ಪ್ರೇಮ ಕವಿಯನ್ನು ನೆನೆಯುತ್ತ…

ಡಾ.ಲಕ್ಷ್ಮಣ ವಿ ಎ 

**

ಒಂದು ಕಾಲಕ್ಕೆ ‘ನರಸಿಂಹ ಸ್ವಾಮಿಯವರಿಗೆ ಕನಸಿನಲ್ಲೂ ಹೆಂಡತಿಯೆ ಬರುತ್ತಾಳೆನೋ ‘ ಎಂಬ ಜೋಕು ಚಾಲ್ತಿಯಲ್ಲಿತ್ತು.ಅಷ್ಟರಮಟ್ಟಿಗೆ ಅವರು ತಮ್ಮ ಹೆಂಡತಿಯನ್ನು ಪ್ರೀತಿಸುತ್ತಿದ್ದರು ಎಂಬ ಉತ್ಪ್ರೇಕ್ಷೆಯಲ್ಲಿ ಹುಟ್ಟಿದ ಮಾತುಗಳು ಅವು.ಪ್ರೇಮದಲಿ ‘ನಿಷ್ಠೆ’ ಎನ್ನುವುದು ಅವರಿಗೆ ಎಂದಿಗೂ ಉತ್ಪ್ರೇಕ್ಷೆ ಎನಿಸದೆ ಅದು  ಅವರ ಉಸಿರಿನಷ್ಟೇ ಸಹಜವಾಗಿ ಅವರ ಕವಿತೆಯಲ್ಲೂ ಬದುಕಿನಲ್ಲೂ ಕಾಣ ಬಹುದಾಗಿತ್ತು.ಅವರ ದಾಂಪತ್ಯವೆಂಬುದು  ಅದು ತೋರುಗಾಣಿಕೆ ಇರದ   ಹುಸಿ ಆದರ್ಶವಲ್ಲದ ಮಲ್ಲಿಗೆ ಹೂವಿನೊಳಗೆ ಕಂಪು ಬೆರತಷ್ಟೆ ಸಹಜ ಮತ್ತು ಸರಳವಾಗಿತ್ತು.

ಹೌದು ! ಅವರ ಕವಿತೆಗಳೂ ಕೂಡ ಹಾಗೆ;  

ನೀರಿನಲಿ ವೀಣೆ ಮಿಡಿದಂತೆ ಬೇಲಿಯಲಿ ಹಾವು ಸರಿದಂತೆ.ಅವರು ಕಿಕ್ಕೇರಿ ಸುಬ್ಬರಾವ್ ನರಸಿಂಹ ಸ್ವಾಮಿ.ಇವರ ಮೈಸೂರು ಮಲ್ಲಿಗೆ ಕವನ ಸಂಕಲನ ಸುಮಾರು ನಲವತ್ತು ಬಾರಿ ಮರು ಮುದ್ರಣ ಕಂಡು ಈ ಹೊತ್ತಿಗೂ ಸಂಕಲನಕ್ಕೆ ಅತಿ ಹೆಚ್ಚಿನ ಬೇಡಿಕೆ ಇದೆ.ಕನ್ನಡ ಕಾವ್ಯ ಪರಂಪರೆಯಲ್ಲಿ ಅತಿ ಹೆಚ್ಚು ಮರು ಮುದ್ರಣ ಕಂಡ ಕವನ ಸಂಕಲನವೇನಾದರೂ ಇದ್ದರೆ ಅದು ಪ್ರೇಮಿಗಳ ಪಾಲಿನ  ಭಗವದ್ಗೀತೆ ‘ಮೈಸೂರು ಮಲ್ಲಿಗೆ’. ಮದುವೆ ಮನೆಯ ಮದು ಮಕ್ಕಳಿಗೆ ಈ ಸಂಕಲನವನ್ನು  ಉಡುಗೊರೆಯನ್ನಾಗಿ ಕೊಡುತ್ತಿರೆಂಬುದನ್ನು ಹೇಳಿದರೆ ಬಹುಶಃ ಈ ಪೀಳಿಗೆಯವರು ನಂಬಲಾರರೇನೋ ? 

ಕನ್ನಡ ಸಾಹಿತ್ಯ ದಲ್ಲಿ ಪ್ರೇಮ ಕವಿತೆಗಳಿಗೇನೂ ಬರವಿಲ್ಲ.ಹರೆಯದ ಕಾಲಕೆ ಮೊಡವೆ ಮೂಡುವ ಹಾಗೆ ಪ್ರೇಮ ಕವನಗಳೂ ಮೂಡುತ್ತವೆ.ಬಹುತೇಕ ಪ್ರತಿ ಕವಿಯ ಕಾವ್ಯ ಲೋಕದ ಪ್ರವೇಶ ಪ್ರೇಮ ಕವನಗಳಿಂದಲೇ ಆರಂಭವಾಗಿರುತ್ತದೆ.

ವಿಪರ್ಯಾಸವೆಂದರೆ ಅಂತಹ ಕವಿಗಳಿಗೆ ಬರ ಬರುತ್ತ ಪ್ರೇಮ ಬೋರಾಗಿರತ್ತೊ,ಮದುವೆ ಮುರಿದು ಬಿದ್ದಿರತ್ತೊ, ಅಥವ ದಾಂಪತ್ಯ ದ ವಿರುದ್ಧವೇ ಬಂಡಾಯವೇಳುತ್ತಾರೋ !? 

ಕಾಲ ಕಳೆದಂತೆ ಅವರ ಸಂವೇದನಾ ಮೂಲಗಳೂ ಶಿಫ್ಟ್ ಆಗಿ ಕವಿಯ ಹತ್ಯಾರಗಳು ಕಾಲ ಕಾಲಕ್ಕೆ ಬದಲಾಗುತ್ತ ಹೋಗುತ್ತವೆ.ಮತ್ತು ಇದು ಆಗಬೇಕು ಕೂಡ ಎಂಬುದು ಹಲವರ ವಾದ.

‘ಒಬ್ಬ ಕವಿ ಒಂದೇ ಕವಿತೆಯನ್ನು ಹಲವು ರೀತಿಗಳಲ್ಲಿ ಬರೆಯುತ್ತಾನೆಯೇ ಅಥವಾ ಒಂದೊಂದು ಕವಿತೆಯೂ ಬೇರೆ ಬೇರೆ ಎನ್ನಬಹುದೆ ? ಬರೆಯುತ್ತಾ ಕವಿ ಬೆಳೆಯುತ್ತಾನವೇ ಅಥವಾ ಕೇವಲ ಬದಲಾಗುತ್ತಾನೆಯೆ ?ಇದ್ದ ಹಾಗೆ ಇರುತ್ತಾನೆ?ಒಬ್ಬೊಬ್ಬನ ಶೈಲಿ ಎಂದರೇನು?ಇಂಥ ಅಕೆಡೆಮಿಕ್ ವಿಷಯಗಳ ಕುರಿತು ಕವಿ ನಿಜಕ್ಕೂ  ಯೋಚಿಸುತ್ತಾನೆ ಎನ್ನುವಂತಿಲ್ಲ ಯೋಚಿಸಬೇಕಾಗಿಯೂ ಇಲ್ಲ ಬಹುಶಃ ಯೋಚಿಸಿದರೆ ಅದಕ್ಕೆ ತೊಡಕೆ ಜಾಸ್ತಿ .ಕವಿತೆ ಸಹಜವಾಗಿ ಮೂಡಿ ಬರಬೇಕು ಎನ್ನುತ್ತಾನೆ ಕೀಟ್ಸ್ .ಸಹಜವಾಗಿ ಅಂದರೆ ?ಕಲೆಯಲ್ಲಿ ಸಹಜ ಎಂಬುದೊಂದಿದೆಯೆ ?’

ಎಂದು ಕವಿ ತಿರುಮಲೇಶ ಪ್ರಶ್ನಿಸಿಕೊಳ್ಳುತ್ತಾರೆ.

ಆದರೆ ನರಸಿಂಹ ಸ್ವಾಮಿಗಳ ಈ ಪ್ರೇಮ ಬದ್ಧತೆ ಕೊನೆಯವರೆಗೂ ಬದಲಾಗಲಿಲ್ಲವೆನ್ನುವುದು ಅಚ್ಚರಿಯ ಸಂಗತಿಯಾಗಿ ಕಂಡು ಬಹುಶಃ ಈ ಲೇಖನದ  ಆರಂಭಿಕ  ಜೋಕನ್ನು ವಿಮರ್ಶೆಯ ನೆಲೆಯಲ್ಲಿ ನೋಡಬೇಕಾಗಿ ಬರಬಹುದು.ಇರಲಿ,ಅದು ಅಕೆಡೆಮಿಕ್ ನವರ ತಲೆ ನೋವು.

ಸಧ್ಯ ನಮ್ಮ ಮುಂದಿರುವ ಹಾಡನ್ನಷ್ಟೆ ಎದೆಗಿಳಿಸಿಕೊಂಡು ನೋಡೋಣ.

ಆಧುನಿಕ ಕನ್ನಡ ಸಾಹಿತ್ಯದ ಅಷ್ಟೂ ಕವನ ಸಂಕಲನಗಳನ್ನು ಮುಂದಿಟ್ಟುಕೊಂಡು ನೋಡಿದರೆ ಅದರಲ್ಲಿ ಕನಿಷ್ಠ ಹತ್ತು ಕವಿತೆಗಳಾದರೂ ಪ್ರೇಮಕ್ಕೆಂದೇ ಮೀಸಲಾದ ಕವಿತೆಗಳಿರುತ್ತವೆ.ಅಂತಹ ಸಂಪ್ರದಾಯ  ನವೋದಯದ ಕಾಲದಲ್ಲಿ ಶುರುವಾಗಿ ಇಂದಿನ ನವ್ಯೋತ್ತರ ಕಾಲಕ್ಕೂ ಬಂದು ನಿಲ್ಲುತ್ತದೆ.

ಆದರೆ ಇಂದಿಗೂ ಪ್ರೇಮಕವಿತೆಗಳೆಂದರೆ ಥಟ್ಟನೆ  ನೆನಪಾಗುವುದು ಕೆ.ಎಸ್.ನರಸಿಂಹ ಸ್ವಾಮಿಯವರು ಮಾತ್ರ.ಪ್ರೇಮಕ್ಕೆ ಸ್ವತಃ ಒಬ್ಬ ಕವಿ ರೂಪಕವಾಗಿ ನಿಲ್ಲುವುದು ಬಹುಶಃ  ಅವರೊಬ್ಬರೇ  ಮಾತ್ರ.

ಇಂದು ಪ್ರೇಮಿಗಳ ದಿನ.

ಇಂತಹ ದಿನದಂದು ನಮ್ಮೆಲ್ಲ ಹೃದಯಗಳ ಪ್ರೇಮ ವಾಹಕವಾಗಿ ನಿಂತ ಅವರನ್ನು ನೆನೆಯದೆ ಇರುವುದು ಸಾಧ್ಯವೇ ? 

******

ನನ್ನ ಕವಿತೆ*

ಯಾರು ಒಪ್ಪಲಿ ಬಿಡಲಿ, ನನ್ನ ನೋಡುತ್ತಿರುವ

ನಕ್ಷತ್ರ ಪುಂಜ ವೇ ನನ್ನ ಕವಿತೆ;

ಹಸಿರು ಹುಲ್ಲನು ಮೇಯ್ದು ಬಿಳಿಯ ಹಾಲನು ಕೊಡುವ 

ಕಂದು ಬಣ್ಣದ ಹಸುವೆ ನನ್ನ ಕವಿತೆ.

ಹೊಳೆಯ ದಾಟಿಸುವ ಅಂಬಿಗನೆ ನಾನೆನ್ನುವುದು

ನನ್ನೊಲುಮೆಯಲಿ ನಾನು ಬರೆದ ಕವಿತೆ;

ಮಳೆಬಿದ್ದ ಸಂಜೆ ಕಾಮನ ಬಿಲ್ಲ ಹಿಡಿಯುವುದು,

ಮೃದುವಾಗಿ ನುಡಿಯುವುದು ನನ್ನ ಕವಿತೆ.

ಕಲ್ಪನಾ ರಾಜ್ಯದಲಿ ನೀವು ಸಂಚರಿಸದಿರಿ,

ಕೆಂಪು ಕುದುರೆಯ ಸಾಲು ನನ್ನ ಕವಿತೆ;

ಅರಳಿದರೆ ಮಲ್ಲಿಗೆ ಕೆರಳಿದರೆ ಸಂಪಿಗೆ,

ಹೂಗಳನು ತೂಗುವುದು ನನ್ನ ಕವಿತೆ.

ಕಡಲು ಭೋರ್ಗರೆಯುವುದು, ಆಕಾಶ ಮಿಂಚುವುದು

ಎಲ್ಲವನು ಒಳಗೊಳುವುದೆನ್ನ ಕವಿತೆ;

ಯಾರು ಏನೆಂದರೂ ಸುಮ್ಮನಿರಬೇಕೆಂದು

ನನಗೆ ಹೇಳಿದ್ದುಂಟು ನನ್ನ ಕವಿತೆ.

*****

ನೋವು-ಕಂಬನಿ 

ಬದುಕು! 

ಕರವಸ್ತ್ರ – ಕವಿತೆ.

*****

ಕತ್ತಲೆಯ ಪುಟಗಳಲಿ

ಬೆಳಕಿನಕ್ಷರಗಳಲಿ

ದೀಪಗಳ ಸಂದೇಶ ಥಳ ಥಳಿಸಲಿ

*****

ʼಹೊಕ್ಕ ಮನೆಯೆಲ್ಲ ಹೊಸಮನೆಯೆಂದೆ ಕರೆಯೋಣ

ಹಳೆಯ ಬಾಗಿಲಿಗೆ ಹೊಸ ತೋರಣವ ಕಟ್ಟೋಣ

ಶಾಲೆ ಮಕ್ಕಳ ಹಾಗೆ ಹೊಸತನವ ಕಲಿಯುತ್ತ 

ಇನ್ನೊಂದು ವರುಷ ಕಳೆಯೋಣʼ 

****

*ಮನೆಗೆ ಬಂದ ಹೆಣ್ಣು* 

ಮೊದಲ ದಿನ ಮೌನ ಅಳುವೇ ತುಟಿಗೆ 

ಬಂದಂತೆ ,

ಚಿಂತೆ ಬಿಡಿ ಹೂವ ಮುಡಿದಂತೆ;

ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ.

ಜೀವದಲಿ ಜಾತ್ರೆ ಮುಗಿದಂತೆ.

ಎರಡನೆಯ ಹಗಲು ಇಳಿ ಮುಖವಿಲ್ಲ,ಇಷ್ಟು ನಗು – 

ಮೂಗುತಿಯ ಮಿಂಚು ಒಳ ಹೊರಗೆ ;

ನೀರೊಳಗೆ ವೀಣೆ ಮೀಡಿದಂತೆ ಆಡಿದ ಮಾತು 

ಬೇಲಿಯಲಿ ಹಾವು ಹರಿದಂತೆ.

ಮೂರನೆಯ ಸಂಜೆ ಹೆರಳಿನ ತುಂಬ ದಂಡೆ ಹೂ 

ಹೂವಿಗೂ ಜೀವ ಬಂದಂತೆ; 

ಸಂಜೆಯಲಿ ರಾತ್ರಿ ಇಳಿದಂತೆ ,ಬಿರು ಬಾನಿಗೂ 

ಹುಣ್ಣಿಮೆಯ ಹಾಲು ಹರಿದಂತೆ! 

****

‍ಲೇಖಕರು avadhi

February 14, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: