ಶ್ರೀನಿವಾಸ ಪ್ರಭು ಅಂಕಣ: ದೇಗುಲಗಳ ಒಡಲಲ್ಲಿ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 120
——————
ಕಾರ್ಯಕ್ರಮಗಳ ನಿರೂಪಣೆಯನ್ನು ನಾನು ದೂರದರ್ಶನದಲ್ಲಿದ್ದ ದಿನಗಳಿಂದಲೂ ಮಾಡಿಕೊಂಡೇ ಬರುತ್ತಿದ್ದೆ. ಅನೇಕಾನೇಕ ಸಾಕ್ಷ್ಯಚಿತ್ರಗಳಿಗೆ ನಿರೂಪಣೆಯನ್ನು ನಿರ್ವಹಿಸಿದ್ದರ ಜತೆ ಜತೆಗೇ ಅನೇಕ ವೇದಿಕೆಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟದ್ದೂ ಉಂಟು.ಕೆಲ ರಂಗಪ್ರವೇಶಗಳು, ಕೆಲ ಸಂಗೀತದ ಕಾರ್ಯಕ್ರಮಗಳು, ವಾರ್ತಾ ಇಲಾಖೆಯ ಕೆಲ ಕಾರ್ಯಕ್ರಮಗಳು, ರಾಜಕೀಯ ಸಮಾವೇಶಗಳು, ಪುಸ್ತಕ ಬಿಡುಗಡೆಯಂತಹ ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳು… ಹೀಗೆ ನಾನು ನಿರೂಪಕನಾಗಿ ನಿರ್ವಹಿಸಿದ ಕಾರ್ಯಕ್ರಮಗಳು ಅನೇಕ.

ಆತ್ಮೀಯ ಗೆಳೆಯ—ಪ್ರತಿಭಾವಂತ ನಟ—ರಂಗಕರ್ಮಿ ಚಿದು ಅಲಿಯಾಸ್ ಕೆ.ಎಸ್. ಶ್ರೀಧರ್ ‘ಈಟಿವಿ’ ಕನ್ನಡ ವಾಹಿನಿಗೆ ಮುಖ್ಯ ಅಧಿಕಾರಿಯಾಗಿ ಬಂದು ಅಧಿಕಾರ ಸ್ವೀಕರಿಸಿದ್ದು 2002 ರಲ್ಲಿ. ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಚಿದು ಅನೇಕ ಪ್ರಮುಖ ಘಟನೆಗಳ ಹಾಗೂ ಸಾಂಸ್ಕೃತಿಕ — ಧಾರ್ಮಿಕ ಸಮಾರಂಭಗಳ ನೇರ ಪ್ರಸಾರದ ಬಹು ಮಹತ್ವದ ಯೋಜನೆಗಳನ್ನು ರೂಪಿಸತೊಡಗಿದ. ಈಟಿವಿ ಕನ್ನಡ ವಾಹಿನಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಡುವುದರಲ್ಲಿ ಹಲವಾರು ಅತ್ಯುತ್ತಮ ಧಾರಾವಾಹಿಗಳ ಜೊತೆಗೇ ಗೆಳೆಯ ಚಿದು ರೂಪಿಸಿದ ಇಂತಹ ವೈಭವೋಪೇತ ನೇರಪ್ರಸಾರಗಳೂ ಮಹತ್ವದ ಪಾತ್ರವನ್ನು ನಿರ್ವಹಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ.

ಶ್ರೀಧರ್ ರೂಪಿಸಿದ ಇಂತಹ ಬಹುತೇಕ ಎಲ್ಲ ಕಾರ್ಯಕ್ರಮಗಳು ನನ್ನ ನಿರೂಪಣಾ ಸಾರಥ್ಯದಲ್ಲಿ ಮೂಡಿಬಂದವು ಎಂಬುದು ವೈಯಕ್ತಿಕವಾಗಿ ನನಗೆ ಬಲು ಹೆಮ್ಮೆಯ ಸಂಗತಿ. ಇಂಥದೊಂದು ಅವಕಾಶವನ್ನು ಕಲ್ಪಿಸಿಕೊಟ್ಟ ಶ್ರೀಧರ್ , ಸುಬ್ಬಾ ನಾಯ್ಡು ಹಾಗೂ ಈಟಿವಿ ಕನ್ನಡ ವಾಹಿನಿಯ ಇತರ ಅಧಿಕಾರಿ ವರ್ಗದವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಶ್ರೀಧರ್ ರೂಪಿಸಿದ ಹಾಗೂ ನಾನು ನಿರ್ವಹಿಸಿದ ಕೆಲವು ಅತಿ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಥೂಲ ಪರಿಚಯವನ್ನು ಮಾಡಿಕೊಡುತ್ತೇನೆ.

ಮೊದಲನೆಯದು ‘ಪರ್ಯಾಯ’ ಸಮಾರಂಭ.

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಡುಪಿಯ ಶ್ರೀಕೃಷ್ಣ ಮಠದ ಸುತ್ತಿನಲ್ಲಿ ಸೋದೆ ಮಠ, ಪುತ್ತೂರು ಮಠ,ಪೇಜಾವರ ಮಠ, ಅದಮಾರು ಮಠ ಇತ್ಯಾದಿಯಾಗಿ ಒಟ್ಟು ಎಂಟು ಮಠಗಳಿವೆ. ಈ ಅಷ್ಟ ಮಠಗಳ ಸ್ವಾಮೀಜೀಗಳು ಎರಡು ವರ್ಷಕ್ಕೊಮ್ಮೆ ಸರದಿಯಂತೆ ಶ್ರೀಕೃಷ್ಣನ ಪೂಜಾ ಅಧಿಕಾರವನ್ನು ಹಸ್ತಾಂತರಿಸಿಕೊಳ್ಳುತ್ತಾರೆ. ಎಂದರೆ ಎರಡು ವರ್ಷಕ್ಕೊಮ್ಮೆ ಕೃಷ್ಣನ ಪೂಜೆಯ ಅಧಿಕಾರ ಹಾಗೂ ಮಠದ ನಿರ್ವಹಣೆಯ ಹೊಣೆಗಾರಿಕೆ ಬದಲಾಗುತ್ತಿರುತ್ತದೆ. ಹೀಗೆ ಪ್ರಸಕ್ತ ಇರುವ ಸ್ವಾಮೀಜಿಗಳು ಮುಂದೆ ಪೀಠಾರೋಹಣ ಮಾಡಲಿರುವ ಸ್ವಾಮೀಜಿಗಳಿಗೆ ಅಧಿಕಾರ ಹಸ್ತಾಂತರಿಸುವ ಈ ಪ್ರಕ್ರಿಯೆಯನ್ನೇ ಪರ್ಯಾಯ ಅನ್ನುವುದು. ಈ ಪರ್ಯಾಯವನ್ನು ಉಡುಪಿಯಲ್ಲಿ ಬಹಳ ಸಂಭ್ರಮದಿಂದ ಹಾಗೂ ವೈಭವದಿಂದ ಆಚರಿಸಲಾಗುತ್ತದೆ. ಜನವರಿ ತಿಂಗಳಲ್ಲಿ ನಡೆಯುವ ಈ ಕಣ್ಮನ ಸೆಳೆಯುವ ವಿಜೃಂಭಣೆಯ ಉತ್ಸವಕ್ಕೆ ಸಾಕ್ಷಿಯಾಗಲು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಉಡುಪಿ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಪ್ರತಿ ಎರಡು ವರ್ಷಕ್ಕೊಮ್ಮೆ ಜನವರಿ 18 ರಂದು ನಡೆಯುವ ಈ ಪರ್ಯಾಯ ಒಂದು ರೀತಿಯಲ್ಲಿ ಉಡುಪಿಯ ಹಬ್ಬ, ಜನರ ಹಬ್ಬ ಎಂದೇ ಪರಿಗಣಿತವಾಗಿದೆ.

ಸ್ವಾಮೀಜಿ ಅವರ ಪುರಪ್ರವೇಶದಿಂದ ಆರಂಭವಾಗುವ ಈ ಹಬ್ಬ ಅವರು ಮಠದೊಳಗೆ ಬಂದು ಬೀಗದ ಕೈಪಡೆದು ಅಧಿಕಾರ ಸ್ವೀಕಾರ ಮಾಡುವ ತನಕ ಒಂದು ಘಟ್ಟ; ನಂತರದ ಸಂಭ್ರಮಾಚರಣೆ—ಉತ್ಸವ ಮತ್ತೊಂದು ಘಟ್ಟ. ಪ್ರತಿಯೊಂದೂ ಹಂತದ ನೇರ ಪ್ರಸಾರವನ್ನು ಅತ್ಯಂತ ಕರಾರುವಾಕ್ಕಾಗಿ ಯೋಜಿಸಿದ್ದ ಗೆಳೆಯ ಶ್ರೀಧರ್. ನಾನು ಹಾಗೂ ಒಂದಿಬ್ಬರು ಸ್ಥಳೀಯ ವಿದ್ವಾಂಸರು ಮಠದ ಮೇಲ್ಭಾಗದ ಒಂದು ಕೋಣೆಯಲ್ಲಿ ಆಸೀನರಾಗಿ ನೇರ ಪ್ರಸಾರವನ್ನು ನೋಡುತ್ತಾ ಸೂಕ್ತ ವಿವರಣೆಗಳನ್ನು ನೀಡುತ್ತಿದ್ದೆವು.ಕೃಷ್ಣಮಠದ ಚರಿತ್ರೆ—ಗುರು ಪರಂಪರೆ—ಐತಿಹ್ಯ.. ಹೀಗೆ ಎಲ್ಲಾ ಸಾಂದರ್ಭಿಕ ವಿವರಗಳನ್ನೂ ವೀಕ್ಷಕರಿಗೆ ನೀಡುವ ಗುರುತರ ಜವಾಬ್ದಾರಿ ಹೆಗಲೇರಿದ್ದುದರಿಂದ ಪೂರ್ವಭಾವಿಯಾಗಿಯೇ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದೆ. ಧಾರ್ಮಿಕ ಆಚರಣೆಗಳಿಗೆ ಸಂಬಂಧ ಪಟ್ಟ ವಿವರಗಳಾದುದರಿಂದ ತಪ್ಪುಗಳಾಗದಂತೆ ಎಚ್ಚರ ವಹಿಸುವುದೂ ಅಗತ್ಯವಿತ್ತು! ವಿಧಿ ವಿಧಾನಗಳ ಆಚರಣೆಗಳ ವಿವರಣೆಯ ಜೊತೆ ಜೊತೆಗೇ ಅನೇಕ ಕಾವ್ಯ ಭಾಗಗಳನ್ನು ಉದ್ಧರಿಸುತ್ತಾ, ಕುಮಾರವ್ಯಾಸಾದಿ ಕವಿಗಳ ಕಾವ್ಯಭಾಗಗಳು—ದಾಸವರೇಣ್ಯರ ಅನೇಕ ಸುಂದರ ರಚನೆಗಳನ್ನು ನೆನಪಿಸಿಕೊಳ್ಳುತ್ತಾ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೂ ಒಂದು ಸಾಹಿತ್ಯಿಕ ಸ್ಪರ್ಶ ನೀಡಲು ಪ್ರಯತ್ನಿಸಿದ್ದು ಸಾಕಷ್ಟು ಜನಪ್ರೀತಿಯನ್ನು ಗಳಿಸಿಕೊಂಡಿತ್ತು. ಹಲವಾರು ಗಂಟೆಗಳ ಕಾಲ ಸತತವಾಗಿ ನಡೆಯುತ್ತಿದ್ದ ಇಂತಹ ನೇರ ಪ್ರಸಾರಗಳು ಸವಾಲೆನಿಸುವುದರೊಂದಿಗೇ ರೋಮಾಂಚಕಾರೀ ಅನುಭವವನ್ನೂ ಕಟ್ಟಿಕೊಡುತ್ತಿದ್ದವು.

‘ಪರ್ಯಾಯ’ ದ ಜೊತೆಗೆ ಉಡುಪಿ ಕ್ಷೇತ್ರದಲ್ಲಿ ನಿರ್ವಹಿಸಿದ ಮತ್ತೊಂದು ಚೇತೋಹಾರಿ ನೇರಪ್ರಸಾರವೆಂದರೆ ‘ಶ್ರೀಕೃಷ್ಣ ಜನ್ಮಾಷ್ಟಮಿ’ ಉತ್ಸವ. ಕೃಷ್ಣನ ಜನ್ಮದಿನದ ಸಂಭ್ರಮಾಚರಣೆಯ ಈ ಒಂದು ಉತ್ಸವ ನಿಜಕ್ಕೂ ಉಡುಪಿಯಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿಸಿಬಿಡುತ್ತದೆ! ಜನ್ಮಾಷ್ಟಮಿಯ ದಿನದಂದು ಪರ್ಯಾಯದಲ್ಲಿರುವ ಸ್ವಾಮೀಜಿಗಳು ಶ್ರೀಕೃಷ್ಣನಿಗೆ ಪೂಜೆ, ಅಭಿಷೇಕ ಹಾಗೂ ನೈವೇದ್ಯಗಳನ್ನು ನೆರವೇರಿಸುತ್ತಾರೆ. ಶ್ರೀಕೃಷ್ಣ ಜನಿಸಿದ ಸಮಯದಲ್ಲೇ ಪ್ರತಿ ವರ್ಷ ನೈವೇದ್ಯವನ್ನು ಅರ್ಪಿಸಿ ಪೂಜೆ ಮಾಡುವುದು ಸಂಪ್ರದಾಯ. ದೇವಾಲಯದ ಗರ್ಭಗುಡಿಯಲ್ಲಿರುವ ವಿಶೇಷವಾಗಿ ತಯಾರಿಸಿದ ಶ್ರೀಕೃಷ್ಣದೇವರ ಜೇಡಿಮಣ್ಣಿನ ವಿಗ್ರಹಕ್ಕೆ ಹಾಲು—ನೀರನ್ನು ಅರ್ಘ್ಯವಾಗಿ ಅರ್ಪಿಸುವುದು ಒಂದು ವಿಶೇಷ ಆಚರಣೆ. ಅದು ನಡೆಯುವುದು ಮಧ್ಯರಾತ್ರಿಯಲ್ಲಿ.

ಇನ್ನು ಕೃಷ್ಣಮಠದಲ್ಲಿ ನಡೆಸಲಾಗುವ ವಿಟ್ಲಪಿಂಡಿಯಂತೂ ಮನಮೋಹಕ ಆಚರಣೆ. ಮೊಸರು ಕುಡಿಕೆ ಹಾಗೂ ಹುಲಿವೇಷಗಳು ಜನ್ಮಾಷ್ಟಮಿ ಆಚರಣೆಯ ಅವಿಭಾಜ್ಯ ಅಂಗಗಳು! ಪಿಂಡಿ ಎಂದರೆ ‘ಬಂದ’; ‘ಬಂದ’ ಎಂದರೆ ಹಾಲು—ಮೊಸರು—ಬೆಣ್ಣೆ ತುಂಬಿರುವ ಮಣ್ಣಿನ ಮಡಕೆ. ಶ್ರೀಕೃಷ್ಣ ಬಾಲ್ಯದಲ್ಲಿ ಮಡಕೆ ಒಡೆದು ಬೆಣ್ಣೆ ಕದ್ದು ಮೆಲ್ಲುತ್ತಿದ್ದ ಪ್ರಸಂಗದ ಅನುಕರಣೆಯ ಆಚರಣೆ ವಿಟ್ಲಪಿಂಡಿಯಲ್ಲಿ—ಊರಿನ ಉತ್ಸಾಹೀ ತರುಣರಿಂದ! ಜತೆಗೆ ಶ್ರೀಕೃಷ್ಣನ ಬಾಲಲೀಲೆಗಳನ್ನು ಸಾದರ ಪಡಿಸುವ ವರ್ಣರಂಜಿತ ಮೆರವಣಿಗೆ ಶ್ರೀಕೃಷ್ಣ ಲೀಲೋತ್ಸವ! ಇವೆಲ್ಲದರ ನೇರ ಪ್ರಸಾರದ ಬಹು ದೊಡ್ಡ ಜವಾಬ್ದಾರಿಯನ್ನು ಶ್ರೀಧರ್ ಹಾಗೂ ತಂಡದವರು ಅದ್ಭುತವಾದ ರೀತಿಯಲ್ಲಿ ನಿರ್ವಹಿಸಿ ಯಶಸ್ವಿಯಾದರು.

ನೇರ ಪ್ರಸಾರದುದ್ದಕ್ಕೂ ಶ್ರೀಕೃಷ್ಣ ಚರಿತೆಯ ಪುರಾಣೋಕ್ತ ಪ್ರಸಂಗಗಳನ್ನು ವ್ಯಾಖ್ಯಾನಿಸುವುದರೊಂದಿಗೆ ಕನ್ನಡ ಕವಿಗಳು—ದಾಸ ಶ್ರೇಷ್ಠರು ಕಡೆದು ನಿಲ್ಲಿಸಿರುವ ಕೃಷ್ಣನ ಅಪೂರ್ವ ಹಾಗೂ ವರ್ಣರಂಜಿತ ವ್ಯಕ್ತಿತ್ವವನ್ನು ಸಮಯೋಚಿತ ಕಾವ್ಯಭಾಗಗಳ ಉದ್ಧರಣದೊಂದಿಗೆ ವೀಕ್ಷಕರಿಗೆ ಪರಿಚಯಿಸುತ್ತಾ ಹಲವಾರು ಗಂಟೆಗಳ ಕಾಲ ನೇರ ಪ್ರಸಾರಕ್ಕೆ ವಿವರಣೆಯನ್ನು ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಈಟಿವಿ ಕನ್ನಡ ವಾಹಿನಿಯ ವತಿಯಿಂದ ಶ್ರೀಧರ್ ನೇತೃತ್ವದಲ್ಲಿ ಕೆಲ ವರ್ಷ ನಡೆದ ಮತ್ತೊಂದು ಬಹುಮುಖ್ಯ ನೇರ ಪ್ರಸಾರ ಕಾರ್ಯಕ್ರಮವೆಂದರೆ ಮಂತ್ರಾಲಯದ ಗುರು ರಾಘವೇಂದ್ರರ ಆರಾಧನೋತ್ಸವ. ವೈಷ್ಣವ ಧರ್ಮವನ್ನು ಅನುಸರಿಸಿದ ಶ್ರೀ ಮಧ್ವಾಚಾರ್ಯರ ದ್ವೈತ ತತ್ತ್ವಶಾಸ್ತ್ರವನ್ನು ಪ್ರತಿಪಾದಿಸಿದ 16 ನೇ ಶತಮಾನದ ಸಂತ, ವಿಭೂತಿ ಪುರುಷ, ಪವಾಡಪುರುಷ ಗುರು ರಾಘವೇಂದ್ರ ರಾಯರು 1671ರಲ್ಲಿ ಶ್ರಾವಣ ಕೃಷ್ಣಪಕ್ಷದ ದ್ವಿತೀಯ ದಿನದಂದು ಮಂತ್ರಾಲಯದಲ್ಲಿ ಸಜೀವ ಸಮಾಧಿಯನ್ನು ಪಡೆದರೆಂದು ಇತಿಹಾಸ ಹೇಳುತ್ತದೆ. ಪ್ರತಿ ವರ್ಷ ಈ ದಿನವನ್ನು ವಿಶ್ವದಾದ್ಯಂತ ಇರುವ ಬೃಂದಾವನಗಳಲ್ಲಿ ‘ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ’ ಎಂದು ಆಚರಿಸಲಾಗುತ್ತದೆ.

ಮಂತ್ರಾಲಯದಲ್ಲಿಯೇ, ಅಂದರೆ ಮೂಲ ಬೃಂದಾವನ ಇರುವ ಪುಣ್ಯ ಸ್ಥಳದಲ್ಲಿಯೇ ಶ್ರದ್ಧಾ ಭಕ್ತಿ ಗೌರವಗಳಿಂದ ಆಚರಿಸುವ ಈ ಆರಾಧನೋತ್ಸವದ ನೇರಪ್ರಸಾರ ಶ್ರೀಧರ್ ನೇತೃತ್ವದಲ್ಲಿ ಆಯೋಜನೆಗೊಂಡಿತು. ನಿರೂಪಣೆಯ ಜವಾಬ್ದಾರಿ ಮತ್ತೆ ನನ್ನ ಹೆಗಲೇರಿತ್ತು! ಎರಡು—ಮೂರು ವರ್ಷಗಳ ಕಾಲ ಗುರುಗಳ ಆರಾಧನೆಯ ಈ ನೇರ ಪ್ರಸಾರದ ನಿರೂಪಣೆಯ ಜವಾಬ್ದಾರಿಯನ್ನು ನಾನು ವಹಿಸಿಕೊಂಡಿದ್ದೆ. ಗುರುಗಳ ಆರಾಧನೆಯ ಪ್ರಕ್ರಿಯೆಯ ನೇರಪ್ರಸಾರದ ವೀಕ್ಷಕ ವಿವರಣೆಯೊಂದಿಗೆ ಗುರುಗಳ ಜೀವನ ಚರಿತ್ರೆ—ಅವರ ಬದುಕಿನ ಪವಾಡ ಸದೃಶ ಘಟನಾವಳಿಗಳು—ಅವರ ಮಹೋನ್ನತ ವ್ಯಕ್ತಿತ್ವ—ಅವರ ಬೋಧನೆಗಳು… ಎಲ್ಲವನ್ನೂ ಅಡಕವಾಗಿ ಆಸ್ತಿಕ ವೀಕ್ಷಕರಿಗೆ ಪರಿಚಯ ಮಾಡಿಕೊಡುವ ಪ್ರಯತ್ನವನ್ನು ಒಂದಿಬ್ಬರು ಸ್ಥಳೀಯ ವಿದ್ವಾಂಸರೊಂದಿಗೆ ಸೇರಿ ನಡೆಸಿದ್ದೆ. ವಿಶ್ವದಾದ್ಯಂತ ಭಕ್ತರನ್ನು ಹೊಂದಿರುವ ರಾಯರ ಆರಾಧನೆಯ ಈ ನೇರ ಪ್ರಸಾರ ಸಹಜವಾಗಿಯೇ ಅಪಾರ ಜನಪ್ರೀತಿಯನ್ನು ಗಳಿಸಿಕೊಂಡಿತು.

ಶೃಂಗೇರಿಯಲ್ಲಿ ಶಾರದಾಂಬೆಯ ದಿವ್ಯ ಸನ್ನಿಧಿಯಲ್ಲಿ ವೈಭವದಿಂದ ನಡೆಯುವ ಶರನ್ನವರಾತ್ರಿ ಉತ್ಸವದ ಕಡೆಯ 2—3 ದಿನಗಳ ಕಲಾಪದ ನೇರ ಪ್ರಸಾರ ಶ್ರೀಧರ್ ಕೈಗೊಂಡ ಮತ್ತೊಂದು ಮಹತ್ವದ ಆಯೋಜನೆ.

ಶರನ್ನವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಳ್ಳಲು ದೇಶ ವಿದೇಶಗಳಿಂದ ಭಕ್ತಾದಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಶೃಂಗೇರಿಗೆ ಬಂದಿಳಿಯುತ್ತಾರೆ. ಈ ಸುಸಂದರ್ಭದಲ್ಲಿ ಅನೇಕಾನೇಕ ಅಭಿಷೇಕ—ಪೂಜಾದಿಗಳು ನೆರವೇರುತ್ತವೆ; ಶಾರದಾ ಮಾತೆ ಪ್ರತಿದಿನವೂ ಒಂದೊಂದು ವಿಶೇಷ ಅಲಂಕಾರದಿಂದ ಸಿಂಗರಗೊಳ್ಳುತ್ತಾಳೆ…ಹಂಸವಾಹನ ಅಲಂಕಾರ, ಮಯೂರವಾಹನ ಅಲಂಕಾರ, ಗರುಡವಾಹನ ಅಲಂಕಾರ…ಹೀಗೆ.

ಆಯುಧಪೂಜೆಯ ದಿನ ಸಂಜೆ ಗುರುಗಳು ಚಂದ್ರಮೌಳೀಶ್ವರನ ಪೂಜೆಯನ್ನು ನೆರವೇರಿಸುತ್ತಾರೆ. ವಿಜಯದಶಮಿಯ ವಿಧ್ಯುಕ್ತ ಆಚರಣೆಯ ನಂತರ ಮರುದಿನ ಅಮ್ಮನವರ ಉತ್ಸವಮೂರ್ತಿಯ ಮೆರವಣಿಗೆ ಹಾಗೂ ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ರಾಜಬೀದಿಯಲ್ಲಿ ಸಂಭ್ರಮದಿಂದ ನಡೆಯುತ್ತದೆ. ದರ್ಬಾರು ನವರಾತ್ರಿಯ ವಿಶೇಷ ಕಾರ್ಯಕ್ರಮ.ಈ ದರ್ಬಾರ್ ವಿದ್ಯಾರಣ್ಯರ ಕಾಲದಿಂದಲೂ ನಡೆದುಕೊಂಡು ಬಂದಿದೆಯೆಂದು ಪ್ರತೀತಿ. ದರ್ಬಾರಿನಲ್ಲಿ ಜಗದ್ಗುರುಗಳು ಕಿರೀಟಾದಿ ಆಭರಣಗಳನ್ನು ಧರಿಸಿ ಸ್ವರ್ಣಸಿಂಹಾಸನದಲ್ಲಿ ಆಸೀನರಾಗುತ್ತಾರೆ.ಪರಂಪರಾಗತವಾಗಿ ಪೀಠಕ್ಕೆ ಸಂದಿರುವ ಪ್ರಶಸ್ತಿ ಪುರಸ್ಕಾರಗಳನ್ನು ಪ್ರದರ್ಶಿಸಲಾಗುತ್ತದೆ. ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋಜನೆಗೊಂಡಿದ್ದು ರಸಿಕರ ಮನಸೂರೆಗೊಳ್ಳುತ್ತವೆ.

ಈ ಎಲ್ಲ ಕಾರ್ಯಕ್ರಮಗಳಲ್ಲಿ ಬಹಳಷ್ಟನ್ನು ನೇರಪ್ರಸಾರದ ತೆಕ್ಕೆಗೆ ಚಿದು ತೆಗೆದುಕೊಂಡಿದ್ದ. ನೇರ ಪ್ರಸಾರದ ಜೊತೆಗೆ ಅಲ್ಲೇ ಮಠದ ಆವರಣದಲ್ಲೇ ಕೋಣೆಯೊಂದರಲ್ಲಿ ಆಸೀನರಾಗಿದ್ದ ನಮ್ಮಿಂದ ಸಂದರ್ಭೋಚಿತ ವೀಕ್ಷಕ ವಿವರಣೆ! ಒಂದು ವರ್ಷ ಈ ನೇರ ಪ್ರಸಾರದ ವೀಕ್ಷಕ ವಿವರಣೆಯನ್ನು ನಾನು ಹಾಗೂ ಅಪರ್ಣಾ ಇಬ್ಬರೂ ಸೇರಿ ನಡೆಸಿಕೊಟ್ಟಿದ್ದೆವು. ನೇರ ಪ್ರಸಾರ ಕಷ್ಟವಾಗುವಂತಹ ಕೆಲ ವಿಶೇಷ ಆಚರಣೆಗಳನ್ನು ತುಣುಕುಗಳಲ್ಲಿ ಚಿತ್ರೀಕರಿಸಿಕೊಂಡು ಅಂದೇ ಅಲ್ಲಿಯೇ ತಂತ್ರಜ್ಞರಿಂದ ಸಂಕಲನ ಮಾಡಿಸಿ ಮರುದಿನ ಅಲ್ಲಿಂದಲೇ ಪ್ರಸಾರ ಮಾಡಲಾಗುತ್ತಿತ್ತು!
ವಿಜಯದಶಮಿಯ ದಿವಸ ಹೊರನಾಡು ಹಾಗೂ ಕೊಲ್ಲೂರು ಕ್ಷೇತ್ರಗಳಿಗೆ ಎರಡು ತಂಡಗಳು ಹೋಗಿ ಅಲ್ಲಿಯ ಉತ್ಸವದ ಸಂಭ್ರಮಾಚರಣೆಯನ್ನು ಚಿತ್ರೀಕರಿಸಿಕೊಂಡು ಬಂದು ನುರಿತ ತಂತ್ರಜ್ಞರು ಸಂಕಲನ ಮಾಡಿಕೊಡುತ್ತಿದ್ದಂತೆಯೇ ನಿರೂಪಣೆಯನ್ನೂ ಜೋಡಿಸಿ ಪ್ರಸಾರ ಮಾಡಲಾಗಿತ್ತು! ಕ್ಷಣಕ್ಷಣಕ್ಕೂ ಎದುರಾಗುತ್ತಿದ್ದ ಸವಾಲುಗಳು ಒಂದು ಬಗೆಯ ರೋಚಕತೆಯನ್ನು ನಮ್ಮ ಈ ನೇರ ಪ್ರಸಾರ ಗಾಥೆಗೆ ತಂದುಕೊಟ್ಟಿದ್ದವೆಂದರೆ ಅತಿಶಯೋಕ್ತಿಯಲ್ಲ!

ಕರ್ಣಾಟಕದ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾದ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಕಡೆಯ ಸೋಮವಾರದಂದು ಲಕ್ಷ ದೀಪೋತ್ಸವ ನಡೆಯುತ್ತದೆ. ಲಕ್ಷದೀಪಗಳ ಬೆಳಕಿನಲ್ಲಿ ಮಂಜುನಾಥನ ದಿವ್ಯ ಸನ್ನಿಧಿ ಕಂಗೊಳಿಸುವುದನ್ನು ಕಣ್ತುಂಬಿಕೊಳ್ಳಲು ಲಕ್ಷಲಕ್ಷ ಸಂಖ್ಯೆಯಲ್ಲೇ ಭಕ್ತರು ಆಗಮಿಸುತ್ತಾರೆ! ಇಂಥದೊಂದು ಅಭೂತಪೂರ್ವ ಉತ್ಸವದ ನೇರಪ್ರಸಾರವನ್ನೂ ಸಹಾ ಗೆಳೆಯ ಚಿದು ಆಯೋಜನೆ ಮಾಡಿದ! ಈ ವೇಳೆಗಾಗಲೇ ಹಲವಾರು ನೇರ ಪ್ರಸಾರಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ಪರಿಣತರೇ ಆಗಿಹೋಗಿದ್ದರು ಚಿದು ತಂಡದವರು!

ಲಕ್ಷದೀಪೋತ್ಸವದ ಸಂದರ್ಭದಲ್ಲಿಯೇ ಧರ್ಮಸ್ಥಳ ಕ್ಷೇತ್ರದಲ್ಲಿ ನಡೆಯುವ ರಾಜ್ಯಮಟ್ಟದ ವಸ್ತು ಪ್ರದರ್ಶನ, ಸಾಹಿತ್ಯ ಸಮ್ಮೇಳನ ಹಾಗೂ ಸರ್ವಧರ್ಮ ಸಮ್ಮೇಳನಗಳು ಈ ಉತ್ಸವಕ್ಕೆ ಒಂದು ಸಮಾಜಮುಖಿ ಆಯಾಮವನ್ನೂ ಕಟ್ಟಿಕೊಡುತ್ತವೆಂದು ಉತ್ಸವದ ಆಯೋಜಕರು ಹೇಳುತ್ತಾರೆ. ನಾವಂತೂ ಸಾಧ್ಯವಾದಷ್ಟೂ ಕಾರ್ಯಕ್ರಮಗಳನ್ನು ನೇರಪ್ರಸಾರಕ್ಕೆ ಅಳವಡಿಸಿಕೊಂಡು ಸೂಕ್ತ ನಿರೂಪಣೆ—ಮಾಹಿತಿಗಳೊಂದಿಗೆ ವಿಶ್ವಾದ್ಯಂತ ಸಹೃದಯರಿಗೆ ತಲುಪಿಸುವಲ್ಲಿ ಯಶಸ್ವಿಯಾದೆವು. ಶಿರ ಮುಕುಟಕ್ಕೆ ಮತ್ತೊಂದು ಗರಿ!

ಮತ್ತೊಂದು ಅದ್ಭುತ—ಅಪರೂಪದ ಘಟನೆಯಾದ ಮಹಾಮಸ್ತಕಾಭಿಷೇಕದ ನೇರಪ್ರಸಾರದ ಅವಕಾಶ ದೊರೆತದ್ದು ನನ್ನ ಸುಕೃತವೆಂದೇ ಹೇಳಬೇಕು! ಪ್ರತಿ ವರ್ಷ ಜರುಗುವ ಸಂಗತಿಯಾದರೆ ಇಂದಲ್ಲದಿದ್ದರೆ ನಾಳೆ ಅವಕಾಶ ದೊರೆಯಬಹುದು ಎನ್ನಬಹುದು; ಆದರೆ ಗೊಮ್ಮಟೇಶ್ವರನಿಗೆ ಮಹಾ ಮಸ್ತಕಾಭಿಷೇಕ ನಡೆಯುವುದು 12 ವರ್ಷಕ್ಕೆ ಒಂದು ಬಾರಿ!!

57 ಅಡಿ ಎತ್ತರದ ಗೊಮ್ಮಟೇಶ್ವರನ ಭವ್ಯ ಮೂರ್ತಿಗೆ ನಡೆಯುವ ಮಹಾಮಸ್ತಕಾಭಿಷೇಕದ ದೃಶ್ಯವೈಭವವನ್ನು ಕಂಡು ಆನಂದಿಸಲು ಎರಡು ಕಣ್ಣು ಸಾಲವು! ಹಾಲು, ಕೇಸರಿ, ಪುಷ್ಪಗಳು, ಚಂದನಾದಿಗಳಿಂದ ಮಂಗಳಮೂರ್ತಿಗೆ ಅಭಿಷೇಕ ನೆರವೇರುತ್ತಿದ್ದರೆ ಆಯಾ ವರ್ಣದ ಕಲ್ಲಿನಲ್ಲಿಯೇ ಮೂರ್ತಿಯನ್ನು ಕೆತ್ತಲಾಗಿದೆಯೋ ಎಂಬಂತೆ ಭಾಸವಾಗುತ್ತಿತ್ತು! ನಾನಂತೂ ಪಂಪನಿಂದ ಮೊದಲುಗೊಂಡು ಆಧುನಿಕ ಕವಿಗಳವರೆಗೆ ಕನ್ನಡ ಕವಿಗಳು ಗೊಮ್ಮಟನನ್ನು ಕಂಡ—ಪರಿಭಾವಿಸಿದ—ಪಡಿಮೂಡಿಸಿದ ಬಗೆಗಳೆಲ್ಲವನ್ನೂ ವೀಕ್ಷಕರಿಗೆ ರವಾನಿಸಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡೇ ಬಂದಿದ್ದೆ! ಮನಸ್ಸಿಗೆ ಮುದ ನೀಡಿದ, ತೃಪ್ತಿಯನ್ನು ನೀಡಿದ ನೇರ ಪ್ರಸಾರ ಕಾರ್ಯಕ್ರಮವಿದು.

ನನ್ನ ಹಾಗೂ ಚಿದು ಜೋಡಿಯ ನೇರ ಪ್ರಸಾರಗಳ ಪಟ್ಟಿ ಇಲ್ಲಿಗೇ ಮುಗಿಯಲಿಲ್ಲ! ನಾಲ್ಕಾರು ವರ್ಷಗಳ ಹರಹಿನದ್ದಾದರೂ ವಿಷಯ ಒಂದೇ ಕೇಂದ್ರಬಿಂದುವಿನದಾದ್ದರಿಂದ ಎಲ್ಲವನ್ನೂ ಒಟ್ಟಿಗೇ ಹಂಚಿಕೊಳ್ಳುತ್ತಿದ್ದೇನೆ.

ಮತ್ತೊಂದು ಬಹು ಮುಖ್ಯ ಮಾಲಿಕೆ ಎಂದರೆ “ಈಟಿವಿ ವರ್ಷದ ಕನ್ನಡಿಗ”!!!

‍ಲೇಖಕರು avadhi

December 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: