ಚಂದ್ರಿಕಾ ಹೆಗಡೆ ಲಹರಿ- ಬೆಳ್ಳಿಮೋಡದ ಅಂಗಿ…

ಚಂದ್ರಿಕಾ ಹೆಗಡೆ

ಚಂಡಮಾರುತದ ಪ್ರಭಾವ, ಒಂದು ವಾರದಿಂದ ಮೋಡ ಕವಿದ ವಾತಾವರಣಕ್ಕೆ ಮನಸೂ ಒಂದು ರೀತಿ ಮಬ್ಬು ಮಬ್ಬು. ಮಧ್ಯಾಹ್ನ ಒಂದರೆ ಕ್ಷಣ ಸೂರ್ಯ ಮೋಡದ ಮರೆಯಿಂದ ಇಣುಕಿದಾಗ, ಸೂರ್ಯರಶ್ಮಿಯೊಂದು ಮೋಡದಂಚನ್ನು ಸ್ಪರ್ಶಿಸಿ ಮೋಡ ಬೆಳ್ಳಿಯಂತೆ ಫಳಕ್ಕೆಂದು ಹೊಳೆದಾಗ ಮನಸು ಹಾಡೊಂದನ್ನು ತನ್ನಷ್ಟಕ್ಕೇ ಗುನುಗಿತ್ತು. ‘ಬೆಳ್ಳಿಮೋಡದಾ ಅಂಚಿನಿಂದಾ ಮೂಡಿಬಂದಾ ಮಿನುಗು ತಾರೇ…’

ಬೆಳ್ಳಿಮೋಡ !  ಒಂದು ನೋಟ ಅಥವಾ ಒಂದು ಶಬ್ಧ ಸಾಕು ಮನದ ಮುಗಿಲಡಿಯಲ್ಲಿ ಅವಿತ ಯಾವುದೋ ನೆನಪು ಬೆಳ್ಳಿಕಿರಣದಂತೆ ಹೊಳೆದು ಹೊರಬರುವುದಕ್ಕೆ ! ಹೀಗೆ ಈ ಬೆಳ್ಳಿಮೋಡವೆನ್ನುವ ಶಭ್ದವೂ ನನ್ನ ಬಾಲ್ಯದ ಒಂದು ನೆನಪನ್ನು ನೆನಪಿಸಿದಾಗ……..

ಸುಮಾರು ಐವತ್ತು ವರುಷಗಳ ಹಿಂದೆ , ನಾನಾಗ ಆರೋ ಏಳೋ ವರುಷದ ಬಾಲೆ. ಮನೆಯಲ್ಲಿ ನನ್ನ ಅತ್ತೆಯ ಮದುವೆ ಗೊತ್ತಾಗಿತ್ತು. ಮನೆಯಲ್ಲಿ ಮದುವೆ ಎಂದರೆ ಮಕ್ಕಳಿಗೆ ಸಂಭ್ರಮ ಪಡಲು ಕಾರಣಗಳು ಬೇಕಾದಷ್ಟಿತ್ತು. ಮೊದಲನೆಯದಾಗಿ ಮದುವೆ ತಯಾರಿಯಲ್ಲಿ ಮನೆಯ ದೊಡ್ಡವರೆಲ್ಲಾ ಬ್ಯುಸಿಯಾಗಿರುವುದರಿಂದ ಮಕ್ಕಳ ಕಡೆ ಗಮನ ಕೊಡಲು ಅಥವಾ ಬಯ್ಯಲು ಅವರಾರಿಗೂ ಪುರಸೊತ್ತಿರುವುದಿಲ್ಲ . ಮದುವೆಗೆಂದು ವಾರ ಹದಿನೈದು ದಿನ ಮೊದಲೇ ಬರುವ ಹತ್ತಿರದ ನೆಂಟರ ಮಕ್ಕಳ ಜೊತೆಗೂಡಿ  ಹಾರಿ ಕುಣಿದು ಹಿರಿಯರ ಅಂಕೆಯಿಲ್ಲದೇ ಇಡೀದಿನ ಮನಬಂದಂತೆ ಆಡಬಹುದಿತ್ತು.

ಚಿತ್ರಕೃಪೆ: ಗೂಗಲ್

ಮನೆ ಎದುರಿನ ಅಂಗಳ, ಹಿಂದಿನ ಹಿತ್ತಿಲು ಒಪ್ಪ ಮಾಡುವುದು, ಚಪ್ಪರ ಹಾಕುವುದು, ಮನೆಗೆ ಸುಣ್ಣಬಣ್ಣ ಮುಂತಾದ ಮದುವೆ ತಯಾರಿಯ ಕೆಲಸಗಳಲ್ಲಿ ನಾವೂ ತೋಚಿದಂತೆ ಭಾಗಿಯಾಗಿ ಸಂಭ್ರಮಿಸುವುದು ಮತ್ತು ಮದುವೆಗೆ ವಾರವಿರುವಂತೆಯೇ ಮನೆಯಲ್ಲಿ ತಯಾರಿಸಲು ತೊಡಗುವ ವಿವಿಧ ತಿಂಡಿ ತಿನಿಸುಗಳು ನಮ್ಮ ಉತ್ಸಾಹವನ್ನು ಇನ್ನಷ್ಟುಹೆಚ್ಚಿಸುತ್ತಿದ್ದವು. ಇದೆಲ್ಲಕ್ಕಿಂತ ಮಿಗಿಲಾದ ಇನ್ನೊಂದು ಮುಖ್ಯವಾದ ಸಂಭ್ರಮವೆಂದರೆ ಅದು ಹೊಸ ಬಟ್ಟೆಯದು ! ಆಗೆಲ್ಲಾ ಮನೆಯಲ್ಲಿ ಸುಮ್ಮಸುಮ್ಮನೆ ಅಥವಾ ಹಬ್ಬಹಬ್ಬಗಳಿಗೆ ಹೊಸಬಟ್ಟೆಗಳನ್ನು ತರುವ ಪದ್ದತಿಯೇ ಇರಲಿಲ್ಲ. ವರ್ಷಕ್ಕೆ ಒಂದೋ ಎರಡೋ ಜೊತೆ ಹೊಸ ಬಟ್ಟೆ ಕಂಡರೆ ಅದೇ ಹೆಚ್ಚು. ಹೊಸ ಅಂಗಿ ಎಂದರೆ ಅದೊಂದು ಎಲ್ಲಕ್ಕಿಂತ ದೊಡ್ಡ ಸಂಭ್ರಮ! ನಮ್ಮ ಮನೆಯಲ್ಲಿ ಎಲ್ಲರಿಗೂ ಹೊಸಬಟ್ಟೆ ತರುವುದು ನಮ್ಮ ಅಜ್ಜನೇ ಆಗಿತ್ತು. ಮದುವೆ ಇನ್ನೂ ಹದಿನೈದು ಇಪ್ಪತ್ತು ದಿನಗಳಿರುವಾಗಲೇ ಅಜ್ಜ ನಾಳೆ ಜವಳಿ ತರಲು ಸಾಗರ ಪೇಟೆಗೆ ಹೋಗುತ್ತಾನೆ ಎಂದರೆ ಆ ರಾತ್ರಿ ನಮಗೆ ಸರಿಯಾಗಿ ನಿದ್ದೆಯೇ ಇಲ್ಲ !  ನಾಳೆ ಅಜ್ಜ ತರುವ ಹೊಸ ಅಂಗಿ ಹೇಗಿರಬಹುದೆಂದು ಊಹಿಸುತ್ತಾ , ಅದರ ಬಣ್ಣ ಡಿಸೈನುಗಳ ಬಗ್ಗೆ ರಮ್ಯ ಕಲ್ಪನೆಯ ಕನಸು ಕಾಣುತ್ತಲೇ ರಾತ್ರಿ ಬೆಳಗಾಗಿತ್ತು. 

ಮರುದಿನ ಬೆಳಿಗ್ಗೆಯೇ ಅಜ್ಜ, ಅಪ್ಪ ಮದುವೆ ಜವಳಿ ತರಲು ಪೇಟೆಗೆ ಹೋದರು. ಮನೆಯ ಹೆಂಗಸರಿಗೆ ತಲಾ ಎರಡು ಸೀರೆ, ಒಂದು ಸ್ವಲ್ಪ ಒಳ್ಳೆಯದು ಮತ್ತೊಂದು ಸಾಧಾರಣದ್ದು ನಿತ್ಯ ಉಡುವಂತದ್ದು. ಮದುಮಗಳಿಗೆ ಇದ್ದುದರಲ್ಲಿಯೇ ಎರಡು ಒಳ್ಳೆ ಸೀರೆ , ಅದರಲ್ಲೊಂದು ರೇಶಿಮೆಯದು. ಮಕ್ಕಳಿಗೂ ಅಷ್ಟೆ, ಚಿಕ್ಕ ಹೆಣ್ಣುಮಕ್ಕಳಾದರೆ ಫ್ರಾಕು, ಸ್ವಲ್ಪ ದೊಡ್ಡವರಾದರೆ ಉದ್ದ ಲಂಗ , ಬ್ಲೌಸು . ಗಂಡು ಮಕ್ಕಳಿಗೆ ಅಂಗಿ ಚಡ್ಡಿ. ಸಾಮಾನ್ಯವಾಗಿ ಜವಳಿ ಹೀಗೆಯೇ ಇರುತ್ತಿತ್ತು. ಖಾಯಮ್ಮಾಗಿ ಬಟ್ಟೆ ತರುವ ಅಂಗಡಿಯಲ್ಲಿ ಅಜ್ಜ ತಮಗೆ ಚಂದ ಕಂಡಿದ್ದು ಆರಿಸಿ ತರುವರು. ಮತ್ತು ಅವರ ಆಯ್ಕೆ ಯಾವಾಗಲೂ ಚನ್ನಾಗಿಯೇ ಇರುತ್ತಿತ್ತು. ಗಂಡು ಮಕ್ಕಳಿಗೆ ಬಟ್ಟೆಯ ಬಗ್ಗೆ ನಮ್ಮಷ್ಟೇನೂ ಉತ್ಸಾಹ ಇರುತ್ತಿರಲಿಲ್ಲ. ಮನೆಯಲ್ಲಿ ಹೆಣ್ಣುಮಕ್ಕಳೆಂದರೆ ನಾನೂ, ನಮ್ಮಕ್ಕ ಮತ್ತು ನಮ್ಮಕ್ಕನಿಗಿಂತ ಚಿಕ್ಕವಳಾದ ನನಗಿಂತ ಮೂರ್ನಾಲ್ಲು ವರ್ಷ ದೊಡ್ಡವಳಾದ ನನ್ನ ಸಣ್ಣತ್ತೆ. ನಾವಂತೂ ಅಜ್ಜ ಪೇಟೆಯಿಂದ ಬರುವುದನ್ನೇ ಕುತ್ತಿಗೆ ಉದ್ದಮಾಡಿ  ಕಾಯುತ್ತಾ  ಮಧ್ಯಾನ್ಹದಿಂದ ಹೊರಗೆ ರಸ್ತೆಯಲ್ಲಿಯೇ ಇದ್ದೆವು. 

ಅಜ್ಜ ಮತ್ತು ಅಪ್ಪ ಜವಳಿ ತೆಗೆದುಕೊಂಡು ಮನೆಗೆ ಬರುವಾಗ ಸಂಜೆ ದೀಪ ಹಚ್ಚುವ ಹೊತ್ತಾಗಿತ್ತು. ಜವಳಿ ಗಂಟು ದೇವರ ಮುಂದಿಟ್ಟು ಕೈಮುಗಿದಾದ ಮೇಲೆ ಜಗುಲಿಗೆ ಬಂತು. ಆಗಿನ್ನೂ ವಿದ್ಯುತ್ ದೀಪಗಳಿರಲಿಲ್ಲ. ಮೇಲೆ ಮಾಡಿನಿಂದ ತೂಗಿಹಾಕಿರುತ್ತಿದ್ದ ಸೀಮೆ ಎಣ್ಣೆ ಲ್ಯಾಂಪಿನ ಮಂದಬೆಳಕಿನಲ್ಲಿ , ಜಗುಲಿಯಲ್ಲಿ ಹಾಸಿರುತ್ತಿದ್ದ ಕಂಬಳಿಯ ಮೇಲೆ ಅಜ್ಜ ಜವಳಿ ಗಂಟು ಬಿಚ್ಚಿದರು. ಅಂತೂ ನಾವು ಬೆಳಗಿನಿಂದ ಕಾತರದಿಂದ ಕಾಯುತ್ತಿದ್ದ ಆ ಅಮೃತ ಘಳಿಗೆ ಬಂದೇಬಿಟ್ಟಿತ್ತು !   ಒಂದೊಂದೇ ಬಟ್ಟೆ ಗಂಟಿನಿಂದ ಹೊರತೆಗೆಯುತ್ತಾ ಅಜ್ಜ “ಇದೇ ಇದು ನೋಡಿ , ಹೊಸಾ ಫ್ಯಾಷನ್  ‘ಬೆಳ್ಳಿಮೋಡ’ದ ಬಟ್ಟೆ !” ಎನ್ನುತ್ತಾ ಲ್ಯಾಂಪಿನ ಬೆಳಕಿಗೆ ಮಿಣ ಮಿಣ ಮಿರುಗುತ್ತಿದ್ದ ಲಂಗದ ಬಟ್ಟೆಗಳನ್ನು ತೋರಿಸಿದರು. ನಾವಂತೂ ಬೆರಗುಗಣ್ಣು ಬಿಟ್ಟು ಖುಷಿಯಾಗಿ ನೋಡಿಯೇ ನೋಡಿದೆವು !  ಅದು ನಿಜಕ್ಕೂ ಚನ್ನಾಗಿತ್ತು. 

ಅಕ್ಕನಿಗೆ, ಸಣ್ಣತ್ತೆಗೆ ಮತ್ತು ನನಗೂ ಫ್ರಾಕಿನ ಬದಲು ಉದ್ದ ಲಂಗ ಬ್ಲೌಸಿನ ‘ಬೆಳ್ಳಿಮೋಡ’ದ ಹೊಳೆಯುವ ಜರತಾರಿ ಬಟ್ಟೆ. ದಪ್ಪನೆಯ ಹೊಳಪಿನ ಬಟ್ಟೆಯ ಒಡಲಲ್ಲಿ ಮಿರ ಮಿರ ಮಿನುಗುವ ಗೀಟುಗೀಟಿನ  ಬೆಳ್ಳಿಜರಿಯ ಬುಟ್ಟಾ , ಗೇಣಗಲದ ಬೆಳ್ಳಿಝರಿಯ ಜರತಾರೀ ಅಂಚು ! ನನಗೆ, ಸಣ್ಣತ್ತೆಗೆ ತಿಳಿಹಸಿರು ಬಣ್ಣದ್ದಾದರೆ ಅಕ್ಕನಿಗೆ ತಿಳಿ ನೇರಳೆಯ ಬಣ್ಣದ್ದು . ಹೊಸ ಬಟ್ಟೆಯನ್ನು ಮೃದುವಾಗಿ ಮುಟ್ಟಿ ಎದೆಗಪ್ಪಿ ಆಹಾ: !  ಆ ಸಂತೋಷ ವರ್ಣಿಸಲಾಗದ್ದು ! ಇನ್ನು ಅಮ್ಮ, ಅಜ್ಜಿ  ಅತ್ತೆಯರಿಗೂ ಬೆಳ್ಳಿಮೋಡದ ಸೀರೆಗಳೇ. ತಿಳೀ ನೀಲಿ, ಹಸಿರು ನೇರಳೇ ಬಣ್ಣಗಳದ್ದು. ಸೀರೆಯ ಅಂದ ಕಂಡು ಅವರುಗಳು ನಮ್ಮಂತೆ ಕುಣಿದಾಡದಿದ್ದರೂ ಕಣ್ಣುಗಳಲ್ಲಿ ಬೆಳ್ಳಿಮೋಡದ ಹೊಳಪಿತ್ತು. 

 1960 – 66 ರ ದಶಕದಲ್ಲಿ ತೆರೆಗೆ ಬಂದ, ಪುಟ್ಟಣ್ಣ ಕಣಗಾಲ್ ನಿರ್ದೇಶನದ ಪ್ರಸಿಧ್ದ ಚಲನಚಿತ್ರ  ‘ಬೆಳ್ಳಿಮೋಡ’ದಲ್ಲಿ ನಾಯಕಿ ಕಲ್ಪನಾ ಉಟ್ಟಿದ್ದ ಈ ತರಹದ ಜರಿ ಸೀರೆಯೇ ಬೆಳ್ಳಿಮೋಡ ಸೀರೆ, ಬಟ್ಟೆಯಾಗಿ ಜನಪ್ರಿಯವಾಗಿತ್ತು ಎಂದು  ದೊಡ್ಡವಳಾದ ಮೇಲೇ ನನಗೆ  ಗೊತ್ತಾಗಿದ್ದು.

ಇನ್ನು ಈ ಬಟ್ಟೆಗಳನ್ನು ಅಂಗಿ ಹೊಲೆಸುವ ಕಾರ್ಯಕ್ರಮ . ಒಂದು ಶುಭ ಮುಹೂರ್ತದಲ್ಲಿ ಅಜ್ಜ ನಮ್ಮನ್ನು ನಮ್ಮೂರಿಗೆ ಹತ್ತಿರದ ಪೇಟೆ ತಾಳಗುಪ್ಪಕ್ಕೆ ಟೈಲರ್ ಬಸವಣ್ಣಿಯ ಬಳಿ ಕರೆದುಕೊಂಡು ಹೋದರು. ಬಸವಣ್ಣಿ ನಮ್ಮ ಅಳತೆ ತೆಗೆದುಕೊಂಡು ವಾರ ಕಳೆಯುವಷ್ಟರಲ್ಲಿ, ತನ್ನ ಹಳೆಯ ಫ್ಯಾಷನ್ ನಲ್ಲಿ ಲಂಗ ಬೌಸ್ ಹೊಲೆದು ಕೊಟ್ಟಿದ್ದ. ನಮ್ಮ ಪುಣ್ಯಕ್ಕೆ ತೀರಾ ಕೆಟ್ಟದಾಗೇನೂ ಹೊಲಿದಿರಲಿಲ್ಲ. ಅಂಗಾಲು ಮುಟ್ಟುವಷ್ಟು ಉದ್ದದ ಲಂಗ, ಸೊಂಟದ ತನಕವಿದ್ದ ಹಿಂದುಗುಂಡಿಯ ಬ್ಲೌಸು, ಝಗಮಗ ಹೊಳೆಯುತ್ತಾ ಸಿಧ್ದವಾಗಿ ಬಂದಾಗ, ಯಾವಾಗ ಆ ಉದ್ದ ಅಂಗಿಯನ್ನು ಹಾಕಿ, ನೆಲಕ್ಕೆ ತಾಗದಂತೆ ಕೈಯಲ್ಲಿ ಕೊಂಚ ಎತ್ತಿಹಿಡಿದು ಸರಬರ ಸದ್ದು ಮಾಡುತ್ತಾ ಓಡಾಡುವೆನೋ ಎನ್ನುವ ಆತುರ ನನ್ನದಾಗಿತ್ತು. 

ಅಂತೂ ಮದುವೆಯ ದಿನವೂ ಬಂತು. ಆಗೆಲ್ಲಾ ರಾತ್ರಿ ಮದುವೆಗಳೇ ಹೆಚ್ಚು. ಮುಸ್ಸಂಜೆಯ ವೇಳೆ ದಿಬ್ಬಣ ಬರುವ ಹೊತ್ತಿಗೆ ಮುಂಚೆ ಬೆಳ್ಳಿ ಮೋಡದ ಅಂಗಿ ಹಾಕಿ ಅಮ್ಮ ನನ್ನನ್ನು ರೆಡಿಮಾಡಿದ್ದಳು. ಝಗಮಗಿಸುತ್ತಿದ್ದ ಪೆಟ್ರೋಮ್ಯಾಕ್ಸ್ ದೀಪದ ಬೆಳಕಿನಲ್ಲಿ, ವಾರಗೆಯ ಮಕ್ಕಳೆಲ್ಲಾ ಸ್ವಲ್ಪ ಅಸೂಯೆಯಿಂದ, ಯಾಕೆಂದರೆ ಅವರ ಬಳಿ ಈ ತರ ಬೆಳ್ಳಿಮೋಡದ ಅಂಗಿಯಿರಲಿಲ್ಲವಲ್ಲಾ,  ನೋಡುತ್ತಿದ್ದರೆ ನಾನು  ಮಿರಮಿರ ಮಿಂಚುತ್ತಿದ್ದ ಬೆಳ್ಳಿಮೋಡ ಅಂಗಿಯನ್ನು ಹಾಕಿಕೊಂಡು ಗರ್ವದಿಂದ ಓಡಾಡಿದ್ದೇ ಓಡಾಡಿದ್ದು. 

ಎಲ್ಲರೂ ದಿಬ್ಬಣ ಬರುವುದನ್ನೇ ಕಾಯುತ್ತಿದ್ದರೆ, ತರಲೆ ಬುದ್ದಿ ನನಗೆ  ಯಾಕೋ ಅಲ್ಲಿ ಬೇಸರ ಬಂತು. ಏನೋ ಆಡುತ್ತಾ ಆಡುತ್ತಾ ಚಪ್ಪರದಿಂದ ಹೊರ ಅಂಗಳಕ್ಕೆ ಹೋದೆ. ಅಲ್ಲೊಂದು ಮೂಲೆಯಲ್ಲಿ ಅಡಿಕೆಯ ತೊಗರನ್ನು ಹಾಕಿಟ್ಟಿದ್ದ ದೊಡ್ಡ ಮಣ್ಣಿನ ಬಾನಿಗಳನ್ನು ಇಟ್ಟಿದ್ದರು. ನಮ್ಮ ಮಲೆನಾಡಿನ ಅಡಿಕೆ ಬೆಳೆಯುವ ಮನೆಗಳಲ್ಲಿ , ಅಡಿಕೆ ಸುಗ್ಗಿ ಮುಗಿದ ಮೇಲೆ ಅಡಿಕೆ ಬೇಯಿಸಿ ಉಳಿಯುವ  ಮಂದವಾದ ತೊಗರನ್ನು ದೊಡ್ಡ ದೊಡ್ಡ ಮಣ್ಣಿನ ಬಾನಿಯಲ್ಲಿ ಹಾಕಿ ಇಡುತ್ತಾರೆ. ಅದು ಅಲ್ಲಿಯೇ ಆರಿ ಇನ್ನೂ ದಪ್ಪಗಾದ ಮೇಲೆ ಯಾವಾಗಲಾದರೂ ಬರುವ ತೊಗರಿನ ವ್ಯಾಪಾರಿಗಳು ತೆಗೆದುಕೊಂಡು ಹೋಗುತ್ತಾರೆ.

ಕಡುಗೆಂಪು ಬಣ್ಣದ ಈ ಅಡಿಕೆಯ ತೊಗರು ಬಟ್ಟೆಗೇನಾದರೂ ತಾಗಿದರೆ ಮುಗಿಯಿತು. ಎಷ್ಟೇ ತೊಳೆದರೂ , ಬಟ್ಟೆ ಹರಿದರೂ ಜಪ್ಪಯ್ಯಾ ಎಂದರೂ ಅದರ ಕೆಂಪು ಕಲೆ ಹೋಗುವುದಿಲ್ಲ. ಅದಕ್ಕೇ ಅಡಿಕೆ ಸುಗ್ಗಿಯ ದಿನಗಳಲ್ಲಿ ಕೊನೆಕೊಯ್ಲು ದಿನ ಬಂತೆಂದರೆ ಅಮ್ಮ ಯಾವಾಗಲೂ ಇರುವುದರಲ್ಲೇ ಅತ್ಯಂತ ಹಳೆಯದಾದ ರಿಟೈರ್ ಆಗಲು ಬಂದ ಬಟ್ಟೆಗಳನ್ನೇ ಹಾಕುತ್ತಿದ್ದಳು. ಮನೆಯ ಹೆಂಗಸರೂ ಅಷ್ಟೇ , ಅಡಿಕೆ ಸುಲಿಯುವಾಗ , ಅಡಿಕೆ ರಸ ( ತೊಗರು )  ತಾಗಿ ಕಲೆಯಾಗುತ್ತದೆಂದು ಅಗ್ದೀ ಹಳೆಯ ಸೀರೆಗಳನ್ನೇ ಉಡುತ್ತಿದ್ದರು. 

ಆಡುತ್ತಾಡುತ್ತಾ ಈ ತೊಗರಿನ ಬಾನಿಯ ಬಳಿ ಹೋದ ನಾನು ಸುಮ್ಮನಿರಲಾರದೇ ಬಾನಿಯ ಮೇಲೆ ಮುಚ್ಚಿದ್ದ ಮರದ ಮುಚ್ಚಳ ಸರಿಸಿದೆ. ಅದರ ಮೇಲೆ ದಪ್ಪಕ್ಕೆ ಕಟ್ಟಿದ್ದ ಕೆನೆಯ ಪದರವನ್ನು ಅಲ್ಲೇ ಇದ್ದ ಒಂದು ಪೊರಕೆ ಕಡ್ಡಿಯಿಂದ ಕಲಕಿದೆ. ಕಲಕಿ….ಕಲಕಿ…ಕಡ್ಡಿಯನ್ನು ಮೇಲಕ್ಕೆತ್ತಿದೆ. ಜೇನಿನಂತೆ ಕಡ್ಡಿಯಿಂದ ಜೋನಿಯಾಗಿ ಜೋರುತ್ತಿದ್ದ ತೊಗರನ್ನೇ ನೋಡುತ್ತಾ ಮತ್ತೆ ಸ್ವಲ್ಪ ಜೋರಾಗಿ ಕಡ್ಡಿಯನ್ನು ಅದ್ದಿದೆ.  ಆ ಕಡೆ ದಿಬ್ಬಣ ಬರುತ್ತಿದ್ದ ಕುರುಹಾಗಿ ಜೋರು ವಾಲಗದ ಸದ್ದು, ಢಂ ಢಮ್ ಎಂದು ಗರ್ನಾಲಿನ ಸದ್ದು ಕೇಳಿ ಬರುತ್ತಿದ್ದಂತೆ ಅದೇನಾಯಿತೋ ಇಲ್ಲಿ ಕಡ್ಡಿಯಿಂದ ಚಿಮ್ಮಿದ ತೊಗರು ಕ್ಷಣಾರ್ಧದಲ್ಲಿ ಹಾರಿ ನನ್ನ ಬೆಳ್ಳಿಮೋಡದ ಬ್ಲೌಸಿನ ಮೇಲೆ ಬಿದ್ದಿತ್ತು ! ಅಲ್ಲಿಂದ ಮೆಲ್ಲನೆ ಜಾರುತ್ತಾ  ಗಾಢ  ಬಣ್ಣದ ತೊಗರಿನ ಧಾರೆಯೊಂದು ಕೆಂಪನೆಯ ನಾಮದಂತೆ ಅಂಗಿಯ ಮೇಲೂ ಇಳಿಯಿತು !!  ನಾನು ಹೌಹಾರಿದೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಇಂತಾದ್ದೊಂದು ಘನಘೋರ ಅನಾಹುತ ಘಟಿಸಿ , ನನ್ನ ಅಮೂಲ್ಯವಾದ ಜರತಾರಿ ಅಂಗಿ ತೊಗರಿನ ಕಲೆಯಾಗಿ ಹೋಗಿತ್ತು !  ಅಲ್ಲಿ ದಿಬ್ಬಣ ಬಂದ ಗಲಾಟೆ ಕೇಳಿ ಗಾಬರಿಯಿಂದ ಅಂಗಿಮೇಲೆ ಬಿದ್ದ ತೊಗರನ್ನು ಉಜ್ಜಿಕೊಂಡೆ. ಅದು ಮತ್ತಷ್ಟು ರಾಡಿಯಾಯಿತು. ಆಕಾಶವೇ ತಲೆ ಮೇಲೆ ಬಿದ್ದಂತಾಯಿತು,  ಅಯ್ಯೋ ! ನನ್ನ ಹೊಸ ಅಂಗಿ…, ನನ್ನ ಬೆಳ್ಳಿಮೋಡ ಅಂಗಿ !!  ವಾಲಗದ ದ ಶಬ್ಧವನ್ನೂ ಮೀರಿ ಅಳುತ್ತಾ ಅಮ್ಮನ ಬಳಿ ಓಡಿದೆ. ದಿಬ್ಬಣವನ್ನು ಎದುರುಗೊಳ್ಳುವ ಗಡಿಬಿಡಿಯಲ್ಲಿದ್ದ ಅವಳು ನನ್ನ ಅವತಾರವನ್ನು ಕಂಡು ಸಿಡಿಮಿಡಿಗೊಳ್ಳುತ್ತಾ ಒಳಗೆ ಎಳೆದುಕೊಂಡು ಹೋಗಿ ,ಬೇಗ ಬೇಗ  ನೀರಿನಿಂದ ಕಲೆಯನ್ನು ಉಜ್ಜಿ ಅದರ ಮೇಲೊಂದಿಷ್ಟು ಪೌಡರ್ ಮೆತ್ತಿ ಕಲೆಯನ್ನು ಮರೆಮಾಚಿ ನನ್ನನು ಸುಮ್ಮನಾಗಿಸಿದಳು. ಬೇರೆ ಅಂಗಿ ಬದಲಾಯಿಸುವಷ್ಟು ಸಮಯವಿರಲಿಲ್ಲ. ಮದುಮಗ ಆಗಲೇ ಮಂಟಪಕ್ಕೆ ಬಂದಾಗಿತ್ತು. 

ಮದುವೆ ಶುರುವಾಯಿತು. ನಾನು ತೊಗರಿನ ಕಲೆಯ  ಬೆಳ್ಳಿಮೋಡ ಅಂಗಿಯೊಂದಿಗೆ ಪೆಚ್ಚುಮುಖದಿಂದ ಅತ್ತೆಯ ಮದುವೆ ನೋಡಿದೆ !

ಮುಂದೆ ನಾನು ಬೆಳೆದು ನನ್ನ ಬೆಳ್ಳಿಮೋಡದ ಅಂಗಿ ಅಂಗಾಲು ಬಿಟ್ಟು ಅರ್ಧಕಾಲಿನವರೆಗೆ ಬಂದರೂ, ತಿಳಿಹಸಿರು ಬಣ್ಣದ ಜರತಾರಿ ಅಂಗಿಯ ಮೇಲೆ ಕಡುಕಂದು ಬಣ್ಣದ  ತೊಗರಿನ 

ನಾಮದ ಕಲೆ ಹಾಗೆಯೇ ಇತ್ತು. 

‍ಲೇಖಕರು Admin

May 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: