ಗ್ರಾಮ ಭಾರತದ ಕಥನ- ವೇದಾವತಿ ತೀರದಲ್ಲಿ

ಸಿ ಎಸ್ ಭೀಮರಾಯ

ಡಾ. ಸಂಪಿಗೆ ನಾಗರಾಜ ಹೊಸ ತಲೆಮಾರಿನ ಪ್ರಮುಖ ಕಥೆಗಾರರಾಗಿ ಮತ್ತು ವಿಮರ್ಶಕರಾಗಿ ನಾಡಿನಾದ್ಯಂತ ಗುರುತಿಸಿಕೊಂಡಿದ್ದಾರೆ. ಕಳೆದ ಹದಿನೆಂಟು ವರ್ಷಗಳಿಂದ ಕಥೆಗಳನ್ನು ಬರೆಯುತ್ತಾ ಬಂದಿರುವ ಅವರು ಉತ್ತರ ಕರ್ನಾಟಕದ ಬದುಕಿನ ರೂಕ್ಷಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ, ಸರಾಗವಾಗಿ ಕಥೆ ಹೇಳುವ ಕಲೆಗಾರಿಕೆಯನ್ನು ದಕ್ಕಿಸಿಕೊಂಡಿದ್ದಾರೆ.

ಪ್ರಸ್ತುತ ‘ವೇದಾವತಿ ತೀರದಲ್ಲಿ’ ಡಾ. ಸಂಪಿಗೆ ನಾಗರಾಜರ ಚೊಚ್ಚಲ ಕಾದಂಬರಿ. ವಿಮರ್ಶೆ ಮತ್ತು ಕಥೆಗಳಿಂದ ಸಾಹಿತ್ಯ ವಲಯದ ಗಮನ ಸೆಳೆದ ಸಂಪಿಗೆ ನಾಗರಾಜ ಈಗ ಕಾದಂಬರಿಯ ದೊಡ್ಡ ಬೀಸಿಗೆ ಜಿಗಿದಿದ್ದಾರೆ. ‘ವೇದಾವತಿ ತೀರದಲ್ಲಿ’ ಸಮಕಾಲೀನ ರಾಜಕಾರಣ, ಆಧುನೀಕರಣ, ಕೃಷಿ, ಏತನೀರಾವರಿ ಯೋಜನೆ, ದೇವಸ್ಥಾನ ನಿರ್ಮಾಣ, ರೈತಾಪಿ ಜನರ ಅಸಹಾಯಕತೆ, ಕಾರ್ಮಿಕರ ಸಂಕಟ, ಖಾಸಗೀಕರಣ, ಐದ್ಯೋಗಿಕರಣ, ವಿಮಾನ ನಿಲ್ದಾಣದ ನಿರ್ಮಾಣ, ಸಿಮೆಂಟ್ ಫ್ಯಾಕ್ಟರಿ, ಗಣಿಗಾರಿಕೆ, ಕ್ರೌರ್ಯ, ಅತ್ಯಾಚಾರ ಮತ್ತು ಅಮಾನವೀಯತೆಗಳ ಹೃದಯಸ್ಪರ್ಶಿ ಚಿತ್ರಣವಿದೆ.

ಈ ಯುಗದ ಆಡಳಿತ ಮತ್ತು ಸಾಮಾಜಿಕ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಸಮಾಜದ ವಿವಿಧ ಅಂಗಗಳ ಹೊಂದಾಣಿಕೆ ಇವೆಲ್ಲ ಮೂರ್ತವಾಗಿ ಓದುಗರ ಕಣ್ಣ ಮುಂದೆ ನಿಲ್ಲುತ್ತವೆ. ಮೂವತ್ಮೂರು ಅಧ್ಯಾಯಗಳಲ್ಲಿ ಹರಡಿಕೊಂಡಿರುವ ‘ವೇದಾವತಿ ತೀರದಲ್ಲಿ’ ಕಾದಂಬರಿ ಎರಡು ತಲೆಮಾರುಗಳ ಜೀವನಾನುಭವವನ್ನು ನಿರರ್ಗಳವಾಗಿ ನಿರೂಪಿಸಲು ಬೇಕಾದ ಕಥನ ಕ್ರಮವನ್ನು ಶೋಧಿಸಿಕೊಂಡಿದೆ. ಈ ಕಾದಂಬರಿ ಪ್ರತ್ಯೇಕ ಶೀರ್ಷಿಕೆಗಳಲ್ಲಿ ಒಂದೊಂದು ಸ್ವಾಯತ್ತ ಘಟಕಗಳಂತೆ ಕಂಡೂ ಸಮಗ್ರತೆಯಲ್ಲಿ ಕೋದುಕೊಳ್ಳುವ ಒಂದು ಮಾಲೆಯಂತೆ ಪರಿಣಾಮಕಾರಿಯಾಗುತ್ತದೆ.

ಕಳೆದ ಎರಡು ದಶಕಗಳ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಆದ ಪಲ್ಲಟಗಳನ್ನು ವಿಶಿಷ್ಟವಾಗಿ ಸೆರೆ ಹಿಡಿದಿರುವ ಈ ಕಾದಂಬರಿ ಓದುಗರ ಗಮನ ಸೆಳೆಯುತ್ತದೆ. ಹತ್ತು ವರ್ಷಗಳ ಹಿಂದೆ ಬಳ್ಳಾರಿ ಒಂದು ‘ರಿಪಬ್ಲಿಕ್’. ಅಲ್ಲಿ ಹೇಳುವವರು-ಕೇಳುವವರು ಯಾರೂ ಇರಲಿಲ್ಲ. ಅವರದೇ ಸಂವಿಧಾನ, ಅವರದೇ ಸರಕಾರ, ಅವರದೇ ಕಾನೂನು. ಇದು ಯಾರದು ಎಂದು ಯಾರೂ ಹೇಳಬೇಕಿಲ್ಲ. ಇದು ಇಡೀ ರಾಜ್ಯಕ್ಕೆ ಗೊತ್ತಿರುವ ಸಂಗತಿ.

ಬಳ್ಳಾರಿಯಲ್ಲಿ ಹಣ ಮಾತನಾಡುತ್ತದೆ. ಅದು ಎಲ್ಲರನ್ನೂ ಮಾತನಾಡಿಸುತ್ತದೆ. ಇದು ಇಂದು ನಿನ್ನೆಯ ಕಥೆಯಲ್ಲ. ಇದಕ್ಕೆ ಅನೇಕ ವರ್ಷಗಳ ಇತಿಹಾಸವಿದೆ. ಭ್ರಷ್ಟತೆಯ ಜನರು ಎಗ್ಗಿಲ್ಲದೆ ಮೆರೆಯುತ್ತಿದ್ದರೂ, ಇಡೀ ಸಮಾಜವೇ ಲಜ್ಜೆಯನ್ನು ಕಳೆದುಕೊಂಡ ಸ್ಥಿತಿ ತಲುಪುತ್ತಿದ್ದರೂ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ದನಿ ಕ್ಷೀಣವಾಗುತ್ತಿದೆ. ಭೋಗ ಸಂಸ್ಕೃತಿಯ ವ್ಯಾಮೋಹಕ್ಕೆ ಬಲಿಯಾದ ಸಮಾಜ ಸಹನೆ-ಸಹಬಾಳ್ವೆಯ ಮೌಲ್ಯಗಳಿಂದ ದೂರವಾಗುತ್ತಿದೆ.

ಲೇಖಕರು ಸಮಕಾಲೀನ ಗ್ರಾಮೀಣ ಸಮಾಜವನ್ನು ಕಾಡುತ್ತಿರುವ ಜಾಗತೀಕರಣದ ಪರಿಣಾಮ, ಹಿಂಸೆಯೇ ಪ್ರಧಾನವಾಗುತ್ತಿರುವ ರಾಜಕಾರಣ, ಪರಿಸರದ ಕುರಿತು ಕಾಳಜಿಯಿಲ್ಲದ ಮನುಷ್ಯನ ದುರಾಸೆಗಳನ್ನು ಕುರಿತು ಮಾತನಾಡುತ್ತಾರೆ. ಜಾಗತೀಕರಣದ ಕುರುಹುಗಳಾದ ವಿಮಾನ ನಿಲ್ದಾಣದ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ, ಸಿಮೆಂಟ್ ಫ್ಯಾಕ್ಟ್ರಿ ಸ್ಥಾಪನೆ ಭರಾಟೆಯಲ್ಲಿ ರೈತರು ಭೂಮಿ ಕಳೆದುಕೊಳ್ಳುವ ಸಮಸ್ಯೆ ಮತ್ತು ಅದರ ಪರಿಣಾಮವಾಗಿ ತಮ್ಮ ಮನೆ, ಆಸ್ತಿ, ಜಮೀನುಗಳನ್ನು ಕಳೆದುಕೊಂಡ ಸ್ಥಳೀಯ ಜನರು ಸ್ಥಳಾಂತರಗೊಳ್ಳಬೇಕಾದ ದಾರುಣ ಪರಿಸ್ಥಿತಿಗಳು ಲೇಖಕರನ್ನು ಗಾಢವಾಗಿ ಕಾಡಿವೆ.

ಪ್ರಕೃತಿಯಲ್ಲಿ ಮಿತಿಯಿಲ್ಲದ ದಾಹಕ್ಕೆ ಬಲಿಯಾದವ ಮನುಷ್ಯ. ನೆಲ, ಜಲ ಮತ್ತು ಜೀವಜಗತ್ತಿನ ಸಂಬಂಧಗಳು ಬುದ್ಧಿವಂತ ಮನುಷ್ಯನ ಆಸೆಗಳಿಂದ ವಿಕಾರವಾಗುತ್ತಿರುವ ಪರಿ ವಿಚಿತ್ರ. ಬಳ್ಳಾರಿ ಜಿಲ್ಲೆಯ ವೇದಾವತಿ ತೀರದ ‘ನಾಗಮಲ್ಲಿಗೆ’ ಎಂಬುದು ಇಲ್ಲಿನ ಕಥೆ ನಡೆಯುವ ಕೇಂದ್ರ. ‘ನಾಗಮಲ್ಲಿಗೆ’ ಬರಿಯ ಕಲ್ಪಿತವಾದ ಊರು ಮಾತ್ರವಾಗದೆ ನಮ್ಮ ಯಾವುದೇ ಹಳ್ಳಿ, ನಮ್ಮ ಇಡೀ ದೇಶದ ವರ್ತಮಾನದ ಪರಿಶೀಲನೆಯಾಗಿ ಕಾಣುತ್ತದೆ. ಸಾಮಾಜಿಕ ಸ್ಥಿತ್ಯಂತರ ಇಲ್ಲಿನ ಸ್ಥಾಯಿಭಾವ. ಹಣ, ಅಧಿಕಾರ, ಭೋಗಗಳಿಗೆ ಮಿತಿ ಇಲ್ಲ, ಇರಬಾರದು; ಅಂತಃಕರಣ, ಸತ್ಯ, ಶಾಂತಿ, ವಿನಯ, ಸಹನೆ, ತಾಳ್ಮೆ ಇವು ‘ಗೆಲ್ಲುವ’ ಬದುಕಿಗೆ ಸಲ್ಲುವ- ಈ ಗಲಭೆ ಕೂಸಿನ ಕಿವಿಯನ್ನೂ ತುಂಬುತ್ತಿರುವ ಕಾಲವಿದು.

ಜಗತ್ತಿಗೆ ನಾಗರಿಕತೆಗಳನ್ನು ಕಟ್ಟಿಕೊಟ್ಟ ನದಿಗಳದ್ದು ಅಂದಿನ ಇತಿಹಾಸವಾದರೆ, ನಾಗರಿಕತೆಯ ಕ್ರೌರ್ಯ, ತಲ್ಲಣ, ಮೋಹಗಳು ಹೊಸಕಾಲದ ನದಿಗಳ ಬಾಗಿನವಾಗಿರುವುದು ಇಂದಿನ ಚರಿತ್ರೆ. ಕಟ್ಟಿಕೊಂಡ ಮಾನವೀಯತೆಯು ಕಳಚುವ ಸಂಕಟದಲ್ಲಿ ‘ವೇದಾವತಿ ತೀರದಲ್ಲಿ’ ಕಾದಂಬರಿ ರಚನೆಯಾಗಿದೆ. ವಾಸ್ತವಿಕ ವಿವರಗಳ ಮೂಲಕ ಈ ಕಾದಂಬರಿಯ ಪಾತ್ರಗಳು ಆಪ್ತವಾಗುತ್ತವೆ. ಮತ್ತೆ ಮತ್ತೆ ಪುನರುಕ್ತವಾಗುತ್ತಲೇ ಇರುವ ದೈನಂದಿನ ಸಾಮಾನ್ಯ ಬದುಕಿನೊಳಗೇ ಒಂದೊಂದು ಪಾತ್ರಗಳ ಅಂತರಂಗದ ವೈಶಿಷ್ಟ್ಯವನ್ನು ಸೂಚಿಸುವ ರೀತಿ ಗಮನ ಸೆಳೆಯುತ್ತದೆ.

ನಾಯಕ-ನಾಯಕಿ ಎಂಬ ಹಣೆಪಟ್ಟಿ ಇಲ್ಲದ ಇಲ್ಲಿನ ಹಲವಾರು ಪಾತ್ರಗಳ ಬದುಕು ತಂತಾನಾಗಿ ತೆರೆದುಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಹೊಸ ಮೌಲ್ಯಗಳ ಅನ್ವೇಷಣೆಯೂ ನಿಸರ್ಗದ ಸಹಜ ಕ್ರಿಯೆಯಂತೆ ಪಾತ್ರಗಳೊಳಗಿನಿಂದಲೇ ಹುಟ್ಟಿಕೊಳ್ಳುವುದು ಸಂಪಿಗೆ ನಾಗರಾಜರ ಕಾದಂಬರಿ ರಚನೆ ಹೊಸ ದಿಕ್ಕಿನತ್ತ, ಹೊಸ ಸಾಧ್ಯತೆಗಳತ್ತ ಹೊರಳುತ್ತಿರುವುದರ ಸೂಚನೆಯಾಗಿದೆ. ಸಾಮಾಜಿಕ ಪಲ್ಲಟಗಳನ್ನೂ ಮತ್ತು ವೈಯಕ್ತಿಕ ಬಿಡುಗಡೆಯ ಮಾದರಿಗಳನ್ನೂ ಚಿತ್ರಿಸುವಾಗ ನಾಗರಾಜರು ತಮ್ಮ ಅವಲೋಕನವನ್ನು ಒಂದೇ ವರ್ಗಕ್ಕೇ ಸೀಮಿತಗೊಳಿಸದಿರುವುದು ಗಮನಾರ್ಹವಾಗಿದೆ. ಇದರಿಂದಾಗಿ ಅವರ ಈ ಕಾದಂಬರಿಯಲ್ಲಿ ಮನುಷ್ಯಾನುಭವವು ತುಂಬ ವೈವಿಧ್ಯವನ್ನು ತೋರುತ್ತದೆ.

ಈ ಕಾದಂಬರಿಯ ನಾಯಕರಾದ ಬುಡ್ಡೆಕಲ್ಲು ಕೆಂಚಣ್ಣ ಮತ್ತು ಪೆಂಡಾರಿ ಗಿರಿಮಲ್ಲಪ್ಪರು ಕನ್ನಡ ಕಾದಂಬರಿ ಲೋಕದ ಮರೆಯಲಾಗದ ಪಾತ್ರಗಳು. ಅವರಿಬ್ಬರೂ ಜೀವದ ಗೆಳೆಯರು. ಅವರಿಬ್ಬರ ಪಾತ್ರದ ಮೂಲಕವೇ ಇಡೀ ಕಾದಂಬರಿ ತನ್ನ ಹರಹು ಪಡೆದಿದೆ. ಕೆಂಚಣ್ಣನ ‘ಸಾಮಾಜಿಕ ಕಾಳಜಿ’ ಮತ್ತು ಗಿರಿಮಲ್ಲಪ್ಪನ ‘ಸಮಾಧಾನ’ ಇವು ಒಂದಕ್ಕೊಂದು ಪೂರಕವಾಗಿ ಬೆಳೆಯುತ್ತವೆ. ಗಾಂಧೀಜಿಯ ಕನಸಿನ ಭಾರತವನ್ನು ನಿಜವಾಗಿಸಲೆಂದೇ ಬದುಕುವ ಊರಿನ ಹಿರಿಯರಾದ ಬುಡ್ಡೆಕಲ್ಲು ಕೆಂಚಣ್ಣ ಮತ್ತು ಪೆಂಡಾರಿ ಗಿರಿಮಲ್ಲನಂಥ ಪ್ರಗತಿಪರರಿಂದ ನಾಗಮಲ್ಲಿಗೆಯಲ್ಲಿ ಸುಧಾರಣೆಯ ಗಾಳಿ ಬೀಸುವ ಸೂಚನೆಯಿರುವುದು ಈ ಕಾದಂಬರಿಯಲ್ಲಿ ಎದ್ದು ಕಾಣುವ ಅಂಶ.

ಇಲ್ಲಿನ ಮತ್ತೊಂದು ಬಹು ಮುಖ್ಯ ಪಾತ್ರ ಸಂಗನಬಸಪ್ಪನದು. ಸಂಗನಬಸಪ್ಪನ ಪಾತ್ರವು ಕಾದಂಬರಿಯ ಆಶಯದ ದೃಷ್ಟಿಯಿಂದ ಮತ್ತು ಆ ಪಾತ್ರದ ಬೆಳವಣಿಗೆಯ ದೃಷ್ಟಿಯಿಂದ ಬಹಳ ಮಹತ್ವದ ಪಾತ್ರ. ಅವನು ಕಾದಂಬರಿಯುದ್ದಕ್ಕೂ ‘ಸಾಕ್ಷಿ’ ವ್ಯಕ್ತಿಯಾಗಿ ಇದ್ದಾನೆ. ಸಂಗನಬಸಪ್ಪ ಬುಡ್ಡೆಕಲ್ಲು ಕೆಂಚಣ್ಣ ಮತ್ತು ಪೆಂಡಾರಿ ಗಿರಿಮಲ್ಲಪ್ಪನ ಮುಂದಿನ ಪೀಳಿಗೆಯನ್ನು ಪ್ರತಿನಿಧಿಸುತ್ತಿದ್ದಾನೆ. ಸಂಗನಬಸಪ್ಪ ಬುಡ್ಡೆಕಲ್ಲು ಕೆಂಚಣ್ಣನ ಮಗ. ಅವನು ಒಂದು ರೀತಿಯಲ್ಲಿ ನಗರ ಸಂಸ್ಕೃತಿ ಮತ್ತು ಗ್ರಾಮ್ಯ ಸಂಸ್ಕೃತಿಯನ್ನು ‘ಜೋಡಿಸಿ’ ನೋಡುವ ಪಾತ್ರವಾಗಿ ಮಾರ್ಪಾಡಾಗುತ್ತಾ ಹೋಗುತ್ತಾನೆ.

ಕಾದಂಬರಿಯು ಬೆಳೆದಂತೆ ಸಂಗನಬಸಪ್ಪನ ವಿಶಾಲ ಅನುಭವ ಓದುಗರ ಗಮನಕ್ಕೆ ಬರುತ್ತದೆ. ಸಂಗನಬಸಪ್ಪ ನಿಜವಾದ ನಾಯಕನಾಗಿ, ಉನ್ನತ ಅಧಿಕಾರಿಯಾಗಿ ಬೆಳೆಯುತ್ತಾನೆ. ನೊಂದವರಿಗೆ ನೆರಳಾಗಿ ನಿಂತ ಆತ ಹಲವಾರು ಸಂದರ್ಭಗಳಲ್ಲಿ ಒಬ್ಬ ಮಾನವೀಯ ಹೃದಯದ ಆತ್ಮೀಯನಾಗಿಯೂ ಎದ್ದು ಕಾಣುತ್ತಾನೆ. ಆತನ ಕರ್ತವ್ಯನಿಷ್ಠೆ, ಆದರ್ಶ, ಛಲ, ಪ್ರಾಮಾಣಿಕತೆ ಮತ್ತು ತಾಳ್ಮೆಗಳೆಲ್ಲ ಅನುಕರಣೀಯವಾಗಿವೆ; ಅವನ ಗ್ರಾಮ ಸುಧಾರಣೆಯ ವಿಚಾರಗಳು ಮೆಚ್ಚುವಂತಿವೆ. ಅವನು ಗಾಂಧೀಜಿಯ ಗ್ರಾಮಸ್ವರಾಜ್ಯದ ಕನಸು ಕಂಡವನು. ಆ ಕನಸು ನನಸಾಗಲು ನಿರಂತರ ಪ್ರಯತ್ನಿಸುತ್ತಾನೆ. ಜಿಲ್ಲೆಗೆ ಏತನೀರಾವರಿ ಕನಸನ್ನು ನಿಜಮಾಡುವವನಾಗಿ ಬೆಳೆದ ಸೂಚನೆಯೊಂದಿಗೆ ಕಥೆ ನಿಲುಗಡೆಗೆ ಬರುತ್ತದೆ. ಆತನ ಪಾತ್ರ ನಿರ್ಮಿತಿಯಲ್ಲಿ ಸಂಪಿಗೆ ನಾಗರಾಜರು ತುಂಬ ಸಂಯಮ ತೋರಿರುವುದು ಗಮನಾರ್ಹವಾಗುತ್ತದೆ.

ತಳವಾರ ಸಿದ್ರಾಮನ ಪಾತ್ರ ಗಮನಾರ್ಹವಾಗಿದೆ. ಇದೊಂದು ಗಟ್ಟಿ ವ್ಯಕ್ತಿತ್ವದ ಪಾತ್ರ. ತಳವಾರ ಸಿದ್ರಾಮ ತಳವಾರ ಶಿವಮಲ್ಲನ ಮಗ. ತನ್ನ ತಂದೆ ಸತ್ತ ನಂತರ ತಳವಾರಿಕೆ ಹೋಗಿತ್ತು. ಇದಕ್ಕೆ ಕಾರಣ ಸಿದ್ರಾಮನ ಪ್ರಾಮಾಣಿಕತೆ. ಅನ್ಯಾಯವನ್ನು ನೇರವಾಗಿ ಪ್ರತಿಭಟಿಸುವ ರೋಷ ಅವನಿಗೆ ಅಪ್ಪನಿಂದ ರಕ್ತಗತವಾಗಿ ಬಂದಿತ್ತು. ಇಲಾಖೆಯವರು ಮತ್ತು ಊರ ಪಟೇಲ ಈತನಿಗೆ ತಳವಾರಿಕೆ ಕೆಲಸ ತಪ್ಪಿಸಿದ್ದರು. ಯಾವುದೇ ದುರ್ಗುಣಗಳಿಲ್ಲದ ಅವನು ತನ್ನ ನೇರ ನಡೆ-ನುಡಿಗಳಿಂದ ಊರಿಗೆ ಬೇಕಾದ ವ್ಯಕ್ತಿ. ಅವನು ಯಾವುದೇ ಆಮಿಷಕ್ಕೆ ಬಲಿ ಬೀಳದೆ ಊರಿಗೆ ಒಳ್ಳೆಯದನ್ನೇ ಮಾಡುತ್ತಾನೆ.

ಪಟೇಲ ಚನ್ನೇಗೌಡ ‘ಗೌಡರ’ ಅನೇಕ ಲಕ್ಷಣಗಳನ್ನು ಹೊಂದಿದ್ದಾನೆ. ಚನ್ನೇಗೌಡನ ದುಷ್ಟತನ ಆ ಊರಿನ ನೆಲದಲ್ಲೇ ಬೇರು ಬಿಟ್ಟು, ಅಲ್ಲಿನ ಗಾಳಿ, ನೀರು ಕುಡಿದು ಪುಷ್ಟವಾದದ್ದು. ಅವನು ಕೊಳಕ, ಸುಳ್ಳ, ಮೃಗೀಯವಾದ ವರ್ತನೆ ಇರುವವನು. ಆದರೆ ಕಾಲ ಬದಲಾದಂತೆ ಪಟೇಲ ಚನ್ನೇಗೌಡ ತನ್ನ ತಪ್ಪುಗಳನ್ನು ಒಂದು ಆಯತ ಸಂದರ್ಭದಲ್ಲಿ ಅರಿತುಕೊಂಡು, ತನ್ನನ್ನು ತಾನು ತಿದ್ದಿಕೊಂಡು ಸಂಪೂರ್ಣ ಬದಲಾಗುತ್ತಾನೆ.

ಕಾದಂಬರಿಯನ್ನು ಕುರಿತು ಇನ್ನೂ ಎಷ್ಟೋ ಅಂಶಗಳನ್ನು ಚರ್ಚಿಸಬಹುದು. ಪಟೇಲ ಚನ್ನೇಗೌಡನ ಪಾತ್ರವನ್ನು ಅಷ್ಟೆ. ಅವನು ಎಷ್ಟರಮಟ್ಟಿಗೆ ಆತ್ಮ ವಿಶ್ಲೇಷಣೆ ಮಾಡಿಕೊಳ್ಳುತ್ತಾನೆ, ಇತರರ ಮನಸ್ಸಿನ ಪದರಪದರ ಬಿಡಿಸಿ ನೋಡಬಲ್ಲವನು ಎಂಬುದನ್ನು ಗಮನಿಸುವುದು ಅಗತ್ಯ.
‘ನೆರಳು ಸಿಮೆಂಟ್ ಫ್ಯಾಕ್ಟ್ರಿ’ಯ ಮಾಲೀಕರಾದ ತಿಮ್ಮಾರೆಡ್ಡಿಯ ದುರಾಸೆಯ ಕಾರಣವಾಗಿ ಊರು, ಜನ, ನೀರು, ಪರಿಸರ, ಮನಸ್ಸು ಎಲ್ಲ ಕೊಳಕು ರಾಡಿಯಾಗುತ್ತವೆ.

ತಿಮ್ಮಾರೆಡ್ಡಿ ಮತ್ತು ಅಂಕಿರೆಡ್ಡಿಯರ ದುಷ್ಟತನ, ದುರಾಸೆಗಳ ಮೂಲಕ ಶಾಸಕ ನರೇಂದ್ರನಿಗಿರುವ ಊರಿಗೆ ಒಳಿತಾಗಬೇಕೆಂಬ ಅಭಿವೃದ್ಧಿ ಆಸೆಯ ಮೂಲಕ ನೆರಳು ಸಿಮೆಂಟ್ ಫ್ಯಾಕ್ಟ್ರಿ ನಾಗಮಲ್ಲಿಗೆಗೆ ಕಾಲಿಟ್ಟು ಊರು ಹಾಳಾಗುತ್ತದೆ; ಜೊತೆಗೆ ರಾಜಕೀಯವೂ ಸೇರುತ್ತದೆ. ಗ್ರಾಮದ ಜನರು ಸಾಧಿಸಬಯಸುವ ಕಲ್ಯಾಣವನ್ನು ಆಗುಮಾಡುವ ಸಮಾಜವಾದಿ ಸಚಿವ ಶಿವಶಂಕರಪ್ಪ ದೊಡ್ಡಮೇಟಿ ಇದ್ದಾರೆ. ಹಣ, ಶಕ್ತಿ ಮತ್ತು ಅಧಿಕಾರಗಳ ಮೂಲಕ ಎಲ್ಲರನ್ನೂ ನಿಯಂತ್ರಿಸಬಯಸುವ ಶಾಸಕ ನರೇಂದ್ರ, ಅಂಕಿರೆಡ್ಡಿ ಮತ್ತು ತಿಮ್ಮಾರೆಡ್ಡಿ ಇದ್ದಾರೆ.

ಊರಮ್ಮನ ಗುಡಿಯ ಅಂಗಳದಲ್ಲಿ ಕುಳಿತು ಹಾಡು ಹಾಡುತ್ತಿದ್ದ ನಿಂಗವ್ವನ ಹಾಡು ಇಡೀ ಊರಿನ ನೈತಿಕ ಪತನದ ಪ್ರತಿರೂಪದಂತೆ ಕೇಳಿಸುತ್ತದೆ. ಅವಳ ‘ಮಾಗಿದ’ ದೃಷ್ಟಿಯಿಂದಾಗಿಯೇ ಇಡೀ ಕಾದಂಬರಿಗೊಂದು ಹದ ಮತ್ತು ಸಮತೋಲನ ಒದಗಿದೆ.

ಗುಡಿ ಗುಂಡಾರದ ಜಗಳವ್ಯಾಕೋ ಯಪ್ಪ ಮಾನವಗೆ ಮಾನವನು ತಾ ತಿಳಿಯಬೇಕು
ಎಲ್ಲರೊಳಗೆ ಜೀವ ಶಿವನಾಗಿರುವಾಗ ಗುಡಿಕಟ್ಟಿ ಅವನಿಗೆ ಬಂಧನವ್ಯಾಕೊ
ನಿನ್ನೊಳಗ ನೀ ತಿಳಕೋ ಮನುಷ್ಯ, ಮೋಸ ವಂಚನೆಯ ಮಂತ್ರ ಹೇಳುವುದ್ಯಾಕೋ || (ಪುಟ-೪೭).

ಅವಳ ಈ ಹಾಡು ಮನುಷ್ಯನ ಸಣ್ಣತನ, ಮೋಸ, ಕ್ರೌರ್ಯ ಮತ್ತು ವಂಚನೆಗಳನ್ನು ಚಿತ್ರಿಸುತ್ತದೆ. ಈ ದೇಶದಲ್ಲಿ ಗುಡಿ, ಮಸೀದಿ ಮತ್ತು ಚರ್ಚುಗಳನ್ನು ಕಟ್ಟಲು ಇರುವಷ್ಟು ಜನರ ಆಸಕ್ತಿ ಮನುಷ್ಯ ಸಂಬಂದಗಳನ್ನು ಕಟ್ಟಲು ಇರದಿರುವುದು ವಿಚಿತ್ರ. ಮನುಷ್ಯ ಇತರರನ್ನು ಹೆದರಿಸಲು ದೇವರು ಮತ್ತು ಧರ್ಮಗಳನ್ನು ಹುಟ್ಟಿಸಿದನು. ಅಷ್ಟೆ ಅಲ್ಲದೆ ದೇವರು-ಧರ್ಮಗಳ ಹೆಸರಿನಲ್ಲಿ ಮನುಷ್ಯ ಮನುಷ್ಯರನ್ನೇ ಗುಲಾಮರನ್ನಾಗಿಸಿದನು.

ದೇವರು-ಧರ್ಮಗಳನ್ನು ಉಳಿಸಲು ಹೋಗಿ ಜೀವಗಳು ಉರುಳಿ ಹೋಗುತ್ತಿರುವಾಗ ನಮ್ಮ ಬದುಕಿಗೆ ಈಗ ಅಗತ್ಯವಾದುದು ಏನು? ನಮಗೆ ಜೀವನ ಬೇಕು, ದೇವರ-ಧರ್ಮಗಳ ಹೆಸರಿನಲ್ಲಿ ಹೊಡೆದಾಟ ಬೇಡ. ಹಸಿದಾಗ ಯಾವ ದೇವನೂ ಇಲ್ಲಿ ಅನ್ನ ಕೊಡಲಾರ, ಸಂಪತ್ತು ಕೊಡಲಾರ ಮತ್ತು ಆರೋಗ್ಯ ಕೊಡಲಾರನು. ದೇವರು ಮತ್ತು ಧರ್ಮಗಳ ಹೆಸರಿನಲ್ಲಿ ಇವೆಲ್ಲವನ್ನೂ ಶ್ರೀಮಂತರು ಹಾಗೂ ಮೂಲಭೂತವಾದಿಗಳು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಧರ್ಮ ಅವರ ಅನ್ಯಾಯವನ್ನು ರಕ್ಷಿಸುತ್ತಿದೆ.

ಕಥೆಯಲ್ಲಿ ಬರುವ ರೈತ ಮುಖಂಡ ಮಲ್ಲಿನಾಥ, ಬಟಾಣಿ ರುದ್ರ, ಸಂಗವ್ವ, ಸಾಕವ್ವ, ಮಲ್ಲವ್ವ, ಚಂದ್ರಮ್ಮ, ಗೋವಿಂದ, ಶಂಕರ, ಪಾರ್ವತಿ, ನಿಂಗವ್ವ ಕೂಡ ಎಲ್ಲ ಊರುಗಳಲ್ಲಿ ಇದ್ದಿರಬಹುದಾದವರೇ. ಈ ಎಲ್ಲ ಪಾತ್ರಗಳು ತಮ್ಮ ತಮ್ಮ ವ್ಯಕ್ತಿತ್ವವನ್ನು ಪ್ರದರ್ಶಿಸಿ ಇಡೀ ಕಾದಂಬರಿಗೆ ಜೀವಂತಿಕೆ ತಂದಿವೆ. ಲೇಖಕರು ಕಟ್ಟಿಕೊಡುವ ಅನೇಕ ರಸಕ್ಷಣಗಳು ಕೂಡ ಬೇರೆ ಬೇರೆ ಊರುಗಳಲ್ಲೂ ಸಿಗಬಹುದಾದವೇ ಆಗಿ ಓದುಗರ ಅನುಭವಕ್ಕೆ ನಿಲುಕುವುದರಿಂದ ಲೇಖಕರು ಆಪ್ತವಾಗುತ್ತಾರೆ.

ಒಂದು ಪ್ರಾದೇಶಿಕ ಕಥನ ಎಂದು ಮೇಲ್ನೋಟಕ್ಕೆ ಅನ್ನಿಸಬಹುದಾದರೂ ‘ವೇದಾವತಿ ತೀರದಲ್ಲಿ’ ಅಂಥ ಪ್ರದೇಶಗಳನ್ನು ಹಾಗೂ ಇಂಥದೇ ಕಥನಗಳನ್ನು ಒಡಲಲ್ಲಿ ಇಟ್ಟುಕೊಂಡ ಗ್ರಾಮ ಭಾರತದ ಕಥನವೇ ಆಗಿದೆ. ಆದರೂ ಈ ಕಾದಂಬರಿಗೆ ಒಂದೆರಡು ಸಣ್ಣಪುಟ್ಟ ಮಿತಿಗಳುಂಟು. ಮೊದಲನೆಯದಾಗಿ, ಕಥಾವಸ್ತು ಹೆಚ್ಚಾಯಿತು ಎನ್ನುವುದು. ಕ್ರಿಯೆ ಓಡುತ್ತಿರುತ್ತದೆ. ಎರಡನೆಯದಾಗಿ, ಕೆಲವು ಕಡೆ ಕಲಾತ್ಮಕತೆಯ ಕೊರತೆ ಎದ್ದು ಕಾಣುತ್ತದೆ. ಈ ಕೊರತೆಗಳ ನಡುವೆಯೂ, ಸಮಕಾಲೀನ ಸಮಾಜದ ಹಾಗೂ ಒಟ್ಟು ವ್ಯವಸ್ಥೆಯಲ್ಲಿರುವ ಭ್ರಷ್ಟ ರಾಜಕಾರಣ ಮತ್ತು ಕ್ರೌರ್ಯವನ್ನು ನೇರವಾಗಿ ಬಿಚ್ಚಿ ತೋರಿಸುವ ಈ ಕಾದಂಬರಿ ಸಾಮಾನ್ಯ ಜನರ ಶೋಷಣೆಯನ್ನು ವಾಸ್ತವದ ನೆಲೆಯಲ್ಲಿ ಕಟ್ಟಿಕೊಡುವ ಕಾರಣ ಒಂದು ಸಮಾಜವಾದಿ ಹಾಗೂ ಪ್ರಗತಿಪರ ಕಾದಂಬರಿಯಾಗಿ ಕಾಣುತ್ತದೆ.

ಈ ಕಾದಂಬರಿಯಲ್ಲಿ ಸಂಭಾಷಣೆಗಳಿವೆಯಾದರೂ ಅವು ಮುಖ್ಯವಾಗಿ ನೇರ ನಿರೂಪಣೆಯಲ್ಲೇ ಸೇರಿಕೊಂಡಿವೆ. ಬಳ್ಳಾರಿ ಸೀಮೆಯ ಗ್ರಾಮ್ಯ ಭಾಷೆ ಓದಿನ ಸುಖ ಹೆಚ್ಚಿಸುತ್ತದೆ. ಇಡೀ ಕಾದಂಬರಿ ವಾಸ್ತವತೆಯನ್ನು ಬಿಂಬಿಸುತ್ತದೆ. ಸರಳ ಹಾಗೂ ನೇರ ಕಥನ ಕಲೆ ಇಡೀ ಕಾದಂಬರಿಯನ್ನು ಅಡೆತಡೆಯಿಲ್ಲದೆ ಓದಿಸಿಕೊಂಡು ಹೋಗುವಂತಿದೆ. ವಾಸ್ತವ ಪಾತ್ರಸೃಷ್ಟಿ, ಅದರ ನಿರ್ವಹಣೆ, ಅಂಥ ಸನ್ನಿವೇಶಗಳ ನಿರ್ವಹಣೆಗಳಲ್ಲಿ ಸಂಪಿಗೆ ನಾಗರಾಜರ ಸೃಜನಶೀಲ ಪ್ರತಿಭೆ ಅಸಾಧಾರಣ ಶೈಲಿಯಲ್ಲಿ ಮಿಂಚುತ್ತದೆ.

ಭಾಷೆ, ಸಂಕೇತ-ರೂಪಕ-ಸಾದೃಶ್ಯಗಳಲ್ಲಿ ಧ್ವನಿಪೂರ್ಣವಾಗುತ್ತದೆ. ಸಮಕಾಲೀನ ಸಮಸ್ಯೆಯ ನಿರೂಪಣೆ ಯಾವಾಗಲೂ ಕಠಿಣವಾದದ್ದು ಹಾಗೂ ಕಾದಂಬರಿಕಾರನಿಗೆ ಸವಾಲಾಗಿ ಬರುವಂಥದ್ದು. ಅದಕ್ಕೆ ಮೂಲಭೂತವಾಗಿ ಬೇಕಾದದ್ದು ಜೀವನದ ತಾಜಾ ಅನುಭವ ಹಾಗೂ ಜೀವನದ ಸೂಕ್ಷ್ಮ ವೀಕ್ಷಣೆ. ಇವೆರಡಕ್ಕೂ ಸಾಕ್ಷಿಯಾಗಿ ಕಾದಂಬರಿಯ ಎಲ್ಲ ಭಾಗಗಳು ಬೆಳೆದು ಬಂದಿರುವುದರಿಂದ ‘ವೇದಾವತಿ ತೀರದಲ್ಲಿ’ ಕನ್ನಡ ಕಾದಂಬರಿ ಪ್ರಪಂಚದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆಯುತ್ತದೆ.

‍ಲೇಖಕರು Avadhi

June 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: