‘ಕವಿತೆ ಬಂಚ್‌’ನಲ್ಲಿ ಡಾ ನಿರ್ಮಲಾ ಜಿ ಬಟ್ಟಲ

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಡಾ ನಿರ್ಮಲಾ ಜಿ ಬಟ್ಟಲ

ಡಾ ನಿರ್ಮಲಾ ಜಿ ಬಟ್ಟಲ ಶಿಕ್ಷಕಿಯಾಗಿ, ಉಪನ್ಯಾಸಕರಾಗಿ, ಪ್ರಸ್ತುತ ಪ್ರಾಚಾರ್ಯರಾಗಿ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಯಲದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

೨೦೧೮ ರಲ್ಲಿ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದಿಂದ ಮ.ಘು ಘಿವಾರಿ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಕಥೆ, ಕವನ, ಪ್ರಬಂಧ ಮತ್ತು ಲೇಖನಗಳನ್ನು ಬರೆಯುವುದು, ಶೈಕ್ಷಣಿಕ ನಾಟಕಗಳ ರಚನೆ, ನಿರ್ದೇಶನ ಮತ್ತು ನಟನೆ,
ಚಿತ್ರ ಕಲೆ, ಕಲಾಕೃತಿಗಳ ರಚನೆ, ಜನಪದ ಸಾಹಿತ್ಯ ಮತ್ತು ಸುಗಮ ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ
.

1. ಅಸಹಜ

ಹದಿಹರೆಯದಿ ಹದವರಿಯದ ಮನ
ಹಂಬಲಿಸಿ ಮೋಹಕೆ ಹಪಹಪಿಸಿ ಪ್ರೀತಿಗೆ
ಹೆದರಿ ಸಮಾಜಕೆ ಹವಣಿಕೆಯಾದವು
ಲಿಂಗ ನೋಡಲಿಲ್ಲ.
ವಾಂಛೆಯೊಂದು ಗೆದ್ದು ನಕ್ಕಿತು
ನಮಗೆ ತಿಳಿಯಲೇ ಇಲ್ಲ…!!
ತೀರದ ಬಯಕೆಗಳ
ಉರಿಯಲಿ ಉರಿಯುವ ಮನಕೆ
ಪ್ರೀತಿಯ ನೀರೆರೆವ

ಸುಖ ದೂರವಾದಾಗ
ಸುಖವನರಸಿ ಬಂದ ಸಖಿಯ
ತೋಳ ಸೆರೆಯ ಮರೆಯಲಿ
ರತಿ ಸುಖದಲಿ ಮಿಂದೆದ್ದರೆ
ವಿಕೃತವೆಂದಾದಾಗ.
ವಾಂಛೆಯೊಂದು ಗೆದ್ದು ನಕ್ಕಿತು
ಪೌರುಷವ ದಿಕ್ಕರಿಸುತ
ನಮಗೆ ತಿಳಿಯಲೇ ಇಲ್ಲ…!!

2. ಇರಬಲ್ಲೆಯಾ ನೀನು….

ನಿನ್ನ ಮೌನಕ್ಕೆ ನಾನು
ಸಾವಿರ ಅರ್ಥ ಕಲ್ಪಿಸಿಕೊಂಡು
ಒಳ ಒಳಗೆ ಕೊರಗುತ್ತಿದ್ದೇನೆ
ನಿಜವಾದ ಕಾರಣ ಹೇಳಬಾರದೆ….!

ಹಾಡು ಹರಟೆಗಳೆಲ್ಲ
ಮೂಕವಾದಾಗ
ಎದೆಯ ನೋವೆ
ಹಾಡಾಗುತ್ತಿದೆ….!

ಮುಂಗಾರಿನ
ಮೋಡದ ಹಿಂದಿನ
ಚಂದಿರನ ಬೆಳಕು ನನ್ನ ಕೆಣಕಿ
ಅಣಕಿಸಿ ನಕ್ಕಂತೆ ಭಾಸವಾಗುತ್ತಿದೆ….!

ನೀನಿಲ್ಲದೆಯೂ ಇದ್ದೆ ನಾನು
ನನ್ನ ಪಾಡಿಗೆ
ನೀನಿಲ್ಲದೆಯೂ ಇರುವೆ
ಮರೆತು ಎಲ್ಲಗೊಡವೆ
ಇರಬಲ್ಲೆಯಾ ನೀನು
ನನ್ನ ಮರೆತು…..!

3. ಬೆಕ್ಕು ಮಲಗಿದ ಮುಂಜಾವು

ಬೆಳ್ಳಂ ಬೆಳಿಗ್ಗೆ….
ವಾಟ್ಸಪ್ ಸಂದೇಶಗಳಲ್ಲಿ
ಮುಳುಗಿದ್ದ ಮನೆಯೊಡತಿ
ಅಂಗಳ ಗುಡಿಸಿ ರಂಗವಲ್ಲಿ
ಹಾಕುವುದನ್ನು ಮರೆತು ಕುಳಿತಿದ್ದಳು…!

ಕಾವು ಆರಿದ ಒಲೆಯಲ್ಲಿ
ಮಲಗಿದ್ದ ಬೆಕ್ಕು
ಎದ್ದು ಮೈ ಮುರಿದು
ಬೇಸರದಿಂದ ಅವಳನ್ನೊಮ್ಮೆ ದಿಟ್ಟಿಸಿ
ವೈಯಾರದ ಹೆಜ್ಜೆ ಹಾಕುತ್ತ
ಹೊರ ನಡೆಯಿತು….!

ಲೈಕ್ ಕಾಮೆಂಟ್ಸಗಳನ್ನು ನೋಡುತ್ತ
ತನ್ನಷ್ಟಕ್ಕೆ ನಗುತ ಕುಳಿತವಳನ್ನು
ಕಂಡು ಕೆಲಸದವಳು
ಹಿತ್ತಲಲ್ಲೆಲ್ಲಾ ಸುದ್ದಿಯಾಗುವಂತೆ
ಸದ್ದು ಮಾಡತೊಡಗಿದಳು….!
ಪೇಪರ್ ಹಾಲು ಹಿಡಿದು
ಒಳಬಂದ ಯಜಮಾನ
ಅಸಹನೆಯ ಉರಿಯಲ್ಲಿ
ಚಾ ಕುದಿಯಲಿಟ್ಟ….!

ಕ್ಷಣ ಹೊತ್ತು ತನಗಾಗಿ
ಮೀಸಲಿಟ್ಟ ಘಳಿಗೆಯ ಮೇಲೆ
ಎಷ್ಟೋಂದು ಜನರ ಕೆಂಗಣ್ಣು…!
ಮೈ ಕೊಡವಿ ಎದ್ದೆಳುವಳು….!!

ಅಂಗಳದಲ್ಲಿ ರಂಗೋಲಿ ನಕ್ಕಿತು
ಹಾಲು ಕಾಯ್ದ ವಾಸನೆಗೆ
ಬೆಕ್ಕು ಒಳ ಬಂದಿತು
ಚಹಾದ ಗುಟುಕು ಹೀರುತ್ತಾ
ಯಜಮಾನ ತುಸು ನಕ್ಕ
ಕೆಲಸದಾಕೆಯೂ…..!

ಈಗ ಅವಳಿಗೆ ಬಿಡುವಿಲ್ಲ….
ಕುಕ್ಕರ್‌ ಕೂಗುತಿದೆ
ಮಿಕ್ಸರ್‌ ತಿರುಗುತಿದೆ
ಹಂಚು ಕಾಯುತಿದೆ
ಗಡಿಯಾರ ಓಡುತಿದೆ….!

ಮನೆಯಲ್ಲಾ ದೂಪದ ವಾಸನೆ
ಘಂಟೆಯ ನಾದ
ಶಾಂತವಾಗಿ ದೇವರ ಮುಂದೆ
ಪ್ರಾರ್ಥನೆ ಹಾಡುತ್ತಿದ್ದಾಳೆ….!

4. ಮರೆವು

ಮೌನದ ಚಿಪ್ಪೊಳಗೆ
ಅಡಗಿ ಮಾತುಗಳು
ಮುತ್ತಾಗುವುದ ಮರೆತಾವು…!

ಸ್ಪಂದನೆಗೆ ಸ್ಪಂದಿಸದ
ಭಾವದ ಮೊಗ್ಗುಗಳು
ಬಿರಿಯುವುದು ಮರೆತಾವು….!

ಪದ ಪದಗಳು ಸೇರಿ ಪದ್ಯವಾಗದಾದಾಗ
ಸ್ವರ ಲಯಗಳು ಬೆರೆತು
ಹಾಡಾಗುವುದು ಮರೆತಾವು…..!

ಮೌನದೊಳಗೊಂದು ಮೌನ
ಪ್ರಶ್ನೆಗಳಿಗೆ ಉತ್ತರವಾದರೆ
ಮಾತುಗಳು ಮರೆತಾವು….!

5. ಮಾತು ಮೌನ

ಹೀಗೆ ಅವಳು….
ಒಮ್ಮೊಮ್ಮೆ ಮೌನಿಯಾಗುತ್ತಾಳೆ
ಮಾತು ಖಾಲಿಯಾದವು ಎಂದಲ್ಲ
ಮಾತಿಗೊಂದು ಹೊಸ ಹೊಳಪು ತರಲು….!

ಹೀಗೆ ಅವಳು….
ಒಮ್ಮೊಮ್ಮೆ ಮೌನಿಯಾಗುತ್ತಾಳೆ
ಮಾತುಗಳು ಬೇಸರವಾದವು ಎಂದಲ್ಲ
ಮೌನದಲ್ಲೊಂದು ಹೊಸ ಅರ್ಥ ಹುಡುಕಲು….!

ಹೀಗೆ ಅವಳು….
ಒಮ್ಮೊಮ್ಮೆ ಮೌನಿಯಾಗುತ್ತಾಳೆ
ಮಾತು ಮರೆತು ಹೋದವು ಎಂದಲ್ಲ
ಧ್ಯಾನದೊಳಗೆ ಮಾತುಗಳ
ಅನುಸಂಧಾನ ಮಾಡಲು….!

ಹೀಗೆ ಅವಳು….
ಒಮ್ಮೊಮ್ಮೆ ಮೌನಿಯಾಗುತ್ತಾಳೆ
ಮಾತುಗಳಿಗೆ ಹೊಸ ಪದ ಹುಡುಕಬೇಕು ಎಂದಲ್ಲ
ಮೌನದ ಮಾತುಗಳಿಗೆ
ಹೊಸ ಭಾಷ್ಯ ಬರೆಯಲು….!

ಹೀಗೆ ಅವಳು….
ಒಮ್ಮೊಮ್ಮೆ ಮೌನಿಯಾಗುತ್ತಾಳೆ
ಮಾತುಗಳು ರುಚಿಸುತ್ತಿಲ್ಲ ಎಂದಲ್ಲ
ಮಾತುಗಳಿಗಾಗಿ ಹಂಬಲಿಸುವ
ಮನಸ್ಸು ಬೇಕೆಂದು….!

6. ನಡುವೆ ಸುಳಿವ ಆತ್ಮ

ಓಣಪು ವೈಯ್ಯಾರ
ತಲೆಗೆ ಹೂಭಾರ
ಸೀರೆ ಸಿಂಗಾರ
ಘಲ್‌ಎನ್ನುವ ಕೈ ಬಳೆ,
ಜಲ್‌ ಎನ್ನುವ ಕಾಲ್ಗೆಜ್ಜೆ ಧರಿಸಿ
ನಿರಿಗೆ ಚಿಮ್ಮಿಸಿ ನಡೆಯುವ
ಆಸೆಯ ಚಿಗುರಚಿವುಟಿ ಬಿಡಲೆ…?
ಮನದಲ್ಲಿ ಹೂತಿಟ್ಟಷ್ಟು
ಪುಟಿದೇಳುವ ತವಕ ತಲ್ಲಣಗಳು….!
ಅಳುಕು ಪುಳಕಗಳ ಖಾವೊಳಗೆ
ಗಂಡು ಮೊಟ್ಟೆಯೊಡೆದು
ಹೆಣ್ಣು ಮರಿಯಾಗಿ ಜನಿಸಿಬಿಡಲೇ….?

ಗಟ್ಟಿ ಗಂಡೆದೆಯಲ್ಲಿ ಅರಳುವ
ಹೂ ಮನದ ನವಿರು ಭಾವಗಳ
ಸೆಲೆಯೊಳಗೆ ನಾ ಹೆಣ್ಣಾಗಿ ಚಿಮ್ಮಿಬಿಡಲೇ…!
ಆಸೆಲೆಯ ಬಲೆಯೊಳಗೆ
ಮುಳುಗಿಬಿಡಲೆ….?
ಹೈದನ ಹಡೆದೆನೆಂದು
ಹೆಮ್ಮೆ ಪಡುವ ಅವ್ವನನೊಮ್ಮೆ
ಕೇಳಿ ಬಿಡಲೇ…?
ಅವ್ವಾ ನಾ ಹೆಣ್ಣಾಗಲೇ…!
ಅಪ್ಪನೆದೆಯ ನಡುಗಿಸುವ
ಸತ್ಯವನೊಮ್ಮೆ ಅರುಹಿ ಬಿಡಲೇ
ಅಪ್ಪ ನಾ ಗಂಡಾದ ಹೆಣ್ಣೆಂದು…!
ಗಂಡಲ್ಲದ ಗಂಡು….!
ನನ್ನೊಳಗೆ ಪೌರುಷದ ಜೀವ ರಸ ಚಿಮ್ಮುವುದೇ…?
ಹೆಣ್ಣಲ್ಲದ ಹೆಣ್ಣು….!
ಬಸಿರಲ್ಲೊಂದು ಬೀಜ ಮೊಳೆಯುವುದೇ….?
ಗಂಡಾಗಿ ಸೃಷ್ಟಿಸಿ ಹೆಣ್ಮನವ
ಕೊಟ್ಟದೇವರೆ..!
ಶಾಪಗ್ರಸ್ತರೆ ನಾವು ಈ ಭೂಮಿಗೆ.?

ನಮ್ಮಿಚ್ಚೆಯಂತೆ ಬದುಕುವ
ಆಯ್ಕೆ ನಮಗೆ ಅಷ್ಟು ಸುಲಭವೆ…!
ಪ್ರಾಣಿಗಳಿಗಿಂತ ಕಡೆಯಾಗಿ ಕಾಣುವವರ
ಕಣ್ಣೊಳಗೆ ನಾವು ಮನುಜರೆ…?
ಕೊಡುವರೇ ನಮಗೆ ಜಾಗ
ಮನ ಮನೆಯೊಳಗೆ….!
ಸವದತ್ತಿ ತಾಯಿ ಎಲ್ಲವ್ವ ಕೊಡುವಳು
ಸ್ವಗತದ ತನ್ನ ಮಮತೆಯ ಮಡಿಲು…!

ಮಂಗಳಾಂಗಿ ಹುಟ್ಟಿಸದಿರು
ಮಂಗಳ ಮುಖಿಯರ
ಅಮಂಗಳವಾಗಿ ಬಾಳದಿರಲವರು
ಅಸಹ್ಯ ಪಡುವವರ ನಡುವೆ.
ಗಂಡಾಗಿ ಬದುಕಲಾರೆ
ಹೆಣ್ಣಾಗಿ ಬಾಳಲಾರೆ
ಲಿಂಗ ಅಂಗಗಳ ತೊಳಲಾಟದಲ್ಲಿ
ಸುತ್ತಿ ಸುಳಿದು ಬದುಕಬೇಕೆನ್ನುವ
ನನ್ನಾತ್ಮವೇ ಹೇಳು…
ನೀನು ಗಂಡಾ, ಹೆಣ್ಣಾ… ?

7. ನೀ……

ಇರುಳು ಸರಿಯುತಿದೆ
ಕರಗುತಿದೆ ಬೆಳದಿಂಗಳು
ಕತ್ತಲಲ್ಲೂ ನೀ ಬರುವ
ದಾರಿಯನು ಹುಡುಕುತಿದೆ
ಕಂಗಳು….!

ನಿದ್ದೆಗೆಡಿಸಿ ಕಾಡಿಸುತಿರುವೆ ನೀ
ತೋಳ ತೆಕ್ಕೆಯೊಳು ಸೆಳೆಯದೆ ಸತಾಯಿಸುತ
ಹೀಗೆ ಕ್ಷಣಕ್ಷಣಕೆ ನನ್ನ
ವ್ಯಾಕುಲಗೊಳಿಸಿರುವೆ….
ಈಗ ಬೆಳ್ಳಿ ಚುಕ್ಕಿ ಮೂಡುವ ಹೊತ್ತು….!

ಆವರಿಸು ನನ್ನ
ಅಣು ಅಣುವು ಬಿಡದೆ
ನಿನ್ನ ಅಪ್ಪುಗೆಯ ಬಿಸಿಯಲಿ
ಅರಳಬೇಕಿದೆ….!
ಬೆನ್ನು ಬಿದ್ದು ಕಾಡುವ ನಿನಗೆ
ಸೋಲದೆ ಇರಲಾರೆ

ಕಾಯುತಿರುವೆ….
ಕಂಗಳಿಗೆ ನಿರಾಸೆ ಬೇಡ
ನೀ ಬಂದು ನನ್ನ ರಾತ್ರಿಯನು
ರಂಗುಗೊಳಿಸು
ತೇಲಿ ಮುಳುಗುವ ಭಾಷೆಯನು
ಅಂದಗೊಳಿಸು….!!

ನಿನ್ನ ಗುಂಗಿನೊಳಗೊಂದು
ಹೊಸಲೋಕ ಸೃಷ್ಟಿಸುವೆ
ಕಣ್ಣು ತೆರೆದು ಮುಚ್ಚಿದರೂ
ನಿನ್ನನ್ನೆ ಕಾಣುತ
ಬದುಕಿಗೊಂದು ಹೊಸ ಮುನ್ನುಡಿ ಬರೆವೆ.

ಪ್ರೇಮದಿ ಆವರಿಸು ಕಂಗಳ
ಉಳಿಯಬೇಡ
ಇಳಿದು ಬಿಡು
ಹೃದಯದ ಬಡಿತದಲಿ
ಉಳಿದುಬಿಡು
ಪ್ರೀತಿಯ ಮಿಡಿತವಾಗಿ
ಓ ಕನಸೆ….!, ಅರೇ…. ಓ ಕನಸೆ…..!!
ಬಂದುಬಿಡು ಈ ಬದುಕ ಸಿಂಗರಿಸಲು….

8. ಪಕ್ವತೆ

ಹಣ್ಣಾಗಿ ಕುದ್ದು
ಬೆಂದ ಭಾವನೆಗಳ ಬೇಳೆಗೀಗ
ಉಕ್ಕುವ ತವಕವಿಲ್ಲ….!
ಒಗ್ಗರಣೆಯಷ್ಠೆ ಹಾಠಕುವುದಿದೆ.

ಅನುಭವದ ಕೆಂಡದಲ್ಲಿ
ಉಮ್ಮುಗೊಂಡು
ಅರಳಿದ ಅನ್ನಕ್ಕೀಗ
ಕುದಿಯುವ ಹಠವಿಲ್ಲ….!
ಕೆಳಗಿಡುವುದಕ್ಕೆ ಕಾಯುತಿದೆ.

ಕಷ್ಟ ಸುಖದ
ಬೆಂಕಿಯಲ್ಲಿ ಕಾದ ಹಂಚಿನ
ಮೇಲೆ ಮೆದುವಾಗಿ
ಸುಟ್ಟು ಉಬ್ಬಿದ ರೊಟ್ಟಿಗೀಗ
ಬೆಂಕಿಯ ಭಯವಿಲ್ಲ….!
ಹಬೆ ಹೋಗಲಷ್ಟೇ ಕಾಯುತಿದೆ.

ಕೋಪ ತಾಪಗಳ
ಉರಿಯೊಳಗೆ
ಹಾಲು ಕಾಸಿ
ಹೆಪ್ಪಿಟ್ಟ ಮೊಸರಿಗೆ
ಹುಳಿಯಾಗುವ ಆತುರವಿಲ್ಲ.

ಪ್ರೀತಿ ಪ್ರೇಮಗಳ
ಕ್ಷೀರದಲಿ ಕೆನೆತೆಗೆದು
ಕಡೆದ ಹಸಿ ಬೆಣ್ಣೆಗೆ
ಸತಾಯಿಸುವ ಮನಸಿಲ್ಲ….!
ತೇಲಿ ಬರುವುದಷ್ಠೆ ಉಳಿದಿದೆ.

ಮಾಗಿದ ಮನಸಿನ
ಶಾಖಕ್ಕೆ ಕರಗಿದ ಬೆಣ್ಣೆ
ತಿಳಿದುಪ್ಪವಾಗಿ ಘಮಗುಡುವುದಲ್ಲ
ಹರಳು ಗಟ್ಟುವುದಷ್ಟೇ ಬಾಕಿಯಿದೆ.

‍ಲೇಖಕರು Admin

July 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: