ಸುರೇಶ್ ರಾಜಮಾನೆ ಓದಿದ ‘ಸಂಸಾರವುಳ್ಳ ಸಂಗತಿಗಳು’

ಸುರೇಶ್ ರಾಜಮಾನೆ

**

ಎಚ್ ಷೌಕತ್ ಅಲಿ ಅವರ ಹೊಸ ಕೃತಿ ಬಿಡುಗಡೆಯಾಗಿದೆ.

ಈ ಕೃತಿಯನ್ನು ಮೊಹಾಲಿಯಾ ಪ್ರಕಾಶನ ಪ್ರಕಟಿಸಿದೆ.

**

ಮಗುವಿನ ಕನಸುಗಳಿಗೆ ಗುರುವೇ ಒಬ್ಬ ಮಾರ್ಗದರ್ಶಕನಾಗಿರುತ್ತಾನೆ. ಮಾನವೀಯತೆ ಮತ್ತು ಸಮಾನತೆ ಕಲಿಕೆಯ ಮೌಲ್ಯಗಳಾದಾಗ ಮಾನವ ವಿಕಾಸವು ಒಂದು ಧನಾತ್ಮಕ ರೂಪ ಪಡೆದುಕೊಳ್ಳುತ್ತದೆ ಎಂಬ ಷೌಕತ್ ಅಲಿಯವರ ಮಾತುಗಳನ್ನು ಗಮನಿಸಿದಾಗ ಅವರ ಸಂ-ಸಾರವುಳ್ಳ ಸಂಗತಿಗಳು ಸಂಕಲನದ ಪ್ರತಿ ಬರಹಗಳು ವಿಕಾಸ ಮತ್ತು ವಿಸ್ಮಯವನ್ನು ಹಾಗೂ ತುಂಬಾ ಹತ್ತಿರವಾದ ಬದುಕಿನ ಭಾವವನ್ನು ನಮಗೆಲ್ಲ ಉಣ ಬಡಿಸುತ್ತವೆ. ತಮ್ಮ ಪ್ರೀತಿಯ ವಿದ್ಯಾರ್ಥಿಗಳಿಗೆ ಈ ಸಂಕಲನವನ್ನು ಅರ್ಪಿಸಿ ತಮ್ಮ ವೃತ್ತಿ ಜೀವನದ ಸಾರ್ಥಕತೆ ಹಾಗೂ ತಮ್ಮ ಕಲಿಕೆಯ ಹಾಗೂ ತಾವು ಬಿತ್ತಿದ ಬೆಳೆಸಿದ ಸಮಾನತೆಯ ಬೀಜಗಳಿಂದ ಸಮೃದ್ಧವಾದ ಫಲವನ್ನು ಪಡೆದ ಸಂತೃಪ್ತಿಯನ್ನು ಈ ಬರಹಗಳ ಮೂಲಕ ಪಡೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

ಸಂಕಲನದ 16 ಪುಟ್ಟ ಪುಟ್ಟ ಸಂಗತಿಗಳು ಇಲ್ಲಿ ತುಂಬಾ ಸಣ್ಣದಾದ ಎಳೆಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿವೆ. ವೃತ್ತಿ ಬದುಕಿನ ಕ್ಷಣಗಳು, ಸಾಮಾಜಿಕ ಬದುಕಿನ ಕ್ಷಣಗಳು, ಕೌಟುಂಬಿಕ ಬದುಕಿನ ಕ್ಷಣಗಳು ಮಿಲನಗೊಂಡು ಒಂದು ಸಂಪದ್ಭರಿತವಾದ ಸಾಹಿತ್ಯದ ಹಾಗೂ ಸಮೃದ್ಧವಾದ ಸಂದೇಶಗಳನ್ನುಳ್ಳ ಹೊತ್ತಿಗೆಯಾಗಿ ಓದಿಸಿಕೊಳ್ಳುತ್ತಲೆ ಒಳಗಿಳಿದುಬಿಡುತ್ತದೆ. ಇಲ್ಲಿನ ಬರಹಗಳು ಲೇಖಕರ ಸಂತೃಪ್ತಿಯ ವೃತ್ತಿ ಬದುಕನ್ನು ಹಾಗೂ ಸಾಮಾಜಿಕ ಕಳಕಳಿಗಳನ್ನು ಹಾಗೂ ಬದಲಾವಣೆಯಾಗಬೇಕಾದ ಭರವಸೆಗಳನ್ನು ಬಿಚ್ಚಿಡುತ್ತಾ ಸಾಗುತ್ತವೆ. ನನ್ನ ಆನಂದ ದಿಂದ ಪ್ರಾರಂಭವಾಗಿ ಶ್ರೀಗಳಿಂದ ಸನ್ಮಾನವನ್ನು ಸ್ವೀಕರಿಸಿರುವವರೆಗೂ ಸಂಧಿಸಿದ ಸಂ-ಸಾರವುಳ್ಳ ಸಂಗತಿಗಳು ವಿಭಿನ್ನವಾಗಿ ಗಮನಸೆಳೆಯುತ್ತವೆ.

ಎ.ಎನ್. ಮೂರ್ತಿರಾಯರ ಮಾತಿನ ಹಾಗೆ ಈ ಕೃತಿಯ ಲೇಖಕರು ಬದುಕುತ್ತಿರುವರು ಎಂದು ಮುನ್ನುಡಿಯನ್ನು ಬರೆದ ಶ್ರೀ ಗುಂಡುರಾವ್ ದೇಸಾಯಿ ಸರ್ ಅವರ ಮಾತು ಈ ಲೇಖಕರ ವ್ಯಕ್ತಿತ್ವವನ್ನು ಚಿತ್ರಿಸುವಲ್ಲಿ ದಾಖಲಾರ್ಹವಾಗಿದೆ. ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಇಲ್ಲಿನ ಸಂಗತಿಗಳು ಒಂದಲ್ಲ ಒಂದು ರೀತಿಯಿಂದ ಮನಸಿಗೆ ತಾಕುತ್ತವೆ ಎಂಬ ಮುನ್ನುಡಿಕಾರರ ಮಾತು ಅಕ್ಷರಶಃ ಸತ್ಯ ಎಂದು ನಾನೂ ಕೂಡಾ ಹೇಳಬಲ್ಲೆ. ತುಂಬಾ ದೂರದಲ್ಲಿದ್ದರೂ ಹತ್ತಿರದ ಭಾವ ಮೂಡಿಸುವ ಬರಹಗಾರರು ಇವರು. ಇವರ ವ್ಯಕ್ತಿತ್ವವೇ ಹಾಗೆ. ಸಮಾಜದ ದೃಷ್ಟಿಕೋನವು ವಾಸ್ತವದಲ್ಲಿ ಹೇಗಿದೆ ಮತ್ತು ನಮ್ಮ ದೃಷ್ಟಿಕೋನ ಹಲವರ ವಕ್ರದೃಷ್ಟಿಗೂ ಕಾರಣವಾಗಬಹುದು ಎಂಬುದನ್ನು ತುಂಬಾ ಸರಳವಾಗಿ ಮತ್ತು ಸೂಕ್ಷ್ಮವಾಗಿ ಒಂದು ಸನ್ನಿವೇಶದ ಮೂಲಕ ‘ಸಂ-ಜನ’ ಎಂಬ ಚಿಕ್ಕ ಕಥನದಲ್ಲಿ ಕಟ್ಟಿಕೊಟ್ಟಿದ್ದಾರೆ. ‘ವಿಧಿಯ ವಕಾಲತ್ತು’ ಎಂಬ ಕಥನದ ಮೂಲಕ ನಿಸ್ವಾರ್ಥ ಬದುಕಿನ ಜೊತೆಗೆ ಮತ್ತೊಬ್ಬರಿಗೆ ಮಾದರಿಯಾಗಬಲ್ಲ ಹಾಗೂ ಸಮಾಜಮುಖಿಯಾಗಿ ಬದುಕಬೇಕೆನ್ನುವ ಸಂದೇಶವನ್ನು ನಮಗೆಲ್ಲ ಹಿರಿಯರ ಸ್ಥಾನದಲ್ಲಿ, ಗುರುಗಳ ಸ್ಥಾನದಲ್ಲಿ ನಿಂತು ತಿಳಿಸಿಕೊಡುತ್ತಾರೆ.

‘ಮೊದಲ ಗೆಳೆಯ’ ಎಂಬ ಸಂಗತಿಯ ಮೂಲಕ ಆತ್ಮೀಯ ಗೆಳೆಯನ ಕಾವ್ಯದ ಸಂಗಾತಿಯನ್ನು ನೆನೆದು ಸ್ನೇಹದ ಪಾವಿತ್ರ್ಯತೆ ಮತ್ತು ಆದರ್ಶವನ್ನು ಸಾರಿ ಹೇಳಿದ್ದಾರೆ. ‘ವಾಹನತ್ರಯರು’ ಈ ಹೆಸರಿನಂತೆಯೆ ಈ ಬರಹವೂ ತುಂಬಾ ಕುತೂಹಲ ಮತ್ತು  ತುಂಬಾ ಹಾಸ್ಯಮಿಶ್ರಿತವಾದ ಕ್ಷಣಗಳೊಂದಿಗೆ ತುಂಬಾ ಅರ್ಥಪೂರ್ಣವಾದ ಸಂದೇಶವನ್ನೂ ನೀಡುತ್ತಾರೆ. ‘ಕೊರಗು’ ಎಂಬ ಕಥೆಯು ಸತ್ಯಘಟನೆಯೆ ಆಗಿರುವುದರಿಂದ ಮನಸಿಗೆ ತುಂಬಾ ಬೇಗ ತಾಕುತ್ತದೆ ಮತ್ತು ಬಹುಕಾಲದವರೆಗೂ ಉಳಿಯುತ್ತದೆ. ಒಂದು ಚಿಂತಾಕ್ರಾಂತ ಮನಸ್ಥಿತಿಯ ಮೂಲಕ ಕೊರಗನ್ನು ತಿಳಿದು ಕೊರಗುವ ಪರಿಸ್ಥಿತಿ ಬಂದರೂ ಕೊರಗಬಾರದು ಎಂಬ ಧನಾತ್ಮಕತೆಯನ್ನು ಈ ಕಥೆಯು ತುಂಬಾ ಆಪ್ತವಾಗಿ ಹೇಳಿಬಿಡುತ್ತದೆ. ‘ಕಿಲಾಡಿಗಳು’ ‘ಭಾಗ್ಯ ಅಲ್ಲ ಸೌಭಾಗ್ಯ’ ‘ಮಿನುಗಿ ಮರೆಯಾದ ನಕ್ಷತ್ರ’ ‘ಸವೆದುಹೋದ ಬದುಕು’ ‘ದೀನ ಬಂದು’ ‘ಸರಳ ವಿವಾಹ’ ‘ರಕ್ತದಾನ’ ಇವೆಲ್ಲವೂ ಒಂದಲ್ಲ ಒಂದು ಮೌಲ್ಯವನ್ನು ಬರಹದ ಮೂಲಕ ನಮ್ಮಲ್ಲಿ ಮೂಡಿಸುತ್ತವೆ. ಕಾಲ ಕಳೆದಂತೆ ಬದುಕು ಸವೆಯುತ್ತದೆ, ಸವೆದಷ್ಟು ಬದುಕು ಮಾಗುತ್ತದೆ, ಮಾಗಿದಷ್ಟು ಬದುಕು ಅರ್ಥ ಪಡೆದುಕೊಳ್ಳುತ್ತದೆ, ಅರ್ಥ ಪಡೆದುಕೊಂಡಷ್ಟು ಬದುಕು ಮಾದರಿಯಾಗುತ್ತದೆ, ಮಾದರಿಯಾಗುವ ಬದುಕು ಹೀಗೆ ಬರಹದ ಮೂಲಕ ಎಲ್ಲರ ಮನ ಸೇರುತ್ತದೆ.

ಧರ್ಮದ ಆಚೆಗೆ ನಿಂತು ಬರಹವನ್ನು ಸ್ವೀಕರಿಸುವವರಿಗೂ ಹಾಗೂ ಧರ್ಮದ ಚೌಕಟ್ಟಿನೊಳಗೆ ನಿಂತು ಯೋಚಿಸುವವರಿಗೂ ಷೌಕತ್ ಅಲಿಯವರು ಈ ಬರಹಗಳ ಮೂಲಕ ಹೆಚ್ಚು ಮಾದರಿಯ ವ್ಯಕ್ತಿತ್ವವಾಗಿ ನಮ್ಮೆದುರು ನಿಲ್ಲುತ್ತಾರೆ. ಬೆನ್ನುಡಿಗೆ ಬರೆದ ಸಾಲುಗಳಲ್ಲಿ ಹೇಳಿರುವಂತೆಯೇ ಇಲ್ಲಿನ ಕಥೆಗಳು ಅಂತರಂಗದಿಂದ ಬಹಿರಂಗಗೊಂಡು ಬಹಿರಂಗವನ್ನೂ ಅಂತರ್ಮುಖಿಯಾಗಿಸುವ ವಿಸ್ಮಯವನ್ನು, ಅನುಭವವನ್ನು ನೀಡುತ್ತವೆ. ಎಂಬುದು ನನ್ನ ಓದಿಗೆ ನಿಲುಕಿದ ನಿಲುವಾಗಿದೆ. ಬದುಕಿನ ಹಲವಾರು ಆಪ್ತವಾದ, ಆಪತ್ತಿಗೂ ಒಳಗಾದ, ಆಪತ್ಭಾಂದವತೆಯನ್ನು ಹೆಚ್ಚಿಸಿದ, ಆಪತ್ತುಗಳಿಂದ ಪಾರಾದ ಅಪರೂಪದ ಕ್ಷಣಗಳನ್ನು ಸಾರಭರಿತವಾಗಿ ಈ ಸಂಕಲನದ ಮೂಲಕ ಓದುಗರಿಗೆ ನೀಡುವಲ್ಲಿ ಕೃತಿಯು ಯಶಸ್ವಿಯಾಗಿದೆ. ಇಂಥ ಒಂದು ಹೊತ್ತಿಗೆಯ ಬೆನ್ನಿಗೆ ನನ್ನೆರಡು ನುಡಿಗಳನ್ನು ಬರೆವ ಅವಕಾಶ ಒದಗಿಸಿದ ಜಹಾನ್ ಆರಾಗೂ ಹಾಗೂ ಷೌಕತ್ ಅಲಿ ಸರ್ ಅವರಿಗೂ ತುಂಬು ಹೃದಯದ ಧನ್ಯವಾದಗಳು.

‍ಲೇಖಕರು Admin MM

February 17, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: