
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.
25
‘ಅಕ್ಕಾ, ನಿನ್ನಾಣೆ, ಆಯಿ ಅಪ್ಪಯ್ಯನಾಣೆ. ಇನ್ಮೇಲೆ ನಾ ಕದಿಯೂದಿಲ್ಲೆ ಅಕ್ಕ’ ದುಃಖದಲ್ಲಿ ಮಾತು ಉಮ್ಮಳಿಸಿತು. ಅವನನ್ನು ತಬ್ಬಿ ಬೆನ್ನು ನೇವರಿಸಿದಳು, ‘ನಾಳೆನೇ ಗುಡಿಗಾರರ ಮನೆಗೆ ಹೋಪ. ಅವರಲ್ಲಿ ನಮ್ಮ ತಪ್ಪು ಒಪ್ಪಿಕೊಂಡರೆ ತಪ್ಪೇನೂ ಇಲ್ಲ. ಕಳೆದ ಪ್ರವಚನದಲ್ಲಿ ಅವರು ಕೆಟ್ಟ ಕೆಲಸ ಮಾಡಿದರೂ ತಪ್ಪು ಒಪ್ಪಿಕೊಳ್ಳುವುದೇ ಪ್ರಾಯಶ್ಚಿತ ಅನ್ನಲಿಲ್ಲವೇ?’ ನಾಣಿ ಅರ್ಧ ಎದ್ದು ಕುಳಿತ, ‘ಆಯಿಗೆ ಮೊದಲು ನನ್ನ ತಪ್ಪು ಹೇಳಿ ಕ್ಷಮೆ ಕೇಳಿ ಆಮೇಲೆ ದೇವಣ್ಣನ ಮನೆಗೆ’
‘ನಾಣಿ’ ಏನೋ ನೆನಪಿಸಿ ಗೌರಿ ಅವನ ತಲೆ ನೇವರಿಸಿದಳು, ‘ನಾವು ಇನ್ನೂ ಒಂದು ತಪ್ಪು ಮಾಡಿ ಈವರೆಗೆ ಅಜ್ಜಯ್ಯ, ಆಯಿಯಿಂದ ಮುಚ್ಚಿ ಇಟ್ಟಿವಲ್ಲ. ನೆನಪಿದ್ದಾ ಅದೆಂತದು?’
‘ನೆನಪಿದ್ದು ಅಕ್ಕ, ಅದೇ ಬ್ರಿಟಿಷ ಅಧಿಕಾರಿ ದೊಡ್ಡ ಬಿಳಿ ಮೀಸೆಯವ, ಕರಡಿ ಹಂಗೆ ಇದ್ದ, ಅವನ ವಿಷ್ಯ ಅಲ್ಲದ?’
‘ಅವನದ್ದೇ. ಆ ದಿನ ಅಜ್ಜಯ್ಯನ ಮುಖ ಪಾಪ, ಅಳುವ ಹಾಂಗೆ ಆಗಿತ್ತು. ನಮಗೂ ಬುದ್ದಿ ಇಲ್ಲೆ. ನಾವು ಎಂತದೋ ಮಾತಾಡಿ ಇನ್ನೆಂತದೋ ಆಯ್ತು. ಅಜ್ಜಯ್ಯ ಅವಮಾನದಲ್ಲಿ ತಲೆ ತಗ್ಗಿಸಿದ್ದರೂ ನಾವಿನ್ನೂ ಅವನಿಗೆ ನಮ್ಮ ತಪ್ಪು ಹೇಳ್ಲೇ ಇಲ್ಲೆ. ಪಾಪ, ನಾಳೆ ಇದನ್ನೂ ಅಜ್ಜಯ್ಯನಿಗೆ ಹೇಳಿ’ ಗೌರಿ ನೆನಪಿಗೆ ಬಂತು ಆದಿನ ಬ್ರಿಟಿಷ ಅಧಿಕಾರಿ ಮನೆಗೆ ಬಂದದ್ದು.
ಅದೊಂದು ದಿನ ಅಕಸ್ಮಾತ್ ಮನೆಗೆ ಬಂದಿದ್ದರು ಒಬ್ಬ ಬ್ರಿಟಿಷ್ ಅಧಿಕಾರಿ, ಮತ್ತು ಇಬ್ಬರು ಪೋಲೀಸ ಸಹಾಯಕರು. ಅಧಿಕಾರಿ ಬಳಿ ದಪ್ಪ ಚರ್ಮದ ಚೀಲವಿತ್ತು. ಅದರಿಂದ ಕೆಲವು ಕಾಗದ ಪತ್ರಗಳನ್ನು ತೆಗೆದು ಸುಬ್ಬಪ್ಪಯ್ಯರ ಮುಂದಿರಿಸಿದ ಅಧಿಕಾರಿ, ‘ನಿಮ್ಮ ಮೇಲೆ ನಮಗೊಂದು ದೂರು ಬಂದಿದೆ ಸುಬ್ಬಪ್ಪಯ್ಯನೋರೆ, ನಿಮ್ಮಲ್ಲಿ ನೂರು ಮುಡಿಗಿಂತಲೂ ಜಾಸ್ತಿ ಅಕ್ಕಿ ದಾಸ್ತಾನು ಇಟ್ಟಿದ್ದೀರಂತೆ. ಕಾನೂನು ಪ್ರಕಾರ ಅಕ್ಕಿ ದಾಸ್ತಾನು ಮಾಡ್ಬಾರದೆಂದು ಗೊತ್ತಿಲ್ಲವೇ?’

ಸುಬ್ಬಪ್ಪಯ್ಯ ಬೆಚ್ಚಿ ಬಿದ್ದರು. ‘ನನ್ನ ಗದ್ದೆಯಲ್ಲಿ ಬೆಳೆದ ಭತ್ತದ ಫಸಲು. ಮನೆಯಲ್ಲಿ ಕುಟ್ಟಿ ಅಕ್ಕಿ ಮಾಡಿ ಇಟ್ಟದ್ದು ಕಾನೂನು ರೀತ್ಯಾ ತಪ್ಪು, ಅಕ್ರಮ ಹೇಗಾಗುತ್ತದೆ?’
‘ನಿಮ್ಮೂರಿನಿಂದ ಹೆಸರಿಲ್ಲದೆ ಬಂದ ದೂರು. ಸತ್ಯ ಸಂಗತಿ ತಿಳಿಬೇಕು ನಾವು. ಮೇಲಿನ ಅಧಿಕಾರಿಯ ಆದೇಶದಂತೆ ನಿಮ್ಮ ದಾಸ್ತಾನು ತನಿಖೆ ಮಾಡಬೇಕು’ ಎಂದ.
ಸುಬ್ಬಪ್ಪಯ್ಯರ ಬಳಿ ಪ್ರತಿವರ್ಷದ ಬೆಳೆಯ ಲೆಕ್ಕದ ಪಟ್ಟಿಯಿದೆ. ಮಳೆಗಾಲ ಮತ್ತು ಬೇಸಿಗೆಯ ಎರಡು ಬೆಳೆ ಬೆಳೆದ ಭತ್ತದ ಲೆಕ್ಕ, ಅವನ್ನು ಅಕ್ಕಿ ಮಾಡಿ ಮುಡಿ ಕಟ್ಟಿಸಿ ಇಟ್ಟ ಲೆಕ್ಕ ಆ ಪಟ್ಟಿಯಲ್ಲಿದೆ. ವರ್ಷದ ಖರ್ಚಿಗೆ ಅವೂ ಸಾಲದೆ ಹೊರಗಿನಿಂದ ಭತ್ತ ಖರೀದಿಸಿದ ಲೆಕ್ಕವೂ ಇದೆ. ಸುಬ್ಬಪ್ಪಯ್ಯರು ಪೂರಾ ಲೆಕ್ಕ ಅಧಿಕಾರಿಯ ಮುಂದಿಟ್ಟರು. ಸಮಾಧಾನ ಆದಂತೆ ಕಾಣಲಿಲ್ಲ. ಅನಂತರ ಅವರನ್ನು ಹೊಗೆ ಅಟ್ಟಕ್ಕೆ (ಅಡಿಗೆ ಮನೆಯ ಮೇಲಿನ ಅಟ್ಟ. ಅಡಿಗೆಗೆ ಉರಿಸಿದ ಬೆಂಕಿಯ ಶಾಖ ಮೇಲಿನ ಅಟ್ಟಕ್ಕೆ ಬಂದು ಅಲ್ಲಿಟ್ಟ ದಾಸ್ತಾನು, ಉಪ್ಪಿನಕಾಯಿ ಹಪ್ಪಳ ಇತ್ಯಾದಿ ಹಾಳಾಗುವುದಿಲ್ಲ) ಕರೆದೊಯ್ದು ಶೇಖರಿಸಿಟ್ಟ ಅಕ್ಕಿ ಮುಡಿ ತೋರಿಸಿದರು. ಅಲ್ಲಿ ಒಂಬತ್ತು ಮುಡಿಗಳಿದ್ದವು.
‘ಒಂದು ಮುಡಿಗೆ ಎಷ್ಟು ಸೇರು ಅಕ್ಕಿ?’ ದರ್ಪದಲ್ಲಿ ಕೇಳಿದ ಅಧಿಕಾರಿ. ‘ಒಂದು ಕಳಸಿಗೆ ಅಂದರೆ ಹದಿನಾಲ್ಕು ಸೇರು ಅಕ್ಕಿ. ಮೂರು ಕಳಸಿಗೆ ಅಕ್ಕಿ ಅಂದರೆ ಒಂದು ಮುಡಿ. ಈಗ ನೀವೇ ಲೆಕ್ಕ ಹಾಕಿ ನಲವತ್ತೆರಡು ಸೇರು ಅಕ್ಕಿ ಒಂದು ಮುಡಿಗೆ. ಸ್ವಾಮೀ, ಈ ವರ್ಷ ಫಸಲು ಕಮ್ಮಿ. ಈ ಅಕ್ಕಿ ವರ್ಷ ಪೂರಾ ನಮ್ಮ ಊಟಕ್ಕೆ ಸಾಲದು. ಇದಲ್ಲದೆ ಅಲಾಯಿದ ಉದ್ದು, ನವಣೆ ಅದು ಇದೂ ಆಗಬೇಕಲ್ಲ ಸಂಸಾರಸ್ಥರ ಹೊಟ್ಟೆಗೆ. ಎಲ್ಲಾ ನಿಮ್ಮ ಕಣ್ಣೆದುರು ಇದೆ. ಇನ್ನೆಲ್ಲೂ ಅಡಗಿಸಿ ಇಟ್ಟದ್ದು ಇಲ್ಲೆ. ಯಾರೋ ಆಗದವರು ಕೊಟ್ಟ ದೂರು ಇದು’ ಅಟ್ಟದಿಂದ ಕೆಳಗಿಳಿಯುತ್ತ ಸುಬ್ಬಪ್ಪಯ್ಯ ಬೆವರಿ ಹೋಗಿದ್ದರು. ಪಾಪ, ವಯಸ್ಸು ಎಂಬತ್ತೆರಡು ಆಯ್ತು. ಅಟ್ಟ ಹತ್ತಿ ಇಳಿಯುವುದು ಖುಷಾಲೇ? ಏದುಸಿರು ಬಿಡುತ್ತಿದ್ದರು. ಆಗೆಲ್ಲ ಲೆಕ್ಕಕ್ಕಿಂತ ಹೆಚ್ಚು ದಾಸ್ತಾನು ಅಕ್ಕಿ ಧಾನ್ಯ ಕದ್ದು ಮುಚ್ಚಿಟ್ಟರೆ ಜೈಲು ಶಿಕ್ಷೆಯೇ ಗತಿ.

ಸುಬ್ಬಪ್ಪಯ್ಯರನ್ನು ಈ ಅಧಿಕಾರಿ ಕೋಳ ಹಾಕಿ ಕರೆದೊಯ್ಯುವನೆಂದು ಗೌರಿ, ನಾಣಿ ಹೆದರಿ ಬೆಕ್ಕಿನಂತೆ ಮುದುರಿ ಆಯಿಯ ಸೀರೆಯ ಹಿಂದೆ ಅಡಗಿದ್ದರು. ‘ಅವರೆಂತ ಹುಲಿಯಾ ಕರಡಿಯಾ? ತಪ್ಪು ಮಾಡಿದ್ರೆ ಹೆದರಿಕೆ. ನಾವೆಂತ ತಪ್ಪು ಮಾಡ್ಲಿಲ್ಲೆ. ಸುಮ್ಮನಿರಿ’ ಮಕ್ಕಳಿಗೆ ಧೈರ್ಯ ಹೇಳಿದ ಆಯಿ ತಟ್ಟೆ ತುಂಬಾ ತಿಂಡಿ, ಬಾಳೆಹಣ್ಣು, ಮುರುಗುಲ ಹಣ್ಣಿನ ಪಾನಕ ತಂದಿಟ್ಟಳು. ಪ್ರಸನ್ನನಾದ ಅಧಿಕಾರಿ, ‘ಆಸುಪಾಸಿನಲ್ಲಿ ನಿಮ್ಮ ಪ್ರಾಮಾಣಿಕತೆ ಬಗ್ಗೆ ಜನ ಒಳ್ಳೆಯ ಮಾತು ಹೇಳ್ತಾರೆ. ಆದರೂ ದೂರು ಬಂದಾಗ ತನಿಖೆ ಮಾಡುವುದು ನಮ್ಮ ಕರ್ತವ್ಯ. ನನ್ನ ಸಮಯ ಹಾಳಾಯ್ತು ಇಲ್ಲಿಗೆ ಬಂದು. (ಆಯ್ ವೇಸ್ಟ್ ಮೈ ಟೈಮ್) ಇದರ ಪರಿಹಾರ ಒಂದು ಮುಡಿ ಅಕ್ಕಿ’ ಎಂದ ಬ್ರಿಟಿಷ್ ಅಧಿಕಾರಿ ಹಲ್ಕಿರಿದು. ಅವನ ಮಾತು ಆಜ್ಞೆಯಂತೆ. ಕೆಲಸದವ ಒಂದು ಮುಡಿ ಅಕ್ಕಿ ಹೊತ್ತು ಅಧಿಕಾರಿ ಕುಳಿತ ದೋಣಿಯಲ್ಲಿ ಇಟ್ಟು ಬಂದ.
‘ಸುಲಿಗೆ? ಶುದ್ಧ ಸುಲಿಗೆ. ನಾವು ಭಾರತೀಯರು ತಗ್ಗಿ ಬಗ್ಗಿ ನಡೆವ ಗುಲಾಮರು.’ ಸಿಟ್ಟಿನಲ್ಲಿದ್ದ ಅಜ್ಜಯ್ಯ ಕೆಲ ವರ್ಷಗಳ ಹಿಂದೆ ಮೊದಲನೇ ಮಹಾಯುದ್ಧದ ಸಂದರ್ಭದ ದಿನಗಳಲ್ಲಿ ಬ್ರಿಟಿಷ್ ಅಧಿಕಾರಿಗಳ ದರ್ಪದ ವರ್ತನೆ ನೆನಪಿಸಿದ್ದರು. ಯುದ್ಧದ ಕಾಲ, ಸುಮಾರು ಎರಡು ವರ್ಷಗಳ ಕಾಲ ದೇಶದಲ್ಲಿ ಭೀಕರ ಬರಗಾಲ. ಆಗಲೂ ಹೀಗೆ, ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ರೈತರಿಗೆ ಮಾರುವ, ಒಂದೂರಿನಿಂದ ಇನ್ನೊಂದೂರಿಗೆ ಸಾಗಿಸುವ ಹಾಗಿರಲಿಲ್ಲ.
ಸಿರಿವಂತರೂ ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಇಡುವುದೂ ಅಪರಾಧ. ಅಕ್ಕಿ ಗೋದಿ ಇತ್ಯಾದಿ ಆಹಾರ ಉತ್ಪನ್ನಗಳ ದಾಸ್ತಾನು ಕಂಡಲ್ಲಿ ಅವನ್ನು ಅಧಿಕಾರಿಗಳು ಬಂದು ತನಿಖೆ ಮಾಡದೆ ಒಯ್ಯುತ್ತಿದ್ದರಂತೆ. ಜನ ಅವರಿಗೆ ಹೆದರಿಯೇ ಹುಲ್ಲಿನ ರಾಶಿಯಲ್ಲಿ, ಹೊಂಡಗಳಲ್ಲಿ, ಕತ್ತಲೆ ಪತ್ತಾಯದಲ್ಲಿ ಧಾನ್ಯದ ಮೂಟೆಗಳನ್ನು ಕಾಣದಂತೆ ಬಚ್ಚಿಡುತ್ತಿದ್ದರು. ಅದನ್ನೂ ಇಲಿಯಂತೆ ಹುಡುಕಿ ತೆಗೆಯುವ ಚಾಲಾಕಿ ಅಧಿಕಾರಿಗಳು. ಹೀಗೆ ಸಂಗ್ರಹವಾದ ಧಾನ್ಯ ಮೂಟೆ ಮೂಟೆಗಳಲ್ಲಿ ಹಡಗಿನ ಮೂಲಕ ದೇಶದಿಂದ ಹೊರಗೆ ಹೋಗಿ ಬಿಡುತ್ತಿತ್ತು.
ನಮ್ಮ ದೇಶಕ್ಕೆ ಭೀಕರ ಬರಗಾಲ ಬಂದದ್ದು ಈ ಕಾರಣದಿಂದ. ಅವರ ಕಣ್ಣಿಗೆ ಹೊಳೆಬಾಗಿಲು ಸಣ್ಣ ಕುದ್ರು. ಅಲ್ಲೇನಿರುತ್ತದೆ ಮಣ್ಣು? ಯಾವ ಅಧಿಕಾರಿಗಳೂ ಯುದ್ಧ ಮುಗಿವ ತನಕ, ಅನಂತರದ ದಿನಗಳಲ್ಲಿ ಈ ಕಡೆ ಬರಲಿಲ್ಲವಂತೆ. ಈಗ ಆ ರಗಳೆಯಿಲ್ಲದೆ ತಾವು ನೂರಕ್ಕಿಂತ ಹೆಚ್ಚು ಅಕ್ಕಿ ಮುಡಿ ಕಳ್ಳ ದಾಸ್ತಾನು ಇಟ್ಟಿದ್ದೇವೆಂದು ಬ್ರಿಟಿಷ್ ಅಧಿಕಾರಿಗಳಿಗೆ ಹೇಳಿದ್ದು ಯಾರು? ವರ್ಷದಲ್ಲಿ ಆಗುವ ಅಕ್ಕಿಯೇ ಹನ್ನೆರಡು ಮುಡಿ. ವರ್ಷ ಖರ್ಚಿಗೆ ಸಾಲದು. ತಮಗೆ ಯಾರಲ್ಲೂ ವೈರತ್ವವಿಲ್ಲ. ಜಗಳವಿಲ್ಲ. ಕಷ್ಟದಲ್ಲಿ ಇರುವವರಿಗೆ ಕೊಟ್ಟವರೇ ವಿನಃ ಕೇಳಿದವರಲ್ಲ. ಇದು ತಮ್ಮ ಕೆಲಸದವರ ದುರ್ಬುದ್ಧಿಯೇ? ಕೂಗಾಡಿದ ಸುಬ್ಬಪ್ಪಯ್ಯರಿಗೆ ದೂರು ಕೊಟ್ಟವರು ಯಾರೆಂದು ತಿಳಿಯದೇ ಹೋಯಿತು. ಮೊಮ್ಮಕ್ಕಳನ್ನು ಕೇಳಿದರು, ‘ನಿಮಗೆ ಏನಾದರೂ ಸುಳಿವು ಸಿಕ್ತಾ?’

ಉಸಿರೆತ್ತಲಿಲ್ಲ ನಾಣಿ, ಗೌರಿ. ತಾವೀಗ ಬಾಯಿ ಬಿಟ್ಟರೆ ಬೆನ್ನ ಮೇಲೆ ಬಾಸುಂಡೆ ಖಚಿತವೇ. ನಿಜವಾಗಿಯೂ ತಾವೇ ತಪ್ಪಿತಸ್ಥರು! ಇಬ್ಬರೂ ತಮ್ಮಲ್ಲೇ ಅಂದುಕೊಂಡರು. ನಡೆದ ಸಂಗತಿ ಅವರಿಗೆ ಮಾತ್ರ ಗೊತ್ತು! ಕೆಲವು ದಿನಗಳ ಹಿಂದೆ ಹಣುಮನ ಮಗ ಕಲ್ಲಪ್ಪ ಅಲ್ಲದೆ ಇನ್ನೂ ಕೆಲವು ಮಕ್ಕಳೊಡನೆ ಆಡುತ್ತಿದ್ದಾಗ ಕಲ್ಲಪ್ಪ ನಾಣಿಯನ್ನು ‘ಊಟಕ್ಕಿಲ್ಲದ ಮಾಣಿ ಹಾಂಗೆ ಕಾಣ್ತೆ ನರಪೇತಲ!’ ಎಂದಿದ್ದ ತಮಾಶೆಗೆ. ಅಷ್ಟಕ್ಕೆ ಸಿಟ್ಟು ಬಂತು ನಾಣಿಗೆ, ‘ಯಾರು ನರಪೇತಲ? ನೀನೇ ಉಂಬುಕೂ ಗತಿ ಇಲ್ಲದ ಬಿಕನಾಸಿ.’ ಆಗ ಗೌರಿಯೂ, ‘ಮೂರ್ಕಾಸಿನವ ನೀನೇ. ನಮ್ಮ ಅಜ್ಜಯ್ಯ ನೂರು ಮುಡಿ ಅಕ್ಕಿಯ ಸರದಾರ. ಗೊತ್ತಾ?ನಮ್ಮ ಮನೆ ಹೊಗೆ ಅಟ್ಟದಲ್ಲಿ ಅಕ್ಕಿ ಮುಡಿ ರಾಶಿಯೇ ಇದೆ ಇಷ್ಟೆತ್ತರಕ್ಕೆ. ಬಂದು ನೋಡು. ನಿಮ್ಮ ಮನೇಲಿ ಹುಡುಕಿದ್ರೆ ಮುಷ್ಟಿ ಅಕ್ಕಿಯೂ ಸಿಕ್ಕ. ಮಾತಾಡ್ತಾ. ನಿನ್ನ ಸಂಗ ಬ್ಯಾಡ. ಹೋಗಾ ಅತ್ಲಾಗೆ’ ತಮ್ಮನ ಕೈಹಿಡಿದು ಆಟದಿಂದ ಹೊರಟು ಬಂದಿದ್ದಳು.
ಅವಳಾಡಿದ ಮಾತಿಗೆ ರೆಕ್ಕೆ ಪುಕ್ಕ ಸೇರಿ ನೂರು ಮುಡಿ ಹೋಗಿ ನೂರಾರು ಮುಡಿ ಅಕ್ಕಿಯಾಗಿ ಬ್ರಿಟಿಷ್ ಅಧಿಕಾರಿಯ ಕಿವಿಗೆ ತಲುಪಿ ಆದದ್ದು ಅನರ್ಥವೇ. ಆ ದಿನ ಅಕ್ಕ ತಮ್ಮ ಕೈ ಮೆಲೆ ಕೈ ಇಟ್ಟು ತಮಗೆ ತಾವೇ ಪ್ರಮಾಣ ಮಾಡಿ, ‘ಇನ್ಮೇಲೆ ನಮ್ಮ ವಿಷ್ಯ ಯಾರಿಗೂ ಹೇಳಲಾಗ, ಪಾಪ ಅಜ್ಜಯ್ಯ’ ಎಂದಿದ್ದರು. ಇವತ್ತು ಮತ್ತೆ ತಮ್ಮನ ಕೈಯ್ಯಲ್ಲಿ ತನ್ನ ಕೈ ಇಟ್ಟ ಗೌರಿ, ‘ಇದನ್ನೂ ಅಜ್ಜಯ್ಯನಿಗೆ ಹೇಳುವ ನಾಣಿ. ಸತ್ಯ ಯಾವಾಗಲೂ ಸತ್ಯವೇ. ನಾಲ್ಕು ಬಾಸುಂಡೆ ಬೀಳ್ಗು ಮೈಮೇಲೆ. ಎಂತ ಹೇಳ್ತೆ?’
ಇಬ್ಬರೂ ಜೊತೆಯಾಗಿ ಅತ್ತರು, ಕಣ್ಣೀರು ಒರಸಿ ನಕ್ಕರು. ಮುಗ್ಧತೆಯ ಪೊರೆ ಕಳಚಿ ಪ್ರಬುದ್ಧತೆ ತಾನು ತಾನಾಗಿಯೇ ಕಾಲಿಡುತ್ತಿತ್ತು.
| ಇನ್ನು ನಾಳೆಗೆ |
0 Comments