ಪಿ ಪಿ ಉಪಾಧ್ಯ ಸರಣಿ ಕಥೆ 56- ಆದಿ ಮತ್ತು ಅಂತ್ಯ ಅಂತೂ ದಿಗ್ಬ್ರಾ೦ತರಾಗಿದ್ದರು…

ಪಿ ಪಿ ಉಪಾಧ್ಯ

ಆದಿ ಅಡಿಗೆಯವಳಿಗೆ ಹೇಳಲು ಒಳಗೆ ಓಡಿದ. ಆಕೆ ಇದರ ಸೂಚನೆ ಮೊದಲೇ ಇದ್ದವಳಂತೆ ಆಗಲೇ ತಯಾರಿ ಪ್ರಾರಂಭಿಸಿದ್ದಳು. ಆದರೂ ಆದಿ ಒಂದೆರಡು ಸೂಚನೆಗಳನ್ನು ಕೊಟ್ಟು ಹೊರ ಬರುವ ಹೊತ್ತಿಗೆ ಎಲ್ಲೋ ಹೊರಗೆ ತೋಟದಲ್ಲಿ ಸುತ್ತಾಡುತ್ತಿದ್ದುದನ್ನು ಮುಗಿಸಿ ಬಂದ ಅಪ್ಪನೊಂದಿಗೆ ಮಾವಂದಿರಿಬ್ಬರೂ ಮಾತನಾಡುತ್ತಿದ್ದರು.

ಲೋಕಾಭಿರಾಮದ ಮಾತಿನ ನಂತರ ‘ಏನು ಬಹಳ ಅಪರೂಪಕ್ಕೆ ಸವಾರಿ ಇಲ್ಲಿಗೆ ದಯಮಾಡಿಸಿದ್ದು ಅದೂ ಇಬ್ಬರೂ ಒಟ್ಟಿಗೆ.’ ಎಂದು ಕೇಳಿದರೆ ದೊಡ್ಡ ಮಾವನೇ ಹೇಳಿದರು ‘ಇವನ ಮಗಳು ಎಂಜಿನಿಯರಿ೦ಗ್ ಮುಗಿಸಿದ್ದಾಳೆ. ಅದೇ ನಿಮ್ಮ ಅನಂತನಿಗೆ ಏನಾದರೂ ಆಗುತ್ತದೋ ನೋಡುವ ಎಂದು ಬಂದೆವು. ಆದರೆ ಇಲ್ಲಿ ನೋಡಿದರೆ ಆಗಲೇ ಎಲ್ಲ ಮುಗಿದಿದೆಯಂತೆ’ ‘ಹೌದು ಮಾರಾಯ.. ನಮಗೆ ಯಾರಿಗೂ ಸುದ್ದಿಯನ್ನೂ ಕೊಡದೆ ಮಾಡಿಕೊಂಡು ಬಿಟ್ಟಿದ್ದಾನೆ. ಇನ್ನು ಮೇಲೆ ಅವನು ಇಲ್ಲಿಗೆ ಬರುವುದೂ ಅನುಮಾನವೇ’ ನೇರವಾದ ಮಾತೇ ಆದರೂ ಅದರಲ್ಲಿ ದುಗುಡ ಮಡುಗಟ್ಟಿತ್ತು.

‘ನಾವು ಬಂದ ಕೆಲಸ ಆಗುವುದಿಲ್ಲ ಎಂದ ಮೇಲೆ ಇನ್ಯಾತಕ್ಕೆ ಇರುವುದು ಹೊರಟೇ ಬಿಡುವ ಎಂದಿದ್ದೆವು. ಆದಿ ಮತ್ತು ಅಂತ್ಯ ಬಿಡಲಿಲ್ಲ.’

‘ಅಲ್ಲವೇ ಮತ್ತೆ. ಹಾಗೆ ಬಂದು ಹೀಗೆ ಹೋಗುವುದಕ್ಕೆ ಇದೇನು ಬೇರೆಯವರ ಮನೆಯೇ.. ನಿಮ್ಮ ಒಡಹುಟ್ಟಿದವಳ ಮನೆಯಲ್ಲವೇನೋ.. ಊಟ ಮಾಡಿಕೊಂಡು ಸ್ವಲ್ಪ ರೆಸ್ಟ್ ಮಾಡಿ ಹೊರಡುವಿರಂತೆ..’

ಅಷ್ಟು ಹೊತ್ತಿಗೆ ಅಡಿಗೆಯವಳೂ ಹೊರ ಬಂದು ಅಡಿಗೆ ರೆಡಿಯಾದದ್ದರ ಬಗ್ಗೆ ಸೂಚನೆ ಕೊಟ್ಟಳು. ಆದಿ ಎಲ್ಲರನ್ನೂ ಊಟಕ್ಕೆ ಎಬ್ಬಿಸಿದವ ಒಳ ಹೋಗಿ ತಾಯಿಯನ್ನೂ ಕರೆದುಕೊಂಡು ಬಂದ. ದೊಡ್ಡ ಊಟದ ಮೇಜು. ಅದೇ ಆದಿಯ ದೊಡ್ಡ ಮಾವ ಕೇಳಿದರು ‘ಚನ್ನಾಗಿದೆ ಮೇಜು. ಅಕ್ಕನೂ ಇದರ ಮೇಲೆಯೇ ಊಟ ಮಾಡುತ್ತಾಳೆಯೇ’

‘ಅಮ್ಮನೇನು ಮಾವಾ.. ನಮ್ಮೆಲ್ಲರ ಊಟವಾದ ಮೇಲೆ ನಮ್ಮ ಅಡಿಗೆಯವಳೂ ಊಟ ಮಾಡುವುದೂ ಈ ಮೇಜಿನ ಮೇಲೆಯೇ’ ಕೊಸರಾಡುತ್ತಿದ್ದ ಅಮ್ಮನನ್ನು ಹೆಚ್ಚು ಕಡಿಮೆ ತಳ್ಳಿಕೊಂಡೇ ಬರುತ್ತಿದ್ದ ಆದಿ ಹೇಳಿದ.
ಮೆದುವಾದ ದನಿಯಲ್ಲಿ ದೊಡ್ಡ ಮಾವ ಕೇಳಿದ ‘ಅಲ್ಲ, ಅಕ್ಕನಿಗೆ ಹುಷಾರಿಲ್ಲವೇ’

‘ಅಂತಹುದೇನಿಲ್ಲ. ನಮ್ಮ ಅನಂತ ಹಾಗೆ ಮಾಡಿಕೊಂಡ ಎಂದು ಗೊತ್ತಾದ ದಿನದಿಂದ ತುಸು ಬೇಜಾರು ಮಾಡಿಕೊಂಡಿದ್ದಾಳೆ’ ಎಷ್ಟೇ ನಿಧಾನವಾಗಿ ಹೇಳಿದ್ದರೂ ಗಂಡನ ಆ ಮಾತು ಕಿವಿಯ ಮೇಲೆ ಬಿದ್ದ ಕಮಲಮ್ಮ ರಾಟಾಳಿಯಾಗಿದ್ದಳು. ಅವನನ್ನು ನಮ್ಮ ಅನಂತ ಎಂದು ಹೇಳಬೇಡಿ. ನಮ್ಮ ಮಗ ಅನಂತ ಎಂದೋ ಸತ್ತು ಹೋದ. ಇದು ಯಾವುದೋ ಬೇವಾರ್ಸಿ ಅಷ್ಟೆ.’ ಮತ್ತೊಮ್ಮೆ ಅಕ್ಕನ ಈ ಹೊಸ ಪರಿಯನ್ನು ನೋಡಿ ಆ ಅಣ್ಣ ತಮ್ಮಂದಿರಿಬ್ಬರೂ ದಂಗಾಗಿ ಹೋದರು. ಶಾಮಣ್ಣನವರೂ ಆಶ್ಚರ್ಯಪಟ್ಟರು. ಹೆಂಡತಿಯ ಮನಸ್ಥಿತಿಯ ಅರಿವು ಅವರಿಗಿದ್ದರೂ ಈ ತೆರನ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ. ಆದಿ ಮತ್ತು ಅಂತ್ಯ ಅಂತೂ ದಿಗ್ಬ್ರಾತರಾಗಿದ್ದರು.

ಅಮ್ಮನ ಅಂತಹ ನಿಲುವು ಅಲ್ಲಿ ಎಲ್ಲರಿಗೂ ಹೊಸತು. ಅಡಿಗೆಯವಳು ಬಡಿಸಿದ್ದನ್ನು ತಿಂದ ಶಾಸ್ತ್ರ ಮಾಡಿದ ಕಮಲಮ್ಮ ಬೇರೆ ಯಾರಿಗೂ ಕಾಯದೇ ಎದ್ದು ಹೋಗಿದ್ದಳು. ಅದನ್ನು ನೋಡಿದ ಆಕೆಯ ಅಣ್ಣ ತಮ್ಮಂದಿರಿಬ್ಬರಿಗೂ ತುತ್ತು ಗಂಟಲಿನಲ್ಲಿ ಸಿಕ್ಕಿದ ಅನುಭವ. ಅವರನ್ನೇ ಗಮನಿಸುತ್ತಿದ್ದ ಶಾಮಣ್ಣನವರಿಗೆ ಅದರ ಅರಿವಾಗಿ ಅವರಿಬ್ಬರನ್ನೂ ಸಮಾಧಾನ ಪಡಿಸಲು ನೋಡಿದರು. ಯಾರು ಏನೇ ಹೇಳಿದರೂ ಅವಳು ತಮ್ಮ ಒಡಹುಟ್ಟಿದವಳು.

ಒಂದು ಕಾಲದಲ್ಲಿ ತಮ್ಮ ಮನೆಯ ಮಗಳಾಗಿ ತಮ್ಮಿಬ್ಬರೊಂದಿಗೆ ಚನ್ನಾಗಿ ಬಾಳಿದವಳು. ಅದು ಹೇಗೆ ಇಂತಹುದೆಲ್ಲವನ್ನು ತಡೆದುಕೊಂಡಾರು. ಭಾವ ಮತ್ತು ಅಳಿಯಂದಿರು ಏನೇ ಹೇಳಿದರೂ ಅಡಿಗೆಯವಳು ಬಡಿಸಿದ್ದನ್ನೆಲ್ಲ ಊಟ ಮಾಡಲು ಸಾಧ್ಯವಾಗಲಿಲ್ಲ ಅವರಿಬ್ಬರಿಗೆ. ಆದಿ ಹೇಳಿದನೆಂದು ಮುತುವರ್ಜಿಯಿಂದ ಅಡಿಗೆಯವಳು ಮಾಡಿದ ಆ ರುಚಿಕರವಾದ ಅಡಿಗೆಯೂ ರುಚಿಸಲಿಲ್ಲ. ಶಾಸ್ತ್ರಕ್ಕೆಂಬ೦ತೆ ಆಕೆ ತಂದುದೆಲ್ಲವನ್ನು ಹಾಕಿಸಿಕೊಂಡು ತಿಂದ ಶಾಸ್ತ್ರ ಮಾಡಿ ಎದ್ದು ಬಿಟ್ಟರು. ಮತ್ತೆ ಹೆಚ್ಚು ಹೊತ್ತು ಅಲ್ಲಿ ಇರುವ ಮನಸ್ಸು ಮಾಡದ ಅವರು ಅಕ್ಕನಿಗೊಂದು ಹೇಳಿ ಹೋಗುವ ಎಂದರೆ ಅಲ್ಲೆಲ್ಲಿಯೂ ಕಾಣಿಸಿರಲಿಲ್ಲ. ಹುಡುಕಿದರೆ ಒಳಗೆ ದೇವರ ಕೋಣೆಯಲ್ಲಿ ಕುಳಿತು ಮಣ ಮಣ ಎಂದು ಏನನ್ನೋ ಹೇಳುತ್ತ ಕುಳಿತಿದ್ದಳು.

‘ಅಕ್ಕ ನಾವಿನ್ನು ಬರುತ್ತೇವೆ’ ಎಂದರೆ ಸುಮ್ಮನೇ ಅವರತ್ತ ತಿರುಗಿ ನೋಡಿದಳೇ ವಿನಃ ಮಾತನ್ನೇ ಆಡಲಿಲ್ಲ. ಈಗ ಅವರ ಮನಸ್ಥಿತಿಯನ್ನು ಅರಿತ ಶಾಮಣ್ಣನವರು ಮತ್ತು ಮಕ್ಕಳೂ ಅವರನ್ನು ಇರಲು ಒತ್ತಾಯ ಮಾಡಲಿಲ್ಲ. ಅಷ್ಟು ಹೊತ್ತಿಗೆ ಅವರ ಡ್ರೈವರನೂ ಅಡಿಗೆಯವಳು ಬಡಿಸಿದ ಊಟವನ್ನು ಮುಗಿಸಿ ರೆಡಿಯಾಗಿದ್ದ. ‘ಬೇಜಾರು ಮಾಡಿಕೋಬೇಡಿ. ಇನ್ನೊಂದು ಸ್ವಲ್ಪ ದಿನ ಸರಿ ಹೋಗುತ್ತಾಳೆ. ಆ ಮೇಲೆ ನಾನೇ ಒಂದು ದಿನ ಅವಳನ್ನು ನಿಮ್ಮಲ್ಲಿಗೆ ಕರೆದುಕೊಂಡು ಬರುತ್ತೇನೆ’ ಎಂದು ಶಾಮಣ್ಣನವರು ಹೇಳಿದರೂ ಅವರಿಗೇನೂ ಸಮಾಧಾನವಾದ ಹಾಗೆ ಕಾಣಲಿಲ್ಲ. ಹೊರಟೇ ಬಿಟ್ಟರು. ಅವರಿಬ್ಬರನ್ನೂ ಕಳುಹಿಸಿಕೊಡಲು ಕಾರಿನವರೆಗೆ ಶಾಮಣ್ಣನವರ ಜೊತೆಗೆ ಆದಿ ಅಂತ್ಯನೂ ಹೋದರು.

ದೊಡ್ಡ ಮಾವ ತುಸು ರಿಲ್ಯಾಕ್ಸ್ ಆದ ಹಾಗೆ ಕಂಡರೂ ಚಿಕ್ಕ ಮಾವ ತೀರಾ ಗೊಂದಲಕ್ಕೊಳಗಾದದ್ದು ಪ್ರಕಟವಾಗಿಯೇ ಕಾಣಿಸುತ್ತಿತ್ತು. ಕಾರು ಹೊರಡುತ್ತಿದ್ದಂತೆಯೇ ಆದಿ, ಅಂತ್ಯ ಮತ್ತು ಶಾಮಣ್ಣನವರು ಮನೆಯ ಒಳಗೆ ಹೊರಟರು. ಅಣ್ಣ ತಮ್ಮಂದಿರಿಬ್ಬರೂ ತಗ್ಗಿದ ದನಿಯಲ್ಲಿ ಮಾತನಾಡಿಕೊಳ್ಳುತ್ತಿದ್ದರೆ ಅಪ್ಪ ಮಾತ್ರ ತಮ್ಮ ಮಾಮೂಲಿ ಮೌನಕ್ಕೇ ಶರಣಾಗಿದ್ದರು. ಅಣ್ಣ ತಮ್ಮಂದಿರ ಮಾತು ಅಮ್ಮನ ಬಗ್ಗೆ. ಅವಳ ಈಗಿನ ವರ್ತನೆಯ ಬಗ್ಗೆ. ಅವಳನ್ನು ಗುಣಪಡಿಸಿ ಮಾಮೂಲಿ ಸ್ಥಿತಿಗೆ ತರುವುದರ ಬಗ್ಗೆ. ಅಲ್ಲ ಹೀಗೇ ಬಿಟ್ಟರೆ ಅಮ್ಮ ಮೊದಲಿನ ಹಾಗೆ ಆದಾಳೇ’ ಅಂತ್ಯ ಕೇಳಿದರೆ ಆದಿ ‘ನನಗೇನೋ ಸಂಶಯವೇ. ಅಮ್ಮ ಅನಂತನ ವಿಚಾರ ಇಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳುತ್ತಾಳೆ ಎಂದು ಭಾವಿಸಿರಲಿಲ್ಲ’ ಎಂದ.

‘ಹಾಗಾದರೆ ಯಾರಾದರೂ ಡಾಕ್ಟರರಿಗೆ ತೋರಿಸುವುದೇ ಒಳ್ಳೆಯದು ಅಂತೀಯ.’
‘ಹಾಗೇ ಮಾಡೋಣ… ಆದರೆ ಅಪ್ಪ ಒಪ್ಪಬೇಕಲ್ಲ’

‘ಇವತ್ತಿನ ಅಮ್ಮನ ವರ್ತನೆಯನ್ನು ಕಂಡ ಮೇಲೂ ಅಪ್ಪ ಒಪ್ಪಲಾರರು ಅಂತೀಯ’

‘ಏನೋ ಕೇಳಿ ನೋಡೋಣ.’

ಎನ್ನುತ್ತ ಅವರಿಬ್ಬರೂ ಒಳ ಬಂದರು. ಆಗಲೇ ಅಪ್ಪ ಒಳಗೆ ಹೋಗಿ ಆಗಿತ್ತು.

ಒಳ ಹೋದ ಮೂವರಿಗೂ ಆಶ್ಚರ್ಯ. ಅಮ್ಮ ದೇವರ ಕೋಣೆಯಿಂದ ಹೊರಬರುತ್ತಿದ್ದವಳು ಇವರನ್ನು ನೋಡಿದ್ದೇ ತೀರ ನೊಂದ ಧ್ವನಿಯಲ್ಲಿ `ಅವರಿಬ್ಬರೂ ಹೋದರಾ… ನಾನು ಅವರೊಂದಿಗೆ ಹಾಗೆ ನಡೆದುಕೊಳ್ಳಬಾರದಿತ್ತು. ಎಷ್ಟೋ ವರ್ಷಗಳ ಮೇಲೆ ಬಂದಿದ್ದಾರೆ. ಅವರಿಗೆ ಉಪಚಾರ ಮಾಡಿ ಇಲ್ಲೇ ಇರಿಸಿಕೊಳ್ಳುವುದನ್ನು ಬಿಟ್ಟು ಏನೇನೋ ಮಾತನಾಡಿ ಈಗಲೇ ಹೊರಡುವ ಹಾಗೆ ಮಾಡಿದೆನಲ್ಲ.’ ಎಂದ ಅವಳು ಮಾತನ್ನು ಮುಗಿಸುತ್ತಿದ್ದಂತೆ ಧ್ವನಿ ತೀರ ಗದ್ಗದವಾಗಿತ್ತು. ಅತ್ತೇ ಬಿಡುತ್ತಾಳೇನೋ ಎಂದು ಹೆದರಿದರು ಇವರು.

‘ಇರಲಿ ಬಿಡಮ್ಮ.. ಅವರಿಗೂ ಏನೋ ಅರ್ಜೆಂಟ್ ಬೇರೆ ಕೆಲಸವೂ ಇತ್ತಂತೆ. ಕಾರು ಹತ್ತಿ ಕುಳಿತ ಮೇಲೆ ದೊಡ್ಡ ಮಾವನೇ ಹೇಳಿದರು. ಉಡುಪಿಯಲ್ಲಿ ಏನೋ ಖರೀದಿಸಬೇಕಿತ್ತಂತೆ. ಅದಕ್ಕೇ ಅಷ್ಟೊಂದು ಅವಸರದಲ್ಲಿ ಹೊರಟದ್ದು’ ಎಂದು ಆದಿ ಹೇಳಿದ್ದನ್ನು ಕೇಳಿದರೂ ಕಮಲಮ್ಮನ ದುಃಖ ಕಡಿಮೆಯಾಗಲಿಲ್ಲ. ಆದರೆ ಅಮ್ಮನ ಈಗಿನ ವರ್ತನೆ ಮಾತ್ರ ಅವರಿಗೆ ತೀರಾ ಸಾಮಾನ್ಯವಾಗಿ ಕಂಡಿತ್ತು. ಮಧ್ಯಾಹ್ನದ ರೌದ್ರತೆಯಿರಲಿಲ್ಲ. ನಾಟಕೀಯವೂ ಆಗಿರಲಿಲ್ಲ.

ತುಸು ಹೊತ್ತು ಹಾಗೆಯೇ ಇರಲಿ ಎನ್ನುವ ಅಪ್ಪನ ಸೂಚನೆ ಮೇರೆಗೆ ಮಕ್ಕಳಿಬ್ಬರೂ ತಮ್ಮೊಳಗೇ ಮಾತನಾಡಿಕೊಳ್ಳುತ್ತ ಜಗುಲಿಯಲ್ಲಿಯೇ ಕುಳಿತುಕೊಂಡರು. ಅಪ್ಪ ಮನೆಯಲ್ಲಿಯೇ ಇದ್ದಾಗ ಮಾಮೂಲಿಯಾಗಿ ಮಾಡುವಂತೆ ‘ಸ್ವಲ್ಪ ಮಲಗುತ್ತೇನೆ’ ಎಂದು ಒಳಗೆ ಹೋದರು.

ಸ್ವಲ್ಪ ಹೊತ್ತು ಕಳೆಯುವುದರಲ್ಲಿಯೇ ಅಮ್ಮ ತಾನು ಕುಳಿತಲ್ಲಿಂದ ಎದ್ದು ಆದಿ ಮತ್ತು ಅಂತ್ಯ ಮಾತಾಡುತ್ತಿದ್ದಲ್ಲಿಗೆ ಬಂದಳು. ಮಕ್ಕಳಿಗೆ ತುಸು ಗಾಭರಿ ಇನ್ನೇನಾದರೂ ಕ್ಯಾತೇ ತೆಗೆದಾಳೆಯೇ ಎಂದು. ಆದರೆ ಹಾಗೇನೂ ಅಗಲಿಲ್ಲ. ತೀರ ಮಾಮೂಲಿ ಧ್ವನಿಯಲ್ಲಿ ‘ಯಾಕೆ ಅನಂತ ಹೀಗೆ ಮಾಡಿದ ಮಕ್ಕಳೇ.. ನಮ್ಮನ್ನೊಂದು ಮಾತೂ ಕೇಳದೆ.. ಹೋಗಲಿ ಕೇಳುವುದು ಬೇಡ ನಮಗೊಂದು ಸುದ್ದಿಯನ್ನೂ ಕೊಡದೆ..’

‘ಅಮ್ಮ ಅವನು ಮೊದಲಿನಿಂದಲೂ ಹಾಗೆಯೇ ಅಲ್ಲವೇ. ನಿನಗೇನು ಹೊಸದೇ. ಅಂತ್ಯ –ಅವನದ್ದೇ ತಮ್ಮ ಇಲ್ಲಿಂದ ಅಷ್ಟು ದೂರ ಹೋದವನನ್ನು ನೋಡಿಕೊಂಡು ಹೋಗುವ ಕನಿಷ್ಟ ವಿಶ್ವಾಸವನ್ನೂ ತೋರಿಸದ ಅವ ಇನ್ನೇನು ಮಾಡಿಯಾನು. ನೀನು ಸುಮ್ಮನೆ ಅವನ ಬಗ್ಗೆ ತಲೆ ಬಿಸಿ ಮಾಡುವುದನ್ನು ಬಿಡು. ನಾವಿಬ್ಬರಿದ್ದೇವೆ. ಕೊನೆಯ ವರೆಗೆ ಜೊತೆಗೇ ಇರುತ್ತೇವೆ..’ ಹೇಳುತ್ತ ಹೇಳುತ್ತ ಆದಿಯ ಧ್ವನಿಯೇ ಗದ್ಗದವಾಗಿತ್ತು.

‘ಸರಿ ಮಕ್ಕಳೇ ನಾನೂ ಸ್ವಲ್ಪ ರೆಸ್ಟ್ ತೆಗೆದುಕೊಳ್ಳುತ್ತೇನೆ’ ಎಂದ ಅಮ್ಮನ ಮಾಮೂಲಿ ಧ್ವನಿಯ ಮಾತು ಕೇಳಿ ಮಕ್ಕಳಿಬ್ಬರಿಗೂ ನಿರಾಳವಾಯ್ತು.

ಆಶ್ಚರ್ಯವೋ ಎಂಬ೦ತೆ ಅಂದಿನಿ೦ದ ಅಮ್ಮ ಮಾಮೂಲಿಯೇ ಆದಳು. ಆಗೀಗ್ಗೆ ಅನಂತನ ವಿಚಾರ ಮಾತನಾಡಿದರೂ ಅದರಲ್ಲಿ ಮೊದಲಿನ ಉದ್ವೇಗವಿರುತ್ತಿರಲಿಲ್ಲ. ಡಾಕ್ಟರರ ಹತ್ತಿರ ಕರೆದುಕೊಂಡು ಹೋಗುವ ಮಾತನ್ನು ಹೇಳುವ ಪ್ರಸಂಗ ಮತ್ತೆ ಬರಲೇ ಇಲ್ಲ. ಅಪ್ಪ ಅದನ್ನೇ ಹೇಳುತ್ತಿದ್ದರು ‘ಸ್ವಲ್ಪ ದಿನ ಕಳೆಯಲಿ ಸರಿ ಹೋಗುತ್ತದೆ ಎನ್ನುತ್ತಿರಲಿಲ್ಲವೇ. ಅವಳಾಗಿಯೇ ಸರಿಯಾದಳು ನೋಡಿ’

| ಇನ್ನು ನಾಳೆಗೆ |

‍ಲೇಖಕರು Admin

June 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: