ಮಂಗಳೂರು ವಿವಿ ಇತಿಹಾಸದಲ್ಲಿ ‘ಸವದತ್ತಿ ಯುಗ’

ಡಾ ಬಿ ಎ ವಿವೇಕ ರೈ

ಪ್ರೊ.ಎಂ .ಐ.ಸವದತ್ತಿ ಅವರು ೧೯೮೯ ರಿಂದ ೧೯೯೫ರವರೆಗೆ ಆರು ವರ್ಷಗಳ ಕಾಲ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಆಗಿದ್ದರು. ಅವರು ‌ಮಂಗಳೂರು ವಿವಿಯ ಮೂರನೆಯ ಕುಲಪತಿ. ೧೯೮೯ ರ ವೇಳೆಗೆ ಮಂಗಳೂರು ವಿವಿ ಆವರಣದಲ್ಲಿ ಹೆಚ್ಚು ಭೌತಿಕ ಸೌಕರ್ಯಗಳು ಇರಲಿಲ್ಲ. ಆಡಳಿತ ಕಟ್ಟಡ, ಗ್ರಂಥಾಲಯ ಇತ್ಯಾದಿ ಅನುಕೂಲಗಳು ಇರಲಿಲ್ಲ. ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿ ಇರಲಿಲ್ಲ. ಪ್ರೊ.ಸವದತ್ತಿ ಅವರು ಮಂಗಳೂರು ವಿವಿಯ ಆಡಳಿತ ವ್ಯವಸ್ಥೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಗಮನ ಕೊಟ್ಟರು. ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಿಗೆ ಉತ್ತೇಜನ ಕೊಟ್ಟರು.

ಅವರ ಕುಲಪತಿಯ ಅವಧಿಯಲ್ಲಿ ನಾನು ಅನೇಕ ಹೊಸ ಶೈಕ್ಷಣಿಕ ಕೆಲಸಗಳನ್ನು ಮಾಡಲು ಸಾಧ್ಯ ಆದುದರ ಬಗ್ಗೆ ನನಗೆ ತೃಪ್ತಿ ಇದೆ. ಆಡಳಿತಕ್ಕೆ ಸಂಬಂಧಿಸಿದ ಅನೇಕ ಪಾಠಗಳನ್ನು ಅವರಿಂದ ನಾನು ಕಲಿತಿದ್ದೇನೆ. ಕನ್ನಡ ವಿಭಾಗದ ಮುಖ್ಯಸ್ಥನಾಗಿ ಅನೇಕ ಮಹತ್ವದ ವಿಚಾರ ಸಂಕಿರಣ ಮತ್ತು ಕಮ್ಮಟಗಳನ್ನು ನಡೆಸಲು ಅವರು ಮಾರ್ಗದರ್ಶನ ಮತ್ತು ಬೆಂಬಲವನ್ನು ಕೊಟ್ಟರು. ಕನಕದಾಸರ ಸಾಹಿತ್ಯ, ಜನಪದ ಆಟಗಳು,ಅಂಬೇಡ್ಕರ್ ಅವರ ಕೃತಿಗಳು ಮತ್ತು ಕೊಡುಗೆ, ಕುವೆಂಪು ಕಾದಂಬರಿಗಳು: ಅಂತಹ ಕೆಲವು ಮುಖ್ಯ ಕಾರ್ಯಕ್ರಮಗಳು.
೧೯೯೦ರಲ್ಲಿ ನಡೆಸಿದ ‘Folk epics and Oral Poetry’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅಂತಾರಾಷ್ಟ್ರೀಯ ಜಾನಪದ ವಿದ್ವಾಂಸರು ಭಾಗವಹಿಸಿದರು.

ಮಂಗಳೂರು ವಿವಿಯಲ್ಲಿ ತುಳುಪೀಠ, ಪ್ರಸಾರಾಂಗ, ಡಾ.ಶಿವರಾಮ ಕಾರಂತ ಪೀಠಗಳು ಸ್ಥಾಪನೆ ಆದದ್ದು ಸವದತ್ತಿ ಅವರ ಕಾಲದಲ್ಲಿ. ೧೯೯೨ರಲ್ಲಿ ತುಳುಪೀಠ ಸ್ಥಾಪಿಸಲು ಪ್ರಸ್ತಾವ ಸಿದ್ಧಪಡಿಸಲು ಅವರು ಹೇಳಿದಂತೆ ಸಿದ್ದಪಡಿಸಿದೆ. ಅವರ ಸೂಚನೆಯಂತೆ ಬೆಂಗಳೂರಿಗೆ ಆಗ ಕರ್ನಾಟಕ ಸರಕಾರದಲ್ಲಿ ಕನ್ನಡ ಸಂಸ್ಕೃತಿ ಸಚಿವರಾಗಿದ್ದ ಡಾ.ಜೀವರಾಜ ಆಳ್ವ ಅವರನ್ನು ಭೇಟಿಯಾಗಿ ಪ್ರಸ್ತಾವ ಸಲ್ಲಿಸಿದೆ.ಅವರು ಸರಕಾರದಿಂದ ಎರಡೂವರೆ ಲಕ್ಷ ರೂ ಕೊಡಿಸಿದರು. ಆಮೇಲೆ ಕುಲಪತಿ ಅವರ ನಿರ್ದೇಶನದಂತೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಕಂಡು ಕೋರಿಕೆ ಸಲ್ಲಿಸಿದೆ. ಅವರು ಎರಡೂವರೆ ಲಕ್ಷ ರೂ ಕೊಟ್ಟರು. ಹೀಗೆ ಐದು ಲಕ್ಷ ಮೂಲಧನದಲ್ಲಿ ೧೯೯೨ರಲ್ಲಿ ತುಳು ಪೀಠ ಆರಂಭ ಮಾಡಿದೆವು. ನಾನೇ ಅದರ ಗೌರವ ನಿರ್ದೇಶಕ ಆಗಬೇಕು ಎನ್ನುವ ಕುಲಪತಿ ಅವರ ಒತ್ತಾಸೆಯಂತೆ ಕೆಲಸ ಮಾಡಿದೆ. ಸಂಶೋಧನಾ ಯೋಜನೆಗಳನ್ನು ಕಮ್ಮಟಗಳನ್ನು ನಡೆಸಿದೆ.

ಮಂಗಳೂರು ವಿವಿಯಲ್ಲಿ ಪ್ರಸಾರಾಂಗ ಆಗಬೇಕು ಎನ್ನುವ ಕೋರಿಕೆಯನ್ನು ಕುಲಪತಿ ಪ್ರೊ.ಸವದತ್ತಿ ಅವರ ಮುಂದೆ ಇಟ್ಟೆ. ಶುರುಮಾಡಿ, ನೀವೇ ಗೌರವ ನಿರ್ದೇಶಕ ಆಗಿ‌ ಎಂದು ಅದರ ಹೊಣೆಯನ್ನು ನನ್ನ ತಲೆಗೆ ಕಟ್ಟಿದರು. ಆದರೆ ಅನುದಾನ ಏನೂ ಇರಲಿಲ್ಲ. ಪ್ರಚಾರ ಉಪನ್ಯಾಸ ಶುರುಮಾಡೋಣ ಎಂದು ತಾವೇ ಮೊದಲ ಉಪನ್ಯಾಸ ಕೊಡುತ್ತೇನೆ ಎಂದರು. ೧೯೯೨ ರಲ್ಲಿ ಪುತ್ತೂರಿನಲ್ಲಿ ಮೊದಲ ಉಪನ್ಯಾಸ ಕಾರ್ಯಕ್ರಮ ನಡೆಸಿದೆ. ಸವದತ್ತಿ ಅವರ ಉಪನ್ಯಾಸ: ‘ಸಾಹಿತ್ಯ ಮತ್ತು ವಿಜ್ಞಾನ’. ಡಾ.ಚಂದ್ರಶೇಖರ ಕಂಬಾರರ ಉಪನ್ಯಾಸ: ‘ರಂಗಭೂಮಿ’. ಕಂಬಾರರು ಆಗ ಕನ್ನಡ ವಿವಿಯ ವಿಶೇಷಾಧಿಕಾರಿ ಆಗಿದ್ದರು, ಕುಲಪತಿ ಆಗುವ ಪೂರ್ವದಲ್ಲಿ. ಮುಂದೆ ಪ್ರಕಟನೆಗಳಿಗೆ ವಿವಿ ಅನುದಾನದಿಂದ ಸ್ವಲ್ಪ ಹಣ ಕೊಟ್ಟರು.

ಎಂ.ವೀರಪ್ಪ ಮೊಯಿಲಿ‌ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಕಾಲ. ೧೯೯೪ ರಲ್ಲಿ ಅವರು ಮಂಗಳೂರು ವಿವಿಯಲ್ಲಿ ಕಾರಂತ ಪೀಠ ಮಾಡುವ ಘೋಷಣೆ ಮಾಡಿದರು. ಸವದತ್ತಿ ಅವರು ನನ್ನನ್ನು ಕರೆದು ಕಾರಂತ ಪೀಠದ ಪ್ರಸ್ತಾವನೆ ಸಿದ್ಧಪಡಿಸಲು ಹೇಳಿದರು. ಮೊಯಿಲಿ‌ ಅವರು ಮೊದಲ ಕಂತು ಆಗಿ ಐದು ಲಕ್ಷ ರೂ ಬಿಡುಗಡೆ ಮಾಡಿದರು.

ಕಾರಂತ ಪೀಠದ ಹೊಣೆಗಾರಿಕೆಯನ್ನು ಕುಲಪತಿಗಳು ನನ್ನ ಮೇಲೆ ಹೊರಿಸಿದರು. ಅಷ್ಟರಲ್ಲಿ ಶಿವರಾಮ ಕಾರಂತರು ತಮ್ಮ ಬಿಡಿಬರಹಗಳ ಸಮಗ್ರ ಸಂಪುಟಗಳ ಪ್ರಕಟನೆಯ ಯೋಜನೆಯನ್ನು ಕೊಟ್ಟರು. ಆದರೆ ಅದಕ್ಕೆ ನಮ್ಮಲ್ಲಿ ಹಣಕಾಸಿನ ವ್ಯವಸ್ಥೆ ಇರಲಿಲ್ಲ. ಕುಲಪತಿ ಅವರು ಮಾಡೋಣ ಎಂದು ಭರವಸೆ ಕೊಟ್ಟರು. ಕಾರಂತರ ಬಿಡಿಬರಹಗಳನ್ನು‌ ಶ್ರೀಮತಿ ಮಾಲಿನಿ ಮಲ್ಯರು ಎಂಟು ಸಂಪುಟಗಳಲ್ಲಿ ಸಂಪಾದನೆ ಮಾಡಿಕೊಟ್ಟರು. ಅದರ ಪ್ರಕಟಣೆ ಮತ್ತು ಬಿಡುಗಡೆಯ ಜವಾಬ್ದಾರಿ ನನ್ನದು.

ಮೂರು ವರ್ಷಗಳ ಯೋಜನೆಯನ್ನು ಎರಡೂವರೆ ವರ್ಷಗಳಲ್ಲಿ ಮುಗಿಸಿದಾಗ ಪ್ರೊ.ಸವದತ್ತಿ ಅವರು ನನ್ನ ಬಗ್ಗೆ ಆಡಿದ ಅಭಿಮಾನದ ಮಾತುಗಳು ನನಗೆ ಬಹಳ ದೊಡ್ಡ ಪ್ರಮಾಣ ಪತ್ರ ಎಂದು ತಿಳಿದಿದ್ದೇನೆ. ಆ ಸಂಪುಟಗಳ ಬಿಡುಗಡೆಯನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಹಿರಿಯರಿಂದ ಮಾಡಿಸಿದ ಧನ್ಯತೆ ನನ್ನದು. ದೇ ಜವರೇಗೌಡ, ಹಾ ಮಾ ನಾಯಕ, ಯು‌ ಆರ್ ಅನಂತಮೂರ್ತಿ, ಡಿ. ವೀರೇಂದ್ರ ಹೆಗ್ಗಡೆ ಇವರು.‌ ಪ್ರತಿಯೊಂದು ಕಾರ್ಯಕ್ರಮದಲ್ಲಿ ಕಾರಂತರು ಭಾಗವಹಿಸಿದರು. ಕುಲಪತಿ ಪ್ರೊ.ಸವದತ್ತಿ ಅಧ್ಯಕ್ಷತೆ ವಹಿಸಿ ಆಯಾ ಸಂದರ್ಭಕ್ಕೆ ಅನುಗುಣವಾದ ಮಾತುಗಳನ್ನು ಆಡಿದರು.

ಮಾಚಾರು ಗೋಪಾಲ ನಾಯ್ಕರು ಹಾಡಿದ ಸಿರಿ ಮಹಾಕಾವ್ಯದ ದಾಖಲೀಕರಣ ಯೋಜನೆಯನ್ನು ಫಿನ್ಲೆಂಡ್‌ನ ಪ್ರೊ.ಲೌರಿ ಹಾಂಕೊ ಅವರು ಆರಂಭಿಸಿ, ಅದರಲ್ಲಿ ನನ್ನನ್ನು ಮತ್ತು ಡಾ‌.ಚಿನ್ನಪ್ಪ ಗೌಡರನ್ನು ತೊಡಗಿಸಿಕೊಂಡಾಗ ಅದಕ್ಕೆ ಅನುಮತಿ ಕೊಟ್ಟದ್ದು ಅಷ್ಟೇ ಅಲ್ಲದೆ, ಅದರ ಆಗುಹೋಗುಗಳಲ್ಲಿ ಸಹಕರಿಸಿ ನಮ್ಮ ಯೋಜನೆಯ ಯಶಸ್ಸಿಗೆ ಕಾರಣರಾದವರು ಪ್ರೊ.ಸವದತ್ತಿ ಅವರು. ೧೯೯೪ರಲ್ಲಿ ಕರ್ನಾಟಕ ಸರಕಾರವು ನನ್ನನ್ನು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿ ಮಾಡಿದಾಗ ನನಗೆ ಅಧಿಕೃತವಾಗಿ ಪತ್ರ ಬರೆದು ಅಭಿನಂದಿಸಿದ್ದು ಮಾತ್ರವಲ್ಲದೆ ವಿವಿ ಕೆಲಸಗಳ ಜೊತೆಗೆ ಅಕಾಡೆಮಿಯ ಕಾರ್ಯಕ್ರಮಗಳನ್ನು ಮಾಡಲು ಮುಕ್ತ ಅವಕಾಶವನ್ನು ಕಲ್ಪಿಸಿದರು.

ಮಂಗಳೂರಿನ ಸರಕಾರಿ ಕಾಲೇಜನ್ನು ಮತ್ತು ಮಡಿಕೇರಿಯ ಸರಕಾರೀ ಕಾಲೇಜನ್ನು ಸರಕಾರದ ವಶದಿಂದ ಮಂಗಳೂರು ವಿವಿಯ ವಶಕ್ಕೆ ತೆಗೆದುಕೊಂಡು ಅಧ್ಯಾಪಕರ ನೇಮಕಾತಿ, ಭೌತಿಕ ಸೌಲಭ್ಯಗಳನ್ನು ಒದಗಿಸಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅನುಕೂಲವನ್ನು ಮಾಡಿಕೊಟ್ಟರು.

ಪ್ರೊ.ಸವದತ್ತಿ ಅವರು ಕಳೆದ ಕೆಲವು ವರ್ಷಗಳಿಂದ ಬೆನ್ನುನೋವಿನ ತೊಂದರೆಯಿಂದ ಮನೆಯಲ್ಲೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಕೆಲವೊಮ್ಮೆ ಧಾರವಾಡಕ್ಕೆ ಹೋದಾಗ ಅವರನ್ನು ಕಂಡು ಮಾತಾಡುವಾಗ ಮಂಗಳೂರು ವಿವಿ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದೆವು. ಕಳೆದ ವಾರ ಮೇ ೨೮ ರಂದು ಫೋನಿನಲ್ಲಿ ಪ್ರೊ.ಸವದತ್ತಿ ಅವರ ಜೊತೆಗೆ ಮಾತಾಡಿದಾಗ ದನಿ ಕುಗ್ಗಿತ್ತು. ಆದರೆ ಅವರ ಅನನ್ಯತೆಯ ಗಟ್ಟಿ ನಗು ಹಾಗೆಯೇ ಇತ್ತು.

ಸುಮಾರು ೮೯ ವರ್ಷ ಸಾರ್ಥಕ ಬದುಕನ್ನು ಬಾಳಿದವರು ಪ್ರೊ.ಸವದತ್ತಿ. ಮಂಗಳೂರು ವಿವಿ ಇತಿಹಾಸದಲ್ಲಿ ‘ಸವದತ್ತಿ ಯುಗ’ ಒಂದು ಶಾಶ್ವತವಾಗಿ ಉಳಿಯುತ್ತದೆ. ನನ್ನ ಶೈಕ್ಷಣಿಕ ಮತ್ತು ಆಡಳಿತದ ಯಶಸ್ಸಿನಲ್ಲಿ ಸವದತ್ತಿ ಅವರ ಒಂದು ಗಟ್ಟಿ ಪಾಲು ಸದಾ ಇರುತ್ತದೆ.

ಹುದ್ದೆಗಳಿಂದ ನಿವೃತ್ತಿ ಮತ್ತು ಬದುಕಿನಿಂದ ಬಿಡುಗಡೆ ಎಲ್ಲರಿಗೂ ಒಂದಲ್ಲ ಒಮ್ಮೆ ಬಂದೇ ಬರುತ್ತದೆ. ಆದರೆ ನೆನಪುಗಳ ಮತ್ತು ಕೃತಜ್ಞತೆಯ ಭಾವನೆಗಳು ಎಂದೂ ಸಾಯುವುದಿಲ್ಲ, ಸಾಯಬಾರದು.

‍ಲೇಖಕರು Avadhi

June 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: