಿಯಲ್ಲೇ ಕೆಲವು ಹಕ್ಕಿಗಳನ್ನು ಕಂಡಿಯೇ ಬಿಟ್ಟಿತು. ಸರಿ ಇಲ್ಲೇ ಫೋಟೋಗ್ರಫಿ ಮಾಡುವ ಎಂದು ಗಾಡಿ ನಿಲ್ಲಿಸಿದರು. ಆರಡಿ ಅಗಲದ ರಸ್ತೆಯ ಇಕ್ಕೆಲದಲ್ಲಿ ಬಿದ್ದಿದ್ದ ಹಿಮದ ನಡುವೆ ಜೋಪಾನವಾಗಿ ಕ್ಯಾಮೆರಾ ಹಿಡಿದೆವು. ನನಗೆ Hodgsons Tree creeper, Grey crested tit, Rufous vented tit, Thick Billed warbler ಲೈಫರ್‌ ಆದವು. ದೂರ ಹೋದವರಿಗೆ spotted nutcracker ಸಿಕ್ಕಿತು. ನನಗೂ ಸಿಗುವ ಕಾಲಕ್ಕೆ ಕಾಯಬೇಕಷ್ಟೆ. ಕಾಯುವೆ.

ಮರಳುವಾಗ ಅದೃಷ್ಟ ಪರೀಕ್ಷಿಸಲು ಮತ್ತೆ ಗೈರ್ಬೈಸ್‌ಗೆ ಹೋದೆವು. ಹಿಂದಿನ ದಿನ ಸಿಕ್ಕಿದ ಹಕ್ಕಿಗಳೇ ಸಿಕ್ಕಿದವು. ಮರುದಿನ ಬೆಳಿಗ್ಗೆ Olive backed pipet ಲೈಫರ್. ರೋವರ್ ಏರಿ ಮನೇಭಂಜನ್‌ಗೆ ಬಂದರೂ ನಮ್ಮ ಕಾರು ಬಂದಿರದೆ visitors centerನಲ್ಲಿ ಕುಳಿತೆವು. ಕುಳಿತೆವು ಎನ್ನವುದಕ್ಕಿಂತ ಅಲ್ಲಿದ್ದ ರೆಸ್ಟ್ ರೂಮಿಗೆ ಕೆಲಸ ಕೊಟ್ಟು ಹಗುರಾದೆವು. ಕಾರು ಬಂದ ಬಳಿಕ ಕಾರೇರಿ ಹಕ್ಕಿ ಕಂಡಾಗ ನಿಲ್ಲಿಸುತ್ತಾ ಗಾಜಲಡೋಬದತ್ತ ಹೊರಡುಲ್ಲಿಗೆ ಸಿಂಗಲೀಲಾಕ್ಕೆ ಲೀಲಾಳ ಮೊದಲ ಭೇಟಿ ಮುಕ್ತಾಯವಾಯಿತು.

‍ಲೇಖಕರು avadhi

June 5, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: