
ಲಕ್ಷ್ಮಣ್ ಕೆ ಪಿ
ನಾನು
ಕತ್ತಲೆಯ ಸುಖ ನುಂಗಿಕೊಂಡ ಊರುಗಳಲ್ಲಿ
ಬಣ್ಣ ಬಣ್ಣದ ಅಮಲುಗಳಿಗೆ ಅಲೆದಾಡುತ್ತಿರುವಾಗ
ಸಾರಾಯಿ ಕುಡಿದು ದೀಪ ಆರಿಸಿ
ನಿದ್ದೆ ಬರುವವರೆಗೂ ನನ್ನ ಬೈದುಕೊಂಡು
ಮಲಗಿದ್ದಿ
ಅವ್ವಾ
ಇಲ್ಲಿ ಎಂಜಲೆಲೆಯ ಅಗುಳುಗಳಿಗೂ
ಆಗಸದ ಚುಕ್ಕೆಗಳಿಗೂ
ಸದಾ ಕಿತ್ತಾಟ
ಸೋಜಿಗವೆಂದರೆ ಆ ಅಸಂಖ್ಯ ಚುಕ್ಕೆಗಳ ಮುಂದೆ
ಈ ನಾಲ್ಕೈದು ಚಿಲ್ಲರೆ ಅಗುಳುಗಳು ಯೇಗಬೇಕು
ಏಕಕಾಲಕ್ಕೆ ಹಸಿದ ಹೊಟ್ಟೆಗಳಿಗೆ ಪದ ಕಟ್ಟಬೇಕು
ಈ ಚಿಲ್ಲರೆ ಅಗುಳುಗಳು ಥೇಟು ನೀನೆ
ದಿಟ ಹೇಳಲೇ
ಆ ಎಂಜಲೆತ್ತಿದ ಕೈಯ್ಯಿಗಂಟಿರುವ ತೇವ
ಇಲ್ಲಿ ಎಷ್ಟೇ ಆಳಕ್ಕೆ ನೆಲ ಅಗಿದರೂ ಅವ್ವಾ
ಸಿಕ್ಕುವುದಿಲ್ಲ ಅಗುಳು ಜೀವಾ
ಇನ್ನೂ ಹೀಗೆ ಬಾಯಿ ಒಣಗಿ ಹೋಗಿರುವ ಊರುಗಳು ಅದೆಷ್ಟಿವೆಯೋ





0 Comments