ಲಂಗ್ಡಾ, ಚೌನ್ಸಾ ಮತ್ತು ಡಿಂಗನೆಂಬ ರಾಜಾಧಿರಾಜರು!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಬಹುಶಃ ನಾಲ್ಕೈದು ವರ್ಷದ ಹಿಂದೆ. ಋಷಿಕೇಶದಿಂದ ಒಂದು ಐವತ್ತು ಕಿಮೀ ಮುಂದೆ ಮೇಲಿದ್ದೆವೇನೋ. ಅಜ್ಜನೊಬ್ಬ ಒಂದು ರಸ್ತೆ ಬದಿಯಲ್ಲಿ ಬಟ್ಟೆ ಹಾಸಿ ಅದೇನೋ ಹಸಿರು ಕಾಯಿಗಳನ್ನು ಹರವಿ ಕೂತಿದ್ದು ಕಂಡಿತು. ಅರೆ, ಇದೇನಿದು ಎಂದು ಕಾರಿಳಿದು ನೋಡಲಾಗಿ ಮಾವಿನ ಹಣ್ಣು ಎಂದು ಅರಿವಾಯಿತು. ನೋಡಿದರೆ, ನಮ್ಮ ಊರಿನ ಕಾಟು ಮಾವಿನಣ್ಣಿನದೇ ರೂಪು ಮತ್ತು ಬಣ್ಣ. ಕೈಲೆತ್ತಿ ಮೂಸಿ ನೋಡಿದೆ. ಅರೆ, ಇದು ಅದೇ ಜೀರಿಗೆ ಮಿಡಿಯದೇ ಪರಿಮಳ. ನನಗೋ ಭಯಾನಕ ಆಶ್ಚರ್ಯ!

ʻಇದೆಲ್ಲಿ ಸಿಕ್ತು ನಿಮ್ಗೆ? ಏನು ಹೆಸ್ರಿದ್ರದ್ದು?ʼ ನಾನು ಕೇಳಿದೆ.
ʻಪಹಾಡೀ ಆಮ್!ʼ ಎಂದ ಆತ ʻಚೂಸ್ನೇವಾಲಾʼ ಅನ್ನೋದನ್ನು ಒತ್ತಿ ಹೇಳಿದ.

ನನಗೋ, ಇದೊಂದು ಅಚ್ಚರಿ! ನಮ್ಮೂರೆಲ್ಲಿ, ಈ ಋಷಿಕೇಶವೆಲ್ಲಿ. ಈ ಅಜ್ಜನ ಕೈಯ ಪಕ್ಕಾ ನಮ್ಮ ನೆಲದ ಘಮ ಹೊತ್ತ ಈ ಹಣ್ಣು ಕಂಡು ಆ ಪರಿಮಳದಲ್ಲೇ ಕರಗಿಹೋದೆ. ಅಜ್ಜನಿಗೀಗ ಫುಲ್‌ ಕನ್ಫ್ಯೂಷನ್ನು. ನನ್ನ ಅಚ್ಚರಿ ಕಂಡು, ಇನ್ನೂ ವಿವರಿಸಲು ಹೋಗಿ, ಇದು ಕತ್ತರಿಸಿ ತಿನ್ನುವಂಥ ಮಾವಲ್ಲ. ಕಾಡಿನ ಹಣ್ಣಿದು. ಇಲ್ಲಿನ ಕಾಡಿನೊಳಗಿಂದ ತಂದಿದ್ದು. ಸಿಪ್ಪೆ ಸುಲಿದು ಅಥವಾ ಸುಲಿಯದೆ ರಸ ಹೀರಿ ತಿನ್ನುವ ಹಣ್ಣುʼ ಬಿಡಿಸಿ ಬಿಡಿಸಿ ಹೇಳಿದ.

ʻಎಷ್ಟು?ʼ ಅಂದೆ. ʻಒಂದಕ್ಕೆ ಹತ್ತುʼ ಅಂದ. ಆತನ ಆ ಉತ್ತರ ಬಹುಶಃ ನನಗೆ ಬೇಕಾಗಿರಲಿಲ್ಲೇನೋ. ಮೂಸಿದಾಗಲೇ, ನಿರ್ಧರಿಸಿಯಾಗಿತ್ತು, ಅಜ್ಜನ ಬಳಿಯಿರುವ ಅಷ್ಟೂ ಹಣ್ಣು ನನಗೇ ಎಂದು. ಬಟ್ಟೆ ಮೇಲೆ ಹರವಿಟ್ಟಿದ್ದು ೧೫-೨೦ ಹಣ್ಣುಗಳಿದ್ದವೇನೋ. ಸರಿ, ಎಲ್ಲ ಹಣ್ಣು ಕೊಟ್ಟುಬಿಡಿ ಅಂದೆ. ಅಜ್ಜನಿಗೆ ಒಂದೇ ಉಸಿರಿಗೆ ಅಷ್ಟೂ ಮಾವಿನಣ್ಣು ಖಾಲಿಯಾದ ಸಂಭ್ರಮ. ಹಣ್ಣುಗಳೆಲ್ಲವನ್ನು ಎಣಿಸಿ ನನ್ನ ಬ್ಯಾಗಿನಲ್ಲಿ ಹಾಕಿದ. ಬೇಕಾದಷ್ಟು ತಿಂದು, ಗೊಜ್ಜು, ಸಾಸ್ವೆ ಮಾಡುವಷ್ಟು ಸಾಕಾಗಲಿಕ್ಕಿಲ್ಲವೇನೋ ಎಂದೆನಿಸಿದರೂ, ಇಷ್ಟಾದರೂ ಸಿಕ್ಕಿದ್ದಕ್ಕೆ ಭರ್ಜರಿ ಖುಷಿಯಾಗಿತ್ತು.

ʻಇದೆಲ್ಲ ನೀವು ತಂದದ್ದೆಲ್ಲಿಂದ?ʼ ಎಂದೆ. ʻಮೇಲೆ ಬೆಟ್ಟದಿಂದ, ಮರದ ಕೆಳಗೆ ಬಿದ್ದು ಸಿಕ್ಕಿದ್ದು. ದೊಡ್ಡ ದೊಡ್ಡ ಮರಗಳು. ಕೊಯ್ಯಲು ಇವೆಲ್ಲ ಸಾಧ್ಯವಿಲ್ಲ. ಗಾಳಿ ಬಂದಾಗ ಒಂದಷ್ಟು ಹಣ್ಣು ಮರದಿಂದ ಉದುರುತ್ತವಲ್ಲ, ನಾವು ಕಾದು ಹೆಕ್ಕಿ ಬರುತ್ತೇವೆ. ಎಲ್ಲವೂ ತಾಜಾ ಹಣ್ಣುಗಳೇʼ ಎಂದು ವಿವರಿಸಿದ. ತಾಜಾ ಅಂತ ಇನ್ನೂ ಘಮ್ಮನೆ ತೊಟಿಕ್ಕುತ್ತಿದ್ದ ಸೊನೆಯೇ ಹೇಳುತ್ತಿತ್ತು. ಅದೇ ಮೊದಲು, ಅದೇ ಕೊನೆ. ಆ ದಾರಿಯಾಗಿ ಮತ್ತೆ ಎಷ್ಟೋ ಬಾರಿ ಹೋದರೂ, ಮತ್ತೆ ಯಾವತ್ತೂ ಅಂಥ ಮಾವಿನಣ್ಣಿನ ದರ್ಶನ ಭಾಗ್ಯವಾಗಲಿಲ್ಲ.

ಇದಾಗಿ ಕೆಲಕಾಲ ಕಳೆದಿತ್ತು. ಒಂದು ದಿನ ಪಕ್ಕದ ಮನೆಯ ರಾಜಸ್ಥಾನಿ ಗೆಳತಿ ವೈಷ್ಣೋದೇವಿ ಯಾತ್ರೆ ಮಾಡಿ ಬಂದೆವು ಎಂದು ಪ್ರಸಾದ ಹಿಡಿದು ಬಾಗಿಲು ತಟ್ಟಿದಳು. ಪ್ರಸಾದದ ಜೊತೆಗಿದ್ದ ಒಂದು ಸಣ್ಣ ಪ್ಯಾಕೆಟ್ಟು ಗಮನ ಸೆಳೆಯಿತು. ʻಇದೇನಿದು?ʼ ಎಂದೆ. ʻಆಮ್‌ ಪಾಪಡ್‌ʼ ಅಂದಳು. ಒಂದು ಪ್ಯಾಕಟ್ಟಿನಲ್ಲಿ ಎರಡು ಬಗೆಯ ಚೌಕಾಕಾರದ ಹಪ್ಪಳದಂತಹ, ಆದರೆ ಹಪ್ಪಳಕ್ಕಿಂತ ಬಹು ದಪ್ಪವಿದ್ದ ಮೆದುವಾದ ಆದರೆ ಒಣಹಣ್ಣಿನಂಥ  ತಿನಿಸು. ಒಂದು ಹೊಂಬಣ್ಣದ್ದು, ಇನ್ನೊಂದು ಕಪ್ಪಗಿನದ್ದು. ʻಇದೇನಿದು ಕಪ್ಪಗಿನದ್ದು?ʼ ಎಂದೆ. ʻನೋಡು, ಅದು ಯಾರಿಗೂ ಅಷ್ಟಾಗಿ ಇಷ್ಟ ಆಗಲ್ಲ. ಆದರದು ಪಹಾಡಿ ಆಮ್‌ನಿಂದ ಮಾಡಿದ್ದು. ಸ್ವಲ್ಪ ಹುಳಿ ರುಚಿ. ನಿನಗಿದು ಹೊಸ ರುಚಿಯಿರಬಹುದು ಅಂತ ತಂದೆʼ ಎನ್ನುತ್ತಾ ಜಮ್ಮುವಿನ ಪಟ್ನಿಟಾಪ್‌ನ ಇಂಥ ಜಾಗದ ಇಂಥ ಅಂಗಡಿಯಿಂದ ತೆಗೊಂಡೆ ಎಂದೆಲ್ಲ ವಿವರಣೆ ಕೊಟ್ಟಳು.

ಒಂದು ಸಣ್ಣ ತುಂಡು ಮಾಡಿ ಬಾಯಿಗಿಟ್ಟೆ. ಅರೆ ಇದು ನಮ್ಮೂರಿನ ಕಾಟುಮಾವಿನಣ್ಣಿನ ಮಾಂಬಳದ್ದೇ ರುಚಿ ಎಂದೆ. ಆದರೆ, ಹೊಂಬಣ್ಣದ ಪಾಪಡ್‌ ಇದೆಯಲ್ಲ, ಅದರಲ್ಲಿ ಇಂಥದ್ದೇ ಮಾವಿನ ರುಚಿ ಅಂತ ಹೇಳಕ್ಕಾಗೋದಿಲ್ಲ. ಸಿಕ್ಕ ಎಲ್ಲ ಜಾತಿಯ ಮಾವಿನಣ್ಣಿನ ರಸ ಹಿಂಡಿ ಒಣಗಿಸಿದಂತಿದೆ. ಆದರೆ, ಈ ಕಪ್ಪು ಬಣ್ಣದ್ದಕ್ಕೆ ಮಾತ್ರ ನೆಲದ ಘಮ ಇದೆ ಅಂದೆ. ʻಅಯ್ಯೋ ನೀನೊಬ್ಳೇ ನೋಡು ಇಷ್ಟು ವಿವರಣೆ ಕೊಟ್ಟು ಇದನ್ನು ತಿಂದಿದ್ದು. ಇದನ್ನು ಅಷ್ಟು ಸುಲಭಕ್ಕೆ ಯಾರೂ ತಿನ್ನೋದಿಲ್ಲ. ನನಗೂ ಅಷ್ಟೇನೂ ಇಷ್ಟ ಇಲ್ಲ. ನಿನಗೆ ರುಚಿ ನೋಡಲೆಂದೇ ಇಷ್ಟೇ ತಂದಿದ್ದು.ʼ ಎಂದಳು. ಅಯ್ಯೋ, ನೀನೊಳ್ಳೆ ಪುಣ್ಯಾತಿಗಿತ್ತಿ, ಇದರ ಅಪ್ಪನಂತಹ ಹುಳಿಯ ಮಾಂಬಳವನ್ನೂ ನಾವು ಹೊಟ್ಟೆಗಿಳಿಸುತ್ತಿದ್ದ ಕಾಲ ಇತ್ತು ಗೊತ್ತಾ?ʼ ಎನ್ನುತ್ತಾ ಕಪ್ಪಗಿನದ್ದರ  ತುಂಡೊಂದನ್ನು ಮಗನ ಬಾಯಿಗೆ ತುರುಕಿದೆ. ಮುಖ ಹುಳಿ ಮಾಡಿ ಇಷ್ಟವಾಗಲಿಲ್ಲವೆಂದ. ಹೊಂಬಣ್ಣದ್ದು ಸಿಹಿಯಾಗಿದೆ ಎಂದು ಪ್ಯಾಕೆಟ್ಟು ಎಗರಿಸಿದ.

ʻಗಾಳಿಗೆ ಬಿದ್ದ ಹಣ್ಣನ್ನು ತಿಂದು ಮುಗಿಸಲು ಪೂರೈಸುವುದಿಲ್ಲವೆಂದು ನಮ್ಮೂರಲ್ಲೆಲ್ಲರ ಮನೆಯಲ್ಲೂ ಬೇಸಿಗೆಯಲ್ಲಿ ಇದೇ ಕಾಯಕ, ಹಣ್ಣು ಹಿಂಡಿ ಒಣಗಿಸಿಡುವುದು. ಮಳೆಗಾಲದಲ್ಲಿ ಧೋ ಎಂದು ಎಡೆಬಿಡೆ ಸುರಿವ ಮಳೆಯಲ್ಲಿ ಹಪ್ಪಳ, ಮಾಂಬಳ ಮೆಲ್ಲುವುದು. ಆಗೆಲ್ಲ ನಮ್ಮ ಬಾಯಿ ಇದಕ್ಕಿಂತ ದೊಡ್ಡ ರುಚಿಗಳನ್ನೆಲ್ಲ ಉಂಡಿರಲಿಲ್ಲ. ಉಣ್ಣುವುದಕ್ಕೇನೂ ಭಾರೀ ಆಯ್ಕೆಗಳೂ ಇರಲಿಲ್ಲ. ಆದರೆ ಈಗಿನ ಮಕ್ಕಳಿಗೆ ಇವೆಲ್ಲ ರುಚಿ ಅನಿಸೋದೆ ಇಲ್ಲ ನೋಡು. ಇವರ ಮುಂದೆ ರುಚಿಗೆ ನಾನಾ ಆಯ್ಕೆಗಳುʼ ಎಂದೆ. ಇಬ್ಬರೂ ಹೊಟ್ಟೆ ಹುಣ್ಣಾಗುವಂತೆ ನಕ್ಕರೂ ಇದು ಗಂಭೀರವಾದ ವಿಷಯವೇ. ಅವಳಿಗೋ, ಇಂಥ ಬಾಲ್ಯ ರಾಜಸ್ಥಾನದಲ್ಲಿ ದಕ್ಕಿರಲಿಲ್ಲ.

ಮಾವಿನಣ್ಣಿನ ಉತ್ಪಾದನೆಯಲ್ಲಿ ನಮ್ಮ ಭಾರತಕ್ಕೆ ಮೊದಲ ಸ್ಥಾನವಂತೆ. ಪ್ರಪಂಚಕ್ಕೆ ಬೇಕಾಗುವ ಮಾವಿನಣ್ಣಿನ ಶೇ.೫೦ರಷ್ಟು ಹಣ್ಣಿನ ಪೂರೈಕೆ ನಮ್ಮ ಭಾರತದ್ದೇ ಅಂತೆ. ಸುಮಾರು ೧೫೦೦ಕ್ಕೂ ಹೆಚ್ಚು ವಿಧವಿಧವಾದ ಮಾವಿನಣ್ಣುಗಳು ನಮ್ಮ ಭಾರತದಲ್ಲಿ ಬೆಳೆಯಲಾಗುತ್ತದೆ ಎಂಬೆಲ್ಲ ಮಾಹಿತಿಗಳು ಇದ್ದರೂ, ಈ ಕಾಟು ಮಾವಿನಣ್ಣಿನಲ್ಲೇ ಒಂದೇ ರುಚಿಯವು ಎಂದು ದಕ್ಕೋದು ಭಾರೀ ಅಪರೂಪ. ಮಲೆನಾಡು, ಕರಾವಳಿಯ ಭಾಗದಲ್ಲೆಲ್ಲ ಧಾರಾಳವಾಗಿ ಸಿಗುವ, ಮಿಡಿ ಉಪ್ಪಿನಕಾಯಿಗೆ ಹೇಳಿ ಮಾಡಿಸಿದಂಥ ಕಾಟಿನೊಳಗೇ ಹಲವು ಬಗೆ, ಹಲವು ನಮೂನೆ, ಹಲವು ರುಚಿ. ಬೇಸಗೆಯಲ್ಲಿ ನೆಂಟರಿಷ್ಟರ ಮನೆಗೆ ಹೋದರೆ ಸಾಕು, ಬರುವಾಗ ಒಂದಿಷ್ಟು ಮಾವು ಹೊತ್ತುಕೊಂಡೇ ಬರುವುದು. ಮಾವು ಎಂಬ ಹಣ್ಣೊಂದು ಬದುಕಿಗೊಂದು ಗಂಧವನ್ನು ಲೇಪಿಸಿರುವುದು ಹೀಗೆ.

ನನಗೆ ಬಹಳ ಸಾರಿ ಕಳವಳವಾಗಿದೆ, ಮಾವಿನ ಹಣ್ಣನ್ನು ಹಾಗೇ ಕಚ್ಚಿ ತಿನ್ನುವ ಸಂಸ್ಕೃತಿ ಇನ್ನೊಂದು ಕೆಲ ವರ್ಷಗಳಲ್ಲಿ ಮಾಯವಾಗಿ ಬಿಡುವುದೋ ಎಂದು. ಕೆಲ ಜಾತಿಯ ಮಾವಿನಣ್ಣುಗಳನ್ನು ಹಾಗೆಯೇ ಕಚ್ಚಿ ತಿಂದರೇ ರುಚಿ ಹೆಚ್ಚು. ಇನ್ನೂ ಕೆಲವು ಕತ್ತರಿಸಲು ಸಾಧ್ಯವೇ ಇಲ್ಲದ ಜಾತಿಯವು. ಹಾಗೇ ತಿಂದೇ ಆಗಬೇಕು. ಆದರೆ, ವಿಚಿತ್ರವೆಂದರೆ, ಈಗಿನ ಮಕ್ಕಳು ಇಂಥ ಹಣ್ಣನ್ನು ಮುಟ್ಟಲೂ ಹೋಗುವುದಿಲ್ಲ. ಸಿಪ್ಪೆ ತೆಗೆದು ನೀಟಾಗಿ ಕತ್ತರಿಸಿದರೆ ಮಾತ್ರ ಹೊಟ್ಟೆಯೊಳಗೆ ಇಳಿದಾವು. ಹಾಗಾದರೆ, ಉಳಿವ ಮಾವುಗಳೆಲ್ಲ ಮಾಡಿರುವ ಪಾಪವಾದರೂ ಏನು? ಇವುಗಳ ಮೇಲೆ ಮುಂಬರುವ ದಿನಗಳಲ್ಲಿ ದಯೆ ತೋರುವವರಾದರೂ ಯಾರು?

ಇತ್ತೀಚೆಗೆ ಹಾಗೆ ಅನಿಸಲು ಕಾರಣವೂ ಇದೆ. ದೆಹಲಿಯ ಮಾರ್ಕೆಟ್ಟುಗಳಲ್ಲಿ ಮಾವಿನಣ್ಣು ವ್ಯಾಪಾರಿಗಳದ್ದೊಂದು ಅಭ್ಯಾಸವಿದೆ. ಅವರು ಮಾವಿನಣ್ಣನ್ನು ವರ್ಗೀಕರಿಸುವುದು ಎರಡೇ ವಿಧಾನದಿಂದ. ಒಂದು ಚೂಸ್ನೇವಾಲಾ ಆಮ್‌, ಇನ್ನೊಂದು ಕಾಟ್‌ಕೇ ಖಾನೇವಾಲಾ! ಈ ಕಾಟ್‌ಕೇ ಖಾನೇವಾಲಾ ಜಾತಿಯ ಹಣ್ಣಿನ ವರ್ಗದಲ್ಲಿ ಮೇಲುಗೈ ಯಾವ ಪರಿಮಳವನ್ನೂ ಬೀರದೆ ಸದಾ ನಿರ್ಲಿಪ್ತವಾಗಿರುವ ನಮ್ಮ ಆಂಧ್ರದ ಬಂಗನಪಲ್ಲಿ (ಉತ್ತರದವರಿಗೆ ಇದು ಸಫೇದಾ) ಎಂಬ ನೀರಸ ಮಾವು. ನಾವು ಯಾವುದೇ ಮಾವನ್ನು ಕೈಲಿ ಹಿಡಿದರೆ ಸಾಕು, ʻಯೇ ಚೂಸ್ನೇವಾಲಾ/ ಕಾಟ್ನೇವಾಲಾʼ ಅಂತ ಶುರುಮಾಡುತ್ತಾರೆ. ನಮಗೆ ಚೂಸಲು ಬರದಿದ್ದರೆ, ಕೆಲವನ್ನು ಮಾತ್ರ ತಿನ್ನುವ ಯೋಗ ಇರುವುದು!

ಬೇಸಿಗೆಯ ತಿರುಗಾಟ ಆಪ್ತವಾಗಲು ಕಾರಣವೂ ಇದೇ. ಯಾವುದೇ ಊರಿಗೆ ಹೋಗಲಿ ಅಲ್ಲೊಂದಿಷ್ಟು ಆ ಊರಿನ ಪರಿಮಳ ಹೊತ್ತ ಮಾವಿನ ಹಣ್ಣು ಇದ್ದೇ ಇರುತ್ತದೆ. ಹೊಸ ಘಮ ಹೊತ್ತ ಹೊಸ ರುಚಿಯೊಂದು ಯಾವುದೋ ಸಾಮ್ಯದಿಂದ ನಮ್ಮನ್ನು ಮತ್ತೆ ನಮ್ಮೂರಿನ ಹಳೇ ನೆನಪಿಗೆ ಕರೆದೊಯ್ದುಬಿಡುತ್ತದೆ. ಹೀಗೆ ಎಲ್ಲೇ ತಿರುಗಾಡಿದರೂ ನನನ್ನು ಅತೀವವಾಗಿ ಸೆಳೆದ ಎರಡು ಮಾವಿನಣ್ಣನ್ನು ಇಲ್ಲಿ ಹೇಳದಿದ್ದರೆ, ಇಷ್ಟರವರೆಗೆ ಹೊಟ್ಟೆ ಸೇರಿದ ಕೆಜಿಗಟ್ಟಲೆ ಮಾವಿಗೆ ನಾನು ಅಪಚಾರ ಎಸಗಿದಂತೆ. ಅವು ಲಂಗ್ಡಾ ಮತ್ತು ಚೌನ್ಸಾ.

ಈ ಲಂಗ್ಡಾ ಮೊದಲು ಕಣ್ಣಿಗೆ ಬಿದ್ದದ್ದು, ದೆಹಲಿಗೆ ಬಂದ ಹೊಸದರಲ್ಲಿ ಜಿಮ್‌ ಕಾರ್ಬೆಟ್‌ ಅರಣ್ಯವಲಯವನ್ನು ದಾಟಿಕೊಂಡು ನೈನಿತಾಲ್‌ ಹಾದಿಯಲ್ಲಿ ಹೋಗುತ್ತಿದ್ದಾಗ. ಉತ್ತರಾಖಂಡದ ಈ ಹಾದಿಯುದ್ದಕ್ಕೂ ಮಾವಿನ ತೋಪು. ಹೊರಗಡೆ ರಸ್ತೆ ಬದಿಯಲ್ಲಿ ಅದೇ ತೋಪಿನಿಂದ ಕೊಯ್ದು ರಾಶಿ ಹಾಕಿದ ಹಸಿರು ಹಣ್ಣುಗಳು. ಮೂಸಿ ನೋಡಿದರೆ ಒಂಥರಾ ವಿಶಿಷ್ಟ ಘಮ. ತಿಂದು ಮುಗಿಸಿ ಬಹಳ ಹೊತ್ತಿನವರೆಗೂ ಮೂಗಿನೊಳಗೇ ಸುತ್ತಿದಂತೆ ಭಾಸವಾಗುವ ಗಾಢ ಪರಿಮಳ.

ಒಳಗಿನ ಹೊಂಬಣ್ಣದ ಗುಟ್ಟೂ ಒಂದಿನಿತೂ ಬಿಟ್ಟುಕೊಡದಂತೆ, ಹಣ್ಣಾದರೂ ಹಸಿರಾಗಿಯೇ ಇರುವ ಲಂಗ್ಡಾ ಬೇರೆ ಬೇರೆ ಊರಿನ ಹೆಸರಿನೊಂದಿಗೆ ಮಾರ್ಕೆಟ್ಟಿಗೆ ದಾಳಿಯಿಡುತ್ತದೆ. ಅದರಲ್ಲೂ ಬನಾರಸೀ ಲಂಗ್ಡಾ ಅಂದರೆ ರಾಜ ಮರ್ಯಾದೆ. ಉತ್ತರಪ್ರದೇಶ, ಬಿಹಾರ, ಉತ್ತರಾಖಂಡ, ಹಿಮಾಚಲಗಳಲ್ಲೂ ಬೇಸಿಗೆಯಲ್ಲಿ ತಿರುಗಾಡಿದರೆ, ಈ ಲಂಗ್ಡಾ ಮೂಲನಿವಾಸಿಗಳಂತೆ ಸಿಕ್ಕೇ ಸಿಗುತ್ತದೆ. ಹತ್ತಿರ ಹತ್ತಿರ ಆಗಸ್ಟ್‌ ಮಧ್ಯದವರೆಗೂ ಈ ಹಣ್ಣು ಲಭ್ಯ.

ಈ ಲಂಗ್ಡಾಗಿಂತಲೂ ಒಂದು ಪಟ್ಟು ಹೆಚ್ಚೇ ನನ್ನ ಹೃದಯ ಕದ್ದ ಇನ್ನೊಂದು ಮಾವು ಚೌನ್ಸಾ. ಒಳಗೂ ಹೊರಗೂ ಒಂದೇ ಹೊಂಬಣ್ಣ. ವಿಶಿಷ್ಟ ಘಮ, ಅಷ್ಟೇ ರುಚಿ. ರುಚಿಯಲ್ಲೂ ಸ್ವರ್ಗ ಕಾಣುವುದು ಎಂದರೆ ಸುಲಭಕ್ಕೆ ದಕ್ಕುವ ಉದಾಹರಣೆ. ದೆಹಲಿಗೆ ಬಂದ ಆರಂಭದಲ್ಲಿ ʻಅಬ್ಬ, ಬೇಸಗೆ ಮುಗಿಯಿತು, ಆದರೆ ಮಾವಿನಣ್ಣುʼ ಎಂದು ಪೆಚ್ಚುಮೋರೆಯೊಂದಿಗೆ ಬೇಸಿಗೆಗೆ ಟಾಟಾ ಹೇಳುವ ಸಂದರ್ಭ ಮಾರ್ಕೆಟ್ಟಿಗೆ ಎಂಟ್ರಿ ಕೊಟ್ಟು ಹೊಸ ಉಲ್ಲಾಸ ಕೊಟ್ಟ ಹಣ್ಣಿದು. ಅಂತ್ಯವೂ ಸೊಗಸಾಗಿರುತ್ತದೆ ಎಂದು ಪಾಸಿಟಿವಿಟಿ ಹುಟ್ಟುಹಾಕುವ ಸೂರ್ಯಾಸ್ತದಂತೆ ಇದೂ ಕೂಡಾ ಮುದ ನೀಡುವ, ಮುಂದಿನ ಬೇಸಿಗೆವರೆಗೂ ಇದರ ನೆನಪಲ್ಲೇ ಕಾದು ಕೂರಿಸಬಲ್ಲ ತಾಕತ್ತಿನ ಹಣ್ಣು.

ಇದು ಮೊದಲು ನನ್ನ ಕಣ್ಣಿಗೆ ಬಿದ್ದಾಗ ಅಂಗಡಿಯಾತನಿಗೆ ಇದೆಲ್ಲಿಂದ ಎಂದಿದ್ದೆ. ಪಾಕಿಸ್ತಾನದ್ದು ಎಂದ. ಆಮೇಲೆ ಇದರ ಪೂರ್ವಾಪರ ತಿಳಿಯಲಾಗಿ, ಇದರ ಮೂಲ ಪಾಕಿಸ್ತಾನವಾದರೂ, ನಮ್ಮ ಉತ್ತರ ಪ್ರದೇಶ, ಪಂಜಾಬ್‌ಗಳಲ್ಲಿ ಬೆಳೆಯುವ  ಹಣ್ಣು ಎಂದು ಗೊತ್ತಾಯಿತು. ಆಗಸ್ಟ್‌ ಮಧ್ಯದವರೆಗೂ ಧಾರಾಳವಾಗಿ ಸಿಗುವ ಚೌನ್ಸಾದ ಸಿಹಿ ಮೀರಿಸುವವರಿಲ್ಲ ಅಂತ ಹಲವು ಬಾರಿ ಅನಿಸಿದೆ. ಶೇರ್‌ ಶಾ ಸೂರಿ ಎಂಬ ರಾಜ, ಮೊಘಲ್‌ ದೊರೆ ಹುಮಾಯೂನನ ವಿರುದ್ಧ ಬಿಹಾರದ ಚೌಸಾ ಎಂಬ ಊರಿನಲ್ಲಿ ಗಳಿಸಿದ ಜಯದ ನೆನಪಿನಲ್ಲಿ ತನ್ನ ಬಲುಪ್ರಿಯವಾದ ಈ ಹಣ್ಣಿಗೆ ಚೌನ್ಸಾ ಅಂತ ನಾಮಕರಣ ಮಾಡಿದನಂತೆ ಎಂಬ ಕಥೆಯೂ ಬೆನ್ನಿಗಿದೆ. ಇನ್ನೂ ಮಜಾವೆಂದರೆ, ಈ ಎರಡೂ ಹಣ್ಣುಗಳೂ ಕೂಡಾ, ರುಚಿಯಿಲ್ಲ ಅನಿಸಿಕೊಳ್ಳುವುದು ಬಹಳ ಅಪರೂಪ. ಒಳ್ಳೆಯ ಹಣ್ಣುಗಳ ಆಯ್ಕೆ ಕೂಡಾ ಭಾರೀ  ಸುಲಭ.

ಇವೆರಡು ಜಾತಿಯ ಮಾವಿನಣ್ಣುಗಳನ್ನು ಬಿಟ್ಟರೆ, ಉತ್ತರದಲ್ಲಿ ಪ್ರಾಬಲ್ಯ ಮೆರೆಯುವುದು ದಶೆಹರಿ. ಯಾಕೋ, ಇದು ನನಗೆ ಯಾವಾಗಲೂ ಬಿಡಿಸಲಾಗದ ಒಗಟೇ. ಲಖನೌ ನವಾಬರ ತೋಟದಲ್ಲಿ ಬೆಳೆಯಲ್ಪಡುತ್ತಿದ್ದ ಹಣ್ಣು ಎನ್ನುವ ಹೆಸರಿನಲ್ಲಿ ಇದಕ್ಕೆ ರಾಜ ಮರ್ಯಾದೆ ಸಿಕ್ಕಿದ್ದೇ ಹೆಚ್ಚು. ಇದೂ ಕೂಡಾ ಚೂಸ್ನೇವಾಲಾ ಕೆಟಗರಿಯದ್ದಾದರೂ, ಯಾಕೋ ಇದಕ್ಕೂ ನನಗೂ ಜಾತಕ ಕೂಡಿ ಬರುವುದಿಲ್ಲ. ಇದರ ಹಿಂದೆ ಬಿದ್ದು ದುಡ್ಡು ದಂಡ ಮಾಡಿದ್ದೇ ಹೆಚ್ಚು. ಅಪರೂಪಕ್ಕೆ ಹತ್ತರಲ್ಲಿ ಒಂದೆಂಬಂತೆ ಒಳ್ಳೆಯ ಹಣ್ಣು ದಕ್ಕಿದ್ದು ಬಿಟ್ಟರೆ, ಈ ವರ್ಷವಂತೂ ಸಂಪೂರ್ಣವಾಗಿ ಈ ಮೋಹದಿಂದ ಹೊರಬಂದು ದಶೆಹರಿಯ ಸಹವಾಸ ಸಾಕು ಎಂದು ಸೋಡಾಚೀಟಿ ಕೊಟ್ಟು ಬಿಟ್ಟಿದ್ದೇನೆ.

ಕಾಕತಾಳೀಯವೋ ಎಂಬಂತೆ ದಶೆಹರಿಯ ವಿದಾಯಕ್ಕೆ ಸರಿಯಾಗಿ ಡಿಂಗ ಬಂದಿದ್ದಾನೆ. ಕಳೆದ ವರ್ಷ ಜೂನ್‌ ಅಂತ್ಯದಲ್ಲಿ ಮಾರ್ಕೆಟ್ಟಿನಲ್ಲಿ ಹೊಸದೇನಿದೆ ಅಂತ ಅಡ್ಡಾಡುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದ ಡಿಂಗ ಬಾಲ್ಯದ ಗೆಳೆಯನೊಬ್ಬ ಅಚಾನಕ್ಕಾಗಿ ಸಿಕ್ಕಿ ಕೊಟ್ಟ ಸರ್‌ಪ್ರೈಸಿನಂತೆ ಪ್ರಿಯವಾಗಿಬಿಟ್ಟಿದೆ. ಈ ಪುಟಾಣಿ ಹೊಂಬಣ್ಣದ ಹಣ್ಣಿಗೆ ಮಾರುಹೋಗಿ ಹೆಸರೇನು ಅಂದಾಗ ಡಿಂಗ ಎಂದಿದ್ದು ಕೇಳಿ ಹೌಹಾರಿದ್ದೆ. ಡಿಂಗ? ಎಂದು ಮರುಪ್ರಶ್ನೆ ಹಾಕಿ, ಎಲ್ಲಿಯ ಹಣ್ಣು ಎಂದಿದ್ದೆ. ʻಲಖನೌ ಸೇʼ ಎಂದು ಆತ ನಿರಾಳವಾಗಿ ಉತ್ತರಿಸಿದ್ದ. ನನ್ನ ಡಿಂಗನ ಬಾಂಧವ್ಯ ಅವನಿಗೆಲ್ಲಿ ಅರ್ಥವಾಗಬೇಕು!

ಈ ಡಿಂಗ ನನ್ನನ್ನು ಸೆಳೆಯಲು ಮೊದಲ ಕಾರಣ ಖಂಡಿತವಾಗಿ ಆ ಹೆಸರು. ಕೈಕಾಲು ಕುತ್ತ ಮಾಡಿ ಎದ್ದು ಬಿದ್ದು ಓದುತ್ತಿದ್ದ ಬಾಲಮಂಗಳ, ಮತ್ತದರ ಹೀರೋ ಡಿಂಗ. ಇಂಥದ್ದೊಂದು ಹೆಸರಿನ ಮಾವಿನಣ್ಣೂ ಇರಬಹುದು ಎಂಬ ಊಹನೆಯೂ ಮಾಡದೆ ಸಿಕ್ಕ ಸರ್‌ಪ್ರೈಸು ಇದು. ಇನ್ನೊಂದು ಇದು ಚೂಸ್ನೇವಾಲಾ ಕೆಟಗರಿಯದ್ದು ಎಂಬ ಪ್ರೀತಿ. ಹಾಗಾಗಿ ಸುರಿಸುರಿದು ತಿಂದಷ್ಟೂ ರುಚಿ ಹೆಚ್ಚು. ಅಷ್ಟೇ ಅಲ್ಲ, ಈ ದೂರದ ದೆಹಲಿಯಲ್ಲಿ ಕೂತು ಊರಿನ ನೆನಪಿನಲ್ಲಿ ಗೊಜ್ಜು, ಸಾಸ್ವೆ ಯಾವುದನ್ನೇ ಮಾಡಿದರೂ ಅದಕ್ಕೆ ಒಂದು ಮಟ್ಟಿನ ನ್ಯಾಯ ಒದಗಿಸಿದ ಹಣ್ಣೆಂದರೆ ಇದೇ (ಋಷಿಕೇಶದ ಆ ಪಹಾಡೀ ಆಮ್‌ ಬಿಟ್ಟರೆ).

ಒಂದಾನೊಂದು ಕಾಲದಲ್ಲಿ, ನಾವು ತಿಂದ ಪ್ರತಿ ಹಣ್ಣಿನ ವಾಟೆಯನ್ನೂ ಹಿಂದೆ ಅಡಗಿಸುತ್ತಾ, ಹತ್ತಿರದವರನ್ನು ಕರೆದು, ಅವರು ಓ ಎಂದರೆ ಸಾಕು, ʻವಾಟೆ ಜೊತೆ ಓಡುʼ ಎನ್ನುವ ಶಿಕ್ಷೆ ಕೊಟ್ಟು ಎಷ್ಟು ಸಾಧ್ಯವೋ ಅಷ್ಟು ದೂರಕ್ಕೆ ಎಸೆದುಬಿಡುತ್ತಿದ್ದೆವು. ಇದೊಂದು ಬೇಸಿಗೆಯ ತಮಾಷೆಯ ಆಟ. ಒಂದೊಂದು ಡಿಂಗ ತಿನ್ನುವಾಗಲೂ ಈಗ ಯಾರನ್ನೆಲ್ಲಾ ಓಡಿಸಿದ್ದೆ ಎಂದು ನೆನಪಾಗಿ ತುಟಿಯಂಚಿನಲ್ಲಿ ನಗು ಮೂಡುತ್ತದೆ. ಅದಕ್ಕೇ ಮಾವಿನಣ್ಣು ಕೇವಲ ಹಣ್ಣಲ್ಲ. ಬದುಕಿನ ರಸಗಳಿಗೆಯ ನೆನಪನ್ನು ಮಾತ್ರ ಹೊತ್ತು ತರುವ ಅಮೂಲ್ಯ ನಿಧಿ.

ನಿನ್ನೆ ಮಾರ್ಕೆಟ್ಟು ತುಂಬ ಹುಡುಕಿದರೆ ಡಿಂಗ ಮಾತ್ರ ಕಾಣೆಯಾಗಿದ್ದ. ಬಂದರೆ ಹೇಳಿ ಎಂದು ನಂಬರ್‌ ಕೊಟ್ಟು ಬಂದಿದ್ದೆ. ನಾಳೆ ಡಿಂಗ ಸಾಹೇಬ್ರು ಡಬ್ಬಿ ತುಂಬ ಎಂಟ್ರಿ ಕೊಡಲಿದ್ದಾರೆ ಎಂದು ಈಗಷ್ಟೇ ಮಾಹಿತಿ ಬಂದಿದೆ. ಸದ್ಯಕ್ಕಂತೂ ದೆಹಲಿಯ ಸೆಖೆಗೆ ಈ ಡಿಂಗನೇ ಶಕ್ತಿಮದ್ದು!

‍ಲೇಖಕರು Admin

July 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: