ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹುಯ್ಯೋ ಎಂದು ಸುರಿವ ಮಳೆಯಲ್ಲಿ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

17

‘ಸಣ್ಣ ಒಡ್ತಿಗೆ ಬೇಸ್ರ ಆತು ನಾಣಪ್ಪ, ನನ್ನ ಅಪ್ಪ ತೆಪ್ಪ ತಕ್ಕಂಡ್ ಮರವಂತೆಗೆ ಹೋಪಕಿದ್ರೆ ನಿಮಗೆ ಒಂದು ಬಾಟ್ಲಿ ಸಮುದ್ರ ನೀರು ತಪ್ಪಕ್ ಹೇಳ್ತೋ. ನಾವು ಇಲ್ಲೇ ಕಾಯ್ಸಿ ಉಪ್ಪು ಮಾಡ್ವ’
ಚಾನು ಹೇಳಿದಂತೆ ಸಮುದ್ರ ನೀರು ಬರಲಿಲ್ಲ. ಗೌರಿ, ನಾಣಿಗೂ ಉಪ್ಪು ಮಾಡುವ ಉಮೇದು ಆವಿಯಾಗಿ ಹೋಗಿತ್ತು.
*** ** ** ** **

ಆ ಒಂದು ದಿನ ಹುಯ್ಯೋ ಮಳೆ. ತಲೆ ಹೊರಹಾಕದಂತೆ, ಬಾನಲ್ಲಿ ಸೂರ್ಯನಿಗೇ ಥಂಡಿ ಹಿಡಿದು ಮೋಡಗಳ ಮರೆಗೆ ಸರಿದು ಮಳೆಯೋ ಮಳೆ. ನೋಡಲು ಚಂದ, ಅಷ್ಟೇ ಭೀಕರ. ಮಳೆ ಅಬ್ಬರ ನಿಂತ ನಂತರ ಅಂಗಳ ದಾಟಿ ಹಾಡಿ ತಿರುವಿನ ರಸ್ತೆಗೆ ಬಂದು ಹೊಳೆಯಂಚಿಗೆ ಹೋಗಲು ಗೌರಿಗೆ ಎಲ್ಲಿಲ್ಲದ ಖುಷಿ. ಅವಳು ನಾಣಿಯು ಮಣ್ಣು ನೆಲದ ಮೇಲೆ ನಿಂತ ನೀರನ್ನು ಕಾಲಲ್ಲಿ ತುಳಿಯುತ್ತ ಗಿಡ ಮರಗಳ ಕೆಳಗೆ ಎಲೆಯಿಂದ ಹನಿಯುವ ನೀರಿನ ಪರಿಮಳ ಮೂಸುತ್ತ, ಅದೋ ಕಾಡು ಹಕ್ಕಿಗಳ ಕರಕರ ಕಲರವ, ಗೊರವಂಕನ ಗುಟ್ ಗುಟ್, ಅಳಿಲುಗಳ ಸರಸರ ಸದ್ದು ಕೇಳುತ್ತ ಹಾಗೇ ನಡೆದು ಹೋದರೆ ಕನಸಿನ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟಂತೆ. ಆದರೆ ಯಾರೂ ಅವರನ್ನು ಈ ಮಳೆಯಲ್ಲಿ ಹೊರಬಿಡುವುದೇ ಇಲ್ಲ. ಮಳೆಯಲ್ಲಿ ನೆಂದು ಥಂಡಿ, ಜ್ವರ ಬಂದೀತೆಂಬ ಭಯಕ್ಕಲ್ಲ, ಯಾವ ಹೊತ್ತಿಗೂ ಗಾಳಿ ಮಳೆ ಹೆಚ್ಚಿ ಒಮ್ಮೆಲೆ ಹೊಳೆ ಉಕ್ಕೇರಿ ದಂಡೆ ದಾಟಿ ಮೇಲಕ್ಕೇರಬಹುದು.

ಈ ಮಂಗಗಳಿಗೆ ಹೊತ್ತು ಗೊತ್ತಿನ ಪರಿವೆಯಿಲ್ಲ. ಹೊಳೆ ಬಳಿಗೇ ನಿಲ್ಲುತ್ತವೆ. ನೀರಲ್ಲಿ ಬಳಕೊಂಡು ಹೋದ್ರು ನಮಗೆ ಈಜು ಬತ್ತು. ಚಕ್ರಿ ಅಮ್ಮಮ್ಮ ಕಲಿಸಿದ್ದು ಎನ್ನುವ ಗರ್ವದಲ್ಲಿ ನೀರಿನಲ್ಲಿ ದಡ ಚುಂಬಿಸಿ ಹೋಗುವ ಮೀನುಗಳು, ನೀರು ಹಾವುಗಳು, ಯಾರೋ ಸೌಪರ್ಣಿಕಾ ನದಿಗೆ ಬಾಗಿನ ಕೊಟ್ಟ ಹೂವು ಹಾರ, ಎಲೆಗಳು, ಇನ್ನೆಲ್ಲೋ ಹೊಳೆದಂಡೆ ಮೇಲಿದ್ದ ತೆಂಗಿನ ಮರಗಳಿಂದ ಬಿದ್ದ ಕಾಯಿಗಳುತೇಲಿ ಬರುವುದು ನಿಂತು ನೋಡುವುದೇ. ದಡದಲ್ಲಿ ಕೈಗೆ ಸಿಗುವಂತೆ ತೇಲಿ ಬರುವ ತೆಂಗಿನಕಾಯಿಯನ್ನು ದೋಂಟಿಯಲ್ಲಿ ಎಳೆಯುವುದೂ ಸಾಹಸವೇ. ಕಳೆದ ವರ್ಷ ಹೀಗೆ ಕಾಯಿ ಹಿಡಿಯಲು ಹೋಗಿ ಅಲೆಯ ರಭಸಕ್ಕೆ ಕೊಚ್ಚಿ ಹೋದ ಯುವಕ ಇನ್ನೂ ನಾಪತ್ತೆ. ಇವು ಮರ್ಕಟಗಳು. ಕಣ್ರೆಪ್ಪೆಯಂತೆ ನೋಡಿಕೊಳ್ಳುವ ಆಯಿ, ಅಜ್ಜಮ್ಮನ ಮಾತು ಕೇಳಿದರಲ್ಲವೇ.

ಹುಯ್ಯೋ ಎಂದು ಸುರಿವ ಮಳೆಯಲ್ಲಿ ತಲೆ ಹೊರ ಹಾಕದಂತೆ ಕುಳಿತು ಉದಾಸೀನಳಾದ ಗೌರಿಗೆ ಹಠಾತ್ತನೆ ಅಟ್ಟದಲ್ಲಿ ಭದ್ರವಾಗಿ ಒಪ್ಪವಾಗಿಟ್ಟ ಸುಶೀಲ ಚಿಕ್ಕಿಯ ಮೂರು ಕೈಚೀಲಗಳು, ಬೀಗ ಹಾಕಿದ ಟಿನ್ನಿನ ಟ್ರಂಕು, ಇನ್ನೊಂದು ಉದ್ದದ ಪೆಟ್ಟಿಗೆ ನೆನಪಾಗಿ, ‘ಅಟ್ಟದಲ್ಲಿಟ್ಟ ಚಿಕ್ಕಿಯ ಸಾಮಾನಿನಲ್ಲಿ ಏನಿರಬಹುದು ನಾಣಿ?’ ಕೇಳಿದಳು.
‘ನಂಗೊತ್ತಿಲ್ಲ. ಹೋಗಿ ತೆರೆದು ನೋಡೋಣ್ವಾ?’
‘ಬೇಡ. ಆಯಿ ಹೇಳ್ತಾಳೆ, ಯಾರ ವಸ್ತುವೂ ಕದ್ದು ನೋಡೂಕಾಗ. ಅದು ಪಾಪವಂತೆ.’
‘ಚಿಕ್ಕಿಯನ್ನೇ ಕೇಳೋಣ’
ಅದೇ ಸಮಯ ಅಟ್ಟ ಏರಿ ಸುಶೀಲಚಿಕ್ಕಿ ಬಂದೇ ಬಿಟ್ಟಳು. ಮಕ್ಕಳ ಕುತೂಹಲ ತಿಳಿದು ತನ್ನ ಎರಡು ಕೈಚೀಲ ಎದುರಿಗಿಟ್ಟಳು. ಗೌರಿಗೆ ಪುಕು ಪುಕು. ಆವತ್ತು ಒಂದುದಿನ ಹೀಗೆ ಕುತೂಹಲ ತಡೆಯದೆ ಚಿಕ್ಕಿ ಇಲ್ಲದ ಹೊತ್ತಿನಲ್ಲಿ ಅಟ್ಟಕ್ಕೆ ಬಂದವಳು ಒಂದು ಚೀಲ ಬಿಚ್ಚಿದ್ದಳು ಗುಟ್ಟಾಗಿ. ಅದರಲ್ಲಿ ಇರುವುದೆಲ್ಲ ಹೆಂಗಸರಿಗೆ ಬೇಕಾದ ವಸ್ತುಗಳು.

ಬಣ್ಣ ಬಣ್ಣದ ನೂಲು, ಕ್ರೋಷಾ ಕಡ್ಡಿ, ಅರ್ಧ ಹೆಣೆದ ಸ್ವೆಟರ್, ಕೈಕಸೂತಿ ಹಾಕಿದ ಬಟ್ಟೆಗಳು, ಗೋಣಿಹಾಸಿನ ಮೇಲೆ ಬಿಡಿಸಿದ ಚಿತ್ರಗಳು, ತಾಮ್ರದ ತೂತು ಬಿಲ್ಲೆಗಳನ್ನು ಕ್ರೋಷಾ ಕಡ್ಡಿಯಿಂದ ಬಣ್ಣದ ನೂಲಿನಲ್ಲಿ ಹೊಲಿದದ್ದು ಎಷ್ಟು ವಿಧಗಳು! ನೋಡಿ ಅಚ್ಚರಿ. ಮತ್ತೆ ಅದನ್ನು ಹಾಗೇ ಇಟ್ಟು ಕೆಳಗಿಳಿದು ಬಂದು ಆಯಿಗೆ ಹೇಳಿದಾಗಲೇ ಅಲ್ಲವೇ ಆಯಿ ಹಾಗೆಲ್ಲ ಇನ್ನೊಬ್ಬರ ವಸ್ತು ನೋಡುವುದು ಪಾಪ ಎಂದದ್ದು? ಚಿಕ್ಕಿಗೆ ಗೊತ್ತಾಗದ್ದು ತನ್ನ ಪುಣ್ಯ.

ಅವಳು ನೋಡಿದ ಚೀಲ ಬಿಟ್ಟು ಇನ್ನೊಂದು ಚೀಲ ಹೊರ ತೆಗೆದಿದ್ದಳು ಚಿಕ್ಕಿ. ಅದರಲ್ಲಿ ಬಣ್ಣದ ಸುತ್ತು ಕಟ್ಟಿದ ಬಿಲ್ಲೆಗಳಿಂದ ತಯಾರಿಸಿದ ಬಾಗಿಲು ಪಟ್ಟಿಯ ಪರದೆ, ಕೈಚೀಲ, ಮರದ ಸ್ಟೂಲಿಗೆ ಮೇಲು ಹೊದಿಕೆ, ಮಣಿಗಳಿಂದ ತಯಾರಿಸಿದ ಬಳೆ, ಸರ, ಕಿವಿಯೋಲೆ ಏನಿದು? ಕೈಕುಶಲತೆಯ ವಸ್ತುಗಳಿಂದ ತುಂಬಿವೆ! ಇನ್ನೊಂದು ಚೀಲದಲ್ಲಿ ಬಣ್ಣದ ಪೆನ್ಸಿಲುಗಳು, ಬಣ್ಣದ ಕಲರ್ ಬಾಕ್ಸು, ಕುಂಚ, ಕಡುಬಣ್ಣದ ಹಲವು ಬಾಟಲಿಗಳು ನೋಡಿದರೆ ಅವೆಲ್ಲ ಕಾಗದದಲ್ಲಿ ಬರೆಯುವ ಚಿತ್ರಕ್ಕೆ ಬೇಕಾದ ಸಾಮಗ್ರಿಗಳು. ಈ ಹಿಂದೆ ಗೋವಾಕ್ಕೆ ಹೋದಾಗ ಸೀತು ದೊಡ್ಡಪ್ಪನ ಮಕ್ಕಳಲ್ಲಿ ಇಂತವನ್ನೇ ನೋಡಿದ್ದಳು.

ಕಾಗದದ ಮೇಲೆ ಬಹು ಗರ್ವದಲ್ಲಿ ಆ ಮಕ್ಕಳು ಚಿತ್ರ ಬಿಡಿಸಿದ್ದು ತೋರಿಸಿ, ತನಗೂ ಬೇಕೆಂದಾಗ ಕೈ ತೋರಿಸಿ ಲೊಟ್ಟೆ ಎಂದದ್ದು. ಹೌದಲ್ಲ, ಅವೇ ಇವು ಚಿಕ್ಕಿಯಲ್ಲಿವೆ! ಅಕಾ, ಪೆನ್ಸಿಲ್‌ನಿಂದ ಬಿಡಿಸಿದ ಗಣೇಶ ಮತ್ತು ಕೃಷ್ಣನ ಎರಡು ಚಿತ್ರಗಳು! ಏನು ಚೆಂದ. ‘ಇಲ್ನೋಡು ನಾಣಿ, ನಾನೂ ನೀನೂ ಹೀಂಗೆ ಬಿಡಿಸಲಕ್ಕು ಅಲ್ಲದಾ? ಅಪ್ಪಯ್ಯನಿಗೆ ಹೇಳಿ ಬಣ್ಣದ ಪೆನ್ಸಿಲು ತರಿಸಿ’ ಆದರೆ ತನಗೋ ಒಂದು ರಂಗೋಲಿ ಹಾಕಲು ತಿಳಿಯದು. ಚಿಕ್ಕಿ ಚಿತ್ರ ಬಿಡಿಸುತ್ತಾಳೆ, ರಂಗೋಲಿ ಹಾಕುತ್ತಾಳೆ. ಹೊಲಿಯುತ್ತಾಳೆ. ಕಮಲತ್ತೆಯೂ ಕೈಯ್ಯಲ್ಲಿ ತನ್ನ ರವಿಕೆ ಹೊಲಿದದ್ದು ಉಂಟು. ಆದರೆ ಚಿಕ್ಕಿಯದು ಏನು ನೀಟು! ಅಚ್ಚರಿ ಮೇಲಚ್ಚರಿ. ಮತ್ತೆ ಈ ಟ್ರಂಕಿನಲ್ಲಿ ಚಿಕ್ಕಿಯ ಬಟ್ಟೆಗಳು. ಅದರ ಮೇಲೆ ಏನಿದು? ಬಣ್ಣ ಮಾಸಿದ ಒಂದು ಅಂಗಿ, ಪಂಚೆ.

ಗೋಡೆ ಬದಿಗೆ ಇಟ್ಟ ಫೋಟೋದ ಇನ್ನೊಂದು ಪ್ರತಿ? ಇದನ್ನೇ ಅಲ್ಲವೇ ಚಿಕ್ಕಿ ಪ್ರತಿದಿನ ಸ್ನಾನದ ನಂತರ ಕೈಗೆತ್ತಿ ಹಣೆಗೆ ಮುಟ್ಟಿಸಿ ಮತ್ತೆ ಪೆಟ್ಟಿಗೆಯಲ್ಲಿ ಇಡುತ್ತಾಳೆ. ಪಾಪ, ಚಿಕ್ಕಿ. ಈಗಲೂ ಫೋಟೋ ಸವರಿ ಇಟ್ಟು ಮತ್ತೊಂದು ಚೀಲ ಬಿಚ್ಚಿದಳು. ಅದರ ತುಂಬ ಏನಿದು ಬರೀ ಹಳೆ ಪೇಪರುಗಳ ರಾಶಿ. ಹಲವು ಇಂಗ್ಲೀಷ, ಕನ್ನಡ ಪುಸ್ತಕಗಳು. ಪ್ರತಿದಿನ ಕಿಟಕಿ ಬದಿ ಕುಳಿತು ಪುಸ್ತಕ ಓದುವುದನ್ನು ಗೌರಿ ಗಮನಿಸಿದ್ದಾಳೆ. ಇಂಗ್ಲೀಷನ್ನು ತುಂಬ ತಿಳಿದುಕೊಂಡವಳು ಚಿಕ್ಕಿ. ತನಗೆ ನಾಣಿಗೆ ಕನ್ನಡ ಬರಹ, ಓದು ಹೊರತಾಗಿ ಬೇರೆ ಸೊನ್ನೆ. ಅದೂ ಸಾಲದು ಎನ್ನುವಾಗ ಹಿತವಾಗಲಿಲ್ಲ. ಚಿಕ್ಕಿಯಿಂದ ನಾವೇ ಪಾಠ ಹೇಳಿಸಿಕೊಂಡರೆ ಹೇಗೆ? ಪಾಟಿ ಬಳಪ ಇದೆ.

‘ನಮಗೂ ಕಲಿವಾಸೆ. ಹೇಳಿಕೊಡ್ತಿಯಾ ಚಿಕ್ಕಿ?’ ಗೌರಿ ಭಾಷೆ ಬಾರದ ಪುಸ್ತಕದ ಮೇಲೆ ಕೈ ಇಟ್ಟಳು.
‘ನಂಗೂ ಮಹಾ ಬತ್ತಿಲ್ಲೆ. ಎ.ಬಿ.ಸಿ.ಡಿ ಅಕ್ಷರ ಹೇಳಿ ಕೊಡ್ತೆ. ಈ ವಾರ ಅಪ್ಪಯ್ಯ ಬಂದ್ರೆ ಮಕ್ಕಳ ಇಂಗ್ಲೀಷ ಪುಸ್ತಕ ಬಣ್ಣ ಬಣ್ಣದ್ದು ಸಿಕ್ಕಿದ್ರೆ ತಪ್ಪಕೆ ಹೇಳು.’

ಅಪ್ಪಯ್ಯ ಈ ವಾರ ಬರುವುದು ಕಷ್ಟವೇ. ಗಾಳಿ ಮಳೆ ಜೋರಾದರೆ ದೋಣಿ ನೀರಿಗಿಳಿಯುವುದು ಕಷ್ಟ. ‘ತೂಫಾನ್ ಬರುವ ಅಂದಾಜಿದ್ದರೆ ನೀನು ಸಾಸ್ತಾನದಿಂದ ಬರೂದು ಬೇಡ.’ ಸುಬ್ಬಪ್ಪಯ್ಯ ಎಚ್ಚರಿಕೆ ಕೊಟ್ಟಿದ್ದರು. ಒಮ್ಮೆ ಹೀಗೆ ಮಳೆ ಅಬ್ಬರ, ಮೋಡ ಮುಸುಕಿದ್ದು ಇಲ್ಲವೆಂದು ಅಪ್ಪಯ್ಯ ಸಾಸ್ತಾನದಿಂದ ಹೊರಟಿದ್ದ. ಅರ್ಧದಾರಿ ಎತ್ತುವಾಗ ಬಿರುಗಾಳಿ ತೂಫಾನ್ ಬಂದು ದೋಣಿ ಆಚೀಚೆ ಓಲಾಡಿ ಮುಂದಕ್ಕೆ ಹೋಗಲಾಗದೆ ಹಿಂದಕ್ಕೂ ಬರಲಾಗದೆ, ಆದಿನ ನಾಲ್ಕು ಜನ ಇದ್ದರಂತೆ ದೋಣಿಯಲ್ಲಿ. ದೋಣಿಯವನಿಗೆ ಸುಸ್ತಾಗಿ ಹೇಗೋ ದೋಣಿಯನ್ನು ಹಿಂದಿರುಗಿಸಿ ಸಾಸ್ತಾನಕ್ಕೆ ತಂದಿದ್ದ. ಅಪ್ಪಯ್ಯ ಬಾರದೆ ಮನೆಯಲ್ಲಿ ಎಲ್ಲರೂ ಗಾಬರಿ.

‘ಮಳೆರಾಯನೇ, ಮಳೆರಾಯನೇ, ಮಳೆ ನಿಲ್ಲಿಸು. ಅಪ್ಪಯ್ಯ ಈ ವಾರ ಮನೆಗೆ ಬರಲಿ.’ ಆ ದಿನ ನಾಣಿ ಅಳುತ್ತ ಕೈ ಮುಗಿದು ಬೇಡಿಕೊಂಡಿದ್ದ. ಮರು ದಿನ ಬೆಳಿಗ್ಗೆ ನಾಲ್ಕು ಜನರಿದ್ದ ದೋಣಿ ಹಿಂದಿನ ಸಂಜೆ ಮುಳುಗಿದೆಯೆಂದು ವರ್ತಮಾನ ಬಂದು ಸುಬ್ಬಪ್ಪಯ್ಯ ಹೈರಾಣಾಗಿ ಹೊಳೆ ವಾತಾವರಣ ತಿಳಿ ಆದಮೇಲೆ ಮಧ್ಯಾಹ್ನದ ದೋಣಿಯಲ್ಲಿ ಸಾಸ್ತಾನಕ್ಕೆ ಹೊರಟಿದ್ದ. ಆಗ ಮುಳುಗಿದ್ದು ಇನ್ನಾರೋ ಮೀನು ಹಿಡಿಯುವವರ ಬೇರೊಂದು ದೋಣಿಯೆಂದು ಸುದ್ದಿ ಸಿಕ್ಕಿ ಎಲ್ಲರೂ ನಿರಾಳ.

| ಇನ್ನು ನಾಳೆಗೆ |

‍ಲೇಖಕರು Admin

July 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತ ಎ.ಪಿ.

    ಇಲ್ಲೂ ಜೋರಾಗಿ ಮಳೆ.
    ಎಲ್ಲೆಲ್ಲೂ ನೀರೋ ನೀರು..
    ಹೊಳೆ ಬಾಗಿಲಿನಲ್ಲೂ ಕುಂಭದ್ರೋಣ ಮಳೆ!
    ಗೌರಿ ಎಷ್ಟು ಚುರುಕು, ಮುದ್ದು!
    ಬಹಳ ಆಪ್ತವಾಗುತ್ತಾಳೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: