ಗೋಪಾಲ ತ್ರಾಸಿ ಓದಿದ ‘ಬೊಗಸೆಯಲ್ಲೊಂದು ಹೂನಗೆ’

ಗೋಪಾಲ ತ್ರಾಸಿ, ಮುಂಬೈ

**

ಹೌದೌದು ಈ ಪ್ರಬಂಧ ಕೃತಿ ನೆನಪುಗಳ ಸುಂದರ ಲಹರಿ.  ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರಾದ ಅಂಜನಾ ಹೆಗಡೆ ಅವರ ‘ಬೊಗಸೆಯಲ್ಲೊಂದು ಹೂ ನಗೆ’ ಇದು ಅಂಕಣ ಬರಹಗಳ ಕೃತಿ.  ಅವರು ಸುಮಾರು ಹದಿನೈದು ವರ್ಷಗಳ ಹಿಂದೆ   “ಕಾಡ ಕತ್ತಲೆಯ ಮೌನಮಾತುಗಳು” ಎಂಬ ಕವನ ಸಂಕಲನವನ್ನು ಪ್ರಕಟಿಸಿ ತೀರಾ ಈಚೆಗಿನವರೆಗೆ ಏನೂ ಬರೆಯದೆ ಮೌನವಾಗಿದ್ದವರು.  ಇದರಲ್ಲಿ ‘ಸಂಗಾತಿ’ ಇ-ಪತ್ರಿಕೆಯಲ್ಲಿ ಪ್ರಕಟಗೊಂಡ 22 ಅಂಕಣ ಬರಹಗಳಿವೆ. ಎಲ್ಲವೂ ಬಾಲ್ಯಕಾಲದ ಸವಿ ಸವಿ ನೆನಪುಗಳ ಬಣ್ಣ ಬಣ್ಣದ ಹೂ ಪಕಳೆಗಳು.

ಸಾಮಾನ್ಯ  ಹವ್ಯಕ ಮನೆಯ ಹುಡುಗಿಯರ ಪ್ರತೀಕ ಎಂಬಂತೆ ಲೇಖಕಿ ಇಲ್ಲಿ ಅಕ್ಕರಾಸ್ಥೆಯಿಂದ ಅಜ್ಜಿ ಅಮ್ಮ ಚಿಕ್ಕಮ್ಮ ನೊಡನೆ ಕಳೆದ ಪುಟ್ಟ ಪುಟ್ಟ ಸಂಗತಿಗಳನ್ನು ಮೆಲುಕು ಹಾಕುತ್ತಾರೆ. ರೈತಾಪಿ ಹಳ್ಳಿ ಮನೆಯ ತುಂಬು ಕುಟುಂಬ ಜೀವನದ ಎಳೆ ಹುಡುಗಿಯ ಕನಸುಗಳ ಸಾಂಗತ್ಯದಲ್ಲಿ ಅಪ್ಪ ಮತ್ತು ಅಜ್ಜನ ಪಾತ್ರವೂ ಬಹು ದೊಡ್ಡದೇ. ಅಪ್ಪನ ಜವಾಬ್ದಾರಿ, ಅಕ್ಕರೆ, ಕಾಳಜಿ ಒಂದು ತರಹದ್ದಾದರೆ; ಅಜ್ಜ, ಅಜ್ಜನ ಮನೆ, ಮಾವಿನ ತೋಟ, ಅಜ್ಜನ ಕಥಾಲೋಕದ ಸಂಭ್ರಮ, ಅದೇ ಶಿಸ್ತಿನ ಅಜ್ಜ ಬೆಳಿಗ್ಗೆ ಎದ್ದು ಸ್ನಾನ ಮುಗಿಸಿದವನೇ ಮಕ್ಕಳನ್ನು ( ಓಸಿ ನಂಬರಿಗಾಗಿ) ‘ ರಾತ್ರಿ ಏನಾದರೂ ಕನಸು ಬಿತ್ತಾ’ ಅಂತ ಕೇಳೋದೂ….ಹೀಗೆ ಅಜ್ಜನ ಮನೆಯೆನ್ನುವ   ಬೇರೊಂದೇ  ಪ್ರಪಂಚವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾರೆ. ತುಂಬಾ ಮಮತೆಯಿಂದ, “ಅಜ್ಜ ನೆನಪಿಗೆ ಬಂದಾಗಲೆಲ್ಲ ಅಜ್ಜನ ಮನೆ ಎನ್ನುವ ಮಮತೆಯ ಮಲ್ಹಾರವೊಂದು ಮನಸ್ಸನ್ನೆಲ್ಲ ತುಂಬಿಕೊಳ್ಳುತ್ತದೆ.” ಎಂದು ಖುಷಿ ಪಡುತ್ತಾರೆ.

ಅಂಜನಾ ಹೆಗಡೆ ಅವರ ಕೆಲವು ಪ್ರಬಂಧಗಳ  ಶೀರ್ಷಿಕೆಗಳ ಸೊಗಸು ನೋಡಿ.  ಕನಸಿನ ಚಾದರ, ಬೊಗಸೆಯಲ್ಲೊಂದು ಹೂನಗೆ, ಮಾತು ಅರಳುವ ಹೊತ್ತು, ಕರ್ಟನ್ನಿನ ಮೇಲೊಂದು ಕೇತಕಿ ಹೂವು, ಹೂವು ಹೊರಳುವ ಹಾದಿ, ಜಗಲಿ ಎನ್ನುವ ಮೊದಲ ಪ್ರೇಮ, ಹಸಿರು ದುಪ್ಪಟ್ಟಿಯ ಮಡಿಲು, ಬಾಲ್ಯವೆನ್ನುವ ರಾತ್ರಿರಾಣಿಯ ಪರಿಮಳ, ಅರಳಿಸೆನ್ನ ಅಂತರಂಗ,  ರಾತ್ರಿ ಬಸ್ಸುಗಳೊಂದಿಗೆ ಮಾತುಕತೆ, ಬಸ್ ಸ್ಟ್ಯಾಂಡೆನ್ನುವ ಮಾಯಾಲೋಕ…. ಮುಂತಾದವು ಅಪ್ಪಟ ಕಾವ್ಯ ಪ್ರತಿಮೆಗಳು.

ಹೆಣ್ಣು ಹುಡುಗಿಯರಿಗೆ ಸಹಜವಾದ ಭಾಷೆ,  ಸುಲಲಿತ ನಿರೂಪಣಾ ಶೈಲಿ, ಪ್ರಾಮಾಣಿಕ ಅಭಿವ್ಯಕ್ತಿಯಿಂದಾಗಿ ಕೆಲವಂತೂ ಪ್ರಬಂಧಗಳ ಚೌಕಟ್ಟನ್ನು ಮೀರಿದ ಗ(ದ್ಯ)ಪದ್ಯಗಳೆಂದೇ ಕರೆಯಲೋಗ್ಯವಾದವುಗಳು.

ಲೇಖಕಿಯ ಸುಮಧುರ ನೆನಪುಗಳ ಮಾಲೆಯಲ್ಲಿ, ದೊಡ್ಡಪ್ಪ ಅಂಗಳದಲ್ಲಿ ಬಿಡಿಸುತ್ತಿದ್ದ ರಂಗೋಲಿ, ಊರ ಜಾತ್ರೆ, ಅಮ್ಮನ ಹಳೆ ಸೀರೆಗಳ ಕರ್ಟನ್ನುಗಳ ವಿನ್ಯಾಸ, ಗುಂಡಪ್ಪೆ ಮಾವಿನ ಹಣ್ಣು, ಅಶ್ವತ್ಥ ಮರದ ಮೇಲಿನ ಗುಬ್ಬಿ ಗೂಡು ಮತ್ತು ಆಫೀಸಿನಲ್ಲಿ ಜೊತೆಗಿದ್ದ ಆಪ್ತ ಹುಡುಗಿ ಜಾಮಿನಿ ಎಂಬಾಕೆಯನ್ನು ಕಳೆದುಕೊಂಡ ವಿಷಾದದ ಭಾವದೆಸಳೂ ಇದೆ.

ಶೀರ್ಷಿಕೆ ‘ ಬೊಗಸೆಯಲ್ಲೊಂದು ಹೂನಗೆ” ಪ್ರಬಂಧದ ಮೊದಲ ಸಾಲು;

“ ನೆನಪೊಂದು ಮಳೆಯಾಗಿ ಸುರಿದಾಗಲೆಲ್ಲ ನಗುವೊಂದು ಮಳೆಯ ಹನಿಗಳಾಗಿ ಅಂಗೈಯನ್ನು ಸ್ಪರ್ಶಿಸುತ್ತದೆ “  ಇದನ್ನು ಅಪ್ಪಟ ಕವಿ ಮಾತ್ರ  ಉಲಿಯಲು ಸಾಧ್ಯ.

ಲೇಖಕಿ ಅಂಜನಾ ಹೆಗಡೆಯವರು ಈ ಒಂದು ಉತ್ತಮ ಗದ್ಯ ಕೃತಿಯ ಮೂಲಕ ಓದುಗರ ಅಪೇಕ್ಷೆ, ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಅವರಿಗೆ ಅಭಿನಂದನೆಗಳು.

……

ಒಂದು ಕನ್ಫೇಷನ್ :  ಈ ಕೃತಿಯ ಶೀರ್ಷಿಕೆಯ ಮೋಡಿ ಅದೆಷ್ಟೆಂದರೆ ಅನಾಮತ್ತಾಗಿ ಜಯಂತ ಕಾಯ್ಕಿಣಿಯವರ ‘ಬೊಗಸೆಯಲ್ಲಿ ಮಳೆ’ ತೇಲಿ ಬರುವುದು. ಕೆಲವು ಪ್ರಬಂಧಗಳ ಶೀರ್ಷಿಕೆಗಳಲ್ಲೂ ಜಯಂತ್ ಅವರ ಮೋಡಿ ಮಾಡುವ ಶೈಲಿಯ ಛಾಯೆ ಇರುವುದು  ಲೋಪವಾಗಲಿ,  ಅನುಕರಣೆಯಾಗಲಿ ಖಂಡಿತಾ ಅಲ್ಲ.  ಇದು ದೂರುವ ಮಾತಂತೂ ಅಲ್ಲವೇ ಅಲ್ಲ. ಅಷ್ಟರ ಮಟ್ಟಿಗೆ  ಉತ್ತರ ಕನ್ನಡದ ಮಣ್ಣಿನಲ್ಲೇ ಜಯಂತ್ ಅವರ ಬರಹಗಳ ಶೈಲಿ ದಟ್ಟವಾಗಿ ಮಿಳಿತಗೊಂಡಿದೆ. 

ಹೀಗೆ ಇಲ್ಲಿ ಹೇಳಲು ಮುಖ್ಯ ಕಾರಣ :  ನನ್ನ ಎರಡನೇ ಕವನ ಸಂಕಲನ ‘ ಬೊಗಸೆಯೊಡ್ಡುವ ಸಂತಸದ ಕ್ಷಣಗಳಿಗೆ’(2003)  ಶೀರ್ಷಿಕೆಯ ಕುರಿತಾಗಿ ಹಿರಿಯ ಸಾಹಿತಿ ವಿದ್ವಾನ್ ರಾಮಚಂದ್ರ ಉಚ್ಚಿಲರು ಒಂದು ಕಡೆ ಬರೆಯುತ್ತ, “ ಈ ಕೃತಿಗೆ ‘ಬೊಗಸೆಯೊಳಗೆ ಬೆಳದಿಂಗಳು’ ಎಂಬ ಹೆಸರು ಸೂಕ್ತ. ಆದರೆ ಜಯಂತ ಕಾಯ್ಕಿಣಿಯವರು ಈಗಾಗಲೆ ‘ಬೊಗಸೆಯಲ್ಲಿ ಮಳೆ’ (2001)ಎಂಬ  ಕೃತಿ ತಂದಿರುವುದರಿಂದ ಬಹುಶ: ಈ ಕವಿ ಆ ಆಲೋಚನೆ ಬಿಟ್ಟು ಇಷ್ಟು ದೀರ್ಘ  ಹೆಸರನ್ನು ಇಟ್ಟಿರಬೇಕು” ಎಂದು ಅಕ್ಷರಶ: ನನ್ನ ಮನದ ಮಾತುಗಳನ್ನು ಉದ್ಧರಿಸಿದ್ದು ಇಂದಿಗೂ ಸೋಜಿಗ ನನಗೆ.

‍ಲೇಖಕರು avadhi

December 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: