ನೆನಪಾಗಿದ್ದು ಆ ಮಾತುಗಳು..

ಸ್ವಾತಂತ್ರ್ಯನಾ ನಮ್ಮ ಪಾಲಿಗಂತು ಬಂದಿಲ್ಲಾಮ್ಮ
ದೇವರು ನಮ್ಮ ಪಾಲಿಗೆ ಇಲ್ಲಾಮ್ಮ
…………………………

ವಾರವಿಡೀ ಕೆಲಸದ ನಂತರ ಒಂದು ದಿವಸ ಸಿಗುವ ರಜಾಗೋಸ್ಕರ ಏನೇನೋ ಪ್ಲಾನ್.

ಈ ವಾರವಂತೂ ನೆನಪಿನಲ್ಲಿ ಎಂದೆಂದು ಉಳಿಯುವಂತಾದ್ದು. ಕಾವೇರಿಗೆ ಸಂಬಂಧಪಟ್ಟಂತೆ ಐತಿಹಾಸಿಕ ನಿರ್ಣಯವನ್ನು ಕವರೇಜ್ ಮಾಡೋ ಅವಕಾಶ. ರಾಜಕೀಯ ಪಕ್ಷಗಳು ಪಕ್ಷಭೇದವನ್ನು ಮರೆತು ಒಂದಾಗಿ ನಿಂತು ಕಾವೇರಿ ಪರ ಒಗ್ಗಟ್ಟಿನ ಪ್ರದರ್ಶನ ಮಾಡಿದ ಕ್ಷಣ ಬಹುಷಃ ಜೀವನದಲ್ಲಿ ತುಂಬಾ ಖುಷಿ ಕೊಟ್ಟ ಕ್ಷಣ…

Jyothi column low resಈ ಖುಷಿಯ ಮಧ್ಯೆ ಈ ಬಾರಿ ಏನು ಬರೆಯಲಿ ಎಂದಾಗ ತಕ್ಷಣ ನೆನಪಾಗಿದ್ದು ಆ ಮಾತುಗಳು.

“ಸ್ವಾತಂತ್ರ್ಬ ಬಂತು ಗೊತ್ತು ಅಮ್ಮ, ಆದರೆ ನಮಗಂತು ಬಂದಿಲ್ಲಮ್ಮ. ಒಂದೇ ಹೊತ್ತು ಊಟ. ಖಾಯಿಲೆಯಿದೆ. ಸರ್ಕಾರಿ ಆಸ್ಪತ್ರೆಗೆ ಹೋದ್ರೆ ಹಣ ಕೇಳ್ತಾರೆ. ನಮ್ಮ ಕಷ್ಟ ಆ ದೇವರೇ ಕೇಳಬೇಕು. ದೇವರು ಇದ್ದಾರೋ ಇಲ್ವೋ ಗೊತ್ತಿಲ್ಲ. ನಮ್ಮ ಪಾಲಿಗಂತು ಇದ್ದ ಹಾಗಿಲ್ಲ. “

ಮೂರು ವರ್ಷಗಳ ಹಿಂದಿನ ಮಾತು. ಕೆಜಿಎಫ್ ಬಳಿಯಿರುವ ಆ ಪುಟ್ಟ ಹಳ್ಳಿಯಲ್ಲಿ ಮಲ ಹೊರುವ ಪದ್ಧತಿ ಇನ್ನು ಜೀವಂತವಾಗಿತ್ತು. ಪರ್ಯಾಯ ಉದ್ಯೋಗ ಕಲ್ಪಿಸದ ಕಾರಣ ಅದು ಮಾಡೋದು ಅನಿವಾರ್ಯವಾಗಿತ್ತು. ಸ್ವಾತಂತ್ರ್ಯ ದಿನಾಚರಣೆಯಂದು ಪ್ರಸಾರ ಮಾಡಲು ಸಫಾಯಿ ಕರ್ಮಾಚಾರಿಗಳ ಬದುಕು ನೋವು ಒಟ್ಟಾರೆ ಆ ಚಿತ್ರಣವನ್ನು ಕಟ್ಟಿಕೊಡುವ ಹಿನ್ನೆಲೆಯಲ್ಲಿ ನಮ್ಮ ತಂಡ ರಾತ್ರಿಯೇ ಅಲ್ಲಿಗೆ ತಲುಪಿತ್ತು . ರಾತ್ರಿ ಮಾತಾಡುತ್ತಿದ್ದ ವೇಳೆ ಒಬ್ಬೊಬ್ಬರದು ಒಂದೊಂದು ನೋವಿನ ಕಥೆ.

ಶಾಂತ ಕುಮಾರ್ ಮಾತಿನ ಗಂಭೀರತೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೆ. ಕೆಲಸವಿಲ್ಲದ ಮೇಲೆ, ಹೊಟ್ಟೆಗೆ ಹಿಟ್ಟಿಲ್ಲದ ಮೇಲೆ, ಸಮಾನತೆಯೆಂಬುದು ಬರೀ ಸಂವಿಧಾನದ ಆಶಯವಾಗಿ ಉಳಿದ ಮೇಲೆ ಶಾಂತ ಕುಮಾರ್ ಅಂತವರು ದೇವರಲ್ಲಿ ನಂಬಿಕೆ ಕಳೆದುಕೊಳ್ಳೋದು ಸಹಜ.

ನನಗಿವತ್ತಿಗು ಬೆಳ್ಳಿರಥ, ಮಾರ್ಬಲ್ ನೆಲದ ದೇವಸ್ಥಾನಗಳು, ಬಸದಿಗಳು,ಚಿನ್ನದ ಲೇಪದ ಮೂರ್ತಿಗಳನ್ನು ಕಂಡಾಗ ಹಸಿವಿನ ಮುಖಗಳು ಕಾಡುತ್ತವೆ. ಎದುರಿಗಿರುವ ಜೀವಗಳಿಗೆ ಸಹಾಯ ಮಾಡದ ನಾವು ಶಕ್ತನಾದವನನ್ನು ಅಲಂಕರಿಸಲು ಹೊರಡುತ್ತೇವೆ. ಯಾವತ್ತಿಗು ಇಂತಹ ಆಡಂಬರ, ಅಬ್ಬರ ಮನಸ್ಸಿಗೆ ಹಿತವೆನಿಸುವುದೇ ಇಲ್ಲ.

ಶಾಂತಕುಮಾರ್ ಕಂಡಾಗಲು ಹಾಗೆ ಅನ್ನಿಸಿತು. ಎಂ. ಜಿ. ರೋಡ್ ನಲ್ಲಿ ಸ್ವಾತಂತ್ರ್ಯೋತ್ಸವದ ದಿನ ತೆರೆದ ಹೈಫೈ ವಾಹನಗಳಲ್ಲಿ ಬಾವುಟ ಹಾರಿಸುತ್ತಾ ಕುಣಿದು ಕುಪ್ಪಳಿಸುತ್ತಾ ಸಾಗುವ ಮುಖಗಳು ಒಂದೆಡೆಯಾದ್ರೆ ಸ್ವಾತಂತ್ರ್ಯ ದಿನದಂದು ಹಸಿದ ಹೊಟ್ಟೆ ಹೊತ್ತು ಮಲಗಿದ ಜೀವಗಳ ಉಸಿರ ಬಿಸಿ ನಮಗೆ ತಾಗುವುದಿಲ್ಲ.

ಇನ್ನು ಶಾಂತಕುಮಾರ ಬಗ್ಗೆ ಹೇಳೋದಾದ್ರೆ ತಂದೆಯು ಪಿಟ್ ಕೆಲಸ ಮಾಡುತ್ತಿದ್ದರಂತೆ. ಈಗ ಶಾಂತ ಕುಮಾರ್ ದೇಹ ಕೃಶವಾಗಿದೆ. ಖಾಯಿಲೆಯ ಗೂಡಾಗಿದೆ. ಸಮಾಜದ ತಿರಸ್ಕಾರ, ವ್ಯವಸ್ಥೆಯ ನಿರ್ಲಕ್ಷ್ಯ ದ ಮಧ್ಯೆ ಅಸ್ತಿತ್ತ್ವಕ್ಕಾಗಿ ಹೆಣಗಾಡೋ ಪರಿಸ್ಥಿತಿ ನಿರ್ಮಾಣವಾಗಿದೆ.

ಅಷ್ಟರಲ್ಲಿ ಲಕ್ಷ್ಮಿ ಎಂಬ ಯುವತಿ ಕಣ್ಣಿಗೆ ಬಿದ್ದರು. ತನ್ನ ತಂದೆ ತಾಯಿ ತೀರಿ ಹೋಗಿದ್ದಾರೆಂದು ತಮ್ಮನನ್ನು ನೋಡಿಕೊಳ್ಳೋ ಜವಾಬ್ದಾರಿಯಿದೆಯೆಂದು ಚಿಕ್ಕವಯಸ್ಸಿನಲ್ಲೇ ಹೆಗಲಿಗೇರಿದ ಜವಾಬ್ದಾರಿಯನ್ನು ವಿವರಿಸತೊಡಗಿದ್ರು.
ಅಲ್ಲಿ ಸೇರಿದ್ದವರ ಮುಖಗಳಲ್ಲಿ ರಾತ್ರಿ ಬಂತೆಂದರೆ ನಾಳಿನ ಚಿಂತೆ. ಇದ್ದವರು ನಾಳೆಯ ಆಗಮನಕ್ಕಾಗಿ ಕಾಯಬಹುದು. ಆದ್ರೆ ಅಲ್ಲಿ ಹಾಗಿರಲಿಲ್ಲ. ಒಂದು ಮುಂಜಾನೆ ಕನಸಿನೊಂದಿಗೆ ಆರಂಭವಾಗೋದಿಲ್ಲ. ರಾತ್ರಿಯು ಕನಸ ಹೊದ್ದು ಸಾಗುವುದಿಲ್ಲ.
ರಾತ್ರಿ ತುಂಬಾ ಹೊತ್ತು ಮಾತಾಡುತ್ತಾ ಕುಳಿತೆ.

ಅಲ್ಲಿ ಕೇಳಿಬಂದಿದ್ದು ಬರೀ ಸಮಸ್ಯೆ. ನಾಗಾಲೋಟದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದೇವೆ ಎಂಬ ಭಾಷಣದ ಸಾಲುಗಳು ಯಾಕೋ ನಮ್ಮನ್ನೇ ವ್ಯಂಗ್ಬ ಮಾಡುವಂತೆ ಮಾಡಿತು. ಇಷ್ಟು ವರ್ಷಗಳ ನಂತರವು ಬದಲಾಗದ ಇವರ ಜೀವನ ಅಭಿವೃದ್ಧಿ ಪಥದಲ್ಲಿ ನಾವಿಟ್ಟ ಹೆಜ್ಜೆಯನ್ನೇ ಅಣಕ ಮಾಡುವಂತಿತ್ತು,

safai-karmachariಕೋಟ್ಯಾಧಿಪತಿಗಳು, ಐಷಾರಾಮಿ ಕಾರುಗಳು, ಬಂಗಲೆಗಳು, ತುತ್ತು ಅನ್ನಕ್ಕಾಗಿ ಪರದಾಡುವ ಮುಖಗಳು ಹೀಗೆ ಇದೆಲ್ಲದರ ಮಧ್ಯೆ ಸಮಾನತೆ ಎಂಬ ಪದವೊಂದು ಕಳೆದುಹೋದಂತೆ ಭಾಸವಾಯಿತು.

ಹಾಗೆ ಅಲ್ಲೇ ಪುಟ್ಟ ಮನೆಯೊಂದರಲ್ಲೇ ನಿದ್ದೆಗೆ ಜಾರಿದೆ.
ಮುಂಜಾನೆಯಾಗಿತ್ತು. ಮತ್ತೆ ಇವತ್ತೇನು ಎಂಬ ಪ್ರಶ್ನೆ.

ಆ ಯುವಕನ ಹೆಸರು ಪ್ರಭು. ದಿಟ್ಟವಾಗಿ ಮಾತಾಡುತ್ತಿದ್ದ. ಮಾತಿನಲ್ಲಿ ಬರೀ ನೋವು ಅವಮಾನವಿತ್ತು. ಕೆಲಸವಿಲ್ಲ, ಭವಿಷ್ಯದ ಬಗ್ಗೆ ಕನಸುಗಳಿಲ್ಲ.
“ ನಾವೇನು ಹೇಳಿದ್ರು ಯಾರು ಕೇಳೋಲ್ಲ, ನಾವು ಸಿಗಬೇಕಾದದ್ದನ್ನು ಕೇಳೋ ಪರಿಸ್ಥಿತಿ ಇಲ್ಲಿಲ್ಲ, ನನ್ನ ಚಿಕ್ಕಪ್ಪ ದುಡಿದಿದ್ದಕ್ಕೆ ಬರಬೇಕಾದ ಹಣ ಕೇಳಿದ್ದಕ್ಕೆ ಮನಸ್ಸಿಗೆ ಬಂದಂತೆ ಥಳಿಸಿದ್ರು. ನಾವಿಲ್ಲಿ ಏನು ಮಾತಾಡೋ ಹಾಗಿಲ್ಲ “
ಅಬ್ಬಾ ನಾವಿನ್ನು ಯಾವ ಕಾಲದಲ್ಲಿದ್ದೀವಿ ಅಂತ ಅಂದ್ಕೊಂಡೆ.

ಅಷ್ಟೊತ್ತಿಗೆ ಎದುರಿಗೆ ಕಂಡದ್ದು ಗೀತಾ ಎಂಬ ಸಹೋದರಿ, ನಮ್ಮ ಪರಿಸ್ಥಿತಿ ಯಾರಿಗು ಬರೋದು ಬೇಡ. ಕೆಲಸವಿಲ್ಲದೆ ಪಿಟ್ ಗೆ ಹೋದವರು ಮೂರು ಮಂದಿ ಸಾವನ್ನಪ್ಪಿದ್ರು ಎಂದ್ರು.

ಮತ್ತೆ ನಡೆಯುತ್ತಲೇ ಇದ್ದೆ. ಆಗ ಮುಖಾ ಮುಖಿಯಾಗಿದ್ದು ನರಸಮ್ಮ. ಕೆಲಸವಿಲ್ಲ. ಓದಬೇಕಿದ್ದ ಮಗ ಕೂಲಿ ಮಾಡುತ್ತಾನೆ. ಅವನು ತಂದ ಅಲ್ಪ ಸ್ವಲ್ಪ ಹಣದಿಂದ ಬದುಕು ಸಾಗಬೇಕು.

“ನಾನು ಹೋಗಿ ಮನೆ ಕೆಲಸ ಕೊಡಿ ಅಂದ್ರೆ ಯಾರು ಕೆಲಸ ಕೊಡೊಲ್ಲ. ಟಾಯ್ಲೆಟ್ ತೊಳೆಯೋರು ಅಂತ ಹಂಗಿಸ್ತಾರೆ. ಕೆಲಸವಿದ್ದರು ಕೊಡಲು ಇಷ್ಟಪಡೊಲ್ಲ. ರಾತ್ರಿ ಒಂದೇ ಹೊತ್ತು ಊಟ. ತುಂಬಾನೆ ಕಷ್ಟ ಮೇಡಂ. ಒಮ್ಮೊಮ್ಮೆ ಅತ್ತು ಬಿಡುತ್ತೇನೆ. ಅದು ಬಿಟ್ಟರೆ ಯಾವುದೇ ಪರಿಹಾರವಿಲ್ಲ “ಎಂದಾಗ ಮತ್ತೊಮ್ಮೆ ಕಣ್ಣಾಲಿಗಳು ತುಂಬಿ ಬಂದಿದ್ದವು.

ಇವರ ಮಾಡುವ ಇಡ್ಲಿ ವಡ ಅಷ್ಟೊಂದು ರುಚಿಯಿತ್ತು. ಅರೆ ಪುಟ್ಟ ಹೋಟೇಲಾದ್ರು ನಡೆಸಬಹುದಲ್ವಾ ಅಂದ್ರೆ ಇವರು ಮಾಡೋ ತಿಂಡಿಯನ್ನು ತಿನ್ನೋರೆ ಇಲ್ಲ. ಇವರು ಮಾಡಿದ್ದನ್ನು ಇವರೇ ತಿನ್ನಬೇಕು. ಸಮಾನತೆಯೆಂಬ ಪದ ಮತ್ತೆ ಕಳೆದುಹೋದಂತೆ ಕಂಡಿತು.

jyothi4ಇಲ್ಲಿನ ಮಕ್ಕಳು ಬಹುತೇಕರು ಶಾಲೆಗೆ ಹೋಗುತ್ತಿಲ್ಲ. ಕೂಲಿ ಮಾಡೋದೇ ಜಾಸ್ತಿ. ತಮಗಿಂದ ಹೆತ್ತವರಿಗೆ ಯಾಕೆ ತೊಂದರೆ ಅಂತ ಇವರೇ ಶಾಲೆ ಮಧ್ಯದಲ್ಲೇ ಬಿಡುತ್ತಾರೆ. ಇನ್ನು ಕೆಲವರು ಹೋಗೋದೇ ಇಲ್ಲ.

ಬಹುಷಃ ಬರೆದಷ್ಟು ಮುಗಿಯದ ಅಸ್ಪೃಶ್ಯತೆಯ ಸುತ್ತದ ನೈಜ ಕಥೆಯಿದು. ಹೋರಾಟದ ಹಾದಿ ತುಳಿದು ಇವರಿಗಾಗಿ ಇನ್ನು ಕನಸು ಕಾಣುತ್ತಿರುವವರ ಸವಾಲಿನ ಸತ್ಯ ವ್ಯಥೆಯಿದು. ನಿಜ ಕನಸು ಕಾಣಬೇಕು, ಸಮಾನತೆಯ ದೀಪವನ್ನು ಹಚ್ಚುವ ಪ್ರಯತ್ನ ನಿರಂತರವಾಗಿ ಸಾಗಬೇಕು. ಒಂದು ದಿನ

ಮೂರು ಹೊತ್ತು ಊಟ ಮಾಡಿ, ಕಣ್ಣ ತುಂಬಾ ನಾಳಿನ ಕನಸ ಹೊತ್ತ ಮುಖಗಳು ಕಾಣಬೇಕು. ಮಕ್ಕಳು ಶಾಲೆಗಳಲ್ಲಿ ಕುಪ್ಪಳಿಸಬೇಕು.
ಸಮಾನತೆಯ ಬೀಜ ಬಿತ್ತುವ ಕಾಯಕ ಮುಂದುವರಿಯಬೇಕು….

ಬರುವ ವಾರ ಮತ್ತೊಂದು ಕವರೇಜ್ ನ ನೆನಪಿನೊಂದಿಗೆ ಬರ್ತೀನಿ…
ಜ್ಯೋತಿ…

‍ಲೇಖಕರು Admin

September 26, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: