ಶ್ರೀನಿವಾಸ ಪ್ರಭು ಅಂಕಣ- ಒಂದೊಂದೂ ನಿಮಿಷವೂ ಒಂದೊಂದು ಯುಗದಂತೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

56

ಜೂನ್ 23.. ಕನ್ನಡದ ಶ್ರೇಷ್ಠ ಕವಿ—ನಾಟಕಕಾರ —ಕತೆಗಾರ—ಚಿಂತಕ ಡಾ॥ಹೆಚ್.ಎಸ್.ವೆಂಕಟೇಶ ಮೂರ್ತಿಗಳ ಹುಟ್ಟುಹಬ್ಬ. ಮೊನ್ನೆ—ಅಂದರೆ 2022 ಜೂನ್ 25 ರಂದು ಅವರ ಹುಟ್ಟುಹಬ್ಬದ ಸಂಭ್ರಮದ ಸಂದರ್ಭದಲ್ಲಿ ಅವರ ಇತ್ತೀಚಿನ ಅದ್ಭುತ ಮಹಾಕಾವ್ಯ ‘ಬುದ್ಧ ಚರಣ’ ದ ಕುರಿತಾಗಿ ಬಂದಿರುವ ಹಲವಾರು ವಿಮರ್ಶಾ ಲೇಖನಗಳ ಸಂಗ್ರಹ ಕೃತಿಯ ಬಿಡುಗಡೆಯ ಸಮಾರಂಭ ಹೆಚ್ ಎಸ್ ವಿ ಅವರ ಸ್ವಗೃಹದಲ್ಲಿಯೇ ಏರ್ಪಾಡಾಗಿತ್ತು.

ಪ್ರಸಿದ್ಧ ವಿದ್ವಾಂಸರೂ ಚಿಂತಕರೂ ಆದ ಡಾ॥ಮಲ್ಲೇಪುರಂ ವೆಂಕಟೇಶ್ ಅವರೂ ಪ್ರಸಿದ್ಧ ವಿಮರ್ಶಕರೂ ಚಿಂತಕರೂ ಆದ ಡಾ॥ಆರ್.ಲಕ್ಷ್ಮೀನಾರಾಯಣ ಅವರೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಅವರ ಜತೆಯಲ್ಲಿ ವೇದಿಕೆ ಹಂಚಿಕೊಂಡು ನೆರೆದಿದ್ದ ಸಹೃದಯರೆದುರು ‘ಬುದ್ಧ ಚರಣ’ ಮಹಾಕಾವ್ಯದ ಕೆಲ ಭಾಗಗಳನ್ನು ವಾಚಿಸುವ ಸುಯೋಗ ನನ್ನ ಪಾಲಿಗೆ ಒದಗಿಬಂದಿತ್ತು. ಬಾಳಗೆಳತಿ ರಂಜನಿ, ಎಚ್ ಎಸ್ ವಿ ಅವರನ್ನು ಕುರಿತು ರಚಿಸಿದ್ದ ಹೃದಯಸ್ಪರ್ಶಿ ಕವಿತೆಯೊಂದನ್ನು ವಾಚಿಸುವವಳಿದ್ದಳು. ಜಗತ್ತಿಗೇ ಬೆಳಕು ತೋರಿದ ‘ಮಹಾಗುರು’ವಿನ ವಾಣಿಯನ್ನು ಅತ್ಯಂತ, ಹೃದ್ಯವಾಗಿ, ಆಪ್ತವಾಗಿ ನಮಗೆ ‘ಕೇಳಿಸಿದ’ ಕವಿಗುರು ಹೆಚ್ ಎಸ್ ವಿ ಅವರ ಸಮಕ್ಷಮದಲ್ಲೇ ಜರುಗಿದ ಈ ಸರಳ ಸುಂದರ ಆಪ್ತ ಸಮಾರಂಭ ವೈಯಕ್ತಿಕವಾಗಿ ನನಗೆ ನೀಡಿದ ಸಂತಸ—ತೃಪ್ತಿ ಅಷ್ಟಿಷ್ಟಲ್ಲ.

ಹಾಗೆಯೇ ಅಲ್ಲಿದ್ದ ಹೆಚ್ ಎಸ್ ವಿ ಅವರ ‘ಸಮಗ್ರ ನಾಟಕ’ ಕೃತಿ ನನ್ನ ಕಣ್ಣಿಗೆ ಬಿತ್ತು!
ಸತ್ವ—ಸಮೃದ್ಧಿ: ಈ ಎರಡೂ ನಿಟ್ಟಿನಿಂದಲೂ ಅದ್ಭುತ ಕೃಷಿ ಮಾಡಿರುವ ಹೆಚ್ ಎಸ್ ವಿ ಅವರು ರಚಿಸಿರುವ
ನಾಟಕಗಳ ಪಟ್ಟಿಯನ್ನು ನೋಡುತ್ತಿದ್ದಂತೆ ಯಾದಿಯಲ್ಲಿದ್ದ ಮೊದಲ ಹೆಸರು ನನ್ನ ಗಮನ ಸೆಳೆಯಿತು : ‘ಹೆಜ್ಜೆಗಳು’. ಕೂಡಲೇ ಮನಸ್ಸು 40 ವರ್ಷಗಳ ಹಿಂದಕ್ಕೋಡಿತು!

ಹೆಚ್ ಎಸ್ ವಿ ಅವರ ‘ತಲೆಗೊಂದು ಕೋಗಿಲೆ’ ಕತೆಯನ್ನು ನಾನು ನಾಟಕ ರೂಪಕ್ಕೆ ಅಳವಡಿಸಿಕೊಂಡು ಯಶಸ್ವೀ ಪ್ರದರ್ಶನ ನೀಡಿದ್ದರ ಕುರಿತಾಗಿ ಹಿಂದಿನ ಪುಟಗಳಲ್ಲಿ ಬರೆದಿದ್ದೇನಷ್ಟೇ.ಕಾವ್ಯಾಂತರ್ಗತ ನಾಟಕೀಯತೆ ಹಾಗೂ ನಾಟಕದಲ್ಲಿ ನವುರಾಗಿ ಬೆಸೆದುಕೊಳ್ಳುವ ಕಾವ್ಯಗುಣ ನನ್ನ ಯಾವತ್ತಿನ ಆಸಕ್ತಿಯ ಹಾಗೂ ಅಭ್ಯಾಸದ ಸಂಗತಿಗಳು. ಹೆಚ್ ಎಸ್ ವಿ ಯವರ ಕತೆಗಳನ್ನು ಓದಿದಾಗಲೇ ,ಅವುಗಳಲ್ಲಿ ಹುದುಗಿದ್ದ ನಾಟಕೀಯ ಸ್ಪರ್ಶವನ್ನು ಗುರುತಿಸಿದಾಗಲೇ ಅವರೊಳಗೆ ಅಡಗಿದ್ದ ನಾಟಕಕಾರ ನನಗೆ ನಿಚ್ಚಳವಾಗಿ ಗೋಚರಿಸಿದ್ದ! ಹಾಗಾಗಿ ಅವರ ಭೇಟಿಯಾದಾಗಲೆಲ್ಲಾ ‘ನನಗೊಂದು ನಾಟಕ ಬರೆದುಕೊಡಿ’ ಎಂದು ದುಂಬಾಲು ಬಿದ್ದಿದ್ದೆ. “ಈವರೆಗೆ ಆ ಕಡೆ ಗಮನ ಕೊಟ್ಟಿರಲಿಲ್ಲ; ಆಯಿತು, ಈಗ ಪ್ರಯತ್ನಿಸುತ್ತೇನೆ” ಎಂದು ಆಶ್ವಾಸನೆ ಕೊಟ್ಟ ಹೆಚ್ ಎಸ್ ವಿ ಅವರು ಅತ್ಯಲ್ಪ ಸಮಯದಲ್ಲಿಯೇ ಒಂದು ಹೊಸ ನಾಟಕವನ್ನು ರಚಿಸಿ ನನ್ನ ಕೈಗಿತ್ತರು! ಅದೇ ‘ಹೆಜ್ಜೆಗಳು’ ನಾಟಕ! ಅಲ್ಲಿಂದೀಚೆಗೆ ಹೆಚ್ ಎಸ್ ವಿ ಅವರು ಹಿಂತಿರುಗಿ ನೋಡಿದ್ದೇ ಇಲ್ಲ! ‘ಚಿತ್ರಪಟ’, ‘ಉರಿವ ಉಯ್ಯಾಲೆ’, ‘ಕಂಸಾಯಣ’, ‘ಊರ್ಮಿಳಾ’, ಮುದಿದೊರೆ ಮತ್ತು ಮೂವರು ಮಕ್ಕಳು’ ಮೊದಲಾಗಿ 15 ಕ್ಕೂ ಹೆಚ್ಚು ಅರ್ಥಪೂರ್ಣ ನಾಟಕಗಳನ್ನು ರಚಿಸಿ ಕನ್ನಡದ ಪ್ರಮುಖ ನಾಟಕಕಾರರಾಗಿ ಸ್ಥಾನ ಗಳಿಸಿಕೊಂಡಿದ್ದಾರೆ!

‘ಹೆಜ್ಜೆಗಳು’ ನಾಟಕದ ಕೇಂದ್ರ ಪಾತ್ರಗಳೆಂದರೆ ತಾರೆ,ಚಂದ್ರ,ಬೃಹಸ್ಪತಿ ಹಾಗೂ ಶಶಕ. ಪುರಾಣದ ಕಥೆಯೊಂದರ ಹಂದರದ ಮೇಲೆ ನಾಟಕದ ಶಿಲ್ಪ ಕಟ್ಟುತ್ತಲೇ ಹೊಸ ಹೊಸ ಆಯಾಮಗಳನ್ನು ಸೃಷ್ಟಿಸುವುದು,ಆಧುನಿಕ ಸಂವೇದನೆಗಳ ಅಭಿವ್ಯಕ್ತಿಗೆ ಅನುವು ಮಾಡಿಕೊಡುವುದು,ಹೊಸದೊಂದು ಅರ್ಥಲೋಕವನ್ನೇ ಸೃಷ್ಟಿಸುವುದು ಹೆಚ್ ಎಸ್ ವಿ ಅವರ ಕಲೆಗಾರಿಕೆ ಹಾಗೂ ಸೃಜನಶೀಲತೆ. ಅಂತೆಯೇ ‘ಹೆಜ್ಜೆಗಳು’ ನಾಟಕದಲ್ಲಿ ಒಂದು ಉತ್ಕಟ ಪ್ರೇಮಕಥೆಯನ್ನು ಕಾವ್ಯಮಯವಾಗಿ ಹೇಳುತ್ತಲೇ ಅದರೊಟ್ಟಿಗೆ ಸ್ತ್ರೀ ಪ್ರಧಾನ ಆಧುನಿಕ ಚಿಂತನೆಯ ಎಳೆಯನ್ನೂ ಹೆಣೆಯುತ್ತಾರೆ; ಕ್ಷೇತ್ರ—ಬೀಜ—ತಾಯ್ತನಗಳ ಚಿಂತನೆಯನ್ನೂ ನಾಟಕದ ತೆಕ್ಕೆಗೆ ಎಳೆದುಕೊಳ್ಳುತ್ತಾರೆ. ಅವರೇ ಒಂದೆಡೆ ಹೇಳಿಕೊಂಡಿರುವಂತೆ : ” ದೇವತೆಗಳಲ್ಲಿ,ರಾಕ್ಷಸರಲ್ಲಿ,ಮನುಷ್ಯರಲ್ಲಿ, ಪ್ರಾಣಿಗಳಲ್ಲಿ,ಸ್ಥಾವರ ಜಗತ್ತಿನಲ್ಲಿ ಕೂಡಾ ನಾನು ಹುಡುಕುವುದು ಮಾನವೀಯ ಮಿಡಿತಗಳನ್ನು. ದೇವತೆ ರಾಕ್ಷಸರಿರಲಿ,ಮನುಷ್ಯರಲ್ಲಿ ಕೂಡಾ ಅವಿತುಕೊಂಡಿರಬಹುದಾದ ಮನುಷ್ಯರನ್ನು ಹುಡುಕುವುದೇ ನನ್ನ ಬರವಣಿಗೆಯ ಪರಮ ಪುರುಷಾರ್ಥ”.

‘ಹೆಜ್ಜೆಗಳು’ ನಾಟಕವನ್ನು ನಾಲ್ಕಾರು ಬಾರಿ ಓದಿದ ಮೇಲೆ ನನಗೆ ತೀವ್ರವಾಗಿ ಅನ್ನಿಸಿದ್ದು ಹೀಗೆ : ” ಈ
ನಾಟಕದ ಶಿಲ್ಪ ವಿನ್ಯಾಸದಲ್ಲಿ ಹಾಡುಗಳು ಸರಾಗವಾಗಿ ಹೊಂದಿಕೊಂಡು ಬೆರೆತುಕೊಳ್ಳುವುದಲ್ಲದೇ ನಾಟಕದ ಮುಖ್ಯ ಪಾತ್ರಗಳ ಒಳಗುದಿಗಳ ತೀವ್ರ ಹಾಗೂ ಸಮರ್ಥ ಅಭಿವ್ಯಕ್ತಿಗೂ ನೆರವಾಗುತ್ತವೆ”. ಹೆಚ್ ಎಸ್ ವಿ ಅವರೊಂದಿಗೆ ಈ ವಿಚಾರವನ್ನು ಚರ್ಚಿಸಿದಾಗ ಅವರಿಗೂ ಅದು ಸರಿ ಎನ್ನಿಸಿ ಸೊಗಸಾದ ನಾಲ್ಕು ಗೀತೆಗಳನ್ನು ಪ್ರತ್ಯೇಕವಾಗಿ ಬರೆದುಕೊಟ್ಟರು. ಈ ಹಾಡುಗಳು ಮುದ್ರಿತ ನಾಟಕದಲ್ಲಿಯೂ ಸೇರಿಲ್ಲ! ಹಾಡುಗಳೇನೋ ಬಂದವು, ಆದರೆ ಸಂಗೀತ ಸಂಯೋಜನೆ ಮಾಡುವವರು ಯಾರು? ಪುರಾಣ ಪ್ರಸಂಗವನ್ನಾಧರಿಸಿದ ನಾಟಕವಾದ್ದರಿಂದ ಶಾಸ್ತ್ರೀಯ ಸಂಗೀತ ಬಲ್ಲವರು ಸಂಗೀತ ಸಂಯೋಜನೆ ಮಾಡಿದರೆ ಹೆಚ್ಚು ಸೂಕ್ತ ಎಂಬುದು ನನ್ನ ಆಲೋಚನೆಯಾಗಿತ್ತು. ಆಗ ಥಟ್ಟನೇ ನಮಗೆ ನೆನಪಾದವರು ಪಂಡಿತ್ ರಾಜೀವ್ ತಾರಾನಾಥ್! ಪ್ರಖ್ಯಾತ ಸರೋದ್ ವಾದಕರಾದ ರಾಜೀವ್ ಜೀ ಸಂಗೀತ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು.

ಜತೆಗೆ ರಂಗಭೂಮಿಯೊಂದಿಗೂ ನಂಟಿರಿಸಿಕೊಂಡಿದ್ದ ಸಹೃದಯಿ.ಹೆಚ್ ಎಸ್ ವಿ ಅವರ ಸುಂದರ ಗೀತೆಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದರೆ ಸೊಗಸಾಗಿರುತ್ತದೆ ಎನ್ನಿಸಿತು.ಸರಿ,ನಾನು ರಿಚಿಯೊಂದಿಗೆ ಅಶೋಕ ಪಿಲ್ಲರ್ ಆಜುಬಾಜಿನಲ್ಲಿದ್ದ ಅವರ ಮನೆಗೆ ಹೋದೆ. ಬೆಳಿಗ್ಗೆ ಕೊಂಚ ಬೇಗನೇ ಹೋದದ್ದರಿಂದ ರಾಜೀವ್ ಜೀ ಮನೆಯಲ್ಲೇ ಇದ್ದರು.ಆವರೆಗಿನ ನಮ್ಮ ನಾಟಕ ಪ್ರದರ್ಶನಗಳಿಂದಾಗಿ ತಕ್ಕಮಟ್ಟಿಗೆ ನಮ್ಮ ಪರಿಚಯ ಅವರಿಗಾಗಿತ್ತು. ನಾಟಕದ ಒಂದು ಹಸ್ತಪ್ರತಿಯನ್ನೂ ಹಾಡುಗಳ ಸಾಹಿತ್ಯವನ್ನೂ ಅವರ ಕೈಗಿತ್ತು, “ನೀವು ಈ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿಕೊಡಲು ಸಾಧ್ಯವೇ?” ಎಂದು ಕೇಳಿಕೊಂಡೆ. “ಓ..ಕವಿಗಳು ನಾಟಕ ಬರೆದಿದ್ದಾರೋ?” ಎನ್ನುತ್ತಾ ಹಸ್ತಪ್ರತಿಯನ್ನು ತಿರುವಿಹಾಕತೊಡಗಿದರು ರಾಜೀವ್ ಜೀ.ಹಾಡುಗಳನ್ನೂ ಒಮ್ಮೆ ಮನಸ್ಸಿನಲ್ಲೇ ಓದಿಕೊಂಡರು. ಪರೀಕ್ಷೆಗೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕೆ ಕಾಯುವಂತೆ ನಾನೂ ಹಾಗೂ ರಿಚಿ ಅವರ ಮುಖವನ್ನೇ ಕಾತರದಿಂದ ನೋಡುತ್ತಾ ಕುಳಿತಿದ್ದೆವು.

ತುಸು ಹೊತ್ತಿನ ಅವಲೋಕನದ ನಂತರ ರಾಜೀವ್ ಅವರು, “ಆಯಿತು..ಹಾಡುಗಳು ಸೊಗಸಾಗಿವೆ..ಈ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿಕೊಡುತ್ತೇನೆ” ಎಂದಾಗ ನನ್ನ ಆನಂದಕ್ಕೆ ಪಾರವೇ ಇಲ್ಲ! ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನರ್ಪಿಸಿ,” ಆಯಿತು ಸರ್, ನಾಲ್ಕಾರು ದಿನದ ನಂತರ ಬಂದು ಭೇಟಿಯಾಗುತ್ತೇವೆ” ಎಂದು ಹೇಳಿ ಅಲ್ಲಿಂದ ಹೊರಡಲು ಅನುವಾದೆವು. “ಒಂದು ನಿಮಿಷ ನಿಲ್ಲಿ.. ಮುಖ್ಯವಾದ ವಿಷಯವನ್ನೇ ಮಾತಾಡಲಿಲ್ಲವಲ್ಲಾ!” ಎಂದರು ರಾಜೀವ್ ಜೀ. ಏನೂ ಅರ್ಥವಾಗದ ನಾವು ಪ್ರಶ್ನಾರ್ಥಕವಾಗಿ ಅವರ ಮುಖವನ್ನೇ ದಿಟ್ಟಿಸಿದೆವು. “ನನ್ನ ಕೆಲಸಕ್ಕೆ ಸಂಭಾವನೆ ಎಷ್ಟು ಕೊಡ್ತೀರಿ?” ಎಂದರು ರಾಜೀವ್ ಜೀ! ನಮಗೆ ಒಂದು ಕ್ಷಣ ಏನು ಹೇಳಬೇಕೆಂದೇ ತೋಚದೆ “ಸರ್..ಅದು..” ಎಂದು ತಡವರಿಸುತ್ತಾ ನೆಲ ಕೆರೆಯುತ್ತಾ ನಿಂತೆವು! ಅವರಾದರೂ ನೆಟ್ಟ ದೃಷ್ಟಿಯಿಂದ ನಮ್ಮನ್ನೇ ನೋಡುತ್ತಿದ್ದರು! ವಾಸ್ತವವಾಗಿ ಹಾಗೆ ಸಂಭಾವನೆಯನ್ನು ನೀಡಲೇಬೇಕಾದ್ದು ನಮ್ಮ ಧರ್ಮವೇ ಆಗಿದ್ದರೂ ನಮ್ಮ ತಂಡದ ಆಗಿನ ಆರ್ಥಿಕ ಸ್ಥಿತಿಯಲ್ಲಿ ಆ ಕುರಿತಾಗಿ ಯೋಚಿಸಲೂ ನಮಗೆ ಸಾಧ್ಯವಿರಲಿಲ್ಲ. “ಸರ್, ನಮ್ಮದು ಒಂದು ಬಡ ಹವ್ಯಾಸೀ ರಂಗ ತಂಡ.. ನಾಟಕ ಮಾಡದೇ ಇರಲು ನಮಗೆ ಸಾಧ್ಯವೇ ಇಲ್ಲವಾದ್ದರಿಂದ ಸಾಲ ಸೋಲ ಮಾಡಿಕೊಂಡು ಹೇಗೋ ನಾಟಕ ಮಾಡಿಕೊಂಡು ಬರುತ್ತಿದ್ದೇವೆ..ನಿಮ್ಮ ಸಂಭಾವನೆ ಎಷ್ಟೆಂದು ಹೇಳಿದರೆ ಹೊಂದಿಸುವ ಪ್ರಯತ್ನ ಮಾಡುತ್ತೇವೆ” ಎಂದು ಕಷ್ಟ ಪಟ್ಟು ಮಾತುಗಳನ್ನು ಜೋಡಿಸಿಕೊಂಡು ಹೇಳಿದೆ.

ಒಂದು ಕ್ಷಣ ನನ್ನನ್ನೇ ದಿಟ್ಟಿಸಿದ ಅವರು ಜೋರಾಗಿ ನಕ್ಕುಬಿಟ್ಟರು. ” ಹೆದರಿಕೋ ಬೇಡಿ! I was just joking! ಸಂಭಾವನೆ ತೊಗೊಳ್ಳದೇ ನಾನು ಕೆಲಸ ಮಾಡೋಲ್ಲ ಅನ್ನೋದೇನೋ ಸತ್ಯ…ಆದರೆ ಅದು ನಿಮಗೆ apply ಆಗೋಲ್ಲ. ನಿಮ್ಮ ಸ್ಥಿತಿ ಗತಿಗಳು, ನಿಮ್ಮ passion ಎಲ್ಲಾ ನನಗೆ ಅರ್ಥವಾಗುತ್ತೆ ಕಣ್ರಯ್ಯಾ..ಎರಡು ದಿನ ಬಿಟ್ಟುಕೊಂಡು ಒಂದು ಟೇಪ್ ರಿಕಾರ್ಡರ್ ಹಾಗೂ ಒಂದು ಖಾಲಿ ಕ್ಯಾಸೆಟ್ ತೊಗೊಂಡು ಬನ್ನಿ..ಹಾಡುಗಳಿಗೆ tune ಮಾಡಿಟ್ಟಿರ್ತೀನಿ..ಇಲ್ಲೇ ನಾನೇ ಹಾಡಿ ರೆಕಾರ್ಡ್ ಮಾಡಿಕೊಟ್ಟುಬಿಡ್ತೀನಿ” ಎಂದರು ರಾಜೀವ್ ಜೀ! ಮತ್ತೊಮ್ಮೆ ಅವರಿಗೆ ಧನ್ಯವಾದಗಳನ್ನರ್ಪಿಸಿ ಅಲ್ಲಿಂದ ಹೊರಟೆವು. ಮನಸ್ಸಂತೂ ಸಂತಸದಿಂದ ಗರಿಗೆದರಿದ ನವಿಲಾಗಿತ್ತು! ಎರಡು ದಿನಗಳ ನಂತರ ಹೋದರೆ ರಾಜೀವ್ ಅವರು ನಾಲ್ಕೂ ಹಾಡುಗಳಿಗೆ ಸೊಗಸಾದ ರಾಗ ಸಂಯೋಜನೆ ಮಾಡಿಟ್ಟಿದ್ದರು! ಹೆಚ್ ಎಸ್ ವಿ ಅವರ ಭಾವಸಂಪನ್ನ ಕವಿತೆಗಳು ಮಧುರಾಲಾಪಗಳೊಂದಿಗೆ ಕೇಳುಗರ ಹೃದಯದಾಳಕ್ಕೆ ಇಳಿಯುವಂತೆ ಸ್ವರ ಸಂಯೋಜನೆಗೊಂಡಿದ್ದವು! ತಾವೇ ಆ ಹಾಡುಗಳನ್ನು ಹಾಡಿ ಕ್ಯಾಸೆಟ್ ನಲ್ಲಿ ಮುದ್ರಿಸಿಕೊಟ್ಟು ನಮ್ಮ ನಾಟಕಕ್ಕೆ ಶುಭವನ್ನು ಹಾರೈಸಿ ಬೀಳ್ಕೊಟ್ಟರು ಪಂಡಿತ್ ರಾಜೀವ್ ತಾರಾನಾಥ್ ಜೀ!

ನಮ್ಮ ‘ನಾಟ್ಯದರ್ಪಣ’ ತಂಡದಲ್ಲಿ ಮುಖ್ಯ ಬೆಳಕು ವಿನ್ಯಾಸಕಾರನಾಗಿದ್ದವನು ‘ಗವಾಯಿ’ ರವೀಶ! ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಆಸಕ್ತಿ ಹಾಗೂ ಪರಿಶ್ರಮವೂ ಇದ್ದು ಸೊಗಸಾಗಿ ರಾಗಾಲಾಪಗಳನ್ನು ಮಾಡುತ್ತಿದ್ದ ರವೀಶನನ್ನು ನಾವು ಕರೆಯುತ್ತಿದ್ದುದೇ ‘ಗವಾಯಿ ರವೀಶ’ನೆಂದು! ರವೀಶ ಮೈಸೂರು ನಿವಾಸಿಯಾಗಿದ್ದು ಅಲ್ಲಿ ರಂಗಚಟುವಟಿಕೆಗಳನ್ನು ನಡೆಸುವ ಸಲುವಾಗಿ ‘ಮೈಸೂರು ಅಮೆಚೂರ್ಸ್’ ಎಂಬ ತಂಡವನ್ನು ಕಟ್ಟಿಕೊಂಡಿದ್ದ. ನಾನು ‘ಹೆಜ್ಜೆಗಳು’ ನಾಟಕವನ್ನು ಮಾಡಿಸಿದ್ದು ಈ ರಂಗತಂಡಕ್ಕೆ. ನಾಟಕದ ಮುಖ್ಯಪಾತ್ರಗಳಿಗೆ ಕಲಾವಿದರನ್ನು ಆರಿಸುವ ಸಂದರ್ಭದಲ್ಲಿ ಒಂದು ಸಮಸ್ಯೆ ಎದುರಾಯಿತು.ರವೀಶನ ತಂಡದಲ್ಲಿ, ನಾಟಕದಲ್ಲಿ ಬಹು ಮುಖ್ಯವಾಗಿರುವ ತಾರೆಯ ಪಾತ್ರಕ್ಕೆ ಹೊಂದಿಕೆಯಾಗುವಂತಹ ಹಾಗೂ ಸಮರ್ಥವಾಗಿ ನಿರ್ವಹಿಸಬಲ್ಲಂತಹ ಕಲಾವಿದೆ ಯಾರೂ ಇರಲಿಲ್ಲ.

ಮೈಸೂರಿನ ಉಳಿದ ತಂಡಗಳ ಕಲಾವಿದರು ಯಾರನ್ನಾದರೂ ಆರಿಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸುತ್ತಿದ್ದಾಗಲೇ ರವೀಶನಿಗೆ ಥಟ್ಟೆಂದು ಒಂದು ಆಲೋಚನೆ ಹೊಳೆಯಿತು: ಯಾಕೆ ತಾರೆಯ ಪಾತ್ರವನ್ನು ನಳಿನಿ ಅಕ್ಕನಿಂದಲೇ ಮಾಡಿಸಬಾರದು? ಎಲ್ಲ ರೀತಿಯಿಂದಲೂ ಅವಳು ಆ ಪಾತ್ರಕ್ಕೆ ಅತ್ಯಂತ ಸೂಕ್ತ ಆಯ್ಕೆ! ನನಗೂ ಯಾಕಾಗಬಾರದು ಅನ್ನಿಸಿತು. ನಳಿನಿ ಅಕ್ಕನೂ ಕೆಲ ದಿನಗಳ ರಜೆ ತೆಗೆದುಕೊಂಡು ಮೈಸೂರಿಗೆ ಬಂದು ತಾರೆಯ ಪಾತ್ರ ನಿರ್ವಹಿಸಲು ಸಂತೋಷದಿಂದ ಒಪ್ಪಿಕೊಂಡಳು. ನಾಟಕದಲ್ಲಿ ತಾರೆಯಷ್ಟೇ ಪ್ರಮುಖ ಪಾತ್ರವೆಂದರೆ ಚಂದ್ರನದು. ನನ್ನ ಅದೃಷ್ಟಕ್ಕೆ ನನ್ನ ‘ಸಿಕ್ಕು’ ಹಾಗೂ ‘ನೆರಳಿಲ್ಲದ ಜೀವಗಳು’ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದ ನನ್ನ ಮೆಚ್ಚಿನ ಗೆಳೆಯ ಹೂಗೊಪ್ಪಲು ಕೃಷ್ಣಮೂರ್ತಿ ಆಗ ಮೈಸೂರು ಆಕಾಶವಾಣಿ ಕೇಂದ್ರಕ್ಕೆ ಕಾರ್ಯಕ್ರಮ ನಿರ್ವಾಹಕನಾಗಿ ವರ್ಗವಾಗಿ ಬಂದಿದ್ದ! ಚಂದ್ರನ ಪಾತ್ರಕ್ಕೆ ಅವನಿಗಿಂತ ಸೂಕ್ತ ಕಲಾವಿದ ಸಿಗುವಂತೆಯೇ ಇರಲಿಲ್ಲ! ಶಶಕನ ಪಾತ್ರಕ್ಕೆ ಸದಾಶಿವ ಹಾಗೂ ಬೃಹಸ್ಪತಿಯ ಪಾತ್ರಕ್ಕೆ ದ್ವಾರಕಾನಾಥ್ ಎಂಬ ನುರಿತ ಕಲಾವಿದರು ಆಯ್ಕೆಯಾದರು.

‘ಹೆಜ್ಜೆಗಳು’ ನಾಟಕಕ್ಕೆ ಕೊಂಚ ಬೇರೆಯ ರೀತಿಯಲ್ಲಿಯೇ ನಾನು ರಂಗವಿನ್ಯಾಸವನ್ನು ರೂಪಿಸಿಕೊಂಡಿದ್ದೆ. ನಾಟಕದಲ್ಲಿ ಮುಖ್ಯವಾಗಿ ಬರುವ ಕೆಲ ರಂಗ ಕ್ರಿಯಾ ಸ್ಥಳಗಳ ಚಿತ್ರಗಳನ್ನು ಬರೆಯಿಸಿ ಅವುಗಳನ್ನು slide ಗಳನ್ನಾಗಿ ಪರಿವರ್ತಿಸಿಕೊಂಡು ರಂಗದ ಹಿಂಬದಿಯ ಬಿಳಿಯ ಪರದೆ (ಸೈಕ್ಲೋರಮಾ) ಯ ಮೇಲೆ ಅವನ್ನು ಪ್ರೊಜೆಕ್ಟರ್ ಮೂಲಕ ಮೂಡಿಸುವ ರೀತಿಯಲ್ಲಿ ವಿನ್ಯಾಸ ಸಿದ್ಧ ಪಡಿಸಿದ್ದೆ. ನಾಟಕದಲ್ಲಿ ಶಶಕ ಆತ್ಮಹತ್ಯೆ ಮಾಡಿಕೊಂಡು ಅವನ ಶವ ಮರದಿಂದ ತೂಗುಬಿದ್ದಿರುವಂತಹ ದೃಶ್ಯ ಕಲ್ಪನೆಯಿದೆ.

ಈ ಚಿತ್ರದ ಒಂದು slide ಅನ್ನೂ ಸಿದ್ಧಗೊಳಿಸಿದ್ದೆ. ರಂಗದ ಮೇಲೆ ದೃಶ್ಯ ತೀವ್ರತೆಯನ್ನು ಹೆಚ್ಚಿಸಲು ಈ ತಂತ್ರ ವಿಶೇಷವಾಗಿ ನೆರವಾಗುವುದಿತ್ತು. ನಾಟಕದ ತಾಲೀಮೂ ಸಹಾ ವ್ಯವಸ್ಥಿತವಾಗಿ ನಡೆದು ಎಲ್ಲರೂ ಪ್ರದರ್ಶನ ನೀಡಲು ಸಿದ್ಧರಾದೆವು. ನಾಳೆ ನಾಟಕ..ಇಂದು ಸಂಜೆ ಉಡುಗೆ ತೊಡುಗೆಗಳೊಂದಿಗೆ ಒಂದು ‘ಒಂದೇ ಓಟ’ದ ಅಭ್ಯಾಸ—ರನ್ ಥ್ರೂ. ಸಂಜೆ 6.30ಕ್ಕೆ ರನ್ ಥ್ರೂ ನಿಗದಿಯಾಗಿತ್ತು. ಎಲ್ಲ ಕಲಾವಿದರೂ ತಂತಮ್ಮ ವೇಷ ಭೂಷಣಗಳನ್ನು ಧರಿಸಿ ಸಿದ್ಧರಾಗಿದ್ದಾರೆ.. ನೋಡಿದರೆ ಮುಖ್ಯ ಪಾತ್ರಧಾರಿ ಕೃಷ್ಣಮೂರ್ತಿ(ಚಂದ್ರ)ಯ ಸುಳಿವೇ ಇಲ್ಲ! ಅವನೆಂದೂ ಹಾಗೆ ತಾಲೀಮಿಗೆ ತಡವಾಗಿ ಬಂದವನಲ್ಲ! ಸಂಪರ್ಕಿಸಲು ಇಂದಿನ ಹಾಗೆ ಮೊಬೈಲ್ ಇತ್ಯಾದಿ ಯಾವ ಉಪಕರಣಗಳೂ ಇಲ್ಲದೇ ಅವನೆಲ್ಲಿದ್ದಾನೆಂಬ ಸುಳಿವೂ ದೊರೆಯುತ್ತಿಲ್ಲ! ಗಂಟೆ ಏಳಾಯಿತು..ಎಂಟಾಯಿತು.. ಕೃಷ್ಣನ ಪತ್ತೆಯಿಲ್ಲ! ಅವನು ಬಾರದೇ ತಾಲೀಮು ಆರಂಭಿಸುವಂತೆಯೇ ಇಲ್ಲ! ಎಲ್ಲರ ಮುಖದಲ್ಲಿ ಆತಂಕ ಹೊಡೆದು ಕಾಣುತ್ತಿದೆ..ಆದರೆ ಕಾಯುವುದು ಬಿಟ್ಟು ಬೇರೆ ಮಾರ್ಗವಾದರೂ ಏನಿದೆ ನಮಗೆ? ಕಾಯುವಾಗಲೋ ಒಂದೊಂದೂ ನಿಮಿಷವೂ ಒಂದೊಂದು ಯುಗದಂತೆ ಭಾಸವಾಗುತ್ತದೆ! ಕೊನೆಗೆ ಒಂಬತ್ತು ಗಂಟೆಯ ಸುಮಾರಿಗೆ ಅವಸರದಿಂದ ಓಡೋಡಿಕೊಂಡು ಏದುಸಿರು ಬಿಡುತ್ತಾ ಕೃಷ್ಣನ ಆಗಮನವಾಯಿತು! ಅಬ್ಬಾ! ಸಧ್ಯ ಬಂದನಲ್ಲಾ ಎಂದು ಸಮಾಧಾನ ಮಾಡಿಕೊಂಡು ರಿಹರ್ಸಲ್ ಆರಂಭಿಸಿದೆ.

ತಾಲೀಮಿನ ನಂತರ, ‘ಏನಾಯ್ತೋ ಕೃಷ್ಣಾ? ಯಾಕೆ ಇಷ್ಟು ತಡ ಮಾಡಿಬಿಟ್ಟೆ? ಎಲ್ಲರಿಗೂ ಎಷ್ಟು ಗಾಬರಿ ಆಗಿಬಿಟ್ಟಿತ್ತು ಗೊತ್ತಾ’ ಎಂದು ಕೇಳಿದಾಗ ಕೃಷ್ಣ ತನಗೊದಗಿದ ಅನಿವಾರ್ಯ ಪ್ರಸಂಗವನ್ನು ವಿವರಿಸಿದ. ಆಕಾಶವಾಣಿ ಸಂಸ್ಥೆಯ ವತಿಯಿಂದ ಅಂದೇ ಸಂಜೆ ನಾಲ್ಕು ಗಂಟೆಗೆ ಪ್ರಖ್ಯಾತ ಸಾಹಿತಿ ಆರ್.ಕೆ. ನಾರಾಯಣ್ ಅವರೊಂದಿಗೆ ಅವರ ಮನೆಯಲ್ಲೇ ಸಂದರ್ಶನ ನಿಗದಿಯಾಗಿಬಿಟ್ಟಿದೆ! ಕಾರ್ಯಕ್ರಮ ನಿರ್ವಾಹಕ ಕೃಷ್ಣ ಹಾಗೂ ಸಹಾಯಕ ನಿರ್ದೇಶಕರಾಗಿದ್ದ ರಂಗಾಚಾರ್ ಅವರು ಸಂದರ್ಶನಕ್ಕಾಗಿ ಆರ್.ಕೆ.ನಾರಾಯಣ್ ಅವರ ಮನೆಗೆ ಹೋಗಿದ್ದಾರೆ. ಸಂದರ್ಶನ ಬೇಗನೇ ಮುಗಿದರೂ ಅವರೊಂದಿಗಿನ ಮಾತುಕತೆ ಹರಟೆ ಮುಗಿಯದೇ ಹಿರಿಯರ ಮಾತಿನ ನಡುವೆ ಎದ್ದು ಹೊರಡಲಾರದೇ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದ್ದ ಕೃಷ್ಣನಿಗೆ ಬಿಡುಗಡೆಯ ಭಾಗ್ಯ ದೊರೆತದ್ದೇ 8.30 ಕ್ಕೆ! ಕೂಡಲೇ ಅಲ್ಲಿಂದ ತಾಲೀಮಿನ ಜಾಗಕ್ಕೆ ಧಾವಿಸಿ ಬಂದಿದ್ದಾನೆ! ಎಲ್ಲರನ್ನೂ ಅಷ್ಟು ಹೊತ್ತು ಕಾಯಿಸಿದ್ದಕ್ಕಾಗಿ ತಪ್ಪಿತಸ್ಥ ಭಾವನೆಯಿಂದ ಕೊರಗುತ್ತಿದ್ದ ಕೃಷ್ಣನನ್ನು ನಾವೇ ಸಮಾಧಾನ ಪಡಿಸಬೇಕಾಯಿತು.ಸಧ್ಯ..ಚಂದ್ರನ ಪಾತ್ರವನ್ನು ಅನಿವಾರ್ಯವಾಗಿ ನಿರ್ವಹಿಸಬೇಕಾದ ಒತ್ತಡದ ಪರಿಸ್ಥಿತಿ ನನಗೊದಗಲಿಲ್ಲವಲ್ಲಾ ಅನ್ನುವುದೇ ದೊಡ್ಡ ಸಮಾಧಾನದ ಸಂಗತಿಯಾಯಿತು ನನಗೆ!

ಅಂದು ನಾಟಕ ಪ್ರದರ್ಶನವಿದ್ದುದು ಸಂಜೆ ಏಳು ಗಂಟೆಗೆ. ರಂಗಸಜ್ಜಿಕೆಯನ್ನು ಸಕಾಲಕ್ಕೆ ಸಿದ್ಧಪಡಿಸಿ slide projector ಅನ್ನು ಸರಿಯಾದ ಸ್ಥಳದಲ್ಲಿರಿಸಿ ಚಿತ್ರಗಳು ಬಿಳಿಯ ಪರದೆಯ ಮೇಲೆ ಸ್ಪಷ್ಟವಾಗಿ ಮೂಡುವಂತೆ ಅಳವಡಿಸಿದೆವು. ಬೆಳಕಿನ ವ್ಯವಸ್ಥೆಯ ಜವಾಬ್ದಾರಿ ಹೊತ್ತಿದ್ದವರು ನುರಿತ ರಂಗಕರ್ಮಿ ಶಂಕರ್ ಅವರು. ಕಲಾವಿದರೂ ಸಹಾ ವೇಷ ಭೂಷಣಗಳನ್ನು ಧರಿಸಿಕೊಂಡು ಪ್ರದರ್ಶನಕ್ಕೆ ಸಿದ್ಧರಾದರು. ಎಲ್ಲವೂ ಸರಿಯಾಗಿದೆಯೆಂದು ಖಾತ್ರಿಪಡಿಸಿಕೊಂಡು ನಾನೂ lighting cabin ಕಡೆಗೆ ತೆರಳಿ first bell ಬಾರಿಸಲು ಸೂಚನೆ ನೀಡಿದೆ.

ಕೊನೆಯ ಕ್ಷಣದ ಪರಿಶೀಲನೆಯ ಭಾಗವಾಗಿ ಒಮ್ಮೆ slide projector ಗೆ ಚಾಲನೆ ನೀಡಿದೆ. ಸ್ವಿಚ್ ಅದುಮುತ್ತಿದ್ದಂತೆ ಢಬ್ ಎಂಬ ದೊಡ್ಡ ಸದ್ದು! ನೋಡಿದರೆ ಪ್ರೊಜೆಕ್ಟರ್ ನ ಬಲ್ಬ್ ಸಿಡಿದು ಚೂರುಚೂರಾಗಿ ಹೋಗಿದೆ! ಅಯ್ಯೋ ದೇವರೇ! ಇದೇನು ಅನಾಹುತವಾಯಿತು ಕೊನೆಯ ಕ್ಷಣದಲ್ಲಿ ಎಂದು ಗಾಬರಿಯಿಂದ ಆ ತಕ್ಷಣಕ್ಕೆ ಏನು ಮಾಡಬಹುದೆಂದು ವಿಚಾರಿಸಿದೆ. ಬೆಳಕಿನ ವ್ಯವಸ್ಧೆಯ ಉಸ್ತುವಾರಿ ವಹಿಸಿಕೊಂಡಿದ್ದ ಶಂಕರ್ ತಕ್ಷಣವೇ ಕಾರ್ಯೋನ್ಮುಖರಾದರು. ಗುರುತಿದ್ದ ಕಡೆಗಳಲ್ಲೆಲ್ಲಾ ವಿಚಾರಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಮೈಸೂರಿನಲ್ಲಿ ಎಲ್ಲಿಯೂ ಆ ತರಹದ ಇನ್ನೊಂದು ಬಲ್ಬ್ ದೊರೆಯುತ್ತಿಲ್ಲ! ಅಷ್ಟು ಕಷ್ಟಪಟ್ಟು ಮಾಡಿಕೊಂಡಿದ್ದ ವಿನ್ಯಾಸ ವ್ಯರ್ಥವಾಗಿ ಹೋಗುತ್ತಿದೆಯಲ್ಲಾ ಎಂದು ಅತೀವ ನಿರಾಸೆಯಾಗಿಹೋಯಿತು. ಆದರೆ ಬೇರೆ ಉಪಾಯವಿಲ್ಲ..ಆಗಲೇ ಕೊಂಚ ತಡವಾಗಿದೆ..ನಾಟಕ ಪ್ರಾರಂಭಿಸಲೇಬೇಕು..ಕೂಡಲೇ ನೇಪಥ್ಯಕ್ಕೆ ಓಡಿಹೋಗಿ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಾಗಿದ್ದ ಕೆಲ ಸೂಚನೆ—ಸಲಹೆಗಳನ್ನು ಕಲಾವಿದರಿಗೆ ನೀಡಿ ಬಂದು ನಾಟಕ ಆರಂಭಿಸಲು ಸೂಚಿಸಿದೆ.

ನಳಿನಿ ಅಕ್ಕ, ಕೃಷ್ಣಮೂರ್ತಿ, ದ್ವಾರಕಾನಾಥ್, ಸದಾಶಿವ ಹಾಗೂ ಇತರ ಕಲಾವಿದರು ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದರು. ಪ್ರದರ್ಶನ ಚೆನ್ನಾಗಿ ಆಯಿತೆಂದು ನಾಟಕ ನೋಡಲು ಬೆಂಗಳೂರಿನಿಂದ ಆಗಮಿಸಿದ್ದ ಹೆಚ್ ಎಸ್ ವಿ ಅವರು, ಬಿ.ಆರ್.ಲಕ್ಷ್ಣಣ ರಾವ್ ಅವರು,ಮತ್ತೂ ಕೆಲ ಮಿತ್ರರು ಮೆಚ್ಚಿಕೊಂಡರು. ಆದರೆ ಆಗಿರುವ ಕೊರತೆ ಹಾಗೂ ಒಟ್ಟು ನಾಟಕ ಬೀರಬೇಕಾಗಿದ್ದ ಪರಿಣಾಮದ ತೀವ್ರತೆ ಕುಂಠಿತಗೊಂಡದ್ದು ನನಗೆ ಮಾತ್ರ ಗೊತ್ತಿತ್ತು! ಅಂದುಕೊಂಡಂತೆಯೇ ಪ್ರದರ್ಶನ ನಡೆದಿದ್ದರೆ ನಾಟಕ ಮುಟ್ಟುತ್ತಿದ್ದ ಮಜಲೇ ಬೇರೆ ಎಂಬುದರ ಅರಿವಿದ್ದ ನಾನು ಅಂದು ಒಂದು ತೀರ್ಮಾನ ಮಾಡಿಕೊಂಡೆ: “ಇಂತಹ ತಾಂತ್ರಿಕ ಅವಲಂಬನೆಯ ಸಂದರ್ಭಗಳಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮುಂಚಿತವಾಗಿಯೇ ಆಲೋಚಿಸಿಕೊಂಡು ಸಮಯಕ್ಕೆ ಒದಗುವಂತೆ ಇಟ್ಟುಕೊಂಡಿರಬೇಕು! ಇಲ್ಲವಾದರೆ ಇಂತಹ ಅವಗಢಗಳು ಘಟಿಸಿ ಬಾಧಿಸುವುದು ಶತಸ್ಸಿದ್ಧ”!!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

June 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: