ಗೀತಾ ವಸಂತ ಓದಿದ ‘ಹರವಿದಷ್ಟು ರೆಕ್ಕೆಗಳು’

ದಾರಿಯೂ ಬೆಳಕೂ ಆಗುವ ಕಾವ್ಯಧ್ಯಾನ

ಡಾ ಗೀತಾ ವಸಂತ

ಅಶೋಕ ಹೊಸಮನಿಯವರ ಕವಿತೆಗಳನ್ನು ಓದುತ್ತ ಹೋದಂತೆ ಅಂತರ೦ಗದ ಸುರಂಗದೊಳಗೆ ಒಂದು ಒಳಪಯಣ ಮಾಡಿ ಬಂದ ಅನುಭವವಾಯಿತು. ಜಗದ ನೋವಿನ ಮರ್ಮರಗಳನ್ನೆಲ್ಲ ಆಲಿಸುವ ಪುಟಾಣಿ ಹೃದಯವೊಂದರ ಪಿಸುಮಾತುಗಳಂತೆ ಇವು ಕೇಳುತ್ತ ಹೋದವು. ಕವಿಯಾದವ ಬರಿಯ ಶಬ್ದಗಳ ಶಿಲ್ಪಿಯಲ್ಲ, ಅಭಿಪ್ರಾಯಗಳನ್ನು ರೂಪಿಸುವ ರಾಜಕಾರಣಿಯೂ ಅಲ್ಲ.

ಇತಿಹಾಸದ ಕ್ರೌರ್ಯಗಳ ಬರಿ ವರದಿಗಾರನಲ್ಲ. ಶಬ್ದ ಜಗತ್ತಿಗೆ ಕಾರುಣ್ಯವನ್ನು ಲೇಪಿಸುವ ತಾಯಿಯಂಥವನು ಅವನು. ತನ್ನೊಳಗೆ ಮಡುಗಟ್ಟಿದ್ದನ್ನು ಹರಿಯಗೊಡುವಾಗಲಾಗಲೀ, ತನ್ನ ಹೊರಗೆ ಮುಗಿಲೆತ್ತರ ನಿಂತ ದುಗುಡಗಳ ಬೆಟ್ಟವನ್ನು ಏರಿಳಿಯುವಾಗಲಾಗಲೀ ಅವನು ತನ್ನನ್ನೇ ತೆತ್ತುಕೊಳ್ಳುತ್ತಾನೆ. ಒಳಗಿನ ಕಂಪನದಿ೦ದಲೇ ಕವಿಯ ಶಬ್ದಗಳು ಧ್ವನಿಸುತ್ತವೆ. ಪದಗಳು ಅವನ ಬೆವರಿನಲ್ಲಿ ಒದ್ದೆಯಾಗುತ್ತವೆ. ಕಣ್ಣೀರಿನಲ್ಲಿ ಮಂಜಾಗುತ್ತಿರುತ್ತವೆ. ಅಂಥ ಸೂಕ್ಷö್ಮ ಭಾವ ಜಗತ್ತಿನ ಪ್ರತಿನಿಧಿ ಈ ಅಶೋಕ ಹೊಸಮನಿ. ಕಾವ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಯುವಕವಿ.

ಅಂತಃಸತ್ವವನ್ನು ಧಾರೆಯೆರೆಯದೇ ಒಣಮಾತುಗಳಲ್ಲಿ ಕಾವ್ಯವನ್ನು ಕಟ್ಟಲಾಗದು. ಲೋಕದ ಸಂಗತಿಗಳೆಲ್ಲ ನಮ್ಮನ್ನು ತೀವ್ರವಾಗಿ ಕದಲಿಸುತ್ತಾ ನಮ್ಮದೇ ಸಂವೇದನೆಯಲ್ಲಿ ಮರುಹುಟ್ಟು ಪಡೆಯಲು ಕಾವ್ಯ ಒಂದು ದಾರಿ. ಕಾವ್ಯವು ಕಾಲುದಾರಿಯ ಪಯಣ. ಅದು ಅಣುವಿನೊಳಗೆ ಮಹತ್ತನ್ನು ಕಾಣಿಸಬಲ್ಲ ಪ್ರಾತಿಭಶಕ್ತಿ. ಆದ್ದರಿಂದಲೇ ಸುತ್ತಲಿನ ಸಣ್ಣ ಸಣ್ಣ ಸಂಗತಿಗಳೂ ಕಾವ್ಯಕ್ಕೆ ಮುಖ್ಯವೆನಿಸುತ್ತವೆ. ಎಲ್ಲವನ್ನೂ ತೀವ್ರವಾಗಿ ಪರಿಭಾವಿಸುವ ಕ್ರಮದಿಂದಾಗಿ ಕಾವ್ಯಭಾಷೆಯು ಉಜ್ವಲವಾಗಿ ತೋರುತ್ತದೆ.

ಹೆದ್ದಾರಿಯಲ್ಲಿ ಸಾಗುವಾಗ ಕಾಣದ ಸೂಕ್ಷ್ಮ ಸಂಗತಿಗಳನ್ನು ಕಾಣಲು ಕಾವ್ಯದ ಕಾಲುದಾರಿಯನ್ನು ನಿರ್ಮಿಸಿಕೊಳ್ಳಬೇಕಾಗಿರುವುದು ಈ ಕಾಲದ ತುರ್ತು ಕೂಡ ಹೌದು. ಬದುಕನ್ನು ಬೀಸುಹೇಳಿಕೆಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅನುಭವಗಳ ನಿಕಷದಲ್ಲಿ ಮರಮರಳಿ ಬದುಕು ಅರಳಬೇಕಾಗುತ್ತದೆ. ತನ್ನ ಅನುಭವಗಳ ನಿಜವನ್ನು ತಾನೇ ಶೋಧಿಸಿಕೊಳ್ಳುವ ಪ್ರಕ್ರಿಯೆ ಇಲ್ಲಿ ಜರುಗುತ್ತದೆ. ಜೀವವೊಂದು ಅನುಭವಗಳನ್ನು ಅಂತಃಕರಣದಲ್ಲಿ ಸೋಸಿ ಲೋಕಕ್ಕೆ ನೀಡುವ ಜೀವಕಾರುಣ್ಯವು ಕಾವ್ಯ. ಇಂದು ಭಯ ಶಂಕೆ ಮನಸ್ತಾಪಗಳನ್ನೇ ಹುಟ್ಟಿಸುತ್ತಿರುವ ಮಾತುಗಳ ಜಗತ್ತಿನಲ್ಲಿ ನಾವು ಜೀವದ ಮಾತುಗಳನ್ನಾಡಲು ಒಂದು ಸ್ಪೇಸ್ ಬೇಕು. ಅದು ಕಾವ್ಯದ ಸ್ಪೇಸ್ ಕೂಡ ಹೌದು.
ಅರಳಿತೊ ಎನ್ನಾತ್ಮದ ರೊಟ್ಟಿ
ಹದವಾದ ಈ ಉರಿಯೊಳು
ಕಾಲಗರ್ಭದ ಹಿಡಿ ಹಿಟ್ಟ ತಟ್ಟಿ ತಟ್ಟಿ
ಒಳ ಹೊರ ಹಸನಾಯಿತೊ
ಇಂಥ ರಚನೆಗಳಲ್ಲಿ ಅಶೋಕರ ಕಾವ್ಯದ ಕಸುವು ಕಾಣಿಸುತ್ತದೆ. ದಿನದಿನದ ರೊಟ್ಟಿಗಾಗಿ ದುಡಿವ ಜೀವಗಳ ಶ್ರಮವನ್ನೂ ಬೆವರನ್ನೂ ಬಲ್ಲ ಈ ಕವಿತೆ ರೊಟ್ಟಿಯನ್ನು ಆತ್ಮವಿಕಾಸದ ಆಧ್ಯಾತ್ಮಿಕ ಹಂಬಲವಾಗಿಯೂ ಕಾಣಬಲ್ಲದು. ತತ್ವಪದಕಾರರ ಶ್ರಮಮೂಲದ ಸಮಾಜೋ ಆಧ್ಯಾತ್ಮದ ಮುಂದುವರಿಕೆಯ೦ತೆ ಸಂಕಲನದ ಅನೇಕ ಕವಿತೆಗಳಿವೆ. ಉತ್ತರಕರ್ನಾಟಕದ ಬಿರುಬಿಸಿಲು, ಬಡತನದ ಬವಣೆ, ಸಾಧಕರ ತತ್ವಪದಗಳ ಅಂತರ್ ದೃಷ್ಟಿ, ಸೂಫಿ ಪ್ರೇಮತತ್ವದ ಝಲಕು, ಪರಂಪರೆಯ ಈ ಎಲ್ಲ ಸತ್ವಗಳನ್ನು ಹೀರಿಕೊಂಡು ಅವರು ಬರೆಯುತ್ತಾರೆ. ಈ ಹೀರಿಕೊಳ್ಳುವಿಕೆಯ ನೈಜಶಕ್ತಿಯಿಂದಲೇ ಕಾವ್ಯ ಕಸುವುಗೊಳ್ಳುತ್ತದೆ ಹಾಗೂ ಹಸಿಯಾಗಿರುತ್ತದೆ. ಬೌದ್ಧಿಕ ವಜ್ಜೆಯಿಲ್ಲದೇ ಅಶೋಕ ಅವರು ಇದನ್ನು ‘ಆನು ಒಲಿದಂತೆ ಹಾಡುವೆ’ ಎಂಬ ಆತ್ಮವಿಶ್ವಾಸದಲ್ಲಿ ಸೃಷ್ಟಿಸುತ್ತಾರೆ.
ಈ ಲೋಕದ ಜೊಳ್ಳೊ
ಧರಿಸಿದೆ ರೊಟ್ಟಿಯ ಮೊಗ
ನಾಮಫಲಕಗಳೇ ಝಗಮಗ
ಹೊರಗಿನ ಮಾತುಗಳಿಗಿಂತ ಒಳಗಿನ ಅರಳುವಿಕೆ ಈ ಕವಿಗೆ ಮಹತ್ವದದ್ದೆನಿಸಿದೆ. ಆತ್ಮದ ಅರಳುವಿಕೆಯಲ್ಲಿ ಹಿಗ್ಗುತ್ತಿರುವ ವಿಕಾಸ ಭಾವವೊಂದು ಹೊರಲೋಕದ ಸುಳ್ಳುಸುಳ್ಳೇ ಚಹರೆಗಳನ್ನು ನೋಡಿ ವಿಹ್ವಲಗೊಳ್ಳುತ್ತದೆ. ಇಂದು ಜೊಳ್ಳುಗಳೇ ವಿಜೃಂಭಿಸುತ್ತಿರುವ ಕಾಲ. ವಿಚಾರ, ದರ್ಶನ, ಭಾವ ಬದುಕು ಎಲ್ಲವೂ ಜೊಳ್ಳು ಮಾದರಿಗಳ ಹಿಂದೆಬಿದ್ದಿದೆ. ಸ್ವರೂಪ ಮರೆಯಾಗಿ ನಾಮಫಲಕಗಳೇ ವಿಜೃಂಭಿಸುವುದು ನಮ್ಮ ಬದುಕಿನ ಅಂತಃಸತ್ವವೇ ತೀರಿಹೋಗಿರುವ ವ್ಯಂಗ್ಯವನ್ನು ಸೂಚಿಸುತ್ತದೆ. ಇಂಥ ಚಿತ್ರಗಳ ಮೂಲಕ ತಮ್ಮ ಹುಡುಕಾಟದ ನೆಲೆ ಏನೆಂಬುದನ್ನು ಅವರ ಕಾವ್ಯವು ನಮಗೆ ಕಾಣಿಸುತ್ತಿದೆ.
ಮುರುಟಿಹ ಆತ್ಮವು
ಬೆಟ್ಟ ಬಿಂಬವು
ಮುಖಗಳ ಹಾಲ್ಗಂಭವು
ನೆಪ ಮಾತ್ರ
ಉನ್ಮತ್ತ ಧರ್ಮದ ಬಾವುಟಗಳ ನಡುವೆಯೂ
ಬದುಕಿನ ಎಲ್ಲ ಹಳವಂಡಗಳ ನಡುವೆಯೂ ಮುಕ್ಕಾಗದ ಪರಿಶುದ್ಧವಾದ ಕ್ಷಣಗಳನ್ನು ಸಾಕಾರಗೊಳಿಸಲು ಕಾವ್ಯವು ಶತಮಾನಗಳಿಂದಲೂ ಶ್ರಮಿಸುತ್ತಲೇ ಬಂದಿದೆ. ಧಾರ್ಮಿಕ ಕಾವ್ಯಗಳು, ಭಕ್ತಿ ಕಾವ್ಯ, ಅನುಭಾವ ಕಾವ್ಯ ಹೀಗೆ ಮನುಷ್ಯನ ಅಂತರ೦ಗದ ಹುಡುಕಾಟಕ್ಕೆ ಕಾವ್ಯವು ನಿರಂತರವಾಗಿ ಮೈಯಾಗಿದೆ. ಇಂದು ಧರ್ಮವು ಉನ್ಮತ್ತರ ಕೈಯ ಹತಾರವಾಗಿ ಬದಲಾದ ಸಂದರ್ಭದಲ್ಲಿ ವಾಸ್ತವದ ಅಪಾಯಗಳ ನಡುವೆಯೂ ಅಶೋಕರ ಕಾವ್ಯವು ಅಂಥ ಸತ್ಯದ ಕ್ಷಣಗಳನ್ನು ಧ್ಯಾನಿಸುತ್ತದೆ. ಮತ್ತು ಹಾಗೆ ಧ್ಯಾನಿಸುತ್ತಲೇ ತನ್ನ ನಿಜವನ್ನು ಮುಟ್ಟುತ್ತೇನೆಂಬ ಹಂಬಲವು ಅಳಿಸದಂತೆ ಉಳಿಸಿಕೊಳ್ಳುತ್ತದೆ.

ವ್ಯಕ್ತಿಯ ಪ್ರಜ್ಞೆ ಹಾಗೂ ಪರಿಸರದ ನಡುವಿನ ಸಾವಯವ ಸಂಬ೦ಧದಲ್ಲಿ ಕವಿತೆಯು ಬೆಳೆಯುತ್ತ ಹೋಗುತ್ತದೆ. ಇದು ಒಂದು ಬಗೆಯ ಲೋಕಾಂತ ಹಾಗೂ ಏಕಾಂತಗಳ ಬೆಸುಗೆ. ಏಕಾಂತದ ಮೌನದಲ್ಲಿ ಆಲಿಸುವ ಸೂಕ್ಷ್ಮ ಸ್ವರಗಳಿಗೆ ಭಾಷೆಯ ಮೂಲಕ ಚಲನೆಯನ್ನು ಕಲ್ಪಿಸುತ್ತಾ ಕಾವ್ಯವು ಹರಿಯುತ್ತದೆ. ಇದೊಂದು ಹರಿವು ಏಕೆಂದರೆ ಸಿದ್ದಚೌಕಟ್ಟುಗಳಲ್ಲಿ ಕಾವ್ಯವು ಸಂಭವಿಸುವುದಿಲ್ಲ. ಅದು ನಿಶ್ಚಿಯ ನೋಟಕ್ರಮಗಳನ್ನು, ಸಿದ್ದಗೊಂಡ ಹೆದ್ದಾರಿಯನ್ನು, ತರ್ಕದ ಲೆಕ್ಕಾಚಾರಗಳನ್ನು ಮೀರಿ ಇರುತ್ತದೆ. ಮೀರುವಿಕೆಯಿಲ್ಲದೇ ಕಾವ್ಯವಿಲ್ಲ. ಆದ್ದರಿಂದ ಚಲನಶೀಲ ಮನಸ್ಸಿಗೆ ಮಾತ್ರ ಕಾವ್ಯವು ಒಲಿಯುತ್ತದೆ. ಚಲನಶೀಲ ಮನಸ್ಸು ಮಾತ್ರ ಭಾಷೆಗಿರುವ ಅನಂತ ಸಾಧ್ಯತೆಗಳನ್ನು ಕಾಣಬಲ್ಲದು.
ಓ ನನ್ನ ಕಿರೀಟವೇ
ಎದೆ ತಟ್ಟುವ ಮುನ್ನ
ಆತ್ಮಕ್ಕಂಟಿದ ಕೆಂಡದ
ಮಾತುಗಳನ್ನೊಮ್ಮೆ
ಆಲಿಸು

ಬೀಸೊ ಕಲ್ಲ ಬಳೆಗಳ ಬವಣೆ ಬಲ್ಲವರ ನಾ ಕಾಣೆ
ಹಿಡಿ ಧಾನ್ಯಕೆ ಬೆವರ ಬಸಿದು ಸೆರಗೊಡ್ಡಿಹಳು
ನನ್ನ ಹಡೆದವ್ವ
ಬದುಕಿನ ಮೇಲುಮೇಲಿನ ನೆಲೆಯಲ್ಲಿ ಗೋಚರಿಸದ ಒಡಲ ಸಂಕಟಗಳಿಗೆ ಧ್ವನಿಯಾಗುವಲ್ಲಿ ಈ ಸಂಕಲನದ ಕವಿತೆಗಳು ಶ್ರಮಿಸಿವೆ. ‘ಆತ್ಮಕ್ಕಂಟಿದ ಕೆಂಡದ ಮಾತುಗಳು’ ಕಾಣದಂತೆ ಸುಡುತ್ತವೆ. ಇವು ಅಕ್ಕ ಹೇಳುವ ಕಿಚ್ಚಿಲ್ಲದ ಬೇಗೆಯಂಥವು. ಅಂತೆಯೇ ಹಿಟ್ಟು ಬೀಸುವಾಗ ಅವ್ವನ ಕೈಬಳೆಗಳ ಕಿಣಿಕಿಣಿ ಕೇಳಿಸುತ್ತದೆ. ಆದರೆ ಅವುಗಳ ಹಿಂದಿನ ಬವಣೆ ಕೇಳಿಸುವುದಿಲ್ಲ. ಯಾಕೆಂದರೆ ಇವೆಲ್ಲ ಭಾಷೆಯೇ ಇಲ್ಲದ ಚೀತ್ಕಾರಗಳು. ಅವ್ಯಕ್ತವನ್ನು ಆಲಿಸುವ ಹಾಗೂ ಗಮನಿಸುವ ಸೂಕ್ಷ್ಮ ಹಾಗೂ ಆರ್ದೃ ನೋಟ ಹೊಸಮನಿಯವರಿಗೆ ಒಲಿದಿದೆ. ಹಾಗಾಗಿಯೇ ಅವರು ತಮ್ಮ ಅನೇಕ ಸಮಕಾಲೀನ ಕವಿಗಳಂತೆ ವಾಚ್ಯ ಜಗತ್ತಿನಲ್ಲಿ ವಿಹರಿಸುವುದಿಲ್ಲ. ಧ್ವನಿಯಿಲ್ಲದ್ದನ್ನು ಧ್ವನಿಸುವ ನಿಜವಾದ ಕಾರುಣ್ಯದ ಪಸೆ ಅವರನ್ನು ಭಿನ್ನವಾಗಿಸಿದೆ.

ಕಾವ್ಯವು ಎಷ್ಟು ಒಂಟಿಧ್ವನಿಯೋ ಅಷ್ಟೇ ಸಮೂಹಧ್ವನಿಯೂ ಹೌದು. ಕಾವ್ಯದ ಮೂಲಕ ಒಂದು ಸಮಾಜದ ಒಳದನಿಗಳನ್ನು ಆಲಿಸಲು ಸಾಧ್ಯವಿದೆ. ಸಂಸ್ಕೃತಿಯೊ೦ದರ ವಿನ್ಯಾಸವನ್ನು ಅರಿಯಲು ಸಾಧ್ಯವಿದೆ. ಹಾಗೆಯೇ ವರ್ತಮಾನದ ಸಂಕಟಗಳಿಗೆ ದನಿಯಾಗಲೂ ಸಾಧ್ಯವಿದೆ. ಕಾವ್ಯದ ಮೂಲಕ ಇತಿಹಾಸಕ್ಕೆ ಪ್ರಶ್ನೆಗಳನ್ನು ಕೇಳುವುದು ಹಾಗೂ ಭವಿಷ್ಯದ ಕನಸುಗಳಿಗೆ ಆಕಾರಕೊಡುವುದು ಎರಡೂ ಕ್ರಿಯೆಗಳು ಕಾವ್ಯಕ್ಕೆ ಮುಖ್ಯ. ಈ ಸಂಕಲನದ ಕವಿತೆಗಳಲ್ಲಿ ಇಂತಹ ಎಲ್ಲ ಪ್ರಯತ್ನಗಳೂ ಇವೆ.
ಕೊಳಲಾದೆ
ಕೇರಿಯ ಹಾಡು ಪಾಡಿಗೆ
ದನಿಯಿರದ ಕೊರಳಿಗೆ
ಕನ್ನಡಿಯಾದೆ
ಬತ್ತಲ ಬಯಲ ಕಣ್ಣಿಗೆ

ಸತ್ಯದ ಮೇಲಣ
ಚೂರಿ ಇರಿತ ಎಗ್ಗಿಲ್ಲದೇ ಸಾಗಿದೆ
ಕರುಣಾ ಸಾಗರ ಮೌನವಾದಂತಿದೆ
ಭೂಪಟದ ಟೊಳ್ಳು ಟೊಳ್ಳಾದ
ರಾಜದಂಡ
ವಾಸ್ತವದ ಅಧಿಕಾರ ರಾಜಕಾರಣವನ್ನು ಪ್ರತಿಮಾತ್ಮಕವಾಗಿ ಚಿತ್ರಿಸುವ ಅಶೋಕ ಅವರು ಅದನ್ನು ಮೀರುವ ದಾರಿಗಳನ್ನೂ ಶೋಧಿಸುತ್ತಾರೆ. ದನಿಯೇ ಇಲ್ಲದ ಕೊರಳಿಗೆ ದನಿಯಾಗುವ ಸಾಮಾಜಿಕ ಬದ್ಧತೆಯೂ ಅವರಲ್ಲಿ ಇಲ್ಲದಿಲ್ಲ. ಆದರೆ ಆಕ್ರೋಶಕ್ಕಿಂತ ಅವರು ಶೋಧದ ಹಾದಿ ಹಿಡಿಯುತ್ತಾರೆ. ಪರಿವರ್ತನೆಯೊಂದು ಬರಿಯ ದೇಹದಿಂದಲ್ಲ ಆತ್ಮದಿಂದಲೇ ಸಂಭವಿಸಬೇಕೆ೦ಬ ಘನ ಹಂಬಲ ಅವರದು. ಅದು ಸಮಾಜದ ಆತ್ಮವೂ ಹೌದು. ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವ ಕೆಲಸ ಮಾಡಲೇಬೇಕಾದುದು ಕಾವ್ಯದ ಗುರಿ ಹಾಗೂ ಜವಾಬುದಾರಿ. ಅದನ್ನು ಧ್ಯಾನಶೀಲ ಏಕಾಗ್ರತೆಯಲ್ಲಿ ತಲುಪಲು ಅವರು ಬಯಸುತ್ತಾರೆ.
ಕಣ್ಣ ಪಾಪೆಗಳು ನುಡಿದದ್ದು ಸತ್ಯ;
ಅರಳಿತೊ ಪ್ರೇಮ
ನಶಿಸಿತೊ ಕಡು ಕಾಯ
ದಾರಿಯಾಯಿತೊ ಕಾವ್ಯ
ಬೆಳಗಿತೊ ಬದುಕು
ಎನ್ನುವಲ್ಲಿ ಅವರ ಕಾವ್ಯದ ಮೀಮಾಂಸೆಯೊ೦ದು ರೂಪು ಗೊಂಡಿದೆ. ಪ್ರೇಮವರಳಲು, ಕಡುಕಾಯದ ಕುಬ್ಜ ಮಾನದಂಡ ಗಳಳಿದು ಆತ್ಮವಿಕಾಸ ಹೊಂದಲು, ಆ ಮೂಲಕ ಬದುಕು ಬೆಳಗಲು ಅವರಿಗೆ ಕಾವ್ಯ ಬೇಕು. ಕಾವ್ಯವು ಲೋಕಕ್ಕೆ ಕೊಡುವ ಬೆಳಕು ಇದಲ್ಲದೇ ಇನ್ನೇನು?

‍ಲೇಖಕರು Admin

June 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: