ಗಣಪತಿ ಅಗ್ನಿಹೋತ್ರಿ ಕಂಡಂತೆ ‘ದ್ವಿಜ’ ಕಲಾ ಪ್ರದರ್ಶನ

ಗಣಪತಿ ಅಗ್ನಿಹೋತ್ರಿ

ಅವರು ಬೆಂಗಳೂರಿನ ‘ದ್ವಿಜಾ ಆರ್ಟ್ ಗ್ಯಾಲರಿ’ಯಲ್ಲಿ ಜರುಗಿದ ಕಲಾಕೃತಿಗಳ ಪ್ರದರ್ಶನದ ಕುರಿತು ಬರೆದ ಬರಹ.

**

ಬೆಂಗಳೂರಿನಲ್ಲೊಮ್ಮೆ ಕಲಾಪ್ರದರ್ಶನ ಆಯೋಜಿಸಬೇಕು ಎನ್ನುವ ಕನಸು ಪ್ರತಿಯೊಬ್ಬ ಕಲಾವಿದರಿಗೆ ಇದ್ದೇ ಇರುತ್ತದೆ. ಯಾವ ಸ್ಥಳ ಸೂಕ್ತ, ಯಾವ ಗ್ಯಾಲರಿ ಉತ್ತಮ ಎಂದು ಯೋಚಿಸುತ್ತಲೇ ಇರುತ್ತೇವೆ. ದೇಶ-ರಾಜ್ಯದ ಎಲ್ಲಾ ಕಲಾವಿದರಿಗೆ ಇದೀಗ ಇನ್ನೊಂದು ವೇದಿಕೆ ಸಿದ್ಧಗೊಂಡಿದೆ. ಕನ್ಸರ್‌ವೇಶನ್ ಸೊಸೈಟಿ ಆಫ್ ಆರ್ಟ್ & ಕಲ್ಚರಲ್ ಹೆರಿಟೇಜ್ (DWIJA Conservation Society of Art & Cultural Heritage) ಸಂಸ್ಥೆಯು ‘ದ್ವಿಜಾ ಆರ್ಟ್ ಗ್ಯಾಲರಿ ( DWIJA Art Gallery )’ ಆರಂಭಿಸುವ ಮೂಲಕ ಕಲಾವಿದರಿಗೆ ಹೊಸ ವೇದಿಕೆ ಕಲ್ಪಿಸಿಕೊಟ್ಟಿದೆ. ಅಷ್ಟೇ ಅಲ್ಲ, ಕಲಾ ಸಮುದಾಯದ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.

ಫೆ.೨ರಂದು ಸಮೂಹ ಕಲಾಪ್ರದರ್ಶನವನ್ನು ಆಯೋಜಿಸುವ ಮೂಲಕ ಗ್ಯಾಲರಿಗೆ ಚಾಲನೆ ನೀಡಲಾಗಿದ್ದು, ಈ ತಿಂಗಳ ಅಂತ್ಯದ ವರೆಗೂ ಕಲಾಪ್ರದರ್ಶನ ವೀಕ್ಷಣೆಗೆ ಲಭ್ಯವಿದೆ. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ಕೋಟಿ ಅವರ ಸಾರಥ್ಯದಲ್ಲಿ ಗ್ಯಾಲರಿ ಮುನ್ನಡೆಯಲಿದೆ. ತನ್ನದೇ ಆದ ಕ್ಯುರೇಟಿಂಗ್ ತಂಡವನ್ನು ಹೊಂದಿರುವ ದ್ವಿಜಾ ಆರ್ಟ್ ಗ್ಯಾಲರಿ ಗುಣಮಟ್ಟದ ಕಲಾಕೃತಿಗಳನ್ನು ಪ್ರದರ್ಶಿಸುವುದರ ಜೊತೆಗೆ ಆಸಕ್ತ ಕಲಾವಿದರಿಗೆ ಸ್ಟುಡಿಯೋ ಸ್ಥಳಾವಕಾಶವನ್ನೂ ಮಾಡಿಕೊಡುತ್ತಿದೆ. ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಗ್ಯಾಲರಿಯನ್ನು ಕಲಾವಿದರಿಗೆ ಒದಗಿಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ಗಿರೀಶ್ ಕೋಟಿ.

10 ಮಂದಿ ಕಲಾವಿದರ ವರ್ಣಚಿತ್ರ, ಶಿಲ್ಪ, ಗ್ರಾಫಿಕ್ ಮತ್ತು ಪ್ರತಿಷ್ಠಾಪನಾ ಕಲಾಕೃತಿಗಳನ್ನು ದ್ವಿಜಾ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿದೆ. ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅಮಲ್ ದೇವ್, ಅಮೃತಾ ವರ್ಮಾ, ಕೆ.ಎಸ್. ಅಪ್ಪಾಜಯ್ಯ, ಬಿ.ದೇವರಾಜ್, ದಿಲೀಪ್ ಸ್ವಸ್ತಿಕ್, ಗಿರಿಧರ್ ಖಾಸನೀಸ್, ಮಿಲಿಂದ್ ಲಿಂಬೇಕರ್, ಪ್ರದಿಪ್ತಾ ಚಕ್ರವರ್ತಿ, ರಾಜಾ ಬೊರೊ ಮತ್ತು ರಾಮ್ ಕುಮಾರ್ ಮನ್ನಾ ಅವರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. 12 ವರ್ಣಚಿತ್ರಗಳು, 4 ಶಿಲ್ಪಗಳು, 13 ಮುದ್ರಣ ಕಲಾಕೃತಿಗಳು, 2 ಪ್ರತಿಷ್ಠಾಪನಾ ಕಲಾಕೃತಿ, 11 ಛಾಯಾಚಿತ್ರಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದವು.

‘ಸಂವೇದಕ’ ಅರ್ಥ ಹೇಳುವ SENTIENT ಶೀರ್ಷಿಕೆಯಡಿ ನಡೆದ ಈ ಕಲಾಪ್ರದರ್ಶನ ವಿಶೇಷವೆನಿಸುತ್ತದೆ. ಯಾಕೆ? ಗುಣಮಟ್ಟದ ಕಲಾಕೃತಿಗಳನ್ನೇ ಪ್ರದರ್ಶಿಸಲಾಗಿದೆ ಎಂಬ ಕಾರಣಕ್ಕಾಗಿ ಅಷ್ಟೇ ಅಲ್ಲ. ಗ್ಯಾಲರಿಯೊಂದು ಆರಂಭಿಸುವ ಧೈರ್ಯದ ಜೊತೆಗೆ ಹೇಗೆ ಆರಂಭಿಸುತ್ತಿದ್ದಾರೆ ಎನ್ನುವುದೂ ಮಹತ್ವ ಪಡೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ದ್ವಿಜಾ ಆರ್ಟ್ ಗ್ಯಾಲರಿ ಅತ್ಯಂತ ವಿಶ್ವಾಸಭರಿತ ಹೆಜ್ಜೆ ಇಟ್ಟಿದೆ. ವಿಶ್ವಾಸ ಬೆಳೆಸಿಕೊಳ್ಳುವಲ್ಲಿ ಗಮನಾರ್ಹ ನಡೆ ತೋರಿದೆ.

ಆದರೆ ಸಣ್ಣದೊಂದು ಅಸಮಾಧಾನ ಖಂಡಿತಾ ನನಗಂತೂ ಇದೆ. ಅದೇನೆಂದರೆ ಆರಂಭದ ಕಲಾಪ್ರದರ್ಶನ ಇದಾಗಿದ್ದರಿಂದ ಶೇ.50 ರಷ್ಟು ಕಲಾವಿದರು ಕರ್ನಾಟಕದವರೇ ಇರಬೇಕಿತ್ತು. ಈ ಉಲ್ಲೇಖಕ್ಕೆ ಬೇರೆ ಇನ್ನಾವುದೇ ಅರ್ಥ ಕಲ್ಪಿಸಬೇಕಿಲ್ಲ. ಇದು ಪ್ರೀತಿಯಿಂದಲೂ, ನಿಷ್ಠುರವಾಗಿಯೂ, ಪ್ರಾಮಾಣಿಕತೆಯಿಂದಲೂ ಹಾಗೂ ಕಳಕಳಿಯಿಂದಲೂ ಹೇಳಬೇಕಾದದ್ದು ಎಂದು ಭಾವಿಸುತ್ತೇನೆ. ದಯವಿಟ್ಟು ಮುಂದಿನ ದಿನಗಳಲ್ಲಾದರೂ ಗ್ಯಾಲರಿ ಆಯೋಜನೆಯ ಕಲಾಪ್ರದರ್ಶನ ನಡೆಯುವಾಗ ಕರ್ನಾಟಕದ ಕಲಾವಿದರಿಗೆ ಹೆಚ್ಚಿನ ಅವಕಾಶ ಮಾಡಿಕೊಡಿ. ಇದರಿಂದ ಈ ನೆಲದ ಅಸ್ಮಿತೆಯ ಕಾಳಜಿ ಹೆಚ್ಚಲಿ.

ಪ್ರದರ್ಶಿಸಲ್ಪಟ್ಟ ಎಲ್ಲಾ ಕಲಾಕೃತಿಗಳೂ ವಿಭಿನ್ನವಾದ ಧೋರಣೆಯೊಂದಿಗೆ ವಿಭಿನ್ನವಾದ ಸಂದೇಶವನ್ನೇ ಹೇಳುತ್ತದೆ. ಪ್ರದರ್ಶಿಸಲ್ಪಟ್ಟ ಶಿಲ್ಪ ಕಲಾಕೃತಿಗಳಾಗಲಿ, ವರ್ಣಚಿತ್ರಗಳಾಗಲಿ, ಗ್ರಾಫಿಕ್ ಪ್ರಿಂಟ್‌ಗಳಾಗಲಿ, ಛಾಯಾಚಿತ್ರಗಳಾಗಲಿ ಕಲಾವಿದರ ಕಲಾ ಪ್ರಯಾಣದ ಅನುಭವವನ್ನು ತೆರೆದಿಡುತ್ತವೆ. ಒಟ್ಟಾರೆಯಾಗಿ ಕಲಾಪ್ರದರ್ಶನದಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಿರುವ ರೀತಿ ಆಪ್ತವೆನಿಸಿತು.

ಪ್ರತಿಯೊಂದು ಕಲಾಕೃತಿಗೂ ಅದರದೆ ಆದ ಚೌಕಟ್ಟಿನ ಮಹತ್ವ ಕೊಟ್ಟಿರುವುದು, ಒಂದು ಕಲಾಕೃತಿಯಿಂದ ಇನ್ನೊಂದು ಕಲಾಕೃತಿಯ ನೋಟಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಿರ್ವಹಿಸಿದ್ದು ಮೆಚ್ಚಿಕೊಳ್ಳುವಂತದ್ದಾಗಿದೆ. ರಾಮ್ ಕುಮಾರ್ ಮನ್ನಾ ಮತ್ತು ಅಮಲ್ ದೇವ್ ಅವರ ಶಿಲ್ಪ ಕಲಾಕೃತಿಗಳು ಆಕರ್ಷಿಸುವಲ್ಲಿ ಒಂದು ಹೆಜ್ಜೆ ಮುಂದೆ ನಿಲ್ಲುತ್ತವೆ ಆದರೆ ಬಿ.ದೇವರಾಜ್ ಅವರ ಬ್ರೋಕನ್ ನ್ಯೂಸ್ ಕಲಾಕೃತಿ ಮತ್ತು ಪ್ರದೀಪ್ತಾ ಚಕ್ರವರ್ತಿ ಅವರ GUSTAV Believed, La Fiesta in Oscula ಕಲಾಕೃತಿ ಗಂಭೀರ ಮತ್ತು ಹಾಸ್ಯ ರಸದ ಮೂಲಕ ನೋಡುಗರನ್ನು ಕಾಡುತ್ತವೆ.

ಕೆ.ಎಸ್. ಅಪ್ಪಾಜಯ್ಯ ಅವರ ‘ಖಡ್ಗ’ ಇತಿಹಾಸದತ್ತ ಕೊಂಡೊಯ್ಯುತ್ತವೆ. ಮ್ಯೂಸಿಯಂನ ಗುಣಮಟ್ಟದ ನಿರ್ವಹಣೆಯ ಕಲಾಕೃತಿ ಎನ್ನಬಹುದು. ಗಿರಿಧರ್ ಖಾಸನಿಸ್ ಅವರ ಕಪ್ಪು ಬಿಳುಪಿನ ಶಿಲ್ಪಗಳ ಛಾಯಾಚಿತ್ರ ತುಸು ಕಾಲ ನೋಡುಗರ ಬುದ್ಧಿಮತ್ತೆಗೆ ಕೆಲಸ ನೀಡುತ್ತವೆ.
ಒಟ್ಟಾರೆಯಾಗಿ ಕಲಾಪ್ರದರ್ಶನ ಗಮನಾರ್ಹ ಮತ್ತು ಶ್ಲಾಘನೀಯ. ಅದರಲ್ಲೂ ವಿಶೇಷವಾಗಿ ಚಿತ್ರಸಂತೆ, ಆರ್ಟ್ ಫೆಸ್ಟಿವಲ್ ನಂತಹ ಬೃಹತ್ ಪ್ರದರ್ಶನಗಳ ಅಬ್ಬರದ ನಡುವೆ ಗ್ಯಾಲರಿ ಆರಂಭಿಸಿ ಅದನ್ನು ನಿಭಾಯಿಸುವ ಧೈರ್ಯ ಮಾಡಿರುವುದು ಅಭಿನಂದನಾರ್ಹ ಸಂಗತಿ.

‍ಲೇಖಕರು Admin MM

February 14, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: