ಬರುತ್ತಿರುತ್ತಾಳೆ ನನ್ನಮ್ಮ…

ವಾಣಿ ಭಂಡಾರಿ

ನನ್ನೊಳಗಿನ ನಂಬಿಕೆಗಳು ಸತ್ತಾಗ
ಮಂದಿ ನನ್ನ ನಂಬದಿದ್ದಾಗ
ನನ್ನಮ್ಮ ನನ್ನೊಳಗೆ ಸದಾ ಹುಟ್ಟಿ
ಎಚ್ಚರಿಸೊ ಗಂಟೆಯಾಗುತ್ತಾಳೆ.

ನನ್ನಮ್ಮ ಬಾಳಿದ್ದು ಮುಖವಾಡ ಹೊತ್ತಲ್ಲ
ಸೋಗಲಾಡಿ ಸವಕಲು ಮಾತಿಂದಲ್ಲ.
ಅವಳ ಹತಾರವೆ ನಂಬಿಕೆಯೆಂಬ ಧೀಶಕ್ತಿ.
ಸಣಕಲು ಕಾಯ ಕಲ್ಲು ಕರಗಿಸೊ ತಾಳ್ಮೆ.
ಹರಿದ ಸೀರೆ ಸೆರಗಿನಂಚಿನಲಿ
ಪ್ರೀತಿಯೊತ್ತ ಬೆವರು.
ನಿದ್ದೆ ಮರೆತ ಕಣ್ಣಲ್ಲಿ‌ ಆಸೆಯೆಂಬ ಆಗಸ,
ಕಂಬನಿಯಲಿ ಒದ್ದೆಯಾದ ದಿಂಬಿಗೂ
ಆಗಾಗ ಸಮಾಧಾನದ ಪಾಠ.

ಅದೆಂತಹ ಧೈರ್ಯ ನಂಬಿಕೆ ನನ್ನಮ್ಮನಿಗೆ.

ನಾಳೆಯೆಂಬ ಮರೀಚಿಕೆಗೆ
ವೀಳ್ಯ ನೀಡುವ ಕಕ್ಕುಲಾತಿ
ಆಸೆ ಕುದುರೆಗೆ ಆಗಾಗ ಕಡಿವಾಣ.
ಜಗ್ಗಿ ಹಿಗ್ಗಿ ಸಾಸಿವೆ ಡಬ್ಬದೊಳಗೆ
ಮರೆಯಾಗಿ ಬಿಡುವ ನಾಣ್ಯ.
ಅದೇ ನಾಳೆಗೆ ಮತ್ತೆ
ಉಗಾದಿ ದೀಪಾವಳಿಗೂ.

ಕುದಿವ ಎಸರಿನಂತೆ ಕುದ್ದು ಬತ್ತದೆ
ಮುಷ್ಟಿ ಅಕ್ಕಿಯೊಳಗೆ,,
ಹದ ಬೆರೆತ ಬಗೆ ಬಗೆ ತಿನಿಸು
ಹೀಗೆ ಕಾಲಗರ್ಭದೊಳಗೆ
ನಾನಾ ತರ ಹದವಾಗೊ ಅಮ್ಮ.
ಬಾಳ ಪಯಣದಲಿ
ಒದ್ದಾಡಿ ನೀಕಿದ್ದೆ ಹೆಚ್ಚು.
ಹುಚ್ಚು ಮನಸಿಲ್ಲ ಕಚ್ಚಾಡೊ
ಬುದ್ದಿ ಮೊದಲಿಲ್ಲ.
ಸರೀಕರೆದುರು ಹಚ್ಚೆಯಂತೆ,,
ಮತ್ತೆ ಮತ್ತೆ ನೆನಪಾಗೊ
ಬಯಕೆ ಅಮ್ಮನ ಹಠವದು.

ನಾಕಾಣೆ ಎಂಟಾಣೆ ಲೆಡ್ಡು ಪೆನ್ಸಿಲ್ ಗೂ
ಅದೆ ಸಾಸಿವೆ ಜೀರಿಗೆ ಡಬ್ಬವೆ ಪಡಿ.
ಕೆದರಿದ ಕೂದಲು ಮಾಸಿದ
ಮುಖದಲ್ಲೂ ಶಾರದೆಯ ಕಳೆ.
ಕಲೆತು ಕಲಿತಿದ್ದು ನಾಲ್ಕೆ
ನಾಕು ಸಾಲೆಮನೆ
ವಿದಾಯದ ಓದು ಬದುಕಿನ
ಪಾಠಸಾಲೆ ಬಹಳಷ್ಟಿತ್ತು ಅವಳಲ್ಲಿ.

ನಾ ಕುಸಿದಾಗ ಮತ್ತೆ ಕನಲಿ
ಬೆಂದು ಹದವಾಗೊ ರತುನ.
ಮುಂಗಾರು ಮಳೆಯಂತೆ
ಎದೆನೆಲಕ್ಕೆ ಹದ ನೀಡುತ್ತಾಳೆ.
ಬೇಸಿಗೆಯಲೂ ಕಲ್ಬಾವಿಯೊಳಗೆ
ನೀರು ತೆಗೆವ ಛಲಗಾತಿ.
ನೆನಪಾಗುತ್ತಾಳೆ ಮತ್ತೆ ,,,,
ನಾ ಬಿದ್ದು ಬಸವಳಿದು
ಬಿಕ್ಕಿ ಕಣ್ತುಂಬಿ ಅತ್ತಾಗ
ಸೆರಗ ತುದಿಯಲ್ಲಿ ಒರೆಸಿ ಕಣ್ಣು,
ಕನಸಲ್ಲೆ ತಲೆ ಸವರಿ ಪ್ರೀತಿಯ ನೇವರಿಕೆ
ಕಣ್ಣಲ್ಲೇ ಕೈಸನ್ನೆ ಹಿತ ನುಡಿ
ಕತ್ತಲೆಯ ಮನಕೆ.
ಮಸಣದ ಮಹಾದೇವಗೆ
ಹಿಡಿಶಾಪ ಬೇರೆ,,,
ತಬ್ಬಲಿಗೆಡವಿದ
ಮಕ್ಕಳ ಬಾಳಿಗಾರು ದಿಕ್ಕೆಂದು.

ಆಗಾಗ ಬರುತ್ತಾಳೆ
ನಂಬಿಕೆ ಧೈರ್ಯ ಹೊತ್ತು
ಕಲ್ಲು ಮುಳ್ಳಿನ ದಾರಿಗೆ ಹಣತೆಯಾಗಿ.
ಲದ್ದಿ ಹಿಡಿದ ಬುದ್ದಿಗೆ ಮದ್ದು
ಅರೆದು ನಂಬಿಕೆಯ ನೆರಳಾಗಿ.
ಬರುತ್ತಿರುತ್ತಾಳೆ ನನ್ನಮ್ಮ

‍ಲೇಖಕರು Admin

May 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: