ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಂಬನಿ…

ದೀಕ್ಷಿತ್ ನಾಯರ್

ಗಂವ್ವೆನ್ನುವ ದವಾಖಾನೆಯ
ಒಂದು ಕಿರಿದಾದ ಕೋಣೆಯಲ್ಲಿ
ಗಲ್ಲಕ್ಕೆ ಕೈಯಿರಿಸಿ ಆಕೆ ತೂಕಡಿಸುತ್ತಿದ್ದಾಳೆ
ಕೊಕ್ಕರೆಯಂತೆ ಆಗಾಗ್ಗೆ ಕತ್ತು ತಿರುಗಿಸಿ
ಎಡಬಿಡದೆ ತೊಟ್ಟಿಕ್ಕುತ್ತಿದ್ದ ಗ್ಲೂಕೋಸ್ ಬಾಟಲಿ
ನೋಡುತ್ತಾ;
ಎಷ್ಟೇ ಆದರೂ ಆಕೆಯದ್ದು ರಾತ್ರಿಯ ಪಾಳಿ

ಪಕ್ಕದಲ್ಲೆಲ್ಲೋ ನರಳುವ ಸದ್ದು
ಕಣ್ಣುಗಳ ಉಜ್ಜುತ್ತಲೇ ಓಡುತ್ತಾಳೆ
ಗಲಿಬಿಲಿಯಲ್ಲಿ ಸಿರಂಜುಗಳ ತಡಕುತ್ತವೆ
ಕೈಗಳು; ಕಿಟಕಿಯಾಚೆಗಿನ ಊಳಿಡುವ ನಾಯಿಗಳ
ಕೂಗಿಗೆ ಬೆಚ್ಚುತ್ತಾಳೆ
ಬೆವರಿನಲ್ಲೇ ತೊಯ್ದು ತೊಪ್ಪೆಯಾಗುತ್ತಾಳೆ
ನಲ್ಲಿ ನೀರಿಗೆ ಬಾಯೊಡ್ಡುತ್ತಾಳೆ
ಮನೆಯಿಂದ ತಂದಿದ್ದ ಸಣ್ಣ ಡಬ್ಬಿಯೊಳಗಿನ
ಹುಳಿಸಾರಿನೊಂದಿಗೆ ಕಲಸಿದ ಅನ್ನ ವ್ಯಾನಿಟಿ ಬ್ಯಾಗಿನೊಳಗೆ
ಹಾಗೇ ಬೆಚ್ಚಗಿದೆ

ಬೆಳಗಾಗುವುದೇ ತಡ ಮನೆಯತ್ತ ನಡೆಯುತ್ತಾಳೆ
ಅದೃಷ್ಟವಿದ್ದರೆ ಕಿಕ್ಕಿರಿದ ಬಸ್ಸಿನೊಳಗೆ ಅಂಗೈಯಗಲದಷ್ಟು ಜಾಗ;
ಇಲ್ಲವಾದರೆ ದಾರಿ ಸವೆಯುವವರೆಗೂ ನಿಲುಭಂಗಿ
ಆಗಷ್ಟೇ ಮೈ ಮುರಿದು ಆಕಳಿಸುವ ಮಕ್ಕಳೆಡೆಗೂ ನೋಡದೆ ರೂಮಿನ ಬಾಗಿಲ ಧಡಾರನೆ ಮುಚ್ಚಿ
ಬದಲಿಸದ ಅದೇ ಬಿಳಿಯ ಯೂನಿಫಾರ್ಮಿನಲ್ಲಿ
ಹಾಸಿಗೆಗೆ ಬೆನ್ನು ಚಾಚುತ್ತಾಳೆ

ಸೂರ್ಯ ಅಂಡು ಸುಟ್ಟಾಗ ಮೇಲೆಳುತ್ತಾ
ಸಿಂಕಿನೊಳಗೆ ಅನಾಥವಾಗಿ ಬಿದ್ದಿದ್ದ ಹಿಂದಿನ ದಿನದ ಒಣಗಿದ ಪಾತ್ರೆಗಳ ಗಸಗಸನೆ ತಿಕ್ಕುತ್ತಾಳೆ;
ಪ್ಲಾಸ್ಟಿಕ್ ಕವರಿನೊಳಗಿದ್ದ ತರಕಾರಿಗಳ ತುಂಡರಿಸಿ
ಕುಕ್ಕರಿನೊಳಗೆ ಹಾಕಿ ಬೇಯಿಸಿ ಅಡುಗೆ ಕೆಲಸಕ್ಕೆ ಮಂಗಳ ಹಾಡುತ್ತಾಳೆ
ಆಸೆಯಿಂದ ಸೆರಗು ಜಗ್ಗುವ ಮಕ್ಕಳನ್ನು ಗದರುತ್ತಾಳೆ
ಮತ್ತೇ ಒಲವಿಂದ ಮುತ್ತಿಕ್ಕುತ್ತಾಳೆ

ಡಣ್! ‘ಸಂಜೆ ಆರು ಗಂಟೆ’
ಸಿಕ್ಕು ಬಿಡಿಸದ ಕೂದಲು
ಒರೆಸದೆ ಬಿಟ್ಟ ಕಿವಿಯ ಪಕ್ಕದ
ಸೋಪಿನ ನೊರೆಯೊಂದಿಗೆಯೇ
ಯಾವುದೋ ಅಂದಾಜಿನಲ್ಲಿ
ಹಣೆಯ ಮೇಲೆ ಬೊಟ್ಟು ಇರಿಸಿ
ವರುಷಗಳಿಂದ ತನ್ನ ಬ್ಯಾಗಿನ ಪುಟ್ಟ ಜಿಪ್ಪಿನೊಳಗೆ ಉಸಿರುಗಟ್ಟಿಸಿಕೊಂಡು ಆಯುಷ್ಯ ಕಳೆದುಕೊಳ್ಳುತ್ತಿರುವ ಲಿಪ್ಸ್ಟಿಕ್ ಕಾಡಿಗೆ ಮತ್ತು ಪೌಡರು ಡಬ್ಬವ ದಿನೇದಿನೇ ಮರೆತು
ಬಟ್ಟೆಗೆ ಮೈ ತುರುಕಿ ದಡದಡನೆ
ಓಡುತ್ತಾಳೆ; ದೈವೀ ಭಾವನೆ ತೋರುವ
ರೋಗಿಗಳ ಶುಶ್ರೂಷೆಗೆ ಅದೇ ದವಾಖಾನೆಯೆಡೆಗೆ
ಶವಾಗಾರದತ್ತ ದಬದಬಾಂತ ಎದೆ ಬಡಿದುಕೊಂಡು ಚೀರುವ ಸದ್ದು ಕೇಳಿ ಗಕ್ಕಂತ ನಿಲ್ಲುತ್ತಾಳೆ
ಮತ್ತೇ ಅಲ್ಲಿಂದ ಕಾಲ್ಕಿಳುತ್ತಾಳೆ
ಕರ್ತವ್ಯ ಪ್ರಜ್ಞೆ ನೆನೆದು
ಕಣ್ಣಂಚಿನ ಕಂಬನಿಯ
ನೆಲಕ್ಕೊಗೆದು

‍ಲೇಖಕರು Admin

15 May, 2022

1 Comment

  1. prathibha nandakumar

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading