ಅವಳಿಟ್ಟ ಹೆಸರು ‘ಸಿದ್ದರಾಮಯ್ಯ ದೀಪಗಳು!’

ಎನ್. ರವಿಕುಮಾರ್

**

ಅವಳಿಟ್ಟ ಹೆಸರು “ಸಿದ್ದರಾಮಯ್ಯ ದೀಪಗಳು”!!
ಎಷ್ಟೊಂದು ರೂಪ-ರೂಪಕಗಳು..!!!

**

ಗೌರ‍್ನಮೆಂಟ್ ಶಾಲೆಯಲ್ಲಿ ಪ್ರೈಮರೀ ಹಂತ ದಾಟಿದ ನನ್ನನ್ನು ಇನ್ನಷ್ಟು ಚೆನ್ನಾಗಿ ಓದಿಸಬೇಕೆಂದು ಹಠ ಹಿಡಿದವರಂತೆ ನನ್ನನ್ನು ಕೈ ಹಿಡಿದು
ಎಳೆದೊಯ್ದ ಅವ್ವ ನಮ್ಮೂರಿನ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಮಧ್ಯಮ ವರ್ಗಗಳ ಪಾಲಿಗೆ ಮೀಸಲಿಟ್ಟಂತಿದ್ದ ಪ್ರೌಢಶಾಲೆಯ
ಮುಖ್ಯೋಪಾದ್ಯಾಯರ ಕಚೇರಿಯ ತಲೆಬಾಗಿಲಿಗೆ ನಿಲ್ಲಿಸಿ ಬಿಟ್ಟಿದ್ದಳು.

ಸೋಷಿಯಲಿಷ್ಟು ಚಳವಳಿ, ಜನತಾ ಪರಿವಾದ ನಮ್ಮೂರಿನ ಮುಖಂಡರಾಗಿದ್ದ ಎಂ.ಸಿ ಮಹೇಶ್ವರಪ್ಪ ಅವರ ರೈಸ್‌ಮಿಲ್ ಕೊಟ್ಟಿಗೆ ಮನೆಯಿಂದ ಸಗಣಿ ಬಳಿದ ಕೈಗಳನ್ನು ಸೆರಗಿಗೆ ಒರೆಸಿಕೊಂಡೆ ಸೀದಾ ಬಂದು ನಿಂತಿದ್ದ ನನ್ನವ್ವನನ್ನು ಒಳಗೆ ಬನ್ನಿ ಅಂತ ಯಾರು ಕರೆಯಲಿಲ್ಲ. ದೂರದ ಚೇರ್‌ನಲ್ಲೆ ಕುಳಿತಿದ್ದ ಮೂಗಿನ ತುತ್ತತುದಿಗೆ ಚಷ್ಮಾ ತಗಲಿಸಿಕೊಂಡು ಮೇಲುಗಣ್ಣು ಬಿಟ್ಟುಕೊಂಡು ನೋಡಿ ವಿಚಾರಿಸಿದ ಮುಖ್ಯೋಪಾದ್ಯಾಯರು ಕಾಸು ತಂದಿದಿಯೇನಮ್ಮಾ? ಎಂದು ಮೂಗಿಗೆ ಕರ್ಚಿಪ್ ಹೊದಿಸಿಕೊಂಡೆ ಪ್ರಶ್ನಿಸಿದರು. ಅವ್ವ ಸರಸರನೆ ಸೆರಗ ಗಂಟನ್ನು ಬಿಚ್ಚಿದವಳೇ ಚಿಲ್ಲರೆಗಳನ್ನೆಲ್ಲಾ ಅವರ ಮುಂದೆ ಕೊಡವಿ ಬಿಟ್ಟಳು. ಜೊತೆಗೆ ಸಾಹುಕಾರ್ ಮಹೇಶ್ವರಪ್ಪನೋರು ಬರೆದು ಕೊಟ್ಟಿದ್ದ ಶಿಫಾರಸ್ಸು ಚೀಟಿಯನ್ನು ಮುಂದಿಡಿದು ‘ಒಟ್ಟು ೬೦ ರೂಪಾಯಿ ಕಾಸವೆ ಸಾಮಿ, ಮಗಂಗೆ ಸ್ಕೂಲ್‌ಗೆ ಸೇರ್ಸಕಳಿ’ ಎಂದರು ಕೈ ಮುಗಿದು ನಿಂತು ಬಿಟ್ಟಳು.

ಸಾಹುಕ್ರಾರ್ ಮಹೇಶ್ವರಪ್ಪನೋರು ಬರೆದು ಕೊಟ್ಟ ಶಿಫಾರಸ್ಸು ಚೀಟಿಯನ್ನು ಕೋಲಿನಿಂದಲೆ ಎಳೆದುಕೊಂಡು ಓದಿದ ಮುಖ್ಯೋಪಾದ್ಯಾಯ ‘ಇದೆಲ್ಲಾ ನಡೆಯಲ್ಲ ಕಣಮ್ಮ. ಕಾಸು ಇಷ್ಟು ಸಾಕಾಗೋಲ್ಲ. ೩೬೦ ರೂಪಾಯಿಗಳು ಬೇಕು. ತಂದ್ರೆ ಅಡ್ಮಿಷನ್. ಇಲ್ಲಾಂದ್ರೆ ಹೋಗಿ ಮಗನನ್ನ ಗರ‍್ಮೆಂಟ್ ಸ್ಕೂಲ್‌ಗೆ ಸೇರ್ಸು, ಹೋಗು ಹೋಗು.. ನನ್ನ ಕಣ್ ಮುಂದೆ ನಿಲ್ ಬ್ಯಾಡ’ ಎಂದು ಗದರಿಬಿಟ್ಟರು.

ಆ ಮಾತು ಅದ್ಯಾವ ಮಟ್ಟಿಗೆ ಅವಳಲ್ಲಿ ಹಠ ಹುಟ್ಟಿಸಿತೆಂದರೆ ನನ್ನನ್ನು ಇದೇ ಸ್ಕೂಲ್ ಗೆ ಸೇರಿಸ್ತಿನಿ ಎಂದು ಶಪಥ ಮಾಡಿದವಳಂತೆ ಅಲ್ಲಿಂದ ಭರಭರನೆ ಬಂದವಳೆ ರೈಸ್‌ಮಿಲ್ ನ ಗೋದಾಮಿನಲ್ಲಿ ಅಕ್ಕಿ ಜರಡಿ ಹಿಡಿದ ಹೊಟ್ಟಿನಲ್ಲಿ ತೌಡು ಸಾಣಿಸಲು ಕುಳಿತು ಬಿಟ್ಟಳು . ಅಪ್ಪ ಬಿಸಿಲಿಗೆ ಬಿಸಿಲಾಗಿ ದುಡಿದು ಒಂದಿಷ್ಟು ಕಾಸು ತಂದರೆ, ತೌಡಿಗೆ ತೌಡಾಗಿ ತೇಯ್ದುಕೊಂಡ ಅವ್ವ ತೌಡು ಮಾರಿ ಒಟ್ಟು ೩೬೦ ರೂಪಾಯಿ ಹೊಂಚಿಕೊಂಡು ಬಲಗೈ ದುಡ್ಡು ಎಡಗೈಲಿ ನನ್ನನಿಡಿದುಕೊಂಡು ಮುಖ್ಯೋಪಾದ್ಯಾಯರ ಮುಂದೆ ನಿಂತು ಬಿಟ್ಟಳು. ನಾನು ಕ್ಲಾಸ್ ರೂಂ ನ ಒಳಗೆ ಹೋಗುವುದನ್ನೆ ನೋಡುತ್ತಿದ್ದ ಅವ್ವ ಅದಾವುದೋ ಸಾಧನೆ ಮಾಡಿದಂತೆ ಬೀಗುತ್ತಿದ್ದಳು. ಅವಳ ಮುಖದಲ್ಲಿ ಬೆವರು-ಕಣ್ಣೀರು ಯಾವುದೆಂದು ಗುರುತು ಸಿಗಲಾರದಷ್ಟು ಬೆರತು ಹರಿಯುತ್ತಿದ್ದವು.

ನೆನ್ನೆ ಪಿಯುಸಿಯಲ್ಲಿ ಪ್ರಥಮ ರ‍್ಯಾಂಕ್ ಬಂದ ವಿಜಯಪುರದ ವಿದ್ಯಾರ್ಥಿ ನನ್ನ ಓದಿಗೆ ಸರ್ಕಾರ ಕೊಟ್ಟ ೨೦೦೦ ರೂ.ಗಳು ನೆರವಾದವು ಎಂದು ಹೇಳುವಾಗ ನನ್ನ ನರಬಳ್ಳಿಯಿಂದ ಹೊರಬಂದ ನೆನಪಿದು. ನಾನು ಓದುವ ಕಾಲಕ್ಕೆ ಇಂತಹದ್ದೊಂದು ‘ಗೃಹಲಕ್ಷ್ಮಿ’ ಇದ್ದಿದ್ದರೆ ನನ್ನವ್ವ – ನನ್ನ ಅಪ್ಪನಂತ ಅದೆಷ್ಟೋ ನಿರ್ಗತಿಕ ತಂದೆ-ತಾಯಿಗಳ ಪಡಿಪಾಟಲು ನೀಗುತ್ತಿತ್ತಲ್ಲವೆ?

ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡ ಮಗನ ಹೆಣದ ಮುಂದೆ ಅನಾಥ ತಾಯಿಯೊಬ್ಬಳು ಕಣ್ಣೀರಿಡುತ್ತಾ “ಯಾಕಪ್ಪ ಹಿಂಗ್ ಮಾಡ್ಕಂಡೆ, ನಾನು ನಿನ್ನ ನೋಡ್ಕಂತಿದ್ದೆ. ಸಿದ್ದರಾಮಯ್ನೋರು ಎರಡಸಾವ್ರ ಹಾಕೋರು. ಅದ್ರಲ್ಲೆ ನಿನ್ನ ಸಾಕ್ತಿದ್ದೇ” ಎಂದು ಕಣ್ಣೀರಿಡುತ್ತಿದ್ದ ದೃಶ್ಯ ಎಂತವರನ್ನೂ ಕದಲಿಸದೆ ಇರದು.

ಸಣ್ಣ ಕುಟುಂಬವೊಂದು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಕಾಸಲ್ಲಿ ಮನೆಗೊಂದು ಫ್ರಿಡ್ಜ್ ತಂದಿವಿ ಎಂದು ಅದಕ್ಕೆ ಪೂಜೆ ಮಾಡಿ ಸಂಭ್ರಮಿಸುತ್ತಿದ್ದನ್ನು ಗಮನಿಸಿದೆ. ಗಂಡ, ಮಕ್ಕಳು ಯಾರೂ ಇಲ್ಲದ ಅನಾಥೆ ಅಜ್ಜಿಯೊಬ್ಬರು “ಸಿದ್ದರಾಮಣ್ಣ ಕೊಡೊ ಕಾಸಲ್ಲಿ ಹೆಂಗೋ ಜೀವ್ನ ಮಾಡ್ತಿದಿವಪ್ಪ” ಎಂದು ಧುಮ್ಮಿಕ್ಕುವ ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದರು. ಗೃಹಲಕ್ಷ್ಮಿ ಕಾಸಲ್ಲಿ ಮಕ್ಕಳ ಸ್ಕೂಲ್ ಪೀಜು, ಗಂಡನ ಆಸ್ಪತ್ರೆಗೆ ಖರ್ಚು, ಸಂಘದ ಸಾಲ ಎಲ್ಲನೂ ನೀಚ್ಕಳಂಗಾಗಿದೆ ಎನ್ನುವ ಮಾತುಗಳಿಗೇನು ಕಮ್ಮಿ ಇಲ್ಲ.

ಈ ಸಿದ್ರಾಮಯ್ಯ ಹೆಂಗಸರಿಗೆ ಕಾಸು ಕೊಡೋಕೆ ಶುರು ಮಾಡಿದ್ಮೇಲೆ ಹೆಂಡ್ತಿ ನನ್ ಮಾತೆ ಕೇಳೋಲ್ಲ ಕಣೋ ಎಂದು ಪತ್ರಕರ್ತ ಗೆಳೆಯನೊಬ್ಬ ಗಂಡಾಳಿಕೆಯಿಂದ ಅವಲತ್ತುಕೊಂಡಿದ್ದು ಸೋಜಿಗವೆನಿಸಿತು! “ನಿನ್ನ ದುಡಿಮೆ ಹಂಗ್ಯಾಕೋ, ಗಂಡ ಅಂತ ದಂಡಿಸಬ್ಯಾಡ , ಹೆಂಗೋ ತಿಂಗ್ಳಿಗೆ ೨ ಸಾವ್ರ ಬತ್ತದೆ, ಅಕ್ಕಿ ದುಡ್ಡು ಬತ್ತದೆ ನಾ ಮಕ್ಳು ಸಾಕ್ಕಂಡ್ ರ‍್ತಿನಿ” ಅಂತ ಅದೆಷ್ಟೋ ಹೆಣ್ಮಕ್ಕಳು ಸೋಮಾರಿ- ದುಷ್ಟ ಗಂಡಂದಿರ ವಿರುದ್ದ ಸೆಡ್ಡು ಹೊಡೆವ ಆತ್ಮಸ್ಥೈರ್ಯ. ಅದೇ ಕಾಲಕ್ಕೆ ಈ ತಿಂಗ್ಳು ಸಿದ್ದರಾಮಯ್ನ ಕಾಸು ಬಂದಿಲ್ವ , ಕುಡಿಯೋಕೆ ಕಾಸುಕೊಡೆ ಅಂತ ಹೆಂಡತಿಗೆ ಜೋತು ಬೀಳೋ ಗಂಡಂದಿರನ್ನೂ ಕಂಡಿದ್ದೇನೆ. ಅಷ್ಟೆ ಅಲ್ಲ. ಸಿದ್ದರಾಮಯ್ಯನ ದುಡ್ಡಲ್ಲಿ ಈ ತಿಂಗ್ಳು ನಾಲ್ಕು ನೈಟಿ ತಗಂಡೆ, ಹೋದ ತಿಂಗಳು ಡ್ರೆಸ್ ತಗೋಂಡೆ, ಸಿದ್ದರಾಮಯ್ಯನ ಆರು ತಿಂಗಳ ಕಾಸು ಕೂಡಿಟ್ಟು ಮೈನೆರೆದ ಮಗ್ಳಿಗೆ ಕಿವಿಗೆ ಒಡವೆ ಮಾಡಿಸ್ದೆ. ಹೀಗೆ ಎಷ್ಟೊಂದು ವೈವಿಧ್ಯಮಯ ರೂಪ-ರೂಪಕಗಳು ಮುಗಿಯುವುದೇ ಇಲ್ಲ.

ಸರ್ಕಾರಗಳು ಕೊಡುವ ಅಂತಃಕರಣದಿಂದ ಕೂಡಿದ ಸಣ್ಣ ಆಸರೆಗಳು ಬಡವರ, ನಿರ್ಗತಿಕರ ಬದುಕನ್ನು ಎಷ್ಟೊಂದು ಭದ್ರಗೊಳಿಸುತ್ತವೆ ಅನ್ನೋದು ಗ್ಯಾರಂಟಿಗಳು ನಿಷ್ಪ್ರಯೋಜಕ, ದಿವಾಳಿಗೆ ದಾರಿ ಎಂದೆಲ್ಲಾ ಲೇವಡಿ ಮಾಡುವವರಿಗೆ ಅರ್ಥವಾಗುವುದಿಲ್ಲ, ಝಗಮಗಿಸುವ ಬೆಳಕಿನಲ್ಲೆ ಇರುವವರಿಗೆ ಕತ್ತಲೆ ಅನುಭವ ಆಗುವುದಾದರೂ ಹೇಗೆ? ಹೊಟ್ಟೆ ತುಂಬಿದವರಿಗೆ ಹಸಿವಿನ ಸಂಕಟವಾದರೂ ಅರ್ಥವಾಗುವುದಾದರೂ ಹೇಗೆ?

ಹೀಗೆ ಕಂಡಿದ್ದನ್ನೆಲ್ಲಾ ಉಗಾದಿ ಹಬ್ಬದ ದಿನ ಬರೆಯುವುದರಲ್ಲೇ ರೂಮ್ ಸೇರಿಕೊಂಡಿದ್ದ ನನಗೆ ಶಶಿಯ ಕೂಗು ಮುಟ್ಟಿತು. ‘ರೀ ರ‍್ರಿ.., ಸಿದ್ರಾಮಯ್ಯವರ ದೀಪ ಹಚ್ಚಿದಿನ ನೋಡಿ. ಇವತ್ತು ಉಗಾದಿ ಹಬ್ಬ, ಇವತ್ತಾದ್ರೂ ದೇವ್ರಿಗೆ ಕೈ ಮುಗಿರೀ. ’ ಎಂದು ತಾಕೀತು ಮಾಡಿದಳು. ಅವಳ ದೇವರ ಮುಂದೆ ಎರಡು ಹೊಸ ಕಂಚಿನ ದೀಪಗಳು ದಿವಿನಾಗಿ ಬೆಳಗುತ್ತಿದ್ದವು. ಅವುಗಳಿಗೆ ನನ್ನ ಶಶಿ ಇಟ್ಟ ಹೆಸರು “ಸಿದ್ದರಾಮಯ್ಯ ದೀಪಗಳು”.

‍ಲೇಖಕರು Admin MM

April 11, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗೀತಾ ಎನ್ ಸ್ವಾಮಿ

    ಕಡೆಯ ಭಾಗವಂತೂ ಅದ್ಭುತ ರವಿಯಣ್ಣ. ನನ್ನ ಅತ್ತಿಗೆಗಿಂತ ಸೂಕ್ಷ್ಮವಾಗಿ,ಗಂಗಮಯ್ಯನಿಗಿಂತ ದಡುಗಾಗಿ ನಿಮಗೆ ಬದುಕು ಅರ್ಥ ಆಗಿಲ್ಲ. ಈ ಕಾರಣದಿಂದ ನನಗೆ ಚೆಂರ ಬರೆಯುವ ನಿಮಗಿಂತ ಗಂಗಮಯ್ಯ,ಶಶಿ ಅತ್ತಿಗೆ ಯವರ ಭಾವಸಾಂದ್ರತೆ ಹೆಚ್ಚು ಹೆಚ್ಚು ತಾಕುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: