ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೈಗಡಿಯಾರ ಮತ್ತು ಕಾಲ…

ಡಾ ಪ್ರೀತಿ ಕೆ ಎ

ಹಳೆಯ ಬೀರುವಿನ ಕದ
ತೆರೆದದ್ದೇ ನೆಪ
ಮಸುಕಾದ ಕಣ್ಣಿಗೆ ಬಿದ್ದವು
ಹಾಗೇ ನಿದ್ದೆಗೆ ಜಾರಿದ್ದ
ಕೈ ಗಡಿಯಾರಗಳ ಸಾಲು
ನೆನಪುಗಳ ಸುರುಳಿ ಸುತ್ತಿಕೊಂಡು

ಥರಹೇವಾರಿ ಬಣ್ಣದ
ತೊಡುಗೆ ತೊಟ್ಟುಕೊಂಡು
ಕಪ್ಪು, ಬಿಳುಪು, ಪಿಂಕು, ನೀಲಿ
ಬಂಗಾರದ ಕಟ್ಟು ಕಟ್ಟಿಕೊಂಡು

ಹೈಸ್ಕೂಲು ಮೆಟ್ಟಿಲು ಹತ್ತುವಾಗ
ಅಪ್ಪ ಕೊಡಿಸಿದ್ದು
ಯಾವುದೋ ಸ್ಪರ್ಧೆಯಲ್ಲಿ
ಬಹುಮಾನವಾಗಿ ದೊರಕಿದ್ದು
ಯಾರೋ ಪ್ರೀತಿಯಿಂದ
ಮದುವೆಗೆ ಕೊಟ್ಟದ್ದು
ನೆನಪಿಗಿರಲಿ ಎಂದು ವಿದಾಯ ಹೇಳಿದ್ದ ದಿನ
ಆ ಅವನು ನೀಡಿದ್ದು
ದುಬಾರಿ ಬೆಲೆ ತೆತ್ತು
ಸಂಗಾತಿ ಉಡುಗೊರೆ ಕೊಡಿಸಿದ್ದು
ಮೊದಲ ಸಂಬಳ ಬಂದ ಸಂಭ್ರಮದಲ್ಲಿ
ಮಗ ಕಳಿಸಿದ್ದು…….

ಒಂದೊಂದಕ್ಕೂ ಒಂದೊಂದು
ನೆನಪಿನ ಅಮಲು

ಎಲ್ಲದರ ಮುಳ್ಳೂ ನಿಂತಿದೆ ಇಲ್ಲಿ
ಬಹುಶಃ ಕಾಲು ಶತಮಾನದಿಂದ
ಕಾಲವೆಂಬ ಹರಿಯುವ ನದಿ ಎದುರು
ಕಾಲವೇ ಸ್ತಬ್ಧವಾಗಿ ನಿಂತಿದೆ ಅಲ್ಲಿ..

‍ಲೇಖಕರು Admin

29 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading