ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಶ್ವಂತ್ ಕೋಳಿಬೈಲು ಕವಿತೆ – ಅಮ್ಮ ಮುತ್ತಿನಹಾರದಿಂದ…

ಕುಶ್ವಂತ್ ಕೋಳಿಬೈಲು

1.
ದಾರ, ತಾಯತಗಳನ್ನು
ನನ್ನ ಹಿತೈಷಿಗಳು ಕಟ್ಟಿಬಿಟ್ಟರು…
ಅಮ್ಮ ಸುಮ್ಮನೆ
ನನ್ನ ತಲೆಯನೊಮ್ಮೆ ಮುಟ್ಟಿಬಿಟ್ಟರು!!

2.
ಹಸುವಿಗೆ ಹಾಯಲು
ಬರಬೇಕು..
ಕರುವಿನ ಹಿತ
ಕಾಯಲು ಬರಬೇಕು !!!

3.
ಮನೆಯ ಎಲ್ಲಾ ಖಾತೆಗಳನ್ನು
ಸಮರ್ಥವಾಗಿ ನಿಭಾಯಿಸುತ್ತಾಳೆ..
ಆದರೂ ಅಮ್ಮ ಪ್ರಮಾಣವಚನ
ಸ್ವೀಕರಿಸಲು ಹಿಂದೇಟು ಹಾಕುತ್ತಾಳೆ

4.
ಕುಕ್ಕರಿನ ಸೀಟಿ ಕೇಳಿಸಿತು
ಅವಳ ನಿಟ್ಟುಸಿರು ಕೇಳಿಸಲಿಲ್ಲ…
ಕೈ ತುಂಬಾ ಕೆಲಸ ಅವಳಿಗೆ
ಆದರೂ ತಿಂಗಳ ಕೊನೆಗೆ ಸಂಬಳ ಬರುವುದಿಲ್ಲ!!

5.
ಜನರು ಬಂಗಾರ,
ಜಮೀನ ಮೇಲೆ ಹೂಡಿಕೆ ಮಾಡಿದರು..
ನನ್ನಮ್ಮನ ಜಾಣ್ಮೆ ನೋಡಿ
ನನ್ನ ಮೇಲೆ ಬಂಡವಾಳ ಹಾಕಿದಳು!!!

6.
ಭಗವದ್ಗೀತೆಯ ಮೇಲೆ ಕೈಯಿಡಬೇಕಿಲ್ಲ,
ನನ್ನ ಮಾತನ್ನು ಅಮ್ಮ ನಂಬುತ್ತಾಳೆ..
ನನ್ನ ಸುಳ್ಳುಗಳನ್ನೂ
ಏನೂ ಗೊತ್ತಿಲ್ಲದವಳಂತೆ ಕೇಳುತ್ತಾಳೆ!!!

7.
ಪ್ರತಿ ಹೆಜ್ಜೆಯಿಡುವ ಮುನ್ನ
ನಾನು ಕಾಲ, ಗಳಿಗೆಗಳನ್ನು ನೋಡುತ್ತೇನೆ..
ಅಮ್ಮನ ಮಡಿಲಾಗಿದ್ದರೆ ಮಾತ್ರ
ಉತ್ತರಕ್ಕೂ ತಲೆಹಾಕಿ ಮಲಗುತ್ತೇನೆ!!!

8.
ಅಮ್ಮನಿಗೆ ಬಹುಶಃ
ದೇವರಾಗುವ ಶಕ್ತಿಯಿಲ್ಲ…
ಅವಳಿಗೆ ಶಾಪ
ಕೊಡಲು ಬರುವುದಿಲ್ಲ !!

9.
ಅವರಿವರ ಹೆಗಲ ಮೇಲೆ ಕುಳಿತೆ,
ಆದರೂ ಚಂದ್ರ ಕಾಣಿಸಲಿಲ್ಲ..
ಅಮ್ಮನ ಮಡಿಲಿನಿಂದ
ಕೈಗೆ ನಕ್ಷತ್ರಗಳೂ ಎಟುಕುತ್ತಿದ್ದವು…

10.
ಅಮ್ಮನ ಬೆತ್ತದ ಭಯವಿರಲಿಲ್ಲ
ನಾನು ಮಾಡಿದೆಲ್ಲಾ ತಪ್ಪಿಗೆ…
ಈಗ ಬೆಚ್ಚಿ ಬೀಳುತ್ತೇನೆ,
ಅಮ್ಮನನ್ನು ಆವರಿಸುತ್ತಿರುವ ಮುಪ್ಪಿಗೆ!!!!

11.
ಕೇಳದೆಯೆ ಕೊಟ್ಟಿದ್ದರೆ..
ಹೇಳದೆಯೆ ಅರ್ಥಮಾಡಿಕೊಂಡಿದ್ದರೆ..
ನಾನು ಸರಕಾರವನ್ನೂ
ಅಮ್ಮಾ ಎಂದು ಕರೆಯುತ್ತಿದ್ದೆ!!!

‍ಲೇಖಕರು Admin

9 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading