ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 7

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಮೊದಲ ಕಂತು ಇಲ್ಲಿದೆ- ಕ್ಲಿಕ್ಕಿಸಿ

ಎರಡನೆಯ ಕಂತು ಇಲ್ಲಿದೆಕ್ಲಿಕ್ಕಿಸಿ

ಮೂರನೆಯ ಕಂತು ಇಲ್ಲಿದೆಕ್ಲಿಕ್ಕಿಸಿ

ನಾಲ್ಕನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

ಐದನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

ಆರನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

7

ದೀರ್ಘ ಉಸಿರಾಟ

ಡೀಪ್ ಬ್ರೆತ್ ತಗೊಳ್ಳಿ ಅಂತ ಡಾಕ್ಟರ್ ವೀಣಾ ತಾವೇ ಒಂದೆರಡು ಸಲ ಹಾಗೆ ಉಸಿರು ತೆಗೆದುಕೊಂಡು ತೋರಿಸಿದರು. ಆಗಲಿ ಎಂದು ತಲೆ ಆಡಿಸಿದೆ. ಆದರೆ ಹಾಗೆ ಮಾಡಲು ಹೋದಾಗ, ಉಸಿರಾಟವೂ ಇಷ್ಟೊಂದು ಕಷ್ಟ ಎಂಬುದು ಮೊದಲ ಬಾರಿಗೆ ಅನುಭವಕ್ಕೆ ಬಂದಿತು. ಸ್ವಲ್ಪ ಆಳವಾಗಿ ಉಸಿರೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಮಹಾ ಆಯಾಸವಾಗುತ್ತಿತ್ತು. ಉಸಿರು ನಾಳದಿಂದ ಕೆಳಗೆ ಕೇವಲ ಒಂದು ಅಡಿ ಅಂತರದಲ್ಲಿರುವ ಶ್ವಾಸಕೋಶವನ್ನು ತಲುಪುವುದು ನೂರಾರು ಮೈಲುಗಳ ದೂರ ಹೋದಷ್ಟು ಕಷ್ಟವಾಗುತ್ತದೆ ಅಂತ ನನಗೆ ಗೊತ್ತಿರಲಿಲ್ಲ.

ಪಕ್ಕಕ್ಕೆ ಮಲಗಿ ಬೋರಲು ಮಲಗಿ ಆಳವಾಗಿ ಉಸಿರಾಟ ಮಾಡಿ ಅಂತ ಡಾಕ್ಟರ್ ಹೇಳಿದ್ದರು. ಆದರೆ ಹಾಗೆ ಅಕ್ಕಪಕ್ಕ ಹೊರಳುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಅದು ಸಿಂಗಲ್ ಕಾಟ್ ಅಳತೆಯದು. ಒಂದು ಪಕ್ಕಕ್ಕೆ ಸರಿದೇ ಇನ್ನೊಂದು ಪಕ್ಕಕ್ಕೆ ತಿರುಗಿಕೊಳ್ಳಬೇಕು. ಜೊತೆಗೆ ಅಂಗೈ ಮೇಲ್ಭಾಗದಲ್ಲಿ ಚುಚ್ಚಿಟ್ಟಿದ್ದ ಕ್ಯಾನುಲಾ, ಕೈ ಮೇಲೆ ತಲೆ ಆನಿಸುವುದಕ್ಕೆ ಅಡ್ಡಿಯಾಗುತ್ತಿತ್ತು. ಅದೇನಾದರೂ ಅತ್ತಿತ್ತ ಸರಿದರೆ ಮತ್ತೆ ಚುಚ್ಚಿಸಿಕೊಳ್ಳಬೇಕಲ್ಲ ಎಂಬ ಭೀತಿ. ಇನ್ನು ಬೋರಲು ಮಲಗುವುದೂ ಸುಲಭವಾಗಿರಲಿಲ್ಲ.

ಆಕ್ಸಿಜನ್ ಮಾಸ್ಕ್ ನ ಉದ್ದ ಕೊಳವೆ ಶಂಕರಾಭರಣದಂತೆ ಕೊರಳಿಗೆ ಅಡ್ಡವಾಗುತ್ತಿತ್ತು. ಎತ್ತ ಹೊರಳಿದರೂ ಅದು ಸ್ವಲ್ಪ ಒತ್ತುತ್ತಿತ್ತು. ಇನ್ನೂ ನನಗೆ ಆಳವಾಗಿ ಉಸಿರು ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಪ್ರಾಣವಾಯುವಿನ ಮಟ್ಟ ಸಹಜ ಸ್ಥಿತಿಗೆ ಬಂದಿರಲಿಲ್ಲ. ಇವರಿಗೆ ಪಾಲಿಸೈಸರ್ ತರಿಸಿಕೊಡಿ ಎಂದು ಡಾಕ್ಟರ್ ಹೇಳಿದರು. ಅದು ಹೇಗಿರುತ್ತೋ ಏನೋ ನನಗೆ ಕಲ್ಪನೆಯೇ ಇರಲಿಲ್ಲ. ಪೂರ್ವಿಗೆ ಫೋನ್ ಮಾಡಿ ಈ ಬಗ್ಗೆ ಹೇಳಿದಾಗ ವೀಸಿಂಗ್ ಸಮಸ್ಯೆ ಇರುವವರಿಗೆ ಉಸಿರಾಟದ ವ್ಯಾಯಾಮವಾಗಲಿ ಅಂತ ಅದನ್ನು ಸಲಹೆ ಮಾಡುತ್ತಾರೆ ನಮ್ಮ ಮಾವ ಅದನ್ನು ಬಳಸುತ್ತಿದ್ದರು ಎಂದು ಹೇಳಿದಳು.

ಎದೆ, ಕಿಬ್ಬೊಟ್ಟೆಯ ಶಸ್ತ್ರ ಚಿಕಿತ್ಸೆಯವರಿಗೆ ಅದನ್ನು ಬಳಸುವಂತೆ ಹೇಳುತ್ತಾರೆ ಅಂತ ತಿಳಿದು ಬಂತು. ಪಾಲಿಸೈಸರ್ ಅಂದರೆ ಶ್ವಾಸಕೋಶಗಳಿಗೆ ವ್ಯಾಯಾಮ ನೀಡಲು ಬಳಕೆಯಾಗುವಂಥ ಉಸಿರಾಟದ ಉಪಕರಣ. ಆದರೆ ಇದನ್ನು ತರಿಸಿಕೊಡುವ ಮೊದಲೇ ಅದೇ ದಿನ ಸಂಜೆ ಒಬ್ಬ ಸಿಸ್ಟರ್ ಒಂದು ನೆಬ್ಯುಲೇಟರ್ ಹಿಡಿದು ಬಂದಳು. ಅದರ ಪ್ಲಗ್‌ನ್ನು ಒಂದು ಕಡೆ ಫಿಕ್ಸ್ ಮಾಡಿ ನನ್ನ ಆಕ್ಸಿಜನ್ ಮಾಸ್ಕ್ ನ ಕೊಳವೆಯನ್ನು ಈ ಸಲಕರಣೆಗೆ ಅಳವಡಿಸಿ ಮತ್ತೇನೋ ಒಂದು ತೆಳು ಪಟ್ಟಿಯಂಥ ರಾಸಾಯನಿಕ ವಸ್ತುವನ್ನು ತೂರಿಸಿ, ಸ್ವಿಚ್ ಹಾಕಿ ಹೊರಟೇ ಬಿಟ್ಟಳು. ಅದು ಸ್ಕೂಟರ್ ಸ್ಟಾರ್ಟ್ ಮಾಡುವಾಗ ಬರುವಂಥ ಡರ‍್ರ್ ಎಂಬ ಶಬ್ದಮಾಡುತ್ತಾ ಚಾಲೂ ಆಯಿತು. ನೀರಿನ ಹನಿಗಳೊಂದಿಗೆ ಗಾಳಿಯನ್ನು ಸೂಸುತ್ತಿತ್ತು. ಅದನ್ನು ಬಾಯಿಂದ ತೆಗೆದುಕೊಳ್ಳಬೇಕೇ, ಮೂಗಿನಿಂದ ತೆಗೆದುಕೊಳ್ಳಬೇಕೇ ಏನೊಂದೂ ಅರ್ಥವಾಗದೆ ನಾನು ಎರಡೂ ವಿಧಾನಗಳನ್ನು ಅನುಸರಿಸಿದೆ.

ಒಂದು ಸಲ ನಮ್ಮ ಪಾಪು ಸ್ವರಾಗೆ ತುಂಬಾ ದಿನ ಮೂಗು ಕಟ್ಟಿದಾಗ ನರ್ಸಿಂಗ್ ಹೋಂಗೆ ಕರೆದುಕೊಂಡು ಹೋಗಿ ಈ ಚಿಕಿತ್ಸೆ ಕೊಡಿಸಿದ್ದು ಆನಂತರ ನೆನಪಾಯಿತು. ದಿನಾ ಹೀಗೆ ಮಾಡುತ್ತಿರಬೇಕು ಅಂದಾಗ ಅವರು ಮನೆಗೇ ನೆಬ್ಯುಲೇಟರ್ ಕೊಂಡು ತಂದಿದ್ದರು. ಅಂತೂ ಅದರ ಅನುಭವವನ್ನು ನಾನು ಪಡೆದಂತಾಯಿತು. ಎಷ್ಟು ಹೊತ್ತು ಇದನ್ನು ತೆಗೆದುಕೊಳ್ಳಬೇಕು ಎಂದೂ ತಿಳಿಸದೆ ನರ್ಸ್ ಹೊರಟು ಹೋಗಿದ್ದಳು.

೨೦ ನಿಮಿಷದ ನಂತರ ನಾನೇ ಮಾಸ್ಕ್ ತೆಗೆದು ಆಕೆಯನ್ನು ಕೂಗಿದಾಗ ಆಕೆ ಬಂದು ಸಾಕು ಬಿಡಿ ಎಂದು ಅದರ ಸಂಪರ್ಕ ತಪ್ಪಿಸಿ ತೆಗೆದುಕೊಂಡು ಹೋದಳು. ಇದನ್ನು ಹೇಗೆ ಬಳಸಬೇಕು ಎಂದು ತಿಳಿಸುವ ವ್ಯವಧಾನವನ್ನು ಅಲ್ಲಿ ಯಾರಲ್ಲಿಯೂ ನಿರೀಕ್ಷಿಸುವಂತಿಲ್ಲವಾದ್ದರಿಂದ ರಾತ್ರಿ ನರೇಂದ್ರಗೆ ಫೋನ್‌ ಮಾಡಿ ಅದರ ಬಗ್ಗೆ ವಿವರವಾಗಿ ತಿಳಿದುಕೊಂಡೆ. ಅದಕ್ಕೆ ಕೆಮಿಕಲ್ ಹಾಕಿರುವುದರಿಂದ ನೆಬುಲೇಶನ್ ನಂತರ ಬಾಯಿಯನ್ನು ಚೆನ್ನಾಗಿ ನೀರಿನಲ್ಲಿ ಮುಕ್ಕಳಿಸಿ ತೊಳೆದುಕೊಳ್ಳಬೇಕು ಎಂದು ತಿಳಿಸಿದರು. ನಾನು ಅದೇನನ್ನೂ ಮಾಡದೆ ಕಾಫಿ ಕುಡಿದಿದ್ದೆ ರಾತ್ರಿ ಊಟವನ್ನೂ ಮಾಡಿದ್ದೆ. ಅಂತೂ ಇನ್ನಷ್ಟು ರಾಸಾಯನಿಕ ನನ್ನ ಹೊಟ್ಟೆ ಸೇರಿರುತ್ತದೆ ಮಾತ್ರೆ ಇಂಜಕ್ಷನ್‌ಗಳ ರಾಸಾಯನಿಕದ ಜೊತೆ ಇದೂ ಸೇರಿರುತ್ತದೆ ಅಷ್ಟೇ ತಾನೇ ಎಂದು ಸಮಾಧಾನ ಪಟ್ಟುಕೊಂಡೆ.

ಮಾರನೇ ದಿನ ಡಾಕ್ಟರ್ ಹೇಳಿದ ಪಾಲಿಸೈಸರ್ ಸಲಕರಣೆ ಬಂತು. ಮಕ್ಕಳಾಟಿಕೆ ತರಹ ಒಂದು ಪ್ಲಾಸ್ಟಿಕ್ ಪೀಠಕ್ಕೆ ಬೋರಲಾಗಿ ಅಳವಡಿಸಿದ್ದ ಟೆಸ್ಟ್ ಟ್ಯೂಬ್ ಗಾತ್ರದ ಮೂರು ಕೊಳವೆಗಳು. ಅವುಗಳ ತಳದಲ್ಲಿ ನೀಲಿ, ಹಳದಿ, ಕೆಂಪು ಹೀಗೆ ಸ್ವಲ್ಪ ಗೋಲಿಗಿಂತ ದೊಡ್ಡ ಗಾತ್ರದ ಹಗುರಾದ ಪ್ಲಾಸ್ಟಿಕ್ ಚೆಂಡುಗಳು. ಒಂದು ಕಡೆ ಗಾಳಿ ಊದುವುದಕ್ಕೊಂದು ಚಿಕ್ಕ ಕೊಳವೆ. ಇದರ ಬಳಕೆಯ ವಿಧಾನವೂ ನನಗೆ ಗೊತ್ತಿರಲಿಲ್ಲ. ಅದರ ಬಾಕ್ಸ್ ಮೇಲೂ ಈ ಬಗ್ಗೆ ಏನೂ ತಿಳಿಸಿರಲಿಲ್ಲ. ಇದು ಉಸಿರಾಟದ ವ್ಯಾಯಾಮಕ್ಕೆ, ಮೂರು ಬಾಲ್‌ಗಳು ಮೇಲೆ ಬರಬೇಕು ಅಂತ ತಿಳಿಸಿದ್ದರು. ನಾನು ಕೊಳವೆಯಿಂದ ಸಾಧ್ಯವಾದಷ್ಟು ಉಸಿರನ್ನು ಊದಿದೆ. ಯಾವ ಚೆಂಡೂ ಮಿಸುಗಲಿಲ್ಲ. ಉಸಿರು ಕಟ್ಟಿ ಆಯಾಸವಾದಂತಾಯಿತು. ಪಕ್ಕಕ್ಕೆ ತೆಗೆದಿಟ್ಟೆ. ‌

ರಾತ್ರಿ ಒಮ್ಮೊಮ್ಮೆ ಡ್ಯೂಟಿ ಡಾಕ್ಟರ್ ಬರುವುದಿತ್ತು. ರಾತ್ರಿ ಬಂದವರು ಅದನ್ನು ನೋಡಿ, ಎಲ್ಲಿ ಡೀಪ್ ಬ್ರೀತ್ ಮಾಡಿ ಅಂದರು. ನಾನು ಅದನ್ನು ಕೈಗೆತ್ತಿಕೊಂಡು ಸಾಧ್ಯವಾದಷ್ಟು ಗಾಳಿ ಊದಿದೆ. ಅಯ್ಯೋ ಹಾಗಲ್ಲ ಕೊಳವೆಯಿಂದ ಉಸಿರನ್ನು ಒಳಗೆಳೆದು ಕೊಳ್ಳಬೇಕು. ನೀವು ರಿವರ್ಸ್ ಆಗಿ ಮಾಡುತ್ತಿದ್ದೀರಾ ಅಂದರು. ಅದರಂತೆಯೇ ಪ್ರಯತ್ನಿಸಿದರೂ ಚೆಂಡುಗಳು ಮಿಸುಗಲಿಲ್ಲ. ಹಾಗೇ ಟ್ರೈ ಮಾಡುತ್ತಿರಿ ಎಂದು ಹೇಳಿ ಹೋದರು.

ಆ ಚಿಕ್ಕ ವಯಸ್ಸಿನ ಡಾಕ್ಟರ್ ಕರೋನಾ ವಾತಾವರಣದಲ್ಲಿ ಕೆಲಸ ಮಾಡುವುದನ್ನು ಊಹಿಸಿಕೊಳ್ಳುವುದಕ್ಕೇ ಭಯವಾಗುತ್ತಿತ್ತು. ಮಾರನೇ ದಿನ ನೀಲಿ ಚೆಂಡು ಸ್ವಲ್ಪ ಮೇಲೆ ಹೋದಾಗ ಅಂತೂ ಈ ಚೆಂಡುಗಳು ಮೇಲೆ ಹೋಗುತ್ತವೆ ಅಂತ ಖಚಿತವಾಯಿತು. ಅದರ ನಂತರದ ದಿನ ನೀಲಿ ಚೆಂಡು ಪೂರ್ತಿ ಮೇಲೆ ಹೋಗಿದ್ದಲ್ಲದೆ ಪಕ್ಕದ ಹಳದಿಯ ಚೆಂಡೂ ಸ್ವಲ್ಪ ಮಿಸುಗಾಡಿತು.

ಮಧ್ಯಾಹ್ನ ಸುದೀಪ್ ಬಂದು ಅದರ ಬಳಕೆಯ ಬಗ್ಗೆ ಇನ್ನಷ್ಟು ವಿವರ ನೀಡಿದರು. ಒಂದು ಸಲ ಉಸಿರನ್ನು ಒಳಗೆ ತೆಗೆದುಕೊಂಡು ಚೆಂಡುಗಳನ್ನು ಮೇಲಕ್ಕೆ ಕಳಿಸಿದರೆ ಇನ್ನೊಂದು ಸಲ ಅದನ್ನು ವಿರುದ್ಧ ದಿಕ್ಕಿಗೆ ತಿರುಗಿಸಿ ಕೊಳವೆಯ ಮೂಲಕ ಗಾಳಿಯನ್ನು ಹೊರಗೆ ಊದಬೇಕು. ಆಗ ಉಸಿರಾಟ ಕ್ರಿಯೆ ಪೂರ್ಣವಾಗುತ್ತದೆ ಎಂದು ತಿಳಿಯಿತು. ಸುದೀಪ್ ಎದುರಿಗೆ ಮತ್ತೆ ಉಸಿರಾಟದ ಪ್ರಯೋಗ ಮುಂದುವರೆಸಿದಾಗ ಇನ್ನೂ ಹಳದಿ ಚೆಂಡು ಪೂರ್ತಿ ಮೇಲಕ್ಕೆ ಹೋಗಬೇಕು. ಕೆಂಪು ಚೆಂಡು ಮೇಲೆ ಹೋಗಬೇಕು ಹಾಗಾದಾಗ ನೀವು ಬೇಕಾದರೆ ಹಿಮಾಲಯವನ್ನು ಹತ್ತಬಹುದು ಎಂದರ್ಥ. ಈಗ ಚಾಮುಂಡಿ ಬೆಟ್ಟ ಮಾತ್ರ ಹತ್ತಬಹುದು ಎಂದು ಉಪಮಾನದೊಂದಿಗೆ ವಿವರಿಸಿದರು.

ಚಾಮುಂಡಿ ಬೆಟ್ಟವಿರಲಿ ಮನೆಯ ಮಹಡಿ ಮೆಟ್ಟಿಲನ್ನಾದರೂ ಹತ್ತುತ್ತೇನೆಯೆ ಎಂಬಂಥ ಸ್ಥಿತಿಯಲ್ಲಿ ನನ್ನ ಉಸಿರಾಟವಿತ್ತು. ಆದರೆ ಮಾರನೇ ದಿನದಿಂದ ಇದರಲ್ಲಿ ಸಾಕಷ್ಟು ಪ್ರಗತಿಯಾಯಿತು. ಇನ್ನೊಂದೆರಡು ದಿನದ ನಂತರ ಮೂರೂ ಚೆಂಡುಗಳು ಮೇಲೆ ಹೋದಾಗ ನನಗೇ ನಂಬಲು ಆಗಲಿಲ್ಲ. ಆ ದಿನ ಮಧ್ಯಾಹ್ನ ಸೀನಿಯರ್ ಡಾಕ್ಟರ್ ಎಂದಿನಂತೆ ತಮ್ಮ ಪರಿವಾರ ಸಮೇತ ಬಂದು ಭೇಟಿ ನೀಡಿದಾಗ ಹೇಗಿದ್ದೀರಿ ಎಂದು ವಿಚಾರಿಸಿದರು. ಚೆನ್ನಾಗಿದ್ದೀನಿ ಈಗ ಐ ಕ್ಯಾನ್ ರೈಸ್ ಆಲ್ ದ ತ್ರೀ ಬಾಲ್ಸ್ ಅಂದಾಗ ವೆರಿ ಗುಡ್ ಎಂದಿದ್ದೇ ಎಲ್ಲಿಲ್ಲದ ಸಂತೋಷವಾಯಿತು.

ನನಗೆ ಆಕ್ಸಿಜನ್ ಹಾಗೂ ಡ್ರಿಪ್ಸ್ ಚಿಕಿತ್ಸೆ ಪ್ರಾರಂಭವಾದ ಮಾರನೇ ದಿನದಿಂದಲೇ ನಾನು ಸಂಪೂರ್ಣ ಆರೋಗ್ಯವಂತಳಾದಂತೆ ಅನ್ನಿಸಿತು. ಮನೆಯಲ್ಲಿ ಒಂದು ವಾರ ಕಾಲ ಅನುಭವಿಸಿದ ಮೈಕೈನೋವು, ತಲೆಭಾರ, ಅಂಗಾಲು ಉರಿ, ಒಳಗೊಳಗೇ ಬೇಯಿಸುತ್ತಿದ್ದ ಜ್ವರ, ನಿದ್ದೆಯಿಲ್ಲದ ರಾತ್ರಿಗಳು ಎಲ್ಲವೂ ಮಾಯವಾಗಿದ್ದವು. ನನಗಂತೂ ಕುಣಿದಾಡುವಷ್ಟು ಚೈತನ್ಯ ನನ್ನಲ್ಲಿ ತುಂಬಿರುವಂತೆ ಅನ್ನಿಸುತ್ತಿತ್ತು. ಸುಮ್ಮನೆ ಹಾಸಿಗೆಯ ಮೇಲೆ ಬಿದ್ದುಕೊಂಡು ಯಾವುದೇ ವ್ಯಾಯಾಮವಿಲ್ಲದೆ ಸೋಮಾರಿಯಾಗಿದ್ದೇನೆ ಅನ್ನಿಸುತ್ತಿತ್ತು. ಏನು ಬೇಕಾದರೂ ಅದಕ್ಕೆ ನಾನೇ ಮೇಲೆದ್ದು ಹೋಗಿ ಕಾರಿಡಾರ್‌ನಲ್ಲಿ ಓಡಾಡಿ ಸಿಸ್ಟರ್‌ಗಳಿಗೆ ಏನಾದರೂ ಕೇಳಿಕೊಂಡು ಬರುವ ಕೆಲಸ ಮಾಡುತ್ತಿದ್ದೆ.

ಪಕ್ಕದ ಬೆಡ್‌ನವರು ನೀರು ನೀರು ಎಂದು ಹಂಬಲಿಸಿದಾಗ ನಾನೇ ಎಲೆಕ್ಟ್ರಿಕ್ಕ್ಟಿ ಕೆಟಲ್‌ನಲ್ಲಿ ನೀರು ಕಾಯಿಸಿ ಅವರಿಗೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಅಗೆಲ್ಲ ದೊಡ್ಡ ದೊಡ್ಡ ನಗರಗಳಲ್ಲಿ ವಾಯುಮಾಲಿನ್ಯದಿಂದ ಬರುವ ತೊಂದರೆಗಳನ್ನು ತಪ್ಪಿಸುವುದಕ್ಕಾಗಿ ಆಕ್ಸಿಜನ್ ಬಾರ್‌ಗಳ ಸ್ಥಾಪನೆಯಾಗಿರುವ ವಿಷಯವನ್ನು ಓದಿದ್ದು ನೆನಪಿಗೆ ಬಂದಿತು.

| ಇನ್ನೂ ನಾಳೆಗೆ |

‍ಲೇಖಕರು Avadhi

June 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: