ಗಿರಿಜಾ ಶಾಸ್ತ್ರಿ ಓದಿದ ‘ಗೋಡೆಗಿಡ’

ಗಿರಿಜಾ ಶಾಸ್ತ್ರಿ

ಪ್ರೀತಿಯ ಲಾವಣ್ಯ ನಮಸ್ಕಾರಗಳು. ನಿಮ್ಮ ಕವಿತಾ ಸಂಕಲನ ನನ್ನ ಕೈಗೆ ಬಂದು ಬಹಳ ದಿನಗಳಾದವು. ತಡವಾಗಿ ಕೈಗೆತ್ತಿಕೊಂಡೆ ಕ್ಷಮಿಸಿ.

“ಗೋಡೆಗಿಡ” ಎಂದು ನಿಮ್ಮ ಕವಿತಾ ಸಂಕಲನಕ್ಕೆ ಹೆಸರಿಟ್ಟಿದ್ದೀರಿ.‌ ಗೋಡೆ ಗಿಡಕ್ಕೆ ಆರೈಕೆ ಬೇಕಿಲ್ಲ, ಅದನ್ನು ಯಾರು ನೆಡುವುದೂ ಇಲ್ಲ. ಗೋಡೆಗಿಡಗಳು ತಾವೇ ತಾವಾಗಿ ಬೆಳೆಯುವಂತಹವು. ಸಿಮೆಂಟಿನ ಬಿರುಕಿನಲ್ಲಿ ಸೆಲೆಯೊಡೆಯುವ ( ಎ.ಕೆ.ರಾಮಾನುಜನ್) ಗಿಡ ಸೃಜನಶೀಲತೆಯ ಸಂಕೇತ. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ, ಯಾವುದೇ ಪೂರ್ವತಯಾರಿಯಿಲ್ಲದೆ ಚಿಗುರುವ ಇವು ಪ್ರಕೃತಿಯ ಸಹಜ ಅಭಿವ್ಯಕ್ತಿಗಳು. ನಿಮ್ಮ “ಹುಲ್ಲಿನ ದಳಗಳು” ಕವಿತೆ ಹೇಳುವುದೂ ಇದನ್ನೇ ಲಾವಣ್ಯ ನೀವು ಸಹಜ ಕವಿ.

ನಿಮ್ಮ ಕವಿತೆಗಳು ಸಹಜ ಅಭಿವ್ಯಕ್ತಿ. ನದಿ, ನೀರು. ಮಳೆ, ಆಕಾಶ, ಕಪ್ಪು ಕಟ್ಟಿದ ಮೋಡ, ಸಮುದ್ರ,ಮಣ್ಣು, ಮಲ್ಲಿಗೆ, ಹುಲ್ಲಿನ ದಳಗಳು, ಚಂದಿರ- ಹೀಗೆ ಪ್ರಕೃತಿಯ ಹಲವಾರು ಸಹಜ ವ್ಯಾಪಾರಗಳು ಇಲ್ಲಿ ಕವಿತೆಗಳಾಗಿ ಮೈದಳೆದಿವೆ. ಹಾಗೆಂದು ಇವು ನವೋದಯ ಕಾಲದ ರಮ್ಯಕವಿತೆಗಳ ಸಾಲಿಗೆ ಸೇರುವುದಿಲ್ಲ. ಇಲ್ಲಿನ ಪ್ರಕೃತಿಯ ವ್ಯಾಪಾರಗಳು ಮನುಷ್ಯ ಸಂಬಂಧಗಳ ಜೊತೆಗೂ ಕೊಕ್ಕೆ ಹಾಕಿಕೊಂಡಿವೆ. ಯಾಕೆಂದರೆ ಮನುಷ್ಯ ಪ್ರಕೃತಿಯಿಂದ ಬೇರೆಯಲ್ಲವಲ್ಲ? ಆಧುನಿಕ ಜೀವವೊಂದು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅನುಸಂಧಾನವನ್ನು ಬಹಳ ತೀವ್ರವಾಗಿ ಗಮನಿಸುತ್ತಿರುವಂತೆ ನನಗೆ ಭಾಸವಾಗುತ್ತದೆ. ಇದು ಚೇತನವೊಂದು ತನ್ನನ್ನೇ ನೋಡಿಕೊಂಡಂತೆ.

ಈ ಕವಿತೆಗಳು, ಉದ್ದೇಶ ರಹಿತವಾಗಿ, ಬಹಿರಂಗವನ್ನು ‘ಸುಮ್ಮನೇ’ ನೋಡುತ್ತವೆ. ಹೀಗೆ ಸುಮ್ಮನೇ ತದೇಕಚಿತ್ತವಾಗಿ ಯಾವುದೇ ಪೂರ್ವಗ್ರಹವಿಲ್ಲದೇ ನೋಡುವ ಒಂದು ಮನಸ್ಥಿತಿ ಧ್ಯಾನದ ಪ್ರಕ್ರಿಯೆಯೂ ಹೌದು. ಲಾವಣ್ಯ, ನೀವು ನಿಜ ಬದುಕಿನಲ್ಲಿಯೂ ಇಂತಹ ಒಂದು ಅಭ್ಯಾಸವನ್ನು ರೂಢಿಸಿಕೊಂಡವರು. ಅದರ ಗಂಧವನ್ನು ನಿಮ್ಮ ಸಮರ್ಥ ಕವಿತೆಗಳಲ್ಲಿ ಕಾಣಬಹುದಾಗಿದೆ.

“ಅಮ್ಮ ಮತ್ತು ಸಮುದ್ರ”ಅದರ ವೈಶಾಲ್ಯತೆಯ ದೃಷ್ಡಿಯಿಂದ, ಅದರ ಸ್ವಭಾವ ವೈಚಿತ್ರ್ಯಗಳ ದೃಷ್ಟಿಯಿಂದ ಒಂದೇ ಆಗಿ ಕಾಣುತ್ತದೆ. ಸಮುದ್ರವೇ ಅಮ್ಮನಾಗುವುದು, ಅಮ್ಮನೇ ಸಮುದ್ರವಾಗುವುದು (ಅಮ್ಮ ಮತ್ತು ಸಮುದ್ರ), ಹರಿವ ನೀರನ್ನು ಸಾಮಾನ್ಯವಾಗಿ ಸ್ತ್ರೀ ಎಂದು ಭಾವಿಸಲಾಗುತ್ತದೆ. ಪುರುಷನನ್ನು ನಿಂತ ನೀರಾಗಿ ಕಾಣಲಾಗಿದೆ. (ಸಮುದ್ರ) ಆದರೆ “ನೀರಪಾತ್ರ” ದಲ್ಲಿ ಹರಿವ ನೀರನ್ನು ಪುರುಷನೆಂದು ಭಾವಿಸಲಾಗಿದೆ. ನೀರಿನ ವಿಶ್ವರೂಪವನ್ನು ಇಲ್ಲಿ ಬಣ್ಣಿಸಲಾಗಿದೆ. ಈ. ನಿಟ್ಟಿನಲ್ಲಿ “ನೀರದಾರಿ” ನೀರೆಯ ದಾರಿಯೇ ಆಗಿ, “ನೀರಪಾತ್ರ” ಕವಿತೆಗಿಂತ ಸಶಕ್ತವಾಗಿದೆ.

ಹೂ ಮುಡಿಯ ಬೇಕೆಂಬ ಹೆಣ್ಣಿನ ಸಹಜ ಆಸೆಯನ್ನು ಹೂವಿನಷ್ಟೇ ಮೃದುವಾಗಿ ಹೇಳುವ ಕವಿತೆ (ಇಲ್ಲಿ ನಾನು, ಅಲ್ಲಿ ಮಲ್ಲಿಗೆ), ಭೂಮಿಯ ಮೇಲೆ ಮಳೆ ಬಿಡಿಸುವ ವಿನ್ಯಾಸವನ್ನು ಕಾಣುವ ಸೂಕ್ಷ್ಮ ಕಣ್ಣು (ದೀಪದ ಕಣ್ಣು), ವಿಘಟಿತ ಮನಸ್ಸುಗಳೆರೆಡು ನಿರ್ಮಿಸಿದ ನಿರ್ವಾತ (ನನ್ನ ನಿನ್ನ ನಡುವೆ), ಸಾವಿನ ಸಮ್ಮುಖದಲ್ಲಿ ಅರಳುವ ಜೀವನ (ಜೀವನ್ಮುಖಿ), ಚುಕ್ಕಿ ರಂಗೋಲಿಯಂತೆ ಜೀವನದ ಹಾಸು ಹೊಕ್ಕಾದ ಬಂಧ(ಚುಕ್ಕಿ ರಂಗೋಲಿ), ಜೀವ ಚೈತನ್ಯ/ ಜೀವನ ಪ್ರೀತಿ/ ಪ್ರಕೃತಿ ಎಂಬ ರಂಗಸ್ಥಲದ ಅವಶ್ಯಕತೆ ಜೀವನ ನಾಟಕಕ್ಕೆ ಇದೆ ಎಂದು ಹೇಳುವ ಕವಿತೆ (ನಮ್ಮ ಕನಸುಗಳಿಗೆ ನಿಮ್ಮ ರಂಗಸ್ಥಲ ಬೇಕು), ಕಾಲದ ಸಾಪೇಕ್ಷತೆಯನ್ನು ಸಾರುವ “ಯುಗಾದಿ”, ಮಳೆಯ ದೈವಿಕ ವೈಭವವನ್ನು ವರ್ಣಿಸುವ ” ಮಳೆಯದೊಂದು ದಿವ್ಯ ಸಾನಿಧ್ಯ”, ನೆನಪುಗಳು ಪಂಚೇಂದ್ರಿಯಗಳ ಅನುಭವಗಳಾಗಿ ಮರುಹುಟ್ಟು ಪಡೆಯುವ ” ಘಮ”, ಮನುಷ್ಯರು ಪರಸ್ಪರ ಸಂವಹನ, ಸಂವಾದವನ್ನು ಕಳೆದುಕೊಂಡಿರುವ ಆಧುನಿಕ ವ್ಯಸ್ತ ಬದುಕನ್ನು ತೆರೆದಿಡುವ ಸರಳ ಕವಿತೆ “ಜಗುಲಿಕಟ್ಟೆ”, ಸಮೂಹ ಸನ್ನಿಯೊಳಗೆ ಅಸ್ಮಿತೆಯ ದರ್ಶನ ಸಾರುವ ” ಉತ್ಸವ”, ಆಂಟೊನಿ ಕ್ಲಿಯೋಪಾತ್ರ ದ He ploughed her and she cropped ” ಎಂಬ ಸಾಲುಗಳನ್ನು ನೆನೆಪಿಸುವ, ಭೂಮಿ ಆಕಾಶದ ಸಂಬಂಧದ ಸ್ವರೂಪವನ್ನು ಬಣ್ಣಿಸುವ “ಮಳೆಯ ಹೃದಯ”, ಪ್ರೀತಿಪಾತ್ರರು ಸಾಯುವುದಿಲ್ಲ ಅವರು ನೆನಪುಗಳ ಮುಖಾಂತರ ಮುಂದುವರಿಯುತ್ತಾರೆ ಎಂದು ಹೇಳುವ ” ಅಜ್ಜಿ” ಕವಿತೆ, – ಹೀಗೆ ಈ ಸಂಕಲನದ ಹೆಚ್ಚಿನ ಕವಿತೆಗಳು ಮಳೆಗಾಲದ ಇಳೆಯಂತೆ ಮನಸ್ಸಿಗೆ ಮುದ ಕೊಡುತ್ತವೆ, ಆಹ್ಲಾದಕರವಾಗಿವೆ, ಸುಖದ ಅನುಭವ ನೀಡುತ್ತವೆ. ಇವು ಚಿಂತನೆಗೆ ನಮ್ಮನ್ನು ಹಚ್ಚುವುದಕ್ಕಿಂತ ಮಾಧುರ್ಯವನ್ನೇ ಹರಡುತ್ತವೆ. ಇವು “ಗಾಳಿ ಅಲೆಯೊಳು ನಾವೆ ತೇಲುತ್ತಿರುವ ಹಾಗೆ” ಸುಮ್ಮನೆ ಇವೆ.

ಇಲ್ಲಿನ ಕೆಲವು ಕವಿತೆಗಳು ವಾಚ್ಯವಾಗಿ ಕೊನೆಗೊಳ್ಳುವುದು ಅವುಗಳ ಮಿತಿಯಾಗಿದೆ. ಕವಿತೆಯ ಓದೆಂದರೆ ಒಂದು ಚೆಂದದ ಕೂಸನ್ನು ಎತ್ತಿಕೊಂಡಹಾಗೆ. ಇಂತಹ ಚೆಂದದ ಕೂಸುಗಳನ್ನು ಇತ್ತ ಲಾವಣ್ಯ ನಿಮಗೆ ಅಭಿನಂದನೆಗಳು. ಶುಭಾಶಯಗಳು.

‍ಲೇಖಕರು Admin

May 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: