ಪಿ ಪಿ ಉಪಾಧ್ಯ ಸರಣಿ ಕಥೆ 7 – ಕಲ್ಲು ತಿಂದು ಕಲ್ಲು ಅರಗಿಸಿಕೊಳ್ಳುವ ಹುಮ್ಮಸ್ಸು…

ಪಿ ಪಿ ಉಪಾಧ್ಯ

7

ಕಲ್ಲು ತಿಂದು ಕಲ್ಲು ಅರಗಿಸಿಕೊಳ್ಳುವ ಹುಮ್ಮಸ್ಸು

ಇದು ಪ್ರತಿ ಸಲ ಶಾಮಣ್ಣ ಮಗುವಿನ ನಾಮಕರಣಕ್ಕೆಂದು ಹೆಂಡತಿಯ ತವರು ಮನೆಗೆ ಬಂದಾಗ ನಡೆಯುವ ಘಟನೆ. ಪ್ರತಿಸಲವೂ ಇದನ್ನು ನೋಡುತ್ತಿದ್ದ ನೆರೆದ ಅದೇ ಗುಂಪಿನವರಿಗೆ ಆಸಕ್ತಿಯ ವಿಷಯವೂ ಹೌದು. ಪಡು ಕಡಲ ತಡಿಯಿಂದ ಬಂದ ಊರ ಅಳಿಯನ ಬಗ್ಗೆ, ಅವರ ಜ್ಞಾನದ ಬಗ್ಗೆ ಅವರೆಲ್ಲರಲ್ಲಿ ಮೆಚ್ಚುಗೆ ಮತ್ತು ಅಭಿಮಾನ. ಹಾಗಾಗಿ ಅವರು ಬಾಯಿತೆರೆಯುವುದನ್ನೇ ಬಿಟ್ಟ ಬಾಯಿ ಬಿಟ್ಟುಕೊಂಡು ಕಾಯುತ್ತಿರುತ್ತಾರೆ. ಭಾವನ ಕೇಳಿಕೆಗೆ ಹೆಮ್ಮೆಯಿಂದ ಬೀಗುತ್ತ ಆ ನೆಂಟ ಹೆಸರುಗಳ ಪಟ್ಟಿಯನ್ನೇ ಮುಂದಿಡಬೇಕು. ಪ್ರತಿಯೊಂದೂ ಉದ್ದುದ್ದ ಹೆಸರುಗಳೇ. ಅದರಲ್ಲಿ ಒಂದನ್ನು ಆಯ್ಕೆಮಾಡಬೇಕು ಈ ಭಾವ.

ಆ ಪಟ್ಟಿಯಲ್ಲಿನ ಎರಡು ಮೂರು ಹೆಸರುಗಳನ್ನು ಆಯ್ಕೆ ಮಾಡಿ ಭಾವ ನೆಂಟನತ್ತ ನೋಡಬೇಕು. ಆಗ ನೆಂಟ ಅದೇ ಹೆಮ್ಮೆಯಿಂದ ಆ ಹೆಸರುಗಳನ್ನು ಹೇಳುತ್ತ ನೆರೆದಿದ್ದ ಮಂದಿಯತ್ತ ನೋಡಬೇಕು. ಓಹ್ ಚಂದವಿದೆ … ಚಂದವಿದೆ… ಎಂದು ಅವರೆಲ್ಲರೂ ಉದ್ಗಾರವೆತ್ತಿದಾಗ ಅವುಗಳಲ್ಲೇ ಒಂದನ್ನು ಈ ನೆಂಟನೇ ಆಯ್ಕೆ ಮಾಡಬೇಕು. ಹೆಸರಿಗೆ ಆಯ್ಕೆ ನೆಂಟನದ್ದೇ ಆದರೂ ಭಾವನ ಒಪ್ಪಿಗೆ ಪಡೆದ ಮೇಲೆಯೇ ಆ ಹೆಸರು ಮಂಜೂರು. ಇದು ಮೂರು ಮಕ್ಕಳ ಹೆಸರಿಡುವಾಗಲೂ ನಡೆದದ್ದೇ.

ಮೊದಲ ಮಗುವಾದಾಗ ಅಣ್ಣ ಇದು ಮೊದಲನೆಯದಲ್ಲವೇ ಅದಕ್ಕೇ ಇವನು ಆದಿನಾರಾಯಣ' ಎಂದಿದ್ದ. ಹೆಚ್ಚಿನ ಚರ್ಚೆಯಿಲ್ಲದೆ ಎರಡನೆಯವನಿಗೆ ಅನಂತಶಯನ ಎನ್ನುವುದೇ ಸೂಕ್ತ ಎಂದು ಭಾವ ನೆಂಟ ಇಬ್ಬರೂ ತೀರ್ಮಾನಿಸಿದರು. ಆದರೆ ಮೂರನೆಯದೊಂದು ಹುಟ್ಟಿದಾಗ ಇದೇ ಕೊನೆಯದು ಆದುದರಿಂದ ಅಂತ್ಯ ಎನ್ನುವುದು ಅವನ ಹೆಸರಿನಲ್ಲಿರಲೇಬೇಕು ಎನ್ನುವ ಇಬ್ಬರ ಬಯಕೆಯ ಮೇರೆಗೆ ತುಸು ಚರ್ಚೆ ನಡೆಸಿ ಅಂತ್ಯೋದ್ಧಾರಕ ಎಂದಿಟ್ಟಿದ್ದರು. ಕರೆಯಲು ತುಸು ಕಷ್ಟವೆನಿಸುತ್ತದೆ ಎಂದು ಪ್ರತಿ ಹೆಸರಿಡುವಾಗಲೂ ತನಗನ್ನಿಸಿದ್ದನ್ನು ಕಮಲಮ್ಮ ಅಣ್ಣನೊಂದಿಗೆ ಹೇಳಿದರೆ ಆ ಸಮಸ್ಯೆಗೂ ಅವನೇ ಪರಿಹಾರ ನೀಡಿದ್ದ.ನಾಮಕರಣದ ಸಮಯದಲ್ಲಿ ಮಗುವಿನ ಕಿವಿಯಲ್ಲಿ ಹೇಳಲು ಮಾತ್ರ ಈ ಹೆಸರು. ನೀವು ಕರೆಯುವಾಗ ಆದಿ, ಅನಂತ ಮತ್ತು ಅಂತ್ಯ ಎಂದರೆ ಸಾಕು…’. ಕಮಲಮ್ಮನಿಗೆ ಅದೂ ಒಪ್ಪಿಗೆಯಾಗಿತ್ತು.

ಶಾಮಣ್ಣ, ಕಮಲಮ್ಮ ದಂಪತಿಗಳ ಮೊದಲ ಮಗ ಆದಿ ಪ್ರಾಯಕ್ಕೆ ಬಂದಿದ್ದ. ಕಲ್ಲು ತಿಂದು ಕಲ್ಲು ಅರಗಿಸಿಕೊಳ್ಳುವ ಹುಮ್ಮಸ್ಸು. ಮುಟ್ಟಿದ್ದೆಲ್ಲ ಚಿನ್ನವಾಗಬೇಕೆಂಬ ಹಟ. ಕಣ್ಣೆದುರಿಗೇ ಅವು ಮಣ್ಣಾಗುತ್ತಿದ್ದರೂ ಛಲ ಬಿಡದಂತಹ ಧಾರ್ಷ್ಟ್ಯ. ಜೊತೆಗೇ ದೊಡ್ಡಮನೆ ಶಾಮಣ್ಣನ ಮಗನಾದ ಇವನ ಉತ್ಸಾಹಕ್ಕೆ ಇಂಬುಗೊಡುವ ಮತ್ತು ಯಾವಾಗಲೂ ಭೋ ಪರಾಕು ಹೇಳುವ ಚೇಲಾಗಳ ಪಡೆ. ಮಂಗನಿಗೆ ಕಳ್ಳು ಕುಡಿಸಿದ ಹಾಗೆ. ಅಪ್ಪನೋ ಅಜ್ಜನೋ ಮಾಡಿಟ್ಟ ಆಸ್ತಿ ಸಾಕಷ್ಟಿದೆ. ಅಭಿವೃದ್ಧಿ ಪಡಿಸುವ ಅಗತ್ಯವಿಲ್ಲ. ಹಾಳುಮಾಡದೆ ಹಾಗೆಯೇ ಇಟ್ಟುಕೊಂಡು ಹೋದರೂ ಸಾಕು. ಈಗಂತೂ ನೋಡಿಕೊಳ್ಳಲು ಅಪ್ಪ ಇದ್ದಾರೆ. ಕೈ ಚಾಚಿದರೆ ಆ ಕೈ ತುಂಬುವಷ್ಟು ಹಣ ಖರ್ಚಿಗೆ ಸಿಗುತ್ತದೆ.

ಅದೇ ಪ್ರಾಯದ ಹುಮಸ್ಸಿನಲ್ಲಿ ಆದಿ ಮೊದಲು ಉಮೇದು ಮಾಡಿದ್ದು ಎಮ್ಮೆ ವ್ಯಾಪಾರಕ್ಕೆ. ಘಟ್ಟದ ಮೇಲಿಂದ ಸುರುಟಿ ಎಮ್ಮೆಗಳನ್ನು ತಂದು ಊರಿನಲ್ಲಿ ಮಾರಿದರೆ ಒಂದಕ್ಕೆರಡು ಲಾಭ ಎಂದಿದ್ದರು ಯಾರೋ. ಜೊತೆಯಲ್ಲಿದ್ದವರು ಹೂಂ.. ಹೂಂ.. ಎಂದು ತಲೆಯಲ್ಲಾಡಿಸಿದ್ದರು. ಒಂದೋ ಎರಡೋ ತಂದು ನೋಡಬಹುದಿತ್ತು. ಹಾಗೆ ಒಂದೋ ಎರಡೋ ತಂದು ಮಾರಾಟ ಮಾಡಿ ದುಡ್ಡು ನೋಡುವುದು ಯಾವಾಗ. ಒಂದು ಎಮ್ಮೆಯ ಮೇಲೆ ನೂರು ಇನ್ನೂರು ಸಿಕ್ಕೀತು. ಅದ್ಯಾವ ಲೆಕ್ಕ. ಅದೇ ಹತ್ತಿಪ್ಪತ್ತು ತಂದರೆ… ಅಲ್ಲಿ ಕೊಳ್ಳುವಾಗಲೂ ಸಗಟು ವ್ಯಾಪಾರವಾದ್ದರಿಂದ ಕಡಿಮೆಗೆ ಸಿಗಬಹುದು. ಇಲ್ಲಿ ಹೇಗೂ ಮಾಮೂಲಿ ದರದಲ್ಲಿಯೇ ಮಾರುವುದು. ಓಹ್…. ಲಾಭವೇ ಲಾಭ.

ಅಪ್ಪನಿಗೂ ಮಗನ ಮೇಲೊಂದು ನಂಬಿಕೆ. ಕೇಳಿದಷ್ಟು ಹಣ ಕೊಟ್ಟಿದ್ದರು. ಶಿರಸಿ ಸಂತೆಯಲ್ಲಿ ಎಮ್ಮೆಗಳು ಅಗ್ಗದಲ್ಲಿ ಸಿಗುತ್ತವೆಯೆಂದು ಎಮ್ಮೆ ಸೀನ ಆವತ್ತೇ ಹೇಳಿದ್ದ. ಎಮ್ಮೆಯ ಬಾಯಿ ತೆರೆಸಿ ಎಷ್ಟು ಹಲ್ಲುಗಳಾಗಿದ್ದಾವೆಂದು ಹೇಳಲೂ ಅವನೇ ಬೇಕು ಎಂದು ಜೊತೆಗೆ ಅವನನ್ನೇ ಕರೆದುಕೊಂಡು ಹೊರಟಿದ್ದ.
ಸಿರಸಿ ಸಂತೆಯಲ್ಲಿ ಎಮ್ಮೆಗಳೇನೋ ಸಿಕ್ಕಿದ್ದವು. ಅದೂ ಅಗ್ಗವಾಗಿಯೇ. ಎಮ್ಮೆ ಸೀನ ದಾರಿಯುದ್ದಕ್ಕೂ ತನ್ನ ಎಮ್ಮೆಗಳ ಬಗ್ಗೆ ತನಗಿದ್ದ ಜ್ಞಾನದಿಂದಾಗಿ ಹೇಗೆ ಅಂತಹ ಲಾಭದಲ್ಲಿ ವ್ಯಾಪಾರ ಕುದುರಿಸಲಿಕ್ಕೆ ತನಗೆ ಸಾಧ್ಯವಾಯ್ತು ಎಂದು ಹೇಳುತ್ತಲೇ ಇದ್ದ. ಒಟ್ಟು ಹದಿನಾರು ಎಮ್ಮೆಗಳನ್ನು ಕೊಂಡಿದ್ದರು. ಸೀನನ ಲೆಕ್ಕ ಪ್ರಕಾರ ಒಂದೊAದು ಎಮ್ಮೆಯ ಮೇಲೆ ಎರಡು ಸಾವಿರವಾದರೂ ಸಿಗಬೇಕು. ಹಾಗೆ ಸಿಗದಿರಲು ಅವೇನು ಸಾಮಾನ್ಯವಾದ ಊರಿನ ಎಮ್ಮೆಗಳೇ. ಕರೆದರೆ ಒಂದೊ೦ದೂ ಹತ್ತು ಹನ್ನೆರಡು ಲೀಟರ್ ಹಾಲು ಹೊತ್ತಿಗೆ ಕೊಡುವಂತಹವು. ಹಾಗಿರುವಾಗ ಒಂದೊ೦ದು ಎಮ್ಮೆಯ ಮೇಲೆ ಎರಡು ಸಾವಿರವಾದರೂ ಸಿಕ್ಕದಿದ್ದರೆ ಹೇಗೆ. ಅಂದರೆ ನೂರಕ್ಕೆ ನೂರರಷ್ಟು ಲಾಭ. ಆದಿನಾರಾಯಣನಿಗೆ ಆಗಲೇ ಅಪ್ಪನಷ್ಟೇ ಶ್ರೀಮಂತನಾದ ಕನಸು.

ಅಪ್ಪನ ಶ್ರೀಮಂತಿಕೆಯಿದೆ ನಿಜ. ಆದರೆ ಅದಕ್ಕೆ ಇನ್ನಿಬ್ಬರು ತಮ್ಮಂದಿರಿದ್ದಾರಲ್ಲ ಪಾಲುದಾರರಾಗಿ. ಅದೇ ಈ ಎಮ್ಮೆ ವ್ಯಾಪಾರದಿಂದಾಗಿ ಬರುವ ಹಣವೆಲ್ಲ ತನ್ನದೇ…. ಖುಶಿಯಿಂದ ಉಬ್ಬಿದ. ಆ ಲೆಕ್ಕದಲ್ಲಿ ನಾಲ್ಕಾರು ದಿನಗಳ ದಾರಿಯಲ್ಲಿ ರಾತ್ರಿ ತಂಗಿದ್ದ ಊರುಗಳಲ್ಲಿ ಶೀನನಿಗೆ ಮಾಮೂಲಿಗಿಂತ ಎರಡು ಬಾಟ್ಲಿ ಹೆಚ್ಚು. ಆದರೆ ಎಮ್ಮೆಗಳು ಮಾತ್ರ ಪ್ರತಿ ರಾತ್ರಿಯ ಕ್ಯಾಂಪಿನಲ್ಲಿಯೂ ಒಂದು ಎರಡು ಕಡಿಮೆಯಾಗಹತ್ತಿದ್ದವು. ಮೊದಲನೆಯ ರಾತ್ರಿ ಕಣ್ಣಿ ಹರಿದುಕೊಂಡು ಓಡಿ ಹೋದವೇನೋ ಎನ್ನುವ ಸಂಶಯ ಬಂದದ್ದರಿ೦ದ ಮಾರನೆಯ ದಿನ ಹಾದು ಹೋಗುವ ಊರಿನಲ್ಲಿ ಇನ್ನೆರಡೆರಡು ದಪ್ಪ ಬಳ್ಳಿಗಳನ್ನು ತೆಗೆದುಕೊಂಡಿದ್ದರು. ಆದರೆ ಮಾರನೆಯ ದಿನವೂ ಮತ್ತೆರಡು ಎಮ್ಮೆಗಳು ಕಡಿಮೆಯಾಗಿದ್ದವು. ಆಶ್ಚರ್ಯವೆಂದರೆ ಕಣ್ಣಿ ಹರಿದದ್ದರ ಸುಳಿವೂ ಇಲ್ಲ. ಇದು ಯಾರೋ ಕಳ್ಳರದ್ದೇ ಕಿತಾಪತಿಯಿರಬೇಕೆಂಬ ಗುಮಾನಿ ಬಂದದ್ದೇ ಮುಂದಿನ ರಾತ್ರಿಯನ್ನು ಯಾವುದಾದರೂ ಊರೊಳಗೇ ಕಳೆಯಬೇಕೆಂದೂ ಸಾಧ್ಯವಾದರೆ ಊರಿನ ಪೋಲೀಸರ ಸಹಾಯವನ್ನು ಪಡೆದುಕೊಳ್ಳಬೇಕೆಂದೂ ಯೋಜಿಸಿದರು. ಆ ತೆರನಲ್ಲಿ ಭದ್ರ ಕಾವಲಿನ ವ್ಯವಸ್ಥೆ ಮಾಡಿ ತಂಗಿದ ರಾತ್ರಿ ಬೆಳಗಾಗುವಾಗ ಎರಡು ಎಮ್ಮೆಗಳು ಮಲಗಿದ್ದವು ಎದ್ದಿರಲೇ ಇಲ್ಲ. ಹತ್ತಿರ ಹೋಗಿ ಬಡಿದರೂ ಇಲ್ಲ ಬಾಲ ತಿರುಚಿದರೂ ಇಲ್ಲ. ಗೊರಗೊರ ಸದ್ದು ಬಾಯಿಯಲ್ಲಿ ಹೊರಡಿಸುತ್ತಲೇ ಇವರಿಬ್ಬರೂ ನೋಡ ನೋಡುತ್ತಿದ್ದಂತೆಯೇ ಪ್ರಾಣ ಬಿಟ್ಟವು.

ಕಾಲು ಬಾಯಿ ರೋಗ ಅಯ್ಯ ಇದು. ನಾವು ಕೂಡಲೇ ಇಲ್ಲಿಂದ ಜಾಗ ಖಾಲಿ ಮಾಡದಿದ್ದರೆ ಉಳಿದವಕ್ಕೂ ಹರಡಬಹುದು' ಎಂದ ಶೀನ ಕೂಡಲೆ ಉಳಿದ ಎಮ್ಮೆಗಳ ಜೊತೆ ಆದಿಯನ್ನು ಅಲ್ಲಿಂದ ಹೊರಡಿಸಿದ. ದಾರಿಯ ಮೇಲೆ ಸಿಕ್ಕಿದ ಒಂದು ಹಳ್ಳಿಯ ದಾರಿಯಲ್ಲಿ ಹೋಗುತ್ತಿದ್ದಾಗ 'ಒಂದು ಕ್ಷಣ ನಿಲ್ಲಿ' ಎಂದ ಆದಿ ಮತ್ತು ಎಮ್ಮೆಗಳನ್ನು ಅಲ್ಲಿಯೇ ಬಿಟ್ಟು ಪಕ್ಕದಲ್ಲಿದ್ದ ಕಾಡೊಳಗೆ ನುಗ್ಗಿ ಅದೇನೋ ಒಂದಿಷ್ಟು ಸೊಪ್ಪು ತಂದ. ಅವನ್ನು ಕೈಯ್ಯಲ್ಲೇ ಹಿಸುಕಿ ಆ ಎಮ್ಮೆಗಳ ಮೂಗಿಗೆ ಹಿಡಿದ ಮತ್ತು ಒಂದೊ೦ದು ಹಿಡಿ ಸೊಪ್ಪನ್ನು ಅವುಗಳ ಕುತ್ತಿಗೆಗೆ ಕಟ್ಟಿದ. ಹಾಗೆ ಆ ಊರು ಬಿಟ್ಟು ಹೊರಡುವಾಗ ಇವರೊಂದಿಗಿದ್ದ ಎಮ್ಮೆಗಳ ಸಂಖ್ಯೆ ಒಂಬತ್ತು.ಹೌದಾ ಶೀನ.. ಹೀಗೇ ಮುಂದುವರಿದರೆ ನಾವು ಊರು ಮುಟ್ಟುವಾಗ ಬಹುಶಃ ನಾನು ಮತ್ತು ನೀನು ಇಬ್ಬರೇ..’ ಎಂದು ಬೇಸತ್ತ ಆದಿನಾರಾಯಣ ಹೇಳಿದರೆ `ಶೀನ.. ಅದು ಹ್ಯಾಂಗೆ ಆಗುತ್ತಯ್ಯ.. ಇನ್ನು ಒಂದು ಎಮ್ಮೆಗೂ ಏನೂ ಆಗುವುದಿಲ್ಲ ನೋಡಿ’ ಎಂದು ಆಶ್ವಾಸನೆ ಕೊಟ್ಟ. ಮತ್ತು ಮುಂದೆರಡು ದಿನಗಳೂ ಅವರು ರಾತ್ರಿ ಹೊತ್ತು ಮಲಗಲೇ ಇಲ್ಲ. ಅಷ್ಟು ದಣಿವಾದರೆ ಹಗಲಿನಲ್ಲೇ ಎಲ್ಲಾದರೂ ನೆರಳು ನೋಡಿ ಗಂಟೆಯೆರಡು ಗಂಟೆ ಹೊತ್ತು ಸುಧಾರಿಸಿಕೊಂಡು ಹೊರಟು ಬಿಡುತ್ತಿದ್ದರು.

ಅಂತೂ ಎಲ್ಲ ವಿಘ್ನಗಳನ್ನು ದಾಟಿ ಅವರು ಊರು ಸೇರುವಾಗ ಉಳಿದದ್ದು ಬರೀ ಎಂಟು ಎಮ್ಮೆಗಳು. ಅದೂ ಊರಿನ ಬಿಸಿಲಿಗೆ ಮತ್ತು ನಡೆದು ಬಂದ ಆಯಾಸಕ್ಕೆ ಸೊರಗಿ ಹೋಗಿದ್ದ ಸುರುಟಿ ಎಮ್ಮೆಗಳು. ಶಾಮಣ್ಣನವರ ಹಿರೀ ಮಗ ಘಟ್ಟದ ಮೇಲಿನಿಂದ ಸುರುಟಿ ಎಮ್ಮೆಗಳನ್ನು ತಂದಿದ್ದಾನ೦ತೆ. ಒಂದೊ೦ದು ಎಮ್ಮೆಯೂ ಮರಿಯಾನೆಗಳ ಹಾಗೆ ಇದ್ದಾವಂತೆ ಎನ್ನುತ್ತ ಆ ಎಮ್ಮೆಗಳನ್ನು ನೋಡಲು ಜನರ ಹಿಂಡೇ ಬಂದಿತ್ತು. ಕಟ್ಟಿಹಾಕಿದ ಎಮ್ಮೆಯ ತಲೆ ಸವರಿ ಮೈ ಬಳಚಿ ಅದರ ಕಬ್ಬಿಣದ ತಂತಿಗಳ೦ತಿದ್ದ ರೋಮಗಳನ್ನು ಹಿಡಿದೆಳೆಯುತ್ತ ಆನಂದಪಟ್ಟರು. ಅಷ್ಟೆಲ್ಲ ಮಾಡಿದವರು ಯಾರೂ ಎಮ್ಮೆಗಳನ್ನು ಕೊಳ್ಳಲು ಮಾತ್ರ ಮುಂದೆ ಬರಲಿಲ್ಲ.

। ಇನ್ನು ನಾಳೆಗೆ ।

‍ಲೇಖಕರು Admin

May 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: