ಡಿ ಹೊಸಳ್ಳಿ ಶಿವು ಹಿಡಿದಿಟ್ಟ ನೆನಪು- ಆಕೆ ನನ್ನವ್ವ…

ಡಿ ಹೊಸಳ್ಳಿ ಶಿವು

ನನ್ನ ಅಪ್ಪ-ಅವ್ವನಿಗೆ ನಾನು ನಾಲ್ಕನೇ ಮಗ. ನನ್ನ ಅಕ್ಕಂದಿರು, ಅಣ್ಣ ಹುಟ್ಟಿದಾಗ ಯಾರಿಗೂ ಜಾತಕ ಬರೆಸೆದ ನನ್ನಪ್ಪ ನಾನು ಹುಟ್ಟಿದಾಗ ಅದೇಕೆ ಜಾತಕ ಬರೆಸಿದರೋ ಗೊತ್ತಿಲ್ಲ. ಸ್ವಲ್ಪ ಕೆಂಪು ಮಿಶ್ರಿತ ಬೆಳ್ಳಗೆ ಹುಟ್ಟೀದ್ದೀನಿ ಎನ್ನುವ ಆಸೆಯಿಂದ ಜಾತಕ ಬರೆಸಲು ಹೋದರೋ ಏನೋ? ಅದೂ ಗೊತ್ತಿಲ್ಲ. ಅದೇನು ಕಾರಣವೋ ಬಿಡಿ ಅದು.

ನನ್ನ ಜಾತಕ ಬರೆಸಲು ಅಪ್ಪ ಹೋದಾಗ ಜಾತಕವನ್ನ ಕೈಗೆ ಕೊಟ್ಟು, ‘ಮಗು ಕೆಟ್ಟ ಘಳಿಗೆಯಲ್ಲಿ, ಮೂಲಾ ನಕ್ಷತ್ರದಲ್ಲಿ ಹುಟ್ಟಿದೆ. ಅದು ಅಪಶಕುನ. ಮಗು ಹುಟ್ಟಿದ ಒಂದು ತಿಂಗಳಲ್ಲಿ ತಂದೆಗೆ ಇಲ್ಲವೆ ತಾಯಿಗೆ ಮರಣ. ಇವೆರಡೂ ಇಲ್ಲಾಂದ್ರೆ ಮಗುವೇ ತೀರಿಹೋಗುತ್ತೆ’ ಎಂದರಂತೆ ಜೋಯಿಸರು.

ನಾನು ಯಾಕಾದ್ರೂ ಜಾತಕ ಬರೆಸಲು ಹೋದ್ನೋ .. ಅನ್ನುವ ಚಿಂತೆಯಲ್ಲೇ ಎದೆಭಾರ ಮಾಡಿಕೊಂಡು ಮನೆಗೆ ಬಂದಂತಹ ಅಪ್ಪ, ಜೋಯಿಷರು ಹೇಳಿದ್ದನ್ನೆಲ್ಲಾ ಅವ್ವನಿಗೆ ತಿಳಿಸುತ್ತಾರೆ. ಅದರಿಂದ ಗಾಬರಿಗೊಂಡಂತಹ ಬಾಣಂತಿಯಾದ ಅವ್ವ, ತನ್ನನ್ನ ನೋಡಲು ಬಂದಂತಹ ಊರಿನ ಕೆಲವರೊಂದಿಗೆ ತನ್ನ ಅಳಲು ತೋಡಿಕೊಳ್ಳುತ್ತಾಳೆ. ಆಗ ಬಂದ ಊರಿನ ಜನ ತಲೆಗೆ ಬಂದಂತೆ ಒಬ್ಬೊಬ್ಬರೂ ಒಂದೊಂದು ಮಾತಾಡಿ ಹೋಗುತ್ತಾರೆ. ನಾನಾಗ ಎರಡುದಿನದ ಹಸುಗೂಸಂತೆ.

ಆ ದಿನ ಅವ್ವ ಆ ಚಿಂತೆಗೆ ಬಿದ್ದಾಗ, ನಾನು ಅವ್ವನ ಎದೆ ಹಾಲಿಗೆ ಅಂಪಾರುತಿದ್ದನಂತೆ. ಆ ವೇಳೆಗೆ ಸರಿಯಾಗಿ ಸಂಬಂಧದಲ್ಲಿ ಅತ್ತೆ ಅನ್ನಬಹುದಾದ ಹಿರೀಕರೊಬ್ಬರು ಬಂದು, ನನ್ನವ್ವನಿಗೆ ಹಾಲು ಕುಡಿಸುವುದಕ್ಕೂ ಬಿಡದೆ, ಹಸುಗೂಸಾದ ನನ್ನನ್ನ ಹಟ್ಟಿಯಿಂದ ಹೊರಗೆ ತಂದು, ಯಾವುದೇ ಕನಿಕರ ತೋರದೆ ಕಿತ್ತೋದ ಈಚಲು ಚಾಪೆ ಮೇಲೆ ಹಾಕಿ, ನನ್ನನ್ನ ನಡ್ಹಟ್ಟಿಯಲ್ಲಿ ಇಟ್ಟು, ‘ಸತ್ರೆ ಇದೇ ಸಾಯ್ಲಿ ಅನಿಷ್ಟ. ಅಪ್ಪ ಅವ್ವನ್ನೇ ತಿನ್ನೋಕೆ ಹುಟ್ಟಿದೆಯಂತೆ ದರಿದ್ರದ್ದು. ಲೇ, ತಿಮ್ಮಿ ನೀನು ಅರ್ಗೀಸ ಹಾಲ್ಕುಡಿಸ್ಬೇಡ ಕಣ್ಲೆ. ಹಂಗೇ ಸಾಯ್ಲಿ ಈ ಮುಕ್ಕ’ ಅಂತ ತಾಕೀತು ಮಾಡಿ ಹೋದರಂತೆ. ಆ ಹಿರೀಕರ ಮಾತಿಗೆ ನಮ್ಮ ಮನೆಯಲ್ಲಿ ಮಾನ್ಯತೆ ಇತ್ತಂತೆ.

ಹೀಗಿರುವಾಗ ನಾನು ಹೊರಗೆ ಹಾಲಿಗಾಗಿ ಹಾಹಾಕಾರ ಪಡುತಿದ್ದರೆ, ಒಳಗೆ ಹೆತ್ತ ಕರಳು ಅವ್ವನನ್ನ ಹಿಂಡುತಿತ್ತಂತೆ. ಇದೇ ಬೇಗುದಿಯಲ್ಲಿ ಒಂದೆರಡು ಗಂಟೆ ಎದೆ ಹಿಡಿದು ಬದುಕಿದ ನನ್ನವ್ವ, ತನ್ನ ಕರುಳ ಕುಡಿ ಹಾಲಿಗಾಗಿ ರಚ್ಚೆ ಹಿಡಿದಾಗ, ಜೋಯಿಸ ಗೀಯಿಸ ಅಂತಲೂ ನೋಡದೆ, ಯಾರ ಮಾತನ್ನೂ ಲೆಕ್ಕಿಸದೆ ಹೊರ ಬಂದ ನನ್ನವ್ವ ನನ್ನನ್ನ ಎತ್ತಿ ಎದೆಗೆ ಅವುಚಿಕೊಂಡು, ನನ್ನ ಬಾಯಿಗೆ ತನ್ನ ಮೊಲೆಯಿಟ್ಟು ಹಾಲು ಕುಡಿಸಿ, ‘ಸತ್ರೆ ನಾನೇ ಸಾಯುತ್ತೇನೆ’ ಎಂದಳಂತೆ.

ನನ್ನವ್ವ ನನಗೆ ಅವತ್ತು ಹಾಲು ಕುಡಿಸದೇ ಹೋಗಿದ್ದರೆ, ಇದನ್ನ ಬರೆದು ದಾಖಲಿಸಲು ನಾನಿವತ್ತು ಇರುತ್ತಿರಲಿಲ್ಲ. ಅಂದೇ ಈ ಶಿವ ಪರಲೋಕ ಸೇರುತಿದ್ದ. ಹೆತ್ತ ಕರಳೂಂದ್ರೆ ಇದೇ ಇರಬೇಕು ಕಂಡ್ರಿ. ನನಗೆ ಮತ್ತೊಮ್ಮೆ ಎರಡನೇ ಸಾರಿ ಜೀವದ ಗುಟುಕು ನೀಡಿದ ಅವ್ವಾss ಇದೋ ನಿನಗೆ ಸಾಷ್ಟಾಂಗ ನಮಸ್ಕಾರ.

ಹೀಗೆ ಒಂದು ತಿಂಗಳಾಯ್ತು, ಹನ್ನೆರಡು ತಿಂಗಳಾಯ್ತು, ಹನ್ನೆರಡು ವರ್ಷವಾಯ್ತು. ನಾನೂ ಸಾಯಲಿಲ್ಲ. ನನ್ನ ಅಪ್ಪ-ಅವ್ವನೂ ಸಾಯಲಿಲ್ಲ. ಇದು ನಾನು ಈ ಮಣ್ಣಿಗೆ ಎಂಟ್ರಿ ಕೊಟ್ಟ ಕತೆ.

ನನ್ನನ್ನ ಹೀಗೆ ಉಳಿಸಿಕೊಂಡಂತಹ ಅವ್ವ ತುಂಬಾ ಮುಗ್ಧೆ. ಆದರೆ ನನ್ನವ್ವ ನನಗೆ ಒಂದು ಸಮುದ್ರ. ಆ ಸಮುದ್ರದಲ್ಲಿ ಒಂದೇ ಒಂದು ಬೊಗಸೆ ಮೊಗೆದು ಇಲ್ಲಿ ಹಂಚುವುದು ಸುಲಭದ ಮಾತಲ್ಲ. ಆದರೂ ಪ್ರಯತ್ನ ಮಾಡಿದ್ದೇನೆ.

ಅವ್ವನ ಬದುಕನ್ನ ಒಂದೇ ಒಂದು ವಾಕ್ಯದಲ್ಲಿ ಕಟ್ಟಿಕೊಡುವುದಾದರೆ, ರೈತ ಕೂಲಿ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದ ನನ್ನವ್ವನ ಜೀವನ ಜೀತಮಾಡುವುದರಲ್ಲೇ ಕಳೆದೋಯ್ತು.

ಬದುಕು ಅನ್ನೋದು ಎಲ್ಲಕ್ಕಿಂತ ದೊಡ್ಡದು. ನನ್ನವ್ವ ತುಂಬಾ ಮುಗ್ದೆ. ಅವಳಂತವಳು ಒಂದು ಬದುಕು ಕಟ್ಟಿಕೊಡುವುದಿದೆಯಲ್ಲ ಅದೊಂದು ಸವಾಲೇ ಸರಿ. ಅದೇಗವ್ವ ನಿನಗದು ಸಾಧ್ಯವಾಯಿತು? ನಿನ್ನಂಥಾ ತಾಯಂದಿರು ಅದೆಂತೆಂಥಾ ತ್ಯಾಗ ಮಾಡಿದ್ದೀರೋ? ಅದೆಷ್ಟು ದಿನಗಳನ್ನ ಮಕ್ಕಳಿಗಾಗಿ ಹಸಿದಿದ್ರೋ? ಅವರಿಗಾಗಿ ಅದೆಷ್ಟು ಕೆಂಡಗಳನ್ನ ನುಂಗಿಕೊಂಡ್ರೋ? ನಮಗೆ ಗೊತ್ತಾಗಲೇ ಇಲ್ಲ. ಅವ್ವಾಂದ್ರೆ, ಬಹುಶಃ ಎಲ್ಲರಿಗೂ ಹೀಗೇ ಇರುತ್ತಾಳೆ ಅನಿಸುತ್ತೆ.

ಅವ್ವ ನೀ ಹೇಳುತಿದ್ದ ಆ ಕತೆ ಈಗಲೂ ನನ್ನ ಎದೆಯಲ್ಲಿ ಹಾಗೇ ನಿಂತಿದೆ. ಒಂದೂವರೆ ವರ್ಷದೊಳಗಿನ ಕೈ ಕೂಸೊಂದನ್ನ ಜೋಳಿಗೆಗೆ ಹಾಕಿ, ಆ ಜೋಳಿಗೇನ ಮರವೊಂದಕ್ಕೆ ನೇತುಹಾಕಿ, ಆ ಮಗುವಿಗೆ ನಿದ್ದೆ ಹತ್ತುವಂತೆ ತೂಗುತಿದ್ದದ್ದು. ಆ ಮಗು ಮಲಗಿದ ಮೇಲೆ, ನಿನ್ನ ಹೊಟ್ಟೇಲಿ ಕಚಗುಳಿ ಆಡುತಿದ್ದ ಇನ್ನೊಂದು ಜೀವವನ್ನ ಲೆಕ್ಕಿಸದೆ , ಗಂಡನ ಜೊತೆಗೂಡಿ ಕಲ್ಲು ಕೀಳುತಿದ್ದದ್ದು…

ಉಪ್ಸಾರಿನ ಮುದ್ದೆಗೂ, ಆರ್ಕಾದ ಅಂಬ್ಲಿಗೂ ತತ್ವಾರ ಇದ್ದಿದ್ದು, ಒಪ್ಪತ್ತುಂಡು ಎರಡೊತ್ತು ಹಸಿದು ಇರ್ತಿದ್ದಿದ್ದು…

ಮೈಮೇಲೆ ಇದ್ದಂತಹ ಒಂದೇ ಒಂದು ಸೀರೇನಾ ಹಳ್ಳದ ಮರೆಗೆ ಹೋಗಿ ಯಾರಾದ್ರೂ ನೋಡಿಯಾರು ಅನ್ನೋ ಆತಂಕದಲ್ಲೇ, ಉಟ್ಟಿದ್ದ ಸೀರೆಯನ್ನೇ ಅರ್ಧರ್ಧ ಒಗೆದು ಒಣಗಿಸಿಕೊಳ್ಳುತ್ತಿದ್ದಿದ್ದು, ಕೂಲಿ ಕೆಲಸ ಮಾಡುವಾಗ ಮುಳ್ಳುಗಂಟಿಗಳಿಗೆ ಸೀರೆ ಸಿಕ್ಕಿಕೊಳ್ಳದಂತೆ ನೋಡಿಕೊಳ್ಳುತ್ತಿದ್ದಿದ್ದು, ನವೆದೋಗಿದ್ದ ಆ ಸೀರೆ ಕುಂತೇಳುವಾಗ ಎಲ್ಲಿ ಪರ್ರೆನ್ನುತ್ತೋ ಎನ್ನುವ ಅಂಜಿಕೆಯಲ್ಲೇ ಮಾನ ಮರ್ಯಾದೆಯ ಎಚ್ಚರಿಕೆ ವಹಿಸುತಿದ್ದಿದ್ದು…

ಆ ಎಲ್ಲಾ ಅಗ್ನಿ ಕುಂಡಗಳನ್ನ ದಾಟ್ಕೊಂಡ್ಬಂದು, ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗಾಗಿ ಬದುಕು ಕಟ್ಟಿಕೊಟ್ಟಿದ್ದನ್ನ ನೆನಪಿಸಿಕೊಂಡರೆ, ನಿನ್ನ ಕಾಲಿಗೆ ಮುಗಿಯಲೇ ಬೇಕು ಕಣವ್ವ. ಎಷ್ಟೇ ಮುಗಿದರೂ ಅದು ಕಡಿಮೇನೇ ಬಿಡವ್ವ.

ನಮಗೆ ಪಿತ್ರಾರ್ಜಿತಾಂತ ಇದ್ದದ್ದು 5 ಗುಂಟೆ ಗದ್ದೆ ಹಾಗೂ ಭೋಗ್ಯಕ್ಕೆ ಹಾಕಲಾಗಿದ್ದ ಒಂದು ಕೈ ಹೆಂಚಿನ ಮನೆ ಮಾತ್ರ. ಅಪ್ಪನ ಅಪ್ಪ ನನ್ನ ತಾತ ಇದ್ದ ಜಮೀನು ಮಾರಿಕೊಂಡು ಇಷ್ಟು ಮಾತ್ರ ಉಳಿಸಿ ಹೋಗಿದ್ರಂತೆ. ತಾತ ತೀರಿಕೊಂಡಾಗ ಎರಡನೇ ತರಗತಿಯಲ್ಲಿ ಕಲಿಯುತಿದ್ದ ಅಪ್ಪ ಶಾಲೆಗೆ ವಿದಾಯ ಹೇಳಿದರಂತೆ. ಅಪ್ಪನದೂ ಆಡುವ ವಯಸ್ಸಲ್ಲೇ ದುಡಿದು ತಿನ್ನುವ ಬದುಕಾಯ್ತಂತೆ. ಹಾಗೇ ದುಡಿದೂ ದುಡಿದು ಭೋಗ್ಯಕ್ಕೆ ಹಾಕಿದ್ದ ಮನೆ ಬಿಡಿಸಿಕೊಂಡು, ನಾಲ್ಕು ಎಕರೆ ಹೊಲ ಕೊಂಡುಕೊಂಡು ಅವ್ವನನ್ನ ಮದುವೆಯಾದ್ರಂತೆ ಅಪ್ಪ.

ತಿಮ್ಮಕ್ಕ ಎಂಬುದು ನನ್ನವ್ವನ ಹೆಸರು. ಅವ್ವ ಮನೆ ಕೆಲಸ ಮಾತ್ರ ಮಾಡುತ್ತಿರಲಿಲ್ಲ. ಹೊಲ-ಮನೆ ಎರಡರಲ್ಲೂ ಗಾಣದೆತ್ತಿನಂತೆ ದುಡಿಯುತಿದ್ಲು. ದುಡಿದು ತಿನ್ನಬೇಕೆಂಬುದು ಅಪ್ಪನ ಕಟ್ಟಾಜ್ಞೆಯಾಗಿತ್ತು .

ಮದುವೆಯಾದ ಮೇಲೆ ಒಂದಷ್ಟು ಸಾಲ ಮಾಡಿ ಎರಡು ಎಕರೆ ನೀರಾವರಿ ಜಮೀನು ಕೊಂಡುಕೊಳ್ಳುತ್ತಾರೆ. ಆ ಜಮೀನಿನಲ್ಲಿ ಅಲ್ಲಲ್ಲಿ ಅರೆಕಲ್ಲುಗಳಿರುತ್ತವೆ. ಹಗಲೊತ್ತು ಕೂಲಿ ಮಾಡೋದು, ರಾತ್ರಿ ಹೊತ್ತು ಪೆಟ್ರೋಮ್ಯಾಕ್ಸ್ ಬೆಳಕಲ್ಲಿ ಅಪ್ಪನ ಜೊತೆ ಕಲ್ಲು ಕೀಳೋದು ಅವ್ವನ ಕಾಯಕ.

ಹೀಗೆ ಹಗಲು ರಾತ್ರಿಯೆನ್ನದೆ ಜೋಡೆತ್ತಿನಂತೆ ಬೆವರು ಬಸಿದು ದುಡಿದು ಉಳುವ ಎತ್ತುಗಳ ಜೊತೆಗೆ ಕರಾವು ಮಾಡುವ ಹಸು-ಎಮ್ಮೆ ಕೊಳ್ಳುತ್ತಾರೆ. ಒಂದಷ್ಟು ಕುರಿಗಳನ್ನೂ ಕೊಳ್ಳುತ್ತಾರೆ. ನಂತರ ಕೂಲಿ ಮಾಡುವುದನ್ನ ನಿಲ್ಲಿಸಿ ಸ್ವಂತ ಜಮೀನಿನಲ್ಲೇ ದುಡಿಯುತ್ತಾ , ದನ ಕುರಿಗಳ ನಿಗಾ ನೋಡುತ್ತಾ ತಮ್ಮದೇ ಬದುಕು ಕಟ್ಟಿಕೊಳ್ಳುತ್ತಾರೆ.

ಆಡುವ ವಯಸ್ಸಲ್ಲೇ ನಾನೂ ಕೂಡ ಓದಿನ ಜೊತೆಗೆ ರೈತಾಪಿ ಕೆಲಸ ಹಾಗೂ ಆಗಾಗ ಕೂಲಿ ಕೆಲಸವನ್ನೂ ಮಾಡುತಿದ್ದೆ. ನಾನು ಬೆಳೆದಂತೆಯೇ ನನ್ನ ಮಕ್ಕಳೂ ಬೆಳೆಯಬೇಕು ಎಂಬುದು ಅಪ್ಪನ ಕಡ್ಡಾಯದ ಮಿಲ್ಟ್ರಿ ನಿಯಮವಾಗಿತ್ತು. ನಮ್ಮನ್ನ ಆ ರೀತಿ ಬೆಳೆಸಿದ ಅಪ್ಪ, ತಾನು ಕಷ್ಟಪಟ್ಟಿದ್ದಕ್ಕೆ ಮುಂದೊಂದು ದಿನ ಕೂತುಂಡು ಬದುಕನ್ನ ಸುಖಿಸಬೇಕಾಗಿದ್ದ ಅಪ್ಪ, ನಾನು ಹೈಸ್ಕೂಲಿನಲ್ಲಿ ಇದ್ದಾಗಲೇ ದುರ್ಮರಣಕ್ಕೆ ಈಡಾಗಿಬಿಟ್ರು. ಬದುಕೆಂಬುದು ನಾವು ಎಣಿಸಿದಂತೆ ಇರೋದಿಲ್ಲ ಎಂಬುವುದಕ್ಕೆ ಇಲ್ಲಿ ಅಪ್ಪನ ದುರಂತವೇ ಒಂದು ಸಾಕ್ಷಿ.

ಏನೊಂದೂ ಅರಿಯದ ಅವ್ವನಿಗೆ ಅಪ್ಪ ಸರ್ವಸ್ವವೂ ಆಗಿದ್ದ. ಇವತ್ತು ಗಲಿಗಲಿಯಾಗಿದ್ದ ಅಪ್ಪ ಮಾರನೆಗೇ ಅವ್ವನ ಪಾಲಿಗೆ ಇಲ್ಲಾಂದ್ರೆ ಅವಳಿಗೆ ಹೇಗಾಗಬೇಡ? ಬರಸಿಡಿಲು ಬಡಿದಷ್ಟೇ ಆಘಾತವಾಗಿ, ನಡೆಯೇ ನಿಂತು ಹೋದಂತೆ , ಜಂಘಾಬಲವೇ ಅಡಗಿ ಹೋದಂತೆ ಆಗಿ, ಅವ್ವ ಚೇತರಿಸಿಕೊಳ್ಳುವುದೇ ಕಷ್ಟವಾಗೋಯ್ತು. ಆ ನೋವಿಂದ ಹೊರಬರಲು ನಮಗೆಲ್ಲಾ ಸಾಕಷ್ಟೇ ಸಮಯ ಹಿಡಿಯಿತು.
ನಯಾಪೈಸೆ ವ್ಯವಹಾರ ಜ್ಞಾನವಿರದ ಸಮಯದಲ್ಲೇ ಅವ್ವನ ಹೆಗಲಿಗೆ ಸಂಸಾರದ ನೊಗ ಬಿದ್ದೋಗುತ್ತೆ. ಅವ್ವನಿಗೆ ನೂರರ ತನಕ ಎಣಿಸಲೂ ಬರುತ್ತಿರಲಿಲ್ಲ ಎಂದರೆ ಅದ್ಯಾವ ಮಟ್ಟಗಿನ ಜವಾಬ್ದಾರಿಯನ್ನ ಅವ್ವ ನಿಭಾಯಿಸಿರಬಹುದು ನೀವೇ ಊಹಿಸಿಕೊಳ್ಳಿ. ಆ ಪಾಡನ್ನ ಇಲ್ಲಿ ವರ್ಣಿಸಲು ನನಗೆ ಸಾಧ್ಯವಿಲ್ಲ.

‘ಶಿವ ಎಲ್ಲೀ ತನಕ ಓದ್ತಾನೋ ಅಲ್ಲೀ ತನಕ ಓದ್ಸು’ ಅಂತ ಅವ್ವನಿಗೆ ಅಪ್ಪ ಸಾಯುವಾಗ ಹೇಳಿ ಹೋದ್ರಂತೆ.

ನಾನು ಓದುತಿದ್ದ ಹೈಸ್ಕೂಲಿನಲ್ಲಿ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅಂದು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ರು. ಅಷ್ಟರಲ್ಲಿ ನನಗೆ ನೆನಪಿರುವಂತೆ 18 ಮಂದಿ ಮಾತ್ರ ಪಾಸಾಗಿದ್ರು. ಅದರಲ್ಲಿ ನಾನೂ ಒಬ್ಬ ಜಸ್ಟ್ ಪಾಸಾಗಿದ್ದೆ.

‘ಲೋ..ಸೇರೇಗೌಡ್ರ್ ಶಿವಣ್ಣ ಎಸ್ಸೆಲ್ಸಿನಾ ಒಂದೇ ಏಟ್ಗೆ ಮಾಡಿದ್ನಂತೆ..’ ಅಂತ ನನ್ನೂರಲ್ಲಿ ಸಣ್ಣ ಸುದ್ದಿಯಾಗಿತ್ತು. ಆಗ ನಮ್ಮೆಲ್ಲ ಹಳ್ಳಿಗಳ ಸ್ಥಿತಿ ಹಾಗೇ ಇತ್ತು ಬಿಡಿ.

ನಾನು ಎಸ್ಸೆಸೆಲ್ಸಿಯನ್ನ ಫಸ್ಟ್ ಅಟೆಮ್ಪ್ಟ್ ಗೆ ಮಾಡಿದ್ದಕ್ಕೋ ಅಥವಾ ತನ್ನ ಪತಿದೇವನಿಗೆ ಕೊಟ್ಡಿದ್ದ ವಾಗ್ದಾನಕ್ಕೋ ನನ್ನವ್ವ ನನ್ನನ್ನ ಪಿಯುಸಿ ಓದಲು ಮೈಸೂರಿಗೆ ಸೇರಿಸಿದ್ಲು. ಆಗ ಪ್ರತಿ ತಿಂಗಳು ನನಗೆ 80 ರೂಪಾಯಿಗಳನ್ನ ಕಳಿಸ್ತಿದ್ಲು. ಅವತ್ತಿನ ಕಾಲಕ್ಕೆ ನನ್ನವ್ವನಂತವರಿಗೆ ಅದು ದೊಡ್ಡ ಮೊತ್ತವೇ ಆಗಿತ್ತು. ಆದರೂ ಅಂಥಾದ್ದೊಂದು ರಿಸ್ಕನ್ನ ಅವ್ವ ನನಗಾಗಿ ತೆಗೆದು ಕೊಂಡಿದ್ಲು. ಮನೆಯಿಂದ ಅಕ್ಕಿ, ಕಾಯಿ, ಖಾರದ ಪುಡಿ, ತುಪ್ಪ, ಉಪ್ಪಿನಕಾಯಿ.. ತಗೊಂಡೋಗಿ, ಉಳಿಕೆಯ ಪದಾರ್ಥಗಳನ್ನ ಅಲ್ಲೇ ಕೊಂಡುಕೊಂಡು ನಾನೇ ಅಡಿಗೆ ಮಾಡಿಕೊಳ್ಳುತ್ತಿದ್ದೆ.

ತಂದಿರೋ ಅಕ್ಕಿ ಖಾಲಿಯಾದಾಗ ಊರಿಗೋಗಿ ಅಕ್ಕಿ ಇತ್ಯಾದಿ ಮತ್ತೆ ತರುತಿದ್ದೆ. ಹೀಗೆ ಊರಿಗೆ ಹೋದಾಗ ನನ್ನವ್ವ ನನಗೆ ಪ್ರಿಯವಾದ ನಾಟಿಕೋಳಿ ಸಾರನ್ನ ತಪ್ಪದೇ ಮಾಡ್ತಿದ್ಲು. ನನ್ನವ್ವ ನನ್ನನ್ನ ‘ಬಾಡಿನ ಶಿವ’ ಅಂತಲೇ ಕರಿತಿದ್ಲು. ಹುಚ್ಚೆಳ್ಳಾಡಿಸಾಕಿ ತೆಳ್ಳಗೆ ಸಾರು ಮಾಡುತಿದ್ಲು. ನನ್ನವ್ವನ ಆ ಕೈ ರುಚಿ ನೆನಪಿಸಿಕೊಂಡರೆ ಈಗಲೂ ಬಾಯಲ್ಲಿ ಜೊಲ್ಲಾಡುತ್ತೆ. ಅವ್ವ, ನಾನಿಲ್ಲಿ ನಿನಗೊಂದು ಮಾತು ಹೇಳುತ್ತೇನೆ. ಅವ್ವ, ನೀ ಕೊಟ್ಟ ಊಟ ಇನ್ನೂ ಆರಿಲ್ಲ ಕಣವ್ವ !

ಸ್ವಾರಸ್ಯಕರ ಘಟನೆಯೊಂದನ್ನ ಇಲ್ಲೇ ಹೇಳಿ ಬಿಡುತ್ತೇನೆ. ನಾನು ಮೈಸೂರಿಂದ ಊರಿಗೆ ಬಂದ ದಿನ ತಪ್ಪದೇ ನಾಟಿ ಕೋಳಿ ಸಾರಿನ ಬಾಡೂಟ ಇದ್ದೇ ಇರುತಿತ್ತು. ಅವತ್ತೊಂದು ದಿನ ನನ್ನ ಚಿಕ್ಕಪ್ಪನ ಅಳಿಯನ ಮೇಲೆ ನನ್ನಪ್ಪನ ದೆವ್ವ ಬಂದ್ಬಿಡ್ತು. ಅದು, ‘ಈಗ ಒಳ್ಳೆ ದಾರೀಲೀ ಹೋಗ್ತಾಯಿದ್ದಿ. ಅದೇ ದಾರೀಲೇ ಹೋಗು’ ಎಂದು ಕೂತಲ್ಲೇ ದೂರಿಯಾಡುತ್ತಾ ನನಗೆ ಹೇಳುತಿತ್ತು. ತುಂಬಾ ಮುಗ್ದೆಯಾದ ನನ್ನವ್ವ ತನ್ನ ದೇವ್ರೇ ಬಂದು ಮಾತಾಡಿದ ಅನ್ನೋ ರೀತೀಲೇ ಅವ್ಯಕ್ತ ಖುಷಿಯೊಂದನ್ನ ಅನುಭವಿಸ್ತಿದ್ಲು. ದೆವ್ವ ಇಳಿದ ಮೇಲೆ ಭಾವ ಊಟ ಮಾಡ್ಕೊಂಡು ಹೋಗಿ ಬಿಡುತಿದ್ದ. ನಾನು ಮೈಸೂರಿಂದ ಊರಿಗೆ ಹೋದಾಗೆಲ್ಲಾ ಈ ಕತೆ ರಿಪೀಟ್ ಆಗ್ತಲೇ ಇತ್ತು.

ಒಂದು ಸಾರಿ ಈ ರಿಪೀಟ್ ಕತೆಗೆ ಉಲ್ಟಾ ಹೊಡಿದ ದೆವ್ವ, ‘ನೀನೀಗ ಅಡ್ಡ ದಾರಿ ಹಿಡಿದಿದ್ದಿ. ಇಸ್ಪೀಟ್ ಆಡೋಕೆ ಶುರುಮಾಡಿದ್ದಿ. ಪೋಲಿ ಸಂಗ ಸೇರಿದ್ದಿ’ ಎಂದು ನನ್ನ ಮೇಲೆ ಆರೋಪ ಹೊರಿಸಿಬಿಡ್ತು. ಹೀಗೆ ಆರೋಪಿಸಿ ಇದ್ದೆರಡು ಕಣ್ಣುಗಳನ್ನೇ ನಾಲ್ಕರಷ್ಟು ಮೆಡ್ಡರಿಸಿಕೊಂಡು ನನ್ನನ್ನು ತಿನ್ನುವಂತೆ ಹಲಬುತಿತ್ತು.

ನನಗೆ ಸರಿಯಾದ ಹೊಡ್ತ ಕೊಟ್ಟ ಆ ದೆವ್ವಾನ ಸಂಭಾಳಿಸೋದು ಆ ಕ್ಷಣಕ್ಕೆ ನನಗೊಂದು ಸವಾಲಾಯಿತು. ನಾನದನ್ನ ಸರಿಯಾಗಿ ಸಂಭಾಳಿಸಲಿಲ್ಲಾಂದ್ರೆ, ನನ್ನವ್ವ ಆ ದೆವ್ವದ ಮಾತನ್ನ ತನ್ನ ದೇವರ ಮಾತೆಂದೇ ನಂಬಿಕೊಂಡು, ನನ್ನನ್ನ ತಪ್ಪಿತಸ್ಥನಂತೆ ಕಂಡು, ನೊಂದುಕೊಂಡು ಬಿಡುತ್ತಾಳೆ. ಇದಕ್ಕೇನಾದರೂ ಮಾಡ್ಲೇಬೇಕು ಎಂದುಕೊಂಡವನೆ, ಕೂತಲ್ಲೇ ಸುತ್ತೂ ದೂರಿಯಾಡುತ್ತಲೇ ಮೆಡ್ಡರಿಸಿಕೊಂಡು ದುರು ದುರು ಕೆಂಡಗಣ್ಣು ಬಿಡುತ್ತಿದ್ದ ಆ ದೆವ್ವಕ್ಕೆ, ‘ನೀನು ನಿಜವಾಗ್ಲು ನನ್ನಪ್ಪನೇನಾ?’ ಎಂದೆ. ನನ್ನ ಮಾತಿಗೆ ದೆವ್ವದ ಕಣ್ಣಲ್ಲಿ ಇನ್ನಷ್ಟು ಕ್ಯಾಣ ಉದುರತೊಡಗಿತು.

ಮತ್ತೆ ನಾನೇ, ‘ಕಣ್ಣೆಲ್ಲ ಮೆಡ್ಡರಿಸೋದೇನ್ ಬೇಡ. ನೀನು ನನ್ನಪ್ಪನೇ ಆಗಿದ್ರೆ? ನನ್ನ ಕೈಲಿರೋದೇನೂಂತ ಹೇಳು’ ಎಂದೆ. ಚಾಚಿದ್ದ ನನ್ನ ಕೈ ನೋಡುತ್ತಾ, ‘ರಾಗಿ’ ಅಂತು ದೆವ್ವ. ಅಲ್ಲೇ ಚೀಲದಲ್ಲಿದ್ದ ರಾಗಿಯನ್ನ ತಗೊಂಡು ನಾನೀ ಪ್ರಶ್ನೆ ಕೇಳಿದ್ದೆ. ಮತ್ತೂ ನಾನೇ ಒಂದು ಹಾಳೆಯನ್ನ ದೆವ್ವದ ಮುಖಕ್ಕೆ ಹಿಡಿದು, ‘ರಾಗಿ ಕಾಳುಗಳೂ ನಿನಗೆ ಕಾಣುತ್ತೆ ಎಂದ್ಮೇಲೆ, ಇದನ್ನೀಗ ಓದು. ಆಗ, ನೀನು ನನ್ನಪ್ಪಾಂತ ನಂಬ್ತೀನಿ’ ಎಂದೆ. ಆಗ, ದೆವ್ವ ಮತ್ತಷ್ಟು ಸಿಟ್ಟನ್ನ ಮೇಳೈಸುತ್ತಲೇ ಕುಳಿತಲ್ಲೇ ಒದ್ದಾಡಿ ಒದ್ದಾಡಿ ಕೊನೆಗೊಮ್ಮೆ ಮೈ ಮುರಿದು ಹೊರಟೋಯ್ತು.

ದೆವ್ವ ಇಳಿಸಿಕೊಂಡ ಭಾವ ಏನೂ ಕಾಣ್ದೋನಂಗೆ, ‘ಶಿವ, ಯಾವಾಗ್ಬಂದೆ’ ಎಂದ. ‘ಸರಿಯಾಗೇ ಬತ್ತಿಯಿಟ್ಟು ಈಗ್ನೋಡು ಸಭ್ಯಸ್ಥನಂಗೆ ಆಡ್ತಾನೆ ನನ್ಮಗ’ ಅಂತ ಅವನನ್ನ ಒಳಗೊಳಗೇ ಬೈದು ಕೊಂಡೆ. ನಾನಾಗ ಅಲ್ಲಿ ಮಾಡಿದ್ದಿಷ್ಟೆ: ಒಂದು ಹಾಳೆಯಲ್ಲಿ, ‘ನನ್ನ ಹೆಸರು ಸಿದ್ದೇಗೌಡ’ ಅಂತ ದಪ್ಪನಾಗಿ ಬರೆದು ದೆವ್ವದ ಮುಖಕ್ಕೆ ಹಿಡಿದು, ಇದನ್ನ ಓದು ಎಂದೆ. ಅಷ್ಟೇ. ದೆವ್ವ ಹೊರಟೋಯ್ತು. ಯಾಕೆಂದರೆ, ನನ್ನಪ್ಪನಿಗೆ ಓದು ಗೊತ್ತಿತ್ತು. ಭಾವನಿಗೆ ಓದೋಕೆ ಬರೊಲ್ಲಾಂತ ಗೊತ್ತಿತ್ತು. ಅದನ್ನೇ ನಾನಲ್ಲಿ ಅನಿವಾರ್ಯವಾಗಿ ಬಳಸಿಕೊಳ್ಳಬೇಕಾಯ್ತು.

ನನ್ನವ್ವನಿಗೆ ಅವಳ ಜಾತಿ ಗೊತ್ತಿತ್ತು. ಅವಳ ಧರ್ಮ ಯಾವುದೆಂದು ಗೊತ್ತಿರಲಿಲ್ಲ. ಇವತ್ತಿಗೂ ಬಹುತೇಕ ಹಳ್ಳಿಗರಿಗೆ ಅವರ ಧರ್ಮ ಯಾವುದೆಂದು ಗೊತ್ತಿಲ್ಲ. ಆದರೀಗ ಆ ‘ಧರ್ಮ’ ಎನ್ನೋದ್ನ ಇನ್ನಿಲ್ಲದಂತೆ ಮಲಿನ ಮಾಡಿಟ್ಟಿದ್ದಾರೆ.

ನಾನೊಮ್ಮೆ ಅವ್ವನಿಗೆ, ‘ನಾನು, ಹೊಲೇರು, ಮಾದಿಗ್ರು, ಕೊರಮ್ರು, ಸಾಬ್ರು… ಎಲ್ರ ಮನೆಗೂ ಹೋಗಿ ಬಾಡೂಟ ಮಾಡ್ದೆ’ ಎಂದೆ. ಈ ಮಾತನ್ನ ಕೇಳಿ ಮುಟ್ತಟ್ಟಾದವಳಂತೆ, ‘ಹಂಗೇನಾದ್ರು ಮಾಡ್ಬೇಕಂತೇ, ಮಗ ಅನ್ನೋದ್ನೂ ನೋಡ್ದೆ ಗ್ರಾಚಾರ ಬಿಡಿಸ್ಬಿಡ್ತೀನಿ. ಪೊರ್ಕೆ ಸೇವೇ ಮಾಡ್ತೀನಿ… ಇವ್ನ್ ಓದಿ ಬೂದಿ ಮುಕ್ಕ ಎಂಥಾ ಮಾತಾಡ್ತಾನೆ ನೋಡು’ ಅಂದ್ಲು. ‘ನೀನು ಪೊರ್ಕೆ ಸೇವೇನಾದ್ರೂ ಮಾಡು. ಎಕ್ಕಡದ ಸೇವೇನಾದ್ರೂ ಮಾಡು. ಇಲ್ಲಾ, ಹೂ ಚೆಂಡ್ನಲ್ಲಾದ್ರೂ ಹೊಡಿ… ಆ ಎಲ್ಲವೂ ಒಂದೇ ನನಗೆ. ನಾ ಓದ್ತಾ ಇರೋದು ನಿನ್ನಂತೆ ಬದುಕೋಕಲ್ಲ. ‘ಜಾತಿ’ ಸುಳ್ಳು. ಮನುಷ್ರು ಮನುಷ್ರು ಒಂದಾಗ್ಬಾರ್ದೂಂತ ಕಿಡಿಗೇಡಿಗಳು ಮಾಡಿರೋ ಕುತಂತ್ರ ಅದು. ಎಲ್ರ ರಕ್ತನೂ ಕೆಂಪ್ಗೇ ಇರೋದು…’ ಎಂದೆ. ನನ್ನವ್ವನಿಗೆ ಈ ಮಾತು ಸರಿಯಾಗಿ ಅರ್ಥ ಆಗಲಿಲ್ಲ. ಯಾಕೇಂದ್ರೆ, ಅಷ್ಟೂ ಮುಗ್ಧೆ ನನ್ನವ್ವ.

ದಿನ ಕಳೆದಂತೆ ನನ್ನ ಮಾತಿನಲ್ಲಿ ಸತ್ಯ ಇದೆ ಅನಿಸೋಕೆ ಅವ್ವನಿಗೆ ಶುರುವಾಯ್ತು. ಆಗ, ‘ನೀನ್ ಹೇಳೋದು ನಿಜ ಕಣ್ಮಗ’ ಅಂದ್ಲು ಒಂದಿನ. ಮತ್ತೊಂದು ದಿನ ಯಾವುದೋ ಅವ್ಯಕ್ತ ಆತಂಕದಲ್ಲಿರುವಂತೆ ಕಂಡ ನನ್ನವ್ವ, ‘ನೀನು ಜಾತಿ ಬಿಡು ಅಂತಿ. ಸರಿ! ನೀನ್ ಹೇಳ್ದಂಗೇ ಹೊಲೇರು ಮಾದಿಗ್ರನ್ನೆಲ್ಲ ಮನೆಯೊಳಿಕೇ ಕರ್ದು ಊಟ ಹಾಕ್ತೀನಿ ಅಂದ್ಕೊ. ಈ ತಿಮ್ಮಕ್ಕನ್ಗೆ ಯಾಕೋ ತಲೆ ಕೆಟ್ಟೋಗಿದೆ ಕನ್ರೊ ಅಂತಾರೆ ಕನ್ಮಗ ಊರೋರು. ಆಗ, ನಿನ್ನಂಗೆ ನಂಗೇಳಾಕ್ಬರ್ದ. ಏನ್ಮಾಡ್ಲಿ…’ ಎಂದು ಕೇಳಿದ ಅವ್ವನಿಗೆ ನಾನು ಏನು ಹೇಳಬೇಕೋ ತೋಚದಾದೆ.

ಹೊಲೆಯ, ಮಾದಿಗ.. ಎನ್ನದೆ ನನ್ನ ಮನೆಗೆ ಎಲ್ಲಾ ಕೈವಾಡ ಜಾತಿಯ ಜನ ಬಂದು ಎಷ್ಟೋ ಸಾರಿ ಊಟ ಮಾಡಿ ಹೋಗಿದ್ದಾರೆ. ನನ್ನ ಮಾತಿಗೆ ಪ್ರಭಾವಿತಳಾಗಿದ್ದ ಅವ್ವ ಅವರ್ಯಾವ ಜಾತಿ? ಅಂತ ಒಮ್ಮೆಯೂ ಕೇಳಲಿಲ್ಲ. ಅವ್ವಾ, ನೀನ್ ಗ್ರೇಟ್ ಕಣವ್ವ. ನಿನಗೆ ಮಗನಾಗಿ ಹುಟ್ಟಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಈ ನಿನ್ನ ಬುದ್ಧಿ ವಿದ್ಯಾವಂತರೆನಿಸಿಕೊಂಡವರಿಗೆ ಯಾವಾಗ ಬರುತ್ತೆ ಹೇಳವ್ವ?

ಅಂದು ನಮ್ಮ ಮನೆಯ ಹಿತ್ತಲಲ್ಲಿ ಅವ್ವ ಸಣಮಣ ಗುಡುತಿದ್ದಳು. ಯಾಕೇಂತ ನನಗಾಗ ಗೊತ್ತಾಗಲಿಲ್ಲ. ಅವ್ವ ಕಾಯುತಿದ್ದ ಆ ವ್ಯಕ್ತಿ ಬಂದ. ಅವ್ವ ಜೀವ ಹಿಡಿ ಮಾಡಿಕೊಂಡು ಹಿತ್ತಲ ಬೇಲಿಯೊಳಗಿಂದಲೇ, ‘ಮಗಾ?’ ಅಂತ ಕರೆದ್ಲು. ಆ ವ್ಯಕ್ತಿ ‘ಏನಕ್ಕ?’ ಎಂದ. ಅವ್ವ ತಲೆ ತಗ್ಗಿಸಿಕೊಂಡು, ‘ಇನ್ನೂರು ರೂಪಾಯಿ ಬೇಕಾಗಿತ್ತು’ ಅಂದ್ಲು. ಆ ವ್ಯಕ್ತಿ ಏನೊಂದೂ ಮಾತಾಡದೆ ನಮ್ಮ ಹಿತ್ತಲ ಎದುರೇ ಇದ್ದ ತನ್ನ ಮನೆಯೊಳಗೆ ಹೋಗಿ ಬಿಟ್ಟ!

ಅದೆಲ್ಲಿತ್ತೊ ಅವ್ವನ ಆ ದುಃಖ ಉಮ್ಮಳಿಸಿಕೊಂಡು ಬಂದುಬಿಡ್ತು. ಭಾರವಾದ ಹೆಜ್ಜೆಗಳನ್ನಿಡುತ್ತಾ ಮನೆಯೊಳಕ್ಕೆ ಬಂದ ಅವ್ವ ಏನೊಂದೂ ಹೇಳದೆ ಅತ್ತು ಬಿಟ್ಲು. ಆ ದೃಶ್ಯ ಈಗಲೂ ನನ್ನ ಕಣ್ಣಲ್ಲಿ ಹಾಗೇ ಇದೆ. ಅವತ್ತು ಆ ಇನ್ನೂರು ರೂಪಾಯಿಯನ್ನ ಅವ್ವ ನನಗೋಸ್ಕರ ಕೇಳಿದ್ದಾಳೆ. ಸಂಸಾರದ ನೊಗ ಹೊತ್ತ ಮೇಲೆ ಅದೇ ಫಸ್ಟ್ ಟೈಂ ಬೇರೆಯವರ ಹತ್ತಿರ ಹೀಗೆ ಹಣ ಕೇಳಿದ್ದಾಳೆ. ಆ ವ್ಯಕ್ತಿ ಏನೊಂದೂ ಹೇಳದೆ ಹಾಗೆ ಹೋಗಿಬಿಟ್ಟಾಗ, ಅವ್ವನ ದುಃಖ ಕಟ್ಟೆಯೊಡೆದು ಹಾಗೆ ಅತ್ತು ಬಿಟ್ಲು.

ಅವ್ವ ಹಿತ್ತಲಲ್ಲಿ ಇಲ್ಲದ್ದನ್ನ ನೋಡಿಕೊಂಡು, ಇದಾದ ಹತ್ತೇ ನಿಮಿಷದಲ್ಲಿ ಆ ವ್ಯಕ್ತಿ ನೇರ ನಮ್ಮ ಮನೆಗೇ ಬಂದ. ನಾನಾಗ, ‘ಅವ್ವ, ನಂಜುಂಡಣ್ಣ ಬಂದ್ರು’ ಎಂದೆ. ಸೆರಗಿನಿಂದ ಕಣ್ಣೊರೆಸಿಕೊಂಡು ಅವ್ವ ಅಡುಗೆ ಮನೆಯಿಂದ ಹೊರ ಬಂದ್ಲು. ಅವ್ವನ ಹಸ್ತ ಇನ್ನೂರು ರೂಪಾಯಿ ಕೊಟ್ಟು ನಂಜುಂಡಣ್ಣ ಹೊರಟು ಹೋದ.

ಒಮ್ಮೊಮ್ಮೆ ಹೀಗೂ ಆಗುತ್ತೆ ಎನ್ನೋದಕ್ಜೆ ಅದನ್ನಿಲ್ಲಿ ನೆನಪಿಸಿಕೊಂಡೆ. ಅವ್ವ ನನ್ನ ಅಣ್ಣ ತಮ್ಮಂದಿರೊಡಗೂಡಿ, ನನ್ನನ್ನ ಓದಿಸಲು ಅದೆಷ್ಟು ಪಡಿಪಾಟಲು ಬಿದ್ದಿದ್ದಾಳೋ, ನನಗೋಸ್ಕರ ಅದೆಷ್ಟು ತಣ್ಣೀರು ಬಟ್ಟೆಯನ್ನ ತನ್ನ ಹೊಟ್ಟೆಗೆ ಕಟ್ಟಿಕೊಂಡಳೋ ನನಗೆ ಗೊತ್ತಾಗಲೇ ಇಲ್ಲ!

ನನ್ನ ಓದು ಮುಗಿದಿತ್ತು. ‘ಇನ್ಮುಂದೆ ಹಣ ಕೊಡೋಕ್ಕಾಗಲ್ಲ. ನಿನ್ ದಾರಿ ನೀನ್ ನೋಡ್ಕೊ…’ ಅಂತ ಕೊನೆಗೊಮ್ಮೆ ಅವ್ವ ಕಡ್ಡಿ ಮುರಿದಂತೆ ಹೇಳಿ, ಕೋಳಿ ಮರಿಗಳನ್ನ ಅಗಚಾಕುವಂತೆ ಅಗಚಾಕಿಬಿಟ್ಲು! ಅವ್ವ ಆ ಮಾತು ಹೇಳಲೇ ಬೇಕಾಗಿತ್ತು. ಓದು ಮುಗಿದ ಮೇಲೂ ಎಷ್ಟೂಂತ ಹಣ ಕಳಿಸೋಕೆ ಸಾಧ್ಯ? ಅವ್ವ ಮಾಡಿಕೊಂಡಿದ್ದ ಕೈ ಸಾಲ ಇತ್ತು. ಮನೆಯ ಪರಿಸ್ಥಿತಿ ಬಿಗಡಾಯಿಸಿತ್ತು. ಸಂಸಾರ ನೂಕುವುದೇ ಕಷ್ಟವಾಗಿ ಕೂತಿತ್ತು. ಅವ್ವನಿಗೂ ಕಳಿಸುವಷ್ಟೂ ಕಳಿಸಿ ಸಾಕಾಗೋಗಿತ್ತು. ಹಾಗಾಗಿ ಅಂದು ಅನಿವಾರ್ಯವಾಗಿ ಆ ಮಾತನ್ನ ನನಗೆ ಹೇಳಲೇಬೇಕಾಗಿತ್ತು.

ನಾನು ಅದೇ ವೇಳೆಗೆ ಬೆಂಗಳೂರಿನಲ್ಲಿ ಒಂದು ಸಣ್ಣ ಕೆಲಸ ಹುಡುಕಿಕೊಂಡಿದ್ದೆ. ಹಾಗಾಗಿ ಬೆಂಗಳೂರಿಗೆ ಹೋಗಿ ಅಲ್ಲಿ ನೆಲಸಬೇಕಾದ ಅನಿವಾರ್ಯತೆ ನನಗೂ ಇತ್ತು. ನನಗೆ ಸಂಬಳಾಂತ ಬರುವ ತನಕ ಅಂದರೆ ಒಂದು ತಿಂಗಳನ್ನ ನಾನಲ್ಲಿ ನಿಭಾಯಿಸಲೇ ಬೇಕಿತ್ತು. ಆಗ, ನನ್ನ ಬಳಿ ಯಾವುದೇ ಹಣ ಇರಲಿಲ್ಲ. ಅವ್ವನನ್ನ ಬಿಟ್ಟರೆ ನನಗೆ ಬೇರೆ ಗತಿ ಇರಲಿಲ್ಲ. ಅವ್ವ ಆ ಮಾತು ಹೇಳಿಬಿಟ್ಟಿದ್ದಾಳೆ. ಏನು ಮಾಡೋದು?

ಬೇರೆ ಗತಿ ಇಲ್ಲ ಅವ್ವನಲ್ಲಿಗೇ ಹೋಗಿ, ‘…ಇದೊಂದು ಸಾರಿ ಏನಾದ್ರು ಮಾಡಿ ಕೊಟ್ಬಿಡವ್ವ. ಇನ್ಯಾವೊತ್ತೂ ನಿನ್ ಹತ್ರ ಹಣ ಕೇಳೋಲ್ಲ…’ ಅಂತ ಬೇಡಿಕೊಂಡೆ. ತಾಯಿ ಕರುಳಲ್ಲವೇ ಕರಗೋಯ್ತು. ‘ಮಗಾ ಇಲ್ಕೇಳು! ನನ್ಹತ್ರ ಯಾವುದೇ ಹಣ ಇಲ್ಲ. ನಾನೀಗ ಸಾಲ ಮಾಡಿ ಕೊಡೋ ಸ್ಥಿತಿಲೂ ಇಲ್ಲ. ನಿನ್ನಪ್ಪನ ಮನೇವೂ ಅಂತ ಒಂದು ಜೊತೆ ಕಾಲ್ಮುರಿ (ಕಾಲು ಗಡಗ, ಕಾಲಂದಿಗೆ) ಅವೆ. ಅವನ್ನ ನಿನ್ನಪ್ಪನ ಮನೆಯ ನೆನಪಾಗಿ ಇಟ್ಕೊಂಡಿದ್ದೆ. ನನಗೆ ಅವನ್ನ ಕಳ್ಕೊಳ್ಳೋಕೆ ಇಷ್ಟವಿಲ್ಲ. ನೋವಾಯ್ತದೆ ಮಗ! ನೀನು ಎಂಥದ್ದೋ ಒಂದ್ ಕೆಲ್ಸಾಂತ ಹುಡಿಕೊಂಡಿದ್ದಿ. ಆಯ್ತು ಬದುಕೋಗು ಮಗ…’ ಅಂತ. ಆ ಪಿತ್ರಾರ್ಜಿತ ಕಾಲುಗಡಗಗಳನ್ನ ಭಾರವಾದ ಮನಸ್ಸಿನಿಂದ ನನ್ನ ಕೈಗಿತ್ತು ಅದೆಷ್ಟು ಕೊರಗಿದಳೋ.. ಕಣ್ಣೀರಾದಳೋ..ಅವಳಿಗೇ ಗೊತ್ತು.

ನನಗೆ ಬೇರೆ ದಾರಿ ಇಲ್ಲದೆ ಮನಸಿಲ್ಲದ ಮನಸಿನಿಂದ ಆ ಕಾಲಂದಿಗೆಗಳಿಗೆ ಕೈಯೊಡ್ಡಲೇ ಬೇಕಾಯ್ತು. ಅವು ಹಿಂದಿನ ಕಾಲದವು. ತುಂಬಾ ದಪ್ಪನಾಗಿದ್ದೊ. ಹತ್ತಿರತ್ತಿರ ಅರ್ಧ ಕೆ.ಜಿ. ಇದ್ದೊ. ಅವನ್ನ ಮಾರುವಾಗ ನನ್ನ ಕಣ್ಣಂಚಿನಲ್ಲಿ ನೀರು ಬಂತು. ವಿಧಿಯಿಲ್ಲ ಸಹಿಸಿಕೊಂಡೆ. ನಂತರ ಅವ್ವನಿಂದ ಮತ್ತೆಂದೂ ಹಣ ಕೇಳಲಿಲ್ಲ.

ತಾಯಿ ಮಕ್ಕಳಿಗೋಸ್ಕರ ಯಾವ ತ್ಯಾಗಕ್ಕೂ ಸಿದ್ಧ ಅನ್ನೋದಕ್ಕೆ ಇದೇ ಒಂದು ಸಾಕ್ಷಿ. ‘ತಾಯಿ’ ಎಂದ್ರೆ ಇದಕ್ಕಿಂತ ಮತ್ತೇನು? ನಿನ್ನ ನೆನಪಿಗೆಂದು ಇದ್ದ ಆ ಕಾಲುಗಡಗಗಳು, ನನ್ನ ಬದಕಿಗೆ ಅನಿವಾರ್ಯವಾಗಿ ಬಿಟ್ಟೋ.. ಅವ್ವಾ , ನನ್ನನ್ನ ಕ್ಷಮಿಸಿ ಬಿಡವ್ವ ಪ್ಲೀಸ್.

ನಾನು ಓದು ಮುಗಿಸಿ ಚಳವಳಿ ಅದು ಇದೂಂತ ಅಡ್ಡಾಡುತ್ತಲೇ ಸಣ್ಣ ಪುಟ್ಟ ಕೆಲಸ ಮಾಡುತಿದ್ದಾಗೊಮ್ಮೆ , ಅವ್ವನಲ್ಲಿ ನನ್ನ ಮದುವೆ ಪ್ರಸ್ತಾಪ ಇಟ್ಟೆ. ಅಷ್ಟೊತ್ತಿಗೆ ನಾನೇನು? ನನ್ನ ಚಾಲು ಎಂಥದ್ದು? ಈ ಎಲ್ಲದರ ಅರಿವಿದ್ದ ಅವ್ವ ತಾನೇ ಮುಂದಾಗಿ, ‘ಮಗ ಒಂದ್ ಮಾತ್ ಹೇಳ್ತೀನಿ. ಬೇಸರ ಮಾಡ್ಕೋಬೇಡ. ನೀನು ನಮ್ ಜಾತಿಯೋಳ್ನೆ ಒಬ್ಬಳ್ನ ಮದುವೆಯಾಗ್ಬಿಡು. ಬೇರೆ ಜಾತಿಯೋಳ್ನಾದ್ರೆ ಊರೋರು ಆಡ್ಕೋತ್ತಾರೆ..’ ಅಂದ್ಲು.

ಅಂದ್ರೆ ನಾನು ಬೇರೆ ಜಾತೀಲಿ ಮದುವೆಯಾದ್ರೆ ಅವ್ವನ ವಿರೋಧವಿಲ್ಲ. ಊರೋರು ಆಡ್ಕೋತ್ತಾರೆ ಎನ್ನುವ ಆತಂಕ ಅಷ್ಟೇ ಅವಳದು. ಆದರೂ ಅವ್ವನ ಮಾತನ್ನ ನಾನುಸಮ್ಮತಿಸಲಿಲ್ಲ. ಹಾಗಂತ ವಿರೋಧಿಸಲೂ ಇಲ್ಲ. ‘ಅವ್ವ, ನಾನು ಬೇರೆ ಜಾತಿಲೇ ಆಯ್ತೀನೋ ಇಲ್ಲವೋ ಗೊತ್ತಿಲ್ಲ. ನಾನಿನ್ನೂ ಯಾರನ್ನೂ ಆರಿಸಿಕೊಂಡಿಲ್ಲ. ಯಾರೇಯಾದ್ರು ಮನುಷ್ಯ ಜಾತಿ ಅಂದ್ಕೊಂಡು ಮದುವೆ ಆಗ್ತೀನಿ ಅಷ್ಟೇ’ ಎಂದೆ.

ನನ್ನ ಮಾತು ಅವ್ವನಿಗೆ ಸಮ್ಮತ ಅನಿಸಲಿಲ್ಲ! ‘ನಮ್ಮ ಜಾತಿಲೇ ಆದ್ರೆ ಊರೋರಿಂದ ಆಡಿಸಿಕೊಳ್ಳೋದು ತಪ್ಪುತ್ತೆ’ ಅನ್ನೋ ಕಳವಳವೇ ಅವ್ವನ ಮನೋಧರ್ಮವಾಗಿತ್ತು. ಕೊನೆಗೂ ಒಂದು ದಿನ ಮಗನ ಸಂತೋಷವೇ ನನ್ನ ಸಂತೋಷ ಎಂದು ಭಾವಿಸಿ, ‘ನೀನು ಯಾವ ಜಾತಿಲಾದ್ರೂ ಆಗು. ನಿನ್ನಿಷ್ಟ ಹೇಗಿರುತ್ತೋ ಹಾಗೇ ಮದ್ವೆಯಾಗು. ಆದ್ರೆ ತಾಳಿ ಕಟ್ಬಿಡಪ್ಪ’ ಎಂದು ನನ್ನ ಕೆನ್ನೆ ಮಟ್ಟಿದ ಕೈಗೆ ಮುತ್ತಿಕ್ಕಿ, ಸ್ನಾನದ ಬಚ್ಚಲಿನಲ್ಲಿ ನನ್ನ ಬೆನ್ನು ಉಜ್ಜುತ್ತಾ ವಿನಂತಿಸಿದಾಗ, ನನಗೆ ‘ಇಲ್ಲ’ ಎನ್ನಲಾಗಲೇ ಇಲ್ಲ.

‘ಮದುವೆಗೆ ತಾಳಿ ಮುಖ್ಯ ಅಲ್ಲ. ಮನಸ್ಸು ಮುಖ್ಯ’ ಎನ್ನುತಿದ್ದ ನನ್ನ ಮಾತಿಂದ ಪ್ರಭಾವಿತಳಾಗಿದ್ದ ಅವ್ವನಿಗೆ, ಮಗ ತಾಳಿ ಸಹ ಕಟ್ಟದೇ ಮದುವೆಯಾಗಿ ಬಿಡುತ್ತಾನೇನೋ ಅನ್ನುವ ಆತಂಕ ಮನೆ ಮಾಡಿತ್ತು. ಹಾಗಾಗಿ ಅಂದು ನನ್ನಲ್ಲಿ ಹಾಗೆ ವಿನಂತಿಸಿ ಕೊಂಡ್ಲು ಅನಿಸುತ್ತೆ.

ತಾಯಿ ಮಕ್ಕಳಿಗಾಗಿ ಜಾತಿಯನ್ನೂ ಮೀರಿ ಎಲ್ಲ ತ್ಯಾಗಕ್ಕೂ ಸಿದ್ಧಳಾಗಿ ಬಿಡುತ್ತಾಳೆ ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಸಾಕ್ಷ್ಯ ಬೇಕಾಗಿಲ್ಲ. ಅವ್ವಾ, ನೀನು ಧರೆಗೆ ದೊಡ್ಡವಳು ಕಣವ್ವ. ನಿನಗೆ ಸಾಷ್ಟಾಂಗ ಕಣವ್ವ.

ಅವ್ವನಿಗೆ ಮೊದಲೇ ತಿಳಿಸಿದ್ದಂತೆಯೇ: ಗುಳಿಕ ಕಾಲ-ಯಮಗಂಡ ಕಾಲ; ಜಾತಕ-ಕುಂಡಲಿ-ನಕ್ಷತ್ರ; ಪೌರೋಹಿತ್ಯ-ಶಾಸ್ತ್ರ-ಮಂತ್ರ; ಇಂತಹ ಯಾವುದೇ ಕುಟಿಲತೆಗಳಿಲ್ಲದೆ; ಓಲಗದ ಆಡಂಬರವಿಲ್ಲದೆ; ಕೆಟ್ಟದ್ದು ಮಾಡಿದರೆ ಕೆಟ್ಟ ಕಾಲ – ಒಳ್ಳೆಯದು ಮಾಡಿದರೆ ಒಳ್ಳೆ ಕಾಲ; ಇರೋದು ಇವರಡೇ ಕಾಲ. ಉಳಿದೆಲ್ಲ ಕಾಲಗಳೂ ಕುತಂತ್ರಿಗಳ ಮೋಸದ ಜಾಲ ಅಷ್ಟೇ ಎಂದು ಬಗೆದು, ಬೇಕೆಂತಲೇ ಜೋಯಿಸರು ಕೆಟ್ಟ ಕಾಲ ಎಂದು ಹೇಳುವ ರಾಹು ಕಾಲದಲ್ಲೇ ಅವ್ವನ ಇಚ್ಛೆಯಂತೆ ತಾಳಿ ಕಟ್ಟಿ ಮದುವೆಯಾದೆ.

‘ಮಗಾ ಚೆನ್ನಾಗಿರು’ ಎಂದು ಯಾವುದೇ ತಾಯಿ ತನ್ನ ಮಗನನ್ನ ನಿಷ್ಕಲ್ಮಶ ಹೃದಯದಿಂದ ಹಾರೈಸ್ತಾಳಲ್ಲ ಅದಕ್ಕಿಂತ ಮಿಗಿಲಾದ ಮಂತ್ರವೇ ಇಲ್ಲ ಎಂದು ಭಾವಿಸಿ ಇಬ್ಬರೂ ಅವನ್ನೆಲ್ಲ ಪರಸ್ಪರ ಒಪ್ಪಿ ಹಾರ ಬದಲಾಯಿಸಿಕೊಳ್ಳುವ ಮೂಲಕ ನಾವಂದು ದಾಂಪತ್ಯಕ್ಕೆ ಕಾಲಿರಿಸಿದೆವು.

ನಾವು ಮದುವೆಯಾಗಿ 32 ವರ್ಷ ಆಗಿದೆ. ಯಾವ ಜೋಯಿಸನ ಕಾಲವೂ ನಮಗೆ ಕೇಡು ಮಾಡಿಲ್ಲ. ನಮಗೆ ಪ್ರೀತಿಯೊಂದೇ ಆಸರೆ. ನಾವು ಹೆಮ್ಮೆ ಪಡುವಂತಹ ಇಬ್ಬರು ಮಕ್ಕಳಿದ್ದಾರೆ. ಎಲ್ಲರೂ ಖುಷಿಯಾಗಿದ್ದೇವೆ. ಇದು ನನ್ನವ್ವ ನನಗೆ ಕರುಣಿಸಿದ ಸಂತೋಷವಲ್ಲದೆ ಮತ್ತೇನು? Avva is always great.

ಮದುವೆಯಾದ ಮೇಲೂ ನನ್ನ ಗೆಳೆಯರೊಟ್ಟಿಗೆ ವಿಶೇಷವಾದ ಬಾಡೂಟಕ್ಕೆ ಅವ್ವ ಇರುವವರೆಗೂ ನನ್ನೂರಿಗೆ ಹೋಗ್ತಾಯಿದ್ದೆ. ಅವರಲ್ಲಿಬ್ಬರು ಉಪನ್ಯಾಸಕರು ನನ್ನವ್ವನಿಗೆ ಚೆನ್ನಾಗೇ ಪರಿಚಿತರಾಗಿಬಿಟ್ಟಿದ್ರು. ನನ್ನವ್ವ ಅವರನ್ನ ‘ಸಾ’ ಅಂತಿದ್ಲು. ಅವರ ಮಾತಿಗೆ ‘ಹು ಸಾ’ ಅಂತ ಹೂಗುಡುತಿದ್ಲು.

‘ಸಾ, ನಮ್ ಶಿವ ಹೇಳೋದೆಲ್ಲಾ ಸರಿ ಸಾ. ಆದ್ರೆ ಅಷ್ಟೆಲ್ಲಾ ಓದ್ಬಿಟ್ಟು ಅದೇನೋ ಮಾಡ್ತಾವ್ನೆ ನಿಮ್ಮಂಗೆ ಒಂದ್ ಕೆಲ್ಸಾಂತ ಸೇರ್ಕೊಂಡಿದ್ರೆ ಅವ್ನು ಓದಿದ್ಕೂ ನಾನು ಓದಿಸಿದ್ಕೂ ಸಾರ್ಥ್ಕ ಆಗೋದು ಸಾ. ನೀವೂ ವಸಿ ಹೇಳಿ ಸಾ..’ ಎಂದೇಳುತಿದ್ದ ನನ್ನವ್ವನ ಮಾತಲ್ಲಿ ನನ್ನ ಮಗ ಕೆಲ್ಸಕ್ಕೆ ಸೇರ್ಲಿಲ್ಲಾ ಅನ್ನೋ ಕೊರಗಿತ್ತು.

ಮದುವೆಯಾದ ಮೇಲೂ ಬದುಕು ಕಟ್ಟಿಕೊಳ್ಳಲು ನಾನು ಸಾಕಷ್ಟೇ ಹೆಣಗಾಡಿದೆ. ಒಂದು ಹಂತದಲ್ಲಿ ಊಟಕ್ಕೆ, ಮಕ್ಕಳನ್ನ ಓದಿಸೋಕೆ ನಮಗೆ ತತ್ವಾರ ಬಂದೋಯ್ತು. ನನ್ನ ಮಕ್ಕಳನ್ನ ಓದಿಸಲು ನನಗೆ ಆಗದೇ ಹೋದಾಗ, ಎಷ್ಟೋ ಸಾರಿ ಬಾತ್ ರೂಂ ಚಿಲಕ ಹಾಕ್ಕೊಂಡು ಯಾರಿಗೂ ಕಾಣದಂತೆ ಅತ್ತಿದ್ದೇನೆ. ಆ ದಿನಗಳಲ್ಲಿ ಒಮ್ಮೆ ಒಬ್ಬನೇ ಕುಳಿತುಕೊಂಡು ಯೋಚಿಸಿದಾಗ ಅವ್ವ ನೆನಪಾದಳು. ನನ್ನವ್ವ ನನ್ನನ್ನ ಓದಿಸಿದಂತೆ ನಾನು ನನ್ನ ಮಕ್ಕಳನ್ನು ಓದಿಸಲಾಗುತ್ತಿಲ್ಲದಿರುವುದಕ್ಕೆ ನನಗೆ ಅಂದು ನಾಚಿಕೆಯಾಯಿತು.

ಅಂದು ಆ ದಿನ ಚಳವಳಿ ಅದು ಇದು ಎಲ್ಲವನ್ನೂ ಸಂಪೂರ್ಣ ತೊರೆದು ಬಿಟ್ಟೆ. ನಾನು ಹಣ ಮಾಡಲೇ ಬೇಕು. ಬದುಕು ಕಟ್ಟಿಕೊಳ್ಳಲೇ ಬೇಕು. ಯಾವ ಕಾರಣಕ್ಕೂ ನಾನಿದರಲ್ಲಿ ಸೋಲಬಾರದು ಎಂದು ಧೃಡವಾಗಿ ನಿಶ್ಚಯಿಸಿ ಒಂದು ದಾರಿ ಹಿಡಿದೆ. ಆ ದಾರೀಲೀ ಗಂಡ – ಹೆಂಡತಿ ಈರ್ವರೂ ಸತತವಾಗಿ ಐದು ವರ್ಷ ಅತ್ತ ಇತ್ತ ತಿರುಗಿ ನೋಡದೆ, ನಮ್ಮನ್ನ ನಾವು ಇನ್ನಿಲ್ಲದಂತೆ ಅರ್ಪಿಸಿ ಕೊಂಡೆವು. ಅದು ನಮಗೆ ಕೈ ಕೊಡಲಿಲ್ಲ. ಆ ಐದು ವರ್ಷದಲ್ಲಿ ನಾವಂದುಕೊಂಡಂತಹ ಬದುಕು ನಮಗೆ ಸಿಕ್ತು.

ಆ ಬದುಕು ಸಿಕ್ಕ ಮೇಲೆ ನಾವು ಮಕ್ಕಳಿಗಾಗಿ ಆಸ್ತಿ ಮಾಡಲಿಲ್ಲ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದೊ. ಆ ಸಂತೃಪ್ತ ಭಾವ ಇಂದು ನಮ್ಮಿಬ್ಬರಲ್ಲೂ ಇದೆ. ಆದರೆ ಇದನ್ನೆಲ್ಲ ಕಣ್ತುಂಬಿಕೊಳ್ಳೋಕೆ ಇವತ್ತು ಆ ನನ್ನವ್ವ ಬದುಕಿರಬೇಕಾಗಿತ್ತು. ಏನು ಮಾಡ್ಲಿ? ಅದು ನಮ್ಮ ಕೈಲಿಲ್ಲ. ಬಹುಶಃ ಬದುಕೇ ಹೀಗೆ. ನಾವಂದು ಕೊಂಡಂತೆ ಎಲ್ಲವೂ ಇರೋದಿಲ್ಲ.

ನನ್ನ ಬಾಲ್ಯದಲ್ಲಿ ಊಟಕ್ಕೆ ತತ್ವಾರ ಇತ್ತು. ಕೇಳಿದಷ್ಟು ಅನ್ನ ಸಿಕ್ತಾ ಇರಲಿಲ್ಲ. ಅದೂ ಅಪರೂಪ. ಗೊಡ್ಗಾರ, ಹುಳ್ಳಿಕಾಳ್ ಉಪ್ಪೆಸ್ರು, ರಾಗಿ ಮುದ್ದೆ – ಮೂರೊತ್ತೂ ಇದೇ ನನಗಾಗ ಊಟ. ಯಾವತ್ತೋ ಒಂದಿನ ರೊಟ್ಟಿನೋ, ಉಪ್ಪಿಟ್ಟೋ, ಚಿತ್ರಾನ್ನಾನೋ ಮಾಡಿದ್ರೆ ಅದೇ ನನಗೆ ಹಬ್ಬ.

ನಾನು ಮಿಡ್ಲ್ ಸ್ಕೂಲಿಗೆ ಹೋಗುವಾಗ ನನ್ನ ಗೆಳೆಯನೊಬ್ಬ ಬೇಕರಿಗೋಗಿ 15 ಪೈಸೆ ಕೊಟ್ಟು ಒಂದು ಕೇಕ್ ತಗೊಂಡು ಆಗಾಗ ತಿನ್ನುತಿದ್ದ. ನಾನಾಗ, ‘ಲೋ.. ನಂಗೂ ವಸಿ ಕೊಡ್ಲಾ’ ಅಂತ ಗೋಗರಿಯುತ್ತಾ ಅವನ ಮುಂದೆ ನಿಲ್ಲುತಿದ್ದೆ. ಅವನು ಅಪರೂಪಕ್ಕೆ ಕಡ್ಲೆಕಾಯಿ ಕೊಟ್ರೆ ಹಸಿವು ಇಂಗಿಸೋಕೆ ನಾನು ಸಿಪ್ಪೆ ಸಮೇತ ತಿನ್ನುತಿದ್ದೆ.

ಹೆಣದ ಮಾಳದಲ್ಲಿ ಸತ್ತವರ ತಿಥಿ ಮಾಡುವಾಗ ಎಡೆ ಇಡುವುದು ನಮ್ಮಲ್ಲಿ ವಾಡಿಕೆ. ತುಪ್ಪದ ಕಜ್ಜಾಯ, ಸಿಕ್ಕಿನುಂಡೆ, ಕರ್ಜಿಕಾಯಿ, ವಡೆ, ನಿಪ್ಪಿಟ್ಟು, ಕೋಡುಬಳೆ, ಚಕ್ಕುಲಿ ಇಂಥಾ ಕರಿದ ತಿಂಡಿಗಳಲ್ಲಿ ಚೆನ್ನಾಗಿರುವುದನ್ನ ಆರಿಸಿ ಎಡೆಗೆ ಸಾಕಷ್ಟೇ ಇಡುತ್ತಾರೆ. ಜೊತೆಗೆ ಆರಿಸಿ ತಂದ ರಸಬಾಳೆ, ಸೇಬು, ಸೀಬೆ ಮುಂತಾದ ಹಣ್ಣುಗಳೊಡನೆ ಎಳನೀರು, ಪೂಜೆ ಮಾಡಿದ ತೆಂಗಿನಕಾಯಿ ಹೀಗೆ ಎಲ್ಲವನ್ನ ಎಡೆ ಇಡುತ್ತಾರೆ. ಸತ್ತೋದ ಆ ಜೀವ ತನ್ನ ಜೀವಮಾನದಲ್ಲಿ ಅಂಥಾ ತಿಂಡಿ-ತಿನಿಸುಗಳನ್ನ ತಂದಿತ್ತೋ ಇಲ್ಲವೋ ಗೊತ್ತಿಲ್ಲ!

ಎಡೆ ಇಟ್ಟ ಶಾಸ್ತ್ರ ಮುಗಿದ ಮೇಲೆ, ‘ಹದ್ದು , ಕಾಗೆ ಬೀಳ್ಲಿ ನಡಿರಿ ನಡಿರಿ’ ಅಂತೇಳುತ್ತಾ, ಸೇರಿದ್ದ ಜನರನ್ನೆಲ್ಲಾ ಹೊರಡಿಸಿಕೊಂಡು ಮನೆ ಕಡೆಗೆ ಹೋಗುತ್ತಾರೆ. ಮರದ ಮೇಲೆ ಕುಳಿತ ಹದ್ದುಗಳು ಹಾಗೂ ‘ಕಾ ಕಾ’ ಎಂದು ತನ್ನ ಬಳಗ ಕರೆಯುವ ಕಾಗೆಗಳು ಜನಹೋಗುವುದನ್ನೇ ಕಾಯುತಿದ್ದು ಅವರು ಅತ್ತ ಹೋದ ಕೂಡಲೇ ಇವು ಎಡೆಗೆ ಬೀಳುತಿದ್ದವು. ಇದೇ ರೀತಿಯಲ್ಲಿ ಬಕ ಪಕ್ಷಿಗಳಂತೆ ಅದೇ ಎಡೆಗೆ ಬೀಳಲು ನನ್ನನ್ನೂ ಸೇರಿಸ್ಕೊಂಡು ಮೂವರು ಕಾಯುತಿದ್ದೆವು.

ನಾನು ಮತ್ತು ನನ್ನ ಗೆಳೆಯರಿಬ್ಬರು ಆ ಸಂದರ್ಭವನ್ನೇ ಹೊಂಚುಹಾಕಿ ಕಾಯುತಿದ್ದೆವು. ಜನ ಹೋದ ಮೇಲೆ, ಎಲ್ಲರೂ ಹೋದರೆನ್ನುವುದನ್ನ ಕನ್ಫರ್ಮ್ ಮಾಡಿಕೊಂಡ ಮೇಲೆ, ನಾವು ಮೂವರೂ ಎಡಗೆ ಬೀಳುತಿದ್ದೆವು. ಟವೆಲ್ಲೊಂದಕ್ಕೆ ತಿಂಡಿಗಳನ್ನ ತುಂಬಿಕೊಂಡು, ಕೈಯಲ್ಲೂ ಸ್ವಲ್ಪ ಹಿಡಕೊಂಡು, ಹದ್ದು-ಕಾಗೆಗೂ ಸ್ವಲ್ಪ ಉಳಿಸಿ, ದೂರದ ಮರೆಗೆ ಹೋಗಿ ಬರಗೆಟ್ಟವರಂತೆ ತಿಂದು ಹಬ್ಬ ಆಚರಿಸುತಿದ್ದೆವು.

ಆ ದಿನಗಳಲ್ಲಿ ನಮ್ಮ ಹಸಿವು ಹಾಗಿತ್ತು!

ಸಂಜೆ ಸ್ಕೂಲು ಮುಗಿಯುವಷ್ಟರಲ್ಲಿ ಹಸಿವು ಶುರುವಾಗೋದು. 3 ಮೈಲಿ ನಡೆದು ಬರುವಷ್ಟರಲ್ಲಿ ಹೊಟ್ಟೆ ಲಾವ್ ಲಾವ್ ಅನ್ನೋದು. ಆಗ, ಅವ್ವ ಬೆಳಿಗ್ಗೆ ಮಾಡಿಟ್ಟಿದ್ದ ಮುದ್ದೆಯನ್ನೇ ಖಾರ ಹಾಕಿ ಒಂದು ಮಿದಿಕೆ ಮಿದ್ದಿ ಕೊಡೋಳು. ಒಮ್ಮೊಮ್ಮೆ ಅದೂ ಇರುತ್ತಿರಲಿಲ್ಲ. ಆಗ ಹಿಟ್ಟಿನ ಮಡಕೆಯಲ್ಲಿ ಸೀಕು ಎತ್ತಿ ಕೊಡೋಳು. ಅದನ್ನೇ ತಿಂದು ನೀರು ಕುಡಿಯುತಿದ್ದೆ.

ಹಸಿವು ಅನ್ನೋದು ಈ ಪ್ರಪಂಚದಲ್ಲಿ ಯಾರಿಗೂ ಇರಬಾರದು ಕಂಡ್ರಿ. ಇದರಂತಹ ದರಿದ್ರ ಮತ್ತೊಂದಿಲ್ಲ. ಓಡಾಡೋಕೆ ಇವತ್ತು ನನ್ನ ಬಳಿ ಕಾರಿದೆ. ಅವತ್ತು ತಿನ್ನೋಕೆ ಅನ್ನ ಇರಲಿಲ್ಲ. ಇವತ್ತು ಮೃಷ್ಟಾನ್ನ ತಿನ್ನುವ ಯೋಗ್ಯತೆ ಇದೆ. ಆದರೆ ಬಯಸಿದ್ದನ್ನೆಲ್ಲ ತಿನ್ನೋಕೆ ಆಗೊಲ್ಲ. ಆರೋಗ್ಯ ಅಡ್ಡ ಬರುತ್ತೆ. ಜೀವನಾಂದ್ರೆ ಇಷ್ಟೇ ಕಂಡ್ರಿ.

ನನ್ನವ್ವ ತನ್ನ ಬಹುತೇಕ ಜೀವನವನ್ನ ಆರ್ಕ, ಹುಳ್ಳಿಕಾಳು ಇಂಥವನ್ನೇ ತಿಂದು ಜೀವಿಸಿಬಿಟ್ಲು. ಕೊನೆಗಾಲದಲ್ಲಿ ಒಂದಷ್ಟು ಅಚ್ಚುಕಟ್ಟಾಗಿ ತಿನ್ನೋಕೆ ಬಡ್ತಿ ಪಡೆದಿದ್ಲು. ಕೊನೆಯ ದಿನಗಳನ್ನೆಲ್ಲ ನನ್ನವ್ವ ಸುಖವಾಗಿ ಕಳೆಯ ಬೇಕೆನ್ನುವುದು ನನ್ನ ಕನಸಾಗಿತ್ತು. ಆದರೆ ಒಂದು ದಿನ ಕೋಳಿ ಕೌಚಾಕಲು ಹೋಗಿ, ಜಾರಿ ಬಿದ್ದು ಕಾಲು ಮುರ್ಕೋಬಿಟ್ಲು. ಆಪರೇಷನ್ ಮಾಡಿಸಿದ್ರೂ ಅದು ಯಥಾಸ್ಥಿತಿಗೆ ಬರಲಿಲ್ಲ. ಕೊನೆಗಾಲದಲ್ಲಿ ದೊಣ್ಣೆ ಊರಿಕೊಂಡೇ ನಡೆಯಬೇಕಾದ ಸ್ಥಿತಿ ಅವ್ವನದಾಯಿತು.

ಇಷ್ಟಾದರೂ ಅವ್ವ ಇರುವಷ್ಟೂ ದಿನ ಅವಳನ್ನ ಚೆನ್ನಾಗಿ ನೋಡಿಕೊಂಡಂತಹ ಸಂತೃಪ್ತ ಭಾವ ನಮಗಿದೆ. ಆದರೆ ಅವ್ವ ಸಾಯುವುದಕ್ಕೆ ಒಂದೆರಡು ತಿಂಗಳ ಮುಂಚೆ ಒಂದು ಕಾರು ಕೊಂಡುಕೊಂಡೆ. ಅದನ್ನ ನೋಡಿ ಅವ್ವ ತುಂಬಾ ಖುಷಿ ಪಟ್ಲು. ಓದಿಸಿದ್ದು ಸಾರ್ಥ್ಕ ಅನ್ನೋ ಸಂತೃಪ್ತ ಭಾವವನ್ನ ನಾನವತ್ತು ಅವ್ವನ ಮುಖದಲ್ಲಿ ಕಂಡೆ. ಆಗ, ‘ಅವ್ವಾ, ಇದು ನೀನಿತ್ತ ಭಿಕ್ಷೆ. ಅವತ್ತು ಆ ಜೋಯಿಸನ ಮಾತು ಕೇಳಿ ನನಗೆ ನೀನು ಎದೆ ಹಾಲು ಕುಡಿಸದೇ ಹೋಗಿದ್ರೆ, ಈ ಕಾರು ಇನ್ನೊಂದು ಎಲ್ಲವೂ ಎಲ್ಲವ್ವ ಇರುತಿತ್ತು? ಇವತ್ತು ನಾನೆಷ್ಟೇ ಬದುಕುತಿದ್ರು ಅದು ನೀ ಕೊಟ್ಟ ಭಿಕ್ಷೆ ಕಣವ್ವ’ ಅಂತ ಅವ್ವನಿಗೆ ಮನಪೂರ್ವಕ ವಂದಿಸಿದೆ.

ಅವ್ವನನ್ನ ಕೂರಿಸಿಕೊಂಡು ಒಂದು ಲಾಂಗ್ ಟ್ರಿಪ್ ಹೋಗಾಣಾಂತ ನಾನು ನನ್ನಾಕೆ ಬಹಳಷ್ಟು ಮಾತಾಡ್ಕೊಂಡಿದ್ದೆವು. ನಾವಾಗ ಒಂದು ಬಿಸಿನೆಸ್ನಲ್ಲಿ ತುಂಬಾ ತೊಡಗಿಸಿಕೊಂಡು ಬಿಟ್ಟಿದ್ದೆವು. ಹಾಗಾಗಿ ಅವ್ವನನ್ನ ಮುಂದಿನ ತಿಂಗಳು ಮಿಸ್ ಮಾಡದೇ ಕರ್ಕೊಂಡೋಗೋದೂಂತ ಡೇಟ್ ಫಿಕ್ಸ್ ಮಾಡಿಕೊಂಡಿದ್ದೆವು. ಫಿಕ್ಸ್ ಆದ ಡೇಟಿಗೆ ಇನ್ನೂ ಎಂಟು ದಿನವಿತ್ತು. ಅಷ್ಟರಲ್ಲಿ ಕಣ್ಣಿರದ ಜವರಾಯ ನನ್ನವ್ವನ ಮೇಲೆ ರಾವುಗಣ್ಣನ್ನ ಬಿಟ್ಟೇ ಬಿಟ್ಟ. ಅವ್ವನನ್ನ ಕರ್ಕೊಂಡು ಹೊರಟೇ ಬಿಟ್ಟ.

ಈ ಕೊನೆ ವಾಕ್ಯ ಬರೆಯುವಾಗ ನಾನು ಕಣ್ಣೀರಾಗುತಿದ್ದೇನೆ. ಅವ್ವ, ಸಾಧ್ಯವಾದರೆ ನನ್ನನ್ನ ಕ್ಷಮಿಸಿ ಬಿಡವ್ವ. ನಿನ್ನನ್ನ ಕಾರಿನಲ್ಲಿ ಕೂರಿಸಿಕೊಂಡು ಒಂದು ಲಾಂಗ್ ಟ್ರಿಪ್ ಹೋಗಲಾಗಲಿಲ್ಲ ಅನ್ನುವ ಕೊರಗು ನನ್ನನ್ನ ಕಾಡುತ್ತಲೇ ಇದೆ. ಕೊನೆತನಕ ಅದರಿಂದ ನನಗೆ ಮುಕ್ತಿ ಇಲ್ಲ. ನಾನೀ ಕೊರಗನ್ನ ಅನುಭವಿಸಲೇ ಬೇಕು. ಈಗ ಕಾಲ ಮಿಂಚೋಗಿದೆ ಎಷ್ಟು ಯೋಚಿದರೂ ಅಷ್ಟೇ.

ಆದರೂ ನಾನು ತಪ್ಪು ಮಾಡಿಬಿಟ್ಟೆ ಕಣವ್ವ. ಅದಕ್ಕೆ ಕ್ಷಮೆ ಇಲ್ಲ. ನಾನು ಕಾರು ಕೊಂಡಾಗಲೇ ನಿನ್ನನ್ನ ಕೂರಿಸಿಕೊಂಡು ಸುಮಾರು ಸುತ್ತಾಡಿ ಬರಬೇಕಾಗಿತ್ತು. ಆಗಲಿಲ್ಲ. ಆ ಋಣ ಹೇಗವ್ವಾ ತಿರಿಸಲಿ?

ಆ ದಿನ ಜೋಯಿಸನ ಮಾತನ್ನ ಲೆಕ್ಕಿಸದೆ ನನ್ನನ್ನ ಉಳಿಸಿಕೊಂಡೆ. ಅಷ್ಟೇ ಅಲ್ಲ ನನ್ನನ್ನ ಈ ಮಟ್ಟಕ್ಕೆ ಬೆಳೆಸಿದೆ ಕೂಡ. ಮಗನ ಸಂತೋಷಕ್ಕೆ ಜಾತಿ ಬಿಡಲು ತಯಾರಾದೆ. ‘ಅಪ್ಪ ಇಲ್ಲ’ ಎನ್ನುವ ನೋವಿಗೆ ನೀನು ನಮಗೆಲ್ಲ ಮುಲಾಮು ಹಚ್ಚಿದೆ. ನೂರರ ತನಕ ಎಣಿಸಲು ಬರದ ನೀನು ಸಂಸಾರದ ನೊಗಕ್ಕೆ ಹೆಗಲು ಕೊಟ್ಟೆ. ಅದನ್ನ ನೀನು ಹೇಗವ್ವ ನಿಭಾಯಿಸಿದೆ? ಇಷ್ಟೆಲ್ಲಾ ಇದ್ದು ಕೊಂಡು ಈಗಲೂ ಒಮ್ಮೊಮ್ಮೆ ಸಂಸಾರ ನೀಗಿಸೋಕೆ ನಾವೇ ಒದ್ದಾಡಿ ಬಿಡುತ್ತೇವೆ. ಅಂತಾದ್ರಲ್ಲಿ ನೀನು ಹೇಗವ್ವ ನಿಭಾಯಿಸಿದೆ ಅಷ್ಟನ್ನೆಲ್ಲಾ? ಯಾವುದೇ ಚಾಲೋಕಿಲ್ಲದ ನೀನು ನಿನಗಿದ್ದಂಥ ಮುಗ್ಧತೆಯಲ್ಲೇ ಎಲ್ಲವನ್ನೂ ಸೈ ಎನ್ನುವಂತೆ ನೀಗಿಸಿಬಿಟ್ಟೆ. ಆ ಕಾರಣಕ್ಕಾಗಿ ನಿನ್ನ ಕಾಲಿಗೆ ಅದೆಷ್ಟೇ ಮುಗಿದರೂ ಅದು ಕಡಿಮೆ ಕಣವ್ವ.

ಬದುಕನ್ನ ಸುಖಿಸಬೇಕಾಗಿದ್ದ ಸಮಯದಲ್ಲಿ ಅಪ್ಪನಂತೆಯೇ ನೀನೂ ಹೋಗಿ ಬಿಟ್ಟೆ. ದುಡಿಮೆಯನ್ನೇ ನಂಬಿ ಬದುಕುವ ಎಲ್ಲ ತಾಯಂದಿರ ಬದುಕಿನಂತೆಯೇ ನೀನೂ ಬದುಕಿದೆ. ನಿನ್ನ ಜೀವನವನ್ನ ಜೀತಮಾಡುವುದರಲ್ಲೇ ಕಳೆದು ಬಿಟ್ಟೆ.

ಅವ್ವಾ, ಬದುಕು ಅನ್ನೋದು ಎಲ್ಲವೂ ನಾವಂದುಕೊಂಡಂತೇ ಇರೊಲ್ಲ. ಯಾರಿಗೆ ಎಷ್ಟು ದಕ್ಕಬೇಕೋ ಅಷ್ಟೇ ದಕ್ಕೋದು. ಅದಕ್ಕೆ ನಾನೂ, ನೀನು ಯಾರು ಹೊರತಲ್ಲ. ಬದುಕೆಂದರೆ ಇಷ್ಟೇ. ಹೋಗಿ ಬಾ ನನ್ನವ್ವ ನಿನಗೆ ಮತ್ತೊಮ್ಮೆ ಶುಭ ವಿದಾಯ.

‍ಲೇಖಕರು Avadhi

June 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: