ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೀತಾ ಹೆಗ್ಡೆ ಕಲ್ಮನೆ ಕವಿತೆ – ಇರಲಿ ಬಿಡು ಆಪ್ತೇಷ್ಟರು…

ಗೀತಾ ಹೆಗ್ಡೆ ಕಲ್ಮನೆ

ಕದಡಬೇಡ ಮನವೆ
ಹುಳಿ ಹಿಂಡಿ ತೂತು ಮಡಿಕೆಯಂತೆ
ಒಡೆದು ಹೋಗುವುದು
ಆಪ್ತೇಷ್ಟರು ಎಂದುಕೊಂಡ ಭಾವನೆ
ಭುಗಿಲೆದ್ದ ಧರೆ ಉರಿಯುವಂತೆ
ಶಾಖ ತಡೆದುಕೊಳ್ಳಲಾಗದೆ
ಲಾವಾರಸ ಉಕ್ಕುಕ್ಕಿ ಹರಿದು
ನಖಶಿಖಾಂತ ಬೆಣ್ಣೆ ಸವರುವ ಮಾತುಗಳು
ಕೇಳಿದರೂ ಸಮಾಧಾನಗೊಳ್ಳದ ಮನಸು
ಸದಾ ಚಿಂತೆಯ ಸಂತೆಯಂತಾಗುವುದು.

ಇರಬಹುದು ಅವರಿವರು ಅಂದ ಮಾತು
ಕಿವಿಗೆ ಬಿದ್ದರೆ ಕಾದ ಸೀಸದಿಂದ
ಎರಕ ಹೊಯ್ದಂತೆ ನಂಬಿಕೆಯೇ ಬುಡಮೇಲು
ಬೇಡಾ ಬೇಡಾ ಯಾವ ಮಾತು
ಹೀಗೆಯೇ ನಂಬಿಕೊಂಡವರ
ನಂಬಿಕೊಂಡಂತೆ ಇದ್ದುಬಿಡುವುದು ಲೇಸು.

ಆಗಲೋ ಈಗಲೋ
ಹೋಗುವ ಜೀವಕ್ಕೆ ಇನ್ನೆಂತಹ
ನಿರೀಕ್ಷೆ ಇದ್ದೀತು ಹೇಳು?
ಒಂದಿಷ್ಟು ಪ್ರೋತ್ಸಾಹ, ಕರುಣೆ, ಆತ್ಮೀಯ ಮಾತು
ಪಡೆದಿದ್ದು ಬದಿಗೊತ್ತಲಾದೀತೆ?
ಯಾವ ಜನ್ಮದ ಋಣಾನುಬಂಧವೋ ಏನೋ
ಇದುವರೆಗೂ ದಕ್ಕಿದ್ದು ದಿಟ ತಾನೆ..
ಮತ್ಯಾಕೆ ಇಲ್ಲದ ಗೊಡವೆ?

ಮನವೆ ನಿನ್ನೆಚ್ಚರಿಕೆಯಲಿ ನೀನಿರು
ಅಂದವರ ಬಾಯಿಗೆ ಬೀಗ ಹಾಕಲಾಗದು
ಬೇಕು ಅವರು, ಇವರು, ಎಲ್ಲರೂ
ವಸುದೈವ ಕುಟುಂಬಕಂ ಈ ಜಗದೆಲ್ಲ ಜನರು
ಒಂದಾಗಿ ನಡೆದರೇನೇ ಕ್ಷೇಮ
ಮುಖ್ಯವಾಗಿ ಬೇಕು ಬದುಕಿಗೆ
ನಂಬಿಕೆ, ಪ್ರೀತಿ, ವಿಶ್ವಾಸ, ಒಗ್ಗಟ್ಟು
ನೆಮ್ಮದಿಗಿದು ಬುನಾದಿ.

ಕಡಲಾಚೆಯ ಕನವರಿಕೆ
ನಿತ್ಯ ನೂತನ ನಿರಂತರ ಬಿಡಲಾದೀತೆ?
ಮಾರ್ಗದರ್ಶಕರಾಗಿಯೋ ಇಲ್ಲಾ
ಹಿತೈಷಿಗಳಾಗಿಯೋ ಇರಲೇ ಬೇಕಲ್ಲವೇ?
ಹದವಾಗಿ ಬೆಳೆದ ಪೈರಿಗೆ ನೆಲೆಕಾಣಿಸಲು
ಊರತುಂಬ ಡಂಗುರ ಸಾರಲಾಗದಿದ್ದರೂ
ಕೊನೆಗೆ ಹುಟ್ಟೂರಲ್ಲಾದರೂ ಗುರುತಿಸಿಕೊಳ್ಳಲು
ಹೆಗಲಾಗಿ ಬಂದವರು ಇರಲಿ ಬಿಡು
ನಡುಮನೆಯ ಬಾಗಿಲಿಗೆ
ಅಗುಳಿ ಇದ್ದಂತೆ!

‍ಲೇಖಕರು Admin

24 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading