-ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ಸ್ತ್ರೀ ಶಕ್ತಿ ಯೋಜನೆ ಬಂದ ನಂತರ ಫ್ರೀ ಬಸ್ಸು ಹಾಗೂ ಎರಡು ಸಾವಿರ ರೂಪಾಯಿ ನಾರಿ ಶಕ್ತಿ ಯೋಜನೆಯ ಮೊದಲ ಕಂತಿನ ಹಣ ಬಂತು. ಶೈನಾಜ್ ಸೀದಾ ಮೊದಲು ಅಂಗಡಿಗೆ ಹೋಗಿ, ಲಕ್ಸ ಇಂಟರ್ನ್ಯಾಷನಲ್ ಬಿಳಿ ಸೋಪು ತಂದಳು. ಬಿಸಿ ನೀರು ಕಾಯಿಸಿಕೊಂಡು ಸೋಪನ್ನು ತುಂಬಾ ಪವಿತ್ರ ವರದಾನದ ಪ್ರಸಾದವೆಂಬ೦ತೆ ಸ್ನಾನ ಮಾಡಿದಳು. ಅವತ್ತು ಗಂಡ ಸಿರಾಜ್ನಿಗೆ ಇವಳ ಮೈಯ ಹೊಸ ಸುವಾಸನೆ ಇಷ್ಟ ಆಯಿತು.
ಶೈನಾಜ್ ಮುಖದಲ್ಲಿ ಅವತ್ತು ಅದೇನೋ ಬೆಳದಿಂಗಳ ಬೆಳಕು ಸುಳಿದಾಡಿತ್ತು.ನಂತರ ಸಂಜೆ ಸಿನೆಮಾ ನೋಡುವ ಆಶೆ. ರಾತ್ರಿ ಬರುವಾಗ ಹೊಟೇಲ್ನಲ್ಲಿ ಊಟ. ಪನೀರ ಟಿಕ್ಕಾ, ಹರಾ ಬರಾ ಕಬಾಬ ಆರ್ಡರ್ ಮಾಡಿದಳು. ಕುಟುಂಬದ ಸಮೇತವಾಗಿ ಹೀಗೆ ಹೋಟೇಲ್ನಲ್ಲಿ ಊಟ ಮಾಡಿದ್ದು ಇದೇ ಮೊದಲು ಬಾರಿ, ಊಟದ ಹಣ ಕೂಡಾ ಶೈನಾಜ್ ಫೇ ಮಾಡಿದ್ದು ನೋಡಿ ಮನೆಯವರಿಗೂ ವಿಚಿತ್ರ ಮತ್ತು ಆಶ್ಚರ್ಯಕರವಾಗಿತ್ತ ರಫೀಕ್ ಅಹಮದ್ ಮತ್ತು ಫರಿದಾರಿಗೆ ನಾಲ್ಕು ಜನ ಗಂಡು ಮಕ್ಕಳು, ಇವರ ನಂತರ ಹುಟ್ಟಿದ ಪ್ರೀತಿಯ ಮಗಳು ಶಹನಾಜ್. ತನ್ನ ಕುಶನ್ ವರ್ಕ್ ಅಂಗಡಿಯಿ೦ದ ಬರುವ ಆದಾಯದಲ್ಲಿಯೇ ರಫಿ ತನ್ನೆಲ್ಲ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡಿ ಜೋಪಾನ ಮಾಡಿದ್ದ. ಫರಿದಾಬಾನು ಕೂಡ ಗಂಡನಿಗೆ ತಕ್ಕ ಹೆಂಡತಿಯಾಗಿ ಎಲ್ಲವನ್ನು ಜವಾಬ್ದಾರಿಯಿಂದ ನೋಡಿಕೊಳ್ಳುತ್ತಿದ್ದಳು. ಶಹನಾಜ್ ಬಹಳ ಜಾಣೆಯಾಗಿದ್ದಳು. ವಯಸ್ಸಿಗೆ ಬಂದಾಗ ಧರ್ಮ-ಸಂಪ್ರದಾಯದ೦ತೆ ಮಗಳನ್ನು ಸಮೀಪದ ಅಂಬಡಗಟ್ಟಿಗೆ ಮದುವೆ ಮಾಡಿಕೊಟ್ಟರು. ವರ್ಷ ತುಂಬೋದ್ರಲ್ಲಿ ಮಕ್ಕಳನ್ನು ಹಡೆದ ಶಹನಾಜ್, ಬಾಳ ಸಣ್ಣ ವಯಸ್ಸಿನಲ್ಲಿಯೇ ತಾಯಿಯಾಗಿ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಿದಳು.
ಶಹನಾಜ್ ದಿನಗಳೂರುಳಿದಂತೆ ಶೈನಾಭಿ ಆಗಿ, ಶೈನೂಭಿಯಾಗಿ, ಈಗ ಬೂಬಮ್ಮಳಾಗಿದ್ದಳು. ಯಾವಾಗ ಬದುಕಿನ ಎರಡನೇ ಘಟ್ಟವನ್ನು ತಲುಪಿದ್ದಳು ಎಂಬುದು ಅವಳಿಗೂ ಕೂಡ ನೆನಪಿಲ್ಲ. ಗಂಡ ಸಿರಾಜ್ ದಿನವೂ ಮೊಟ್ಟೆಗಳನ್ನು ಮಾರಿದ ಲಾಭದಲ್ಲಿ ಮೂರು ಜನ ಮಕ್ಕಳು ಹಾಗೂ ಹೆಂಡತಿ ಶಹನಾಜ್ಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಕುಟುಂಬದ ನಿರ್ವಹಣೆಗಾಗಿ ಶಹನಾಜ್ ಮನೆಯಲ್ಲಿ ಬೀಡಿ ಕಟ್ಟುವುದು, ಹೂಮಾಲೆ ಕಟ್ಟುವದು, ಬಟ್ಟೆ ಹೊಲಿಯುವುದು ಇತರೆ ಕೆಲಸಗಳನ್ನು ಮಾಡುತ್ತಾ ಚಿಕ್ಕ ಕುಟುಂಬವನ್ನು ಯಾವುದೇ ಆರ್ಥಿಕ ಕಷ್ಟಕ್ಕೆ ಸಿಲುಕದಂತೆ ನೋಡಿಕೊಂಡು ಬಂದಿದ್ದಳು. ಶೈನಾಜ್ ಬೇಬೀ ಈಗ ಬೇಗ್ಂ ಆಗಿದ್ಲೂ.ಗಂಡನ ಕುಟುಂಬದವರು ಶೈನೂ ಶಾ ಬೂಬೂ ಅಂತ ನೇ ಕರಿತಿದ್ರು. ಶೈನೂಭಿ ಅಂತ ಗಂಡ ಪ್ರೀತಿಯಿಂದ ಕರೀತಿದ್ದ ಆದರೆ ಓಣಿಯವರಿಗೆಲ್ಲ ಆಕೆ ಬೂಬಮ್ಮ.
ಬೂಬಮ್ಮನ ಮನೆ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಹಿಂದುಗಳಿರಲಿ ಯಾವುದೇ ಧರ್ಮ ಜಾತಿಗಳವರಿರಲಿ ತಮ್ಮ ಮನೆಯ ಶುಭ ಕಾರ್ಯಕ್ಕೆ ಬೂಬಮ್ಮ ಮನೆಯಲ್ಲಿ ಕಟ್ಟಿರುವ ಹೂಗಳನ್ನೇ ಹಾರಗಳನ್ನೇ ಒಯ್ಯುತ್ತಿದ್ದರು. ನಾಲ್ಕಾರು ಓಣಿಯಲ್ಲಿಯೂ ಹೆಣ್ಣು ಮಕ್ಕಳ ಮದುವೆಯಿದ್ದರೂ ಬೂಬಮ್ಮ ಹೊಲೆದಿರುವ ಬ್ಲೌಸ್ ಹಾಕ್ಕೊಂಡ್ರೆನೇ ಮುತ್ತೈದೆ ಭಾಗ್ಯ ಬರುತ್ತೆದೆ! ಅನ್ನುವ ಭಾವನೆ ಆ ಸುತ್ತಮುತ್ತಲಿನ ಜನರ ಮನದಲ್ಲಿತ್ತು. ಕ್ರೈಸ್ತರಾಗಲಿ, ಬ್ರಾಹ್ಮಣರಾಗಲಿ, ದಲಿತರಾಗಲಿ, ಲಿಂಗಾಯತರಾಗಲಿ ಎಲ್ಲರ ಅಪಾರವಾಗಿರುವ ಪ್ರೀತಿ ಗೌರವಕ್ಕೆ ಬೂಬಮ್ಮ ಭಾಜನವಾಗಿದ್ದಳು.ಗಂಡನ ಮನೆಗೆ ಬಂದಾಗಿನಿ೦ದಲೂ ಗಾಣದ ಎತ್ತಿನಂತೆ ಬಿಡುವಿಲ್ಲದೆ ದುಡಿಯುವ ಶೈನಾಜ್ ತನ್ನ ಮನೆಗೆ ಬೆಳಕಾಗಿದ್ದಳು. ಸಿರಾಜ್ ನ ದುಡಿಮೆಗೆ ಬಲ ತುಂಬಿ ಸಂಸಾರದ ನೋಗಕ್ಕೆ ಹೆಗಲಾಗಿದ್ದಳು. ಅಂಬಡಗಟ್ಟಿಯ ಇಂದಿರಾ ನಗರದ ಮುಲ್ಲಾ ಓಣಿಯ ಎಲ್ಲರ ಪ್ರೀತಿಗಳಿಸುವ ಹಿರಿತನದಲ್ಲಿಯೇ, ಇತರರಿಗೆ ಅವಶ್ಯಕ ಕೆಲಸವನ್ನು ಮಾಡಿಕೊಡುವ ಹಾಗೂ ಕುಟುಂಬವನ್ನು ನಿರ್ವಹಿಸುವುದರಲ್ಲಿ ತನ್ನ ನಿಜವಾದ ಸ್ವರ್ಗ ಅಂತ ಹೇಳಿ ಶೈನಾಜ್ ತಿಳಿದುಕೊಂಡಿದ್ದಳು.
ಶೈನಾಜ್ ತಂದೆ ಮನೆಯಲ್ಲಿ ಎಷ್ಟು ಸುಖದಿಂದ ಬಾಲ್ಯ ಕಳೆದವಳು. ಅವಳಿಗಾಗಿಯೇ ಅಮ್ಮಿ- ಅಬ್ಬು ಅನೇಕ ಸೌಲಭ್ಯ ಸೌಕರ್ಯ ಮಾಡಿಕೊಟ್ಟಿದ್ದರು. ಬಾಲ್ಯದಲ್ಲಿ ದುಃಖದ ದಿನಗಳಿಲ್ಲದೆ ಸುಖದಿಂದ ಇದ್ದಳು. ಆದರೆ ಸಣ್ಣ ವಯಸ್ಸಿನಲ್ಲಿ ಮೂರು ಮಕ್ಕಳ ತಾಯಿಯಾಗಿರುವ ಶೈನಾಜ್ ನಾಲ್ಕಾರು ವರ್ಷದಲ್ಲಿ ಬೂಬಮ್ಮನಾಗಿ ಮನೆಗೆ ಹಿರಿ ಸೊಸೆಯಾಗಿ, ರೀತಿ ರೀವಾಜು ಮೈಗೂಡಿಸಿಕೊಂಡು ಜತನದಿಂದ ಕುಟುಂಬದ ಕಂದೀಲಾಗಿ ಪರಿವರ್ತನೆ ಹೊಂದಿದಳು.
ಸಮಯ ನಿಲ್ಲದೆ ಓಡುತ್ತಿತ್ತು.. ಮಕ್ಕಳೆಲ್ಲ ಸಾಲಿ ಕಲಿತರು. ಗಂಡನಿಗೆ ವಯಸ್ಸಾಗುತ್ತ ಬಂತು.ಅವಳಿಗೂ ಮೆನೊಪಾಸ್ ಸಮಸ್ಯೆ ಕಾಡತೋಡಗಿತ್ತು. ಆವಾಗಾವಾಗ ಮಾನಸಿಕ ತುಮುಲುಗಳು ಒಳಗೊಳಗೆ ಒಮ್ಮೆ ತಂಗಾಳಿ ತಂದರೆ, ಮಗದೊಮ್ಮೆ ಬೆಂಕಿಯAತಹ ಬಿಸಿಬಿಸಿ ಅನುಭವ ಆಗುತ್ತಿತ್ತು. ಮನೆ ಬಾಜೂಜಿಕ ಟೀಚರಮ್ಮ ಇದನ್ನು ಮೂಡಸ್ವಿಂಗ್ ಅಂತಾರ೦ತ ಇದರ ಬಗ್ಗೆ ಹೇಳಿದಾಗ, ಮುಟ್ಟು ನಿಲ್ಲುವ ವಯಸ್ಸಿನಲ್ಲಿ ಇದು ಸಾಮಾನ್ಯ ಅನ್ನುವ ವಿಷಯ ತಿಳಿದ ಶೈನಾಜ್ಬೂಬಮ್ಮ ಹೆಣ್ಣಾಗಿ ಹುಟ್ಟಿದ್ದಕ್ಕೆ ಹಿಡಿ ಶಾಪಹಾಕಿದಳು.
ಬೂಬಮ್ಮನಿಗೆ ಇತ್ತೀಚಿಗೆ ರಾಟಿ ಮೇಲೆ ಕೂತ್ಕೊಳ್ಳೋದು ,ಹೂ ಕಟ್ಟೋದು ಕೂಡಾ ಬ್ಯಾಸರ ಆಗಿತ್ತು.ಆಗಾಗ ಮೈ ಕೈ ನೋವು .ಸೊಂಟದ ಬೇನೆಗೆ ಮನೆ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಬಹಳ ಕಿರಿಕಿರಿ ಆಗಿತ್ತು. ಮುಟ್ಟು ನಿಲ್ಲುವ ಹೊತ್ತಿನಲ್ಲಿ ಆಕೆ ದೈಹಿಕವಾಗಿ, ಮಾನಸಿಕವಾಗಿ ಒಂದಿಷ್ಟು ಒತ್ತಡಕ್ಕೆ ಒಳಗಾದಂತೆ ದೇಹ ಬಳಲಿದಂತೆ ಕಂಡು ಬಂದರೂ ಮನೆಗಾಗಿ ನೋವು ನುಂಗಿ ನಿತ್ಯದ ಕೆಲಸದಲ್ಲಿ ತೊಡಗಿಕೊಳ್ಳೊದು ರೂಢಿಯಾಗಿತ್ತು.
ಬಾಣಂತನವನ್ನು ಇವರ ಅತ್ತೆ ಮನೆಯಲ್ಲೇ ಹೆರಿಗೆ ಮಾಡಿಸಿದ್ಲು . ಆಸ್ಪತ್ರೆ ಹೋಗೋದು ಅಂತ ಅಂದ್ರೆ ಅದು ಕುದಾನ ನಿಯಮದ ವಿರುದ್ಧ ಅನ್ನುವ ಅವರ ಒಂದು ಸಂಪ್ರದಾಯದ ನಿಯಮಗಳಿಗೆ ಕಟ್ಟು ಬಿದ್ದು ಯಾವಾಗಲೂ ದವಾಖಾನೆಗೆ ಹೋದೋಳೆ ಅಲ್ಲ. ಈ ದೈಹಿಕ ಬದಲಾವಣೆ ಮೆನೋಪಾಸ್ ಸಮಸ್ಯೆ ಎಲ್ಲಾ ಹೆಣ್ಣು ಮಕ್ಕಳಿಗೆ ಬರೋದೆಂತ ತಿಳಿದು ಯಾರ ಮುಂದೆ ತನಗೆ ದಗದ ಮಾಡಾಕ ಆಗುವುದಿಲ್ಲಂತ ಹೇಳುತ್ತಿರಲಿಲ್ಲ. ತನ್ನ ಬದುಕನ್ನ ಹೀಗೆ ಸವಿಸುತ್ತಿರುವುದು ಅದು ಖುಷಿ ಆಂತಾನೇ ತಿಳಿದವಳು. ಆಗಾಗ ಮಾನಸಿಕವಾಗಿ ನೋವಾದರೂ ಅಥವಾ ದೈಹಿಕವಾಗಿ ಆಯಾಸವಾದರೂ ತನೊಬ್ಬಳು ಈ ಕುಟುಂಬದ ಆಶ್ರಯವಾಗಿರುವುದಕ್ಕೆ ಒಳಗೊಳಗೆ ಹೆಮ್ಮೆ ಪಡುತ್ತಿದ್ದಳು. ಗಾಣದ ಎತ್ತಿನಂತೆ ದುಡಿತಾ ಹೊಸ ಉತ್ಸಾಹದಿಂದ ಬದುಕ ಬಂಡಿಗೆ ಕಸುವು ತಂದಳು. ಇದು ಪ್ರತಿ ಹೆಣ್ಣಿನ ಸಹಜ ಬದುಕು ಅನ್ನೋದು ಅವಳ ಆಲೋಚನೆಗೆ ಒಳಪಡತಾನೆ ಎಷ್ಟೇ ಹಣವನ್ನು ದುಡಿದರೂ ಕೂಡ, ಅದನ್ನು ಸಂಸಾರಕ್ಕೆ ಹಾಕೋದ್ರಿಂದ ಅವಳಿಗೆ ತಾನು ಆರೈಕೆ ಮಾಡಿಕೊಳ್ಳುವ, ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಇಪ್ಪತ್ತು –ಮೂವತ್ತು ವರ್ಷಗಳಿಂದಲೂ ತನ್ನತನ ಮರೆತೇ ಬಿಟ್ಟಿದ್ದಳು.
ಬದುಕು ಜಟಕಾ ಬಂಡಿತರಾ ನಡಿತಾ ಇರುವಾಗ ಸರ್ಕಾರ ಹೆಣ್ಣುಮಕ್ಕಳಿಗೆ ಎರಡು ಸಾವಿರ ರೂಪಾಯಿಗಳನ್ನು ಅವರ ಅಕೌಂಟ್ ಗೆ ಹಾಕುವುದು ಅಂತ ಒಂದು ಗ್ಯಾರಂಟಿ ಯೋಜನೆಯನ್ನು ತಗೊಂಡ್ ಬಂದ್ರು. ಜೊತೆಗೆ ಹೆಣ್ಣು ಮಕ್ಕಳಿಗೆ ಸ್ತಿçà ಶಕ್ತಿ ಯೋಜನೆಯಿಂದ ಉಚಿತ ಬಸ್ ವ್ಯವಸ್ಥೆಯನ್ನು ಮಾಡಿದರು. ಎಷ್ಟೋ ವರ್ಷಗಳಿಂದ ತನ್ನ ತಂದೆ ತಾಯಿಗಳನ್ನು, ಅತ್ತೆ ಮಾವನನ್ನ ಕಾಣಲು ಹೋಗಾಕ ಬಸ್ಸ ಚಾರ್ಜ ಹಾಕಿ ಹೋಗಬೇಕಲ್ಲ ಅಂತ ಯೋಚನೆ ಮಾಡುತ್ತಿದ್ದ ಶೈನಾಜ್ಗೆ ಬಹಳ ಖುಷಿ ಆಗಿತ್ತು.
ಅಪ್ಪ ಅಮ್ಮನ ನೋಡ್ಕೊಂಡ್ ಬರೋದು ಅತ್ತೆ ಮಾವನ್ ಕಡೆ ಹೋಗ್ಬರೋದನ್ನ ಪ್ರಾರಂಭಿಸಿದಳು. ಕರೆಂಟ್ ಬಿಲ್ ಫ್ರೀ ಇರೋದ್ರಿಂದ ದೈಹಿಕ ಆಯಾಸವನ್ನು ಕಡಿಮೆ ಮಾಡಿಕೊಳ್ಳಲು, ಹಳೆಯ ಹೊಲಿಗೆ ಯಂತ್ರಕ್ಕೆ ಎಲೆಕ್ಟಿçÃಕಲ್ ಮೋಟರನ್ನ ಜೋಡಿಸಿಕೊಂಡಳು. ಬಸ್ ಫ್ರೀ ಆಯಿತು, ತಿಂಗಳಿಗೆ ಎರಡು ಸಾವಿರ ರೂಪಾಯಿ ಅವಳ ಅಕೌಂಟಿಗೆ ಬರುತ್ತಿತ್ತು. ಕರೆಂಟ್ ಬಿಲ್ ಕೂಡ ಕಟ್ಟು ಹಾಗಿಲ್ಲ ,ಇದೆಲ್ಲವೂ ಬೂಬಮ್ಮನಿಗೆ ಒಂದಿಷ್ಟು ಮಾನಸಿಕವಾದ ನೆಮ್ಮದಿಯನ್ನು ನೀಡಿತ್ತು. ಹತ್ತಾರು ವರ್ಷಗಳಿಂದಲೂ ಗಂಡನಿಗೆ ಸಹಕಾರಿಯಾಗಬೇಕು ಅಂತ ಬೂಬಮ್ಮ ತನ್ನ ಸುಖವನ್ನ ಬಲಿ ಕೊಟ್ಟು ಬದುಕೊದು ಸಹಜವಾಗಿತ್ತು.
ತವರುಮನೆಯಲ್ಲಿದ್ದಾಗ ದೊಡ್ಡ ಕೂಡು ಕುಟುಂಬವಿದ್ದರೂ ಬಹಳ ಸುಖದಿಂದ ಇವಳನ್ನ ಬೆಳೆಸಿದ್ದರು. ಹಾಸಿಕೊಳ್ಳಲು, ಹೊಚ್ಚಿಕೊಳ್ಳಲು ಸಪರೇಟ್ ಒಂದು ಬೆಡ್ ಶೀಟ್ ಬೇಕೆಂದು ಆಗಾಗ ಅಮ್ಮಿ ಜೊತೆಯಲ್ಲಿ ಜಗಳ ಮಾಡುತ್ತಿದ್ದಳು. ಆದರೆ ಆ ವಯಸ್ಸಿನಲ್ಲಿ ಇಂತಹ ವಸ್ತುಗಳು ಪ್ರತ್ಯೇಕ ಇರಬೇಕು ಅನ್ನುವ ಆಸೆ ಆಗಾಗ ಹಠಮಾರಿತನಕ್ಕೆ ಅಬ್ಬು ಬೈಯುತ್ತಿದ್ದರು. ಅಷ್ಟೇ ಅಲ್ಲ! ಅವಳಿಗೆ ದೊಡ್ಡ ಕನಸು ; ತನಗಾಗಿ ಸ್ನಾನ ಮಾಡಲು ತನ್ನಿಚ್ಛೆಯ ಒಂದು ಸೋಪ್ ಬೇಕು ಅನ್ನೋದು ಚಿಕ್ಕವಯಸ್ಸಿನಿಂದಲೂ ಮನಸ್ಸಲ್ಲಿನ ದೊಡ್ಡ ಆಶೆ. ಆದರೆ ಕೂಡು ಕುಟುಂಬದ ಮನೆಯಲ್ಲಿ ಇಂತಹ ಸೌಲಭ್ಯ ಅಲಭ್ಯ . ಎಲ್ಲರಿಗೂ ಒಂದೇ ಸೋಪು ಲೈಫ್ಬಾಯ್ ಸೋಪು! ಎಲ್ಲರೂ ಅದನ್ನೇ ಬಳಸಬೇಕು. ಒಂದೇ ಟೈವಲ್ಲು ಉಪಯೋಗಿಸಬೇಕು.ಎಲ್ಲರೂ ಒಟ್ಟಿಗೆ ಪಡಸಾಲೆಯಲ್ಲಿ ಮಲಗಬೇಕು.
ಶೈನಾಜ್ ಮುದುವೆಯಾಗಿ ಗಂಡನಮನೆಗೆ ಬಂದ ಹೊಸತರಲ್ಲಿಯೂ ಕೂಡ ಅತ್ತೆ ಮಾವನೊಂದಿಗೆ ಸ್ವಲ್ಪ ಸಮಯವನ್ನು ಕಳೆದಳು. ಆ ಸಂದರ್ಭದಲ್ಲಿ ಅಲ್ಲೂ ಕೂಡು ಕುಟುಂಬ ಆಗಿರುವ ಕಾರಣ ಸಣ್ಣ ಮನೆಯಲ್ಲಿ ಅಷ್ಟೊಂದು ಇಂಬಾದ ಜಾಗವಾಗಲಿ ಅಥವಾ ಮಲಗಿಕೊಳ್ಳುವ ವಯಕ್ತಿಕ ಕೋಣೆಯಾಗಲಿ ಅಥವಾ ಇವಳಿಗಾಗಿಯೇ ಒಂದು ಸ್ನಾನದ ಸೋಪ್ ಆಗಲಿ ಬಳಿಸಿಕೊಳ್ಳುವ ಗಂಡನ ಮನೆಯಲ್ಲಿ ಆ ವ್ಯವಸ್ಥೆ ಇರಲಿಲ್ಲ
ಅಡುಗೆ ಮನೆಯಲ್ಲಿ ಈಡೀ ದಿವಸ ಅಡುಗೆಮನೆ ಕೆಲಸ ಮಾಡೋದು ,ರಾತ್ರಿಯಾದ ಮೇಲೆ ಅದಕ್ಕೊಂದು ಪರದೆ ಕಟ್ಬಿಟ್ರೆ ಅದು ಅವರ ಬೆಡ್ ರೂಮ್.ಪಡಸಾಲೆಯಲ್ಲಿ ನಾದಿನಿಯರು ಮೈದುನರು ಉಳಿದವರೆಲ್ಲರೂ ಹೊರಗಡೆಗೆ ಮಲಗುತ್ತಿದ್ದರು .ಅಡುಗೆ ಮನೆಯ ಒಂದು ಮೂಲೆಯೇ ಒಂದು ಬೆಡ್ ರೂಮ್ ಆಗಿತ್ತು. ಮದುವೆಯಾದವರು ಗಂಡನೊ೦ದಿಗೆ ಮಲಗಬೇಕಾದರೆ ಅವರಿಗೊಂದು ಪರದೆ ಕಟ್ಟಿದರೆ ಮುಗಿತು ಅವರ ಸಂಸಾರ ಅಲ್ಲೇ ಓಡಬೇಕು. ಮುಂಜಾನೆ ಅದು ಮತ್ತೆ ಅಡಿಗೆ ಮನೆ ಮಾತ್ರ.
ಕಾಲ ಸರಿದಂತೆ ಬದುಕು ಅನೇಕ ಬವಣೆಗಳನ್ನು ಹೊತ್ತು ಸಾಗಿ, ದಡ ಸೇರುವ ಹೊತ್ತಿಗೆ ಬಂದಿತ್ತು. ಏರಿಳಿತಗಳ ನಡುವೆ ಶೈನಾಜ್ ತನ್ನ ವಯಕ್ತಿಕ ಸುಖಗಳನ್ನ ಸಂತೋಷವನ್ನು ಮರೆತು ಬಿಟ್ಟಿದ್ದಳು. ಒಂದು ದಿನ ಹೊಲಿಗೆ ಹೊಲಿತಾ ಇರುವಾಗ ಟಿವಿಯಲ್ಲಿ ಒಂದು ಅಡ್ವರ್ಟೈಸ್ ನ್ನ ನೋಡಿದಳು. ಅವಳ ಪ್ರೀತಿಯ ಸೋಪಿನ ಅಡೈಟೈಜ್! ಲಕ್ಸ ಇಂಟರ್ನ್ಯಾಷನಲ್ ಸೋಪ್ನ ಜಾಹಿರಾತನ್ನು ನೋಡಿ ಬಾಲ್ಯವನ್ನು ನೆನಪಿಸಿಕೊಂಡಳು. ಶಾಲೆಗೆ ಹೋಗ್ತಾ ಇರುವಾಗ ಪೌಡರ್ ಹಚ್ಕೊಂಡು ಅಬ್ಬುನ ಅತ್ತರಿನ ಪರ್ಫ್ಯೂಮ್ ಹಾಕೊಂಡು ,ಉದ್ದ ಕೂದಲು ಬಿಟ್ಟುಕೊಂಡು ,ಹೂವು ಮುಡಿದು, ಕೈ ತುಂಬಾ ಬಳೆ ಹಾಕಿಕೊಂಡು ಓಡಾಡಿದ ದಿನಗಳು ನೆನಪಿನ ಬುತ್ತಿ ಬಿಚ್ಚಿದವು. ಹೀಗೆ ಟಿವಿ ನೋಡುತ್ತ ಏನೋ ಯೋಚನೆ ಮಾಡಿದ್ದೆ ತಡ ಲಕ್ಸ್ ಇಂಟರ್ನ್ಯಾಷನಲ್ ಸೋಪ್ ಅವಳನ್ನ ಆಕರ್ಷಿಸಿ ಬಿಟ್ಟಿತು.
ಹಳೆಯ ದಿನಗಳೆಲ್ಲ ನೆನಪಾಗಿ ಒಮ್ಮೊಲೇ ಅದೇನೋ ಹುಮ್ಮಸ್ಸು ಅವಳೊಳಗೆ ಹೊಕ್ತಿತು ಗಂಡ ಸಿರಾಜ್ ಅಂಗಡಿಗೆ ಹೋಗಿದ್ದ. ಅವನಿಗೆ ಫೋನ್ ಮಾಡಿ ಅಮ್ಮಿ ಅಬ್ಬನ್ನ ನೋಡ್ಕೊಂಡು ಬರ್ತೀನಿ ಅಂತ ಹೇಳಿದಳು. ಸಿರಾಜ್ ಆ ಕಡೆಯಿಂದ ಮಾತಾಡುವ ಮಾತುಗಳನ್ನು ಕೇಳಿಸಿ ಕೊಳ್ಳುವ ವ್ಯವಧಾನ ಅವಳುಗಿರಲಿಲ್ಲ. “ಶೈನುಭಿ ಮಳೆಗಾಲ ಶುರು ಆಗೇದ.ಮಕ್ಕಳು ಶಾಲಿಂದ ಬಂದ್ರೆ ಹೊಟ್ಟೆ ಹಸಿಕೊಂಡು ಬರ್ತಾವೆ! ಮಳೆ ಬರಬಹುದು . ಇಷ್ಟು ಸಂಜೆಗೆ ನೀನು ಧಾರವಾಡವರೆಗೂ ಹೋಗಿ ಮತ್ತೆ ವಾಪಸ್ ಬರೋದಾದ್ರೆ ರಾತ್ರಿ ಆಗಿಬಿಡತದ” ಅಡಿಗೆ ಮಾಡುವವರು ಯಾರು? ಅಂತ ಫೋನ್ನಲ್ಲಿ ಸಿರಾಜ್ ಮಾತಾಡತಾ ಇದ್ದಾ…. “ಅಲ್ರಿ ಬಾಳ ದಿನಾ ಆತು ಅವರನ್ನು ನೋಡಿ ಬೇಗನೆ ನೋಡ್ಕೊಂಡು ಬಂದ್ಬಿಡ್ತೀನ್ರಿ ಅಂತ ಗಂಡನ ಆದೇಶಕ್ಕಾಗಿ ಕಾಯದೆ ಸೀದಾ ಹೊರಟೆ ಬಿಟ್ಟಳು.
ಬಸ್ಸಿನಲ್ಲಿ ತವರಿಗೆ ಹೋಗೊದು ಒಂದು ಹಬ್ಬ. ಆದ್ರೆ ದಾರಿ ಯುದ್ದಕ್ಕೂ ಆಕೆಗೆ ಬೇಕಾದ ತಿಸಿಸುಗಳನ್ನು ತಿನ್ನುತ್ತ ಹೋಗೊ ಖುಷಿನೇ ಬೇರೆ ಆ ಕ್ಷಣಗಳನ್ನು ಒಮ್ಮೆ ಅನುಭವಿಸಿದ ಅವಳಿಗೆ ಮುಗಿಲು ಮೂರೇ ಗೇಣು. ಮದುವೆಕಿಂತ ಮುಂಚಿನ ತನ್ನ ಕನಸನ್ನು ಒಮ್ಮೆ ನೆನಪಿಸಿಕೊಂಡಳು ಗಂಡನೊ೦ದಿಗೆ ಸಿನೆಮಾ ಹೋಗಬೇಕು! ಅದರೊಂದಿಗೆ ಅವಳ ತುಂಬಾ ಪ್ರೀತಿಯ ಹರಾ ಬರಾ ಕಬಾಬ್ ತನಬೇಕು!ಮದುವೆ ನಂತರದಲ್ಲಿಯೂ ಕನಸು ಈಡೇರಲಿಲ್ಲ ಗಂಡನ ಸಂತೂರ್ ಸೋಪು ಇವಳಿಗೆ ಇಷ್ಟ ಆಗಲಿಲ್ಲ.
ಕಳೆದ ಐದಾರು ತಿಂಗಳಿ೦ದ ತನ್ನ ಅಕೌಂಟಿನಲ್ಲಿ ಸರ್ಕಾರದ ಯೋಜನೆಯಿಂದ ಬಂದಿರುವ ಹಣವನ್ನು ಅವಳು ಬಳಸಿರಲಿಲ್ಲ. ಒಂದು ಜೊತೆ ಜುಮುಕಿ ಮಾಡಿಸಿಕೊಳ್ಳಬೇಕು ಅಂತ ತುಂಬಾ ದಿನಗಳ ಆಸೆ ಇತ್ತು. ಬಂಗಾರದ ರೇಟ್ ಎರಡು ಲಕ್ಷ ಸಮೀಪಸ್ತಾ ಇದೆ ಅಂತ ಗೊತ್ತಾದಾಗ, ಜೀವನದ ಪೂರ್ತಿ ಕಿವಿಯೋಲೆ ಕಾಣೋದೇ ಕಷ್ಟ ಬಿಡು ಅಂತ ಸುಮ್ಮನಾಗಿದ್ದಳು. ಆದ್ರೆ ಅವಳ ತಲೆಯಲ್ಲಿ ಮಾತ್ರ ಲಕ್ಸ್ ಸೋಪು ಅವತ್ತು ಅವಳ ಕನಸಾಗಿ ಮನಸ್ಸಿನ ತುಂಬಾ ಗಮ್ಮ ಅಂದಿತ್ತು. ಈವರೆಗೂ ಶೈನಾಜ್ ಬೀ ಯಾವ ಅಂಗಡಿಗಳಿಗೆ ಹೋದವಳೇ ಅಲ್ಲ ಏನಾದರೂ ಬೇಕಿದ್ರೂ ಮಕ್ಕಳು ಮತ್ತು ಗಂಡನ ಕಡೆಯಿಂದ ತರಿಸಿಕೊಳ್ಳುತ್ತಿದ್ದಳು.
ಅಪ್ಪ ಅಮ್ಮನ ಮನೆಗೆ ಹೋಗ್ಬೇಕು ಅಂತ ಅಂದುಕೊಳ್ಳೋಕಿ೦ತ ಮುಂಚೆ ಸೀದಾ ಬಸ್ ಸ್ಟ್ಯಾಂಡ್ ಸಮೀಪದ ಸ್ಟೇಷನರಿ ಅಂಗಡಿಗೆ ಹೋದಳು. “ಒಂದು ಲಕ್ಸ ಇಂಟರ್ನ್ಯಾಷನಲ್ ಸೋಪ್ ಕೊಡ್ರಿ “ ಅಂತ ಕೇಳಿದಳು. ಅಂಗಡಿಯವನು “ಒಂದೇ ಸಾಕಾ ಮೇಡಂ” ಅಂದ “ಸದ್ಯಕ್ಕ ಒಂದು ಸಾಕ್ರಿ ಬಾಳ ರೊಕ್ಕಿಲ್ಲರಿ ನನ್ನ ಕಡೆಗೆ “ಅಂತ ಮರು ಉತ್ತರ ಕೊಟ್ಟಳು. ಅಂಗಡಿಯವ ಕೂಡಲೇ “ಅಲ್ರೀ ಹೆಣ್ಣು ಮಕ್ಕಳಿಗೆ ಬೇಕಾದಷ್ಟು ಸರ್ಕಾರ ಎರಡು ಸಾವಿರ ರೂಪಾಯಿ ಕೊಡಾಕತ್ತದ, ನೀವು ಈಗ ಅರ್ಧ ಡಜನ್ ಸೋಪ್ ತಗೊಂಡ್ರಾ ಒಂದು ಗ್ಲಾಸ್ ಲೋಟಾ ಫ್ರೀ ಬರ್ತೈತ್ ನೋಡ್ರಿ” ಅಂತ ಅಂದಾ!
ಅವಳಿಗೆ ಆಸೆ ಮತ್ತೆ ರೆಕ್ಕೆ ಕಟ್ಟುತ್ತದೆ .ಆರು ಸೋಪ್ ತಗೊಂಡ್ರು ಸ್ಟೀಲಿನ್ ಗ್ಲಾಸ್ ಫ್ರೀ ಬರ್ತೈತ್ರಿ.; ಮತ್ತ ಹಂಗ….ಈ ಆರೂ ಸೋಪ್ ಯೂಸ್ ಮಾಡಬೇಕಂದ್ರ ಒಂದು ವರ್ಷ ಬೇಕಾಕ್ತದ. ಆ ಗ್ಲಾಸ್ ಮನಿಗೆ ಉಪಯೋಗಕ್ಕೆ ಬರತದ ಅಂತ ಯೋಚಿಸಿ “ಭಯ್ಯಾಜೀ ಆರು ಲಕ್ಸ್ ಇಂಟರ್ನ್ಯಾಷನಲ್ ಸೋಪ ಕೊಡ್ರಿ” ಅಂತ ತಗೊಂಡು ಅದರ ಜೊತೆಗೆ ಒಂದು ಸ್ಟೀಲಿಂಗ್ ಗ್ಲಾಸ್ಅನ್ನು ಕೈಯಲ್ಲಿ ತೊಗೊಂಡು “ಥ್ಯಾಂಕ್ಸ್ ಅಣ್ಣ ಇಂಟರ್ನ್ಯಾಷನಲ್ ಸೋಪ್ ಕೊಟ್ಟಿಲ್ರೀð” ಬಹಳ ಸಂತೋಷಪಟ್ಟಳು.
ಅಂಗಡಿ ಹುಡುಗ “ಅಕ್ಕಾವ್ರೆ ನೀವು ದುಡ್ಡು ಕೊಟ್ಟಿದ್ದೀರಿ ಅದಕ ಕೊಟ್ಟಿನೀ ! ಆದರ ಒಂದೇ ಸೋಫು ತಗೊಂಡು ಹೋಗಿದ್ರಾ ಈ ಗ್ಲಾಸ್ ಮಿಸ್ ಆಕ್ತಿತ್ತು” ಫ್ರೀ ಐತೆ ಅಂತ ಹೆಣ್ಣು ಮಕ್ಕಳಿಗೆ ಬಳಕೆ ಅಂತಾನೆ ಕೊಟ್ಟಾರ ನೀವು ತೊಗೊಂಡಿದ್ದು ಬಾಳ ಛೋಲೋ ಆತು ಅಂದ” ಅಂಗಡಿಯ ಪಾವಟಿಗೆಯಿಂದ ಇಳಿಯುವಾಗ ,ಈಗ ಒಂದು ಪೇಚಿಗೆ ಬಿದ್ದಳು ಶೈನುಭಿ. ಅಪ್ಪನ ಮನೆ ಹೋದ್ರ, ಈಗ ನನ್ನ ಬ್ಯಾಗ್ ಚೆಕ್ ಮಾಡ್ತಾರವರು. ಏನ್ ತಂದಾಳ ಅಂತ ನೋಡತಾರೆ. ತಾನು ಲಕ್ಸ ಇಂಟರ್ನ್ಯಾಷನಲ್ ಸೋಪ್ ಬಳಸ್ತಾ ಇದೀನಿ…ಖರೀದಿಸಾಕ ತಾನೋಬ್ಬಳೆ ಅಂಗಡಿಗೆ ಹೋಗಿದ್ದೆ ಅಂತ ಗೊತ್ತಾದ್ರೆ ಅಬ್ಬನತ್ರ ಬೈಸ್ಕೊ ಬೇಕಾತಲ್ಲ, ಒಂದು ಕ್ಷಣ ಹೆಜ್ಜೆ ಹಿಂದೆ ಹಾಕಿದ್ಲು .ಏನ್ ಮಾಡೋದು ಅಂತ ಯೋಚನೆ ಮಾಡ್ತಾ ಅವಳ ಕಣ್ಣಿಗೆ ಬಿದ್ದಿದ್ದೆ ಒಂದು ಸಣ್ಣ ಹೋಟೆಲ್ ಬೃಂದಾವನ.
ಶೈನಾಜ್ ಕನಸಿಗೆ ಮತ್ತೆ ಚಿಗುರು. ಅಂದ ಚಂದದ ಹೊಟೆಲ್ ಬೋರ್ಡ್ಗಳನ್ನ ಲೈಟ್ ಹಾಕಿರೋದನ್ನು, ಅವುಗಳಲ್ಲಿ ತಿಂಡಿ ತಿನಿಸಿನ ಪೋಸ್ಟರ್ ಗಳನ್ನು ನೋಡಿದವಳೇ ! ನಾನು ಚಿಕ್ಕಂದಿರುವಾಗ ತಿನ್ಬೇಕಾಗಿರುವ ತಿಸಿಸುಗಳನ್ನು ಕಂಡು ಕ್ಷಣಕಾಲ ನಿಂತಳು. ಅದೇನೋ ಖುಷಿ ಮೈ ಹೊಕ್ತಂತಾತು. ಬೃಂದಾವನ ಹೊಕ್ಕಳು.
ಕೈಯಲ್ಲಿ ದುಡ್ಡಿದೆ! ನನಗೇನು ಬೇಕು ಅದನ್ನು ತಿನ್ನ ಬೇಕಲ್ವಾ ನಾನು, ಹೆದರಿಕೆಯಿಂದ ಹೆಂಗ್ ತಿನ್ನೋದು ಅಂತ ಬಿಟ್ರೆ ಇಂತಹ ದಿನ ಈ ಸಮಯ ನಂಗ ಮತ್ತ ಸಿಗೊದಿಲ್ಲ ಅಂತ ಮನಸ್ಸು ಗಟ್ಟಿ ಮಾಡಕೊಂಡು ವೇಟರ್ ನ ಕರೆದಳು. ಒಳಗೊಳಗೆ ತನ್ನ ಈ ಅಸಾಮಾನ್ಯ ಧೈರ್ಯಕ್ಕೆ ತಾನೇ ಬಲೇ ಬಲೇ ಅನ್ಕೊಳ್ತಾ ಇರುವಾಗ ಆ ವೆಟರಪ್ಪ ಬಂದು “ಏನ್ ಬೇಕಮ್ಮ ಅಂತ ಕೇಳಿದ ಹರಾ ಬರಾ ಕಬಾಬ್ ಇದೇನಾ ನಿಮ್ಮ ಅಂಗಡೀಲಿ ಅಂದಳು. ಇದೆ ಅಮ್ಮ ಬಿಸಿಬಿಸಿ ಕೊಡ್ತೀವಿ; ಕೊಡಪ್ಪ ಫಸ್ಟು ಅಂತ ಹೊಟ್ಟೆ ತುಂಬ ತಿನಬೇಕು ಅಂದಳು. ತನಗೆ ಬೇಕಾಗಿರೋ ಮಸಾಲ್ ದೋಸೆ ಆರ್ಡರ್ ಮಾಡಿ ತಿಂದ್ಲು. ಅವಳಿಗೆ ಇದು ಸಾಕಾಗಲಿಲ್ಲ ಬೂಬಮ್ಮನಿಗೆ ಮತ್ತೆ ಇನ್ನೊಂದು ಪ್ಲೇಟ್ ತಿನ್ಬೇಕು ಅಂತ ಅನ್ನಿಸ್ತು ! “ಇನ್ನೊಂದು ಪ್ಲೇಟ್ ಕಬಾಬ್ ಕೊಡ್ತೀಯಾ? ಅಂದಳು. ಹರಾ ಬರ ಕಬಾಬ್ ನ ಹೊಟ್ಟೆ ತುಂಬಾ ತಿಂದು ನೀರು ಕುಡಿಬೇಕು ಅನ್ನೋ ಅಷ್ಟೊತ್ತಿಗೆ ! ಅಮ್ಮ ಟೀ ಬೇಕಾ ?ಕಾಫಿ ಬೇಕಾ? ಅಂದಾ. “ಆ ಟೀ ಕಾಫಿ ತನ್ನ ಜನುಮದಲ್ಲಿ ಯಾವಾಗಲೂ ಕುಡಿದಿದ್ದೆ ಇದ್ದೆ ಇದೆ” ಅಂದಾಗ. ಇವಳನ್ನೇ ನೋಡುತ ಅಮ್ಮ ಟೀ ಕಾಫಿ ಯಾಕೆ ಒಂದು ಲೋಟ ಹಾರ್ಲಿಕ್ಸ್ ಕೊಟ್ಟು ಬಿಡ್ಲಾ ಅಂದಾ! ಟಿವಿಯಲ್ಲಿನ ಜಾಹಿರಾತು ನೆನಪಾತು ಇವತ್ತಾದ್ರೂ ಬೋರ್ನ್ವಿಟಾ ಕುಡಿಬೇಕು ಅಂತ ಆರ್ಡರ್ ಮಾಡಿದಳು. ಬಿಸಿಬಿಸಿಯಾದುದನ್ನು ಕುಡಿದ ಶೈನಾಜ್ ಮನಸ್ಸು ಸಮಾಧಾನ ಆಯ್ತು! ಬಿಲ್ಲು ಅಂತ ಕೇಳಿದ್ಲು , ನೂರಿಪ್ಪತ್ತು ಅಂದ .. ನಾನೆಲ್ಲೋ ಸಾವಿರಾರು ರೂಪಾಯಿ ಆಗ್ಬಿಡುತ್ತೆ; ಹೊಟೇಲ್ ದೊಡ್ಡದು ಅಂತ ಅನ್ಕೊಂಡಿದ್ದೆ ಆದರೆ ಬರೀ ನೂರಿಪ್ಪತ್ತು ರೂಪಾಯಿ ಆತಾ ಅಂತ ಹಿರಿಹಿರಿ ಹಿಗ್ಗಿದಳು. ಆ ಹುಡುಗನಿಗೆ ತನ್ನ ತಾಯಿ ನೆನಪಾತು, ನಮ್ಮ ಅವ್ವನಿಗೂ ಪಾಪ ಹಿಂಗ ಆಶೆ ಇರಬೇಕಲ್ವಾ ಹಂಗಾರ ಒಮ್ಮೆ ನಮ್ಮ ಅವ್ವನ್ನೂ ಈ ಹೊಟೇಲ್ ಗೆ ಕರಕೊಂಡು ಬಂದು ತಿನಸಬೇಕು ಅಂತ ಯೋಚಿಸಿದ !
ಕೈ ತುಂಬಾ ಹಣ ಇದ್ರು ಬಿಲ್ ಗೆ ಹೆದರಿ ಹೊಟೇಲ್ ನಲ್ಲಿ ತನಗಿಷ್ಟದ ದೊಸೆ ಕಬಾಬ್ ತಿನ್ನಲು ಐವತ್ತು ವರ್ಷ ಬೇಕಾತು ಅಂತ ನಿಟ್ಟುಸಿರು ಬಿಟ್ಟಳು. ಎರಡು ನೂರು ರೂಪಾಯಿ ಕೊಟ್ಲು ಚೇಂಜ್ ತಗೊಂಡ್ ಬಂದ ಹುಡುಗ .ಆ ಹುಡುಗನಿಗೆ ಅಪ್ಪ; ಇಷ್ಟು ಪ್ರೀತಿಯಿಂದ ನನಗೆ ಅಮ್ಮ ಅಂತ ಹೇಳಿ ಎಲ್ಲ ತಂದು ಕೊಟ್ಟಿದ್ದೀಯಪ್ಪ ನೀನು ಈ ಐವತ್ತು ರೂಪಾಯಿ ತೊಗೊ ನೀನು ನಿನಗೇನು ಬೇಕು ತಿನ್ನು ಅಂದಳು. ನಾನು ಅಂದ್ಕೊAಡಿರೋ ಆಸೆಗಳು, ಕನಸುಗಳೆಲ್ಲ ಇವತ್ತು ಈಡೇರಿದವು. ಇವತ್ತು ಲಕ್ಸ ಇಂಟರ್ನ್ಯಾಷನಲ್ ಸೋಪು ನನಗಾಗಿ ತಗೊಂಡಿದೀನಿ. ಹಾಗೆ ಹರಾ ಬರಾ ಕಬಾಬ್ ತಿಂದಿದ್ದೇನೆ, ಇದೆರಡು ಮೂವತ್ತು ವರ್ಷಗಳ ಹಿಂದಿನ ನೆನಪುಗಳು. ಆ ಆಶೆಯನ್ನು ಮನಸಲ್ಲಿ ಇಟ್ಕೊಂಡಿದ್ದೆ , ಇವತ್ತು ನಿಜವಾದ ನನ್ನ ಆಸೆ ನೆಡೆಸ್ಕೊಳ್ತಾ ಇದೀನಿ; ಅಂತ ಆ ಹುಡುಗನಿಗೆ ಖುಷಿಯಿಂದ ಹೇಳಿದಳು.
“ಅಮ್ಮ ಮತ್ತೆ ಬನ್ನಿ ಇದಕ್ಕಿಂತ ಒಳ್ಳೆ ಡಿಶ್ ಗಳನ್ನು ನಿಮಗಾಗಿನೆ ಮಾಡಿಸಿ ಕೊಡ್ತೀನಿ” ಅಂದಾಗ ಬೂಬಮ್ಮನಿಗೆ ತನಗಾಗಿ ಯಾರೂ ಹೀಗೆ ಈ ವರೆಗೂ ಹೇಳಿರಲಿಲ್ಲ ಅಂತ ಒಮ್ಮೆಲೇ ಮನದುಂಬಿ ಕಣ್ಣಾಲಿ ಉದುರಿದವು. ರಸ್ತೆ ಬದಿಯಲಿ ನಿಂತು ತನ್ನ ಲಕ್ಸ ಸೋಪು ಮತ್ತು ಲೊಟ ಇರುವ ಬ್ಯಾಗನ್ನು ಎದೆಗೆ ಅವಚಿಕೊಂಡು ಮನೆಗೆ ಮರಳಲು ಬಸ್ ಸ್ಟ್ಯಾಂಡ್ ಗೆ ಹೆಜ್ಜೆ ಹಾಕಿದಳು. ಒಮ್ಮೆಲೇ ಮೋಡ ಕವಿದ ಆಕಾಶದಲ್ಲಿ ಗುಡುಗು ಮಿಂಚು ಕಾಣಿಸಿತು. ಬೂಬಮ್ಮಳಂತೆ ಹಲವು ವರ್ಷ ಘನಿ ಕರಿಸಿದ ಕಾರ್ಮೋಡ ಮಳೆಯಾಗಿ ಸುರಿದು ಹಗುರಾಗ ಬೇಕಿದೆ ಅನಿಸಿರಬಹುದು ಅದಕ್ಕೂ ಕೂಡಾ ಅಂತ ಒಳಗೊಳಗೆ ಮೇದುಗೊಂಡಳು.
“ಸುರಿಯದಲಿ ಬೀಡು ಇಂದಾದರು ಮಳೆ ಜೋರಾಗಿ ! ತನ್ನ ಬಂಧನ ಕಳಚಿ, ತನ್ನ ನೋವು ಕಳಚಿ ” ಅಂತ ಗೊಣಗುತ್ತ, ತನ್ನ ಆಶೆಗೆ ರೆಕ್ಕೆ ಕಟ್ಟಿಕೊಂಡ ಬೂಬಮ್ಮ ಹಕ್ಕಿಯಂತಾಗಿದ್ದಳು.ಮಳೆ ಹನಿಗಳು ಅವಳೆದೆಯ ಬೆಚ್ಚನೆಯನ್ನು ತಂಪಾಗಿಸಿತ್ತು.ಲೋಕದ ಬಗ್ಗೆ ಯಾವುದೇ ಪಿರಿಪಿರಿ ತಕರಾರುಗಳಿಲ್ಲದೇ ಅಂತರAಗದಲ್ಲಿ ತಪ್ತವಾಗಿ ಮುರುಟಿ ಹೋಗಿದ್ದ ಭಾವಗಳು ಸಿಡಿಲು ಶಬ್ದಕ್ಕೆ ಮೌನವಾಗಿ ಅವಳ ಕಾಲಿಗೆ ಶಕ್ತಿ ತುಂಬಿದವು. ಬಡ ಮತ್ತು ಮಧ್ಯಮ ವರ್ಗದ ಹೆಣ್ಣುಮಕ್ಕಳ ಬದುಕು ಹೀಗೆ ಅಲ್ವಾ…ಬಿರು ಬಿಸಿಲಿನಲ್ಲಿ ಒಣ ಹಾಕಿದ ಒದ್ದೆ ಬಟ್ಟೆಯಂತೆ….ಒಮ್ಮೆ ಒಣಗಬಹುದು ಇನ್ನೊಮ್ಮೆ ತೊಪ್ಪನೆ ತೊಯ್ಯಬಹುದು.. ಮೈ ಚಳಿ ಬಿಟ್ಟು ನಿಂತ ಗಿಡ ಮರಗಳಂತೆ, ಬೆಟ್ಟ ಗುಡ್ಡಗಳಂತೆ, ಹಸಿರು ಹೂವುಗಳಂತೆ, ಸದಾ ಆಕಾಶಕ್ಕೆ ಏಣಿ ಕಟ್ಟುವ ಕಾಮನಬಿಲ್ಲಿನಂತೆ. ,ಭಾವ ಸಮಾಗಮದಲ್ಲಿ ಮಿಂದೆದ್ದು ಹೊಸ ಅಪರಿಚಿತ ಯಾನಕ್ಕೆ ಹಿರಿಹಿರಿ ಹಿಗ್ಗಿದ್ದಳು.





0 Comments