ಒಲಿಂಪಿಕ್ಸ್ ಮತ್ತು ತೀವ್ರ ಪ್ರತಿರೋಧ

ಹರೀಶ್ ಎಂ ಜಿ

ಇಂದಿನಿಂದ ಒಲಿಂಪಿಕ್ಸ್ ಟೋಕಿಯೋ ನಗರದಲ್ಲಿ ಶುರುವಾಗಿದೆ. ನಮ್ಮ ಜನ ಐಪಿಎಲ್ ಫಾಲೋ ಮಾಡಿದ ಹಾಗೆ ನಾಲ್ಕು ವರ್ಷಕೊಮ್ಮೆ ನಡೆಯುವ ಒಲಿಂಪಿಕ್ಸ್ ಫಾಲೋ ಮಾಡಲ್ಲ. ಮೂರೂ ಸಾವಿರ ವರ್ಷಗಳ ಹಿಂದೆ ಪುರಾತನ ಗ್ರೀಸ್ನಲ್ಲಿ ಹುಟ್ಟಿದ ಈ ಕ್ರೀಡಪಟುಗಳ ಸಂಗಮ 1896 ರಿಂದ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಮಹಾಯುದ್ದಗಳಿಂದ 1916, 1940 ಮತ್ತು 1944ರಲ್ಲಿ ಒಲಿಂಪಿಕ್ಸ್ ರದ್ದಾಗಿತ್ತು.

ನಿರಂತರ ಸೋಲಿನಿಂದ ವಿಚಲಿತರಾಗದೆ ಮತ್ತೆ ಮತ್ತೆ ಪ್ರಯತ್ನಿಸಿ ಗೆಲುವು ಕಂಡ ನೂರಾರು ಕ್ರೀಡಾಪಟುಗಳ ಸಾಹಸ ಎಂತಹವರಿಗೂ ಸ್ಪೂರ್ತಿಯಾದರೆ, ನನಗೆ ಒಲಿಂಪಿಕ್ಸ್ ಅಂದರೆ ಕೆಲವು ಘಟನೆಗಳು ನೆನಪಾಗುತ್ತವೆ. ಅದು 1936ರ ಬರ್ಲಿನ್ ಒಲಿಂಪಿಕ್ಸ್. 1932ರ ಲಾಸ್ ಅಂಜೆಲೆಸ್ ಒಲಿಂಪಿಕ್ಸ್ ಅನ್ನು ನಾಚಿಸುವಂತೆ ಬರ್ಲಿನ್ ಒಲಿಂಪಿಕ್ಸ್ ನಡೆಸಬೇಕು ಎಂಬ ಹಠಕ್ಕೆ ಬಿದ್ದ ಹಿಟ್ಲರ್ ಒಂದು ಲಕ್ಷ ಆಸನ ವ್ಯವಸ್ಥೆಯಿರುವ ಕ್ರೀಡಾಂಗಣವನ್ನ ಕಟ್ಟಿಸಿದ.

ಈ ಕ್ರೀಡೆಗಳು ಮೊದಲ ಬಾರಿಗೆ ದೂರದರ್ಶನ ಹಾಗು ರೇಡಿಯೋದಲ್ಲಿ ಪ್ರಸಾರವಾದವು. ಲೆನಿ ರೈಫನ್ಸ್ಟಾಲ್ಗೆ ಸಂಪೂರ್ಣ ಕ್ರೀಡೆಗಳನ್ನ ಚಿತ್ರಿಸುವ ಜವಾಬ್ದಾರಿ ವಹಿಸಲಾಯಿತು. ಹಿಟ್ಲರ್ ಇಷ್ಟಕ್ಕೆ ತೃಪ್ತನಾಗದೆ ಒಲಿಂಪಿಕ್ಸ್ ಕ್ರೀಡೆಗಳನ್ನೇ ಆರ್ಯನರ ಕುಲದ ಮೇಲ್ಮೆಯನ್ನ ಪ್ರಚಾರ ಮಾಡಲು ಯಹೂದಿಗಳ ವಿರುದ್ಧ ದ್ವೇಷ ಕಾರಲು, ಉಳಿದ ವರ್ಣದವರನ್ನ ಕೀಳೆಂದು ಬಿಂಬಿಸಲು ಇದೇ ಸದಾವಕಾಶವೆಂದು ತಯಾರಿ ನಡೆಸಿದ.

ಎಲ್ಲವು ಅವನೆಂದುಕೊಂಡಂತೆ ನಡೆಯಿತು ಜರ್ಮನಿ ಅತಿ ಹೆಚ್ಚು ಪದಕಗಳನ್ನ ಪಡೆಯಿತು ಆದರೆ ಹಿಟ್ಲರ್ ಪ್ರಚಾರ ಮಾಡುತ್ತಿದ್ದ ಆರ್ಯನ್ ಮೇಲ್ಮೆಯ, ಶ್ರೇಷ್ಠತೆಯ ವ್ಯಸನಕ್ಕೆ ಕೊಡಲಿ ಪೆಟ್ಟು ಕೊಟ್ಟು ಹಿಟ್ಲರ್ ಅಹಂ ಅನ್ನು ಅಡಗಿಸಿದ ಶ್ರೇಯಸ್ಸು ಅಮೇರಿಕಾದ ಓಟಗಾರ ಜೆಸ್ಸಿ ಓವೆನ್ಸ್ಗೆ ಸಲ್ಲಬೇಕು. ಜೆಸ್ಸಿ ಒಟ್ಟು ನಾಲ್ಕು ಚಿನ್ನದ ಪದಕ ಪಡೆದ. ಇಡಿಯ ಒಲಿಂಪಿಕ್ಸ್ ನಲ್ಲಿ ಶ್ರೇಷ್ಠ ಪಟು ಆತನೇ ಅನ್ನುವುದರಲ್ಲಿ ಯಾವ ಅನುಮಾನವಿರಲಿಲ್ಲ.

ಹೀಗೆ ಹಿಟ್ಲರ್ನ ನಾಟ್ಜಿ ದೇಶಕ್ಕೆ ನುಗ್ಗಿ ಆತ ಪ್ರಚಾರ ಮಾಡುತ್ತಿದ್ದ ವಿಷಯಗಳೆಲ್ಲಾ ಶುದ್ದ ಸುಳ್ಳುಗಳು ಎಂದು ತನ್ನ ವೇಗದ ಓಟದಿಂದ ಸಾಬಿತುಪಡಿಸಿದ ಆಫ್ರೋ ಅಮೆರಿಕನ್ ಆದ ಜೆಸ್ಸಿ. ಇಂತಹ ಜೆಸ್ಸಿ ಸರ್ವಾಧಿಕಾರಿಯೊಬ್ಬನ ಹುಟ್ಟಡಿಗಿಸಿ ನಾಲ್ಕು ಚಿನ್ನದ ಪದಕಗಳೊಂದಿಗೆ ತಾಯ್ನಾಡಿಗೆ ಮರಳಿ ಬಂದಾಗ ಅಮೆರಿಕಾ ದೇಶದ ರಾಷ್ಟ್ರಪತಿ ಜೆಸ್ಸಿ ಕಪ್ಪು ಬಣ್ಣದವನೆಂದು ಆತನ ಕೈಕುಲಕಲು ನಿರಾಕರಿಸಿದ್ದ!!! 1968ರ ಮೆಕ್ಸಿಕೋ ಸಿಟಿ ಒಲಿಂಪಿಕ್ಸ್. ಇನ್ನೂರು ಮೀಟರ್ ಓಟದಲ್ಲಿ ಟಾಮಿ ಸ್ಮಿತ್, ಪೀಟರ್ ನಾರ್ಮನ್ ಹಾಗು ಜಾನ್ ಕಾರ್ಲೋಸ್ ಕ್ರಮವಾಗಿ ಚಿನ್ನ, ಬೆಳ್ಳಿ ಹಾಗು ಕಂಚಿನ ಪದಕಗಳನ್ನ ಪಡೆದರು. ಟಾಮಿ ಮತ್ತು ಜಾನ್ ಅಮೇರಿಕಾದ ಶೋಷಿತ ಕಪ್ಪು ಸಮುದಾಯಕ್ಕೆ ಸೇರಿದವರು.

ಪೀಟರ್ ಆಸ್ಟ್ರೇಲಿಯಾದ ಬಿಳಿಯ ಪ್ರಜೆ. ಪದಕ ಗೆದ್ದ ಟಾಮಿ ಮತ್ತು ಜಾನ್, ಅಮೇರಿಕಾದಲ್ಲಿ ಆಫ್ರೋ ಅಮೆರಿಕನ್ (ಕರಿಯರು) ಪ್ರತಿನಿತ್ಯ ಅನುಭವಿಸುವ ವರ್ಣ ತಾರತಮ್ಯ, ಅವಕಾಶಗಳ ನಿರಾಕರಣೆ ಹಾಗು ಕಿತ್ತು ತಿನ್ನುವ ಬಡತನವನ್ನ ಜಗತ್ತಿಗೆ ತಿಳಿಸಲು ಪದಕ ಪ್ರಧಾನ ಸಮಾರಂಭಕ್ಕೆ ಬರಿಗಾಲಲ್ಲೇ ಬಂದರು, ತಮ್ಮ ಕೈಗೆ ಕರಿಯ ಬಣ್ಣದ ಕಾಲ್ಚೀಲ ಹಾಕಿಕೊಂಡರು. ಕ್ರೀಡಾಂಗಣದ ಧ್ವನಿವರ್ಧಕಗಳಲ್ಲಿ ಅಮೇರಿಕಾದ ರಾಷ್ಟ್ರಗೀತೆ ಪ್ರಸಾರವಾಗುತಿದ್ದಾಗ ತಮ್ಮ ಎಡಗೈಯನ್ನು ಮೇಲಕ್ಕೆತ್ತಿದ್ದರು.

ಎದೆಯ ಮೇಲೆ ಮಾನವ ಹಕ್ಕುಗಳ ಬ್ಯಾಡ್ಜ್ ತೊಟ್ಟಿದ್ದರು. ಇವರಿಗೆ ಬೆಂಬಲ ಸೂಚಿಸಿ ಆಸ್ಟ್ರೇಲಿಯಾದ ಬಿಳಿಯ- ಬೆಳ್ಳಿ ಪದಕ ಗೆದ್ದಿದ್ದ ಪೀಟರ್ ಕೂಡ ಎದೆಯ ಮೇಲೆ ಮಾನವ ಹಕ್ಕುಗಳ ಬ್ಯಾಡ್ಜ್ ತೊಟ್ಟು ಪೋಡಿಯಮ್ ಏರಿದ. That was such a powerful message sent from the podium of Olympics. ಪೋಡಿಯಮ್ ಇಳಿದು ಕ್ರೀಡಾಂಗಣದಿಂದ ಹೊರ ಹೋಗುವಾಗ ಅವರನ್ನ ಇಡಿಯ ಕ್ರೀಡಾಂಗಣವೇ ಹಿಯಾಳಿಸಿತ್ತು.

‘ನಾನು ಚಿನ್ನದ ಪದಕ ಗೆದ್ದರೆ, ನಾನು ಕಪ್ಪು ಬಣ್ಣದ ಅಮೆರಿಕನ್ ಮಾತ್ರವಾಗದೆ ನಾನೊಬ್ಬ ಅಮೆರಿಕನ್ ಆಗಿಬಿಡುತ್ತೇನೆ. ನಾನೇನಾದರು ತಪ್ಪು ಮಾಡಿದರೆ ಅವರು ನನ್ನನ್ನು ನಿಗರ್ ಎಂದು ಕರೆಯುತ್ತಾರೆ. ನಾವುಗಳು ಕಪ್ಪು ವರ್ಣದವರು. ನಮ್ಮ ವರ್ಣದ ಮೇಲೆ ನಮಗೆ ಗರ್ವವಿದೆ. ಅಮೇರಿಕಾದ ಪ್ರತಿಯೊಬ್ಬ ಕಪ್ಪು ಅಮೆರಿಕನ್ನಿಗೂ ಇಂದು ಸಂಜೆ ನಾವು ಮಾಡಿದ ಕೆಲಸ, ಅದರ ಹಿಂದಿರುವ ಉದ್ದೇಶ ಅರ್ಥವಾಗಿರತ್ತೆ’ ಅಂತ ಟಾಮಿ ಹೇಳಿದ.

ಹೀಗೆ ಮಾಡಿದ ಟಾಮಿ ಮತ್ತು ಕಾರ್ಲೋಸ್ ಅವರನ್ನ ಅಮೆರಿಕಾದ ಕ್ರೀಡಾ ಸಮುದಾಯ ಅನಿರ್ದಿಷ್ಟವಾಗಿ ಬಹಿಷ್ಕರಿಸಿತು. 2000 ಸಿಡ್ನಿ ಒಲಿಂಪಿಕ್ಸ್ನ 400 ಮೀಟರ್ ಓಟದಲ್ಲಿ ಚಾಂಪಿಯನ್ ಆದವಳು ಕ್ಯಾಥಿ ಫ್ರೀಮನ್. ಕ್ಯಾಥಿ ಆಸ್ಟ್ರೇಲಿಯಾದ ಮೂಲ ನಿವಾಸಿ ಸಮುದಾಯಕ್ಕೆ ಸೇರಿದವಳು. ಚಿನ್ನದ ಪದಕ ಪಡೆದ ಆಕೆ ಕ್ರೀಡಾಂಗಣದ ಸುತ್ತ ಆಸ್ಟ್ರೇಲಿಯಾದ ಬಾವುಟದ ಜೊತೆಗೆ ತನ್ನ ಸಮುದಯದ ಬಾವುಟ ಹಿಡಿದು ಹೋದಳು.

ಯುರೋಪಿಯನ್ ವಸಾಹತುಗಾರರು ಭಾರತದಂತಹ ದೇಶಗಳನ್ನ ನೂರಾರು ವರುಷಗಳು ಕೊಳ್ಳೆ ಹೊಡೆದರೆ, ಕೆಲವು ದೇಶಗಳಲ್ಲಿ ಅಲ್ಲಿನ ಮೂಲ ನಿವಾಸಿಗಳನ್ನ ಕೊಂದು ಅಲ್ಲಿಯೇ ನೆಲೆಸಿಬಿಟ್ಟರು. ಕೆನಡ, ಅಮೇರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಅದಕ್ಕೆ ಒಳ್ಳೆಯ ಉದಾಹರಣೆಗಳು, ಇವನ್ನ ಸೆಟಲರ್ ದೇಶಗಳು ಎಂದು ಇಂದಿಗೂ ಗುರುತಿಸಲಾಗುತ್ತದೆ. ನರಮೇಧ, ಬಿಳಿಯರು ಹರಡಿದ ರೋಗಗಳಿಗೆ ಬಲಿಯಾಗದೆ ಉಳಿದ ಮೂಲ ನಿವಾಸಿಗಳು ಈ ರೀತಿಯ ಸಾಧನೆ ಮಾಡುವುದು ಎಲ್ಲರ ಪ್ರಶಂಸೆಗೆ ಅರ್ಹವಾದುದು.

ಮುಂದುವರೆದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಕೆವಿನ್ ರುದ್ 2008ರಲ್ಲಿ ಅಳಿದುಳಿದ ಮೂಲ ನಿವಾಸಿಗಳಿಗೆ, (aborigines) ಮತಾಂತರಕ್ಕಾಗಿ, ದೇಶ ಜನರೊಂದಿಗೆ ಸಮೀಕರಿಸಲೆಂದು ತಂದೆ ತಾಯಿಯಿಂದ ಬೇರ್ಪಡಿಸಿ ಸರ್ಕಾರ ಎತ್ತೊಯ್ದ ಇಡಿಯ ಪೀಳಿಗೆಯನ್ನ (stolen generation) ಉದ್ದೇಶಿಸಿ ರಾಷ್ಟೀಯ ದೂರದರ್ಶನದಲ್ಲಿ ಕ್ಷಮೆಯಾಚಿಸಿದ್ದು ಗಮನಿಸಬೇಕಾದ ವಿಚಾರ ಕೂಡ.

ಇನ್ನು 1972 ಮ್ಯುನಿಕ್ ಒಲಿಂಪಿಕ್ಸ್ನಲ್ಲಿ ನಡೆದ ಇಸ್ರೇಲಿ ಕ್ರೀಡಾಪಟುಗಳ ಮಾರಣ ಹೋಮ, ನಂತರದ ದಿನಗಳಲ್ಲಿ ಇಸ್ರೇಲಿ ಬೇಹುಗಾರಿಕೆ ಸಂಸ್ಥೆ ಮೊಸಾದ್ ಹಲವಾರು ಪ್ಯಾಲೆಸ್ತಿನಿ ಹೋರಾಟಗಾರರನ್ನ ಇದೆ ನೆಪವಿಟ್ಟು ಕೊಂದದ್ದು ಒಲಿಂಪಿಕ್ಸ್ ಇತಿಹಾಸದ ಅತ್ಯಂತ ಕರಾಳ ಘಟನೆಗಳಲ್ಲಿ ಪ್ರಮುಖವಾದರೆ, ಮ್ಯುನಿಕ್ ಒಲಿಂಪಿಕ್ಸ್ ಬಳಿಕ ಉಲ್ಬಣಗೊಂಡ ಇಸ್ರೇಲಿ/ಪ್ಯಾಲೆಸ್ತಿನ್ ಕಲಹ ಇಂದಿಗೂ ಶಮನಗೊಂಡಿಲ್ಲ.

‍ಲೇಖಕರು Admin

July 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: