ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಣ್ತೆರೆಸಿದ ಅತ್ಯಂತ ರೋಚಕ ಐತಿಹಾಸಿಕ ಕಾದಂಬರಿ 

ಡಾ. ಗಜಾನನ್ ಶರ್ಮ ಅವರ ಕಾದಂಬರಿ ‘ಚೆನ್ನಭೈರಾದೇವಿ’

ಅಂಕಿತ ಪುಸ್ತಕ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಸುಧಾ ಭಂಡಾರಿ ಅವರ ಬರಹ ಇಲ್ಲಿದೆ.

-ಸುಧಾ ಭಂಡಾರಿ

ಎರಡು ವರ್ಷಗಳ ಹಿಂದೆ ಹೊನ್ನಾವರ ರೋಟರಿ ಕ್ಲಬ್ ನವರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಆಯ್ದ ಶಿಕ್ಷಕರಿಗೆ ‘ ನೇಶನ್ ಬಿಲ್ಡರ್’ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಪುರಸ್ಕೃತಳಲ್ಲಿ  ನಾನು ಕೂಡ ಓರ್ವಳಾಗಿದ್ದು ಪ್ರಶಸ್ತಿಯ ಜೊತೆಗೆ ‘ಚೆನ್ನಭೈರಾದೇವಿ ಕರಿಮೆಣಸಿನ ರಾಣಿಯ ಅಕಳಂಕ ಚರಿತೆ ‘ಎಂಬ ಐತಿಹಾಸಿಕ ಕಾದಂಬರಿ ಪ್ರಸಾದದ ರೂಪದಲ್ಲಿ ನೀಡಲ್ಪಟ್ಟಿತು.ಪುಸ್ತಕ ನೋಡಿ ಪ್ರಶಸ್ತಿ ಬಂದುದಕ್ಕಿಂತ ಹೆಚ್ಚು ಖುಷಿಯೆನಿಸಿತು. 

ನಿಜಕ್ಕೂ ನಮ್ಮ ನಡುವಿನ, ನಮ್ಮ ನಾಡಿನ ಹೆಮ್ಮೆಯ ರಾಣಿ ಚೆನ್ನಬೈರಾ ದೇವಿಯ ಬಗ್ಗೆ ಅಷ್ಟೇನೂ ಅರಿವಿರದ ನನಗೆ ಕಾದಂಬರಿ ಓದುತ್ತಾ ಓದುತ್ತಾ ಐನೂರು ವರ್ಷಗಳ ಹಿಂದಿನ ಗೇರುಸಪ್ಪೆಯ ವೈಭವ, ಶ್ರೀಮಂತಿಕೆ, ರಾಣಿಯ ಆಡಳಿತ ಚತುರತೆ ಕಣ್ಣಮುಂದೆ ಹಾದು ಹೋದಂತೆನಿಸಿತು.

ತನ್ನವರಿಂದಲೇ ಕುತಂತ್ರಕ್ಕೆ ಒಳಗಾಗಿ ಇತಿಹಾಸದ ಪುಟದಲ್ಲಿ ದಾಖಲಾಗದ ಚೆನ್ನಬೈರಾ ದೇವಿಯ ಕುರಿತು ವಿಷಾದದ ಛಾಯೆ ಸುಳಿಯಿತು. ಇಡೀ  ಕಾದಂಬರಿಯನ್ನು ಅತ್ಯಂತ ವಸ್ತುನಿಷ್ಠವಾಗಿ, ಸತ್ಯದ ಎಳೆಯ ಮೇಲೆ ಜೋಡಿಸಲ್ಪಟ್ಟ ಚುಕ್ಕಿ ರಂಗೋಲಿಯಂತೆ  ಸುಂದರವಾಗಿ ಕಟ್ಟಿಕೊಟ್ಟ ಡಾ. ಗಜಾನನ್ ಶರ್ಮ ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಅಭಿಮಾನವೆನಿಸಿತು.

  ಇಂದಿಗೂ ಗೇರುಸೊಪ್ಪ ದಟ್ಟ ಕಾನನದ ತೊಪ್ಪಲು. ನಗರ ಪ್ರದೇಶದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಗೇರುಸೊಪ್ಪ, ಹಾಡುವಳ್ಳಿ ಎಂದರೆ ದಟ್ಟ ಕಾನನದ  ಕೊಂಪೆ. ಆದರೆ ಸುಮಾರು 500 ವರ್ಷಗಳ ಹಿಂದೆ ಇದೇ ಗೇರುಸೊಪ್ಪೆಯ ಕೀರ್ತಿ ಯುರೋಪ್ ಖಂಡದ ಆಳರಸರನ್ನು ನಿಬ್ಬೆರಗಾಗಿಸಿದ್ದಲ್ಲದೆ ನಿದ್ದೆ ಕೆಡಿಸಿದ್ದು ಕೂಡ ಅಷ್ಟೇ ಸತ್ಯ! 54 ವರ್ಷಗಳ ಕಾಲ ಸುತ್ತಲೂ ಶತ್ರುಪಡೆಗಳ ನಡುವೆ ದಿಟ್ಟತನದಿಂದ ಹೋರಾಟ ಮಾಡಿ ‘ಮಹಾಮಂಡಳೇಶ್ವರಿ’ ಎಂದು ಖ್ಯಾತಳಾಗಿ  ಜನ ಸಾಮಾನ್ಯರ ಬಾಯಲ್ಲಿ’ಅವ್ವರಸಿ’ ಎಂದೇ ಪೂಜಿಸಲ್ಪಡುತ್ತಿದ್ದ ರಾಣಿ ಚೆನ್ನಬೈರಾದೇವಿ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಎಲ್ಲಿಯೂ ದಾಖಲಾಗದಿರುವುದು ಅತ್ಯಂತ ವಿಷಾದನೀಯ; ಇದು ಇತಿಹಾಸ ತಜ್ಞರ ನಿರ್ಲಕ್ಷವೊ ರಾಣಿಗೆ ಅಂಟಿದ ಕಳಂಕವೊ ಅಥವಾ ಉತ್ತರಾಧಿಕಾರಿಯಿಲ್ಲದೆ ವೃದ್ಧಾಪ್ಯದಲ್ಲಿ ದಿಟ್ಟತನದಿಂದ ಹೋರಾಡಿ ಕೆಳದಿಯ ಅರಸರ ವಂಚನೆಯ ಜಾಲಕ್ಕೆ ಸೋತು ಶರಣಾದ ರಾಣಿಯ ಅಂತ್ಯದಿಂದಲೋ ಒಟ್ಟಾರೆ ರಾಣಿ ಚೆನ್ನಭೈರಾದೇವಿ ಯುವ ತಲೆಮಾರಿನ ಓದುಗರಿಗೆ ಅಲಭ್ಯವಾಗಿರುವುದು ಮಾತ್ರ ಸತ್ಯ. ರಾಣಿಯನ್ನು ಸಮರ್ಥಿಸಲು ಅವಳ ವಂಶದಲ್ಲಿ ಮುಂದೆ ಯಾರೂ ಇಲ್ಲದಿರುವುದು ಜೊತೆಗೆ ಸದಾ ಕೊಟ್ಟು ಕಳೆದುಕೊಂಡದ್ದರ ಬಗ್ಗೆ ಧ್ವನಿಯೆತ್ತದ ಉತ್ತರ ಕನ್ನಡದವರ ದಿವ್ಯ ನಿರ್ಲಕ್ಷ್ಯವೂ ಕೂಡ ಇದಕ್ಕೆ ಕಾರಣವಾಗಿರಬಹುದು ಎನ್ನಿಸದೆ ಇರದು ! 

ಆದರೆ ಕಾದಂಬರಿ ಓದುತ್ತಾ ರಾಣಿಯ ವೈಭವದ ಆಡಳಿತ, ಗೇರುಸೊಪ್ಪೆಯ ಇತಿಹಾಸ ಕಣ್ಣಿಗೆ ಕಟ್ಟಿವಂತೆ ಅದ್ಭುತವಾಗಿ, ರೋಚಕವಾಗಿ ಅತ್ಯಂತ ಪ್ರಾಮಾಣಿಕವಾಗಿ ಕಟ್ಟಿಕೊಟ್ಟ ಡಾ. ಗಜಾನನ್ ಶರ್ಮ ಅವರು  ಕ್ಷೇತ್ರ ಅಧ್ಯಯನ ನಡೆಸಿ, ಐರೋಪ್ಯ ಪ್ರವಾಸ ಕಥನಗಳು ಮತ್ತು ಅನೇಕ ಐತಿಹಾಸಿಕ ದಾಖಲೆಗಳ ಅಧ್ಯಯನದ ಆದಾರದ ಮೇಲೆ ರಚಿಸಿದ ತುಂಬಾ ಅಪರೂಪದ ಈ ಕಾದಂಬರಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಮನ ಮುಟ್ಟಿದ ಅಧ್ಯಯನಗಳಲ್ಲಿ ಒಂದಾಗಿ ನೆನಪಾಗಿ ಉಳಿಯುವುದು ಅಷ್ಟೇ ಅಲ್ಲ ನಮ್ಮ ಹೆಮ್ಮೆಯ ರಾಣಿಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳದ  ಸಣ್ಣ ಕೀಳರಿಮೆ ಹೊಂದಿದ್ದ ನನಗೆ  ಕಾದಂಬರಿ ಕಣ್ಣು ತೆರೆಸಿದ್ದು ಸುಳ್ಳಲ್ಲ!! ಓದಿ ಮುಗಿಸಿದ ತಕ್ಷಣ ಗಜಾನನ ಶರ್ಮಾ ಅವರ ಬಳಿ ಮಾತನಾಡಿ ನನ್ನ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಹಗುರಾದೆ ಕೂಡ!

ವಿಜಯನಗರ ಸಾಮ್ರಾಜ್ಯದ ಹಲವು ಸಾಮಂತ ರಾಜರಲ್ಲಿ ಗೇರುಸೊಪ್ಪೆ ಕೂಡ ಸಾಳುವ ವಂಶದ ಸಾಮಂತರಲ್ಲಿ ಒಂದಾಗಿತ್ತು. ಅಂತೆಯೇ ಹಾಡುವಳ್ಳಿ ಮತ್ತು ನಗಿರೆ ಎರಡೂ  ಕೃಷ್ಣದೇವರಸನ ಆಳ್ವಿಕೆಗೆ ಒಳಪಟ್ಟಿತು. ವಿಜಯನಗರವನ್ನು ಆಳುತ್ತಿದ್ದ ಸದಾಶಿವರಾಯನ ಕೆಂಗಣ್ಣಿಗೆ ಗುರಿಯಾದ ಕೃಷ್ಣದೇವರಸ ಅನಿವಾರ್ಯವಾಗಿ ಹಾಡುವಳ್ಳಿ ಮತ್ತು ನಗಿರಿಯನ್ನು ಅದಕ್ಕೆ ಹಕ್ಕು ಬಾಧ್ಯಳಾದ ಚನ್ನಭೈರಾದೇವಿಗೆ ವಹಿಸಬೇಕಾಯಿತು; ಆದರೆ ಅರವತ್ತರ ಮುದುಕ ತನ್ನ ಅಕ್ಕನ ಮಗಳಾದ ಚೆನ್ನಭೈರಾದೇವಿಯನ್ನು ವಿವಾಹವಾಗಿ ನಗಿರೆಯ ಸಂಸ್ಥಾನವನ್ನು ತನ್ನದಾಗಿ ಮಾಡಿಕೊಳ್ಳುವ ಬಹುದೊಡ್ಡ ಕನಸು ಕಂಡಿದ್ದ !ಇದಕ್ಕೆ ರಾಣಿ ಪ್ರತಿರೋಧ ಒಡ್ಡಿದಾಗ ರಾಣಿಯ ಪ್ರತಿ ಹೆಜ್ಜೆಯಲ್ಲೂ ತಪ್ಪುಗಳನ್ನು ಹುಡುಕುತ್ತಾ ಆಕೆಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತಹ ಕಳಂಕ ಚರಿತ್ರೆಯನ್ನು ಸೃಷ್ಟಿಸಿದ!  ಇದೇ ವೇಳೆಗೆ ಗೋವಾದಲ್ಲಿ ಮನಬಂದಂತೆ ಅತ್ಯಂತ ಕ್ರೌರ್ಯದಿಂದ ಆಡಳಿತ ನಡೆಸಿ ಮತಾಂಧರಾಗಿದ್ದ ಪೋರ್ಚುಗೀಸರಿಗೆ ರಾಣಿ ಚೆನ್ನಬೈರಾದೇವಿ ಸಿಂಹಸ್ವಪ್ನ ವಾಗಿದ್ದಳು .ಶ್ರೀಮಂತಿಕೆ, ವೈಭವದಿಂದ ಆಡಳಿತ ನಡೆಸುತ್ತಿದ್ದ ದಿಟ್ಟ ರಾಣಿಯನ್ನು ಸೋಲಿಸಲು ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗದ ಪರಂಗಿಗಳು ಕೃಷ್ಣದೇವರಸನೊಟ್ಟಿಗೆ  ಕೈಜೋಡಿಸಿ ಭಟ್ಕಳವನ್ನು ಸುಟ್ಟು ಹಾಕಿದ್ದು ಮಾತ್ರವಲ್ಲದೆ ರಾಣಿಯ ಚರಿತೆಗೆ ಮಸಿ ಬಳಿಯುವಲ್ಲಿ ಯಶಸ್ವಿಯಾದರು. ಜೊತೆಗೆ ಸದಾ ಯುದ್ಧೋತ್ಸಾಹಿಗಳಾಗಿ ನಗಿರೆ ಮತ್ತು ಹಾಡುವಳ್ಳಿಯ ಕೀರ್ತಿ, ಸಂಪತ್ತಿನ ಮೇಲೆ ಕಣ್ಣು ಹಾಕಿದ್ದ ಕೆಳದಿ ಅರಸರಿಗೆ ಕಾಳು ಮೆಣಸಿನ ರಾಣಿ ನುಂಗಲಾರದ ತುತ್ತಾಗಿದ್ದಳು .ಮತ್ತೆ ಮತ್ತೆ ಯುದ್ಧ ಮಾಡಿದರೂ ರಾಣಿಯನ್ನು ಜಯಿಸುವುದು ಸುಲಭವಾಗಿರಲಿಲ್ಲ. ಹೀಗಾಗಿ ರಾಣಿಯ ವೃದ್ಧಾಪ್ಯದ ಕಾಲದಲ್ಲಿ ಘೋರ ಪ್ರವಾಹದಂತಹ ಸಂದರ್ಭವನ್ನು ಬಳಸಿ ರಾಣಿಯನ್ನು ಸೋಲಿಸಲು ಇದಕ್ಕಿಂತ ತಕ್ಕುದಾದ ಸಮಯ ಸಿಗದು  ಎಂದು ಸಂಚು ರೂಪಿಸಿ ಸುತ್ತಮುತ್ತಲಿನ ಸಾಮಂತರನ್ನು ಎಂಜಲು ತಿನಿಸಿ ತನ್ನವರನ್ನಾಗಿ ಮಾಡಿಕೊಂಡು ಒಂದು ಕಾಲದಲ್ಲಿ ರಾಣಿಯ ಸ್ವಂತ ಅಂಗರಕ್ಷಕನಾಗಿದ್ದ ಚೆನ್ನಗೊಂಡನನ್ನೂ   ಅಪಹರಿಸಿ ಅಧಿಕಾರದ ಆಸೆ ತೋರಿಸಿ ಅವನಿಂದಲೇ ರಾಣಿಯನ್ನು ಸೋಲಿಸುವ ಸಂಚು ರೂಪಿಸಿದರು. ನೇರವಾಗಿ ಯುದ್ಧದಲ್ಲಿ ರಾಣಿಯನ್ನು ಸೋಲಿಸಲಾಗದ ಕೆಳದಿಯ ವೆಂಕಟಪ್ಪನಾಯಕ ಸಂಚು ಮಾಡಿ ಗುರುವನ್ನು ಮುಂದೆ ಮಾಡಿ ಮೋಸದಿಂದ ರಾಣಿಯನ್ನು ಸೆರೆಹಿಡಿದ; ಹಣದಾಸೆ ,ಸಂಪತ್ತಿನ ವ್ಯಾಮೋಹದಿಂದ ನಗಿರೆಯ ಕೋಟೆ, ಅರಮನೆ, ಬಸದಿಗಳನ್ನು ನೆಲೆಸಮ ಮಾಡಿ ಸಿಕ್ಕಿದ್ದನ್ನು ಬರಗಿ ಬಾಚಿ ರಾಣಿಯನ್ನು ಸೆರೆಯಾಳಾಗಿ ಇಕ್ಕೇರಿಗೆ ಕರೆದೊಯ್ದರು. ಆಗಲೇ ಅಧ್ಯಾತ್ಮದ ಕಡೆಗೆ ಸಂಪೂರ್ಣವಾಗಿ ವಾಲಿದ ರಾಣಿ ತನ್ನ ಅಂತ್ಯದ ಕಾಲದಲ್ಲಿ ಸಲ್ಲೇಖನ ವ್ರತವನ್ನು ಕೈಗೊಂಡು ಘನ ಸಾವನ್ನೇ ಅಪ್ಪಿದಳು. ರಾಣಿಯನ್ನು ವೃದ್ಧಾಪ್ಯದ ದಿನಗಳಲ್ಲಿ ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕೆ ಹಾಡುವಳ್ಳಿ ನಗಿರೆ ಜೊತೆಗೆ ಕೆಳದಿ ಇಕ್ಕೇರಿಯ ಜನರು ಕೂಡ ವೆಂಕಟಪ್ಪನನ್ನು ಆಡಿಕೊಂಡಿದ್ದಲ್ಲದೆ ರಾಣಿಯ ಅಂತಿಮ ದರ್ಶನವನ್ನು ಪಡೆದು ಪುನೀತರಾದರು. ಹೀಗೆ ಪರಕೀಯ ನೆಲದಲ್ಲಿ ಸೆರೆಯಾಳಾದರೂ ರಾಣಿ ಘನತೆವೆತ್ತ ಸಾವನ್ನಪ್ಪಿದಳು.  ಶತ್ರು ವೆಂಕಟಪ್ಪ ನಾಯಕನೂ ಮನ ಕರಗಿ ರಾಣಿಗೆ ಅತ್ಯಂತ ಭವ್ಯವಾದ ಅಂತಿಮ ಸಂಸ್ಕಾರವನ್ನು ನೆರವೇರಿಸಿದನು .ಹೀಗೆ ಉತ್ತರಾಧಿಕಾರಿ ಇಲ್ಲದೆ ಅವಿವಾಹಿತಳಾಗಿ 54 ವರ್ಷಗಳ ಕಾಲ ಕಾನನದ ಒಡತಿಯಾಗಿ, ಮಹಾಮಂಡಳೇಶ್ವರಿಯಾಗಿ ಮೆರೆದ ನಗಿರೆಯ ಕಾಳುಮೆಣಸಿನ ರಾಣಿಯ  ವೈಭವ ಒಂದು ಮುಗಿದ ಅಧ್ಯಾಯವಾಯಿತು.

ಆದರೆ ರಾಣಿಯ ಆಡಳಿತ ಚತುರತೆ, ಮೌಲ್ಯಾಧಾರಿತ ರಾಜಕಾರಣ ಯುರೋಪಿನ ವಿಮರ್ಶಕರಿಂದ ದಾಖಲಾಯಿತು. ಗೋವೆಯಲ್ಲಿ ಪೋರ್ಚುಗೀಸರು ಮನಬಂದಂತೆ ಹಿಂದೂಗಳನ್ನು ಮತಾಂತರಗೊಳಿಸಲು ಯತ್ನಿಸಿದಾಗ ದಿಕ್ಕು ಕಾಣದೆ ಕ್ರೌರ್ಯಕ್ಕೆ ಬೆದರಿ ಬರಿಗೈಯಲ್ಲಿ ಬಂದ ಜನಸಾಮಾನ್ಯರಿಗೆ, ವ್ಯಾಪಾರಿಗಳಿಗೆ ತನ್ನ ರಾಜ್ಯದಲ್ಲಿ ಆಶ್ರಯ ಕಲ್ಪಿಸಿ ಉತ್ತಮ ಜೀವನವನ್ನು ಕಲ್ಪಿಸಿಕೊಟ್ಟವಳು ರಾಣಿ  ಚೆನ್ನಭೈರಾದೇವಿ . ಸುತ್ತಲೂ ಶತ್ರುಗಳೇ ಸುತ್ತುವರಿದಿರುವಾಗ  ಏಕಕಾಲದಲ್ಲಿ ಕೆಳದಿ, ಪೋರ್ಚುಗೀಸರ ದಾಳಿಯನ್ನು ಮತ್ತೆ ಮತ್ತೆ ಎದುರಿಸಿ ವಿಜಯಶಾಲಿಯಾಗಿ ಶತ್ರು  ಸೈನ್ಯ ತನ್ನ ಕಡೆಗೂ  ಸುಳಿಯದಂತೆ ರಾಜ್ಯವನ್ನು ರಕ್ಷಿಸಿಕೊಂಡವಳು.

 ಯುರೋಪಿನ ಮಾರುಕಟ್ಟೆಯಲ್ಲಿ ಹೆಚ್ಚಿದ ಕಾಳು ಮೆಣಸಿನ ಬೇಡಿಕೆಯನ್ನು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಸಿ’, ಕಾಳು ಮೆಣಸಿನ ರಾಣಿ ”ಕರಿಮೆಣಸಿನ ರಾಣಿ’ ಎಂದೆ ಖ್ಯಾತಳಾದವಳು! ಯುರೋಪಿಯನ್ ಇತಿಹಾಸಕಾರರ ವಿಮರ್ಶೆಯ ಪ್ರಕಾರ ‘ ರಾಣಿ ಚೆನ್ನಭೈರಾದೇವಿ ಇಂಗ್ಲೆಂಡಿನ ರಾಣಿ ಎಲಿಜಬೆತ್ ಗೆ ಸರಿ ಮಿಗಿಲಾದವಳು’. ತನ್ನ ರಾಜ್ಯ ರಕ್ಷಣೆಗಾಗಿ ಚತುರತೆಯಿಂದ ಪೋರ್ಚುಗೀಸರ ವಿರುದ್ಧ ಜಾಮೂರಿನ ದೊರೆ, ಬಿಜಾಪುರದ ಸುಲ್ತಾನರು ಮುಂತಾದ ಸಾಮ್ರಾಜ್ಯಗಳೊಂದಿಗೆ ಸ್ನೇಹ ಸೌಹಾರ್ದವನ್ನು ಕಾಪಾಡಿಕೊಂಡು ವಿಜಯನಗರಕ್ಕೆ ಬದ್ಧತೆಯ ಸಾಮಂತಿಕೆಯನ್ನು ಕೊನೆಯವರೆಗೂ ಮೆರೆದವಳು.

 ತನ್ನ ರಾಜ್ಯದ ಸಂಪತ್ತು ಶತ್ರುಗಳ ಪಾಲಾಗಬಾರದೆಂದು ದಟ್ಟ ಕಾನನದ ನಡುವೆ ಹತ್ತು ಹಲವು ಕಡೆ ಬಸದಿ, ದೇವಸ್ಥಾನ,  ಬಾವಿ , ಕೋಟೆಗಳನ್ನು   ಕಟ್ಟಿಸಿ ಅಲ್ಲಿ ಬಚ್ಚಿಟ್ಟು ಜನತೆಗೆ ಸೇರಬೇಕಾದ ಸಂಪತ್ತನ್ನು ರಕ್ಷಿಸಿದ್ದಳು. ಕೊನೆ ಗಳಿಗೆಯಲ್ಲಿ ಶತ್ರು ನಾಯಕ ಅದೆಷ್ಟೇ ಕಾಡಿ ಬೇಡಿದರೂ  ಬಾಯಿ ಬಿಡದೆ ದಿಟ್ಟತನದಿಂದ ಬಾಯಿ ಮುಚ್ಚಿಸಿದ್ದಳು. ಅಂದು ರಾಣಿ ಬಚ್ಚಿಟ್ಟ ಸಂಪತ್ತಿನಿಂದಾಗಿಯೇ ಅವಳ ಕಾಲದಲ್ಲಿ ಹಲವು ಊರುಗಳು ಕೊಪ್ಪರಿಗೆ ,ಗಿಂಡಿ ಮನೆ, ಹೊನ್ನೇಮಕ್ಕಿ ,ಸಿರಿಮನೆ, ಸಿರೂರು, ಬಂಗಾರ ಮಕ್ಕಿ, ಬೆಳ್ಳಿ ಮಕ್ಕಿ, ಮುತ್ತಳ್ಳಿ ಮುಂತಾದ ಹೆಸರುಗಳಿಂದ ಖ್ಯಾತವಾಗಿದ್ದವು ಇಂದಿಗೂ ಕೂಡ ಈ ಹೆಸರಿನ ಹಳ್ಳಿಗಳು ಗೇರುಸೊಪ್ಪೆ ಸುತ್ತಮುತ್ತ ಇರುವುದನ್ನು ಕಾಣುತ್ತೇವೆ.

ಇತಿಹಾಸದ ಪುಟದಲ್ಲಿ ಪೂರ್ವಾಗ್ರಹ ಪೀಡಿತರಾಗಿ ಭಾರತಕ್ಕೆ ಬಂದ ಕೆಲವು ಪೋರ್ಚುಗೀಸ್ ಪ್ರವಾಸಿಗರು ರಾಣಿಯ ಮೇಲಿನ ದ್ವೇಷ, ಅಸಂಬದ್ಧ ತರ್ಕಗಳಿಂದಾಗಿ ಕಳಂಕ ಹೊತ್ತು ಯುರೋಪಿಯನ್ ಇತಿಹಾಸದ ಪುಟದಲ್ಲಿ ದಾಖಲಾದ  ರಾಣಿಯ ಕಾಲದ ವೈಭವಕ್ಕೆ ಇಂದಿಗೂ ಹಲವು ಅವಶೇಷಗಳು, ಬಸದಿಗಳು, ಮುರಿದುಬಿದ್ದ ಕೋಟೆ ಕೊತ್ತಲಗಳು ದಟ್ಟ ಕಾನನದ ನಡುವೆಯೂ ಮೂಕ ಸಾಕ್ಷಿಯಾಗಿವೆ. ದಿಟ್ಟತನದಿಂದ  ಆಳಿದ ರಾಣಿಯ ಚರಿತೆಯನ್ನು ಯುವ ತಲೆಮಾರು ಓದಬೇಕಿದೆ, ಅರಿತುಕೊಳ್ಳಬೇಕಿದೆ. ಅಭಿಮಾನದಿಂದ ಕಾಣಬೇಕಿದೆ…

‍ಲೇಖಕರು Admin

28 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading