ಜಯಲಕ್ಷ್ಮಿ ಪಾಟೀಲ್ ಅಂಕಣ- ಓದಿನಲ್ಲಿ ಊಟದೊಂದಿಗಿನ ಉಪ್ಪಿನಕಾಯಿಯಂಥಾ ಆಸಕ್ತಿ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

27

ಅವ್ವಾರು ಸ್ನಾನಕ್ಕೆ ಹೋಗಿದ್ದಿರಬಹುದು ಈಗ ನೆನಪಿಲ್ಲ, ನಾನು ಕಿರುಚಾಟ ಕೇಳಿ ಹೆದರಿ ವಾರ್ಡಿನಿಂದ ಹೊರಗೋಡಿ ಬಂದೆ. ಆ ಕಿರುಚುವಿಕೆ ಯಾರಾದರು ತೀರಿಕೊಂಡಾಗಿನ ಅಳುವಿನಂತಿರಲಿಲ್ಲ. ವಾಡಿಯಾ ತುಂಬಾ ದೊಡ್ಡ ಆಸ್ಪತ್ರೆ ಅಲ್ಲಿ ಯಾರೋ ರೋಗಿಗಳು ಪ್ರಾಣ ಬಿಡುವುದು ಅವರ ಸಂಬಂಧಿಕರು ರೋಧಿಸುವುದು ಆಗಾಗ ಕೇಳುತ್ತಿರುತ್ತಿತ್ತು. ಆಗೆಲ್ಲ ತುಂಬಾ ಹೆದರಿಕೆ ಆಗ್ತಿತ್ತು. ನಾನಿದ್ದ ಕೋಣೆಯ ಬಾಗಿಲು ಹಾಕಿ ಕಿವಿ ಮುಚ್ಚಿಕೊಂಡು ಕೂರುತ್ತಿದ್ದೆ. ನರ್ಸುಗಳು ಬಂದು ‘ಬಾಗಿಲು ಹಾಕುವಂತಿಲ್ಲವೆಂದು ಎಷ್ಟು ಸಲ ಹೇಳಬೇಕು ನಿನಗೆ!’ ಎಂದು ಗದರಿಸುತ್ತಿದ್ದರು. ಆದರೆ ಇದು ಅಂಥ ಅಳುವಲ್ಲ, ಅಕ್ರಂದನ! ಹೊರಗೆ ಬಂದಾಗ ತಿಳಿಯಿತು, ಮೈಸುಟ್ಟ ಹೆಣ್ಣುಮಗಳೊಬ್ಬಳ ಆಕ್ರಂದನವದು ಎಂದು. ನಾನು ಅಡ್ಮಿಟ್ ಇದ್ದ ವಿಂಗಲ್ಲೇ ಕೆಳಗಡೆ ಸುಟ್ಟ ಗಾಯಗಳಿಗೆ ಚಿಕಿತ್ಸೆ ಕೊಡುವ ವ್ಯವಸ್ಥೆ ಇತ್ತಾದ್ದರಿಂದ ಆ ಹೆಣ್ಣುಮಗಳ ನೋವಿನಾಕ್ರಂದನ ಕಿವಿಗಪ್ಪಳಿಸುವಂತೆ ಕೇಳುತ್ತಿದ್ದುದು.

ಗಂಡ, ಅತ್ತೆ ಸೇರಿ ಸೀಮೆ ಎಣ್ಣೆ ಸುರಿದು ಹೆಣ್ಣುಮಗಳನ್ನು ಸುಟ್ಟುಹಾಕಲು ನೋಡಿದ್ದಾರೆ, ಇಲ್ಲಿ ಬಂದು ಸ್ಟೋವ್ ಹತ್ತಿಕೊಂಡಿದೆಯೆಂದು ಸುಳ್ಳು ಹೇಳುತ್ತಿದ್ದಾರೆ, ಅದನ್ನ ಆಕೆಯ ತವರಿನ ಜನ ಪೋಲಿಸರಲ್ಲಿ ಆಕೆಯ ಅತ್ತೆ ಮತ್ತು ಗಂಡನನ್ನು ಅರೆಸ್ಟ್ ಮಾಡಲು ಅವಲತ್ತುಕೊಳ್ಳುತ್ತಿದ್ದಾರೆ ಎನ್ನುವುದು ಜನ ಮಾತನಾಡಿಕೊಳ್ಳುತ್ತಿದ್ದರಿಂದ ತಿಳಿಯಿತು. ಆಕೆಯನ್ನು ದ್ರಾವಣವೊಂದರಲ್ಲಿ ಹಾಕಿಡುತ್ತಾರೆಂದೂ, ಅದರಿಂದ ಆಕೆಗೆ ಸುಟ್ಟ ಗಾಯಗಳ ಉರಿ ಅಷ್ಟಾಗಿ ಬಾಧಿಸುವುದಿಲ್ಲವೆಂದೂ, ಆಗ ಸಮಾಧಾನವಾಗಿ ಆಕೆಯ ಕಿರುಚಾಟ ನಿಲ್ಲುತ್ತದೆಂದೂ ಅವರೆಲ್ಲ ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು. ದೇಹ ತುಂಬಾ ಸುಟ್ಟುಬಿಟ್ಟಿದೆ, ಉಳಿಯಲಾರಳು ಎಂದು ಅಲ್ಲಿದ್ದವರು ಮಾತನಾಡುವುದನ್ನು ಕೇಳಿ ನನ್ನ ಕೈಕಾಲು ತಣ್ಣಗಾದವು. ನಾನು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವುದನ್ನು ಗಮನಿಸಿ ಹಿರಿಯರೊಬ್ಬರು, “ಇಧರ್ ಕ್ಯೂಂ ಆಯಿ ತು?! ಜಾವೊ ಅಂದರ್. ಮಕ್ಳು ಇಂಥವನ್ನೆಲ್ಲ ನೋಡ್ಬಾರ್ದು, ಕೇಳ್ಬಾರ್ದು. ಹೋಗು ನಿನ್ನ ವಾರ್ಡಿಗೆ” ಎಂದು ಗದರಿಸಿಬಿಟ್ಟರು. ಅವರ ಮಾತನ್ನು ಕೇಳಿದ ಇತರರೂ ಅವರೊಂದಿಗೆ ದನಿ ಕೂಡಿಸಲಾಗಿ ಅಲ್ಲಿಂದ ಹೊರಟುಬಂದು ನನ್ನ ಮಂಚದ ಮೇಲೆ ಬಿದ್ದುಕೊಂಡೆ. ಮಧ್ಯ ರಾತ್ರಿಯವರೆಗೂ ಆಕೆಯ ಕಿರುಚಾಟ ಕೇಳುತ್ತಲೇ ಇತ್ತು. ಮುಂದೆ ಮೂರನೇ ದಿನ ಆಕೆಯ ಪ್ರಾಣಹೋಯಿತು. ಅಲ್ಲಿಯವರೆಗೂ ಆಕೆಯ ಇರುವ ಕೋಣೆಯಿಂದ ಅಳುವ ಕಿರುಚುವ ದನಿ ಆಗಾಗ ಕೇಳಿಬರುತ್ತಿತ್ತು. ದ್ರಾವಣದಲ್ಲಿ ಹಾಕಿದ ಮೇಲೆ ಆಕೆಯ ಉರಿ ಶಮನವಾಗುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದವರು ಸುಳ್ಳು ಹೇಳಿದರು ಅನಿಸುತ್ತೆ, ಇಲ್ಲದಿದ್ದಲ್ಲಿ ಆಕೆ ಯಾಕೆ ಮತ್ತೂ ಅಳುತ್ತಿದ್ದಳು, ಕಿರುಚುತ್ತಿದ್ದಳು ಎಂದುಕೊಂಡೆ. ಆಳವಾದ ಸುಟ್ಟ ಗಾಯಗಳು ಅದಕ್ಕೂ ಆಳವಾದ ಮನಸಿನ ಗಾಯ ಯಾವುದರ ಕಲ್ಪನೆ ನನಗಿರಲಿಲ್ಲ ಆಗ. ಆಕೆ ಸತ್ತ ದಿನವೂ ಪೋಲಿಸರು ಬಂದಿದ್ದರು. ತಾಯಿಯ ಮನೆಯವರನ್ನೇ ಅದರಿಸುತ್ತಿರುವುದನ್ನು ಕಂಡು ಅಚ್ಚರಿಯಾಗಿತ್ತು. ಸಿಟ್ಟು ಬಂದಿತ್ತು ನನಗೆ ಪೋಲಿಸರ ಮೇಲೆ. ಗಂಡನ ಮನೆಯವರು ಕೇಸ್ ಮುಚ್ಚೈಹಾಕಲು ಪೋಲಿಸರಿಗೆ ಹಣ ಕೊಟ್ಟಿರಬಹುದೆಂದು ಜನ ಮಾತಾಡಿಕೊಳ್ಳುತ್ತಿದ್ದರು. ಆ ಘಟನೆ ಅದ್ಯಾವ ಪರಿಯಲ್ಲಿ ನನ್ನ ಮನಸಲ್ಲಿ ಉಳಿದುಕೊಂಡಿದೆಯಂದರೆ ಇದನ್ನು ಬರೆಯುತ್ತಿರುವಾಗ ಅಕ್ಷರಶಃ ನಾನು ಅಂದಿನ ದಿನವನ್ನು ಮತ್ತೆ ಅನುಭವಿಸುತ್ತಿರುವೆ. ಆಕೆಯ ಕಿರುಚಾಟ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ. ಅವಳ ದೇಹವನ್ನು ಬಿಳಿಬಟ್ಟೆಯಲ್ಲಿ ಮುಚ್ಚಿ ಆಸ್ಪತ್ರೆಯಿಂದ ಸಾಗಿಸುತ್ತಿರುವ ಚಿತ್ರ ಮನಸಿನಿಂದ ಮಾಸಿಲ್ಲ.

ಒಂದು ತಿಂಗಳ ನಂತರ ಡಿಸ್ಚಾರ್ಚ್ ಮಾಡಿದರಾದರೂ ಮೂರು ತಿಂಗಳ ನಂತರ ಬಂದು ತೋರಿಸಿಕೊಂಡು ಹೇಳಿ, ಆ ಮೂರು ತಿಂಗಳು ಮನೆಯಲ್ಲಿಯೇ ರೆಸ್ಟ್ ತೆಗೆದುಕೊಳ್ಳಲು ಹೇಳಿದ್ದರು. ಅಲ್ಲಿಯವರೆಗೆ ದಿನಕ್ಕೊಂದು ಪೆನ್ಸಲಿನ್ ಇಂಜೆಕ್ಷನ್ ಚುಚ್ಚಿಸಿಕೊಳ್ಳಲು ಬರೆದುಕೊಟ್ಟಿದ್ದರು. ಒಟ್ಟು ಸುಮಾರು ಇನ್ನೂರು ಇನ್ನೂರು ಇಂಜೆಕ್ಷನ್ನುಗಳನ್ನಾದರೂ ತೆಗೆದುಕೊಂಡಿರಬೇಕು ನಾನು. ಸೂಜಿ ಚುಚ್ಚೀ ಚುಚ್ಚಿ ನನ್ನ ಎರಡೂ ಚೆಪ್ಪೆಗಳು ಕಲ್ಲಿನಂತೆ ಗಟ್ಟಿಯಾಗಿಹೋಗಿದ್ದವು. ಬರ್ತಾ ಬರ್ತಾ ಡಾಕ್ಟರ್ ಸೂಜಿ ಚುಚ್ಚುವಾಗ ಬಲ ಹಾಕುವುದು ಅನುಭವಕ್ಕೆ ಬರುತ್ತಿತ್ತು. ಈಗಿನಂತೆ ಆಗ ಡಿಸ್ಪೋಸಲ್ ಸೂಜಿಗಳಿರಲಿಲ್ಲ. ಒಮ್ಮೆ ಒಬ್ಬರಿಗೆ ಬಳಸಿದ ಸೂಜಿಯನ್ನೇ ವೈದ್ಯರು ನೀರಲ್ಲಿ ಕುದಿಸಿ, ಸ್ಟರಲೈಸ್ ಮಾಡಿ ಅದರಿಂದಲೇ ಬೇರೊಬ್ಬರಿಗೂ ಚುಚ್ಚುತ್ತಿದ್ದರು. ಹೀಗೆ ಒಂದು ಸೂಜಿ ಐದಾರು ಸಲ ಬಳಕೆಯಾಗುತ್ತಿತ್ತು. ಮೂರನೆಯವರಿಗೆ ಚುಚ್ಚುವಷ್ಟರಲ್ಲಿ ತನ್ನ ಮುಂಚಿನ ಮೊನಚನ್ನು ಕಳೆದುಕೊಂಡಿರುತ್ತಿದ್ದ ಸೂಜಿಯಿಂದ ಚುಚ್ಚಿಸಿಕೊಳ್ಳುವವರಿಗೆ ಪ್ರಾಣಹೋಗುವಷ್ಟು ನೋಯುತ್ತಿತ್ತು. ನಿತ್ಯ ಸತತ ಇನ್ನೂರು ಇಂಜೆಕ್ಷನ್ ಮಾಡಿಸಿಕೊಂಡಿರುವ ನಾನು, ಇರುವೆ ಕಚ್ಚಿದ್ದಕ್ಕಿಂತಲೂ ಕಮ್ಮಿ ನೋಯಿಸುವ ಸೂಜಿಗಳಿದ್ದಾಗ್ಯೂ ಸಹ ಇಂದಿಗೂ ಬೇರ್ಯಾವುದಕ್ಕೂ ಅಷ್ಟು ಹೆದರದಿದ್ದರೂ ಇಂಜೆಕ್ಷನ್ ಗೆ ಹೆದರುತ್ತೇನೆ. ಮೂರು ತಿಂಗಳ ನಂತರ ಚೆಕಪ್ಪಿಗೆ ಎಂದು ಸೊಲ್ಲಾಪುರಕ್ಕೆ ಹೋದಾಗ ಇಂಜಿನಿಯರ್ ಕವಿ ತೀರಿಕೊಂಡರು ಎನ್ನುವ ಸುದ್ದಿ ಕೇಳಿ ತುಂಬಾ ಹಳಹಳಿಯಾಯಿತು. 

ಆಸ್ಪತ್ರೆ ಸೇರುವ ಮೊದಲೇ ಇಂಜಿನಿಯರಿಂಗ್ ಗೆ ಅಡ್ಮಿಶನ್ ಆಗಿತ್ತು ಅಂದೆನಲ್ಲ, ಹುಶಾರು ತಪ್ಪಿದ್ದರೂ ಸಹ ದೊಡ್ಡ ಓದು, ಕ್ಲಾಸುಗಳು ತಪ್ಪಿದರೆ ಮುಂದೆ ಅರ್ಥವಾಗುವುದಿಲ್ಲವೆಂದು ಹೆದರಿ ಇಂಜೆಕ್ಷನ್ನುಗಳು ಮುಗಿಯುತ್ತಿದ್ದಂತೆಯೇ ಅಂದರೆ ಫೆಬ್ರವರಿಯಲ್ಲಿ ಕಾಲೇಜಿಗೆ ಹೋಗತೊಡಗಿದೆ. ನನ್ನೊಂದಿಗೆ ಪಿಯುಸಿ ಮುಗಿಸಿದ್ದ ನನ್ನ ಅನೇಕ ಸಹಪಾಠಿಗಳು ಅಲ್ಲಿದ್ದರು. ಅದಾಗಲೇ ಸಿಲಾಬಸ್ ಅರ್ಧ ಮುಗಿದಿತ್ತು. ಹೋಗಿ ಕುಳಿತು ಕೇಳಿದರೆ ಏನೆಂದರೆ ಏನೂ ಅರ್ಥವಾಗಿತ್ತಿರಲಿಲ್ಲ ನನಗೆ. ನನ್ನ ಅನಾರೋಗ್ಯದ ಬಗ್ಗೆ ತಿಳಿದಿದ್ದ ಅಲ್ಲಿನ ಒಂದಿಬ್ಬರು ಪರಿಚಿತ ಅಧ್ಯಾಪಕರು ನನ್ನ ಬಗ್ಗೆ ಕರುಣೆಯುಳ್ಳವರಾಗಿದ್ದು ತಮ್ಮ ಸಹೋದ್ಯೋಗಿಗಳಿಗೂ ಆ ಕುರಿತು ತಿಳಿಸಿದ್ದರಾದ್ದರಿಂದ ಅಲ್ಲೊಂದು ಸಹನೀಯ ವಾತಾವರಣವಿತ್ತಾದರೂ ನನಗೇ ಏನೂ ತಿಳಿಯುತ್ತಿಲ್ಲ ಅನ್ನುವ ಕೀಳರಮೆ ನನ್ನನ್ನು ಕಾಡತೊಡಗಿತ್ತು. ಇದರಿಂದಾಗಿ ಥಿಯರಿ ಕ್ಲಾಸುಗಳಲ್ಲಿ ಡಲ್ಲಾಗಿರುತ್ತಿದ್ದ ನಾನು, ಅದು ಹೇಗೋ ಪ್ರ್ಯಾಕ್ಟಿಕಲ್ಸ್ ಇದ್ದಾಗ ಇದ್ದುದರಲ್ಲಿ ವಾಸಿ ಎಂಬಂತೆ ಸಮಾಧಾನದಿಂದ ಒಳಗೊಳ್ಳುತ್ತಿದ್ದೆ. ಈಗಿನಂತೆ ಸೆಮಸ್ಟರ್ ಸಿಸ್ಟಮ್ ಇರಲಿಲ್ಲ ಆಗ. ಅಲ್ಲದೇ ಮೊದಲ ವರ್ಷ ಫಿಸಿಕ್ಸ್, ಕೆಮೆಸ್ಟ್ರಿ ಮತ್ತು ಮ್ಯಾಥ್ಸ್ ಸೇರಿ ಒಟ್ಟು ಹದಿಮೂರು ವಿಷಯಗಳಿದ್ದವು. ಮುಂದೆರಡು ತಿಂಗಳಿಗೆ ಪರೀಕ್ಷೆಗಳು ಆರಂಭಗೊಂಡವು. ನಾನು ಪಾಸಾಗುವುದಿಲ್ಲವೆಂದು ನನ್ನನ್ನೂ ಸೇರಿ ಎಲ್ಲರಿಗೂ ಗೊತ್ತಿದ್ದ ವಿಚಾರವೇ ಆಗಿತ್ತಾದ್ದರಿಂದ ಯಾರೇನೂ ಅನ್ನದಿದ್ದರೂ ತುಂಬಾ ಅವಮಾನ ಅನಿಸತೊಡಗಿತ್ತು. ಅದಕ್ಕೂ ಹೆಚ್ಚಿನ ಅವಮಾನ ಅನಿಸಿದ್ದು ಮತ್ತೆ ಮೊದಲ ವರ್ಷವನ್ನು ನನ್ನ ಜ್ಯೂನಿಯರ್ಸ್ ಜೊತೆಗೆ ಕುಳಿತು ಓದಬೇಕು ಅಂದಾಗ. ಬುದ್ದಿಯಿಲ್ಲದ ವಯಸ್ಸದು. ಛಲವಿರಲಿಲ್ಲ ಜೊತೆಗೆ ಇಂಥಾ ಇಗೋಗಳು ಸೇರಿಕೊಂಡರಂತೂ ಮುಗಿದೇಹೋಯಿತು. ಯಾರೆಷ್ಟು ತಿಳಿ ಹೇಳಿದರೂ ನನ್ನ ಸಹಪಾಠಿಗಳು ನನ್ನ ಸಿನಿಯರ್ಸ್ ಆಗುವುದು ಮತ್ತು ನಾನು ಅವರ ಜ್ಯೂನಿಯರ್ ಆಗಿ ಹಿಂದಿನ ಕ್ಲಾಸಲ್ಲಿರುವುದು ಮುಜುಗರ ಮತ್ತು ಅವಮಾನವೆನಿಸಿ ಸುತಾರಾಂ ಒಪ್ಪಲಿಲ್ಲ. ಬಿಎ ಮಾಡುತ್ತೇನೆ ಎಂದೆ. ಅಲ್ಲ್ಯಾರೂ ಪರಿಚಯದವರಿರುವುದಿಲ್ಲ ಅನ್ನುವುದು ಒಂದು ಕಾರಣವಾದರೆ, ಇಂಗ್ಲಿಷ್ ವಿಷಯದ ಹೊರತಾಗಿ ಉಳಿದೆಲ್ಲ ವಿಷಯಗಳನ್ನು  ಕನ್ನಡದಲ್ಲಿ ಓದಬಹುದು ಅನ್ನುವುದು ಇನ್ನೊಂದು ಕಾರಣವಾಗಿತ್ತು.

ಮನಸ್ಸಿಲ್ಲದಿದ್ದರೂ ಅನಿವಾರ್ಯವಾಗಿ ಅಪ್ಪ ಅವ್ವ ಒಪ್ಪಿಕೊಂಡರು. ಹೋಗಿ ಅಡ್ಮಿಶನ್ ಮಾಡಿಸಿದೆ. ಆಗೆಲ್ಲ ನಮ್ಮ ತಂದೆತಾಯಿ ಕಾಲೇಜಿಗೆ ಬಂದು ಸರತಿಯಲ್ಲಿ ನಿಂತು ಮಕ್ಕಳ ಅಡ್ಮಿಶನ್ ಮಾಡಿಸುವ ಸೀನೇ ಇರಲಿಲ್ಲ. ಯಾವುದೇ ಕ್ಲಾಸಾದರೂ ನಮ್ಮ ಕೈಯಲ್ಲಿ ಫೀಸ್ ಕೊಟ್ಟು ಕಳಿಸಿರುತ್ತಿದ್ದರು, ನಾವೇ ಹೋಗಿ ಅಡ್ಮಿಶನ್ ಮಾಡಿಕೊಳ್ಳುತ್ತಿದ್ದೆವು. ಹಾಗೆ ಬಿಎ ಮಾಡುವುದೆಂದು ನಿರ್ಧರಿಸಿ ಬಿಎ ಕ್ಲಾಸುಗಳಲ್ಲಿ ಹೋಗಿ ಕುಳಿತೆ. ಅಲ್ಲಿದ್ದ ಯಾರಲ್ಲೂ ಲವಲವಿಕೆ ಕಾಣ್ತಿಲ್ಲ, ಪರಸ್ಪರ ಪರಿಚಯಿಸಿಕೊಳ್ಳುವ ಕೌತುಕವಿಲ್ಲ, ಪಾಠದಲ್ಲೂ ಆಸಕ್ತಿ ಇದ್ದಂತೆ ಕಾಣ್ತಿಲ್ಲ! ಯಾಕೋ ನಾನಿಲ್ಲಿ ಫ಼ಿಟ್ ಆಗ್ತಿಲ್ಲ ಅನಿಸತೊಡಗಿತಾದರೂ ಮೊದಲ ದಿನವಲ್ಲವೇ ಅದಕ್ಕೇ ಹಾಗಾಗ್ತಿದೆ ಅನಿಸಿ ಮಾರನೇ ದಿನ ಅದೇ ಹುರುಪಿನಿಂದ ಹೋಗಿ ಕುಳಿತೆ. ಊಂಹೂಂ ಅಲ್ಲಿದ್ದವರೆಲ್ಲ ಹರಳೆಣ್ಣೆ ಕುಡಿದವರಂತೆ ಮುಖ ಮಾಡಿಕೊಂಡು ಪ್ರತಿಯೊಬ್ಬರೂ ಒಂದೊಂದು ದ್ವೀಪವಾಗಿ ಕುಳಿತಿದ್ದರೇ ವಿನಹ ಉತ್ಸಾಹ ಅನ್ನುವುದು ಮುನಿಸಿಕೊಂಡು ರೂಮಿನಿಂದಾಚೆ ಹೋದಂತಿತ್ತು.

ಜೊತೆಗೆ ಬಹುಶಃ ನಾನು ಸೈನ್ಸ್ ಸ್ಟುಡಂಟ್ ಅನ್ನುವ ಅಹಂ ಕೂಡ ಇತ್ತೇನೋ ಸ್ಪಷ್ಟವಿಲ್ಲ ಈಗಲೂ. ಆದರೆ ಅದು ನನಗೆ ಸರಿಹೋಗುವ ಸ್ಥಳವಲ್ಲ ಅನಿಸಿ ಅಲ್ಲಿಂದಲೂ ಎದ್ದು ಬಂದು ಕಾಲೇಜಿನ ಆಫೀಸಿನಲ್ಲಿ ವಿನಂತಿಸಿಕೊಂಡು ಪ್ರಾಣಿಶಾಸ್ತ್ರವನ್ನು ಮೇಜರ್ ವಿಷಯವನ್ನಾಗಿ, ಸಸ್ಯಶಾಸ್ತ್ರ ಮತ್ತು ರಾಸಾಯನಶಾಸ್ತ್ರವನ್ನು ಮೈನರ್ ವಿಷಗಳನ್ನಾಗಿ ಆರಿಸಿಕೊಂಡು ಬಿಎಸ್ಸಿಗೆ ಅಡ್ಮಿಶನ್ ಮಾಡಿಕೊಂಡೆ. ಸಮಾಧಾನವಾಯಿತು ಮನಸಿಗೆ. ಸುಹಾಸಿನಿ, ವಾಣಿ, ಪದ್ಮಾ, ಡಿಂಪಿ ನನ್ನದೇ ತರಗತಿಯಲ್ಲಿದ್ದು ಮುಂದೆ ನನ್ನ ಆತ್ಮೀಯ ಗೆಳತಿಯರಾದರು. ಅವರೆಲ್ಲರ ವಿದ್ಯಾಭ್ಯಾಸದ ಆಸಕ್ತಿ ಮತ್ತು ತಯಾರಿಗಳೆದುರಿಗೆ ನನ್ನದು ಊಟದೊಂದಿಗಿನ ಉಪ್ಪಿನಕಾಯಿಯಂಥಾ ಆಸಕ್ತಿ ಓದಿನಲ್ಲಿ. 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

May 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: