ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿಟ್ಟೆ ಜೊತೆ ನಾಗೇಶ್ ಹೆಗಡೆ

ನಾಗೇಶ್ ಹೆಗಡೆ 

ಪುಸ್ತಕ ಬಿಡುಗಡೆ ಅಂದರೆ ಕತ್ತರಿ ಪ್ರಯೋಗ ಮಾಡಿ ಹೊಸ ಪುಸ್ತಕಗಳನ್ನು ಪ್ಯಾಕೆಟ್‍ಗಳಿಂದ ಬಿಡುಗಡೆ ಮಾಡುವುದಲ್ಲ. ಅದರಲ್ಲೂ ಸೃಜನಶೀಲತೆ ಇರುತ್ತದೆ. ನಾನು ವೇದಿಕೆಯ ಮೇಲೆ ಪುಸ್ತಕಗಳನ್ನು ಹೂಗಳ ರಾಶಿಯಿಂದ ಮೇಲೆತ್ತಿದ್ದೇನೆ, ಮರಳಿನ ಪೆಟ್ಟಿಗೆಯಿಂದ ಬಗೆದು ತೆಗೆದಿದ್ದೇನೆ, ಅಷ್ಟೇಕೆ, ನೀರಿನ ಹೂಜಿಯೊಳಗಿಂದ ಹೊಸ ಪುಸ್ತಕವನ್ನು ಹೊರ ತೆಗೆದಿದ್ದೇನೆ.

ಆದರೆ ಅವೆಲ್ಲಕ್ಕಿಂತ ತೀರ ವಿನೂತನ ವಿಧಾನದಲ್ಲಿ ನಿನ್ನೆ (ಏಪ್ರಿಲ್ 15ರ) ಸಂಜೆ ಭಾರತೀಯ ವಿದ್ಯಾಭವನದಲ್ಲಿ ಪುಸ್ತಕ ಬಿಡುಗಡೆ ಮಾಡುವ ಸುಖಾನುಭವ ನನ್ನದಾಯಿತು. ‘ಹುಷಾರಾಗಿ ರಿಬ್ಬನ್‍ ಬಿಚ್ಚಿ’ ಎಂದು ಸಂಘಟಕರು ಹೇಳಿದಾಗಲೇ ಏನೋ ವಿಶೇಷ ಇದೆ ಎಂದು ಗೊತ್ತಾಯಿತು. ನಾನು ಅಲರ್ಟ್ ಆಗಿದ್ದೆ. ಹಿಂದೊಮ್ಮೆ, ‘ಹುಷಾರಾಗಿ ಮುಚ್ಚಳ ತೆಗೆಯಿರಿ’ ಎಂದು ಹೇಳಿ ಹಾವಿರುವ ಮಡಕೆಯ ಬಾಯಿ ಬಿಚ್ಚಿಸಿದ ಘಟನೆಯ ಬಗ್ಗೆ ಇಲ್ಲೇ ಒಂದು ಆಖ್ಯಾಯದಲ್ಲಿ ನಾನು ಬರೆದಿದ್ದೆ ಗೊತ್ತಲ್ಲ?

ಮೆಲ್ಲಗೆ ಬಾಕ್ಸ್ ತೆರೆದೆ. ಪುಸ್ತಕಗಳು ಪೆಟ್ಟಿಗೆಯ ಆಳದಲ್ಲಿದ್ದವು. ಮೇಲಿನ ಆ ಖಾಲಿ ಜಾಗದಿಂದ ಮೆಲ್ಲಗೆ ಒಂದರ ನಂತರ ಒಂದರಂತೆ ಚಿಟ್ಟೆ (ಪಾತರಗಿತ್ತಿ)ಗಳು ನರ್ತಿಸುತ್ತ ಹೊರಕ್ಕೆ ಬರತೊಡಗಿದವು. ಎಂಟೋ ಹತ್ತೋ ಸರಸರ ಹೊರಕ್ಕೆ ಬಂದವು. ಇನ್ನೂ ಹತ್ತಾರು ಚಿಟ್ಟೆಗಳು ಅಲ್ಲೇ ಪುಸ್ತಕಗಳ ಮೇಲೆ ಅಂಟಿಕೊಂಡಿದ್ದವು. ಅವಕ್ಕೆ ಹೊರ ಬರಲು ಅಷ್ಟೇನೂ ಉತ್ಸಾಹ ಇದ್ದಂತಿರಲಿಲ್ಲ. ಎಷ್ಟೆಂದರೂ ಅವು ಕೂತಿದ್ದು ಸುಂದರ ಹೂಗಿಡಗಳ ಮುಖಚಿತ್ರ ಇರುವ ಪುಸ್ತಕಗಳ ಮೇಲೆ ! ಅದು ನಿವೃತ್ತ ಅರಣ್ಯಾಧಿಕಾರಿ ಡಾ. ಸಿ.ಎಚ್‍. ಬಸಪ್ಪನವರು ಬರೆದ ‘ಅಕ್ಕ ಮಹಾದೇವಿಯ ವಚನಗಳಲ್ಲಿ ಪರಿಸರ ಪ್ರಜ್ಞೆ’ ಹೆಸರಿನ ಪುಸ್ತಕವಾಗಿತ್ತು.

ಈ ಕಾರ್ಯಕ್ರಮಕ್ಕೆ ಅವರು ನಡೆಸಿದ ಸಿದ್ಧತೆಯೂ ಅಪೂರ್ವವಾಗಿತ್ತು. ಈ ಐಡಿಯಾ ತಲೆಯೊಳಕ್ಕೆ ಹೊಕ್ಕಿದ ನಂತರ ಡಾ. ಸಿಎಚ್‍ಬಿ ಚಿಟ್ಟೆಗಳ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದರು. ಮನೆಯಲ್ಲೇ ಎರಡು ದಿನಗಳ ಹಿಂದೆಯೇ ತಂಪು ಪೆಟ್ಟಿಗೆಯನ್ನು ಸಜ್ಜಾಗಿಟ್ಟು, ತಮ್ಮ ಮನೆಯ ಯುವಕ ಆಕರ್ಷ್ ಜೊತೆ ಸೇರಿ ಸಮೀಪದ ಉದ್ಯಾನಗಳಲ್ಲಿ ಚಿಟ್ಟೆ ವೀಕ್ಷಣೆ ಮಾಡಿ, ಅವುಗಳನ್ನು ನೋವಾಗದಂತೆ ಹಿಡಿಯಲೆಂದು ಬಲೆಯುಳ್ಳ ಕೋಲನ್ನು ಓಡಾಡಿಸಿ ತಾಲೀಮು ನಡೆಸಿದ್ದರು. ನಿನ್ನೆ ಬೆಳಿಗ್ಗೆ ಅದೇ ಬಲೆಕೋಲನ್ನು ಹಿಡಿದು ಆಕರ್ಷ್ ಅದೇ ಉದ್ಯಾನದಲ್ಲಿ ಓಡಾಡಿ ಎರಡು ಜಾತಿಯ 30-35 ಚಿಟ್ಟೆಗಳನ್ನು ಹಿಡಿದು ತಂದು ಹುಷಾರಾಗಿ (ಹೊಸ ಪುಸ್ತಕಗಳನ್ನಿಟ್ಟ) ತಂಪು ಪೆಟ್ಟಿಗೆಯಲ್ಲಿ ಒಂದೊಂದಾಗಿ ಇರಿಸಿದ್ದ. ಸಂಜೆ ಆರು ಗಂಟೆಯವರೆಗೂ ಮನೆಯ ತಂಪು ಪೆಟ್ಟಿಗೆಯಲ್ಲೇ ಅವುಗಳನ್ನಿಟ್ಟು ಪುಸ್ತಕ ಬಿಡುಗಡೆಯ ಸಮಯಕ್ಕೆ ಸರಿಯಾಗಿ ಎಸಿ ಕಾರಿನಲ್ಲಿ ಪ್ರತ್ಯೇಕವಾಗಿ ತರಲಾಗಿತ್ತು.

ಅರಣ್ಯಾಧಿಕಾರಿಯಾಗಿದ್ದಾಗಲೇ ಹುಲಿ ಆನೆಗಳ ಬಗ್ಗೆ ಅನೇಕ ಮೌಲಿಕ ಕೃತಿಗಳನ್ನು ರಚಿಸಿದ್ದ ಸಿ.ಎಚ್‍. ಬಸಪ್ಪನವರ್ ನಿವೃತ್ತಿ ಪಡೆದ ನಂತರ ಮಂಗಳೂರು ವಿವಿಯಲ್ಲಿ ‘ಆನೆ-ಮಾನವ ಸಂಘರ್ಷ’ ವಿಷಯದ ಮೇಲೆ ಪಿಎಚ್ ಡಿ ಸಂಶೋಧನಾ ಪ್ರಬಂಧ ಬರೆದು ಡಾಕ್ಟರೇಟ್ ಗಳಿಸಿದ್ದಾರೆ.

ಚಿತ್ರದಲ್ಲಿ ಎಡದಿಂದ ಬಲಕ್ಕೆ ಡಾ. MS ಆಶಾದೇವಿ, (ಚಿಂತಕಿ-ಅಂಕಣಕಾರ್ತಿ), ಮಾಜಿ ಸಚಿವೆ ಶ್ರೀಮತಿ ಲೀಲಾದೇವಿ ಆರ್ ಪ್ರಸಾದ್, ಶ್ರೀ ಎಮ್ ರುದ್ರಯ್ಯ (ಪ್ರಕಾಶಕ ಸಂಘದ ರೂವಾರಿ), ನಾನು, ಡಾ. ಬಸಪ್ಪನವರ್, ಡಾ. ಸಿ. ಸೋಮಶೇಖರ (ನಿವೃತ್ತ ಕೆಎಎಸ್‍ ಅಧಿಕಾರಿ) ಮತ್ತು ಮಹಾನಂದಿ ಸಂಘದ ಅಧ್ಯಕ್ಷ ಶ್ರೀ HM ಭರತೇಶ್ ಇದ್ದಾರೆ. ಚಿತ್ರ ಕ್ಲಿಕ್ ಮಾಡುವಾಗ ಹಾರಿದ ಚಿಟ್ಟೆಗಳು ಚಿತ್ರದಲ್ಲಿ ಸೆರೆಯಾಗಿಲ್ಲ. ಅವೆಲ್ಲ ಸಭಾಂಗಣದಲ್ಲಿ ಹಾರಾಡುತ್ತಿದ್ದವು.

‍ಲೇಖಕರು avadhi

17 April, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading