ಸಾಧನೆಗೆಂತ ವೈಕಲ್ಯವಯ್ಯಾ…!

ಆರ್ ಎಚ್ ಶಿಂಟಲಕೇರಿ

‘ನಾನು ಎರಡು ರೈಲು ಹಳಿಗಳ ಮಧ್ಯೆ ಬಿದ್ದಿದ್ದೆ. ಆ ರಾತ್ರಿಯನ್ನು ನೆನಪಿಸಿಕೊಂಡರೆ ನನಗೆ ಈಗಲೂ ಭಯವಾಗುತ್ತದೆ. ಅಂದಿನ ರಾತ್ರಿ, ರೈಲುಗಳು ನನಗೆ ಅತಿ ಸಮೀಪದಲ್ಲಿ ವೇಗವಾಗಿ ಹೋಗುತ್ತಿದ್ದವು. ಅವುಗಳ ಕರ್ಕಶ ಶಬ್ದ ಕಿವಿಗಳಿಗೆ ಅಪ್ಪಳಿಸುತ್ತಿತ್ತು, ಮಲ ಮೂತ್ರಗಳು ತೂರಿ ಬರುತ್ತಿದ್ದರಿಂದ ಅವುಗಳ ಕೆಟ್ಟವಾಸನೆ ಮೂಗಿಗೆ ಬಡಿಯುತ್ತಿತ್ತು’. ಇವು ಅರುಣಿಮಾ ಸಿನ್ಹಾಳ ಜೀವನ ಆಧಾರಿತ ‘Born again on the Mountain’ ಎಂಬ ಪುಸ್ತಕದ ಮೊದಲ ಪುಟದ ಸಾಲುಗಳು. ಅರುಣಿಮಾ ಸಿನ್ಹಾಳ ಜೀವನದ ಯಶೋಗಾಥೆ ಇಂದಿನ ಯುವಜನಾಂಗಕ್ಕೆ ಪ್ರೇರಣೆಯಾಗಿದೆ.

ಉತ್ತರ ಪ್ರದೇಶದ ಬಡ ಕುಟುಂಬದಲ್ಲಿ ಜನಿಸಿದ ಅರುಣಿಮಾ ಸಿನ್ಹಾ ಒಂದು ಕೆಟ್ಟ ಗಳಿಗೆಯಲ್ಲಿ ದುಷ್ಟರಿಂದ ರೈಲಿನಿಂದ ಕೆಳಗೆ ತಳ್ಳಲ್ಪಟ್ಟು ಒಂದು ಕಾಲನ್ನು ಕಳೆದುಕೊಂಡರು. ಒಂಟಿ ಕಾಲಿನಿಂದಲೇ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಪ್ರಥಮ ಮಹಿಳೆ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.ಅಷ್ಟೇ ಅಲ್ಲದೆ ವಿಶ್ವದ ಪ್ರಮುಖ ಪರ್ವತಗಳಾದ ಆಫ್ರಿಕಾದ ಕಿಲಿಮಂಜಾರೋ, ಆಸ್ಟ್ರೇಲಿಯಾದ ಕೋಜಿಸ್ಕೋ, ಯುರೋಪಿನ ಎಲ್ಬರ್ನ, ಅರ್ಜೆಂಟೀನಾದ ಅಕೊಂಕಾಗುವಾ ಹಾಗೂ ಇಂಡೋನೇಷ್ಯಾದ ಕಾರ್ಸ್ಟೆಂಜ್ ಪರ್ವತಗಳನ್ನು ಆರೋಹಣ ಮಾಡಿ ವಿಶ್ವ ವಿಕ್ರಮ ಮೆರೆದಿದ್ದಾರೆ.

ಅರುಣಿಮಾ ತನ್ನ ಜೀವನದಲ್ಲಿ ಸಂಭವಿಸಿದ ದುರ್ಘಟನೆಗಳಿಗೆ ಎದೆಗುಂದದೆ ಇಡೀ ವಿಶ್ವಕ್ಕೆ ತನ್ನ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರಳೆ. ಒಂದು ಕಾಲನ್ನು ಕಳೆದುಕೊಂಡು ಕೃತಕ ಕಾಲಿನಿಂದಲೇ ಹಿಮ ಪರ್ವತವನ್ನು ಮೆಟ್ಟಿನಿಂತು, ತನ್ನ ಪ್ರಬಲವಾದ ಇಚ್ಛಾಶಕ್ತಿಯಿಂದ ಶಿಖರದ ಮೇಲೆ ಭಾರತದ ಧ್ವಜವನ್ನು ಹಾರಿಸಿದ್ದಾಳೆ.ಅರುಣಿಮಾಳ ಅಗಾಧ ಆತ್ಮವಿಶ್ವಾಸ, ಧೈರ್ಯ ಮತ್ತು ಸಾಹಸಗಳನ್ನು ಕಂಡು ಇಡೀ ವಿಶ್ವವೇ ಬೆರಗಾಗಿ ನೋಡುತ್ತಿದೆ.

ಆ ದುರ್ಘಟನೆ ಸಂಭವಿಸಿದ್ದು ಹೀಗೆ…
ಅರುಣಿಮಾಳು ಒಂದು ಸಲ ಸಂದರ್ಶನವೊಂದಕ್ಕೆ ಹಾಜರಾಗಲು ಗ್ರೇಟರ್ ನೋಯ್ಡಾಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು, ಅದು ಏಪ್ರಿಲ್ 11, 2011 ರ ರಾತ್ರಿ 11:00 ರ ಸುಮಾರಿಗೆ ಲಕ್ನೋದ ಚಾರ್ ಬಾಗ್ ರೈಲು ನಿಲ್ದಾಣದಿಂದ ದೆಹಲಿಗೆ ತೆರಳುವ ಪದ್ಮಾವತಿ ರೈಲಿನಲ್ಲಿ ಅವಳು ಪ್ರಯಾಣಿಸುತ್ತಿದ್ದಳು. ರೈಲಿನಲ್ಲಿ ನಿಂತುಕೊಳ್ಳಲೂ ಸಹ ಜಾಗವಿರಲಿಲ್ಲ. ಅಷ್ಟು ಗದ್ದಲವಿತ್ತು. ಅರುಣಿಮಾ, ಯುವಕನೊಬ್ಬನಿಗೆ ವಿನಂತಿಸಿಕೊಂಡಾಗ ಅವನು ಕುಳಿತುಕೊಳ್ಳಲು ಸ್ವಲ್ಪ ಜಾಗ ಮಾಡಿಕೊಟ್ಟನು.

ರೈಲು ನಿಲ್ದಾಣ ಬಿಟ್ಟು ಬಹಳ ಸಮಯ ಆಗಿತ್ತು. ಬಹಳಷ್ಟು ಜನರು ನಿದ್ರೆಗೆ ಜಾರಿದ್ದರು. ಅದೇ ಸಮಯದಲ್ಲಿ ಐದು ಜನರ ಒಂದು ಯುವಕರ ಗುಂಪು ಬೋಗಿಯೊಳಗೆ ಪ್ರವೇಶಿಸಿತು. ಆ ಗುಂಪಿನ ಯುವಕನೊಬ್ಬ ಅರುಣಿಮಾಳ ಕೊರಳಿಗೆ ಕೈ ಹಾಕಿ ನೆಕ್ಲೇಸ್ ನ್ನು ಎಳೆಯಲು ಯತ್ನಿಸಿದಾಗ, ಅವಳು ವಿರೋಧಿಸಿದಳು. ಅಷ್ಟರಲ್ಲಿ ಉಳಿದೆಲ್ಲ ಯುವಕರು ಮುಗಿಬಿದ್ದು ಅರುಣಿಮಾಳನ್ನು ಹೊಡೆದರು. ಅರುಣಿಮಾಳು ಸಹ ಕ್ರೀಡಾಪಟುವಾಗಿದ್ದರಿಂದ ಕೆಲವೊಂದು ಯುವಕರಿಗೆ ಮುಷ್ಟಿಯಿಂದ ಗುದ್ದಿದಳು.

ಇದರಿಂದ ರೊಚ್ಚಿಗೆದ್ದ ಒಬ್ಬ ಯುವಕ ಆಕೆಯನ್ನು ಬಾಗಿಲು ಬಳಿ ತಂದು ಹೊರಗೆ ತಳ್ಳಿದನು. ಆ ತಳ್ಳಿದ ರಭಸಕ್ಕೆ ಅರುಣೀಮಾಳು ಪಕ್ಕದಲ್ಲಿ ಚಲಿಸುತ್ತಿದ್ದ ಇನ್ನೊಂದು ರೈಲಿಗೆ ಬಡಿದು, ಕೆಳಗೆ ಎರಡು ಹಳ್ಳಿಗಳ ಮಧ್ಯೆ ಬಿದ್ದಳು. ರೈಲು ಅವಳ ಕಾಲ ಮೇಲೆ ಹಾಯ್ದು ಒಂದು ಕಾಲು ತುಂಡಾಯಿತು. ಇನ್ನೊಂದು ಕಾಲು ಸಹ ಭಾಗಶಃ ಹಾನಿಗೊಳಗಾಯಿತು. ಆ ಗಾಢವಾದ ರಾತ್ರಿಯಲ್ಲಿ ಆ ನತದೃಷ್ಟೆ, ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದಳು. ಆದರೂ ನೋವನ್ನು ತಡೆದುಕೊಳ್ಳಲು ಆಕೆ ಎರಡೂ ಕೈಯಲ್ಲಿ ಕಲ್ಲುಗಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು.

ಹೀಗೆ ಸಹಿಸಲಸಾಧ್ಯವಾದ ನೋವಿನಿಂದ ನರಳಾಡುತ್ತಿರುವಾಗಲೇ ಪಕ್ಕದ ಬೇಲಿಯಿಂದ ಇಲಿಗಳು ಮಾಂಸದ ಆಸೆಗೆ ಅವಳ ದೇಹದ ಮೇಲೆ ದಾಳಿ ಮಾಡಿದವು. ಅವು ಗಾಯದಿಂದ ಹೊರಬಂದ ಮಾಂಸವನ್ನು ಕುಕ್ಕಿ ತಿನ್ನಲಾರಂಭಿಸಿದವು. ಅವುಗಳನ್ನು ಹೊಡೆದೋಡಿಸಲು ಸಹ ಶಕ್ತಿ ಅವಳಲ್ಲಿ ಇರಲಿಲ್ಲ. ಅವಳು ಸಂಪೂರ್ಣ ಅಸಹಾಯಕ ಸ್ಥಿತಿಯಲ್ಲಿದ್ದಳು. ಹೀಗೆ ಬೆಳಗಾಗುವಷ್ಟರಲ್ಲಿ ಅವಳ ಮೇಲೆ 49 ರೈಲುಗಳು ಹಾದು ಹೋಗಿದ್ದವು. ಬೆಳಗಿನ ಜಾವ ಪಕ್ಕದ ಹಳ್ಳಿಯ ಪಿಂಟು ಕಶ್ಯಪ್ ಎಂಬ ವ್ಯಕ್ತಿ, ದೇಹವೊಂದು ರೈಲು ಹಳಿಗಳ ಮಧ್ಯದಲ್ಲಿ ಅನಾಥವಾಗಿ ಬಿದ್ದಿದ್ದನ್ನು ನೋಡಿ ಗಾಬರಿಗೊಂಡು ಓಡಿಹೋಗಿ ಮತ್ತಷ್ಟು ಜನರನ್ನು ಆ ಸ್ಥಳಕ್ಕೆ ಕರೆದುಕೊಂಡು ಬಂದನು.

ಸ್ವಲ್ಪ ಹೊತ್ತಿನಲ್ಲಿ ಅಲ್ಲಿ ಬಹಳಷ್ಟು ಜನ ಸೇರಿದರು. ನಂತರ ಅವಳಿಗೆ ಸ್ವಲ್ಪ ಪ್ರಜ್ಞೆ ಬಂದಿತು. ಅವರು ಅವಳಿಂದ ಮನೆಯವರ ಮೊಬೈಲ್ ನಂಬರ್ ತಿಳಿದುಕೊಂಡು ಅವಳ ತಾಯಿಗೆ ವಿಷಯ ತಿಳಿಸಿದರು. ತಕ್ಷಣ ಘಟನೆ ನಡೆದ ಸ್ಥಳಕ್ಕೆ ಅವಳ ತಾಯಿ ಮತ್ತು ಭಾವ ಸಾಹೇಬ್ ಬಂದರು. ಅವಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಮುಂದೆ ಅವಳನ್ನು ರಾಯ್ ಬರೇಲಿ ಜಿಲ್ಲಾಸ್ಪತ್ರೆಗೆ ರವಾನಿಸಿದರು.

ಈ ಘಟನೆ ಮಾಧ್ಯಮಗಳ ಪ್ರಚಾರದಿಂದ, ಅರುಣಿಮಾಳ ಸ್ಥಿತಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು.ಹೀಗಾಗಿ ಅವಳಿಗೆ ಅನುಕಂಪ ಮತ್ತು ನೆರವಿನ ಮಹಾಪೂರ ಹರಿದುಬಂತು. ಅವಳು ದೇಶದ ಜನರ ಚರ್ಚೆಯ ಕೇಂದ್ರಬಿಂದುವಾದಳು. ಆಗಿನ ಕೇಂದ್ರ ಕ್ರೀಡಾ ಸಚಿವರಾದ ಶ್ರೀ ಅಜಯ್ ಮಾಕನ್ ರವರ ನಿರ್ದೇಶನದಂತೆ ಅವಳನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ವರ್ಗಾಯಿಸಿದರು. ಅಲ್ಲಿ ಅವಳಿಗೆ ತಜ್ಞ ವೈದ್ಯರಿಂದ ಉತ್ತಮ ಚಿಕಿತ್ಸೆ ದೊರೆಯಿತು. ಅವಳು ಕ್ರಮೇಣ ಗುಣಮುಖಳಾದಳು. ಅವಳಿಗೆ ಕೃತಕವಾದ ಕಾಲನ್ನು ಅಳವಡಿಸಲಾಯಿತು ಮತ್ತು ಅವಳು ಮೊದಲಿನಂತೆ ನಡೆದಾಡಲು ಸಹಾಯವಾಯಿತು.

ಆ ನೀಚ ಕೃತ್ಯವನ್ನು ಎಲ್ಲ ಮಾಧ್ಯಮಗಳು, ದೇಶದ ಜನರು ಬಲವಾಗಿ ಖಂಡಿಸಿದರು. ಆ ನೀಚರಿಗೆ ಶಿಕ್ಷೆಯಾಗಬೇಕು ಎಂದು ಗೋಗರೆದರು. ಆದರೆ ಆ ದುಷ್ಟರು ಯಾರು ಎಂದು ಪತ್ತೆಯಾಗಲಿಲ್ಲ.

ನಂತರ ಅರುಣಿಮಾ ತನ್ನ ಹುಟ್ಟೂರಿಗೆ ಮರಳಿದಳು. ಹೀಗೆ ಒಂದು ದಿನ ಆಕೆಯ ಭಾವ ಸಾಹೇಬ್, ಅರುಣಿಮಾಳನ್ನು ಉದ್ದೇಶಿಸಿ ಹೀಗೆ ಹೇಳಿದನು, ‘ನೀನು ಯಾಕೆ ಮೌಂಟ್ ಎವರೆಸ್ಟ್ ಏರಿ ದಾಖಲೆ ಮಾಡಬಾರದು’? ಎಂದು ಪ್ರಶ್ನಿಸಿದನು. ಅವನ ಮಾತನ್ನು ಅವಳು ಗಂಭೀರವಾಗಿ ತೆಗೆದುಕೊಂಡು ಕಾರ್ಯೋನ್ಮುಖಳಾದಳು. ತನ್ನ ತಾಯಿ ಹಾಗೂ ಸಹೋದರನ ಅನುಮತಿ ಪಡೆದುಕೊಂಡು, ಸಾಹೇಬ್ ನ ಸಹಾಯದಿಂದ, ಅವಳು ಭಾರತದ ಪ್ರಥಮ ಮಹಿಳಾ ಪರ್ವತಾರೋಹಿ ಶ್ರೀಮತಿ ಬಚೇಂದ್ರಿ ಪಾಲ್ ರನ್ನು ಭೇಟಿಯಾದಳು. ಅವರಿಗೆ ತನ್ನ ಮನದಾಳದ ಇಂಗಿತವನ್ನು ತಿಳಿಸಿದಳು. ಮುಂದೆ ಬಚೇಂದ್ರಿ ಪಾಲ್ ಅರುಣಿಮಾಳನ್ನು ಉತ್ತರ ಕಾಶಿಯಲ್ಲಿರುವ ‘ಟಾಟಾ ಸ್ಟೀಲ್ ಅಡ್ವೆಂಚರ್ ಫೌಂಡೇಶನ್’ ನಲ್ಲಿ ತರಬೇತಿಗೆ ಸೇರಿಸಲು ಸಹಾಯ ಮಾಡಿದರು. ಅಲ್ಲಿ ಅವಳು ಬಹಳ ಶ್ರದ್ಧೆಯಿಂದ ತರಬೇತಿ ಪಡೆದಳು. ನಂತರ ಅವಳು ಪರ್ವತಾರೋಹಣ ತರಬೇತಿ ಪ್ರಮಾಣಪತ್ರವನ್ನು ಸಹ ಪಡೆದುಕೊಂಡಳು.

ಕೊನೆಗೆ ಅವಳು ತನ್ನ ಪರ್ವತಾರೋಹಣದ ಪ್ರಯಾಣ ಆರಂಭಿಸಿ ಅನೇಕ ಕಷ್ಟಕರವಾದ ಸಂದರ್ಭಗಳನ್ನು ಮೀರಿ ದಿನಾಂಕ ಮೇ 21, 2013 ರ ಬೆಳಗ್ಗೆ 10:55 ಕ್ಕೆ ವಿಶ್ವದ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಪರ್ವತದ ತುದಿ ಮೇಲೆ ಭಾರತದ ಧ್ವಜವನ್ನು ಹಾರಿಸಿದಳು. ಅಲ್ಲಿಗೆ ಒಂದು ಹೊಸ ಇತಿಹಾಸ ಸೃಷ್ಟಿಯಾಯಿತು. ಮೌಂಟ್ ಎವರೆಸ್ಟ್ ಏರಿದ ವಿಶ್ವದ ಪ್ರಪ್ರಥಮ ಅಂಗವಿಚ್ಛೇದಿತ ಮಹಿಳೆ ಎಂಬ ದಾಖಲೆಗೆ ಪಾತ್ರಳಾದಳು.

ಇಂತಹ ಅರುಣಿಮಾ ಸಿನ್ಹಾ ಳ ಯಶೋಗಾಥೆಯು ಅನೇಕ ಯುವಕ-ಯುವತಿಯರಿಗೆ ಸ್ಫೂರ್ತಿಯಾಗಿದೆ. ಆತ್ಮವಿಶ್ವಾಸ, ಗುರಿಯೆಡೆಗಿನ ಶ್ರದ್ಧೆ, ಸವಾಲನ್ನು ಮೆಟ್ಟಿನಿಲ್ಲುವಂತ ಇಚ್ಛಾಶಕ್ತಿ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಅರುಣಿಮ ಸಿನ್ಹಾ ಳ ಸಾಧನೆ ಒಂದು ಉತ್ತಮ ನಿದರ್ಶನ ಆಗಿದೆ. ಅವಳು ತನ್ನ ಜೀವನದ ಘಟನೆಗಳನ್ನು, ತಾನೇ ಬರೆದ ತನ್ನ ಆಟೋಬಯೋಗ್ರಫಿ ‘Born again on the Mountain’ ಎಂಬ ಪುಸ್ತಕದಲ್ಲಿ ಹೇಳಿಕೊಂಡಿದ್ದಾಳೆ. ನಾನು ಸಹ ಈ ಪುಸ್ತಕವನ್ನು ಓದಿ ಪ್ರೇರಣೆಗೊಂಡು ಈ ಲೇಖನವನ್ನು ಬರೆದಿದ್ದೇನೆ. ಈ ಲೇಖನವು ಕೆಲವೊಂದಿಷ್ಟು ಜನರಿಗೆ ಸ್ಪೂರ್ತಿದಾಯಕವಾದರೆ ಈ ಲೇಖನದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಭಾವಿಸಿದ್ದೇನೆ.

‍ಲೇಖಕರು Avadhi

June 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: