ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಹಾ ಮತ್ತು ನಿನ್ನ ನೆನಪು

ಹೇಮಾ ಸದಾನಂದ್ ಅಮೀನ್

ಬೆಳಗಿನ ಚಹಾ ಕುಡಿಯಬೇಕೆಂದರೆ
ಜೊತೆಗೆ ನಿನ್ನ ನೆನಪಿರಬೇಕು
ಚಿತ್ತದಲಿ ಮುತ್ತಿದ ಹಬೆ ಮತ್ತೆ
ಜೀವ ತುಂಬಿಸಿ ನನ್ನೆದುರು ತಂದ
ಚಿತ್ರಗಳ ಮೇಲಿದ್ದ ಹನಿಗಳ ಮೇಲೆ
ನವಿರಾಗಿ ಬೆರಳಾಡಿಸಿದಾಗ
ಇಣುಕುವ ನೆನಪುಗಳಿಗೆ
ನಿತ್ಯ ಜೀವ ಪಡೆವ ಸುಖ

ಮೊದಲ ಭೇಟಿಗಿಂತ ಮೊದಲ ತೊದಲು
ಮಾತುಗಳ ಸರವು
ಕಳವಾದ್ದೆಲ್ಲಿ ಹೃದಯ ಶುರುವಾದದ್ದೆಲ್ಲಿ ಪ್ರೀತಿ
ಮನಸ್ಸೆಲ್ಲ ತುಂಬಿದ ಮಲ್ಲಿಗೆಯ ಘಮಲು
ಕಾಡಿದ್ದು ಬೇಡಿದ್ದರ ಲೆಕ್ಕ ತಾಳೆ ತಪ್ಪಿ
ಒಪ್ಪಿಕೊಳ್ಳದ ಮುನಿಸು ನಮ್ಮ ನಿತ್ಯದ ದಿರುಸು
ಅಂತರದ ನಂತರ ನೋಡುವ ಸೆಳೆವು

ಇದ್ದಿದ್ದು ಬಿದ್ದೇಳುವ ನಿಷ್ಕಾಳಜಿ
ದ್ವೇಷ , ಅಸೂಯೆ ಅನುಮಾನಗಳನ್ನು
ತನ್ನೊಳಗೆ ಹುದುಗಿಸಿದ ಒಲವು ದಣಿದಾಗ
ಕವಲೊಡೆದ ಮಾರ್ಗದ ಸುತ್ತ ಬಿದ್ದ
ಶುಷ್ಕ ಭಾವನೆಗಳನ್ನು ಒಂದೊಂದಾಗಿ ಹೆಕ್ಕಿ
ಜತನದಲಿ ಕಾಪಿಟ್ಟು ಕೊಂಡಿದ್ದೇನೆ

ಋತುಗಳು ಬದಲಾದಂತೆ ಆಗೊಮ್ಮೆ ಈಗೊಮ್ಮೆ
ನನ್ನೊಳಗಿನ ನಾನೂ ಬದಲಾಗುತ್ತೇನೆ
ಏಕಾಂತದಿಂದ ಅತ್ತ ಸರಿದು
ನಿನ್ನ ಬೆಚ್ಚಗಿನ ನೆನಪುಗಳ ಜೊತೆ ಒಂದಿಷ್ಟು
ಕಾಲ ಬೆರೆಯಲು ತಡಕಾಡುತ್ತೇನೆ

ಚಹಾದ ಕಪ್ಪಿನಲ್ಲಿ ಬಿಡಿಸಿದ ನಿನ್ನ ಚಿತ್ರ
ನಕ್ಕು ನನಗಿಂತಲೂ ನನ್ನ ನೆನಪುಗಳೇ
ಇಷ್ಟ ನಿನಗೆಂದು ಅಣಕಿಸುತ್ತವೆ

‍ಲೇಖಕರು Avadhi

31 October, 2020

2 Comments

  1. Kavya

    Wahh! Tumba channa idde hema ❤️

  2. Shekhar P Chitrapu

    ಮನೋಜ್ಞ ಲೇಖ ಹೇಮಾರವರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading