ಪ್ರಸಾದ್ ನಾಯ್ಕ್
**
“ದುರಿತ ಕಾಲದ ಸಾಲುಗಳು” ನಾನು ಹಲವು ಬಗೆಯ ನಾನ್-ಫಿಕ್ಷನ್ ಪುಸ್ತಕಗಳನ್ನು ಸಾಮಾನ್ಯವಾಗಿ ಓದುತ್ತಿರುತ್ತೇನೆ. ನನ್ನ ವೃತ್ತಿಗೂ, ಅಕಾಡೆಮಿಕ್ ಹಿನ್ನೆಲೆಗೂ ಸಂಬಂಧವೇ ಇಲ್ಲದಿರುವ ಹಲವು ಸಂಗತಿಗಳು ಅಲ್ಲಿ ಬಂದು ಹೋಗುತ್ತಿರುತ್ತವೆ. ಅಪರಾಧ ಜಗತ್ತು, ಮನಃಶಾಸ್ತ್ರ, ರಾಜಕೀಯ, ದೌರ್ಜನ್ಯ, ಮಾನವ ಹಕ್ಕುಗಳು, ಅರ್ಬನ್ ಲೋಕ, ಜೀವನ ಕಥನಗಳು. ಹೀಗೆ ಏನೇನೋ. ಆದರೆ ನನ್ನ ಸೀಮಿತ ಓದಿನ ಮಟ್ಟಿಗೆ ಇಂದಿಗೂ ಏಕಾಂತದಲ್ಲಿ ಜೊತೆ ನೀಡುವ, ಮನಸ್ಸನ್ನು ಗಾಢವಾಗಿ ತಟ್ಟುವ ಏಕೈಕ ಪ್ರಕಾರವೆಂದರೆ ಕವಿತೆಗಳು.
ನಿಮಗೇ ತಿಳಿದಿರುವಂತೆ ಚಂದದ ಕವಿತೆಯೊಂದು ಇಡೀ ದಿನವನ್ನು ಬೆಳಗುವುದಿದೆ. ದಿನಗಟ್ಟಲೆ, ವಾರಗಟ್ಟಲೆ ಗಾಢವಾಗಿ ಕಾಡಿದ್ದಿದೆ. ನನ್ನ ಸುತ್ತಮುತ್ತಲಿನ ಸಂಗತಿಗಳನ್ನು ನೋಡುವ ದೃಷ್ಟಿಕೋನವನ್ನೇ ಸಂಪೂರ್ಣವಾಗಿ ಬದಲಾಯಿಸಿದ್ದಿದೆ. ಸಂಗತಿಯೊಂದರ ಬಗ್ಗೆ ಪುಟಗಟ್ಟಲೆ ಬರೆಯುವುದರ ಬದಲಾಗಿ, ಈ ಕವಿಗಳು ಕೆಲವೇ ಸಾಲುಗಳಲ್ಲಿ ಅದೆಷ್ಟು ಸಮರ್ಥವಾಗಿ ಹೇಳುತ್ತಾರಲ್ಲ ಎಂದು ಗದ್ಯವನ್ನೇ ನೆಚ್ಚಿಕೊಂಡಿರುವ ನನ್ನಂಥವನಿಗೆ ಬಹಳ ಕಾಡಿದ್ದೂ ಇದೆ.

ಕವಿತೆಗಳನ್ನು ನಾವಿಂದು ಹುಡುಕಿಕೊಂಡು ಹೋಗಬೇಕಿಲ್ಲ. ಅಪ್ಪಟ ಕಾವ್ಯ ಪ್ರೇಮಿಯೊಬ್ಬನಿಗೆ ಇಂದು ಪುಸ್ತಕಗಳೊಂದೇ ಆಸರೆಯಲ್ಲ. ಪಾಡ್-ಕಾಸ್ಟ್, ಓಪನ್ ಮೈಕ್, ವಾಚನದಂತಹ ಹಲವು ಸಂಗತಿಗಳು ಈಗ ನಮ್ಮ ನಡುವಿನಲ್ಲಿವೆ. ತೀರಾ ರೀಲ್ಸ್, ಶಾಟ್ಸ್ ಮತ್ತು ಫಾರ್ವರ್ಡುಗಳಲ್ಲೂ ಈಗ ಮೋಹಕ ಸಾಲುಗಳು ಪ್ರವಾಹೋಪಾದಿಯಲ್ಲಿ ಬಂದು ನಮ್ಮ ಮಡಿಲಿಗೆ ಬೀಳುತ್ತವೆ. ಅವುಗಳಲ್ಲಿ ಎಷ್ಟು ನಮ್ಮ ಪಾಲಿಗೆ ದಕ್ಕುತ್ತವೆ, ಎಷ್ಟು ಕಳೆದು ಹೋಗುತ್ತವೆ ಎಂಬುದು ಬೇರೆ ಮಾತು. ಇರಲಿ. ಹೀಗಾಗಿಯೇ ಬೇರೆ ಭಾಷೆಯಲ್ಲಿ ಅದ್ಭುತ ಕವಿತೆಯೊಂದನ್ನು ಓದಿದಾಗ ಥಟ್ಟನೆ ಅದನ್ನು ಅನುವಾದಿಸಿ ನಮ್ಮ ಕನ್ನಡದ ಓದುಗರಿಗೆ ತಲುಪಿಸಬೇಕು ಎಂಬ ಹಪಾಹಪಿಗೆ ಬೀಳುತ್ತೇನೆ. ನನ್ನನ್ನು ತೀವ್ರವಾಗಿ ಕಾಡಿದ ಕವಿತೆಯೊಂದು ಮತ್ತೊಬ್ಬನಿಗೆ ಓದಿಸಿ, ಆತನಿಗೆ ಏನನ್ನಿಸಿತು ಎಂಬ ಕುತೂಹಲಕ್ಕೆ ತೆರೆದುಕೊಳ್ಳುತ್ತೇನೆ. ಕವಿಯೊಬ್ಬ ಅದೆಷ್ಟು ಆಯಾಮಗಳಲ್ಲಿ ಸಂವೇದನಾಶೀಲನಾಗಿ ಯೋಚಿಸಬಲ್ಲ ಅಂತೆಲ್ಲಾ ತಲೆ ಕೆಡಿಸಿಕೊಳ್ಳುತ್ತೇನೆ.
ಫಾತಿಮಾ ರವರ “ಅವಳ ಕಾಲು ಸೋಲದಿರಲಿ” ಕೃತಿಯನ್ನು ಓದುವಾಗಲೂ ಇಂತಹ ಹಲವು ಯೋಚನೆಗಳು ನನ್ನಲ್ಲಿ ಮೂಡುತ್ತಿದ್ದವು. ಹೀಗಾಗಿ ಚಿಕ್ಕ ಅವಧಿಯಲ್ಲೇ ಅವುಗಳ ಓದು-ಮರು ಓದು ಇತ್ಯಾದಿಗಳು ಮುಂದುವರಿದವು. ನಾವಿರುವ ದುರಿತ ಕಾಲದ ಬಗೆಗಿನ ಹಲವಾರು ಗಂಭೀರ ಪ್ರಶ್ನೆಗಳನ್ನು ಫಾತಿಮಾ ತಮ್ಮ ಕವಿತೆಗಳಲ್ಲಿ ಸಮರ್ಥವಾಗಿ ಎತ್ತಿದ್ದಾರೆ. ಊರಿಗೂರೇ ಹೊತ್ತಿ ಉರಿಯುತ್ತಿರುವಾಗ ಕವಿತೆಯ ಕೆಲ ಸಾಲುಗಳು ಏನು ತಾನೇ ಮಾಡಬಲ್ಲವು ಎಂದು ಕೇಳುವುದು ಸುಲಭ. ಆದರೆ ಇಂತಹ ಕಾಲಘಟ್ಟದಲ್ಲಿ ಓರ್ವ ಸೃಜನಶೀಲ ವ್ಯಕ್ತಿಯಾಗಿ, ನಾಗರಿಕನಾಗಿ, ವ್ಯಕ್ತಿಯಾಗಿ ನಾವೇನು ಮಾಡುತ್ತಿದ್ದೇವೆ ಮತ್ತು ಮಾಡಬೇಕು ಎಂಬುದನ್ನು ಸೂಕ್ಷ್ಮವಾಗಿ ನಮಗೆ ತಿಳಿಹೇಳುವುದು ಇಂತಹ ಕವಿತೆಗಳೇ. ಇದೊಂಥರಾ ಕತ್ತಲಿನಲ್ಲಿ ಕಳೆದು ಹೋಗಿರುವ ಮನುಷ್ಯನೊಬ್ಬನಿಗೆ ಚಿಕ್ಕದೊಂದು ಹಣತೆಯ ಬೆಳಕು ಸಿಕ್ಕಂತೆ. ಆಟೋಪೈಲಟ್ ಮೋಡಿನಲ್ಲಿ ಸಾಗುತ್ತಿರುವ ಬದುಕಿಗೆ ಹಟಾತ್ತನೆ ಪ್ರಜ್ಞೆಯ ಅರಿವು ಮೂಡುವಂತೆ. ಬಹುಷಃ ಇದಕ್ಕಾಗಿಯೋ ಏನೋ. ಕವಿತೆಗಳು ಎಲ್ಲರಿಗೂ ಸಲ್ಲುವಂತಿನ ಅಶರೀರವಾಣಿಯಂತಿದ್ದರೂ ತೀರಾ ನಮ್ಮದು ಎಂದನ್ನಿಸಿಬಿಡುತ್ತವೆ.

ಖಾಸಗಿ ಪತ್ರವೊಂದನ್ನು ಓದುವ ಅನುಭೂತಿ ನೀಡುತ್ತವೆ. ಜಡ್ಡು ಹಿಡಿದ ಮನದಲ್ಲಿ ಧಿಗ್ಗನೆ ಚಿಂತನೆಯ ಕಿಡಿಯೊಂದನ್ನು ಹುಟ್ಟಿಸಿಬಿಡುತ್ತವೆ. ಫಾತಿಮಾರ ಈ ಹೊಸ ಕವನ ಸಂಕಲನವನ್ನು ಓದುತ್ತಾ ಬಾಮಿಯಾನನ ಬುದ್ಧ, ಬಾಂಬು, ಅಹಲ್ಯೆ, ಪುರಾಣ, ಗಂಡು-ಹೆಣ್ಣು ಹೀಗೆ ಹಲವು ಗಹನವಾದ ಸಂಗತಿಗಳಿಗೆ ನಾನು ಮುಖಾಮುಖಿಯಾದೆ. ಅವರದ್ದೇ ಮಾರ್ಮಿಕ ಸಾಲುಗಳು ಹಲವಾರು ಸಂಗತಿಗಳ ಒಳ ಸುಳಿಗಳನ್ನು ಕಾವ್ಯಾತ್ಮಕವಾಗಿ ಹಿಡಿದಿಡುವ ಕಾರಣದಿಂದಾಗಿ, ಅವುಗಳನ್ನೇ ಇಲ್ಲಿ ವಿಮರ್ಶೆ-ವಿಶ್ಲೇಷಣೆಗಳ ಹೆಸರಿನಲ್ಲಿ ಪುನರಾವರ್ತಿಸುವುದು ನನ್ನ ಮಟ್ಟಿಗೆ ದುಸ್ಸಾಹಸದ ಕೆಲಸ. ಏಕೆಂದರೆ ಕವಿತೆಗಳಿಗೆ ಸಂಬಂಧಪಟ್ಟಂತೆ ನಾನೊಬ್ಬ ಒಳ್ಳೆಯ ಓದುಗನೇ ಹೊರತು ಸ್ವತಃ ಕವಿಯೂ ಅಲ್ಲ, ವಿಮರ್ಶಕನೂ ಅಲ್ಲ. ಸಾಮಾನ್ಯವಾಗಿ ಕವಿತೆಗಳನ್ನು ಓದುವಾಗ ಅದೆಷ್ಟೋ ಹೊಸ ಹೊಳಹುಗಳು ನಮಗೆ ಸಿಗುವುದುಂಟು. ಅದು ಓದುಗನ ಭಾಗ್ಯ. ಅವುಗಳನ್ನು ಪದಗಳಲ್ಲಿ ಹಿಡಿದಿಡುವುದು, ಅವುಗಳಿಗೆ ಬೆಲೆಕಟ್ಟುವುದು ಅಸಾಧ್ಯ. ಹೀಗಾಗಿ ಅವುಗಳನ್ನು ಯಕಃಶ್ಚಿತ್ ಸ್ಟಾರ್ ರೇಟಿಂಗಿಗೆ ಇಳಿಸುವುದಂತೂ ನನಗನಿಸುವಂತೆ ಮಹಾ ಪಾಪ. ಹೀಗಾಗಿ ಈ ಚಂದದ ಸಂಕಲನವನ್ನು ಕೊಂಡು ಓದಿ ಎಂದಷ್ಟೇ ಹೇಳಬಲ್ಲೆ. ಜೊತೆಗೇ “ನಿಮ್ಮ ಲೇಖನಿಯು ಎಂದಿಗೂ ಸೋಲದಿರಲಿ” – ಎಂಬ ಶುಭ ಹಾರೈಕೆ ಕವಯತ್ರಿಗೆ!
0 Comments