ಎಸ್ ದಿವಾಕರ್ ಓದಿದ ‘ವಿಷಾದ ಗಾಥೆ’

ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಹೊಸ ಕವನ ಸಂಕಲನ ‘ವಿಷಾದ ಗಾಥೆ’ ಬಿಡುಗಡೆಯಾಗಿದೆ.

ಯಾಜಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಇದಕ್ಕೆ ಹಿರಿಯ ವಿಮರ್ಶಕರಾದ ಎಸ್ ದಿವಾಕರ್ ಅವರು ಬರೆದ ಮುನ್ನುಡಿ ಇಲ್ಲಿದೆ.

ಎಸ್ ದಿವಾಕರ್

**

ಅರಿಸ್ಟಾಟಲನ ಪ್ರಕಾರ ರೂಪಕವೇ ಕಾವ್ಯದ ಬುನಾದಿ. ಒಂದು ವಸ್ತುವನ್ನು ಅಥವಾ ಭಾವವನ್ನು ಇನ್ನಾವುದೋ ವಸ್ತುವಾಗಿ ಅಥವಾ ಭಾವವಾಗಿ ನೋಡದೆ ಹೋದರೆ ನಿಜಕ್ಕೂ ಹೊಸದೇನನ್ನೂ ಕಾಣಿಸಲಾಗದು. ಗೆಳೆಯ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಈ ‘ವಿಷಾದ ಗಾಥೆ’ಯಲ್ಲಿ ವಸ್ತುಗಳು ತಮ್ಮ ಅಸ್ಮಿತೆಯನ್ನು ಒಂದಿಷ್ಟೂ ಕಳೆದುಕೊಳ್ಳದೆ ರೂಪಕಗಳಾಗಿ ತಮ್ಮದೇ ದನಿಯಲ್ಲಿ ಮಾತಾಡುತ್ತವೆ. ಅವುಗಳ ಅಂತಃಶಕ್ತಿ ಅವರ ಭಾಷೆಯ ಸಂರಚನೆಯಲ್ಲೇ ಹೊರಹೊಮ್ಮುವುದರಿಂದ ಅದು ಸಹಜವಾಗಿಯೇ ಅವರ ಶಬ್ದವಿನ್ಯಾಸಕ್ಕೊಂದು ವಿಶಿಷ್ಟ ಧ್ವನ್ಯರ್ಥವನ್ನು ನೀಡುತ್ತದೆ.

ವರ್ತಮಾನವನ್ನು ಭೂತದ ದರ್ಪಣದಲ್ಲಿ ಪರಿಶೀಲಿಸುವ ಈ ಗಾಥೆಗಳ ವಸ್ತು ಮಾನವನ ಇತಿಹಾಸ, ಅವನ ದುರ್ವಿಧಿ, ಪಲ್ಲಟಗೊಂಡಿರುವ ಪ್ರಪಂಚದಲ್ಲಿ ಅವನ ಸ್ಥಿತಿ, ಬದುಕು ಹೀಗೇಕೆ ಎಂಬ ಜಿಜ್ಞಾಸೆ. ಕೌತುಕದ ಜೊತೆಜೊತೆಗೇ ಪ್ರಶ್ನೆಗಳನ್ನೂ ತುಂಬಿಕೊಂಡಿರುವ ಇವು ಸಸ್ಯ ಮತ್ತು ಪ್ರಾಣಿಲೋಕದ ಬಗ್ಗೆ, ನಿಸರ್ಗದ ವಿದ್ಯಮಾನಗಳ ಬಗ್ಗೆ, ಮುಗ್ಧತೆಯ ಬಗ್ಗೆ, ಮುಗ್ಧತೆ ನಷ್ಟವಾಗುವುದರ ಬಗ್ಗೆ, ಹಮ್ಮುಬಿಮ್ಮಿನ ಬಗ್ಗೆ, ಕಳೆದುಹೋದ ಜಗತ್ ಪ್ರಜ್ಞೆಯ ಬಗ್ಗೆ, ಸೋಲಿನ ಬಗ್ಗೆ, ಹಿಂಸೆಯ ಬಗ್ಗೆ ಮಾತಾಡುತ್ತವೆ. ಅರ್ಥಶೋಧನೆಯನ್ನು ಪ್ರತಿನಿಧಿಸುವ ಇವು ಸರಳವಾಗಿರುವಂತೆಯೇ ಶಕ್ತವಾಗಿಯೂ ಇವೆ.

ಅವನನ್ನು ಕೇಳುತ್ತೇನೆ
ಎಲ್ಲವೂ ವಿಷ ಆಗಿದೆ
ಒಂದಷ್ಟು ಜೇನು ತಾರೋ ಮಾರಾಯ
ಅವ ಹೇಳುತ್ತಾನೆ
ಜೇನುಗಳೇ ಬೇಡಿಕೆ ಇಡುತ್ತಿವೆ
ವಿಷ ಬೆರೆತ ಹೂವುಗಳ ಅರಳಿಸದಿರೆಂದು

ಇಲ್ಲಿನ ‘ಅವನು’ ಯಾರು? ಕವಿ ಅಥವಾ ನಮ್ಮೆಲ್ಲರ ಹಂಬಲ, ಆಶಯಗಳ ಒಬ್ಬ ಪ್ರತಿನಿಧಿ. ಅವನು ಕಾಣಿಸುತ್ತಿರುವುದು ವಾಸ್ತವದಲ್ಲೇ ಇರುವ ಒಂದು ವಿಪರ್ಯಾಸ. ಜೇನು, ವಿಷ ಈ ಪದಗಳು ಮನುಷ್ಯನ ಕನಸೇನು, ಅವನು ಸೃಷ್ಟಿಸಿಕೊಂಡಿರುವುದು ಎಂಥ ಬದುಕು ಎಂಬುದನ್ನು ಪ್ರತೀಕಾತ್ಮಕವಾಗಿ ಸ್ಪಷ್ಟಪಡಿಸುತ್ತವೆ. ಇದೇ ರೀತಿ ಈ ಕೆಳಗಿನವುಗಳನ್ನೂ ಓದಬಹುದು.

ಎದೆಯ ಸೀಳಿದೆ
ಅವ ಬಿಟ್ಟ ಬಾಣ
ಹಕ್ಕಿಯ ಕಾಂತೆಯ ಜೀವ ತೆಗೆದಿದೆ
ಕಾಡ ನಡುವೆ
ಒಂಟಿ ಹಕ್ಕಿ ರೋದಿಸುತ್ತಿದೆ
ಆ ವೇದನೆ ಅವನಿಗೆಲ್ಲಿ ಕೇಳಿಸುತ್ತದೆ

ಮಾಯವಾಗಿದೆ ನಿದ್ರೆ
ಅದ ಕಳವು ಮಾಡಿದ್ದಾರೆ
ಇವನ ಕನಸುಗಳನ್ನೂ ಕದ್ದು ಬಿಟ್ಟಿದ್ದಾರೆ
ಕದ್ದ ಕನಸುಗಳು
ಬಣ್ಣ ತುಂಬಿಸಿಕೊಂಡು ಮಾರಾಟಕ್ಕಿವೆ
ನಿದ್ರೆಯ ಕೊಳ್ಳಲು ಆಗದವ ಕಂಗಾಲಾಗಿದ್ದಾನೆ

ಇವು ಗಾಥೆಗಳು ಹೇಗೆ? “ಕವಿತೆಗೆ ಇಂತಿಷ್ಟೇ ಸಾಲುಗಳು ಇರಬೇಕು, ಇರುತ್ತವೆ ಎಂಬ ನಿಯಮವೇನಿಲ್ಲ. ಸಾವಿರ ಸಾಲುಗಳ, ಲಕ್ಷ ಪದಗಳಿಂದ ಆವೃತವಾದ ರಚನೆಗಳೆಲ್ಲಾ ಕವಿತೆಯಾಗಿ ಬಿಡುವುದಿಲ್ಲ. ನಾನು ಗಾಥೆಗಳಿಗೆ ಇಷ್ಟೇ ಪದಗಳಿರಬೇಕು, ಇಷ್ಟು ಸಾಲುಗಳಿರಬೇಕು ಎಂಬ ಒಂದು ಚೌಕಟ್ಟು ಹಾಕಿಕೊಂಡಿದ್ದೇನೆ ಅಷ್ಟೆ” ಎಂದಿದ್ದಾರೆ ಮಲ್ಲಿಕಾರ್ಜುನಸ್ವಾಮಿ. ಈ ಗಾಥೆಗಳ ರಾಚನಿಕ ಸ್ವರೂಪದ ಬಗ್ಗೆ ಹೇಳುವುದಾದರೆ ಆರು ಸಾಲುಗಳ ಪ್ರತಿಯೊಂದು ಗಾಥೆಯಲ್ಲೂ ಎರಡು ಪಾದಗಳಿವೆ. ಒಂದನೆಯ ಮತ್ತು ನಾಲ್ಕನೆಯ ಸಾಲುಗಳಲ್ಲಿ ತಲಾ ಎರಡೆರಡು ಪದಗಳು, ಎರಡನೆಯ ಮತ್ತು ಐದನೆಯ ಸಾಲುಗಳಲ್ಲಿ ತಲಾ ಮೂರು ಮೂರು ಪದಗಳು, ಮೂರನೆಯ ಮತ್ತು ಆರನೆಯ ಸಾಲುಗಳಲ್ಲಿ ತಲಾ ನಾಲ್ಕು ನಾಲ್ಕು ಪದಗಳು. ಹೀಗೆ ಒಟ್ಟು ಹದಿನೆಂಟು ಪದಗಳಿಂದ ಒಂದು ಗಾಥೆ ರೂಪುಗೊಳ್ಳುತ್ತದೆ.

ಪದಗಳ ಬಗ್ಗೆ ಹೇಳುವುದಾದರೆ ಕೆಲವು ಪದಗಳಲ್ಲಿ ಒಂದೋ ಎರಡೋ ಅಕ್ಷರಗಳಿದ್ದರೆ, ಇನ್ನು ಕೆಲವು ಪದಗಳಲ್ಲಿ ಮೂರರಿಂದ ಐದಾರು ಅಕ್ಷರಗಳವರೆಗೂ ಇವೆ. ಹಾಗಾಗಿ ಇಡೀ ಗಾಥೆ ಮಾತ್ರಾಲಯವನ್ನು ಬಿಟ್ಟುಕೊಟ್ಟಿದೆ. ಹಾಗೆಂದು ಇಲ್ಲಿ ಲಯವೇ ಇಲ್ಲವೆನ್ನುವಂತಿಲ್ಲ. ವಸ್ತುವನ್ನೋ ಭಾವವನ್ನೋ ಅನುಭವ ವೇದ್ಯಗೊಳಿಸುವುದಕ್ಕೆ ಪೂರಕವಾದ ಲಯ ಉದ್ದಕ್ಕೂಇದೆ. ಈ ಲಯ ಬಹುಮಟ್ಟಿಗೆ ಆಡುಮಾತನ್ನು ಅನುಸರಿಸಿರುವ ಗದ್ಯಲಯ. ನಿರ್ದಿಷ್ಟ ಛಂದೋ ರೂಪಕ್ಕೆ ಬದ್ಧವಾಗದೆ ಇರುವುದರಿಂದಲೇ ಇಲ್ಲಿನ ಗದ್ಯಲಯ ಕವಿಕಲ್ಪನೆಗೆ ವಿಶೇಷ ಸ್ವಾತಂತ್ರ್ಯವನ್ನು ನೀಡಿದೆಯೆನ್ನಬೇಕು. ನಮ್ಮ ಕಾಲದ ನಾಡಿಯೇ ಮಿಡಿಯುತ್ತಿರುವ ಇಲ್ಲಿನ ಗಾಥೆಗಳು ಒಂದಿಡೀ ಕಾಲಧರ್ಮದ ಧ್ವನಿಯನ್ನು ನಿರ್ಣಯಾತ್ಮಕ ರೀತಿಯಲ್ಲಿ ಹಿಡಿದುಕೊಡುತ್ತವೆ.

ಮಲ್ಲಿಕಾರ್ಜುನಸ್ವಾಮಿಯವರದು ಸಮಕಾಲೀನ ಪ್ರಜ್ಞೆಯಷ್ಟೇ ಅಲ್ಲ, ಆಧುನಿಕವೂ ಕೂಡ. ಮನುಷ್ಯನ ಘನತೆಯ ಬಗ್ಗೆ, ನೈತಿಕತೆಯ ಹಂಬಲದ ಬಗ್ಗೆ, ಮಾನವನ ಅಮಾನವೀಯ ಗುಣದ ಬಗ್ಗೆ ಇವರು ಬರೆದಿರುವುದು ಸಾಮಾನ್ಯ ವಸ್ತು ವಿಶೇಷಗಳಷ್ಟೇ ಅಲ್ಲ, ಸತತವಾಗಿ ಕಾಡಿದಂಥ ವೈಯಕ್ತಿಕ ಅನುಭವಗಳು ಕೂಡ. ಮಹಾಮನೆಯವರ ಯಶಸ್ಸಿರುವುದು ಭಾಷೆಯನ್ನು ಪುರ‍್ರೂಪಿಸುವುದರಲ್ಲಿ ಅಲ್ಲ, ಅದಕ್ಕೊಂದು ಹೊಸ ದೃಷ್ಟಿ ನೀಡುವುದರಲ್ಲಿ. ಅವರ ಪ್ರಯತ್ನವಿರುವುದು ಆಡುಮಾತಿನ ಲಯದಲ್ಲೇ ಹೊರತು ಗೇಯತೆಯಲ್ಲಲ್ಲ. ನಮ್ಮ ಅನುಭವ ಬೇರೆಯವರಿಗೂ ಮೌಲಿಕವಾಗಬೇಕಾದರೆ ಆ ಅನುಭವಕ್ಕೆ ಸೂಕ್ತವಾದ ಭಾಷೆ, ವಿಹಿತ ಲಯ ಅತ್ಯಗತ್ಯವಷ್ಟೆ. ಅಮೆರಿಕನ್ ಕವಿ ವ್ಯಾಲೆಸ್ ಸ್ಟೀವನ್ಸ್ “ಕವಿಗೆ ಮುಖ್ಯವಾದದ್ದು ‘ಬಾಹ್ಯ ಒತ್ತಡ’ವನ್ನು ಹತ್ತಿಕ್ಕಬಲ್ಲ ‘ಆಂತರಿಕ ಒತ್ತಡ’ ಎಂದ”. ಅವನ ಪ್ರಕಾರ ಆಂತರಿಕ ಒತ್ತಡ ಕ್ರಿಯಾಶೀಲವಾಗುವುದು ಪ್ರತಿಭೆಯಿಂದ. ಮತ್ತೆ ಈ ಪ್ರತಿಭೆ ಯೆನ್ನುವುದು “ಶಬ್ದಗಳ ಧ್ವನಿ”ಯಿಂದ ಸ್ಫುರಣಗೊಂಡು ಅನುಭವದ ಹಲವು ಮಗ್ಗುಲುಗಳನ್ನು ಧ್ವನಿಸಬಲ್ಲದು.

ಕವಿಯ ಪ್ರತಿಭೆ ಅವನ ಆತ್ಮದ ದನಿಯೂ ಆದಾಗ ಅದು ಹೊರಜಗತ್ತಿನ ಜೊತೆ ಸಂಪರ್ಕ ಸಾಧಿಸುತ್ತ ಒಂದಿಡೀ ಕಾಲಧರ್ಮವನ್ನೇ ಸೂಚಿಸಿಬಿಡುತ್ತದೆ. ಇಲ್ಲಿನ ಗಾಥೆಗಳಲ್ಲಿ ವಸ್ತುಸ್ಥಿತಿಯನ್ನು ರೂಪಾಂತರಗೊಳಿಸುವ ಕಾವ್ಯ ಪ್ರಕ್ರಿಯೆಯಿದೆ. ಎರಡು ವಿಭಿನ್ನ ಚಿತ್ರಗಳನ್ನು ಅಥವಾ ದೃಶ್ಯಗಳನ್ನು ಪಕ್ಕಪಕ್ಕದಲ್ಲಿಟ್ಟು ಹೊಸದೊಂದೇ ಧ್ವನಿಯನ್ನು ಹೊಮ್ಮಿಸುವ ನೈಪುಣ್ಯವಿದೆ. ಅಮೂರ್ತ ಅನುಭವವನ್ನು ದೃಶ್ಯೀಕರಿಸುವ ಪ್ರತಿಭೆಯಿದೆ. ಸಮಕಾಲೀನ ವಿದ್ಯಮಾನಗಳ ಹಿಂದಿರುವ ಕಟು ವಾಸ್ತವವನ್ನು ಅನಾವರಣಗೊಳಿಸುವ ಶಕ್ತಿಯಿದೆ.

ಒಂದು ಸಮರ್ಥವಾದ ಕವನ ನಾವು ಯಾರು, ಎಲ್ಲಿದ್ದೇವೆ ಎಂದು ತಿಳಿಸಿಕೊಡುವುದಲ್ಲದೆ ನಮ್ಮೊಳಗೇ ನಮ್ಮನ್ನೂ ನಮ್ಮ ಜಗತ್ತನ್ನೂ ಸೂಕ್ಷ್ಮವಾಗಿ ಗ್ರಹಿಸಲು ನೆರವಾಗುತ್ತದೆ. ಓದುಗರನ್ನು ಜಿಜ್ಞಾಸೆಗೆ ಹಚ್ಚುವ ಈ ಗಾಥೆಗಳು ಮನುಷ್ಯಾನುಭವದ ಮೂಲೆ ಮೊಡಕುಗಳನ್ನು ಸ್ಪರ್ಶಿಸುತ್ತ, ವಿಚಾರಗಳನ್ನು ಪ್ರತಿಮೆಗಳಾಗಿ ಪರಿವರ್ತಿಸುತ್ತ, ಅನುಭವದ ವಿಭಿನ್ನ ಆಯಾಮಗಳನ್ನು ಕಾಣಿಸುತ್ತ ಹೃದ್ಯವಾಗುತ್ತವೆ. ಇದಕ್ಕಾಗಿ ಈ ಕವಿಗೆ ನಾನು ಕೃತಜ್ಞ.

‍ಲೇಖಕರು Admin MM

February 14, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜಾಲಂದರ’ ನೀಡುವ ಸಾಹಿತ್ಯ ಸಿಂಚನ..

‘ಜಾಲಂದರ’ ನೀಡುವ ಸಾಹಿತ್ಯ ಸಿಂಚನ..

ಆರ್ ಎಸ್ ಹಬ್ಬು ** ಕಲಾ ಭಾಗ್ವತ್ ಅವರ ಕೃತಿ 'ಜಾಲಂದರ'. ಈ ಕೃತಿಯನ್ನು ಬೆಂಗಳೂರಿನ 'ಸ್ನೇಹಾ ಎಂಟರ್ ಪ್ರೈಸಸ್' ಪ್ರಕಟಿಸಿದ್ದಾರೆ. ಹಿರಿಯ...

ನವಮಾಧ್ಯಮದ ಹೊಸ ಶೋಧಗಳ ಅನಾವರಣ

ನವಮಾಧ್ಯಮದ ಹೊಸ ಶೋಧಗಳ ಅನಾವರಣ

ಬಿ.ಎ. ವಿವೇಕ ರೈ ** ಮಾಧ್ಯಮ ತಜ್ಞರಾದ ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ ಅವರ ಹೊಸ ಕೃತಿ 'ಪತ್ರಿಕೋದ್ಯಮದ ಪಲ್ಲಟಗಳು'. 'ಬಹುರೂಪಿ' ಈ...

ಒಂದು ವೃತ್ತಿ ಪಯಣ..

ಒಂದು ವೃತ್ತಿ ಪಯಣ..

ಮಧು ವೈ ಎನ್ ** ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ಕೃತಿ 'ಉಳಿದಾವ ನೆನಪು'. 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಮಧು ವೈ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This