ಐದು ಸಮಕಾಲೀನ ಗ್ರೀಕ್ ಕವನಗಳು

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

ಇಲ್ಲಿರುವ ಐದು ಕವನಗಳನ್ನು ೨೦೧೬ ರಲ್ಲಿ ಪ್ರಕಟವಾದ ಆಸ್ಟ್‌ರಿಟಿ ಮೆಶರ್ಸ್ (Austerity Measures; Ed. Karen Van Dyck; Penguin Random House UK; 2016) ಎಂಬ ಗ್ರೀಕ್ ಭಾಷೆಯಿಂದ ಇಂಗ್ಲೀಷಿಗೆ ಅನುವಾದಗೊಂಡ ಕವನಗಳ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.

ಯೂರೊಪಿಯನ್ ಯೂನಿಯನ್‌ನಿಂದ ತೆಗೆದುಕೊಂಡ ಸಾಲಗಳನ್ನು ಪೂರೈಸಲಾಗದೇ, ಗ್ರೀಸ್ ಸಾಲದ ಕೂಪಕ್ಕೆ ಬಿತ್ತು. ದಿವಾಳಿಯಾಗುತ್ತಿರುವ ದೇಶವನ್ನು ಪಾರು ಮಾಡಲು ಯೂರೊಪಿಯನ್ ಯೂನಿಯನ್ ಮತ್ತೆ ದೊಡ್ಡ ಮೊತ್ತದ ಸಾಲ ನೀಡಲು ಒಪ್ಪಿತ್ತು. ಆದರೆ, ಈ ಸಾಲದ ಪ್ರತಿಯಾಗಿ ಗ್ರೀಸ್ ಸರ್ಕಾರವು ದೇಶದೊಳಗೆ ‘ಕಠಿಣ ಆರ್ಥಿಕ ಕ್ರಮಗಳನ್ನ’ ತೆಗೆದುಕೊಳ್ಳಬೇಕೆಂದು ಯೂರೊಪಿಯನ್ ಯೂನಿಯನ್ ನಿರ್ದೇಶಿಸಿತು.

ಗ್ರೀಸ್ ಸರ್ಕಾರವು ತನ್ನ ಜನಹಿತ ಪುರೊಭಿವೃದ್ಧಿ ಖರ್ಚುಗಳನ್ನು ಕಡಿಮೆ ಮಾಡಿತ್ತು. ಪೆನ್ಶನ್ ಮೊಟಕುಗೊಳಿಸಲಾಯಿತು, ತೆರಿಗೆ ಹೆಚ್ಚಿಸಲಾಯಿತು, ನಿರುದ್ಯೋಗ ಹೆಚ್ಚಿತು, ವಿದ್ಯುತ್ ಹಾಗೂ ನೀರಿನ ಅಭಾವ, ಯುವಜನರು ಹೊಟ್ಟೆಪಾಡಿಗಾಗಿ ದೇಶ ಬಿಟ್ಟು ಹೋದರು, ಬಡತನ ಹೆಚ್ಚುತ್ತಾ ಹೊಯಿತು – ಹೀಗೆ ಕಳೆದ ೧೦-೧೫ ವರ್ಷದಿಂದ ಗ್ರೀಸ್‌ ದೇಶದ ಕುಸಿದ ಆರ್ಥಿಕ ಸ್ಥಿತಿಯಿಂದ ಉಂಟಾದ ಸಾಮಾಜಿಕ, ರಾಜಕೀಯ, ಆರ್ಥಿಕ ಸಮಸ್ಯೆಗಳ ಸಂಧಿಗ್ಧತೆಯ ಮಧ್ಯೆ ಕಾವ್ಯಸ್ಪಂದನವಾಗಿ ಹುಟ್ಟಿದ ಕವನಗಳಿವು.

ಪುರಾತನ ಗ್ರೀಕ್ ಕಾವ್ಯ, ಗ್ರೀಕ್ ಪುರಾಣ, ಆಧುನಿಕ ಕಾವ್ಯ, ಇವೆಲ್ಲರ ಅಡಿಪಾಯದ ಮೇಲೆ ವೇಗವಾಗಿ ಬದಲಾಗುತ್ತಿರುವ ಗ್ರೀಸ್ ದೇಶದ ಸಮಕಾಲೀನ ಸ್ಥಿತಿಯನ್ನು ಕವಿಗಳು ಈ ಕವನಗಳಲ್ಲಿ ಸೂಕ್ಷ್ಮತೆಯಿಂದ ಬಿಂಬಿಸಿದ್ದಾರೆ.

  1. ಒಂದು ಕಡಲ್‌ದೃಶ್ಯದಲ್ಲಿ ಮಿಸ್ಟರ್ ಟಾವ್
    ಮೂಲ: MISTER TAU IN A SEASCAPE

ಕವಿ: ಕ್ಯಾಟರಿನಾ ಇಲಿಯೊಪೌಲೊವ್

ಅವನು ಕಡಲತೀರದಲ್ಲಿ ಒಂದು ಬೆನಕವನ್ನು ಹೆಕ್ಕುತ್ತಾನೆ.
ಆ ಬೆನೆಕಕ್ಕೊಂದು ವಿಶಿಷ್ಟ ಗುಣವಿದೆಯೆಂದು ಆತ ಗಮನಿಸುತ್ತಾನೆ,
ಅದೇನೆಂದರೆ ಅದಕ್ಕೆ ಒಳಗೂ ಇಲ್ಲ ಹೊರಗೂ ಇಲ್ಲ,
ಅವೆರಡೂ ಒಂದೇ, ಅದೇ.
ಬೇರೇನೂ ಹೊಳೆಯಲಿಲ್ಲ ಆತನಿಗೆ ಆಗ
ಈ ಬೆನಕ ಜಗದ ವೈರಿಯೆಂದು ತೀರ್ಮಾನಿಸಿ
ದೂರ ಒಗೆದ ಅದನ್ನು.
ಆ ಬೆನಕ ತಾನು ಬಿದ್ದಲ್ಲಿ ಸೃಷ್ಟಿಸುತ್ತದೆ, ಏನಂತೇವೆ, ಒಂದು ‘ನೀರ್‌ಗುಂಡಿ’ಯನ್ನು.

ಮಿಸ್ಟರ್ ಟಾವ್‌ಗೆ ಆ ಬೆನಕದ ಕಡೆ ಒಂದು ಅಗಾಧವಾದ ಆಕರ್ಷಣೆ,
ಒಂದು ಹೇಳಲಸಾಧ್ಯವಾದ ಅಸೊಯೆ ಉಂಟಾಗುತ್ತದೆ.
ಎಂದೇ, ಅವನು ಇನ್ನೊಂದು ಬೆನಕವ ಹೆಕ್ಕಿ ಬಾಯಿಗೆ ಹಾಕಿಕೊಳ್ಳುತ್ತಾನೆ.
ಮೊದಮೊದಲು ಅದು ಉಪ್ಪುಪ್ಪಾಗಿತ್ತು.
ಅದೊಂದು ಕಡಲ ಪದಾರ್ಥವೇ.
ಸ್ವಲ್ಪ ಹೊತ್ತಿನ ನಂತರ ಅದು ಏನೂ ಆಗಿರಲಿಲ್ಲ.
ಅವನ ಸ್ವರವನ್ನು ನುಂಗಿದ
ಮೌನದ ಒಂದು ಗಟ್ಟಿಯಾದ ಗಡ್ಡೆಯಾಗಿತ್ತದು ಅವನ ಬಾಯಿಯೊಳಗೆ

ಆಶ್ಚರ್ಯವಾಗುತ್ತದವನಿಗೆ, ಅವನು
ಸ್ವರವಿಲ್ಲದೇನೇ ಮಾತಾಡಬಲ್ಲನೆಂದು ಅರಿತಾಗ.
ಅವನ ಬೇಡಿಕೆಗಳು ಈಡೇರಿವೆ ಅನ್ನೋದು ತಿಳಿಯಾಗಿದೆ.
ಕಡಲ್‌‍ಹಕ್ಕಿಗಳ ಒಂದು ಹಿಂಡು ಅವನ ಕಾಲ ಬಳಿ ಬಂದಿಳಿಯುತ್ತವೆ.
ಹಾರಿಹೋದಾಗ, ಅವುಗಳು ಒಂದು ಓದಲಾಗದ ಪಠ್ಯವನ್ನು ಹಿಂಬಿಟ್ಟು ಹೋಗುತ್ತವೆ.
ಮಿಸ್ಟರ್ ಟಾವ್ ಕೆಳಬಗ್ಗಿ ಕೂಡಲೆ ಅದನ್ನು ಪರಿಶೀಲಿಸಲು ತೊಡಗುತ್ತಾನೆ.

2. ಹೆಸರಿಲ್ಲದ ಮಳೆ

ಮೂಲ: NAMELESS RAIN

ಕವಿ: ಸ್ಟಾಟಿಸ್ ಗುರ್‌ಗುರಿಸ್

ದೇವರ ಹೆಸರು ಮರೆತುಹೋಗಿದೆ
ಯಾಕೆಂದರೆ ಅದನ್ನು ಮೋಡಗಳಲ್ಲಿ
ಬರೆದಿಡುವ ಗೋಜಿಗೆ ಯಾರೂ ಹೋಗಲಿಲ್ಲ.
ಪ್ರತಿ ಸಲವೂ ಮಳೆ ಸುರಿದಾಗ
ಬೀಳುತ್ತದೆ ನಮ್ಮ ಮೇಲೆ
ಹೆಸರಿಲ್ಲದ ದೃಷ್ಟಿಯ
ಅಣುಸೂಕ್ಷ್ಮವಾದ ಪಾಪತೆ.
ಎಂದೇ, ಮನುಷ್ಯರು
ಕಪ್ಪು ಕೊಡೆಗಳನ್ನು ಕಂಡುಹಿಡಿದರು
ಅವರ ದೃಷ್ಟಿಗವಿತ ಹೆಸರನ್ನು
ಜಲಜೋಪಾನವಾಗಿಡಲು.

3. ಸರಳ ಗಣಿತ


ಮೂಲ: SIMPLE MATH

ಕವಿ: ಯಾನಿಸ್ ಸ್ಟಿಗಸ್

ಮೌನದ ನಾಲ್ಕನೇ ಕಿಲೊಮೀಟರ್ ತಲುಪಿದಾಗ
ದೇವರಿಗಾಗಿ ಸೂರ್ಯನಿಗಾಗಿ ಕೂಡಿಸಿಟ್ಟ ಆಣಿಗಳನ್ನು ಕೆಳಚೆಲ್ಲಿದೆ.
ಆಗಿನಿಂದ, ನಾನು ಕಂಕುಳಲ್ಲಿ ಒಂದು ಮಹಾ ಸೊನ್ನೆಯನ್ನು ಹಿಡಿದುಕೊಂಡು ತಿರುಗುತ್ತಿರುವೆ.

ಹೇಳಬೇಕೆಂದರೆ, ಅದೊಂದು ಸಾಧಾರಣ ಸ್ಲೀಪಿಂಗ್-ಬ್ಯಾಗ್
— ನಿಮಗೆ ಗೊತ್ತಿದೆಯಲ್ಲ, ನೀವು ಒಳಗೆ ತೂರುವಿರಿ,
ಎಂದರೆ ನೀವು ಕನಗಾಣಲು ಕನಸಲು ತೊಡಗುವಿರಿ.
ಈಗ ಅದೊಂದು ದೊಡ್ಡ ಬೋರ್ಡಿಂಗ್ ಸ್ಕೂಲು
ಬೇಗನೆ ಮಾನಸಿಕವಾಗಿ ಹೊತ್ತಿಕೊಳ್ಳುವವರಿಗಾಗಿ.

ಸೊನ್ನೆಗೇ ಇಷ್ಟೆಲ್ಲ ನಡೆದಿದೆಯೆಂದ ಮೇಲೆ
ಒಂದಕ್ಕೆ ಏನೇನು ಜರಗಬಹುದೋ ಕಲ್ಪಿಸಿಕೊಳ್ಳಿ.

4. ಹಳದಿ ಟ್ಯಾಕ್ಸಿ


ಮೂಲ: YELLOW TAXI

ಕವಿ: ಕ್ಲೋಯಿ ಕೂತ್ಸುಮ್‌ಬೆಲಿ

ಇಲ್ಲ, ಸರ್, ನೀವು ನನ್ನನ್ನು ಬೇರೆ ಯಾರ ಜತೆಗೋ ಕನ್ಫ಼್ಯೂಸ್ ಮಾಡ್ತಾ ಇದ್ದೀರಾ
ಆ ಹಳದಿ ಟ್ಯಾಕ್ಸಿಯಲ್ಲಿದ್ದದ್ದು
ನಾನಲ್ಲ
ಅಲ್ಲದೇ, ನಾನೆಂದೂ ಹಿಂದಿನ ಸೀಟಿನಲ್ಲಿ ನಿಮ್ಮ ಜತೆ ಕೂತಿರಲಿಲ್ಲ
ಅಂದು ಹಿಮ ಬೀಳುತ್ತಿರಲಿಲ್ಲ, ನನಗೆ ಅದರ ಖಾತ್ರಿ ಇದೆ,
ಇಲ್ಲ, ಹಿಮಹಲ್ಲೆಗಳು ನನ್ನ ಕೂದಲಲ್ಲಿ ಉದುರಲಿಲ್ಲ
ಪ್ರತಿಯಾಗಿ ಹೇಳಬೇಕೆಂದರೆ, ನನಗೆ ಕೂದಲು ಇರಲಿಲ್ಲ
ನೀವು ನನ್ನನ್ನು ಚುಂಬಿಸಲಿಲ್ಲ, ಇಲ್ಲದಿದ್ದರೆ ನನಗೆ
ನೆನಪಿರುತ್ತಿತ್ತು
ಹಾಗೆ ನೀವೇನಾದರೂ ನನ್ನನ್ನು ಚುಂಬಿಸಿದ್ದರೆ, ನಾನು,
ಹೇಗೂ ಅಲ್ಲಿರಲಿಲ್ಲ
ಆ ಡ್ರೈವರ್ ಕೂಡ ಒಂದು ಸಲ ಸಹ ತಲೆ ಹಿಂದೆ ತಿರುಗಿಸಲಿಲ್ಲ
ಮಾತಿಲ್ಲದೇನೇ ದಾಟಿದ ಅವನು ಸರೋವರವನ್ನು ಕೊನೇಯ ತನಕ
ಸುತ್ತಲ ಕರೀ ನೀರಿನಲ್ಲಿ
ಆಗಿಂದಾಗ ದೋಣಿಯ ಹುಟ್ಟು ಮುಳುಗುತ್ತಿತ್ತು.

5. ಖಾಲಿ ಇನ್‌ಬಾಕ್ಸ್

ಮೂಲ: Empty Inbox

ಕವಿ: ಒಲ್ಗಾ ಪಾಪಕೊಸ್ತಾ

ನಿನಗೆ ಮೆಯಿಲ್ ಬಂದಿಲ್ಲ

ಎಲ್ಲಾ ಮೆಸೆಜ್‌ಗಳನ್ನು
ತೆರೆದಾಗಿದೆ, ಓದಿಯಾಗಿದೆ, ಡಿಲೀಟ್ ಮಾಡಲಾಗಿದೆ

ಕೆಲವೇ ಕೆಲವನ್ನು ಬಿಟ್ಟು
ಮರೆಯಲಾಗದಂತವು

ಈ ಹೊಸ ಸ್ನೇಹಿತರು
ಹಳೆಯ ಸ್ನೇಹಿತರ
ಹಾಗೆ ಎಂದೂ ಆಗಲಾರರು

ಸುಮ್ಮನೆ ಹೀಗೇ
ಕಾಲಿಂಗ್ ಬೆಲ್ ಬಾರಿಸಿ
ಮನೆಯೊಳಗೆ ಬರುವಂತಹವರಿದ್ದರು

‍ಲೇಖಕರು Avadhi

March 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vijayavaman

    ಮೊದಲ ಕವಿತೆಯಲ್ಲಿ ” ಬೆನಕ ” ಎಂದರೆ ಏನು ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: